ನ್ಯಾಯಮೂರ್ತಿ ವರ್ಮಾ ನಿವಾಸದ ಸುಟ್ಟ ನೋಟುಗಳ ಬಳಿ ಅಪರಿಚಿತ ವ್ಯಕ್ತಿ!

PC : PTI
ಹೊಸದಿಲ್ಲಿ: ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮನೆಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ವೇಳೆ ಅಪಾರ ಪ್ರಮಾಣದ ನಗದು ಪತ್ತೆಯಾದ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳ ಸಮಿತಿ, ಅಪರಿಚಿತ ವ್ಯಕ್ತಿಯೊಬ್ಬ ಸುಟ್ಟ ನೋಟಿನ ಪಕ್ಕದಲ್ಲಿ ಇದ್ದ ಅಂಶವನ್ನು ಘಟನೆಯ ಬಗ್ಗೆ ಮೊದಲು ಸ್ಪಂದಿಸಿದವರು ತೆಗೆದ ಫೋಟೊದಲ್ಲಿ ಪತ್ತೆ ಮಾಡಿದೆ.
ಚೌಕದ ಶರ್ಟ್ ಧರಿಸಿದ್ದ ವ್ಯಕ್ತಿ ಬೆಂಕಿ ನಂದಿಸಿದ ಹಾಗೂ ಅರೆ ಸುಟ್ಟ ನೋಟಿನ ಕಂತೆಗಳ ಬಳಿ ಮಾರ್ಚ್ 15ರಂದು ನಸುಕಿನ ವೇಳೆ ಇದ್ದುದನ್ನು ಪತ್ತೆ ಮಾಡಿದ್ದಾರೆ.
ಈ ವ್ಯಕ್ತಿ ಮಧ್ಯರಾತ್ರಿ ಬಳಿಕ 1 ಗಂಟೆಯಿಂದ ಮುಂಜಾನೆ 7 ಗಂಟೆಯ ನಡುವೆ ಸುಟ್ಟ ನೋಟುಗಳ ಕಂತೆಗಳನ್ನು ತೆರವುಗೊಳಿಸುವಲ್ಲಿ ನ್ಯಾಯಮೂರ್ತಿ ವರ್ಮಾ ಅವರ ಆಪ್ತ ಕಾರ್ಯದರ್ಶಿ ರಾಜೀಂದರ್ ಸಿಂಗ್ ಕಾರ್ಕಿ ಮತ್ತು ಸಿಬ್ಬಂದಿ ಮೊಹ್ಮದ್ ರಾಹಿಲ್, ಬಬ್ಲೂ ಮತ್ತು ಹನುಮಾನ್ ಗೆ ಸಹಕರಿಸಿದ್ದನೇ ಎಂಬ ಸಂದೇಹವನ್ನು ಈ ಫೋಟೊ ಹುಟ್ಟುಹಾಕಿದೆ.
"ಅಗ್ನಿಶಾಮಕ ದಳದ ವ್ಯಕ್ತಿಯೊಬ್ಬ ದಾಸ್ತಾನು ಮಳಿಗೆಯ ಪ್ರವೇಶದ್ವಾರದಲ್ಲಿ ಟಾರ್ಚ್ ಹಿಡಿದುಕೊಂಡು ವಿಡಿಯೊ ಮಾಡುತ್ತಿರುವುದನ್ನು ಈ ಫೋಟೊ ಬಹಿರಂಗಪಡಿಸಿದೆ. ದಾಸ್ತಾನು ಕೊಠಡಿಯ ಹಿಂಭಾಗದಲ್ಲಿ ಅವಶೇಷಗಳು ಮತ್ತು ಬಲಭಾಗದಲ್ಲಿ ಅಪರಿಚಿತ ವ್ಯಕ್ತಿ ನಿಂತಿರುವುದು ಕಂಡುಬಂದಿದೆ" ಎಂದು ಸಮಿತಿ ತನ್ನ ವರದಿಯಲ್ಲಿ ವಿವರಿಸಿದೆ.
ತುಘಲಕ್ ಕ್ರೆಸೆಂಟ್ ಬಂಗಲೆಯ ದಾಸ್ತಾನು ಕೊಠಡಿಯಲ್ಲಿ ಅಗ್ನಿಆಕಸ್ಮಿಕ ಸಂಭವಿಸಿದ ವೇಳೆ ನ್ಯಾಯಮೂರ್ತಿ ವರ್ಮಾ ಅವರ ಪುತ್ರಿ, ಅಸ್ವಸ್ಥ ತಾಯಿ, ಕಾರ್ಕಿ ಮತ್ತು ವಿಶ್ವಾಸಾರ್ಹ ಸೇವಕರು ಇದ್ದರು ಎಂದು ಪಂಜಾಬ್ ಮತ್ತು ಹರ್ಯಾಣ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಸಿಜೆ ಜಿ.ಎಸ್.ಸಂಧವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರಿದ್ದ ಸಮಿತಿ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳ ನಿವಾಸದಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಗದು ಇತ್ತು ಎನ್ನುವುದನ್ನು ಸಾಬೀತುಪಡಿಸುವ ಹಲವು ಪುರಾವೆಗಳು ಇದ್ದರೂ, ವಿಚಾರಣೆಗೆ ಗುರಿಪಡಿಸಿದ ಎಲ್ಲರೂ ತಪ್ಪು ದಾರಿಗೆಳೆಯುವಂಥ ಹೇಳಿಕೆಗಳನ್ನು ನೀಡಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕೃತ ಎಲೆಕ್ಟ್ರಾನಿಕ್ ಪುರಾವೆಗಳು ಮತ್ತು ವಿಡಿಯೊಗಳನ್ನು ಅಲ್ಲಗಳೆದಿದ್ದಾರೆ ಎಂದು ಸಮಿತಿ ಹೇಳಿದೆ.







