ಚುನಾವಣಾ ಫಲಿತಾಂಶ ಘೋಷಣೆ ದಿನವೇ ಮತಗಳ ಕಳ್ಳತನ ಬಗ್ಗೆ ಅನುಮಾನ ಮೂಡಿದ್ದು ಹೇಗೆ? ಮನ್ಸೂರ್ ಅಲಿ ಖಾನ್ ಸಂದರ್ಶನ
ಬೆಂಗಳೂರು ಕೇಂದ್ರ ಸಂಸದೀಯ ಕ್ಷೇತ್ರದ ಭಾಗವಾಗಿರುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಶೋಧನಾ ತಂಡವು ಮತದಾರರ ಪಟ್ಟಿಯನ್ನು ಪರಿಶೀಲಿಸಿದ ನಂತರ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮತಗಳ ಕಳ್ಳತನದ ಆರೋಪಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದರು.
2024ರ ಸಾರ್ವತ್ರಿಕ ಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ. ಮೋಹನ್ ವಿರುದ್ಧ 32,207 ಮತಗಳ ಅಲ್ಪ ಅಂತರದಿಂದ ಸೋತರು. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ 1,14,046 ಅಂದರೆ ಭಾರಿ ಮತಗಳು ಬಿಜೆಪಿಗೆ ಸಿಕ್ಕಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ಈ ಆರೋಪಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗ, ಕೇರಳ ಮತ್ತು ಲಕ್ಷದ್ವೀಪದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿರುವ ಮನ್ಸೂರ್ ಅಲಿ ಖಾನ್, frontline ನ ವಿಖಾರ್ ಅಹ್ಮದ್ ಸಯೀದ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮತಗಳ ಕಳ್ಳತನ ಆರೋಪಗಳ ಬಗ್ಗೆ ಮತ್ತು ಚುನಾವಣಾ ಫಲಿತಾಂಶಗಳು ಘೋಷಣೆ ದಿನ ಚುನಾವಣಾ ವಂಚನೆ ಬಗ್ಗೆ ಅನುಮಾನ ಮೂಡಿದ್ದೇಗೆ ಎಂಬುದರ ಕುರಿತು ಮಾತನಾಡಿದ್ದಾರೆ.
►ಬೆಂಗಳೂರು ಕೇಂದ್ರ ಸ್ಥಾನವನ್ನು ನೀವು 32,207 ಮತಗಳಿಂದ ಕಳೆದುಕೊಂಡಿದ್ದೀರಿ. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸದಿದ್ದರೆ, ನೀವು ಆರಾಮವಾಗಿ ಗೆಲ್ಲುತ್ತಿದ್ದಿರಿ. ಒಂದು ವಿಧಾನಸಭಾ ಕ್ಷೇತ್ರದಲ್ಲಿನ ಭಾರಿ ಮುನ್ನಡೆ ವಿಚಿತ್ರವಾಗಿ ಕಾಣಿಸಬಹುದು. ಆದರೆ ಚುನಾವಣೆ ಮೋಸದ ಬಗ್ಗೆ ಆರೋಪ ಮಾಡಲು ಈ ಸಾಕ್ಷ್ಯ ಸಾಕಾಗುವುದೇ?
2024ರಲ್ಲಿ ಚುನಾವಣೆ ನಡೆಯುವ ಮೊದಲು ಮಹದೇವಪುರ ಕ್ಷೇತ್ರದಲ್ಲಿ ಅಸಾಮಾನ್ಯ ಮತದಾರರ ನೋಂದಣಿ ಕಂಡು ಬಂದಿತ್ತು. 2023ರ ವಿಧಾನಸಭಾ ಚುನಾವಣೆಯಿಂದ 2024ರ ಲೋಕಸಭಾ ಚುನಾವಣೆಯವರೆಗೆ 52,000 ಹೊಸ ಮತದಾರರನ್ನು ಸೇರಿಸಲಾಗಿದೆ. ಇದು ಕಾಂಗ್ರೆಸ್ ನ ಸಂಶೋಧನಾ ತಂಡದಲ್ಲಿ ಅನುಮಾನ ಮೂಡಿಸಿತ್ತು. ಕಾಂಗ್ರೆಸ್ ನ ಸಂಶೋಧನಾ ವಿಭಾಗ ಮತ್ತು ರಾಹುಲ್ ಗಾಂಧಿ ಅವರ ತಂಡವು ರಾಷ್ಟ್ರೀಯವಾಗಿ ಮತಗಳ ಸೇರ್ಪಡೆಯ ವಿಷಯವನ್ನು ಪರಿಶೀಲಿಸುತ್ತಿದೆ. ಬೆಂಗಳೂರು ಕೇಂದ್ರದ ಅಭ್ಯರ್ಥಿಯಾಗಿ ಮತ್ತು ಸಂಶೋಧನಾ ವಿಭಾಗದ ಸದಸ್ಯನಾಗಿ, ನಾನು ಸಹ ಈ ತನಿಖೆಯ ಭಾಗವಾಗಿದ್ದೆ. ನಮಗೆ ಡಿಜಿಟಲ್ ಡೇಟಾಗೆ ಪ್ರವೇಶವಿಲ್ಲದ ಕಾರಣ ನಾವು ಸಂಪೂರ್ಣ ಮತದಾರರ ಪಟ್ಟಿಯನ್ನು ಹಸ್ತಚಾಲಿತವಾಗಿ ಪರಿಶೀಲಿಸಬೇಕಾಗಿತ್ತು ಮತ್ತು ಈ ಉದ್ದೇಶಕ್ಕಾಗಿ ತಂಡವನ್ನು ರಚಿಸಿದ್ದೆವು.
►ಈ ವಿಧಾನಸಭಾ ಕ್ಷೇತ್ರವನ್ನು ಏಕೆ ಆಯ್ಕೆ ಮಾಡಲಾಯಿತು?
ಕಳೆದ ವರ್ಷ ಫಲಿತಾಂಶಗಳು ಪ್ರಕಟವಾದ ನಂತರ, ಬೆಂಗಳೂರು ಸೆಂಟ್ರಲ್ ನಲ್ಲಿ ನಮ್ಮ ಸೋಲಿಗೆ ಕಾರಣಗಳ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಲು ಪ್ರಾರಂಭಿಸಿದೆವು. ಮಹದೇವಪುರದ ಫಲಿತಾಂಶಗಳು ಅಸಂಗತವಾಗಿದ್ದವು. ಆದ್ದರಿಂದ ನಾವು ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿದೆವು. ನಾವು ಇನ್ನೊಂದು ಕ್ಷೇತ್ರದ ಫಲಿತಾಂಶಗಳನ್ನು ಪರಿಶಿಲಿಸಲು ಬಯಸಿದೆವು. ಅದಕ್ಕಾಗಿ ಸಿ.ವಿ. ರಾಮನ್ ನಗರವನ್ನು ಸಹ ಗುರುತಿಸಿದೆವು. ಆದರೆ, ನಮಗೆ ಭಾರತೀಯ ಚುನಾವಣಾ ಆಯೋಗದಿಂದ ಡೇಟಾ ಸಿಗಲಿಲ್ಲ. ವಿವರವಾದ ಮತದಾರರ ಪಟ್ಟಿಯ ಕೊರತೆ ಜೊತೆಗೆ ಅದನ್ನು ಸಮಯಕ್ಕೆ ಸರಿಯಾಗಿ ಪಡೆಯುವುದು ಒಂದು ಸವಾಲಾಗಿತ್ತು ಎಂದು ಹೇಳಿದರು.
ಚುನಾವಣಾ ಫಲಿತಾಂಶ ಪ್ರಕಟವಾದ 45 ದಿನಗಳಲ್ಲಿ ನಾವು ಚುನಾವಣಾ ಆಯೋಗಕ್ಕೆ ಏಕೆ ದೂರು ನೀಡಲಿಲ್ಲ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಆದರೆ ಇದು ಅಸಂಬದ್ಧವಾಗಿದೆ. ಏಕೆಂದರೆ ವಂಚನೆಗೆ ಪುರಾವೆಗಳನ್ನು ಪರಿಶೀಲಿಸಲು ಮತ್ತು ಕಂಡುಹಿಡಿಯಲು ನಮಗೆ ದತ್ತಾಂಶ ಲಭ್ಯವಿರಲಿಲ್ಲ. ನಮಗೆ ಅನುಮಾನವಿದ್ದರೂ, ಪುರಾವೆಗಳನ್ನು ಒದಗಿಸದೆ ನಾವು ಹೇಗೆ ದೂರು ಸಲ್ಲಿಸಬಹುದು? ನಾವು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಈ ಮಾಹಿತಿಗಾಗಿ ಅರ್ಜಿ ಸಲ್ಲಿಸಿದ್ದೇವೆ ಮತ್ತು ಈ ಡೇಟಾವನ್ನು ಸ್ವೀಕರಿಸಲು ನಮಗೆ ಮೂರರಿಂದ ನಾಲ್ಕು ತಿಂಗಳುಗಳು ಬೇಕಾಯಿತು. ಬಂದ ಮಾಹಿತಿಯು ಸಂಪೂರ್ಣವಾಗಿರಲಿಲ್ಲ ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮತ್ತು ಅಳಿಸುವಿಕೆ ಮತ್ತು ಕ್ಷೇತ್ರ ಬಿಟ್ಟವರ ಮಾಹಿತಿ ನಮಗೆ ಸಿಗಲಿಲ್ಲ. ಇದು ನಮಗೆ ಒಂದು ಸವಾಲಾಗಿತ್ತು. ನಾವು ನಕಲಿ ಮತದಾರರು, ತಪ್ಪಾದ ವಿಳಾಸಗಳು, ಮತದಾರರ ಗುಂಪು, ತಪ್ಪು ಪೋಟೊಗಳು ಮತ್ತು ಫಾರ್ಮ್ 6ರ ದುರುಪಯೋಗವನ್ನು ಪತ್ತೆಹಚ್ಚಿದೆವು. ಈ ಕೆಲಸವನ್ನೆಲ್ಲಾ ಕೈಯ್ಯಲ್ಲೇ ಮಾಡಲಾಯಿತು. ಮತದಾರರ ಚೀಟಿಗಳನ್ನು ಪಟ್ಟಿಗೆ ಹೊಂದಿಸುವುದು ಕಷ್ಟಕರವಾಗಿತ್ತು. ಏಕೆಂದರೆ ಮಹದೇವಪುರ ವಿಭಾಗದಲ್ಲಿ 6.5 ಲಕ್ಷ ಮತದಾರರಿದ್ದಾರೆ. ಇದು ಶ್ರಮದಾಯಕ ಕೆಲಸವಾಗಿತ್ತು. ರಾಹುಲ್ ಗಾಂಧಿ ಈ ಮಾಹಿತಿಯನ್ನು ಪ್ರಸ್ತುತಪಡಿಸಿ ಮತದಾರರ ಪಟ್ಟಿಯಲ್ಲಿನ ವಂಚನೆಯನ್ನು ಬಯಲಿಗೆಳೆದರು ಎಂದು ಹೇಳಿದರು.
►ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ನಿಮಗೆ ಅನುಮಾನ ಬಂದಾಗ ಮೊದಲು ನಿಮ್ಮ ಸಂಶಯಗಳ ಬಗ್ಗೆ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗೆ ತಿಳಿಸಿದ್ದೀರಾ?
ನಾವು ಮೊದಲು ನಮ್ಮ ತನಿಖೆ ಪೂರ್ಣಗೊಳಿಸಿ, ಪ್ರಕರಣವನ್ನು ದೃಢಪಡಿಸಲು ಬಯಸಿದೆವು. ಈ ವಿಚಾರ ಬಗ್ಗೆ ಪಕ್ಷದ ಹೈಕಮಾಂಡ್ ಗೆ ತಿಳಿಸಿದೆವು. ರಾಹುಲ್ ಗಾಂಧಿ ಅದನ್ನು ಮುಂದುವರಿಸಿದರು. ಯಾವುದೇ ಪ್ರಜಾಪ್ರಭುತ್ವದಲ್ಲಿ ಚುನಾವಣಾ ಆಯೋಗದ ಮೇಲೆ ಅನುಮಾನ ಇರಬಾರದು. ಅವರು ನಮ್ಮ ಸಂಶೋಧನೆಯನ್ನು ತಿರಸ್ಕರಿಸಬಹುದು, ಆದರೆ, ಆರೋಪಗಳ ಬಗ್ಗೆ ಮಾನ್ಯವಾದ ಉತ್ತರ ನೀಡುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ.
ಆದರೆ, ಅವರು ರಾಹುಲ್ ಗಾಂಧಿಯಿಂದ ಸಹಿ ಮಾಡಿದ ಪ್ರಮಾಣ ಪತ್ರಗಳನ್ನು ಕೇಳುತ್ತಿದ್ದಾರೆ. ಇದರ ಅರ್ಥವೇನು? ಮತದಾರರ ತಪ್ಪು ಫೋಟೋಗಳು ಇದ್ದರೆ, ಅದು ವ್ಯವಸ್ಥೆಯ ದೋಷವಲ್ಲವೇ? ನಾವು ಪುರಾವೆಗಳನ್ನು ಮುದ್ರಿತ ರೂಪದಲ್ಲಿ ನೀಡಿದ್ದೇವೆ. 3-4% ಸಣ್ಣ ತಪ್ಪುಗಳಿರಬಹುದು, ಆದರೆ ಅದಕ್ಕಿಂತ ಹೆಚ್ಚು ಇದ್ದರೆ ಅದು ಸ್ವೀಕಾರಾರ್ಹವಲ್ಲ. ಚುನಾವಣಾ ಆಯೋಗ ಯಾವುದೇ ಒಂದು ಪಕ್ಷಕ್ಕೆ ಸೇರಿದ್ದಲ್ಲ, ಅದು ತಟಸ್ಥವಾಗಿರಬೇಕು. ಭಾರತದ ಜನರಿಗೆ ಚುನಾವಣಾ ಆಯೋಗದ ಮೇಲೆ ಅಪಾರ ವಿಶ್ವಾಸವಿದೆ. ಆ ವಿಶ್ವಾಸ ಉಳಿಯಬೇಕು. ನನ್ನ ಅಭಿಪ್ರಾಯದಲ್ಲಿ, ಒಂದು ಮತದ ಮೋಸ ಕೂಡ ದೊಡ್ಡ ಅಪರಾಧವೇ ಸರಿ. ಈ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸಲೇಬೇಕು. ತನ್ನನ್ನು ರಕ್ಷಿಸಿಕೊಳ್ಳುವ ಬದಲು, ಆಯೋಗ ಈ ಮೋಸವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಯ ನಂತರ, ಬಿಜೆಪಿಯ ರಾಜ್ಯ ನಾಯಕರು ಮತಗಳ ಕಳ್ಳತನದ ಆರೋಪಗಳನ್ನು ವಿರೋಧಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಒಂದು ಅಂಶವೆಂದರೆ, 2008ರಿಂದ ಮಹದೇವಪುರದಲ್ಲಿ ನಡೆದ ನಾಲ್ಕು ವಿಧಾನಸಭಾ ಚುನಾವಣೆಗಳು ಮತ್ತು ನಾಲ್ಕು ಲೋಕಸಭಾ ಚುನಾವಣೆಗಳಲ್ಲಿ, ಬಿಜೆಪಿ ಎಲ್ಲಾ ಎಂಟು ಚುನಾವಣೆಗಳಲ್ಲಿ ಗೆದ್ದಿದೆ ಮತ್ತು ಪ್ರತಿ ಚುನಾವಣೆಯಲ್ಲೂ ಪಕ್ಷದ ಗೆಲುವಿನ ಅಂತರವು ಏರಿಕೆಯಾಗಿದೆ ಎಂಬುದಾಗಿದೆ. ಗೆಲುವಿನ ಅಂತರ ನಿರಂತರವಾಗಿ ಹೆಚ್ಚುತ್ತಿದ್ದರೆ, ಕೇವಲ 10 ತಿಂಗಳಲ್ಲಿ 52,000 ಹೊಸ ಮತದಾರರ ಸೇರ್ಪಡೆ ಬಗ್ಗೆ ಬಿಜೆಪಿ ವಿವರಿಸಲಿ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವನ್ನು ಒಳಗೊಂಡಿರುವ ಇತರ ವಿಧಾನಸಭಾ ಕ್ಷೇತ್ರಗಳಲ್ಲಿ ನೀವು ಇದನ್ನು ಹೋಲಿಕೆ ಮಾಡಿದರೆ ಬೃಹತ್ ಹೆಚ್ಚಳ ಕಂಡು ಬರುತ್ತದೆ ಎಂದು ಹೇಳಿದರು.
►ಮಹದೇವಪುರದಲ್ಲಿ 6.5 ಲಕ್ಷಕ್ಕೂ ಹೆಚ್ಚು ಮತದಾರರಿದ್ದರೆ, ಬೆಂಗಳೂರು ಸೆಂಟ್ರಲ್ ನ ಇತರ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ನಾಲ್ಕು ಲಕ್ಷಕ್ಕಿಂತ ಕಡಿಮೆ ಮತಗಳಿವೆ. ಈ ಹೊಸ ಮತದಾರರು ನಕಲಿ ಎಂದು ಹೇಗೆ ಊಹಿಸಬಹುದು? ಈ ಸಂಖ್ಯೆಗಳು ಸ್ವಾಭಾವಿಕವಾಗಿ ಹೆಚ್ಚಿರಬಹುದು. ಶೇ.8 ರಿಂದ 9ರಷ್ಟು ಮತದಾರರ ಹೆಚ್ಚಳವು ಅಸ್ವಾಭಾವಿಕವಾಗಿ ಹೆಚ್ಚಾಗಿದೆ ಎಂದು ನೀವು ಹೇಳುತ್ತೀರಾ?
ಹೌದು, ಮಹದೇವಪುರ ದೊಡ್ಡ ವಿಧಾನಸಭಾ ಕ್ಷೇತ್ರ. ಆದರೆ ಇದರರ್ಥ 10 ತಿಂಗಳಲ್ಲಿ ಪ್ರತಿದಿನ 200 ಮತದಾರರು ನೋಂದಾಯಿಸಲ್ಪಡುತ್ತಾರೆಯೇ? 2023ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿಯ ಗೆಲುವಿನ ಅಂತರವು 44,000 ಮತಗಳಷ್ಟಿತ್ತು. ಇದು ಇದ್ದಕ್ಕಿದ್ದಂತೆ 1,14,00 ಮತಗಳಿಗೆ ಏರಿಕೆಯಾಯಿತು. 10 ತಿಂಗಳಲ್ಲಿ ಸುಮಾರು 70,000 ಮತಗಳು ಹೆಚ್ಚಳವಾಗಿದೆ ಎಂದು ಹೇಳಿದರು.
ಬಿಜೆಪಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಮತ ಸಿಕ್ಕಿರುವುದು ಅಸಾಮಾನ್ಯವಲ್ಲವೇ? 2018 ರಿಂದ 2023ರ ನಡುವಿನ ಐದು ವರ್ಷಗಳಲ್ಲಿ ಸೇರಿಸಿದ ಹೊಸ ಮತದಾರರಿಗಿಂತ ಈ 10 ತಿಂಗಳಲ್ಲಿ ಹೆಚ್ಚು ಹೊಸ ಮತದಾರರು ನೋಂದಾಯಿತರಾಗಿದ್ದಾರೆ. ಮಹದೇವಪುರದಲ್ಲಿ ಮತದಾರರ ಏರಿಕೆ ಇತರ ಬೆಂಗಳೂರು ಸೆಂಟ್ರಲ್ ಕ್ಷೇತ್ರಗಳಿಗಳಿಗೆ ಹೋಲಿಕೆ ಮಾಡಿದಾಗ ಅತಿಯಾಗಿ ಕಂಡುಬಂದಿದೆ. ಬೇರೆ ಯಾವುದೇ ಕ್ಷೇತ್ರವು 10% ಹೊಸ ಮತದಾರರನ್ನು ಸೇರಿಸಿಲ್ಲ. ನೀವು ಬಿಜೆಪಿಯ ಪತ್ರಿಕಾಗೋಷ್ಠಿಯನ್ನು ಉಲ್ಲೇಖಿಸಿದ್ದೀರಿ. ಆದರೆ ಚುನಾವಣಾ ಆಯೋಗದ ಪರವಾಗಿ ಬಿಜೆಪಿ ಏಕೆ ಉತ್ತರಿಸುತ್ತಿದೆ? ಆಯೋಗವೇ ಸ್ವತಃ ಉತ್ತರಿಸಲಿ. ಚುನಾವಣಾ ಆಯೋಗದ ಅಧಿಕೃತ ಪ್ರತಿಕ್ರಿಯೆ ಬರುವ ಮೊದಲೇ ಬಿಜೆಪಿ ಮುಂಚಿತವಾಗಿ ಪ್ರತಿಕ್ರಿಯಿಸುತ್ತದೆ ಎಂದಾದರೆ ಇದರ ಅರ್ಥವೇನು? ಎಂದು ಪ್ರಶ್ನಿಸಿದರು.
►ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಲೋಕಸಭಾ ಸಂಸದ, ವಿಜೇತ ಅಭ್ಯರ್ಥಿ ಪಿ.ಸಿ. ಮೋಹನ್ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿಯವರ ಆರೋಪಗಳು ಬೆಂಗಳೂರಿನ ಜನರಿಗೆ ಮತ್ತು ವಿಶೇಷವಾಗಿ ಬಿಜೆಪಿಗೆ ಮತ ಹಾಕಿದ ಸಾವಿರಾರು ಹಿಂದೂಗಳಿಗೆ ಮಾಡಿದ ಅವಮಾನ ಎಂದು ಹೇಳಿದರು. ಮತಗಳ ಕಳ್ಳತನದ ಆರೋಪಗಳನ್ನು ಸಮರ್ಥಿಸಿಕೊಳ್ಳುವಾಗ ಮೋಹನ್ ಕೋಮು ಆಯಾಮ ನೀಡಲು ಪ್ರಯತ್ನಿಸಿದರು. ಹಿಂದೂ-ಮುಸ್ಲಿಂ ಸಮಸ್ಯೆಯನ್ನಾಗಿ ಮಾಡಿದರು. ಇದರ ಬಗ್ಗೆ ನೀವು ಏನು ಹೇಳುತ್ತೀರಿ?
ಪಿ.ಸಿ. ಮೋಹನ್ ಬೆಂಗಳೂರು ಸೆಂಟ್ರಲ್ ನಿಂದ ನಾಲ್ಕು ಬಾರಿ ಸಂಸದರಾಗಿದ್ದಾರೆ ಮತ್ತು ಇದಕ್ಕೂ ಮೊದಲು ಶಾಸಕರಾಗಿದ್ದರು. ಹಲವು ಬಾರಿ ಸಾರ್ವಜನಿಕ ಪ್ರತಿನಿಧಿಯಾಗಿ ಆಯ್ಕೆಯಾದ ವ್ಯಕ್ತಿ ನೀಡಿರುವ ಕೋಮುವಾದಿ ಹೇಳಿಕೆ ನೀಡಿರುವುದು ಬೆಂಗಳೂರಿನ ಜನರಿಗೆ ಮಾಡಿದ ಅವಮಾನ. ಕಾಂಗ್ರೆಸ್ ಇಲ್ಲಿ ಯಾವುದೇ ಕೋಮು ಆರೋಪಗಳನ್ನು ಮಾಡುತ್ತಿಲ್ಲ.
ಆದರೆ ಸರಿ ಮತ್ತು ತಪ್ಪಿನ ಆಧಾರದ ಮೇಲೆ ನೈತಿಕ ಪ್ರತಿಪಾದನೆಯನ್ನು ಮಾಡುತ್ತಿದ್ದೇವೆ ಮತ್ತು ಚುನಾವಣಾ ಆಯೋಗದಂತಹ ಪ್ರಜಾಪ್ರಭುತ್ವ ಸಂಸ್ಥೆಗಳ ತಟಸ್ಥತೆಯನ್ನು ಪ್ರಶ್ನಿಸುತ್ತಿದ್ದೇವೆ ಎಂದು ಹೇಳಿದರು.
ಮೋಹನ್ ಸುಮಾರು 6,57,000 ಮತಗಳನ್ನು ಪಡೆದರೆ ನಾನು 6,26,000 ಮತಗಳನ್ನು ಪಡೆದಿದ್ದೇನೆ. ಸ್ಪಷ್ಟವಾಗಿ, ಬಹಳಷ್ಟು ಹಿಂದೂಗಳು, ಕ್ರಿಶ್ಚಿಯನ್ನರು, ಸಿಖ್ಖರು, ಜೈನರು ಮತ್ತು ಎಲ್ಲಾ ಧರ್ಮದ ಸದಸ್ಯರು ನನಗೆ ಮತ ಹಾಕಿದರು. ಭಾರತದ ಎಲ್ಲಾ ಧರ್ಮದ ಜನರು ನನಗೆ ಮತ ಹಾಕಿದ್ದಾರೆ ಎಂದು ನಾನು ಹೇಳುತ್ತೇನೆ. ಆದ್ದರಿಂದ ಧರ್ಮದ ಆಧಾರದ ಮೇಲೆ ಮತದಾನ ನಡೆದಿಲ್ಲ. ಮುಸ್ಲಿಮರು ಕೂಡ ಮೋಹನ್ ಮತ್ತು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ.
ನಾವು ನೀಡಿರುವ ಗಂಭೀರ ಸಾಕ್ಷ್ಯಾಧಾರಿತ ಆರೋಪಗಳನ್ನು ಸಾಮುದಾಯಿಕವಾಗಿ ತಿರಸ್ಕರಿಸಲು, ಮೋಹನ್ ಅಸಮಂಜಸ ಹೇಳಿಕೆ ನೀಡಿದ್ದಾರೆ. ಕಳೆದ 11 ವರ್ಷಗಳಿಂದ ಭಾರತದಲ್ಲಿ ಎಲ್ಲವನ್ನೂ ಕೋಮುವಾದೀಕರಣ ಮಾಡುವ ಬಿಜೆಪಿಯ ಪ್ರಯತ್ನಗಳ ಭಾಗವೇ ಇದು. ಇವರ ತಂತ್ರ ಏನೆಂದರೆ, ಉತ್ತರ ಕೊಡಲು ಸಾಧ್ಯವಾಗದಾಗ, ಜನರನ್ನು ವಿಭಜಿಸುವುದು. ಮತ ಕಳ್ಳತನದ ಗಂಭೀರ ಆರೋಪಗಳಿಗೆ ಯಾವುದೇ ಕೋಮು ದೃಷ್ಟಿಕೋನವಿಲ್ಲ. ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ತಪ್ಪುಗಳಿದ್ದರೆ, ಅದನ್ನು ಸರಿಪಡಿಸಬೇಕು, ಆದರೆ ಅದನ್ನು ಹಿಂದೂ ಮುಸ್ಲಿಂ ವಿಷಯವನ್ನಾಗಿ ಮಾಡಿ ದಾರಿ ತಪ್ಪಿಸುವುದು ತಪ್ಪು ಎಂದು ಹೇಳಿದರು.
►ಮಹದೇವಪುರ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿ ನೀಡಿರುವ ಪುರಾವೆಗಳನ್ನು ಪರಿಗಣಿಸಿದರೆ, ಚುನಾವಣಾ ಆಯೋಗ ಮತ್ತು ಬಿಜೆಪಿ ನಡುವೆ ಒಪ್ಪಂದವಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆಯೇ?
ಚುನಾವಣಾ ಆಯೋಗ ತನ್ನ ಕೆಲಸವನ್ನು ಸರಿಯಾಗಿ ಮಾಡದಿದ್ದರೆ, ಅದು ಸ್ವಯಂ ಬಿಜೆಪಿಗೆ ಸಹಾಯ ಮಾಡಿದಂತೆಯೇ. ಚುನಾವಣಾ ಆಯೋಗದ ಈ ನಿರ್ಲಕ್ಷ್ಯ ಬಿಜೆಪಿ ಪರವಾಗಿದೆ. ಬಿಜೆಪಿ ಶಾಸಕರು ಮೂರು-ನಾಲ್ಕು ಅವಧಿಗೆ ನಿರಂತರವಾಗಿ ಆಯ್ಕೆಯಾಗಿರುವ ಪ್ರದೇಶಗಳಲ್ಲಿ ಇದೇ ಮಾದರಿಯನ್ನು ಕಾಂಗ್ರೆಸ್ ಗಮನಿಸಿದೆ. ಈಗ ಚುನಾವಣಾ ಆಯೋಗ ಆಡಳಿತಾರೂಢ ಪಕ್ಷದ ಪರವಾಗಿದೆ ಎಂಬ ಭಾವನೆ ಮೂಡಿದೆ, ವಿರೋಧ ಪಕ್ಷಗಳು ಇದರ ಪರಿಣಾಮವನ್ನು ಎದುರಿಸುತ್ತಿವೆ ಎಂಬುದು ಈಗ ಅರ್ಥವಾಗಿದೆ ಎಂದು ಹೇಳಿದರು.
ಚುನಾವಣೆಯ ವೇಳಾಪಟ್ಟಿಯನ್ನು ಹೇಗೆ ನಿಗದಿಪಡಿಸಲಾಗುತ್ತಿದೆ ಎಂಬ ಬಗ್ಗೆ ಪ್ರಶ್ನೆಯೂ ಉದ್ಭವಿಸಿದೆ. ಭಾರತೀಯ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಉಳಿಯಲು ಮತ್ತು ಪಾರದರ್ಶಕತೆ ದೃಷ್ಟಿಯಿಂದ ನಮ್ಮ ಪುರಾವೆಗಳಿಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು. ಆಯೋಗದ ನಡೆ ಕುರಿತು ಈಗಾಗಲೇ ಪ್ರಶ್ನೆಗಳು ಎದ್ದಿರುವುದರಿಂದ, ನಾವು ಡಿಜಿಟಲ್ ಡೇಟಾ ಹಾಗೂ ಸಿಸಿಟಿವಿ ದೃಶ್ಯಾವಳಿ ಕೇಳಿದ್ದೇವೆ. ಏಕೆಂದರೆ ಸಂಜೆ 5 ರಿಂದ ಮತದಾನ ಪ್ರಮಾಣ ಏಕಾಏಕಿ ಏರಿಕೆಯಾಗಿದೆ. ಸಂಜೆ 5 ನಂತರ ಹೆಚ್ಚಿನ ಜನರು ಹೇಗೆ ಬೂತ್ಗಳಿಗೆ ಧಾವಿಸಿದ್ದಾರೆ ಎಂಬುದು ತಿಳಿಯಬೇಕು. ಇವು ಚುನಾವಣಾ ಆಯೋಗದ ತಟಸ್ಥತೆಯ ಮೇಲೆ ಅನುಮಾನ ಮೂಡಿಸುವ ಗಂಭೀರ ವಿಷಯಗಳು. ಆಯೋಗ ಯಾವುದೇ ರಾಜಕೀಯ ಪಕ್ಷದ ಪರವಾಗದೆ ತಟಸ್ಥವಾಗಿರಬೇಕು ಎಂದು ಹೇಳಿದರು.
ಕೃಪೆ: Frontline