ಶಿಥಿಲಾವಸ್ಥೆಯಲ್ಲಿರುವ ಟಿ.ಚನ್ನಯ್ಯ ರಂಗ ಮಂದಿರಕ್ಕೆ ಕಾಯಕಲ್ಪ ಅಗತ್ಯ
ಕೋಲಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಕಚೇರಿ ಬಳಿ ಇರುವ ನಗರ ನಿರ್ಮಾತ್ರು ಟಿ.ಚನ್ನಯ್ಯ ರಂಗಮಂದಿರ ಹಲವು ಕೊರತೆಯಿಂದ ನಲುಗುತ್ತಿದೆ.
ಭಾಷೆ ಮತ್ತು ಸಂಸ್ಕೃತಿಯನ್ನು ಪಸರಿಸುವ ಮುಖ್ಯ ಜಿಲ್ಲಾ ಮಟ್ಟದ ವೇದಿಕೆಯಾಗಿ ಚನ್ನಯ ರಂಗಮಂದಿರ ಗುರುತಿಸಿಕೊಂಡಿದ್ದು, ಜಿಲ್ಲಾಡಳಿತ ಇದಕ್ಕೆ ಕಾಯಕಲ್ಪನೀಡಬೇಕಾದ ಪರಿಸ್ಥಿತಿಯಲ್ಲಿ ಇದೆ.
ನಗರದ ಹೃದಯ ಭಾಗದಲ್ಲಿರುವ ರಂಗಮಂದಿರ ಹೊರಗಿನಿಂದ ನೋಡಿದರೆ ಹೊಳಪು ಒಳಗಡೆ ಹೋಗಿ ನೋಡಿದರೆ ಎಲ್ಲ ಹುಳುಕು. ಇಲಾಖೆಗೆ ಒಳ್ಳೆಯ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರೂ ಸಹ 3 ದಶಕಗಳ ಹಳೆಯ ಕಲಾವಿದರ ಮನೆ(ರಂಗ ಮಂದಿರ) ಅಷ್ಟೇನು ಲಾಭದಾಯಕವಾಗಿ ನಿರ್ವಹಿಸಲಾಗುತ್ತಿಲ್ಲ, ರಂಗ ಮಂದಿರದಲ್ಲಿ ಧ್ವನಿ ವ್ಯವಸ್ಥೆಯ ಕೊರತೆಯಿಂದಾಗಿ ಪ್ರತಿಧ್ವನಿ ಹೆಚ್ಚಾಗಿದೆ. ಅಲ್ಲದೆ ಬೆಳಕಿನ ವ್ಯವಸ್ಥೆಯಲ್ಲೂ ಆಧುನಿಕ ತಂತ್ರಜ್ಞಾನದ ಕೊರತೆ ಇರುವುದರಿಂದ ಕಲೆ ಮತ್ತು ಸಂಸ್ಕೃತಿ ಚಟುವಟಿಕೆಗಳು ಗಣನೀಯವಾಗಿ ಕುಸಿದಿದೆ.
ವರ್ಷದಲ್ಲಿ ಇಲಾಖೆಯಿಂದ 31 ಜಯಂತಿಗಳು ಹೊರತು ಪಡಿಸಿದರೆ, ಉಳಿದಂತೆ ಬೆರಳೆಣಿಕೆಯಷ್ಟು ಇತರ ಕಾರ್ಯಕ್ರಮಗಳು ನಡೆಯುತ್ತಿದ್ದು, ರಂಗಮಂದಿರದ ಆದಾಯ ಸರಾಸರಿ ಎಂಟು ಲಕ್ಷ ರೂ.ಇದ್ದರೆ, ನಿರ್ವಹಣೆ ವೆಚ್ಚ ಅಂದಾಜು 18 ಲಕ್ಷ ರೂ.ಗಳಿಗೇರಿದೆ. ಈ ಹೆಚ್ಚುವರಿ ವೆಚ್ಚವನ್ನು ಇತರ ಅನುದಾನದಲ್ಲಿ ಮೇಲಾಧಿಕಾರಿಗಳಿಂದ ಅನುಮತಿ ಪಡೆದು ಸರಿದೂಗಿಸಲಾಗುತ್ತಿದ್ದು ಸಣ್ಣ ಪುಟ್ಟ ದುರಸ್ತಿ ಕೆಲಸಗಳಿಗೆ ತೊಂದರೆಯಾಗುತ್ತಿದೆ.
ಇನ್ನೂ ಜಿಲ್ಲೆಯಲ್ಲಿ ಸುಮಾರು 120ಕ್ಕೂ ಹೆಚ್ಚು ಕಲಾ ತಂಡಗಳು ಇದ್ದು, ವಾರ್ಷಿಕ ಅಂದಾಜು 20ಲಕ್ಷ ರೂ.ಗಳಿಗೂ ಹೆಚ್ಚು ಪ್ರಾಯೋಜತ್ವದ ಕಾರ್ಯಕ್ರಮಗಳು ಮತ್ತು 38 ಲಕ್ಷ ರೂ.ಸಹಾಯಧನ ಹಾಗೂ ಜಿಲ್ಲೆಯಲ್ಲಿ 412 ಹಿರಿಯ ಕಲಾವಿದರಿಗೆ ಮಾಸಿಕ ಎರಡು ಸಾವಿರ ರೂ.ಗಳಂತೆ ಸುಮಾರು 72 ಲಕ್ಷ ರೂ.ಮಾಶಾಸನವನ್ನು ನೀಡಲಾಗುತ್ತಿದೆ.
ಇಲಾಖೆ ವತಿಯಿಂದ ನವೆಂಬರ್, ಜನವರಿ ಹಾಗೂ ಆಗಸ್ಟ್ ತಿಂಗಳಲ್ಲಿ ಪುಸ್ತಕ ಪ್ರಿಯರಿಗಾಗಿ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡಲಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಕಲಾ ಪ್ರೇಮಿ ಆಗಿರುವ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ರಂಗ ಮಂದಿರ ಕ್ಕೆ ಕಾಯಕಲ್ಪಮಾಡಲು ದೃಢ ಮನಸ್ಸಿನಿಂದ ಮುಂದಾಗುವರೆ ಎಂದು ಕಾದು ನೋಡಬೇಕಾಗಿದೆ ಎಂಬುದು ಕಲಾವಿದರ ಆಶಯವಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆಗಾಗಿ ಸರಕಾರದ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ರಂಗ ಮಂದಿರದ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಇಲಾಖೆಯ ಹೊರ ಗುತ್ತಿಗೆ ಸಿಬ್ಬಂದಿಯ ವೇತನವನ್ನು ಕೇಂದ್ರ ಕಚೇರಿಯಿಂದಲೇ ನೀಡಬೇಕು ಸೇರಿದಂತೆ ಇಡೀ ರಂಗಮಂದಿರದ ವಿನ್ಯಾಸವನ್ನು ನವೀಕರಿಸಿ ದುರಸ್ತಿಗೊಳಿಸಲು ಸರಕಾರಕ್ಕೆ ಈಗಾಗಲೇ 2.25 ಕೋಟಿ ರೂ.ಗಳ ಪ್ರಸ್ತಾವ ಸಲ್ಲಿಸಲಾಗಿದೆ.
- ಎನ್.ವಿಜಯಲಕ್ಷ್ಮೀ, ಸಹಾಯಕ ನಿರ್ದೇಶಕಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನೋಂದಣಿಯಾಗಿರುವ ಬಹುತೇಕ ಕಲಾವಿದರು ತಮ್ಮ ಜೀವನೋಪಯಕ್ಕಾಗಿ ಕಲೆಯನ್ನೇ ಆಧರಿಸಿದ್ದಾರೆ. ವಾರ್ಷಿಕ 20 ಲಕ್ಷ ರೂ.ಗಳಿಗೂ ಹೆಚ್ಚು ಅನುದಾನ ಬಾಕಿ ಉಳಿಸಿ ಕೊಂಡರೆ ಕಲಾವಿದರಿಗೆ ತೊಂದರೆಯಾಗುತ್ತದೆ. ಸರಕಾರಿ ಅಧಿಕಾರಿಗಳು ಕಲಾವಿದರನ್ನು ಅಲೆದಾಡಿಸದೆ ಆಯಾ ವರ್ಷದ ಅನುದಾನವನ್ನು ಆಯಾ ವರ್ಷವೇ ಬಿಡುಗಡೆ ಮಾಡಿದರೆ ಬಡ ಕಲಾವಿದರಿಗೆ ಅನುಕೂಲವಾಗುತ್ತದೆ.
- ಎಲ್.ಇ.ಕೃಷ್ಣೇಗೌಡ, ಕಲಾವಿದ, ಲಕ್ಷ್ಮೀಸಾಗರ, ಕೋಲಾರ