Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ನ್ಯಾಯಮೂರ್ತಿ ಸಾಚಾರ್ ವರದಿಗೆ 20 ವರ್ಷ:...

ನ್ಯಾಯಮೂರ್ತಿ ಸಾಚಾರ್ ವರದಿಗೆ 20 ವರ್ಷ: ಶಿಕ್ಷಣದಲ್ಲಿ ಇನ್ನೂ ನನಸಾಗದ ಸಮಾನ ಅವಕಾಶ

ನಿರಂಜನಾರಾಧ್ಯ ವಿ.ಪಿ.ನಿರಂಜನಾರಾಧ್ಯ ವಿ.ಪಿ.18 Nov 2026 12:08 PM IST
share
ನ್ಯಾಯಮೂರ್ತಿ ಸಾಚಾರ್ ವರದಿಗೆ 20 ವರ್ಷ: ಶಿಕ್ಷಣದಲ್ಲಿ ಇನ್ನೂ ನನಸಾಗದ ಸಮಾನ ಅವಕಾಶ

ಸ್ಯಾಮ್ ಆಶರ್, ಪಾಲ್ ನೊವೊಸಾಡ್ ಮತ್ತು ಚಾರ್ಲಿ ರಾಫ್ಕಿನ್ ಅವರ 2024ರ ಅಧ್ಯಯನವು, ಕಡಿಮೆ ಶಿಕ್ಷಣ ಪಡೆದ ಕುಟುಂಬಗಳ ಮಕ್ಕಳು ಮುಂದಿನ ಪೀಳಿಗೆಯಲ್ಲಿ ಶೈಕ್ಷಣಿಕವಾಗಿ ಎಷ್ಟು ಮೇಲೇರಬಲ್ಲರು ಎಂಬುದನ್ನು ಪರಿಶೀಲಿಸಿದೆ. ಅಧ್ಯಯನ ಒಳಗೊಂಡ ಪೀಳಿಗೆಗಳಲ್ಲಿನ ಗಂಡುಮಕ್ಕಳನ್ನು ಹೋಲಿಸಿದಾಗ, ಪರಿಶಿಷ್ಟ ಜಾತಿಗಳಲ್ಲಿ ಮೇಲೇರಿಕೆಯ ಅವಕಾಶ ಸುಧಾರಿಸಿದರೆ, ಮುಸ್ಲಿಮರಲ್ಲಿ ಅದು ಕುಸಿದಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ. ಇದು ಶಿಕ್ಷಣ ವಿಸ್ತರಣೆಯ ಲಾಭ ಎಲ್ಲ ಸಮುದಾಯಗಳಿಗೂ ಸಮಾನವಾಗಿ ತಲುಪುವುದಿಲ್ಲ ಎಂಬುದಕ್ಕೆ ಮಹತ್ವದ ಸಾಕ್ಷಿಯಾಗುತ್ತದೆ.

2006ರ ನವೆಂಬರ್ 17ರಂದು ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ನೇತೃತ್ವದ ಉನ್ನತಮಟ್ಟದ ಸಮಿತಿ ತನ್ನ ವರದಿಯನ್ನು ಪ್ರಧಾನಮಂತ್ರಿಗೆ ಸಲ್ಲಿಸಿತು. ಈಗ, 2026ರ ನವೆಂಬರ್ 17ಕ್ಕೆ ಸರಿಯಾಗಿ ಇಪ್ಪತ್ತು ವರ್ಷಗಳು ಪೂರ್ಣಗೊಂಡಿವೆ. ನವೆಂಬರ್ 30ರಂದು ಸಂಸತ್ತಿನಲ್ಲಿ ಮಂಡನೆಯಾದ ಈ ವರದಿ ಭಾರತದ ಪ್ರಜಾಪ್ರಭುತ್ವದ ಮುಂದೆ ದೇಶದ ಅಭಿವೃದ್ಧಿಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸಮಾನ ಅವಕಾಶ ಮತ್ತು ನ್ಯಾಯಯುತ ಪಾಲು ದೊರೆಯುತ್ತಿದೆಯೇ ಎಂಬ ಮೂಲಭೂತ ಪ್ರಶ್ನೆಯೊಂದನ್ನು ತೆರೆದಿರಿಸಿತು. ಇಪ್ಪತ್ತನೇ ವರ್ಷಾಚರಣೆ ಸಂದರ್ಭದಲ್ಲಿ, ವರದಿಯನ್ನು ನೆನಪಿಸಿಕೊಳ್ಳುವುದರೊಂದಿಗೆ, ಅಂದು ಗುರುತಿಸಿದ ಶೈಕ್ಷಣಿಕ ಅಸಮಾನತೆಗಳನ್ನು ನಿವಾರಿಸಲು ಸರಕಾರಗಳು ಎಷ್ಟು ಹೊಣೆಗಾರಿಕೆಯಿಂದ ನಡೆದುಕೊಂಡಿವೆ ಎಂಬುದನ್ನು ಪರಿಶೀಲಿಸುವ ಸಂದರ್ಭವಾಗಬೇಕು.

ಸಾಚಾರ್ ವರದಿಯ ಮಹತ್ವ ಅದರ ಅಧ್ಯಯನ ವಿಧಾನದಲ್ಲಿತ್ತು. ಮುಸ್ಲಿಮರ ಸ್ಥಿತಿಯನ್ನು ಧಾರ್ಮಿಕ ಗುರುತಿನೊಳಗಷ್ಟೇ ಬಂಧಿಸದೆ, ಶಿಕ್ಷಣ, ಬಡತನ, ಉದ್ಯೋಗ, ಬ್ಯಾಂಕ್ ಸಾಲ ಮತ್ತು ಸಾರ್ವಜನಿಕ ಸೌಲಭ್ಯಗಳ ಲಭ್ಯತೆಯ ಪರಸ್ಪರ ಸಂಬಂಧದಲ್ಲಿ ಅದು ಪರಿಶೀಲಿಸಿತು. ಜನಗಣತಿ, ರಾಷ್ಟ್ರೀಯ ಮಾದರಿ ಸಮೀಕ್ಷೆ, ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಇಲಾಖೆಗಳ ಮಾಹಿತಿಯನ್ನು ಬಳಸಿಕೊಂಡು, ಸಾಮಾಜಿಕ-ಧಾರ್ಮಿಕ ಸಮುದಾಯಗಳ ನಡುವಿನ ಅಂತರವನ್ನು ದಾಖಲಿಸಿತು. ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಸಮುದಾಯದ ಮನೋಭಾವಕ್ಕೆ ಆರೋಪಿಸುವ ಬದಲು, ಅವಕಾಶಗಳ ಲಭ್ಯತೆ ಮತ್ತು ವ್ಯವಸ್ಥೆಯ ಕಾರ್ಯವೈಖರಿಯನ್ನು ಪರಿಶೀಲಿಸುವ ಅಗತ್ಯವನ್ನು ಈ ಅಧ್ಯಯನ ಮುಂದಿಟ್ಟಿತು.

ವರದಿ ಅನ್ವಯ ಅಂದಿನ ಸ್ಥಿತಿ ತೀವ್ರ ಆತಂಕಕಾರಿಯಾಗಿತ್ತು. ವರದಿಯ ಶಿಕ್ಷಣ ಅಧ್ಯಾಯದ ಪ್ರಕಾರ, 6-14 ವರ್ಷದ ಮುಸ್ಲಿಮ್ ಮಕ್ಕಳಲ್ಲಿ ಸುಮಾರು ಶೇ.25ರಷ್ಟು ಮಕ್ಕಳು ಶಾಲೆಯನ್ನು ಸೇರದ ಅಥವಾ ಸೇರಿ ಮಧ್ಯದಲ್ಲಿಯೇ ಬಿಟ್ಟಿದ್ದರು. ಇವೆರಡನ್ನೂ ಒಳಗೊಂಡ ಈ ಪ್ರಮಾಣವು ಪ್ರಾಥಮಿಕ ಶಿಕ್ಷಣದ ಪ್ರವೇಶದಲ್ಲಿದ್ದ ದೊಡ್ಡ ಅಸಮಾನತೆಯನ್ನು ತೋರಿಸಿತು. ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಪದವಿ ಅಥವಾ ಡಿಪ್ಲೊಮಾ ಹೊಂದಿದ್ದವರ ಪ್ರಮಾಣ ದೇಶದಲ್ಲಿ ಸುಮಾರು ಶೇ.7ರಷ್ಟಿದ್ದರೆ, ಮುಸ್ಲಿಮರಲ್ಲಿ ಸುಮಾರು ಶೇ.4ರಷ್ಟಿತ್ತು. ಶಿಕ್ಷಣದ ಹಂತ ಹೆಚ್ಚಿದಂತೆ ಅವಕಾಶದ ಅಂತರವೂ ಹೆಚ್ಚಾಗುತ್ತಿದೆ.

ವರದಿ ಮತ್ತೊಂದು ಪೂರ್ವಾಗ್ರಹವನ್ನೂ ಪ್ರಶ್ನಿಸಿತು. ಬಹುಪಾಲು ಮುಸ್ಲಿಮ್ ಮಕ್ಕಳು ಮದ್ರಸಗಳಲ್ಲಿಯೇ ಕಲಿಯುತ್ತಾರೆ ಎಂಬ ಸಾಮಾನ್ಯ ನಂಬಿಕೆಗೆ ಅಂಕಿಅಂಶಗಳ ಬೆಂಬಲ ಇರಲಿಲ್ಲ. ಅದು ಉಲ್ಲೇಖಿಸಿದ ಎನ್‌ಸಿಎಇಆರ್ ಅಂದಾಜಿನ ಪ್ರಕಾರ, ಶಾಲೆಗೆ ಹೋಗುವ ವಯಸ್ಸಿನ ಒಟ್ಟು ಮುಸ್ಲಿಮ್ ಮಕ್ಕಳಲ್ಲಿ ಮದ್ರಸಗಳಲ್ಲಿ ಕಲಿಯುತ್ತಿದ್ದವರು ಸುಮಾರು ಶೇ.3 ಮಾತ್ರ. ಹೀಗಾಗಿ, ಮುಸ್ಲಿಮರ ಶಿಕ್ಷಣದ ಪ್ರಶ್ನೆಯನ್ನು ಮದ್ರಸ ಸುಧಾರಣೆಗೆ ಸೀಮಿತಗೊಳಿಸುವುದರಿಂದ ಬಹುಪಾಲು ಮಕ್ಕಳ ಅಗತ್ಯಗಳನ್ನು ಪರಿಹರಿಸಲಾಗುವುದಿಲ್ಲ ಎಂಬ ಸತ್ಯವನ್ನು ವರದಿ ಸಾರಿತು. ಎಲ್ಲರಿಗೂ ಕೈಗೆಟಕುವ, ಉತ್ತಮ ಗುಣಮಟ್ಟದ ಸಾರ್ವಜನಿಕ ಶಿಕ್ಷಣ ಒದಗಿಸುವ ಸರಕಾರದ ಹೊಣೆಗಾರಿಕೆಯನ್ನು ವರದಿ ಒತ್ತಿಹೇಳಿತು.

ಈ ಇಪ್ಪತ್ತು ವರ್ಷಗಳಲ್ಲಿ ಸಾಧನೆಯೇ ಆಗಿಲ್ಲವೆಂದು ಹೇಳುತ್ತಿಲ್ಲ. ಆದರೆ, ಅದನ್ನು ಗುರುತಿಸಿದಾಗಲೇ ಉಳಿದ ಅಸಮಾನತೆಯ ಸ್ವರೂಪವನ್ನು ನಿಖರವಾಗಿ ಅರ್ಥಮಾಡಿಕೊಳ್ಳಬಹುದು. ಕೇಂದ್ರ ಸರಕಾರ 2025ರ ಮಾರ್ಚ್‌ನಲ್ಲಿ ಸಂಸತ್ತಿಗೆ ನೀಡಿದ ಮಾಹಿತಿಯ ಪ್ರಕಾರ, ಏಳು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಾಕ್ಷರತೆಯ ಚಿತ್ರ ಹೀಗಿದೆ: (ಕೋಷ್ಟಕ ನೋಡಿ)

ಜನಗಣತಿ ಮತ್ತು ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್‌ಎಫ್‌ಎಸ್), 2023-24ರ ಮಾದರಿ ಸಮೀಕ್ಷೆಯ ಅನ್ವಯ ಸಾಕ್ಷರತೆಯಲ್ಲಿ ಗಣನೀಯ ಸುಧಾರಣೆ ಮತ್ತು ರಾಷ್ಟ್ರೀಯ ಸರಾಸರಿಯೊಂದಿಗಿನ ಅಂತರ ಕಡಿಮೆಯಾಗಿರುವುದು ಸ್ಪಷ್ಟ. ಆದರೆ, ಕೇವಲ ಅಕ್ಷರಜ್ಞಾನದಲ್ಲಿ ಅಂತರ ಕಡಿಮೆಯಾಗಿರುವುದು ಶಿಕ್ಷಣದಲ್ಲಿ ಸಮಾನ ಅವಕಾಶದ ಸಾಧನೆಯಾಗಿದೆ ಎಂಬುದಕ್ಕೆ ಸಾಕ್ಷಿಯಲ್ಲ. ಪ್ರಾಥಮಿಕ, ಪ್ರೌಢಶಿಕ್ಷಣ ಪೂರ್ಣಗೊಳಿಸುವುದು, ಕಾಲೇಜಿಗೆ ಪ್ರವೇಶಿಸುವುದು ಮತ್ತು ಉನ್ನತ ಅರ್ಹತೆ ಪಡೆಯುವುದನ್ನು ಪ್ರತ್ಯೇಕ ಅಧ್ಯಯನಗಳ ಮೂಲಕ ನೋಡಬೇಕಿದೆ.

ಇತ್ತೀಚಿನ ಶಾಲಾ ದಾಖಲಾತಿಯ ಅಂಕಿಅಂಶಗಳು ಈ ಸಮಸ್ಯೆಯನ್ನು ತೆರೆದಿಡುತ್ತವೆ. ಯುಡೈಸ್ ಪ್ಲಸ್ 2025-26ರ ಕೋಷ್ಟಕ 6.9ನ್ನು ಆಧರಿಸಿದ ವಿಶ್ಲೇಷಣೆಯ ಪ್ರಕಾರ, ಆಯಾ ಹಂತದ ಒಟ್ಟು ವಿದ್ಯಾರ್ಥಿಗಳಲ್ಲಿ ಮುಸ್ಲಿಮ್ ಮಕ್ಕಳ ಪಾಲು 1-5ನೇ ತರಗತಿಯಲ್ಲಿ ಶೇ.17.9; 6-8ನೇ ತರಗತಿಯಲ್ಲಿ ಶೇ.15.8; 9-10ನೇ ತರಗತಿಯಲ್ಲಿ ಶೇ.14.6; 11-12ನೇ ತರಗತಿಯಲ್ಲಿ ಶೇ.12.5. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಎಲ್ಲ ಹಂತಗಳಲ್ಲಿ ಅವರ ಪಾಲು ಸ್ವಲ್ಪ ಸುಧಾರಿಸಿದೆ. ಆದರೆ, ಶಿಕ್ಷಣದ ವಿವಿಧ ಹಂತಗಳಲ್ಲಿ ಅವರ ಪ್ರಾತಿನಿಧ್ಯ ಕಡಿಮೆ ಇರುವ ಸಮಸ್ಯೆ ಮುಂದುವರಿದಿದೆ. ಇದು ವರ್ಷದಿಂದ ವರ್ಷಕ್ಕೆ ಅನುಸರಿಸಿ ಕಂಡುಹಿಡಿದ ಶಾಲೆಬಿಡುವ ಪ್ರಮಾಣಗಳಲ್ಲ. ಆದ್ದರಿಂದ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣಕ್ಕೆ ಸಾಗುವ ಅವಕಾಶಗಳನ್ನು ವಿಶೇಷವಾಗಿ ಪರಿಶೀಲಿಸಲು ಆಳವಾದ ಅಧ್ಯಯನಗಳ ಅಗತ್ಯವಿದೆ.

ಉನ್ನತ ಶಿಕ್ಷಣದಲ್ಲಿ ಅಂತರ ಇನ್ನಷ್ಟು ಸ್ಪಷ್ಟವಾಗಿದೆ. ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ ಎಐಎಸ್‌ಎಚ್‌ಇ-2023-24ರ ಪ್ರಕಾರ, ದೇಶದ ಸುಮಾರು 4.5 ಕೋಟಿ ಉನ್ನತ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಸುಮಾರು 22.53 ಲಕ್ಷ; ಅಂದರೆ ಶೇ.5ರಷ್ಟು ಮಾತ್ರ. 2011ರ ಜನಗಣತಿಯಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇ.14.2ರಷ್ಟಿತ್ತು. ಇದು, 2006 ಹಾಗೂ 2026ರ ಎರಡೂ ಕಾಲಘಟ್ಟಗಳಲ್ಲಿ ಉನ್ನತ ಶಿಕ್ಷಣದ ಅವಕಾಶದ ಕೊರತೆ ಪ್ರಮುಖ ಪ್ರಶ್ನೆಯಾಗಿಯೇ ಉಳಿದಿದೆ ಎಂಬುದನ್ನು ಸೂಚಿಸುತ್ತದೆ.

ಕೆಲವು ಆಶಾದಾಯಕ ಬೆಳವಣಿಗೆಗಳು ಇವೆ. 2023-24ರಲ್ಲಿ ಉನ್ನತ ಶಿಕ್ಷಣದಲ್ಲಿದ್ದ ಮುಸ್ಲಿಮ್ ವಿದ್ಯಾರ್ಥಿಗಳಲ್ಲಿ ಸುಮಾರು 11.65 ಲಕ್ಷ ಮಹಿಳೆಯರು; ಅವರ ಪಾಲು ಸುಮಾರು ಶೇ.51.7. ಈ ಸಾಧನೆಯು ಮುಸ್ಲಿಮ್ ಮಹಿಳೆಯರ ಶೈಕ್ಷಣಿಕ ಆಶೋತ್ತರಗಳ ಅಂಶವನ್ನು ತೆರೆದಿಡುತ್ತದೆ. ಅವರಿಗೆ ಮತ್ತಷ್ಟು ಹೆಚ್ಚಿನ ಆದ್ಯತೆ ಸಿಗಬೇಕೆಂಬ ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ. ಇದೇ ವೇಳೆ, ಕಾಲೇಜು ತಲುಪಿದವರಲ್ಲಿ ಮಹಿಳೆಯರು ಅರ್ಧಕ್ಕಿಂತ ಹೆಚ್ಚಿದ್ದಾರೆ ಎಂಬ ಒಂದೇ ಕಾರಣಕ್ಕೆ ಎಲ್ಲಾ ಮುಸ್ಲಿಮ್ ಹೆಣ್ಣುಮಕ್ಕಳಿಗೂ ಸಮಾನ ಅವಕಾಶ ದೊರೆತಿದೆ ಎಂಬ ತೀರ್ಮಾನಕ್ಕೆ ಬರಲಾಗುವುದಿಲ್ಲ. ಇನ್ನು ಎಷ್ಟೋ ಹೆಣ್ಣುಮಕ್ಕಳು ಕಾಲೇಜಿನ ಬಾಗಿಲನ್ನೇ ನೋಡದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇತ್ತೀಚಿನ ಸಂಶೋಧನೆಗಳು ಈ ಅಸಮಾನತೆಯ ಆಳವನ್ನು ವಿವರಿಸುತ್ತವೆ. ಸ್ಯಾಮ್ ಆಶರ್, ಪಾಲ್ ನೊವೊಸಾಡ್ ಮತ್ತು ಚಾರ್ಲಿ ರಾಫ್ಕಿನ್ ಅವರ 2024ರ ಅಧ್ಯಯನವು, ಕಡಿಮೆ ಶಿಕ್ಷಣ ಪಡೆದ ಕುಟುಂಬಗಳ ಮಕ್ಕಳು ಮುಂದಿನ ಪೀಳಿಗೆಯಲ್ಲಿ ಶೈಕ್ಷಣಿಕವಾಗಿ ಎಷ್ಟು ಮೇಲೇರಬಲ್ಲರು ಎಂಬುದನ್ನು ಪರಿಶೀಲಿಸಿದೆ. ಅಧ್ಯಯನ ಒಳಗೊಂಡ ಪೀಳಿಗೆಗಳಲ್ಲಿನ ಗಂಡುಮಕ್ಕಳನ್ನು ಹೋಲಿಸಿದಾಗ, ಪರಿಶಿಷ್ಟ ಜಾತಿಗಳಲ್ಲಿ ಮೇಲೇರಿಕೆಯ ಅವಕಾಶ ಸುಧಾರಿಸಿದರೆ, ಮುಸ್ಲಿಮರಲ್ಲಿ ಅದು ಕುಸಿದಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ. ಇದು ಶಿಕ್ಷಣ ವಿಸ್ತರಣೆಯ ಲಾಭ ಎಲ್ಲ ಸಮುದಾಯಗಳಿಗೂ ಸಮಾನವಾಗಿ ತಲುಪುವುದಿಲ್ಲ ಎಂಬುದಕ್ಕೆ ಮಹತ್ವದ ಸಾಕ್ಷಿಯಾಗುತ್ತದೆ.

ಸರಿಯಾದ ನೀತಿ ಕಾರ್ಯಕ್ರಮಗಳನ್ನು ನೀಡಬಲ್ಲವು ಎಂಬುದಕ್ಕೆ ಸಾಕ್ಷಿಯಿದೆ. ಮಿತುಲ್ ಸುರಾನಾ ಮತ್ತು ರಜನೀಶ್ ರೈ ಅವರ 2025ರ ಅಧ್ಯಯನವು, ಆಂಧ್ರಪ್ರದೇಶದಲ್ಲಿ 2007ರಲ್ಲಿ ಹಿಂದುಳಿದ ಮುಸ್ಲಿಮ್ ವರ್ಗಗಳಿಗೆ ಸರಕಾರಿ ನೇಮಕಾತಿ ಮತ್ತು ವಿಶ್ವವಿದ್ಯಾನಿಲಯ ಪ್ರವೇಶದಲ್ಲಿ ಪರಿಚಯಿಸಿದ ಮೀಸಲಾತಿಯ ಪರಿಣಾಮವನ್ನು ಪರಿಶೀಲಿಸಿದೆ. ಉದ್ದೇಶಿತ ವರ್ಗಗಳ ಪುರುಷರ ಶೈಕ್ಷಣಿಕ ಸಾಧನೆಯಲ್ಲಿ ಸಂಖ್ಯಾಶಾಸ್ತ್ರೀಯವಾಗಿ ದೃಢವಾದ ಸುಧಾರಣೆ ಕಂಡುಬಂದಿದ್ದು, ಮಹಿಳೆಯರಲ್ಲಿ ಅದೇ ರೀತಿಯ ಪರಿಣಾಮ ದೃಢಪಟ್ಟಿಲ್ಲ. ಇದು ಮಹಿಳೆಯರು ಎದುರಿಸುವ ಅಡೆತಡೆಗಳಿಗೆ ಪ್ರತ್ಯೇಕ ಪರಿಹಾರಗಳೂ ಅಗತ್ಯ ಎಂಬ ಪಾಠವನ್ನು ಈ ಅಧ್ಯಯನ ನೀಡುತ್ತದೆ.

ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರವು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾರ್ಥಿವೇತನ ನೀತಿಯ ಬದಲಾವಣೆಗಳು ಗಂಭೀರ ಪರಿಶೀಲನೆಗೆ ಒಳಗಾಗಬೇಕಿದೆ. ಕೇಂದ್ರ ಸರಕಾರವು 2022-23ರಿಂದ ಅಲ್ಪಸಂಖ್ಯಾತರ ಮೆಟ್ರಿಕ್‌ಪೂರ್ವ ವಿದ್ಯಾರ್ಥಿವೇತನವನ್ನು 9 ಮತ್ತು 10ನೇ ತರಗತಿಗಳಿಗೆ ಸೀಮಿತಗೊಳಿಸಿತು. 1-8ನೇ ತರಗತಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಇರುವುದನ್ನು ಇದಕ್ಕೆ ಕಾರಣವಾಗಿ ನೀಡಿತು. ಮೌಲಾನಾ ಆಝಾದ್ ರಾಷ್ಟ್ರೀಯ ಫೆಲೋಶಿಪ್‌ಗೆ ಹೊಸ ಆಯ್ಕೆಗಳನ್ನು ನಿಲ್ಲಿಸಲು ಇತರ ಫೆಲೋಶಿಪ್‌ಗಳೊಂದಿಗೆ ಇರುವ ಪುನರಾವರ್ತನೆಯನ್ನು ಕಾರಣವಾಗಿ ತಿಳಿಸಿತು. ಈ ನಿರ್ಧಾರಗಳನ್ನು ಮೌಲ್ಯಮಾಪನ ಮಾಡುವಾಗ, ಉಚಿತ ಶಿಕ್ಷಣದ ಕಾನೂನುಬದ್ಧ ಭರವಸೆ ಕುಟುಂಬದ ಎಲ್ಲ ಆರ್ಥಿಕ ಅಡೆತಡೆಗಳನ್ನೂ ವಾಸ್ತವದಲ್ಲಿ ನಿವಾರಿಸಿದೆಯೇ ಎಂಬುದನ್ನು ಕೇಳಬೇಕು. ಪ್ರಯಾಣ, ಡಿಜಿಟಲ್ ಕಲಿಕೆ, ಹೆಚ್ಚುವರಿ ಕಲಿಕಾ ನೆರವು ಮತ್ತು ಮನೆಯ ಆದಾಯದ ಒತ್ತಡಗಳನ್ನೂ ಪರಿಗಣಿಸಬೇಕು.

ಇಪ್ಪತ್ತನೇ ವರ್ಷದ ಸಂದರ್ಭದಲ್ಲಿ ಕೇಂದ್ರ ಸರಕಾರ ಮಾಡಬೇಕಾದ ಮೊದಲ ಕೆಲಸ, ಸಾಚಾರ್ ಶಿಫಾರಸುಗಳ ಅನುಷ್ಠಾನದ ಕುರಿತು ಫಲಿತಾಂಶಾಧಾರಿತ ಶ್ವೇತಪತ್ರವನ್ನು ಸಂಸತ್ತಿನ ಮುಂದಿಡುವುದು. ಯಾವ ಶಿಫಾರಸು ಜಾರಿಯಾಗಿದೆ, ಯಾವುದಕ್ಕೆ ಹಣಕಾಸಿನ ಕೊರತೆಯಿದೆ, ಯಾವ ಕ್ರಮವು ನಿರೀಕ್ಷಿತ ಫಲ ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ರಾಷ್ಟ್ರೀಯ ದತ್ತಾಂಶ ವ್ಯವಸ್ಥೆ, ಸ್ವತಂತ್ರ ಮೌಲ್ಯಮಾಪನ ಮತ್ತು ತಾರತಮ್ಯದ ದೂರುಗಳಿಗೆ ಸಮಾನ ಅವಕಾಶದ ವ್ಯವಸ್ಥೆ ರೂಪಿಸುವ ಉದ್ದೇಶಗಳನ್ನು ಸರಕಾರ 2007ರಲ್ಲಿಯೇ ಪ್ರಕಟಿಸಿತ್ತು. ಈಗ ಅವುಗಳ ಪರಿಣಾಮಕಾರಿತ್ವವನ್ನು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಿ, ಜಿಲ್ಲೆ-ಲಿಂಗ-ಆದಾಯ-ಸಾಮಾಜಿಕ ಹಿನ್ನೆಲೆವಾರು ಶೈಕ್ಷಣಿಕ ಅಂತರ ಕಡಿಮೆ ಮಾಡುವ ಕಾಲಬದ್ಧ ಕಾರ್ಯಯೋಜನೆಯನ್ನು ರೂಪಿಸಬೇಕು.

ಆ ಕಾರ್ಯಯೋಜನೆ ಆಧಾರ ಬಲಿಷ್ಠ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ನಿರ್ಮಾಣ. ಅಗತ್ಯವಿರುವ ನೆರೆಹೊರೆಗಳಲ್ಲಿ ಉತ್ತಮ ಸರಕಾರಿ ಶಾಲೆಗಳು, ವಿಷಯವಾರು ಖಾಯಂ ಶಿಕ್ಷಕರು, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣದ ಸುಲಭ ಲಭ್ಯತೆ, ಸುರಕ್ಷಿತ ಸಾರಿಗೆ, ವಸತಿನಿಲಯಗಳು ಮತ್ತು ಸಮಯಕ್ಕೆ ತಲುಪುವ ವಿದ್ಯಾರ್ಥಿವೇತನಗಳು ಆದ್ಯತೆ ಪಡೆಯಬೇಕು. ಮಕ್ಕಳ ಮಾತೃಭಾಷೆಗೆ ನೆರವು, ಪಠ್ಯಪುಸ್ತಕಗಳಲ್ಲಿ ಬಹುತ್ವಕ್ಕೆ ಗೌರವ ಮತ್ತು ತರಗತಿಗಳಲ್ಲಿ ತಾರತಮ್ಯ ತಡೆಯುವ ವ್ಯವಸ್ಥೆಗಳು ಶಿಕ್ಷಣದ ಗುಣಮಟ್ಟದ ಅವಿಭಾಜ್ಯ ಭಾಗವಾಗಬೇಕು. ಮುಸ್ಲಿಮ್ ಮಕ್ಕಳು ಸೇರಿದಂತೆ ಹಿಂದುಳಿದ ಎಲ್ಲ ಸಮುದಾಯಗಳ ಮಕ್ಕಳು ಗೌರವದಿಂದ ಒಟ್ಟಿಗೆ ಕಲಿಯುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಗಟ್ಟಿಯಾಗಬೇಕು. ಸಾಚಾರ್ ವರದಿಗೆ ಸಲ್ಲಿಸಬೇಕಾದ ನಿಜವಾದ ಗೌರವವೆಂದರೆ, ಅದು ಗುರುತಿಸಿದ ಅಸಮಾನತೆಗಳನ್ನು ಭಾಷಣಕ್ಕೆ ಉಳಿಸದೆ, ಸರಕಾರದ ಆದ್ಯತೆಯಾಗಿ ಪರಿವರ್ತಿಸಬೇಕಿದೆ.

Tags

justiceEducation
share
ನಿರಂಜನಾರಾಧ್ಯ ವಿ.ಪಿ.
ನಿರಂಜನಾರಾಧ್ಯ ವಿ.ಪಿ.
Next Story
X