ಯಾದಗಿರಿ | ಜಿಲ್ಲಾಧಿಕಾರಿಯ ಹೆಸರಿನಲ್ಲಿ ವೈದ್ಯಾಧಿಕಾರಿಗೆ 50 ಸಾವಿರ ರೂ. ವಂಚನೆ : ಪ್ರಕರಣ ದಾಖಲು
ಯಾದಗಿರಿ: ಜಿಲ್ಲಾಧಿಕಾರಿಯ ಹೆಸರಿನಲ್ಲಿ ವಾಟ್ಸ್‌ಆಪ್‌ನಲ್ಲಿ ಮೆಸೇಜ್ ಕಳುಹಿಸಿ ವೈದ್ಯಾಧಿಕಾರಿಯಿಂದ 50 ಸಾವಿರ ರೂ. ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಯಾದಗಿರಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜ್ಯೋತಿ ಡಿ.ಕಟ್ಟಿಮನಿ ವಂಚನೆಗೆ ಒಳಗಾದವರು. ವಂಚಕರು ಜಿಲ್ಲಾಧಿಕಾರಿಯ ಫೋಟೋ ಹಾಗೂ ಹೆಸರನ್ನು ಬಳಸಿ ವಾಟ್ಸ್‌ಆಪ್‌ನಲ್ಲಿ “Hello Jyoti, how is the work going?” ಎಂದು ಸಂದೇಶ ಕಳುಹಿಸಿದ್ದರು.
ಡಾ.ಜ್ಯೋತಿ ಅವರು ಜಿಲ್ಲಾಧಿಕಾರಿ ಎಂದು ನಂಬಿ ಪ್ರತಿಕ್ರಿಯಿಸಿದ ಬಳಿಕ, “ಇಂಟರ್ ನೆಟ್ ಬ್ಯಾಂಕಿಂಗ್‌ನಲ್ಲಿ ಸಮಸ್ಯೆ ಬಂದಿದೆ. ತುರ್ತಾಗಿ 50 ಸಾವಿರ ರೂ. ಕಳುಹಿಸಿ” ಎಂದು ಬ್ಯಾಂಕ್ ಖಾತೆ ನಂಬರ್ ಕಳುಹಿಸಿದ್ದರು. ಇದನ್ನು ನಂಬಿದ ಡಾ.ಜ್ಯೋತಿ ತಕ್ಷಣ ಹಣ ವರ್ಗಾವಣೆ ಮಾಡಿದ್ದಾರೆ.
ಅದಾದ ಕೆಲವೇ ಕ್ಷಣಗಳಲ್ಲಿ ಮತ್ತೊಮ್ಮೆ 20 ಸಾವಿರ ರೂ. ಕಳುಹಿಸಲು ಸಂದೇಶ ಬಂದಾಗ ಅನುಮಾನಗೊಂಡು, ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದಾಗ ವಂಚನೆ ನಡೆದಿರುವುದು ಗೊತ್ತಾಗಿದೆ.
ಈ ಕುರಿತು ಡಾ.ಜ್ಯೋತಿ ನೀಡಿದ ದೂರಿನ ಮೇರೆಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಾಟ್ಸ್‌ಆಪ್ ನಂಬರ್ ಹಾಗೂ ಖಾತೆ ವಿವರಗಳ ಆಧಾರದ ಮೇಲೆ ತನಿಖೆ ಕೈಗೊಂಡಿದ್ದಾರೆ.