Yadgiri | ದಲಿತರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕ್ರಮ ಅಗತ್ಯ: ರಾಮಣ್ಣ

Update: 2026-08-07 18:35 IST

ಯಾದಗಿರಿ : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ನಡೆದ ದಲಿತ ವ್ಯಕ್ತಿ ಭೂಮಾನಂದ್ ಅವರ ಭೀಕರ ಹತ್ಯೆ ಹಾಗೂ ಸುರಪುರ ತಾಲೂಕಿನ ಎಸ್‌.ಎಚ್‌. ಶಾಖಾಪುರ ಗ್ರಾಮದಲ್ಲಿ ದಲಿತರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಗಳನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ, ರಾಯಚೂರು ಜಿಲ್ಲೆಯ ಹದ್ದಿನಾಳ ಗ್ರಾಮದ ಭೂಮಾನಂದ್ ಅವರನ್ನು ಆ.4ರಂದು ಬರ್ಬರವಾಗಿ ಹತ್ಯೆಗೈದಿರುವುದು ಖಂಡನೀಯ. ರಾಜ್ಯದಲ್ಲಿ ಜಾತಿ ಆಧಾರಿತ ದೌರ್ಜನ್ಯ, ದಲಿತರ ಮೇಲಿನ ಹಲ್ಲೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

ರಾಜ್ಯದ ಗೃಹ ಸಚಿವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮುಂದುವರಿಯುತ್ತಿರುವುದು ವಿಷಾದನೀಯ. ಸರ್ಕಾರ ಹಾಗೂ ಜಿಲ್ಲಾಡಳಿತ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ದೌರ್ಜನ್ಯ ತಡೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಭೂಮಾನಂದ್ ಹತ್ಯೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ, ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು. ಮೃತರ ಕುಟುಂಬಕ್ಕೆ ಸಮರ್ಪಕ ಪರಿಹಾರ ಹಾಗೂ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಸುರಪುರ ತಾಲೂಕಿನ ಎಸ್‌.ಎಚ್‌. ಶಾಖಾಪುರ ಗ್ರಾಮದಲ್ಲಿ ದಲಿತರು ಕುಣಿ ಅಗೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮೇಲ್ವರ್ಗದವರು ದಲಿತರು ಹಾಗೂ ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಘಟನೆ ಖಂಡನೀಯವಾಗಿದ್ದು, ಸಂಬಂಧಪಟ್ಟವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News