1983ರಲ್ಲಿ ಧರ್ಮಸ್ಥಳದಲ್ಲಿ ನಡೆದ ಘಟನೆ ಬಗ್ಗೆ ರಾಜ್ಯ ವಿಧಾನಸಭೆಯಲ್ಲೂ ನಡೆದಿತ್ತು ಚರ್ಚೆ !
ಬೆಂಗಳೂರು : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯದ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿರುವ ಮಧ್ಯೆ ಸುಪ್ರೀಂ ಕೋರ್ಟ್ ವಕೀಲರಾದ ಕೆ ವಿ ಧನಂಜಯ್ ಅವರು 1983ರಲ್ಲಿ ಧರ್ಮಸ್ಥಳದಲ್ಲಿ ನಡೆದ ಘಟನೆಯೊಂದನ್ನು ಉಲ್ಲೇಖಿಸಿ ಪ್ರಕಟನೆಯೊಂದನ್ನು ಹೊರಡಿಸಿದ್ದಾರೆ. ಧರ್ಮಸ್ಥಳದಲ್ಲಿ ಇಬ್ಬರು ಯುವಕರ ಸಾವು, ಹಾಗು ಮೃತ ಯುವಕನ ತಂದೆಯ ಮೇಲೆ ಪೊಲೀಸ್ ದೌರ್ಜನ್ಯದ ಬಗ್ಗೆ ರಾಜ್ಯ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆದಿತ್ತು ಎಂಬುದನ್ನು ನೆನಪಿಸಿ ಚರ್ಚೆಯ ವಿವರಗಳನ್ನು ಮುಂದಿಟ್ಟಿದ್ದಾರೆ
ಖ್ಯಾತ ಕವಿ ಮತ್ತು ಕಾದಂಬರಿಕಾರ ಜಾರ್ಜ್ ಸಂತಾಯನ ಅವರ ʼಇತಿಹಾಸದ ಅರಿವು ಬೇಡವೆನ್ನುವವರು ಹಿಂದಿನದ್ದನ್ನೇ ಮುನ್ನಡೆಸುತ್ತಾರೆʼ ಎಂಬ ವಾಕ್ಯವನ್ನು ಉಲ್ಲೇಖಿಸಿ ಪತ್ರಿಕಾ ಪ್ರಕಟನೆ ನೀಡಿರುವ ಕೆವಿ ಧನಂಜಯ್, "ವ್ಯಕ್ತಿಗಳು ನಾಪತ್ತೆಯಾಗುವುದು, ದೂರು ಕೊಡಲು ಅವರ ಸಂಬಂಧಿಕರು ಪೊಲೀಸ್ ಠಾಣೆಗೆ ಹೋಗುವುದು, ಅವರನ್ನು ಪೊಲೀಸರು ಬಂಧನದಲ್ಲಿಡುವುದು, ಅವರ ಜನಿವಾರವನ್ನೂ ಪೊಲೀಸರು ಕಿತ್ತು ಹಾಕಿರುವುದು " - ಇಂತಹ ಘಟನೆಯೊಂದು ಕರ್ನಾಟಕ ವಿಧಾನಸಭೆಯಲ್ಲಿ 1983ರಲ್ಲಿ ಚರ್ಚೆಗೊಳಗಾಗಿತ್ತು ಎಂದು ನೆನಪಿಸಿದ್ದಾರೆ.
1983ರಲ್ಲಿ ಶಿರಗುಪ್ಪ ತಾಲೂಕಿನ ವೆಂಕೋಬರಾವ್ ಎನ್ನುವವರ ಪುತ್ರ ಮತ್ತು ಆತನ ಮೂವರು ಸ್ನೇಹಿತರು ಧರ್ಮಸ್ಥಳ ದೇವಸ್ಥಾನಕ್ಕೆಂದು ಹೋಗುತ್ತಾರೆ. ನಾಲ್ವರು ಅಲ್ಲಿನ ಲಾಡ್ಜ್ ನಲ್ಲಿ ತಂಗುತ್ತಾರೆ. ನಾಲ್ವರಲ್ಲಿ ಇಬ್ಬರು ನೇತ್ರಾವತಿ ನದಿಯಲ್ಲಿ ಬಿದ್ದುಸಾವಿಗೀಡಾಗುತ್ತಾರೆ. ಉಳಿದ ಇಬ್ಬರು ನಾಪತ್ತೆಯಾಗುತ್ತಾರೆ. ನದಿಯಲ್ಲಿ ಪ್ರಾಣ ಕಳೆದುಕೊಂಡ ಇಬ್ಬರ ದೇಹಗಳನ್ನು ಪೊಲೀಸರು ಯಾರಿಗೂ ತಿಳಿಸದೆ 'ದಫನ' ಮಾಡುತ್ತಾರೆ. ವೆಂಕೋಬರಾವ್ ರವರಿಗೆ ತನ್ನ ಮಗ ಮೃತಪಟ್ಟಿರುವ ಬಗ್ಗೆ ಒಂದು ತಿಂಗಳ ಬಳಿಕ ತಿಳಿಯುತ್ತದೆ. ಒಂದು ತಿಂಗಳ ನಂತರ ಬಳಿಕ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಹೋಗುತ್ತಾರೆ. ಅಲ್ಲಿ ನಡೆದ ಘಟನೆ ಬಗ್ಗೆ 1983ರ ಆಗಸ್ಟ್ 31ರಂದು ಕರ್ನಾಟಕ ವಿಧಾನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಆ ವಿವರಗಳನ್ನು ಕೆವಿ ಧನಂಜಯ್ ಬಿಡುಗಡೆ ಮಾಡಿದ್ದಾರೆ.
ಆಗ ರಾಮಕೃಷ್ಣ ಹೆಗಡೆಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಈ ಚರ್ಚೆಯಲ್ಲಿ ಎಸ್ ಬಂಗಾರಪ್ಪ, ವೀರಪ್ಪ ಮೊಯ್ಲಿ, ವಸಂತ ಬಂಗೇರರಂತಹ ಘಟಾನುಘಟಿ ನಾಯಕರು ಭಾಗವಹಿಸಿದ್ದರು.
ಧನಂಜಯ್ ಅವರು ವಿಧಾನಸಭೆಯಿಂದ ಪಡೆದು ಬಿಡುಗಡೆ ಮಾಡಿರುವ ದಾಖಲೆಯಲ್ಲಿರುವ ಪ್ರಕಾರ ಅಂದು ಕಲಾಪದಲ್ಲಿ ನಡೆದ ಚರ್ಚೆಯ ವಿವರ ಇಲ್ಲಿದೆ :
ಧರ್ಮಸ್ಥಳದಲ್ಲಿ ನದಿಯಲ್ಲಿ ಬಿದ್ದು ಮೃತಪಟ್ಟ ಎರಡು ಮೃತದೇಹಗಳನ್ನು ಪೊಲೀಸರು ಗೌಪ್ಯವಾಗಿ ಧಪನ ಮಾಡಿರುವ ಬಗ್ಗೆ ಶಿರಗುಪ್ಪ ಶಾಸಕ ಶಂಕರರೆಡ್ಡಿ ಸದನದಲ್ಲಿ ಮೊದಲು ಪ್ರಸ್ತಾಪಿಸಿದ್ದಾರೆ.
ಶಂಕರರೆಡ್ಡಿ : ಮಾನ್ಯ ಅಧ್ಯಕ್ಷರೇ, ನಮ್ಮ ಶಿರಗುಪ್ಪ ತಾಲೂಕಿನ ವೆಂಕೋಬರಾವ್ ಎನ್ನುವರ ಪುತ್ರ ಮತ್ತು ಆತನ ಸ್ನೇಹಿತರು ತೀರ್ಥಯಾತ್ರೆಗೆಂದು ಹೋಗಿ ಧರ್ಮಸ್ಥಳದ ನದಿಯಲ್ಲಿ ಬಿದ್ದು ಮೃತಪಟ್ಟ ಸಂದರ್ಭದಲ್ಲಿ ಅಲ್ಲಿನ ಪೋಲೀಸರು ಮೃತದೇಹವನ್ನು ಮೇಲಕ್ಕೆತ್ತಿ ಯಾರಿಗೂ ತಿಳಿಸದೆ ದಫನ ಮಾಡಿರುತ್ತಾರೆ. ಇದಾದ ಒಂದು ತಿಂಗಳ ನಂತರ ವಿಷಯ ತಿಳಿದ ವೆಂಕೋಬರಾವ್ ಅವರು ಧರ್ಮಸ್ಥಳಕ್ಕೆ ಹೋಗಿ ಅಲ್ಲಿನ ಪೊಲೀಸರಲ್ಲಿ ವಿಚಾರಿಸಿದ್ದಾರೆ. ಮೃತದೇಹ ಸಿಕ್ಕಿರುವ ಬಗ್ಗೆ ಪತ್ರಿಕೆಗಳ ಮತ್ತು ರೇಡಿಯೋ ಮೂಲಕ ಪ್ರಸಾರ ಮಾಡಿದ್ದರೆ ನನಗೆ ಕೂಡಲೇ ತಿಳಿಯುತ್ತಿತ್ತು ಎಂದು ಹೇಳಿದ್ದಾರೆ.
ಆಗ ಅಲ್ಲಿದ್ದ ಹೆಡ್ ಕಾನ್ಸ್ ಟೇಬಲ್ ನೀನು ಯಾರೋ ಮಗನೇ ಇದನ್ನೆಲ್ಲಾ ಹೇಳಲು ಎಂದು ನಿಂದಿಸಿ ಕಪಾಳಕ್ಕೆ ಬಾರಿಸಿ, ಮನಬಂದಂತೆ ಹಲ್ಲೆ ನಡೆಸಿರುವುದಲ್ಲದೆ ಅವರ ಜನಿವಾರವನ್ನೂ ಕೂಡ ಕಿತ್ತುಹಾಕಿದ್ದಾರೆ. ಆ ರಾತ್ರಿಯೆಲ್ಲಾ ಲಾಕಪ್ ನಲ್ಲಿಟ್ಟು ಅವರ ಬಳಿಯಲ್ಲಿದ್ದ 250 ರೂಪಾಯಿ ಮತ್ತು ರಿಸ್ಟ್-ವಾಚನ್ನು ಕಿತ್ತುಕೊಂಡಿದ್ದಾರೆ. ಈ ಬಗ್ಗೆ ಯಾರ ಬಳಿಯಾದರೂ ಹೇಳಿದರೆ ಮತ್ತೆ ತೊಂದರೆ ಕೊಡುವುದಾಗಿ ಬೆದರಿಸಿ ಮುಚ್ಚಳಿಕೆಯನ್ನು ಬರೆಸಿಕೊಂಡು ಹೊರಗೆ ಬಿಟ್ಟಿದ್ದಾರೆ.
ಇಷ್ಟೆಲ್ಲಾ ನಡೆದ ನಂತರ ನಾನು ಈ ವಿಷಯದ ಬಗ್ಗೆ ಒಂದು ಪತ್ರದನ್ನು ಮಾನ್ಯ ಮುಖ್ಯಮಂತ್ರಿಗಳಿಗೆ 2 ತಿಂಗಳ ಹಿಂದೆ ಬರೆದಿದ್ದೇನೆ. ಆದರೆ, ಅವರಿಂದ ಸೌಜನ್ಯಕ್ಕಾದರೂ ಈ ವಿಷಯವನ್ನು ಪರಿಶೀಲನೆ ಮಾಡುತ್ತೇವೆಂದು ಹೇಳುವ ಒಂದು ಉತ್ತರ ನನಗೆ ಬರಲಿಲ್ಲ. ಆದ್ದರಿಂದ ಈ ಬಗ್ಗೆ ಇಲ್ಲಿ ಚರ್ಚೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಸದನದಲ್ಲಿ ಸಭಾಧ್ಯಕ್ಷರ ಗಮನಕ್ಕೆ ತಂದಿದ್ದಾರೆ.
ಈ ವೇಳೆ ಶಾಸಕ ಶಿವಮೂರ್ತಿ ಅವರು ಮಾತನಾಡಿ, ಮಾನ್ಯ ಅಧ್ಯಕ್ಷರೇ, ವೆಂಕೋಬರಾವ್ ಅವರಿಗೆ ತನ್ನ ಮಗ ಕಳೆದ ಒಂದು ತಿಂಗಳಿನಿಂದ ಎಲ್ಲಿಗೆ ಹೋಗಿದ್ದಾನೆ ಎಂಬ ವಿಚಾರ ತಿಳಿದಿರಲಿಲ್ಲ. ಒಂದು ದಿನ ಆತ ಮೃತಪಟ್ಟಿರುವ ವಾರ್ತೆ ಬರುತ್ತದೆ. ಆ ನಂತರ ಇವರು ಸಂಬಂಧಪಟ್ಟ ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ ಅವರ ಬಟ್ಟೆಯನ್ನು ಬಿಚ್ಚಿ ಅಲ್ಲಿದ್ದ ಹೆಡ್ ಕಾನ್ಸ್ ಟೇಬಲ್ ಅವರ ಕಪಾಳಕ್ಕೆ ಹೊಡೆದಿದ್ದಾರೆ. ಇದಲ್ಲದೆ ಅವರನ್ನು ರಾತ್ರಿಯೆಲ್ಲಾ ಪೊಲೀಸ್ ಕಸ್ಟಡಿಯಲ್ಲಿಯೇ ಇಟ್ಟುಕೊಂಡು ಮಲಮೂತ್ರ ಮಾಡುವುದಕ್ಕೂ ಸಹ ಬಿಟ್ಟಿಲ್ಲ ಮತ್ತು ಕುಡಿಯಲು ನೀರನ್ನೂ ಕೂಡ ಕೊಟ್ಟಿಲ್ಲ. ಈ ಪ್ರಕರಣದಲ್ಲಿ ಪೋಲೀಸರು ಹದ್ದುಮೀರಿ ನಡೆದುಕೊಳ್ಳುವಂತಹ ಪ್ರವೃತ್ತಿ ಏನಿದೆ? ಇದನ್ನು ಕರ್ನಾಟಕದ ಜನತೆ ಬಹಳ ಗಂಭೀರವಾಗಿ ವಿಚಾರ ಮಾಡುತ್ತಿದ್ದಾರೆ. ಮೃತ ಮಗನ ಬಗೆ ಕೇಳಲು ಹೋದಾಗ ಈ ರೀತಿ ವರ್ತನೆ ಮಾಡಿದ್ದು ಸರಿಯೇ ಎಂಬ ಬಗ್ಗೆ ಸರಕಾರದವರು ಉತ್ತರ ಕೊಡಬೇಕು ಎಂದು ಸದನದಲ್ಲಿ ಆಗ್ರಹಿಸಿದ್ದಾರೆ.
ಈ ವೇಳೆ ಮಾತನಾಡಿದ ಬೆಳ್ತಂಗಡಿ ಶಾಸಕ ವಸಂತ ಬಂಗೇರ ಅವರು, ಈ ಪ್ರಕರಣ ನನ್ನ ಕ್ಷೇತ್ರದಲ್ಲಿ ನಡೆದಿದೆ. ವೆಂಕೋಬರಾವ್ ಅವರು ತನ್ನ ಮಗನ ಸಾವಿನ ಬಗ್ಗೆ ವಿಚಾರಣೆ ಮಾಡಲು ಧರ್ಮಸ್ಥಳದ ಔಟ್-ಪೋಸ್ಟ್ ಪೊಲೀಸ್ ಸ್ಟೇಷನ್‌ಗೆ ಹೋದಾಗ ಅಲ್ಲಿದ್ದ ಹೆಡ್ ಕಾನ್ಸ್ ಟೇಬಲ್ ಸರಿಯಾದ ಉತ್ತರ ಕೊಡದೆ ಕೇಳಲು ಹೋದವರನ್ನು ಹೊಡೆದು ಅವರ ಜನಿವಾರವನ್ನು ಕಿತ್ತು ಹಾಕಿ ಲಾಕಪ್‌ನಲ್ಲಿ ಹಾಕಿ ಮಾರನೇ ದಿವಸ ಹೊರಗೆ ಬಿಟ್ಟಿದ್ದಾರೆ. ಇವರ ಮಗನ ಹತ್ತಿರವಿದ್ದ ಟ್ರಾನ್ಸಿಸ್ಟರ್ ರೇಡಿಯೋ, ಟೇಪ್ ರೆಕಾರ್ಡರ್, ವಾಚ್ ಮುಂತಾದ ಯಾವ ವಸ್ತುಗಳನ್ನೂ ಸಹ ವಾಪಸ್ ಕೊಟ್ಟಿಲ್ಲ. ಧರ್ಮಸ್ಥಳಕ್ಕೆ ಇವರ ಮಗ ಹೋದಾಗ 4 ಜನರು ಸೇರಿಕೊಂಡು ಒಂದು ರೂಮನ್ನು ಪಡೆದಿದ್ದರು. ಈ 4 ಜನರಲ್ಲಿ ಇಬ್ಬರು ನದಿಗೆ ಬಿದ್ದು ಸತ್ತ ಮೇಲೆ ಉಳಿದ ಇಬ್ಬರು ಯಾರು ಎಲ್ಲಿಗೆ ಹೋದರು ಎಂಬುದನ್ನು ವಿಚಾರಣೆ ಮಾಡಲು ಹೋದಾಗ ಪೊಲೀಸರು ಹಲ್ಲೆ ನಡೆಸಿದ್ದಾರೆ. ಸರಕಾರದವರು ಮೊದಲು ಈ ಪೊಲೀಸರ ದೌರ್ಜನ್ಯವನ್ನು ನಿಲ್ಲಿಸಬೇಕು. ಈ ಹೆಡ್ ಕಾನ್ಸ್ ಟೇಬಲನ್ನು ಮೊದಲು ಅಮಾನತ್ತಿನಲ್ಲಿಟ್ಟು ಈ ಪ್ರಕರಣವನ್ನು ತನಿಖೆ ಮಾಡಬೇಕೆಂದು ತಮ್ಮ ಮೂಲಕ ಮುಖ್ಯಮಂತ್ರಿಗಳಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಆಗ ಮಾತನಾಡಿದ ಎಸ್. ಬಂಗಾರಪ್ಪ ಅವರು ಇದೇ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ತಂದೆ ಮಗನನ್ನು ಕಳೆದುಕೊಂಡು ಪೋಲೀಸ್ ಠಾಣೆಗೆ ಹೋದಾಗ ಅವರು ಅನುಕಂಪ ವ್ಯಕ್ತಪಡಿಸಬೇಕಾಗಿತ್ತು. ಈಜು ಬಾರದವರು ಮುಳುಗುತ್ತಿದಾಗ ಅವರನ್ನು ರಕ್ಷಿಸಲಿಕ್ಕೆ ಹೋಗಿ ಆತನು ಕೂಡ ಸತ್ತಿದ್ದಾನೆ. ಈ ದುರಂತ ನಡೆದದ್ದು ತಂದೆತಾಯಿಗಳಿಗೆ ಗೊತ್ತಿಲ್ಲ. ಆತ ಸತ್ತ ವಿಷಯವನ್ನು ರೇಡಿಯೋ ಮೂಲಕ ಬಿತ್ತರಿಸಬೇಕಾಗಿತ್ತು. ಪತ್ರಿಕೆಗಳ ಮೂಲಕ ಮಾಹಿತಿ ನೀಡಬೇಕಾಗಿತ್ತು. ಈ ರೀತಿ ಮಾಡಲಿಕ್ಕೆ ಪೊಲೀಸ್ ಇಲಾಖೆಯಲ್ಲಿ ಕಾನೂನು ಇದೆ. ಅವರು ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿಲ್ಲ. ಮಾನ್ಯಮಂತ್ರಿಗಳು ಬಳ್ಳಾರಿಗೆ ಹೋಗಿದ್ದಾಗ ಅವರನ್ನು ಕಂಡು ಅರ್ಜಿ ಕೊಡಲು ಮೃತನ ತಂದೆ ಕಾದು ನಿಂತಿದ್ದರು. ಪೊಲೀಸ್ ಅಧಿಕಾರಿಗಳು ಸಿಎಂ ಭೇಟಿಗೆ ಅವಕಾಶ ನೀಡಿರಲಿಲ್ಲ. ಆತ ಅರ್ಜಿಯನ್ನು ಪೋಸ್ಟ್ ಮೂಲಕ ಸಿಎಂಗೆ ಕಳುಹಿಸಿದ್ದಾನೆ. ಆತನ ಅರ್ಜಿಗೆ ಉತ್ತರ ಕೊಟ್ಟಿಲ್ಲ. ಸದನಕ್ಕೆ ನೀವು ಉತ್ತರ ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಎಸ್. ಬಂಗಾರಪ್ಪ, ಎಂ.ವೀರಪ್ಪ ಮೊಯ್ಲಿ ಸೇರಿದಂತೆ ಹಲವರು ಅಂದಿನ ಮುಖ್ಯಮಂತ್ರಿ
ರಾಮಕೃಷ್ಣ ಹೆಗಡೆ ಅವರು ಈ ಬಗ್ಗೆ ತಕ್ಷಣ ಉತ್ತರ ನೀಡುವಂತೆ ಪಟ್ಟು ಹಿಡಿಯುತ್ತಾರೆ.
ಈ ವೇಳೆ ಸಿಎಂ ರಾಮಕೃಷ್ಣ ಹೆಗಡೆ, ಈ ನಿಯಮದ ಕೆಳಗಡೆ ಯಾವುದೇ ವಿಚಾರವನ್ನೂ ಮಾನ್ಯ ಸದಸ್ಯರುಗಳು ಎತ್ತಿದಾಗ ಅಧಿಕಾರದಲ್ಲಿರುವ ಸರಕಾರ ಉತ್ತರ ಕೊಡಬೇಕು, ಅದರಲ್ಲಿ ನಿರ್ಬಂಧವಿಲ್ಲ. ಇಷ್ಟರೊಳಗೆ ಉತ್ತರ ಕೊಡಬೇಕೆನ್ನುವುದೂ ಮುಖ್ಯವಲ್ಲ. ಇದು ಕಡಿಮೆ ಮಹತ್ವದ್ದು ಎಂದೂ ಅಲ್ಲ. ತಂದೆತಾಯಿಗಳು ಒಬ್ಬ ಮಗನನ್ನು ಕಳೆದುಕೊಂಡಾಗ ಏನಾಗುತ್ತದೆ. ನನಗೂ ಮಗ ಇದ್ದಾನೆ. ಆ ರೀತಿಯಾದಾಗ ಹೃದಯದಲ್ಲಿ ಯಾವ ರೀತಿಯ ವೇದನೆಯಾಗುತ್ತದೆ ಎನ್ನುವುದು ನನಗೆ ಗೊತ್ತಿಲ್ಲವೆಂದು ಅಲ್ಲ. ಈ ನಿಯಮದ ಕೆಳಗಡೆ ಇಂತಿಷ್ಟೇ ದಿವಸಗಳಲ್ಲಿ ಉತ್ತರ ಕೊಡುತ್ತೇವೆಂದು ಹೇಳುವುದಕ್ಕಾಗುವುದಿಲ್ಲ. ಪ್ರಶ್ನೆ ರೂಪದಲ್ಲಿ ಕೇಳಿದರೆ 10 ದಿವಸಗಳಲ್ಲಿ ಉತ್ತರ ಬರುತ್ತದೆ. ಬೇರೆ ಬೇರೆ ನಿಯಮಗಳ ಪ್ರಕಾರ ಬೇರೆ ಬೇರೆ ರೀತಿ ಉತ್ತರ ಕೊಡ ಬೇಕಾಗುತ್ತದೆ. ಆದಷ್ಟು ಬೇಗ ಉತ್ತರ ಕೊಡುತ್ತೇನೆ ಎಂದು ಸದನದಲ್ಲಿ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು, ಅದರಲ್ಲೂ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮಹಿಳೆಯರ ಮತ್ತು ಅಪ್ರಾಪ್ತ ಬಾಲಕಿಯರ ಮೃತದೇಹಗಳನ್ನು ನನ್ನ ಮೇಲೆ ಒತ್ತಡ ಹಾಕಿ ಹೂತು ಹಾಕಿಸಲಾಗಿತ್ತು ಎಂದು ವ್ಯಕ್ತಿಯೊಬ್ಬರು ಜುಲೈ 3ರಂದು ದೂರು ದಾಖಲಿಸಿದ್ದರು. ಜುಲೈ ಹನ್ನೊಂದಕ್ಕೆ ದೂರು ದಾರ ಅಸ್ತಿ ಪಂಜರದೊಂದಿಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ಹೇಳಿಕೆ ನೀಡಿದ್ದಾರೆ. ಅಸ್ಥಿ ಪಂಜರವನ್ನೂ ಒದಗಿಸಿದ್ದಾರೆ. ಸಾರ್ವಜನಿಕರಿಂದ ಭಾರೀ ಆಗ್ರಹದ ಬಳಿಕ ಈ ಕುರಿತು ತನಿಖೆಗೆ ರಾಜ್ಯ ಸರಕಾರ ಎಸ್‌ಐಟಿಯನ್ನು ರಚಿಸಿದೆ.