ನನ್ನ ಮಗನ ಹಂತಕ ಸುಹಾಸ್ ಶೆಟ್ಟಿಗೆ ಬದುಕಲು ಅವಕಾಶ ಕೊಡಬೇಕಿತ್ತು: ಸಂಜೀವ
ಸುಹಾಸ್ ಶೆಟ್ಟಿ / ಕೀರ್ತಿ / ಸಂಜೀವ
►"ದಲಿತರ ಹತ್ಯೆ ಮಾಡಿ ಗೋಹತ್ಯೆ ತಡೆಯುವುದು ಹಿಂದುತ್ವವೇ?"
►"ನಮ್ಮ ಮಗ ಕೀರ್ತಿ ಮಾಡಿದ ತಪ್ಪೇನು ? ನಿಮ್ಮ ಸಾಂತ್ವನಕ್ಕೆ ನಾವ್ಯಾಕೆ ಅಸ್ಪೃಶ್ಯರು ?"
ಅಂದು ನನ್ನ ಮಗ ಕೀರ್ತಿ ಇಲ್ಲದೇ ಹೋಗಿದ್ದರೆ ಸುಹಾಸ್ ಶೆಟ್ಟಿ 2020ರಲ್ಲೇ ಸಾವನ್ನಪ್ಪುತ್ತಿದ್ದನೋ ಏನೋ ! ಯಾರಿಗೊತ್ತು ? ಅಂದು ಇಬ್ಬರು ವ್ಯಕ್ತಿಗಳು ಹೊಡೆದಾಡುತ್ತಿದ್ದರು. ಆ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬಾತ ಸುಹಾಸ್ ಶೆಟ್ಟಿಯಾಗಿದ್ದ. ಸುಹಾಸ್ ಶೆಟ್ಟಿಗೂ ನನ್ನ ಮಗ ಕೀರ್ತಿಗೂ ಪರಿಚಯವೇ ಇಲ್ಲ. ಇಬ್ಬರು ಜಗಳವಾಡುತ್ತಿರುವುದನ್ನು ಕಂಡು ಸುಮ್ಮನಿರಲಾರದ ಕೀರ್ತಿ ಜಗಳ ಬಿಡಿಸಲು ಹೋಗಿದ್ದಾನೆ. ಆದರೆ ಜಗಳ ಬಿಡಿಸಲು ಬಂದ ಕೀರ್ತಿಯನ್ನೇ ರೌಡಿ ಸುಹಾಸ್ ಶೆಟ್ಟಿ ಇರಿದು ಕೊಂದಿದ್ದ.
ನಾನು ದಲಿತ ಸಂಘರ್ಷ ಸಮಿತಿ, ಪ್ರೊ ಕೃಷ್ಣಪ್ಪ ಬಣದ ಸಕ್ರಿಯ ಕಾರ್ಯಕರ್ತ. ನಮಗೆ ಇಬ್ಬರು ಮಕ್ಕಳು. ಒಬ್ಬಳು ಮಗಳು ಮತ್ತೊಬ್ಬ ಮಗ ಕೀರ್ತಿ. ನಾವು ಕೀರ್ತಿಯ ಭವಿಷ್ಯದ ಬಗ್ಗೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ನಮ್ಮ ಇಳಿವಯಸ್ಸಿನಲ್ಲಿ ನಮ್ಮ ಬದುಕಿನ ಊರುಗೋಲು ಆಗುತ್ತಾನೆ ಎಂದು ಎಲ್ಲ ತಂದೆ ತಾಯಿಯರಂತೆ ನಾವೂ ನಂಬಿದ್ದೆವು. ಕೀರ್ತಿಯೂ ನಮ್ಮ ನಂಬಿಕೆಯಂತೆಯೇ ಯಾವುದೇ ವ್ಯಸನಗಳಿಲ್ಲದೇ, ಕೆಟ್ಟವರ ಸಹವಾಸವಿಲ್ಲದೆ ಬೆಳೆಯುತ್ತಿದ್ದ. ಆದರೆ ಅದೊಂದು ದಿನ ರೌಡಿ ಸುಹಾಸ್ ಶೆಟ್ಟಿ ನನ್ನ ಮಗನನ್ನು ಕಾರಣವಿಲ್ಲದೆ ಸಾಯಿಸಿದ.
ಬುದ್ಧನ ಪ್ರಕಾರ ಧರ್ಮವೆಂದರೆ ಸತ್ಯ ಮತ್ತು ಪ್ರಕೃತಿ. ನಾನು ಪ್ರಕೃತಿಯ ವೈಚಿತ್ರ್ಯಗಳನ್ನು ನಂಬುವವನು. ನನ್ನ ಅಮಾಯಕ, ಪರೋಪಕಾರಿ ಪುತ್ರ ಕೀರ್ತಿಯನ್ನು ಸುಹಾಸ್ ಶೆಟ್ಟಿ 31.05.2020 ರಂದು ಕೊಲೆ ಮಾಡಿದ. ಪ್ರಕೃತಿಯ ವಿಚಿತ್ರವೆಂದರೆ, ಸರಿಯಾಗಿ ಐದು ವರ್ಷಗಳ ನಂತರ ಅದೇ ತಿಂಗಳು ಅಂದರೆ 01.05.2025 ರಂದು ಸುಹಾಸ್ ಶೆಟ್ಟಿ ಕೊಲೆಯಾದ ! ಕೀರ್ತಿಯನ್ನು ಸುಹಾಸ್ ಶೆಟ್ಟಿ ಕೊಂದಾಗ ಹಿಂದುತ್ವವಾದಿ ಆಗಿರಲಿಲ್ಲ. ಆಗ ಆತ ಹಿಂದೂ ವಿರೋಧಿಯಾಗಿದ್ದ. ನನ್ನ ಮಗ ಕೀರ್ತಿಯನ್ನು ಕೊಲೆ ಮಾಡಿದಾಗ ಸುಹಾಸ್ ಶೆಟ್ಟಿಯೇ ಕೊಲೆಗಾರ ಎಂದು ಗುರುತಿಸಿದ್ದು ಬಜರಂಗದಳದ ಸ್ಥಳೀಯ ಸದಸ್ಯರು. ಕೀರ್ತಿ ಕೊಲೆ ಕೇಸ್ ನ ಚಾರ್ಜ್ ಶೀಟ್ ನಲ್ಲಿ ಸುಹಾಸ್ ಶೆಟ್ಟಿ ವಿರುದ್ದದ ಸಾಕ್ಷಿಗಳಲ್ಲಿ ಬಹುತೇಕರು ಬಜರಂಗದಳದವರು. ಕೀರ್ತಿ ಕೊಲೆ ಕೇಸಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು, ಸಾಕ್ಷಿಗಳನ್ನು ಪ್ರತಿಕೂಲ ಸಾಕ್ಷಿಯನ್ನಾಗಿಸಲು ಸುಹಾಸ್ ಶೆಟ್ಟಿ ಹಿಂದುತ್ವವಾದಿಯಾದ. ಆ ಮೂಲಕ ಕೀರ್ತಿ ಕೊಲೆ ಪ್ರಕರಣದ ಸಾಕ್ಷಿಗಳಾಗಿರುವ ಬಜರಂಗದಳದವರನ್ನು ಸ್ನೇಹಿತರನ್ನಾಗಿಸಿಕೊಂಡ. ಇದು ನನ್ನ ಅಮಾಯಕ ಪುತ್ರ ಕೀರ್ತಿಯನ್ನು ಕೊಂದ ಸುಹಾಸ್ ಶೆಟ್ಟಿ ಎಂಬ ರೌಡಿ ಹಿಂದುತ್ವವಾದಿಯಾದ ಕತೆ.
ನಾವು ಮನುಷ್ಯರು. ಮಾನವೀಯತೆಯನ್ನು ನಮಗೆ ದಲಿತ ಸಂಘರ್ಷ ಸಮಿತಿಯ ಸಂಘ ಸಂಪರ್ಕ ಕಲಿಸಿದೆ. ಹಾಗಾಗಿ ನಾವು ಸುಹಾಸ್ ಶೆಟ್ಟಿಯ ಕೊಲೆಯನ್ನು ಸಂಭ್ರಮಿಸುವ ಪ್ರಶ್ನೆಯೇ ಇಲ್ಲ. ಸಾವು ಸಂಭ್ರಮಿಸುವ ಸಂಸ್ಕೃತಿ-ದಮ್ಮ ನಮ್ಮದಲ್ಲ. ಆದರೆ ನನ್ನ ಮಗನ ಕೊಲೆಗಾರನನ್ನು ಈ ಸಮಾಜದ ಕೆಲ ಗುಂಪುಗಳು 'ಹೀರೋ' ಎಂದು ತಲೆಮೇಲೆ ಹೊತ್ತುಕೊಂಡಾಗ ಹಳೆ ನೆನಪುಗಳು ಒತ್ತರಿಸಿ ಬರುತ್ತದೆ.
31.05.2020 ರಂದು ಸಂಜೆ ಗಾಳಿ ಮಳೆಗೆ ಕೀರ್ತಿಯ ಸ್ನೇಹಿತನ ಮನೆಯ ಹೆಂಚು ಹಾರಿ ಹೋಗುತ್ತದೆ. ತನ್ನ ಸ್ನೇಹಿತನ ಮನೆಗೆ ಹೆಂಚು ಹಾಕಬೇಕು ಎಂದು ತುರಾತುರಿಯಲ್ಲಿ ಕೀರ್ತಿ ಮನೆಯಿಂದ ಹೊರಬಿದ್ದಿದ್ದ. ಮಳೆ ನಿಲ್ಲುತ್ತಿದ್ದಂತೆ, ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ ಮಾಡು ಹತ್ತಿ, ಅಳಿದುಳಿದ ಹೆಂಚು ಕೆಳಗಿಳಿಸಿದ. ಹಳೆ ಮನೆಯ ಹೆಂಚು ಬದಲಾಯಿಸುವುದು ಎಂದರೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಹಸದ ಕೆಲಸ. ಸ್ನೇಹಿತನಿಗಾಗಿ ಅಪಾಯವನ್ನೂ ಲೆಕ್ಕಿಸದೆ ಹೆಂಚು ಕೆಳಗಿಳಿಸಿದ. ಅಷ್ಟರಲ್ಲಿ ಮತ್ತೆ ಮಳೆ ಬರುವ ಸೂಚನೆಯನ್ನು ಅಗಸದ ಮೋಡಗಳು ನೀಡಿದವು. ಹೆಂಚು ರಹಿತ ಮನೆಗೆ ಹೊದಿಸಲು ಟಾರ್ಪಲ್ ತರಲು ಸ್ನೇಹಿತ ಹೊರಟ. ಅಷ್ಟರಲ್ಲಿ ಟಾರ್ಪಲ್ ತರಲು ಹೋದ ಸ್ನೇಹಿತನೊಂದಿಗೆ ಯಾರೊ ಜಗಳ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂತು. ಟಾರ್ಪಲ್ ತರದೇ ಜಗಳ ಮಾಡುತ್ತಾ ಕುಳಿತರೆ ಮನೆಯೊಳಗೆ ಮಳೆ ನೀರು ತುಂಬಿ ಗೋಡೆ ಕುಸಿಯಬಹುದು ಎಂಬ ಆತಂಕದಲ್ಲಿ ಸ್ನೇಹಿತನನ್ನು ಹುಡುಕಿಕೊಂಡು ಕೀರ್ತಿ ಹೊರಟ. ಸ್ನೇಹಿತನೊಂದಿಗೆ ಸುಹಾಸ್ ಶೆಟ್ಟಿ ಮತ್ತು ಇತರರು ಜಗಳ ಮಾಡುತ್ತಿದ್ದರು. ಜಗಳದಲ್ಲಿ ಯಾರಾದರೂ ಸಾಯಬಹುದಿತ್ತು. ಇದನ್ನು ನೋಡಿದ ಕೀರ್ತಿ ಜಗಳ ನಿಲ್ಲಿಸಲು ಮಧ್ಯ ಪ್ರವೇಶ ಮಾಡಿದ. ಸುಹಾಸ್ ಶೆಟ್ಟಿ ಜಗಳ ನಿಲ್ಲಿಸಲು ಬಂದ ಕೀರ್ತಿಯನ್ನೇ ಕೊಂದು ಬಿಟ್ಟ.
ಕೀರ್ತಿ ಕೊಲೆಯಲ್ಲಿ ಭಾಗಿಯಾದವರೆಲ್ಲರೂ ಹಿಂದೂಗಳೇ. ನಾವೂ ಹಿಂದುಗಳೇ ಆಗಿದ್ದರೂ ನಾವು ದಲಿತರು. ಹಾಗಾಗಿ ನಮ್ಮ ಮಗನ ಸಾವು ಕಾಂಗ್ರೆಸ್, ಬಿಜೆಪಿ, ದಳ, ಹಿಂದುತ್ವ ಸಂಘಟನೆಗಳಿಗೆ ಆಕ್ರೋಶ ತರಿಸಲಿಲ್ಲ. ಬಿಜೆಪಿಯ ಶಾಸಕ ಉಮಾನಾಥ ಕೋಟ್ಯಾನ್ ಅವರು ನಮ್ಮ ವಿಧಾನಸಭಾ ಕ್ಷೇತ್ರದ ಶಾಸಕರು. ಅವರು ಸೌಜನ್ಯಕ್ಕೂ ನಮ್ಮ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ. ಅನ್ಯಾಯವಾಗಿ ಸಾವಿಗೀಡಾದ ಅಮಾಯಕನಾಗಿರುವ ಕೀರ್ತಿ ಸಾವಿಗಾಗಿ ಅವರು ಮರುಗಲಿಲ್ಲ. ಹಾಗಾಗಿ ನಮಗೆ ನ್ಯಾಯ ಮರಿಚೀಕೆ ಎಂದು ನಾವು ಅಂದುಕೊಂಡಿದ್ದೆವು.
ಜೈಲಿಗೆ ಹೋದ ನನ್ನ ಮಗನ ಕೊಲೆ ಹಂತಕರು ಕೆಲವೇ ತಿಂಗಳುಗಳಲ್ಲಿ ಜಾಮೀನಿನ ಮೇಲೆ ಹೊರಬಂದು ರಾಜಾರೋಷವಾಗಿ ಓಡಾಡಲಾರಂಬಿಸಿದರು. ನಾವು ಮಗನ ಸಾವಿನಿಂದ ದುಃಖತಪ್ತರಾಗಿರುವ ಸಮಯದಲ್ಲೇ ಹಂತಕ ಸುಹಾಸ್ ಶೆಟ್ಟಿ ಗೂಂಡಾಗಿರಿಯಿಂದಲೇ ಹೀರೋಯಿಸಂ ಶುರು ಮಾಡಿದ್ದ. ಕೊಲೆ ಕೇಸಿನಿಂದ ತಪ್ಪಿಸಿಕೊಳ್ಳಲು ಗೋ ರಕ್ಷಕನಾದ. ಮನುಷ್ಯನನ್ನು ಕೊಂದ ಕಟುಕರು ಗೋವನ್ನು ಕಟುಕರ ಕೈಯಿಂದ ರಕ್ಷಿಸುತ್ತಾರಂತೆ !
ನನ್ನ ಮಗನನ್ನು ಕೊಂದು ಜೈಲು ಸೇರಿದ ಬಳಿಕವಾದರೂ ಸುಹಾಸ್ ಶೆಟ್ಟಿ ತನ್ನ ಜೀವನವನ್ನು ಸುಧಾರಿಸಿಕೊಳ್ಳಬೇಕಿತ್ತು. ಆದರೆ ಅದಕ್ಕೆ ಸಂಘಟನೆಗಳು ಅವಕಾಶ ಕೊಡಲಿಲ್ಲ. ರೌಡಿಸಂ ಅನ್ನೇ ಹೀರೋಯಿಸಂ ಆಗಿ ಮಾಡಿದ್ದೇ ಸುಹಾಸ್ ಶೆಟ್ಟಿ ಕೊಲೆಗೆ ಕಾರಣ. ನನ್ನ ಮಗ ಕೀರ್ತಿಗೆ ಆದ ಗತಿ ಇನ್ಯಾರದ್ದೋ ಮಗ ಸುಹಾಸ್ ಶೆಟ್ಟಿಗೆ ಆಗಬಾರದಿತ್ತು. ಮಗನನ್ನು ಕಳೆದುಕೊಂಡ ನಾವು ಹೇಗೆ ಜೀವನಪೂರ್ತಿ ನೋವಿನಲ್ಲಿ ಕಳೆಯುತ್ತಿದ್ದೇವೆಯೋ ಅದೇ ರೀತಿ ಸುಹಾಸ್ ಶೆಟ್ಟಿಯ ತಾಯಿಯೂ ಅನ್ಯಾಯವಾಗಿ ವ್ಯಥೆ ಪಡಬೇಕಿದೆ. ಇದು ಏನೂ ತಪ್ಪು ಮಾಡದ ತಂದೆ ತಾಯಿಯರ ಗೋಳಾಟ. ಆದರೆ, ಬಜ್ಪೆಯಲ್ಲಿ ನಡೆದ ಶೃದ್ದಾಂಜಲಿ ಸಭೆಯಲ್ಲಿ ಸುಹಾಸ್ ಶೆಟ್ಟಿಯ ತಾಯಿ ಮತ್ತು ನಾಯಕರು ಮಾಡಿದ ಭಾಷಣ ಮಕ್ಕಳನ್ನು ಕಳೆದುಕೊಂಡ ನಮ್ಮಂತಹ ಪೊಷಕರ ಹೃದಯವನ್ನು ಇರಿಯುವಂತಿತ್ತು. ಆ ತಾಯಿಯ ಬಾಯಿಯಿಂದ ಏನೆಲ್ಲಾ ಹೇಳಿಸಿದರು ? ಅವರ ಮಗನ ಸಾವಿನ ನೋವಿನಷ್ಟೇ ಅವರ ಮಗನಿಂದ ಸಾವಿಗೀಡಾದವರ ಮನೆಯಲ್ಲೂ ನೋವಿದೆ ಎನ್ನುವುದನ್ನು ಅವರು ಮರೆತುಬಿಟ್ಟರು. ಅಷ್ಟು ಮಾತ್ರವಲ್ಲದೇ ಮತ್ತೆ ಹಿಂಸೆಗೆ ಪ್ರಚೋದಿಸಿ ಇನ್ನೊಂದಷ್ಟು ಮನೆ ಮಕ್ಕಳನ್ನು ಕಳೆದುಕೊಂಡು ಕುಟುಂಬಗಳನ್ನು ಅನಾಥರನ್ನಾಗಿಸುವ ಸೂಚನೆ ಕೊಟ್ಟರು. ಇದು ದುರಂತ ! ಹೌದು, ನನ್ನ ಮಗನನ್ನು ಕೊಂದ ಸುಹಾಸ್ ಶೆಟ್ಟಿಗೆ ತಪ್ಪು ತಿದ್ದಿಕೊಂಡು ಬದುಕಲು ಈ ಸಮಾಜ ಅವಕಾಶ ಕೊಡಬೇಕಿತ್ತು. ಆತ ತಪ್ಪು ತಿದ್ದಿಕೊಳ್ಳಲಿಲ್ಲ. ಪಟ್ಟಭದ್ರರು ಅದನ್ನೇ ಬಂಡವಾಳ ಮಾಡಿಕೊಂಡರು. ಹಾಗಾಗಿ ಈಗ ನಾವು ಯಾರನ್ನು ದೂರುವುದು....?
ಸುಹಾಸ್ ಶೆಟ್ಟಿಯಿಂದಾಗಿ ಹರೆಯದ ಮಗನನ್ನು ಕಳೆದುಕೊಂಡು ನಿತ್ಯ ಸಾಯಿತ್ತಿರುವ ನಾವೂ ಕೂಡಾ ಹಿಂದುಗಳೇ. ಆದರೆ ನಮ್ಮ ಬದುಕಿನುದ್ದಕ್ಕೂ ನಮ್ಮೊಂದಿಗೆ ಇದ್ದಿದ್ದು ದಲಿತ ಸಂಘರ್ಷ ಸಮಿತಿ (ಪ್ರೊ ಬಿ ಕೃಷ್ಣಪ್ಪ ಬಣ) ಮಾತ್ರ. ದಲಿತರು ಯಾವ ಸಂಘಟನೆಯಲ್ಲಾದರೂ ಇರಲಿ. ಅವರು ಅಲ್ಲಿ ಕಾಲಾಳುಗಳು ಮಾತ್ರ. ಹಾಗಾಗಿ ದಲಿತರ ಕಷ್ಟಸುಖಗಳಿಗೆ ಆಗುವುದು ದಲಿತ ಸಂಘರ್ಷ ಸಮಿತಿ ಮಾತ್ರ ಎಂಬುದನ್ನು ನಮ್ಮ ಯುವಕರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಮಗ ಕೀರ್ತಿಯನ್ನು ಕೊಂದ ಸುಹಾಸ್ ಶೆಟ್ಟಿ ಕೊಲೆಯ ಸಂಖ್ಯೆಗಳ ಆಧಾರದಲ್ಲಿ ಹಿಂದುತ್ವದ ನಾಯಕನಾದ. ಒರ್ವ ಅಮಾಯಕ, ಪರೋಪಕಾರಿ ದಲಿತ ಯುವಕನನ್ನು ಕೊಲೆ ಮಾಡಿದವನು ಹಿಂದುತ್ವ ನಾಯಕನಾಗಲು ಅರ್ಹನೇ ? ದಲಿತರಾದ ನಾವುಗಳು ಹಿಂದೂಗಳಲ್ಲವೇ ? ಈ ರಾಜಕಾರಣವನ್ನು ದಲಿತ ಯುವಕರು ಅರ್ಥ ಮಾಡಿಕೊಳ್ಳಬೇಕು.
ನನ್ನ ಮಗ ಕೀರ್ತಿಯನ್ನು ಕೊಲೆ ಮಾಡಿದವರೆಲ್ಲರೂ ಮೇಲ್ವರ್ಗದವರು. ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಿದವರು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಕೊಲೆ ಖಂಡನೀಯ. ಆದರೆ ಕೊಲೆಯಾದವನನ್ನು ಮೆರೆಸುವ ಮುನ್ನ, ಕೊಲೆ ಆದವನು ನಮ್ಮ ಮಗ ಕೀರ್ತಿಯನ್ನು ಯಾಕೆ ಕೊಂದಿದ್ದ ? ಕೀರ್ತಿ ಮಾಡಿದ್ದ ತಪ್ಪು ಏನು ಎಂಬುದನ್ನು ಹೇಳಬೇಕಲ್ಲವೆ ? ನನ್ನ ಮಗ ದಲಿತ ಸಮುದಾಯಕ್ಕೆ ಸೇರಿದವನು, ಸುಹಾಸ್ ಶೆಟ್ಟಿ ಮೇಲ್ವರ್ಗಕ್ಕೆ ಸೇರಿದವನು ಎಂಬುದು ಮಾತ್ರ ಹಿಂದುತ್ವ ಸಂಘಟನೆಗಳ ಮಾನದಂಡವೇ ? ಸುಹಾಸ್ ಶೆಟ್ಟಿ ಬಜರಂಗದಳದಲ್ಲಿ ಇದ್ದ ಎಂಬುದು ಸ್ಥಳೀಯರಿಗೆ ಯಾರಿಗೂ ಗೊತ್ತಿಲ್ಲ. ಆತ ಬಜರಂಗದಳದ ಗೋರಕ್ಷಣಾ ಘಟಕದಲ್ಲಿದ್ದ ಎಂದು ಹಿಂದುತ್ವ ನಾಯಕರು ಈಗ ಹೇಳುತ್ತಾರೆ. ದಲಿತರ ಹತ್ಯೆ ಮಾಡಿ ಗೋ ಹತ್ಯೆ ತಡೆಯುವುದು ಹಿಂದುತ್ವವೇ ? ಅಲ್ಲವಾದರೆ ನಿಮ್ಮ ಸಾಂತ್ವನಕ್ಕೆ ನಾವ್ಯಾಕೆ ಅಸ್ಪೃಶ್ಯರು ? ಈ ಸಮಾಜ ಉತ್ತರಿಸಬೇಕು.