×
Ad

ಬಂದಿದೆ ಲೇಟೆಸ್ಟ್, ಫಾಸ್ಟೆಸ್ಟ್ ಹಾಗು ಸ್ಮಾರ್ಟೆಸ್ಟ್ AI; ನಂಬಲಸಾಧ್ಯ ChatGPT - 5!

► ಹೊಸ ವರ್ಷನ್ ನಲ್ಲಿ ಮನುಷ್ಯನೇ ಯೋಚಿಸಿ ನೀಡಿದಂತಹ ಫಲಿತಾಂಶ; ಏನೇ ಕೇಳಿದ್ರೂ ಸೆಕೆಂಡುಗಳಲ್ಲಿ ಮಾಡಿಕೊಡುವ ChatGPT - 5

Update: 2025-08-13 22:57 IST

ಓಪನ್ AI ನ ಇತ್ತೀಚಿನ, ಅತ್ಯಂತ ವೇಗವಾದ ಮತ್ತು ಅಷ್ಟೇ ಸ್ಮಾರ್ಟ್ ಆವೃತ್ತಿಯಾಗಿರುವ ಚಾಟ್ ಜಿಪಿಟಿ-5 ಬಿಡುಗಡೆಯಾಗಿದೆ. ಈ AI ವರ್ಷನ್ ಏನು ಮಾಡುತ್ತೆ ಅಂತ ಹೇಳೋದಕ್ಕಿಂತ ಏನು ಮಾಡಲ್ಲ ಎಂದು ಹೇಳೋದೇ ಸುಲಭ. ಯಾಕಂದ್ರೆ ಅಷ್ಟೊಂದು ಅಡ್ವಾನ್ಸ್ಡ್ ಫೀಚರ್ ಗಳು ಈ ಹೊಸ AI ವರ್ಷನ್ ನಲ್ಲಿ ತುಂಬಿ ತುಳುಕುತ್ತಿವೆ. ಕೆಲವೇ ಸೆಕಂಡುಗಳಲ್ಲಿ ನೀವು ಕೇಳಿದ್ದನ್ನು ಸಿದ್ಧಪಡಿಸಿ ನಿಮ್ಮ ಮುಂದಿಡುತ್ತೆ ಈ ಹೊಸ ಚಾಟ್ ಜಿಪಿಟಿ -5.

ನೀವೊಂದು ಬರಹ ಕೇಳಿ, ಒಂದು ರಿಪೋರ್ಟ್ ಕೇಳಿ, ಒಂದು ಸಮಗ್ರ ಯೋಜನೆಯನ್ನೇ ತಯಾರಿಸಿ ಕೊಡಲು ಕೇಳಿ, ಯಾವುದಾದರೂ ಯೋಜನೆಗೆ ಕೋಡಿಂಗ್ ಬರೆದು ಕೊಡಲು ಹೇಳಿ, ಗಣಿತದ ಪ್ರಶ್ನೆ ಕೇಳಿ - ಸೆಕೆಂಡುಗಳಲ್ಲಿ ಮನುಷ್ಯರೇ ಯೋಚಿಸಿ ಸಿದ್ಧಪಡಿಸಿದಂತೆ ಅದನ್ನು ಮಾಡಿ ಕೊಡುತ್ತೆ ಚಾಟ್ ಜಿಪಿಟಿ -5.

ಹಾಗಾದರೆ, ಚಾಟ್ ಜಿಪಿಟಿ-5 ವೈಶಿಷ್ಟ್ಯಗಳೇನು? ಅದು ಈ ಹಿಂದಿನ ಮಾದರಿಗಳಿಗಿಂತ ಹೇಗೆ ಸುಧಾರಿತ ಮತ್ತು ಭಿನ್ನವಾಗಿದೆ?

ಮೊದಲನೆಯದಾಗಿ, ಇದು ಎಲ್ಲರಿಗೂ ಲಭ್ಯವಿದ್ದು, ಉಚಿತವಾಗಿ ಬಳಸಬಹುದು. ಸರಳವಾಗಿ ಹೇಳಬೇಕೆಂದರೆ, ಚಾಟ್ ಜಿಪಿಟಿ-5 ಈವರೆಗಿನ ಅತ್ಯಂತ ಲೇಟೆಸ್ಟ್, ಫಾಸ್ಟೆಸ್ಟ್ ಹಾಗು ಸ್ಮಾರ್ಟೆಸ್ಟ್ AI ವರ್ಷನ್ ಆಗಿದೆ. ಬಹು ಹಂತದ ತರ್ಕ ಮತ್ತು ನಿರ್ಧಾರ ತೆಗೆದುಕೊಳ್ಳುವುದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ವಿಭಿನ್ನ ಕಾರ್ಯಗಳಿಗೆ ಪ್ರತ್ಯೇಕ ಮಾದರಿಗಳ ಅಗತ್ಯವಿರುವುದಿಲ್ಲ. ಇದು ತಾನೇ ಸ್ವಯಂಚಾಲಿತವಾಗಿ ಹೊಂದಿಕೊಂಡು, ನಿಯಮಿತ ಮೋಡ್ ನಡುವೆ ಬದಲಾಗುತ್ತ, ತಡೆರಹಿತ ಅನುಭವ ನೀಡುತ್ತದೆ. ಇದು ಸಮಸ್ಯೆಯನ್ನು ಅರ್ಥಮಾಡಿಕೊಂಡು, ಅದಕ್ಕೆ ಉತ್ತರಿಸುವ ಸೂಕ್ತ ಮಾರ್ಗವನ್ನು ಕಂಡುಕೊಳ್ಳಬಲ್ಲುದು. ಬಹಳ ಸಂಕೀರ್ಣವಾದ ಸಮಸ್ಯೆಯನ್ನು ನೀಡಿದರೆ, ತನ್ನ ತಾರ್ಕಿಕ ಸಾಮರ್ಥ್ಯವನ್ನು ಸಕ್ರಿಯಗೊಳಿಸುತ್ತದೆ.

ಇದು ಹಿಂದಿನ ಮಾದರಿಗಳಲ್ಲಿ ಸಾಧ್ಯವಾಗಿರಲಿಲ್ಲ.

ಮೊದಲಾದರೆ, ಇಂಥ ಸಾಮರ್ಥ್ಯ ಬೇಕೆಂದರೆ ಇಂಥದೇ ಮಾದರಿ ಎಂದು ನೆನಪಿಟ್ಟುಕೊಂಡು ಆಯ್ಕೆ ಮಾಡಿಕೊಳ್ಳಬೇಕಿತ್ತು. ಈಗ ಅದೇನೂ ಬೇಕಿಲ್ಲ. ಈ ಒಂದೇ ಒಂದು ಮಾದರಿಯೇ ಎಲ್ಲವನ್ನೂ ಮಾಡಬಹುದು. ಇದು ಬಹುತೇಕ ಎಲ್ಲವನ್ನೂ ಮಾಡಬಲ್ಲ ಮಾದರಿ.

ಈಗ ಚಾಟ್ ಜಿಪಿಟಿಯನ್ನು ಓಪನ್ ಮಾಡುತ್ತಿದ್ದಂತೆ, ಅದು ತಂತಾನೇ ಚಾಟ್ ಜಿಪಿಟಿ-5 ಗೆ ಬದಲಾಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ, ಲಭ್ಯವಿರುವ ಇತರ ಮಾದರಿಗಳು ತಕ್ಷಣವೇ ಕಣ್ಮರೆಯಾಗುತ್ತವೆ. ಯಾವುದೇ ಪ್ರಶ್ನೆಯನ್ನು ಟೈಪ್ ಮಾಡುವ ಮೂಲಕ ಇದರ ಬಳಕೆಯನ್ನು ಶುರು ಮಾಡಬಹುದು. ಇದು ಹಿಂದಿನ ಆವೃತ್ತಿಗಳಿಗಿಂತ ವೇಗವಾಗಿದೆ. ಹಿಂದಿನ 4ಒ ಮಾದರಿಗಿಂತ ಹೆಚ್ಚು ವೇಗವಾಗಿದೆ.

ಇದರ ಬರವಣಿಗೆಯ ಗುಣಮಟ್ಟ ಕೂಡ ಉತ್ತಮಗೊಂಡಿದೆ. ಅದನ್ನು ಓದಿದರೆ, ಅದು ನಿಜವಾಗಿಯೂ ವಾಸ್ತವದಲ್ಲಿರುವ ವ್ಯಕ್ತಿಯೇ ಬರೆದಂತೆ ಇರುತ್ತದೆ. ಅಂದರೆ ಈ ಹಿಂದಿನ ವರ್ಷನ್ ಗಳಿಗೆ ಹೋಲಿಸಿದರೆ ಬರವಣಿಗೆ ಬಹಳಷ್ಟು ಸುಧಾರಿಸಿದೆ. ಹೆಚ್ಚು ಕಷ್ಟಕರವಾದ ಸಮಸ್ಯೆಯನ್ನು ಕೊಟ್ಟರೆ, ಅದರ ಬಗ್ಗೆ ಯೋಚಿಸುತ್ತದೆ. ಇದು ಯೋಚಿಸಬೇಕಾದ ಪ್ರಶ್ನೆ ಎಂದು ಅದು ತಾನಾಗಿಯೇ ಗ್ರಹಿಸುತ್ತದೆ. ಮತ್ತು ಆ ಮೋಡ್ ಗೆ ಬದಲಾಗುತ್ತದೆ.

ಕೆಲವು ಸೆಕೆಂಡುಗಳ ಕಾಲ ಯೋಚಿಸಿದ ಬಳಿಕ, ಪ್ರಮುಖ ದಾಖಲೆಗಳು ಮತ್ತು ಮಾಹಿತಿಗಾಗಿ ವೆಬ್ ಅನ್ನು ಹುಡುಕುತ್ತದೆ ಮತ್ತು ನೀವು ಕೇಳಿದ ಪ್ರಶ್ನೆಗೆ ನಿಖರವಾದ ಅಷ್ಟೇ ವಿವರವಾದ ಉತ್ತರ ಕೊಡುತ್ತದೆ. ಇದೇ ಸಂಕೀರ್ಣ ಸಮಸ್ಯೆಯನ್ನು ಹಿಂದಿನ ಆವೃತ್ತಿಗೆ ಕೊಟ್ಟು ನೋಡಿದರೆ, ಅದು ಪ್ರತಿಕ್ರಿಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಉತ್ತರ ಅಷ್ಟೊಂದು ಕರಾರುವಾಕ್ ಆಗಿರುವುದಿಲ್ಲ. ಈ ಮಾದರಿ ಎಲ್ಲ ವಿವರಗಳನ್ನೂ ಒಳಗೊಂಡ ದೀರ್ಘ ಉತ್ತರ ಕೊಡುತ್ತದೆ. ಇದು ಕೋಡಿಂಗ್‌ಗೆ ಕೂಡ ಪರಿಣಾಮಕಾರಿಯಾಗಿದೆ.

ಕೋಡ್ ಗುಣಮಟ್ಟವನ್ನು ಹಿಂದಿನ ಮಾದರಿಗಳಿಗಿಂತಲೂ ಸಾಕಷ್ಟು ಸುಧಾರಿಸುತ್ತದೆ. ಅನೇಕರು ಎಲ್ಲಾ ಕೋಡಿಂಗ್ ಗೆ ಕ್ಲೌಡ್ ಅನ್ನು ಬಳಸುತ್ತಿದ್ದರೆ, ಇದು ಈಗ ಕೋಡಿಂಗ್‌ಗೆ ವೇಗವಾದ ಮಾದರಿಯಾಗಿದೆ ಮತ್ತು ಅತ್ಯುನ್ನತ ಗುಣಮಟ್ಟದ ಕೋಡ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಈ ಮಾದರಿ, ಅದಕ್ಕೆ ನೀಡಿದ ಕಾರ್ಯಕ್ಕೆ ಅನುಗುಣವಾಗಿ ಸಾಮಾನ್ಯ ಮಾದರಿಗಳು ಮತ್ತು ಚಿಂತನೆ, ತರ್ಕಕ್ಕೆ ಸಂಬಂಧಿಸಿದ ಇತರ ಮೋಡ್ ಗಳ ನಡುವೆ ತಾನಾಗಿಯೇ ಬದಲಾಗುವುದು ಅದ್ಭುತವೆನ್ನಿಸುವಂತಿದೆ.ಅತ್ಯಂತ ವೇಗವುಳ್ಳ ಮತ್ತು ಸ್ಮಾರ್ಟ್ ಆತ ಮಾದರಿ ಇದೆಂದೇ ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News