ಭಾರತದ ಆಗಸಕ್ಕಾಗಿ ರೂ. 1 ಲಕ್ಷ ಕೋಟಿಯ ಸ್ಪರ್ಧೆ!

ಈಗ ಕೈಗೊಳ್ಳುವ ನಿರ್ಧಾರ ಕೇವಲ ಆಗಸದಲ್ಲಿರುವ ವಿಮಾನ ಬಳಗವನ್ನು ಮಾತ್ರವೇ ನಿರ್ಮಿಸುವುದಿಲ್ಲ. ಬದಲಿಗೆ, ಮುಂದಿನ 30 ವರ್ಷಗಳ ಕಾಲ ಭಾರತದಲ್ಲಿರುವ ಉದ್ಯಮವನ್ನೂ ನಿರ್ಧರಿಸಲಿದೆ.
ಭಾರತ ಈಗ ತನ್ನ ಇತಿಹಾಸದಲ್ಲೇ ಅತಿದೊಡ್ಡ ರಕ್ಷಣಾ ಖರೀದಿಗೆ ಸಿದ್ಧತೆ ನಡೆಸುತ್ತಿದೆ. ರಕ್ಷಣಾ ಸಚಿವಾಲಯ ಈಗಾಗಲೇ ಭಾರತೀಯ ವಾಯುಪಡೆಗಾಗಿ 60 ಬಹುಪಾತ್ರಗಳ ಸಾಗಣೆ ವಿಮಾನಗಳ ಖರೀದಿಗೆ ಬಹುತೇಕ ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಯನ್ನು ನೀಡಿದೆ. ಈ ಬೃಹತ್ ಹೆಜ್ಜೆಯ ಹಿಂದಿರುವ ಕಾರಣವನ್ನು ಬಹಳ ಸರಳವಾಗಿ ಅರ್ಥ ಮಾಡಿಕೊಳ್ಳಬಹುದು. ನಮ್ಮ ವಾಯುಪಡೆ ಇಂದಿಗೂ ಹಳೆಯದಾದ, ದಶಕಗಳ ಹಿಂದೆ ರಶ್ಯದಿಂದ ಖರೀದಿಸಿದ ಆಂಟೊನೊವ್ ಎಎನ್-32 ವಿಮಾನಗಳ ಮೇಲೆ ಅವಲಂಬಿತವಾಗಿದೆ. ಈ ವಿಮಾನಗಳು ಭಾರತಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿವೆಯಾದರೂ, ಅವು ಈಗ ಹಳೆಯದಾಗಿವೆ. ಅವುಗಳಿಗೆ ಇಂಜಿನ್‌ಗಳು, ಚಕ್ರಗಳು, ಇತರ ಬಿಡಿಭಾಗಗಳನ್ನು ಪಡೆದುಕೊಳ್ಳುವುದು ದುಸ್ತರವಾಗಿದೆ. ಇದರೊಡನೆ, ಸುರಕ್ಷತೆಯ ಆತಂಕಗಳೂ ಹೆಚ್ಚಾಗುತ್ತಿವೆ. ನಮ್ಮ ವಿಶಾಲವಾದ ದೇಶದಾದ್ಯಂತ ಯೋಧರು, ಆಯುಧಗಳು, ಆಹಾರ ಮತ್ತು ಔಷಧಗಳು ಸಮರ್ಥವಾಗಿ ಸಂಚರಿಸುವಂತೆ ಮಾಡಬೇಕಾದರೆ, ನಮಗೆ ಈಗ ಹೊಸದಾದ ಮತ್ತು ಆಧುನಿಕವಾದ ವಿಮಾನಗಳ ಅಗತ್ಯವಿದೆ.
ಬಹುಪಾತ್ರಗಳ ಸಾಗಣೆ ವಿಮಾನ ಎಂದರೇನು? ಇದನ್ನು ಆಕಾಶದಲ್ಲಿರುವ ಬಲವಾದ ಮತ್ತು ನಂಬಿಕಾರ್ಹವಾದ ಟ್ರಕ್ ಎಂದುಕೊಳ್ಳಿ. ಇದು ಸೇನಾಪಡೆಗಳನ್ನು ಗಡಿಯ ಬಳಿಗೆ ಸಾಗಿಸಬಹುದು, ಜೀಪುಗಳು ಮತ್ತು ಬೃಹತ್ ಯಂತ್ರಗಳನ್ನು ಒಯ್ಯಬಹುದು, ಪ್ರವಾಹಪೀಡಿತ ಪ್ರದೇಶಗಳಿಗೆ ವೈದ್ಯರು ಮತ್ತು ಔಷಧಗಳನ್ನು ತಲುಪಿಸಬಹುದು, ರನ್‌ವೇಗಳು ಇಲ್ಲದ ಪ್ರದೇಶಗಳಿಗೆ ಪ್ಯಾರಾಚ್ಯೂಟ್ ಮೂಲಕ ಪರಿಹಾರ ಸಾಮಗ್ರಿಗಳನ್ನು ಇಳಿಸಬಹುದು. ಈ ವಿಮಾನ ಪರ್ವತ ಪ್ರದೇಶಗಳು ಅಥವಾ ಮರುಭೂಮಿ ಪ್ರದೇಶಗಳಲ್ಲಿರುವ ಸಣ್ಣದಾದ, ದೊರಗಾದ ಏರ್ ಸ್ಟ್ರಿಪ್‌ಗಳಲ್ಲೂ ಇಳಿಯಬಲ್ಲದು. ಕೆಲವು ಆವೃತ್ತಿಗಳಂತೂ ಆಗಸದಲ್ಲಿ ಹಾರುವಾಗಲೇ ಯುದ್ಧ ವಿಮಾನಗಳಿಗೆ ಇಂಧನ ತುಂಬಿಸಬಲ್ಲವು. ದೀರ್ಘವಾದ ಗಡಿಗಳು, ಕಠಿಣ ಭೂ ಪ್ರದೇಶಗಳು ಮತ್ತು ಆಗಾಗ ಪ್ರವಾಹ, ಭೂಕಂಪ ಮತ್ತು ಚಂಡಮಾರುತದ ಪರಿಸ್ಥಿತಿಗಳನ್ನು ಎದುರಿಸುವ ಭಾರತದಂತಹ ದೇಶದಲ್ಲಿ ಇಂತಹ ವಿಮಾನಗಳು ಐಷಾರಾಮದ ವಸ್ತುಗಳಲ್ಲ. ಅವು ರಾಷ್ಟ್ರೀಯ ಭದ್ರತೆ ಮತ್ತು ಮಾನವೀಯ ಸಹಾಯಗಳಿಗೆ ಅನಿವಾರ್ಯವಾಗಿವೆ.
ಆದರೆ, ಈಗ ನಮ್ಮ ಮುಂದಿರುವ ಸ್ಪರ್ಧೆ ಕೇವಲ ಒಂದು ಹಾರುವ ಯಂತ್ರವನ್ನು ಆರಿಸುವುದಕ್ಕೆ ಸೀಮಿತವಾಗಿಲ್ಲ. ಅದು ಭಾರತದೊಳಗೆ ಮುಂದಿನ ಬೃಹತ್ ಏರ್‌ಕ್ರಾಫ್ಟ್ ಕಾರ್ಖಾನೆ ಯನ್ನು ಯಾರು ಸ್ಥಾಪಿಸಲಿದ್ದಾರೆ ಎನ್ನುವುದನ್ನೂ ನಿರ್ಧರಿಸಲಿದೆ. ಭಾರತದ ಒಂದಷ್ಟು ದೊಡ್ಡ ಹೆಸರುಗಳೂ ಈ ಸ್ಪರ್ಧೆಯಲ್ಲಿವೆ. ಟಾಟಾ ಸಂಸ್ಥೆ ಅಮೆರಿಕದ ಲಾಕ್‌ಹೀಡ್ ಮಾರ್ಟಿನ್ ಜೊತೆಗೂಡಿ ಸಿ-130ಜೆ ಸೂಪರ್ ಹರ್ಕ್ಯುಲಿಸ್ ವಿಮಾನದ ನಿರ್ಮಾಣಕ್ಕೆ ಕಾರ್ಯಾಚರಿಸುತ್ತಿದೆ. ಮಹೀಂದ್ರಾ ಡಿಫೆನ್ಸ್ ಕೆಸಿ-390 ಮಿಲೆನಿಯಮ್ ನಿರ್ಮಾಣಕ್ಕಾಗಿ ಬ್ರೆಝಿಲ್‌ನ ಎಂಬ್ರಾಯರ್ ಜೊತೆಗೂಡಿದೆ. ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಈಗಾಗಲೇ ಮಿಲಿಟರಿ ವೈಮಾನಿಕ ಕ್ಷೇತ್ರದಲ್ಲಿ ದೈತ್ಯ ಸಂಸ್ಥೆಯಾಗಿದೆ. ಅದಾನಿ ಡಿಫೆನ್ಸ್ ಸಹ ಮಿಲಿಟರಿ ವಿಮಾನಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ದೊಡ್ಡ ಪಾತ್ರವನ್ನು ನಿರೀಕ್ಷಿಸುತ್ತಿದೆ. ಆದ್ದರಿಂದ, ಈಗಿನ ಪ್ರಶ್ನೆ ಕೇವಲ ಯಾವ ವಿಮಾನ ಉತ್ತಮವಾಗಿ ಹಾರಾಡುತ್ತದೆ ಎನ್ನುವುದಷ್ಟೇ ಅಲ್ಲ. ಎಷ್ಟರಮಟ್ಟಿನ ನಿರ್ಮಾಣ ಕಾರ್ಯ, ತಂತ್ರಜ್ಞಾನ ಮತ್ತು ಉದ್ಯೋಗಾವಕಾಶಗಳು ಅಂತಿಮ ವಾಗಿ ಭಾರತದಲ್ಲಿ ಉಳಿಯಲಿವೆ ಎನ್ನುವುದಾಗಿದೆ.
ಈ ಸ್ಪರ್ಧೆ ಮುಖ್ಯವಾಗಿ ಎರಡು ವಿಮಾನಗಳ ನಡುವೆ ಅಂತಿಮಗೊಳ್ಳುವ ನಿರೀಕ್ಷೆಗಳಿವೆ. ಅವುಗಳ ಪೈಕಿ ಮೊದಲನೆಯದು ಲಾಕ್‌ಹೀಡ್ ಮಾರ್ಟಿನ್ ಸಿ-130ಜೆ ಸೂಪರ್ ಹರ್ಕ್ಯುಲಿಸ್. ಭಾರತ ಈಗಾಗಲೇ ಇಂತಹ ಹನ್ನೆರಡು ವಿಮಾನಗಳನ್ನು ಬಳಸುತ್ತಿದ್ದು, ಬಹುಮಟ್ಟಿಗೆ ಅವು ವಿಶೇಷ ಕಾರ್ಯಾಚರಣೆಗಳು ಮತ್ತು ಕಷ್ಟಕರ ಕಾರ್ಯತಂತ್ರದ ಯೋಜನೆಗಳಿಗೆ ಬಳಕೆಯಾಗುತ್ತಿವೆ. ಭಾರತೀಯ ವಾಯುಪಡೆ ಈ ವಿಮಾನದ ಕುರಿತು ಚೆನ್ನಾಗಿ ಅರಿತಿದ್ದು, ಪೈಲಟ್‌ಗಳಿಗೆ ತರಬೇತಿ ನೀಡಿದೆ. ಇದರ ನಿರ್ವಹಣೆಯಲ್ಲಿ ಭಾರತ ಅನುಭವ ಹೊಂದಿದ್ದು, ಇದರ ಬಿಡಿಭಾಗಗಳು ಮತ್ತು ವ್ಯವಸ್ಥೆಗಳು ಸುಲಭವಾಗಿ ಲಭ್ಯವಿವೆ. ಈ ಪರಿಚಿತತೆ ಒಂದು ಬಹುದೊಡ್ಡ ಅನುಕೂಲತೆಯಾಗಿದ್ದು, ಇದರಿಂದ ಸಾಕಷ್ಟು ಸಮಯ ಮತ್ತು ಹಣ ಉಳಿತಾಯವಾಗಲಿದೆ. ಟಾಟಾದ ಏರೋಸ್ಪೇಸ್ ವಿಭಾಗವೂ ಇನ್ನೊಂದು ಯೋಜನೆಯಡಿ ಸಿ-295 ಸಾಗಣೆ ವಿಮಾನದ ಬಿಡಿಭಾಗಗಳ ಉತ್ಪಾದನೆ ಮತ್ತು ವಿಮಾನದ ಜೋಡಣೆಯನ್ನು ನಡೆಸುತ್ತಿದೆ. ಲಾಕ್‌ಹೀಡ್ ಮಾರ್ಟಿನ್ ಮತ್ತು ಟಾಟಾ ಇನ್ನಷ್ಟು ದೊಡ್ಡದಾದ ಯೋಜನೆಯ ಕುರಿತು ಚರ್ಚೆ ನಡೆಸುತ್ತಿವೆ. ಒಂದು ವೇಳೆ ಅವು ಯಶಸ್ವಿಯಾದರೆ, ಸಂಪೂರ್ಣ ಸಿ-130ಜೆ ಭಾರತದಲ್ಲೇ ಉತ್ಪಾದನೆಯಾಗಬಹುದು. ಈ ಮೂಲಕ ಹೊಸ ಕಾರ್ಖಾನೆಗಳು, ಕುಶಲ ಉದ್ಯೋಗಗಳು ಮತ್ತು ಆಳವಾದ ತಾಂತ್ರಿಕ ಜ್ಞಾನ ನಮ್ಮ ಉದ್ಯಮವನ್ನು ಪ್ರವೇಶಿಸಲಿವೆ.
ಇನ್ನು ಎರಡನೇ ಪ್ರಮುಖ ಸ್ಪರ್ಧಿ ಎಂದರೆ ಎಂಬ್ರಾಯರ್ ಕೆಸಿ-390 ಮಿಲೇನಿಯಂ ಆಗಿದ್ದು, ಇದು ಮಹೀಂದ್ರಾ ಡಿಫೆನ್ಸ್ ಸಂಸ್ಥೆಯನ್ನು ಭಾರತೀಯ ಔದ್ಯಮಿಕ ಪಾಲುದಾರನಾಗಿ ಹೊಂದಿದೆ. ಮಹೀಂದ್ರಾಗೆ ಸಣ್ಣ ಜೋಡಣಾ ಕೆಲಸಕ್ಕೆ ಸೀಮಿತವಾಗುವ ಇಚ್ಛೆಯಿಲ್ಲ. ಬದಲಿಗೆ, ಹೆಚ್ಚು ಆಳವಾದ, ಉತ್ಪಾದನಾ ಪಾತ್ರವನ್ನು ಮಹಿಂದ್ರಾ ನಿರೀಕ್ಷಿಸುತ್ತಿದೆ. ಕೆಸಿ-390 ಒಂದು ಹೊಸದಾದ ವಿನ್ಯಾಸವಾಗಿದ್ದು, ಹೆಚ್ಚು ತೂಕವನ್ನು ಒಯ್ಯಬಲ್ಲದು, ಆಗಸದಲ್ಲಿರುವ ಇತರ ವಿಮಾನಗಳಿಗೆ ಇಂಧನ ಮರುಪೂರಣ ನಡೆಸಬಲ್ಲದು ಮತ್ತು ಹಲವಾರು ವಿಶೇಷ ಕರ್ತವ್ಯಗಳನ್ನು ನಡೆಸಬಲ್ಲದು. ಇದನ್ನು ಆಯ್ಕೆ ಮಾಡಿಕೊಂಡರೆ, ಭಾರತೀಯ ವಾಯುಪಡೆಗೆ ಒಂದು ಹೊಸದಾದ ಮಧ್ಯಮ ಗಾತ್ರದ ಸಾಗಣೆ ವಿಮಾನ ತನ್ನ ಬಳಗ ಸೇರಿದಂತಾಗಲಿದೆ. ಇನ್ನು ಔದ್ಯಮಿಕ ಪ್ರಯೋಜನವೂ ಆಕರ್ಷಕವಾಗಿದೆ. ವಿಮಾನ ಬಹುತೇಕ ಶೇ. 20ರಷ್ಟು ಸಿದ್ಧವಾಗಿ ಭಾರತಕ್ಕೆ ಆಗಮಿಸಲಿದೆ. ಇನ್ನುಳಿದ ಶೇ. 80 ಉತ್ಪಾದನೆಯನ್ನು ದೇಶೀಯವಾಗಿ, ಅತ್ಯಧಿಕ ಸ್ಥಳೀಯ ಬಿಡಿಭಾಗಗಳೊಡನೆ ನಡೆಸಲಾಗುತ್ತದೆ. ಇದು ಭಾರತದಲ್ಲಿ ಎರಡನೇ ಪ್ರಮುಖ ಏರ್‌ಕ್ರಾಫ್ಟ್ ಉತ್ಪಾದನಾ ವ್ಯವಸ್ಥೆಯನ್ನು ನಿರ್ಮಿಸಲಿದ್ದು, ಈಗಾಗಲೇ ಇರುವ ಸಿ-295 ಯೋಜನೆ ಯೊಡನೆ ಕಾರ್ಯಾಚರಿಸಲಿದೆ. ಇದು ಖಾಸಗಿ ಪೂರೈಕೆ ಸರಪಳಿಯನ್ನು ಇನ್ನಷ್ಟು ವಿಸ್ತರಿಸಲಿದ್ದು, ಉತ್ಪಾದನಾ ಕೌಶಲಗಳನ್ನು ಇನ್ನಷ್ಟು ಉತ್ತಮಪಡಿಸಿ, ದೇಶಾದ್ಯಂತ ಉತ್ತಮ ದುರಸ್ತಿ ಕೇಂದ್ರಗಳನ್ನು ಒದಗಿಸಲಿದೆ.
ಭಾರತೀಯ ವಾಯುಪಡೆಗೆ ಈ ವಿಮಾನಗಳ ಪೈಕಿ ಅಂತಿಮ ಆಯ್ಕೆ ಹಲವಾರು ಪ್ರಾಯೋಗಿಕ ವಿಚಾರಗಳ ಆಧಾರದಲ್ಲಿ ನಡೆಯಲಿದೆ. ಹಾರಾಟ ಪ್ರಯೋಗಗಳು, ಭಾರತದ ಅವಶ್ಯಕತೆಗಳಿಗೆ ತಕ್ಕಂತೆ ತಾಂತ್ರಿಕ ಹೊಂದಾಣಿಕೆಗಳು, ಒಟ್ಟು ವೆಚ್ಚ ಮತ್ತು ದೀರ್ಘಾವಧಿಯ ಬೆಂಬಲಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಗಡಿಗಳ ಒಳಗೇ ಎಷ್ಟರಮಟ್ಟಿನ ನೈಜ ಸಾಮರ್ಥ್ಯ ನಿರ್ಮಾಣವಾಗಲಿದೆ ಎನ್ನುವುದನ್ನೂ ಗಮನಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಸಿ-130ಜೆ ತನ್ನ ಸಾಮರ್ಥ್ಯ ಮತ್ತು ಅನುಭವಗಳನ್ನು ಈಗಾಗಲೇ ಸಾಬೀತುಪಡಿಸಿದ್ದು, ಈಗಾಗಲೇ ಅದರ ಒಂದು ಬಳಗ ಸೇವೆ ಒದಗಿಸುತ್ತಿದೆ. ಕೆಸಿ-390 ಆಧುನಿಕ ವಿಮಾನವಾಗಿದ್ದು, ಸಂಪೂರ್ಣವಾಗಿ ಹೊಸದಾದ ಮಧ್ಯಮ ಗಾತ್ರದ ವಿಮಾನ ನಿರ್ಮಾಣ ಸಾಮರ್ಥ್ಯವನ್ನು ಮೂಲದಿಂದ ನಿರ್ಮಿಸಲು ಅವಕಾಶ ಮಾಡಿಕೊಡಲಿದೆ. ಎರಡು ವಿಮಾನಗಳೂ ತಮ್ಮದೇ ಆದ ಮೌಲ್ಯಗಳನ್ನು ಹೊಂದಿದ್ದು, ಭಿನ್ನವಾದ ಭವಿಷ್ಯದ ಭರವಸೆ ನೀಡಿವೆ. ಈಗ ಕೈಗೊಳ್ಳುವ ನಿರ್ಧಾರ ಕೇವಲ ಆಗಸದಲ್ಲಿರುವ ವಿಮಾನ ಬಳಗವನ್ನು ಮಾತ್ರವೇ ನಿರ್ಮಿಸುವುದಿಲ್ಲ. ಬದಲಿಗೆ, ಮುಂದಿನ 30 ವರ್ಷಗಳ ಕಾಲ ಭಾರತದಲ್ಲಿರುವ ಉದ್ಯಮವನ್ನೂ ನಿರ್ಧರಿಸಲಿದೆ.
ಈ ಆಯ್ಕೆ ಪ್ರಕ್ರಿಯೆಯೇ ಎರಡು ವರ್ಷಕ್ಕೂ ಹೆಚ್ಚಿನ ಸಮಯ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಇದಕ್ಕಾಗಿ ವಿಸ್ತೃತ ತಾಂತ್ರಿಕ ಮೌಲ್ಯಮಾಪನ, ಭಾರತೀಯ ವಾತಾವರಣದಲ್ಲಿ ಹಾರಾಟ ಪರೀಕ್ಷೆಗಳು ಮತ್ತು ವಾಣಿಜ್ಯಿಕ ಮಾತುಕತೆಗಳು ನಡೆಯಲಿವೆ. ಈ ಅವಧಿಯಲ್ಲಿ, ಸ್ಪರ್ಧಿಸುತ್ತಿರುವ ತಂಡಗಳು ತಮ್ಮ ತಂತ್ರಜ್ಞಾನ ವರ್ಗಾವಣೆ, ಸ್ಥಳೀಯ ಉತ್ಪಾದನೆ ಮತ್ತು ಸುದೀರ್ಘ ಬೆಂಬಲದ ಭರವಸೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಹುದು. ಭಾರತೀಯ ಕಂಪೆನಿಗಳು ಈ ಸಮಯವನ್ನು ತಮ್ಮ ಉತ್ಪಾದನಾ ಸಾಮರ್ಥ್ಯ ವೃದ್ಧಿಸಲು ಮತ್ತು ಇನ್ನೂ ಹೆಚ್ಚು ಇಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ತರಬೇತುಗೊಳಿಸಲು ಬಳಸಬಹುದು.
ಫಲಿತಾಂಶದ ಘೋಷಣೆಯಾದಾಗ, ಭಾರತ ಕೇವಲ 60 ವಿಮಾನಗಳನ್ನು ಮಾತ್ರವೇ ಖರೀದಿಸುವುದಿಲ್ಲ. ಭಾರತ ನಮ್ಮ ವೈಮಾನಿಕ ಉದ್ಯಮದ ಮುಂದಿನ ಸ್ತಂಭಗಳನ್ನು ಎತ್ತರಿಸಬಲ್ಲ ಸಹಯೋಗಿಗಳನ್ನು ಆರಿಸಲಿದೆ. ಹಳೆಯದಾದ ಎಎನ್-32 ವಿಮಾನ ತನ್ನ ಕರ್ತವ್ಯವನ್ನು ಪೂರೈಸಿದೆ. ಭಾರತದ ನೈಜ ಗೆಲುವು ಇಲ್ಲುಳಿದ ಕಾರ್ಖಾನೆಗಳು ಮತ್ತು ಕೌಶಲಗಳಲ್ಲಿ ಅಡಗಿದೆ.






