ಟ್ರಂಪ್ ವಿರುದ್ಧ ತಿರುಗಿಬಿದ್ದ ಆರೆಸ್ಸೆಸ್!
ಟ್ರಂಪ್ ಗುಣಗಾನ ಮಾಡಿದ್ದ ಆರೆಸ್ಸೆಸ್ ದಿಢೀರನೇ ಅಮೆರಿಕವನ್ನು ಹೀಗೆ ತೀವ್ರವಾಗಿ ಟೀಕಿಸುತ್ತಿರುವುದು ಏಕೆ?
ಹಿಂದುತ್ವ ಗುಂಪುಗಳೆಲ್ಲ ಕೆಲ ಸಮಯದ ಹಿಂದೆ ಟ್ರಂಪ್ ಅವರನ್ನು ಕೊಂಡಾಡುತ್ತಿದ್ದುದನ್ನು ಕಂಡಿದ್ದೇವೆ. ಈಗ ಅದೇ ಸಂಘ ಪರಿವಾರದ ಆರೆಸ್ಸೆಸ್ ನ ಮುಖವಾಣಿ ಆರ್ಗನೈಸರ್, ಭಯೋತ್ಪಾದನೆ ಬೆಂಬಲಿಸುತ್ತಿರುವ ಆರೋಪವನ್ನು ಅಮೆರಿಕ ಮೇಲೆ ಹೊರಿಸಿದೆ.
ಆರೆಸ್ಸೆಸ್ ಅಮೆರಿಕವನ್ನು ಹೀಗೆ ತೀವ್ರವಾಗಿ ಟೀಕಿಸುತ್ತಿರುವುದು ಏಕೆ? ಎಂಥ ಸಂದರ್ಭದಲ್ಲಿ ಅದರ ಈ ಟೀಕೆ ಬರುತ್ತಿದೆ ಎಂಬುದನ್ನು ಕೂಡ ನೋಡಬೇಕಿದೆ.
ಈಗ ಪ್ರಧಾನಿಯಾಗಿರುವ ಮೋದಿ ಕೂಡ ಹಿಂದೊಮ್ಮೆ ಆರೆಸ್ಸೆಸ್ ಪ್ರಚಾರಕರಾಗಿದ್ದವರು. ಅವರು ಪ್ರಧಾನಿಯಾಗಿರುವ ಈ ಹೊತ್ತಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಾಂಧವ್ಯ ಹದಗೆಟ್ಟಿದೆ. ಟ್ರಂಪ್ ಹೇಳಿಕೆಗಳ ವಿಷಯದಲ್ಲಿ ಮತ್ತು ಭಾರತದ ರಫ್ತಿನ ಮೇಲೆ ಅಮೆರಿಕ ಹೇರಿರುವ ಹೆಚ್ಚಿನ ಸುಂಕಗಳ ಬಗ್ಗೆ ಮೋದಿ ಮಾತಾಡುತ್ತಲೇ ಇಲ್ಲ. ಇದಕ್ಕಾಗಿ ಅವರು ವಿರೋಧ ಪಕ್ಷಗಳ ಟೀಕೆಗೂ ಒಳಗಾಗಿದ್ದಾರೆ.
ಹೀಗಿರುವಾಗಲೇ, ಒಮ್ಮೆ ಟ್ರಂಪ್ ಅನ್ನು ಹೊಗಳಿದ್ದ ಸಂಘ ಪರಿವಾರ, ಈಗ ಟ್ರಂಪ್ ವಿರುದ್ಧ ತಿರುಗಿಬಿದ್ದಿದೆಯೆ? ಅಮೆರಿಕದ ಮೇಲೆ ಆರೆಸ್ಸೆಸ್ ಕಟು ದಾಳಿ ನಡೆಸಿರುವುದನ್ನು ನೋಡಿದರೆ, ಹಾಗೆನ್ನಿಸುತ್ತದೆ. ಹಿಂದೊಮ್ಮೆ ಟ್ರಂಪ್ ಅವರನ್ನು ಕೊಂಡಾಡುತ್ತಿದ್ದವರೇ, ಅವರ ಗೆಲುವಿಗಾಗಿ ಇಲ್ಲಿ ಹೋಮ ಹವನ ಮಾಡಿದ್ದವರೇ ಈಗ ಟ್ರಂಪ್ ಬಗ್ಗೆ ದೊಡ್ಡ ದೊಡ್ಡ ಆರೋಪ ಮಾಡಲು ನಿಂತಿದ್ದಾರೆ.
ಟ್ರಂಪ್ ಭಯೋತ್ಪಾದನೆ ಮತ್ತು ಸರ್ವಾಧಿಕಾರವನ್ನು ಬೆಂಬಲಿಸುತ್ತಿದ್ದಾರೆ ಎಂಬುದು ಈಗ ಆರೆಸ್ಸೆಸ್ ಆರೋಪ. ಆರೆಸ್ಸೆಸ್ ಮುಖವಾಣಿ ಆರ್ಗನೈಸರ್ ನ ಸಂಪಾದಕೀಯದಲ್ಲಿ ಈ ಟೀಕೆ ಮಾಡಲಾಗಿದೆ. ಅಮೆರಿಕ ನೇತೃತ್ವದ ಏಕಧ್ರುವೀಯ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ ಮತ್ತು ಬಹು ರಂಗಗಳಲ್ಲಿ ಸವಾಲುಗಳನ್ನು ಎದುರಿಸುತ್ತಿದೆ ಎಂದು ಅದರಲ್ಲಿ ಬರೆಯಲಾಗಿದೆ.
ವ್ಯಾಪಾರ ಯುದ್ಧಗಳು, ನಿರ್ಬಂಧಗಳು ಮತ್ತು ಸರ್ಕಾರ ಬದಲಾವಣೆಯಲ್ಲಿ ತೊಡಗಿರುವುದು ಅಮೆರಿಕದ ಅವನತಿಗೆ ಸಾಕ್ಷಿ ಎಂದು ಟೀಕಿಸಲಾಗಿದೆ. ಅಮೆರಿಕದ ನಡೆ ಅಂತರರಾಷ್ಟ್ರೀಯ ಅಸ್ಥಿರತೆಗೆ ಕಾರಣವಾಗಿದೆ ಎಂದು ಆರೆಸ್ಸೆಸ್ ಹೇಳಿದೆ.
ರಷ್ಯಾ-ಉಕ್ರೇನ್ ಯುದ್ಧ, ಇಸ್ರೇಲ್-ಹಮಾಸ್ ಯುದ್ಧ ಮತ್ತು ಇಸ್ರೇಲ್-ಇರಾನ್ ಉದ್ವಿಗ್ನತೆಗಳೆಲ್ಲ ಜಾಗತಿಕ ವ್ಯವಸ್ಥೆ ಕುಸಿಯುತ್ತಿರುವ ಲಕ್ಷಣಗಳಾಗಿವೆ ಎಂದು ಅದು ಹೇಳಿದೆ. ಅದು ಸಾಲ ಬಲೆಯ ತಂತ್ರ ಅನುಸರಿಸುತ್ತಿದೆ ಮತ್ತು ದೀರ್ಘಕಾಲೀನ ಸ್ಥಿರತೆಗಾಗಿ ವಿಶ್ವಾಸಾರ್ಹ ಕಾರ್ಯವಿಧಾನಗಳನ್ನು ಹೊಂದಿಲ್ಲ ಎಂದು ಆರೋಪಿಸಲಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಾಗಿ ಟ್ರಂಪ್ ನೀಡಿದ ಹೇಳಿಕೆಗಳು ಮತ್ತು ಭಾರತದ ಮೇಲೆ ಹೇರಲಾಗಿರುವ ಹೆಚ್ಚಿನ ಸುಂಕಗಳ ಬಗ್ಗೆ ಪ್ರಧಾನಿ ಮೋದಿ ಮೌನವಾಗಿರುವ ಹೊತ್ತಲ್ಲಿ ಆರೆಸ್ಸೆಸ್ ಅಮೆರಿಕವನ್ನು ಟೀಕಿಸಿರುವುದು ಮಹತ್ವ ಪಡೆದಿದೆ.
ಅಂದರೆ ಆರೆಸ್ಸೆಸ್ ಮೋದಿ ಬೆಂಬಲಕ್ಕೆ ಬಂದಿದೆಯೆ?
ಆರೆಸ್ಸೆಸ್ ನಾಯಕತ್ವ ಮತ್ತು ಮೋದಿ ನೇತೃತ್ವದ ಬಿಜೆಪಿ ನಡುವೆ ಉದ್ವಿಗ್ನತೆ ಇದೆಯೆಂಬುದು ಈಗಾಗಲೇ ಗೊತ್ತಿರುವ ವಿಷಯ. ಅಲ್ಲದೆ ಇತ್ತೀಚೆಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ 75 ರ ವಯೋಮಿತಿ ಬಗ್ಗೆ ಮಾತಾಡಿದ್ದು ಕೂಡ ಮೋದಿಯನ್ನು ಗುರಿಯಾಗಿಸಿ ಬಿಟ್ಟ ಬಾಣ ಎಂಬುದು ಚರ್ಚೆಯಾಗುತ್ತಲೇ ಇದೆ.
ಹೀಗಿರುವಾಗಲೂ, ಆರೆಸ್ಸೆಸ್ ಅಮೆರಿಕ ಮತ್ತು ಟ್ರಂಪ್ ವಿರುದ್ಧ ಮಾಡಿರುವ ಈ ಟೀಕೆಗಳು, ಮೋದಿಯ ಬೆನ್ನಿಗೆ ನಿಲ್ಲುವ ಉದ್ದೇಶದ್ದಾಗಿವೆಯೆ? ಅಥವಾ ಟ್ರಂಪ್ ವಿರುದ್ಧ ಹೀಗೆ ಮುಗಿಬೀಳುವ ಮೂಲಕ, ಮೋದಿ ಮಾಡದೇ ಇದ್ದುದನ್ನು ಆರೆಸ್ಸೆಸ್ ಮಾಡಿದೆ ಎಂದು ಸೂಚಿಸುವ ಸೂಕ್ಷ್ಮ ನಡೆ ಇದಾಗಿರಬಹುದೆ? ಎಂಬ ಪ್ರಶ್ನೆಗಳು ಕೇಳುಬರುತ್ತಿದೆ.