Yadgiri | ಭೂಮಾನಂದ್ ಹತ್ಯೆ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ; ಎಂಆರ್‌ಪಿಎಸ್‌ನಿಂದ ಮನವಿ
ಯಾದಗಿರಿ : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ಮಾದಿಗ ಸಮಾಜದ ಹೋರಾಟಗಾರ ಭೂಮಾನಂದ್ ಅವರನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರ (ಎಂಆರ್‌ಪಿಎಸ್) ಯಾದಗಿರಿ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಿತು.
ಮನವಿಯಲ್ಲಿ, ಭೂಮಾನಂದ್ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಕಾನೂನಿನಡಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎಂಆರ್‌ಪಿಎಸ್ ಜಿಲ್ಲಾ ಅಧ್ಯಕ್ಷ ಕಾಶಪ್ಪ ಹೆಗ್ಗಣಗೆರ, ಸಮಾಜದ ಹೋರಾಟಗಾರನನ್ನು ಬರ್ಬರವಾಗಿ ಹತ್ಯೆಗೈದಿರುವುದು ಖಂಡನೀಯ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಅವರಿಗೆ ತಕ್ಕ ಶಿಕ್ಷೆ ವಿಧಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಮುಂಡರಗಿ ಮಾತನಾಡಿ, ಭೂಮಾನಂದ್ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಪ್ರಕರಣದ ತನಿಖೆಯನ್ನು ಯಾವುದೇ ರಾಜಕೀಯ ಅಥವಾ ಸಾಮಾಜಿಕ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಿಂಗಣ್ಣ ಗೋನಾಳ, ರಾಮಪ್ಪ ಕೋರೆ, ನಾಗರಾಜ ಓಕುಳಿ, ಜಿಲ್ಲಾ ಉಪಾಧ್ಯಕ್ಷ ಮಲ್ಲು ಬೆಳಿಗೇರಾ, ಜಿಲ್ಲಾ ಕಾರ್ಯದರ್ಶಿ ಭೀಮರಾಯ ಸಾತ್ನೂರ್, ರಾಜು ಮೇತ್ರಿ, ಅನಿಲ್ ಕುಮಾರ್ ದಾಸನಕೇರಿ, ಶರಣಪ್ಪ ವಡಿಗೇರಿ, ತಿಪ್ಪಣ್ಣ ಗೊಂದೆನೂರ್, ಮರಿಯಪ್ಪ ಬೀಳಾರ, ನಿಂಗಪ್ಪ ಬಿಳಾರ, ದೇವು ಯಂಪಾಡ, ಭೀಮರಾಯ ಕೋನಳ್ಳಿ, ಅರುಣ್ ಚಿಗನೂರ, ರವಿ ಬಂದಳ್ಳಿ, ಮಲ್ಲು ಮುಂಡರಗಿ, ಬಾಲಪ್ಪ ಶಿವನೂರು, ಅನಿಲ ಹುಲಕಲ್, ನಾಗರಾಜು ಹುಲಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.