×
Ad

ಕರಾವಳಿಯ ಭತ್ತದ ಬೆಳೆಗೆ ಪತಂಗ ಹುಳಗಳ ಹಾವಳಿ!

ಮೂರು ವರ್ಷಗಳಿಂದ ವಿಪರೀತ ಹೆಚ್ಚಳ

Update: 2025-08-11 08:14 IST

ಉಡುಪಿ: ಕಳೆದ ಮೂರು ವರ್ಷಗಳಿಂದ ಕರಾವಳಿಯ ಭತ್ತದ ಬೆಳೆಯಲ್ಲಿ ಪತಂಗ(ಮೋತ್)ದ ಹುಳಗಳ ಹಾವಳಿ ವಿಪರೀತ ಹೆಚ್ಚಾಗಿದೆ. ಇದರಿಂದ ಭತ್ತದ ಬೆಳೆಗಳಿಗೆ ಹಾನಿಯಾಗಿ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ.

ಕರಾವಳಿಯ ಜಿಲ್ಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಈ ಹುಳಗಳ ಹಾವಳಿ ಹೆಚ್ಚಾಗಲು, ಭತ್ತ ನಾಟಿ ಮಾಡುವಲ್ಲಿ ವಿಳಂಬ, ಪ್ರಾರಂಭಿಕ ಮಳೆಯ ವೈಪರೀತ್ಯ ಹಾಗೂ ಅವೈಜ್ಞಾನಿಕ-ಅಕಾಲಿಕ ಹತೋಟಿ ಕ್ರಮಗಳೇ ಮುಖ್ಯ ಕಾರಣವಾಗುತ್ತಿವೆ. ಈ ಹುಳಗಳ ಹಾವಳಿ ಯನ್ನು ಪರಿಣಾಮಕಾರಿಯಾಗಿ ಹತೋಟಿ ತರುವ ನಿಟ್ಟಿನಲ್ಲಿ ಬ್ರಹ್ಮಾವರ ದಲ್ಲಿರುವ ವಲಯ ಸಂಶೋಧನಾ ಕೇಂದ್ರ ಕೆಲವೊಂದು ಅಗತ್ಯ ಕ್ರಮಗಳನ್ನು ಸೂಚಿಸಿದೆ.

ಪತಂಗಗಳ ಪರಿಚಯ ಭತ್ತದ ಎಲೆ ಸುರುಳಿ ಕೀಟ(Cnaphalocrocis medinalis) ಹಾಗೂ ಕೊಳವೆ ಹುಳ(Parapoynx stagnalis) ಇವು ಎರಡು ಪತಂಗಗಳಾಗಿದ್ದು, ಇದು ಭತ್ತ ಬೆಳೆ ಯುವ ಎಲ್ಲಾ ದೇಶಗಳು ಸಾಮಾನ್ಯವಾಗಿ ಕಂಡುಬರುತ್ತವೆ.

ಈ ಪತಂಗವು ಮೊಟ್ಟೆಯಿಟ್ಟು, ಅದು ಮರಿಯಾಗಿ, ಕೋಶ ರಚಿಸಿ, ಬಳಿಕ ಪೂರ್ಣ ಪ್ರಮಾಣದ ಪತಂಗವಾಗಿ ರೂಪಾಂತರಗೊಂಡು ಕೋಶದಿಂದ ಹೊರಬರುತ್ತದೆ. ಮೊಟ್ಟೆ, ಮರಿ, ಕೋಶ ಹಾಗೂ ಚಿಟ್ಟೆ ಬೆಳವಣಿಗೆಯ ಹಂತಗಳು ಪೂರ್ಣಗೊಳ್ಳಲು 35-40 ದಿನಗಳು ಬೇಕಾಗುತ್ತವೆ.

ಒಂದು ಹೆಣ್ಣು ಪತಂಗ ಸುಮಾರು 150ರಷ್ಟು ಮೊಟ್ಟೆಗಳನ್ನು ಭತ್ತದ ಎಲೆಗಳಲ್ಲಿ ಇಡುತ್ತದೆ. ಮೊಟ್ಟೆಯಿಂದ ಹೊರ ಬರುವ ಮರಿಹುಳಗಳು ತಿಳಿ-ಹಸಿರು ಬಣ್ಣ ಹೊಂದಿದ್ದು, ಭತ್ತದ ಎಲೆ ಗಳನ್ನು ಸಂಪೂರ್ಣ ತಿನ್ನುವ ಹಾಗೂ ನೀರಿನಲ್ಲಿ ಮುಳುಗಿದರೂ ಉಸಿರಾ ಡುವ ಸಾಮರ್ಥ್ಯ ಹೊಂದಿರುತ್ತವೆ ಎಂದು ವಲಯ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಬಿ.ಧನಂಜಯ ತಿಳಿಸಿದ್ದಾರೆ.

ಬಾಧೆಯ ಲಕ್ಷಣಗಳು :

ಎಲೆ ಸುರುಳಿ ಮರಿಹುಳ ಭತ್ತದ ಎಲೆಯನ್ನು ಮಡಚಿ/ಸುರುಳಿ ಸುತ್ತಿ ಒಳಗಡೆಯಿಂದ ಎಲೆಯನ್ನು ಹಾಳು ಮಾಡುತ್ತದೆ. ಕೊಳವೆ ಮರಿ ಹುಳಗಳು ಎಲೆ ತುದಿಯನ್ನು ಕತ್ತರಿಸಿ ಕೊಳವೆ ನಿರ್ಮಿಸಿ ಕೊಂಡು, ಭತ್ತದ ಎಲೆಗಳಿಗೆ ಅಂಟಿಕೊಂಡು ಎಲೆಗಳನ್ನು ಹಾಳು ಮಾಡುತ್ತವೆ.

ಇವು ಕೊಳವೆ ಸಮೇತ ಗದ್ದೆಯಲ್ಲಿರುವ ನೀರಿನ ಮೇಲೆ ಬಿದ್ದು, ತೇಲಾಡಿ, ಈಜಾಡಿ ಇನ್ನೊಂದು ಕಡೆ ಚಲಿಸುತ್ತವೆ. ಭತ್ತದ ನಾಟಿ ಮಾಡಿದ 15 ದಿನಗಳ ನಂತರ ಈ ಹುಳಬಾಧೆ ಪ್ರಾರಂಭವಾಗಿ, ಭತ್ತದ ಸಸಿ ಕವಲು ಒಡೆಯುವಾಗ ಹೆಚ್ಚಾಗಿ, ತೆನೆಯೊಡೆಯುವ ಸಮಯದಲ್ಲಿ ಕ್ರಮೇಣ ಕಡಿಮೆಯಾಗುತ್ತದೆ.

ಮಡಚಿರುವ ಎಲೆ, ಕತ್ತರಿಸಿರುವ ಎಲೆ, ಎಲೆಗಳ ಮೇಲೆ ಬಿಳಿ ಗೆರೆಗಳು/ಮಚ್ಚೆಗಳು ಹಾಗೂ ನೀರಿನ ಮೇಲೆ ತೇಲಾಡುವ ಎಲೆಗಳ ತುಣುಕುಗಳು, ಕೊಳವೆಗಳು ಈ ಹುಳಗಳ ಬಾಧೆಯ ಮುಖ್ಯ ಲಕ್ಷಣಗಳಾಗಿವೆ. ಈ ಹುಳಗಳನ್ನು ವೈಜ್ಞಾನಿಕವಾಗಿ ಸಕಾಲದಲ್ಲಿ ನಿಯಂತ್ರಣ ಮಾಡದಿದ್ದರೆ ಭತ್ತದ ಬೆಳೆಯನ್ನು ಸಂಪೂರ್ಣ ನಾಶ ಮಾಡುವ ಸಾಮರ್ಥ್ಯ ಈ ಹುಳಗಳು ಹೊಂದಿವೆ ಎನ್ನುತ್ತಾರೆ ಕೇಂದ್ರ ವಿಜ್ಞಾನಿ ಡಾ.ರೇವಣ್ಣ ರೇವಣ್ಣವರ.

ಬೆಳೆಯನ್ನು ನಾಶ ಮಾಡುವ ಈ ಹುಳಬಾಧೆಯನ್ನು ವೈಜ್ಞಾನಿಕ ವಾಗಿ ಭತ್ತದ ಕೃಷಿ ಮಾಡುವ ಮೂಲಕ ನಿಯಂತ್ರಿಸಬಹುದು ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಸಮಗ್ರ ಹತೋಟಿಗೆ ಕ್ರಮ :

ಭತ್ತದ ಸಸಿಗಳನ್ನು ಬೇಗ ನಾಟಿ ಮಾಡಿದರೆ ಈ ಹುಳಗಳ ಹಾವಳಿ ಕಡಿಮೆ ಅಥವಾ ಬಹುತೇಕ ತಪ್ಪಿಸಿಕೊಳ್ಳಬಹುದು. ಸುತ್ತಮುತ್ತಲಿರುವ ರೈತರು ಸೂಕ್ತ ಸಮಯದೊಳಗೆ ಒಟ್ಟಾಗಿ ಒಂದೇ ಸಮಯದಲ್ಲಿ ನಾಟಿ ಮಾಡಿದರೆ ಈ ಹುಳವಿನ ಬಾಧೆ ಕಡಿಮೆಯಾಗುತ್ತದೆ.

ಗದ್ದೆಯ ಬದುಗಳ ಮೇಲಿರುವ ಕಳೆ ನಿಯಂತ್ರಣ ಮಾಡಬೇಕು. ಭತ್ತದ ಸಸಿ ಹಂತದಲ್ಲಿರುವಾಗ ಈ ಹುಳಗಳ ಭಕ್ಷಕ ಹಕ್ಕಿಗಳು ಗದ್ದೆಯಲ್ಲಿ ಕುಳಿತುಕೊಳ್ಳಲು ರೆಂಬೆಗಳನ್ನು ಅಲ್ಲಲ್ಲಿ ಊರಿದರೆ ಉತ್ತಮ. ಅತೀ ಕಡಿಮೆ ದರದಲ್ಲಿ ದೊರೆಯುತ್ತಿರುವ ಟ್ರೈಕೊಗ್ರಾಮಾ ಕಿಲೋನಿಸ್ ಪರತಂತ್ರ ಜೀವಿ ಸಮೀಪದಲ್ಲಿ ಲಭಿಸಿದರೆ 1 ಎಕರೆಗೆ 40 ಸಾವಿರದಷ್ಟು ಭತ್ತ ನಾಟಿಯಾದ 15 ದಿನಗಳ ನಂತರ 5-6 ಬಾರಿ ಬಿಡುಗಡೆ ಮಾಡಬೇಕು.

10 ಕಿ.ಗ್ರಾಂ. ಹೊಯ್ಗೆ(ಮರಳು)ಗೆ 400 ಮಿ.ಲೀ. ಸೀಮೆಎಣ್ಣೆ ಅಥವಾ ಡೀಸೆಲ್ ಲೇಪನ ಮಾಡಿ ಗದ್ದೆಯಲ್ಲಿ ಸರಿಯಾಗಿ ನೀರಿನ ಮೇಲೆ ಬೀಳುವಂತೆ ಎರಚಬೇಕು. ತೆಂಗಿನನಾರಿನ ಹಗ್ಗ ಭತ್ತದ ಬೆಳೆಯ ಮೇಲೆ ಎಳೆದಾಡಿ ಎಲೆಗಳಿಗೆ ಅಂಟಿಕೊಂಡಿರುವ ಹುಳುಗಳಿರುವ ಕೊಳವೆಗಳನ್ನು ನೀರಿನಲ್ಲಿ ಉದುರಿಸಿ, ನಂತರ ಗದ್ದೆಯಲ್ಲಿರುವ ನೀರು ಬಸಿದು ಹೋಗುವಂತೆ ಮಾಡಿ, ಕೊಳವೆಗಳನ್ನು ಸಂಗ್ರಹಿಸಿ ನಾಶಪಡಿಸಬೇಕು ಎಂದು ಕೇಂದ್ರದ ಡಾ.ಶಂಕರ ಎಂ. ಮಾಹಿತಿ ನೀಡಿದ್ದಾರೆ.

 

ಶಿಫಾರಸು ಮಾಡಿರುವ ಕೀಟನಾಶಕಗಳು :

ಪ್ರತೀ 1 ಲೀಟರ್ ನೀರಿಗೆ 0.5 ಮಿ.ಲೀ. ಕ್ಲೋರಾಂಟ್ರಾನಿಲಿಪ್ರೋಲ್, 2 ಗ್ರಾಂ. ಕಾರ್ಟಾಪ ಹೈಡ್ರೋಕ್ಲೋರೈಡ್, 1.5 ಗ್ರಾಂ. ಅಸಿಫೇಟ್, 2 ಮಿ. ಲೀ. ಪ್ರೋಫೆನೋಫಾಝ್, 2 ಮಿ. ಲೀ. ಕೋರ್ ಪೈರಿಫಾಝ್, 2 ಮಿ. ಲೀ. ಕ್ವಿನಾಲ್ ಫಾಸ್, 0.5 ಫ್ಲೂಬೆಂಡಿಅಮೈಡ್, 2 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್, 1.5 ಮಿ.ಲೀ. ಸ್ಪೈನೋಸ್ಯಾಡ್ ಈ ಕೀಟನಾಶಕಗಳನ್ನು ಪತಂಗ ಹುಳಬಾಧೆ ತಡೆಗೆ ಬಳಸಬಹುದು.

ಈ ಕೀಟನಾಶಕಗಳಲ್ಲಿ ಸ್ಥಳೀಯವಾಗಿ ಲಭ್ಯವಿರುವ ಯಾವುದಾದರೂ ಒಂದು ಕೀಟನಾಶಕವನ್ನು ಆಯ್ಕೆ ಮಾಡಿ ಭತ್ತದ ಬೆಳೆಯ ಮೇಲೆ 15 ದಿನಗಳ ಅಂತರದಲ್ಲಿ ಸಿಂಪರಣೆ ಮಾಡಿದರೆ ಈ ಹುಳಗಳನ್ನು ಪರಿಣಾಮಕಾರಿಯಾಗಿ ಹತೋಟಿಗೆ ತರಬಹುದು ಎಂದು ಕೇಂದ್ರದ ವಿಜ್ಞಾನಿ ಡಾ.ಬಿ.ಧನಂಜಯ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News