'ಧರ್ಮಸ್ಥಳ ದೂರು' | ಆರೋಪ ಕೇಳಿ ಬಂದಿರುವುದು ಕರ್ನಾಟಕದಲ್ಲಿ; ಬಿಸಿ ಬಿಸಿ ಚರ್ಚೆ ನಡೆಯುತ್ತಿರುವುದು ಕೇರಳದಲ್ಲಿ!
ಕರ್ನಾಟಕದ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಗಂಭೀರ ಪ್ರಕರಣದ ಬಗ್ಗೆ ಕರ್ನಾಟಕದ ಪ್ರಮುಖ ಟಿವಿ ಚಾನೆಲ್ ಗಳು ಮೌನವಾಗಿರುವಾಗ, ಕೇರಳದ ನ್ಯೂಸ್ ಚಾನೆಲ್ ಗಳಲ್ಲಿ ಪ್ರತಿದಿನ ನೇರ ಪ್ರಸಾರದ ಸುದ್ದಿ, ಪರ ವಿರೋಧ ಚರ್ಚೆ ನಡೆಯುತ್ತಿದೆ.
ಮಲಯಾಳಂ ಮಾಧ್ಯಮಗಳ ವರದಿಗಾರರು ಧರ್ಮಸ್ಥಳಕ್ಕೆ ಬಂದು ಬೀಡು ಬಿಟ್ಟಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ತನ್ನ ಮೇಲೆ ಒತ್ತಡ ಹಾಕಿ ಹೂತುಹಾಕಿಸಲಾಗಿದೆ ಎಂದು ವ್ಯಕ್ತಿಯೊಬ್ಬ ಆರೋಪಿಸಿರುವುದು ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಅಪಾರ ಸಂಖ್ಯೆಯ ಅತ್ಯಾಚಾರ, ಕೊಲೆ ನಡೆದಿದೆ ಮತ್ತು ಹೆಣಗಳನ್ನು ಹೂತು ಹಾಕಲಾಗಿದೆ ಎಂದು ಹೇಳಲಾದ ಪ್ರಕರಣದಲ್ಲಿ ಸಾಕ್ಷಿ ದೂರುದಾರ ನೀಡಿರುವ ಹೇಳಿಕೆ ದೇಶವನ್ನೇ ತಬ್ಬಿಬ್ಬುಗೊಳಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ಹಿಡಿದು, ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವರೆಗೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವರೆಗೂ, ಈ ವಿಷಯ ದೇಹದ ಉನ್ನತ ಅಧಿಕಾರ ಕೇಂದ್ರಗಳನ್ನು ತಲುಪಿದೆ.
ಸಿವಿಲ್ ಸೊಸೈಟಿ, ಮಹಿಳಾ ಆಯೋಗ, ನಿವೃತ್ತ ನ್ಯಾಯಾಧೀಶರುಗಳೆಲ್ಲ ಈ ಗಂಭೀರ ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಬೇಕೆಂದು ಒತ್ತಾಯಿಸಿದ ಬೆನ್ನಲ್ಲೇ ಪ್ರಕರಣ ತೀವ್ರತೆ ಪಡೆದುಕೊಂಡಿದೆ. ರಾಜ್ಯ ಸರಕಾರದಿಂದ ಈಗ ಪ್ರಕರಣದ ತನಿಖೆಗೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ಧರ್ಮಸ್ಥಳ ಠಾಣೆಗೆ ಬಂದು ದೂರುದಾರ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರಕರಣ ಮಾಧ್ಯಮಗಳ ಗಮನ ಸೆಳೆದಿತ್ತು.
ಆದರೆ, ಕನ್ನಡ ಮಾಧ್ಯಮಗಳಲ್ಲಿ ಹೆಚ್ಚು ವರದಿಯಾಗಬೇಕಿದ್ದ, ಚರ್ಚೆಗೊಳಗಾಗಬೇಕಿದ್ದ ಧರ್ಮಸ್ಥಳದ ಈ ಗಂಭೀರ ವಿಷಯ ಹಾಗೆ ಇಲ್ಲಿ ಚರ್ಚೆ ಆಗಲೇ ಇಲ್ಲ. ಇದೇ ವೇಳೆ, ನೆರೆಯ ಕೇರಳದ ಮಲಯಾಳಂ ನ್ಯೂಸ್ ಚಾನೆಲ್ ಗಳು, ಹಲವಾರು ಮಲಯಾಳಂ ಯೂಟ್ಯೂಬ್ ಚಾನಲ್ ಗಳು ಈ ಬಗ್ಗೆ ಸುದ್ದಿ ಪ್ರಸಾರ ಮಾಡತೊಡಗಿದಾಗ ಈ ವಿಷಯ ಕೇರಳದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.
ಮೀಡಿಯಾ ಒನ್, ರಿಪೋರ್ಟರ್, 24 ನ್ಯೂಸ್, ಕೈರಳಿ, ಏಷ್ಯಾನೆಟ್ ನ್ಯೂಸ್ ಮಲಯಾಳಂ, ನ್ಯೂಸ್ 18, ಕೇರಳ ಕೌಮುದಿ ಯಂತಹ ಪ್ರಮುಖ ಮಲಯಾಳಂ ಟಿವಿ ಚಾನಲ್ ಗಳು ಸೇರಿದಂತೆ ಹಲವಾರು ಯೂಟ್ಯೂಬ್ ಚಾನಲ್ ಗಳಲ್ಲಿ ಈ ಬಗ್ಗೆ ಪ್ರತಿದಿನ ಎಂಬಂತೆ ಸುದ್ದಿಗಳು ಪ್ರಸಾರ ಆಗುತ್ತಿವೆ. ನಿರಂತರ ಚರ್ಚೆ ನಡೆಯುತ್ತಿದೆ.
ಮಲಯಾಳಂ ಮಾಧ್ಯಮಗಳಲ್ಲಿ ವರದಿಗಳು ಹಾಗೂ ಚರ್ಚೆಗಳನ್ನು ನೋಡಿ ಅಲ್ಲಿನ ಜನರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ವಿಡಿಯೋ ಮಾಡಿ ಶೇರ್ ಮಾಡುತ್ತಿದ್ದಾರೆ. ಚಾನಲ್ ಗಳ ವಿಶೇಷ ವರದಿಗಳನ್ನು ಶೇರ್ ಮಾಡಿ ಕೇರಳಿಗರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
ಅಲ್ಲದೇ , ರಿಪೋರ್ಟರ್, 24 ನ್ಯೂಸ್, ಮೀಡಿಯಾ one, ಕೈರಳಿ, ಏಷ್ಯಾನೆಟ್ ನ್ಯೂಸ್ ಮಲಯಾಳಂ ಚಾನಲ್ ಗಳ ವರದಿಗಾರರು ಧರ್ಮಸ್ಥಳಕ್ಕೆ ಬಂದು ಅಲ್ಲಿಂದಲೇ ವರದಿ ಮಾಡುತ್ತಿದ್ದಾರೆ.
ಇನ್ನೊಂದೆಡೆ, ಕೇರಳದಲ್ಲಿ ಸಿಪಿಐ ಪಕ್ಷದ ರಾಜ್ಯಸಭೆ ಸಂಸದರಾದ ಸಂತೋಷ್ ಕುಮಾರ್ ಪಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದಿರುವ ಪತ್ರ ಗಮನ ಸೆಳೆದಿದೆ.
ಸಂತೋಷ್ ಕುಮಾರ್ ಪಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಜುಲೈ 19 ರಂದು ಪತ್ರ ಬರೆದು
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತ ಆರೋಪಗಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಅಂದ್ರೆ ಎನ್ಐಎ ತನಿಖೆಗೆ ಒತ್ತಾಯಿಸಿದ್ದಾರೆ.
ಈ ಪತ್ರವು ಹಲವು ಗಂಭೀರ ಆರೋಪಗಳನ್ನು ಒಳಗೊಂಡಿದ್ದು, ಧರ್ಮಸ್ಥಳದಂತಹ ಪವಿತ್ರ ಸ್ಥಳದಲ್ಲಿ ನಡೆದಿದೆ ಎನ್ನಲಾದ ಅಮಾನವೀಯ ಕೃತ್ಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ಪ್ರಕರಣ ಸಂಬಂಧ ಕರ್ನಾಟಕ ಪೊಲೀಸ್ ಇಲಾಖೆಯ ತನಿಖೆಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ
ಸುಪ್ರೀಂ ಕೋರ್ಟ್ ವಕೀಲ ಕೆವಿ ಧನಂಜಯ ಕೇರಳ ಸರಕಾರ ಮದ್ಯ ಪ್ರವೇಶಿಸುವಂತೆಯೂ, ಪ್ರಕರಣದ ತನಿಖೆ ಸಂಬಂಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವಂತೆ ಆಗ್ರಹಿಸಿದ್ದರು. ಕೇರಳ ಪೊಲೀಸರಿಗೆ ಇಲ್ಲಿನ ತನಿಖೆಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಬೇಕು ಎಂದೂ ಅವರು ಆಗ್ರಹಿಸಿದ್ದರು
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು, ಅದರಲ್ಲೂ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮಹಿಳೆಯರ ಮತ್ತು ಅಪ್ರಾಪ್ತ ಬಾಲಕಿಯರ ಶವಗಳನ್ನು ಹೂತು ಹಾಕಿಸಲಾಗಿತ್ತು ಎಂದು ವ್ಯಕ್ತಿಯೊಬ್ಬರು ಜುಲೈ 3ರಂದು ದೂರು ದಾಖಲಿಸಿದ್ದರು.
ಜುಲೈ 11ಕ್ಕೆ ದೂರುದಾರ ಅಸ್ತಿ ಪಂಜರದೊಂದಿಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ಹೇಳಿಕೆ ನೀಡಿದ್ದರೂ, ಪ್ರಕರಣದ ತನಿಖೆ ನಿಯಮದ ಪ್ರಕಾರ ಆಗುತ್ತಿಲ್ಲ ಎಂದು ಅವರ ದೂರುದಾರನ ವಕೀಲರು ಆರೋಪಿಸುತ್ತಿದ್ದಾರೆ.
ದೂರುದಾರ ನ್ಯಾಯಾಲಯಾಕ್ಕೆ ಹಾಗು ಪೊಲೀಸರಿಗೆ ಹೇಳಿಕೆ ಹಾಗು ಅಸ್ಥಿ ಪಂಜರದ ಸಾಕ್ಷ್ಯ ನೀಡಿ ವಾರ ಕಳೆದರೂ, ಇದುವರೆಗೆ ಯಾವುದೇ ಮಹಜರು ನಡೆದಿಲ್ಲ. ತನಿಖೆ ನಡೆಸುತ್ತಿರುವ ಪೊಲೀಸರ ನಡೆಯ ಬಗ್ಗೆಯು ದೂರುದಾರ ಸಹಿತ ಜನರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಕರಣವನ್ನು ರಾಜ್ಯ ಸರಕಾರ ಈಗ ಎಸ್ ಐಟಿ ತನಿಖೆಗೆ ವಹಿಸಿದೆ. ಮುಂದೆ ಏನೇನು ಬೆಳವಣಿಗೆಗಳು ಆಗಲಿವೆ, ಪ್ರಕರಣ ಯಾವೆಲ್ಲಾ ರೀತಿಯ ತಿರುವು ಪಡೆಯಲಿದೆ ಎನ್ನುವ ಕುತೂಹಲ ಮೂಡಿದೆ.