×
Ad

ಯಾದಗಿರಿ | ನಗರಸಭೆ ಸಂಕೀರ್ಣ ಅಕ್ರಮ ಚಟುವಟಿಕೆಗಳ ತಾಣವಾಗಿದೆ : ಉಮೇಶ್ ಕೆ. ಮುದ್ನಾಳ ಆರೋಪ

Update: 2025-11-10 20:11 IST

ಯಾದಗಿರಿ: ಜಿಲ್ಲಾಡಳಿತ ಮತ್ತು ನಗರಸಭೆಯ ನಿರ್ಲಕ್ಷ್ಯದಿಂದ ನಗರಸಭೆ ಸಂಕೀರ್ಣ ಇದೀಗ ಅಕ್ರಮ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಗಂಭೀರ ಆರೋಪ ಮಾಡಿದ್ದಾರೆ.

ತಾಲ್ಲೂಕಿನ ಚಿತ್ತಾಪೂರ ರಸ್ತೆಯಲ್ಲಿರುವ ನಗರಸಭೆ ಸಂಕೀರ್ಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್ ಕೆ. ಮುದ್ನಾಳ, ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ ಸಂಕೀರ್ಣ ಇಂದು ಸಾರ್ವಜನಿಕ ಉಪಯೋಗಕ್ಕಿಂತ ಕುಡುಕರ ತಾಣವಾಗಿದೆ. ಕಟ್ಟಡದ ಒಳಹೊರ ಭಾಗದಲ್ಲಿ ಮದ್ಯದ ಬಾಟಲಿಗಳು ಬಿದ್ದಿವೆ, ಮಲಮೂತ್ರದ ದುರ್ವಾಸನೆ ಆವರಿಸಿದೆ, ಕಿಟಕಿಗಳು ಒಡೆದಿವೆ, ಸುತ್ತಮುತ್ತ ಗಿಡಗಳು ಬೆಳೆದಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಕೀರ್ಣ ಸಂಪೂರ್ಣ ಹಾಳಾಗುವ ಮೊದಲು, ನಗರಸಭೆ ತಕ್ಷಣ ಕ್ರಮ ಕೈಗೊಂಡು ಸ್ವಚ್ಛಗೊಳಿಸಿ, ಕಲರಿಂಗ್ ಮಾಡಿ, ಹರಾಜು ಮೂಲಕ ಸಾರ್ವಜನಿಕರಿಗೆ ಮಳಿಗೆಗಳನ್ನು ವಿತರಣೆ ಮಾಡಬೇಕು. ಹೀಗೆ ಮಾಡಿದರೆ ನಗರಸಭೆಗೆ ಆದಾಯ ದೊರಕುತ್ತದೆ ಮತ್ತು ಅಕ್ರಮ ಚಟುವಟಿಕೆಗಳಿಗೆ ತಡೆ ಬೀಳುತ್ತದೆ.  ಜಿಲ್ಲಾಧಿಕಾರಿಗಳು ತುರ್ತುವಾಗಿ ಸ್ಥಳಕ್ಕೆ ಭೇಟಿ ನೀಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥಪಡಿಸಬೇಕು, ಇಲ್ಲದಿದ್ದರೆ ಸಂಕೀರ್ಣ ಮುಂಭಾಗದ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು  ಉಮೇಶ್ ಕೆ. ಮುದ್ನಾಳ ಹೇಳಿದ್ದಾರೆ.  

ಈ ವೇಳೆ ಪವನ, ಶರಣಪ್ಪ ನಾರಾಯಣಪೇಠ, ಸಾಬಯ್ಯ ಗುತ್ತೇದಾರ, ಸಲೀಂಶೇಕ್ ಗುಂಡ್ಲೂರು, ಖಾಜಾ ಕ್ಯಾತನಾಳ, ಅಜೀಜ್ ಪಟೇಲ್, ಜಾಕೀರ್, ತಿಮ್ಮಯ್ಯ ವಾಬಬೈ, ಸದಂ, ರಫೀಕ್ ನಾಯ್ಕಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News