ಶಾಲಾ ಮಕ್ಕಳಿಗೆ ಸಾಂಪ್ರದಾಯಿಕ ಬುಟ್ಟಿ ಹೆಣೆಯುವ ಕಾರ್ಯಾಗಾರ
ನಶಿಸುತ್ತಿರುವ ಪಾರಂಪರಿಕ ನಿತ್ಯೋಪಯೋಗಿ ಕರಕುಶಲ ವಸ್ತುಗಳನ್ನು ಉಳಿಸಿ ಸಂರಕ್ಷಿಸುವತ್ತ ‘ಇಂಟಾಕ್’ ಚಿತ್ತ
ಮಂಗಳೂರು: ಕಲೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿರುವ ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್(ಇಂಟಾಕ್) ಸಂಸ್ಥೆಯು ಶಾಲಾ ಮಕ್ಕಳಿಗೆ ಸಾಂಪ್ರದಾಯಿಕ ಬುಟ್ಟಿ ಹೆಣೆಯುವ ಕಾರ್ಯಾಗಾರ ಆಯೋಜಿಸುತ್ತಿದೆ.
ನಾನಾ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತೆಗೆಯುವುದಲ್ಲದೆ ಕಾರ್ಯಾಗಾರಗಳ ಮೂಲಕ ಸೂಕ್ತ ಮಾರ್ಗದರ್ಶನ ನೀಡಿ ಬೆಳವಣಿಗೆಗೆ ಸಹಕರಿಸುವುದು ಇಂಟಾಕ್‌ನ ಮುಖ್ಯ ಉದ್ದೇಶವಾಗಿದೆ.
ನಶಿಸಿ ಹೋಗುತ್ತಿರುವ ಪಾರಂಪರಿಕ ನಿತ್ಯೋಪಯೋಗಿ ಕರಕುಶಲ ವಸ್ತುಗಳನ್ನು ಉಳಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಇಂಟಾಕ್ ಸಂಸ್ಥೆಯು ಸಮಾಜದಲ್ಲಿ ಸದಾ ಜಾಗೃತಿಯನ್ನು ಮೂಡಿಸುತ್ತಿದೆ. ಆದಿವಾಸಿಗಳ, ಬುಡಕಟ್ಟು ಜನಾಂಗಗಳ ಹಾಗೂ ಸಾಂಪ್ರದಾಯಿಕವಾದ ಅದೆಷ್ಟೋ ಕೌಶಲಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನವನ್ನು ಮಾಡುತ್ತಲೇ ಇದೆ. ಅಂತಹ ಕಲೆಗಳಲ್ಲಿ ಬುಟ್ಟಿ ತಯಾರಿಕೆಯೂ ಒಂದು. ಈ ಕಲೆಯನ್ನು ಎಲ್ಲರಿಗೂ ತಿಳಿಸುವ ನಿಟ್ಟಿನಲ್ಲಿ ಇಂಟಾಕ್‌ನ ಮಂಗಳೂರು ಘಟಕವು ಎಚ್‌ಇಸಿಎಸ್, ಇಂಟಾಕ್ ಮತ್ತು ಇಂಟಾಕ್ ಹೆರಿಟೇಜ್ ಕ್ಲಬ್, ಬಂಟ್ವಾಳ ತಾಲೂಕಿನ ಕೊಳ್ನಾಡು-ಮಂಚಿಯ ಸರಕಾರಿ ಪ್ರೌಢಶಾಲೆಯ ಸಹಯೋಗದಲ್ಲಿ ಗ್ರಾಮೀಣ ಶಾಲೆಯ ಮಕ್ಕಳಿಗೆ ಸಾಂಪ್ರದಾಯಿಕ ಬುಟ್ಟಿ ತಯಾರಿಕಾ ಕಾರ್ಯಾಗಾರವನ್ನು ಇತ್ತೀಚೆಗೆ ಮಂಚಿ ಕೊಳ್ನಾಡು ಸರಕಾರಿ ಶಾಲೆಯಲ್ಲಿ ನಡೆಸಿತು.
ಸಂಪನ್ಮೂಲ ವ್ಯಕ್ತಿಗಳಾದ ಶಂಕರ ಕೊರಗ ಗುತ್ತಕಾಡು ಮತ್ತು ಸುಪ್ರಿಯಾ ಪ್ರಾತ್ಯಕ್ಷಿಕೆ ಮೂಲಕ ಬುಟ್ಟಿ ಹೆಣೆಯುವ ಪ್ರಾಯೋಗಿಕ ಕಾರ್ಯಾಗಾರ ನಡೆಸಿಕೊಟ್ಟರು. ಮಂಚಿ ವಲಯದ ಏಳು ಶಾಲೆಗಳಿಂದ ಸುಮಾರು 67 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ತುಂಬಾ ಆಸಕ್ತಿಯಿಂದ ವಿದ್ಯಾರ್ಥಿಗಳು ಬುಟ್ಟಿ ಹೆಣೆಯಲು ಕಲಿತರು. ಸಂಪನ್ಮೂಲ ವ್ಯಕ್ತಿಗಳೊಂದಿಗೆ ಪ್ರತಿಯೊಂದು ಹಂತಗಳ ಬಗ್ಗೆ ತಿಳಿದುಕೊಂಡು ಸುಂದರ ಕಲಾಕೃತಿಗಳನ್ನು ರಚಿಸುವಂತೆ ಗಮನಹರಿಸಿದರು.
ಮಂಚಿ-ಕೊಳ್ನಾಡು ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಪ್ರಸಾದ್ ರೈ ತಿರುವಾಜೆ, ಇಂಟಾಕ್ ಮಂಗಳೂರು ಘಟಕದ ಸಂಯೋಜಕ ರಾಜೇಂದ್ರ ಕೇದಿಗೆ, ಹರೀಶ್ ಕೊಡಿಯಾಲ್ ಬೈಲು, ರೇಷ್ಮಾ ಶೆಟ್ಟಿ, ಶರ್ವಾಣಿ ಭಟ್, ಮಂಚಿ ಕೊಳ್ನಾಡು ಪ್ರೌಢಶಾಲಾ ಇಂಟಾಕ್ ಹೆರಿಟೇಜ್ ಕ್ಲಬ್ಬಿನ ಸಂಯೋಜಕ ಹಾಗೂ ಚಿತ್ರಕಲಾ ಕಲಾವಿದ ತಾರಾನಾಥ್ ಕೈರಂಗಳ, ಶಾಲೆಯ ಮುಖ್ಯಶಿಕ್ಷಕಿ ಸುಶೀಲಾ ಈ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು.
ಪ್ರಾಚೀನ ಕಾಲದಿಂದಲೇ ಬೆಳೆದುಕೊಂಡು ಬಂದಿರುವ ಈ ಪಾರಂಪರಿಕ ಕಲೆಗಳನ್ನು ಮುಂದಿನ ಪೀಳಿಗೆಗಳಿಗೂ ವಿಸ್ತರಿಸುವ ಅವಶ್ಯಕತೆ ಇದೆ. ಮೂಲ ಕಲೆಯ ಕೌಶಲಗಳನ್ನು ಹೊಂದಿರುವ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳನ್ನು ಗುರುತಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಕುಶಲ ವಸ್ತುಗಳಿಗೆ ಬೇಡಿಕೆ ಹೆಚ್ಚಿಸುವ ಪ್ರಯತ್ನಗಳಾಗಬೇಕು.
-ಸುಭಾಶ್ಚಂದ್ರ ಬಸು, ಇಂಟಾಕ್ ಮಂಗಳೂರು ಘಟಕದ ಮುಖ್ಯಸ್ಥ
ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ಕೌಶಲಭರಿತ ತರಬೇತಿ ಕಾರ್ಯಕ್ರಮವು ಜೀವನೋಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಹಸ್ತ ಕೌಶಲವನ್ನು ಹೆಚ್ಚಿಸುವ ಇಂತಹ ಕಾರ್ಯಕ್ರಮಗಳು ಪಾರಂಪರಿಕ ವಸ್ತುಗಳನ್ನು ಉಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಾಗಿದೆ.
-ದೇವಕಿ ಎಚ್. ನಿವೃತ್ತ ಮುಖ್ಯ ಶಿಕ್ಷಕಿ
ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಸಿಗುವ ತರಬೇತಿ, ಮಾರ್ಗದರ್ಶನಗಳು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಹಾಗೂ ಸೃಜನಶೀಲ ಅಭಿವ್ಯಕ್ತಿಗಳಿಗೆ ಕಾರಣವಾಗುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಮನೋವಿಕಾಸದ ಜೊತೆ ವ್ಯಕ್ತಿತ್ವದ ನಿರ್ಮಾಣವು ಸಾಧ್ಯವಾಗುತ್ತದೆ.
-ಶಿವಶಂಕರ ರಾವ್ ಮಂಚಿ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ