ಭಾರತದ ಚುನಾವಣಾ ಪ್ರಕ್ರಿಯೆಗಳನ್ನೇ ಬದಲಿಸುತ್ತಿರುವ ಎಐ!

ಎಐ ಮಹತ್ತರ ಅವಕಾಶಗಳು ಮತ್ತು ಗಂಭೀರ ಅಪಾಯಗಳು ಎರಡನ್ನೂ ತಂದೊಡ್ಡುತ್ತವೆ. ಎಐ ಸಂವಹನವನ್ನೇನೋ ಉತ್ತಮಗೊಳಿಸುತ್ತದೆ. ಆದರೆ, ಇದು ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡಿ, ತಪ್ಪು ಮಾಹಿತಿಗಳನ್ನು ಹರಡಿ, ನಂಬಿಕೆ, ವಿಶ್ವಾಸಗಳನ್ನು ದುರ್ಬಲಗೊಳಿಸುವ ಸಾಧ್ಯತೆಗಳೂ ಇವೆ. ಎಐಯ ಪ್ರಯೋಜನಗಳನ್ನು ಬಳಸಿಕೊಂಡು, ಚುನಾವಣೆಗಳು ನ್ಯಾಯಯುತ ಮತ್ತು ಪ್ರಾಮಾಣಿಕವಾಗಿ ನಡೆಯುವಂತೆ ಮಾಡುವುದು ಈಗ ಭಾರತದ ಮುಂದಿರುವ ಸವಾಲಾಗಿದೆ.
ತಾನೇ ಸ್ವತಃ ಬರಹ, ಚಿತ್ರಗಳು, ವೀಡಿಯೊಗಳು, ಧ್ವನಿಗಳನ್ನು ಸೃಷ್ಟಿಸಬಲ್ಲ ಕೃತಕ ಬುದ್ಧಿಮತ್ತೆ (ಎಐ) ಈಗ ನಿಧಾನವಾಗಿ ಭಾರತದ ಚುನಾವಣಾ ಪ್ರಚಾರದ ಜಗತ್ತನ್ನೂ ಪ್ರವೇಶಿಸುತ್ತಿದೆ. ರಾಜಕೀಯ ಪಕ್ಷಗಳು ಮತದಾರರೊಡನೆ ಮಾತನಾಡುವ ಮತ್ತು ಅವರ ಅಭಿಪ್ರಾಯಗಳ ಮೇಲೆ ಪ್ರಭಾವ ಬೀರುವ ವಿಧಾನವನ್ನೇ ಎಐ ಬದಲಿಸುತ್ತಿದೆ. ಈ ಹಿಂದೆ, ರಾಜಕೀಯ ಪಕ್ಷಗಳು ಜನರ ಮೇಲೆ ಪ್ರಭಾವ ಬೀರಲು ಪೋಸ್ಟರ್ಗಳು, ರ್ಯಾಲಿಗಳು, ಮನೆ ಮನೆಗೆ ಭೇಟಿಯಂತಹ ವಿಧಾನಗಳನ್ನು ಅನುಸರಿಸುತ್ತಿದ್ದವು. ಆದರೆ ಈಗ, ರಾಜಕೀಯ ಪಕ್ಷಗಳಿಗೆ ಕಾರ್ಯತಂತ್ರ ರೂಪಿಸಲು, ಸಂದೇಶ ಹಂಚಲು ಮತ್ತು ಮತ ಚಲಾಯಿಸುವ ಮುನ್ನ ಜನರು ಹೇಗೆ ಯೋಚಿಸಬೇಕು ಎನ್ನುವುದನ್ನು ರೂಪಿಸಲು ಎಐ ನೆರವಾಗುತ್ತಿದೆ. ಎಐ ಈಗ ಆಧುನಿಕ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ನಿಖರತೆ, ವಿಶಾಲ ವ್ಯಾಪ್ತಿ ಮತ್ತು ವೈಯಕ್ತಿಕ ಮಟ್ಟದ ಸಂವಹನವನ್ನು ಒದಗಿಸುತ್ತಿದೆ.
ಇದರಲ್ಲಿನ ಬಹುದೊಡ್ಡ ಬದಲಾವಣೆ ಎಂದರೆ, ಚುನಾವಣಾ ಪ್ರಚಾರಗಳು ಜನರೊಡನೆ ಹೇಗೆ ಸಂಪರ್ಕ ಬೆಳೆಸುತ್ತವೆ ಎನ್ನುವುದಾಗಿದೆ. ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ನ ಉಪನ್ಯಾಸಕ ಫ್ಲೋರಿಯಾನ್ ಫೂಸ್ ಅವರ ಪ್ರಕಾರ, ಎಐ ರಾಜಕೀಯ ಪಕ್ಷಗಳಿಗೆ ಇಮೇಲ್ ಮತ್ತು ಸಂದೇಶಗಳನ್ನು ಕ್ಷಿಪ್ರವಾಗಿ ಬರೆಯಲು ನೆರವಾಗಿ, ವೆಚ್ಚವನ್ನು ಕಡಿತಗೊಳಿಸಲು ನೆರವಾಗುತ್ತದೆ. ಜನರು ಬಹಳಷ್ಟು ವಿಭಿನ್ನವಾದ ಭಾಷೆಗಳನ್ನು ಮಾತನಾಡುವ ಭಾರತದಂತಹ ದೇಶದಲ್ಲಿ, ಬಹುಭಾಷಾ ಎಐ ಅತ್ಯಂತ ಉಪಯುಕ್ತವಾಗಿದೆ. ಒಂದೇ ಸಂದೇಶವನ್ನು ಹಿಂದಿ, ಕನ್ನಡ, ತಮಿಳು, ಬೆಂಗಾಲಿ ಅಥವಾ ಮರಾಠಿ ಭಾಷೆಗಳಲ್ಲಿ ಕಳುಹಿಸಬಹುದು. ಈ ಮೂಲಕ ನಾಯಕರು ವಿವಿಧ ಪ್ರದೇಶಗಳು ಮತ್ತು ವಿವಿಧ ಸಂಸ್ಕೃತಿಗಳ ಜನರೊಡನೆ ನೇರವಾಗಿ ಸಂವಹನ ನಡೆಸಬಹುದು.
ಇದಕ್ಕೆ ಭಾಷಾಂತರಕ್ಕೆ ಎಐಯನ್ನು ಬಳಸಿಕೊಳ್ಳುವ ಭಾರತ ಸರಕಾರದ ಯೋಜನೆಯಾದ ‘ಭಾಷಿಣಿ’ ಉತ್ತಮ ಉದಾಹರಣೆಯಾಗಿದೆ. ಡಿಸೆಂಬರ್ 18, 2023ರಂದು ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ‘ಕಾಶಿ ತಮಿಳು ಸಂಗಮಂ’ ಸಮಾರಂಭದಲ್ಲಿನ ತನ್ನ ಭಾಷಣದ ವೇಳೆ ಭಾಷಿಣಿಯನ್ನು ಬಳಸಿದಾಗ ಅದು ಮೊದಲ ಬಾರಿಗೆ ಕಾಣಿಸಿಕೊಂಡಿತು. ಪ್ರಧಾನಿಯವರು ಮಾತನಾಡುತ್ತಿದ್ದಂತೆ, ಈ ಎಐ ಟೂಲ್ ನೇರವಾಗಿ, ನೈಜ ಸಮಯದಲ್ಲಿ ಅವರ ಹಿಂದಿ ಭಾಷಣವನ್ನು ತಮಿಳಿಗೆ ಭಾಷಾಂತರ ಮಾಡುತ್ತಿತ್ತು. ಇದರಿಂದ ಕೇಳುಗರಿಗೆ ಪ್ರಧಾನಿಯವರು ಮಾತನಾಡುತ್ತಿದ್ದಂತೆಯೇ ಅರ್ಥವಾಗುತ್ತಿತ್ತು. ಇದು ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಎಐ ಭಾಷಾ ಅಡೆತಡೆಗಳನ್ನು ಹೇಗೆ ಭೇದಿಸಬಲ್ಲದು ಎನ್ನುವುದನ್ನು ಪ್ರದರ್ಶಿಸಿದೆ.
ಇಂತಹ ಎಐ ಟೂಲ್ಗಳಿಂದ, ಚುನಾವಣಾ ಪ್ರಚಾರಗಳು ಒಂದೇ ಸಂದೇಶವನ್ನು ಎಲ್ಲರಿಗೂ ಕಳುಹಿಸುವುದಿಲ್ಲ. ಬದಲಿಗೆ, ಸ್ಥಳೀಯ ವಿಚಾರಗಳ ಕುರಿತು ಮತ್ತು ಯುವ ಮತದಾರರತ್ತ ಗಮನ ಹರಿಸುವ ಸಲುವಾಗಿ ವಿಭಿನ್ನ ಸಂದೇಶಗಳನ್ನು ವಿಭಿನ್ನ ಗುಂಪುಗಳಿಗೆ ಕಳುಹಿಸಲು ಎಐ ನೆರವಾಗುತ್ತದೆ. ವಿಭಿನ್ನ ಮತದಾರರ ಗುಂಪುಗಳಿಗೆ ವೈಯಕ್ತಿಕವಾದ ಸಂದೇಶ ಕಳುಹಿಸುವ ಸಲುವಾಗಿ ನಾಯಕರ ಎಐ ನಿರ್ಮಿತ ವೀಡಿಯೊಗಳು ಭಾರತದಲ್ಲಿ ಈಗಾಗಲೇ ಬಳಕೆಯಲ್ಲಿವೆ. ಇದು ಚುನಾವಣಾ ಪ್ರಚಾರಗಳನ್ನು ಬಹಳಷ್ಟು ಸ್ಮಾರ್ಟ್ ಆಗಿಸುವುದೇನೋ ನಿಜ. ಆದರೆ, ರಾಜಕೀಯ ಪಕ್ಷಗಳು ವೈಯಕ್ತಿಕ ಮತದಾರರ ಸಂಪರ್ಕ ಮಾಹಿತಿಗಳನ್ನೂ ಹೊಂದಿದಾಗ, ಇಂತಹ ಸಾಮರ್ಥ್ಯ ಖಾಸಗಿತನ ಮತ್ತು ವೈಯಕ್ತಿಕ ಮಾಹಿತಿಗಳ ದುರ್ಬಳಕೆಯ ಕುರಿತೂ ಅನುಮಾನಗಳನ್ನು ಮೂಡಿಸುತ್ತದೆ.
ಇದರೊಡನೆ, ಎಐ ಒಂದು ಉಪಯುಕ್ತ ಪ್ರಚಾರ ಸಹಾಯಕನಂತೆಯೂ ಕೆಲಸ ಮಾಡುತ್ತದೆ. ಎಐ ತಾನೇ ಸ್ಕ್ರಿಪ್ಟ್ ಬರೆದು, ಮಾಹಿತಿಗಳನ್ನು ಒದಗಿಸಿ, ಬರಹ ಮತ್ತು ಧ್ವನಿಗಳನ್ನು ಭಾಷಾಂತರಿಸಿ, ಸಂವಹನ ಪ್ರಕ್ರಿಯೆಯಲ್ಲಿ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುತ್ತದೆ. ಬ್ರಿಟನ್ನಲ್ಲಿ ಚುನಾವಣಾ ಪ್ರಚಾರ ಪ್ರಕ್ರಿಯೆಗಳಲ್ಲಿ ಚುನಾವಣಾ ಕಾರ್ಯದಲ್ಲಿರುವವರು ಮತದಾರರೊಡನೆ ಹೇಗೆ ಸಂವಹಿಸಬೇಕು ಎಂದು ತರಬೇತಿ ನೀಡಲು ‘ಡೋರ್ ನಾಕಿಂಗ್ ಬಾಟ್’ಗಳನ್ನು ನಿರ್ಮಿಸಲಾಗಿದೆ. ಅಮೆರಿಕದಲ್ಲಿನ ಅಧ್ಯಯನಗಳಂತೂ ಸರಳ ಚಾಟ್ಬಾಟ್ಗಳು ಜನರ ಪ್ರಶ್ನೆಗಳಿಗೆ ಉತ್ತರಿಸಿ, ಎಲ್ಲಿ ಮತ್ತು ಹೇಗೆ ಮತ ಚಲಾಯಿಸಬೇಕು ಎಂದು ಮಾಹಿತಿ ನೀಡಿ, ಹೆಚ್ಚಿನ ಜನರು ಮತ ಚಲಾಯಿಸುವಂತೆ ಮಾಡಬಲ್ಲವು ಎಂದು ಸಾಬೀತುಪಡಿಸಿದೆ.
ಹಾಗೆಂದು ಇಲ್ಲಿ ಸವಾಲುಗಳೂ ಇವೆ. ಬಹಳಷ್ಟು ಜನರು ಮತ್ತು ಮಾಧ್ಯಮ ಸಂಸ್ಥೆಗಳು ಎಐ ಆಧಾರಿತ ಸಂದೇಶಗಳು ವಾಸ್ತವ ಮತ್ತು ನಂಬಿಕಾರ್ಹವೇ ಎನ್ನುವ ಅನುಮಾನಗಳನ್ನು ಹೊಂದಿವೆ. ಕೆಲವು ಬಾರಿ ಎಐ ಉತ್ಪನ್ನಗಳು ತಪ್ಪು ಮಾಹಿತಿ ಅಥವಾ ಗೊಂದಲಮಯ ಮಾಹಿತಿಗಳನ್ನು ಒದಗಿಸುತ್ತವೆ. ಇದನ್ನು ‘ಎಐ ಹ್ಯಾಲುಸಿನೇಶನ್’ ಎಂದು ಕರೆಯಲಾಗುತ್ತದೆ. ಇಲ್ಲಿ ಎಐ ಸಿಸ್ಟಮ್ಗಳು ತಾವಾಗಿಯೇ ತಪ್ಪುಗಳನ್ನು ತುರುಕುತ್ತವೆ. ಇದರಿಂದ ಸತ್ಯವಲ್ಲದ ಮಾಹಿತಿಗಳು ಹರಿದಾಡಿ, ಮತದಾರರಲ್ಲಿ ಗೊಂದಲ ಮೂಡಿಸಬಹುದು. ಪ್ರಚಾರ ತಂಡಗಳೂ ನಿಧಾನವಾಗಿ ಜನರನ್ನು ತಲುಪುವ ತಮ್ಮ ಸಂದೇಶಗಳ ಮೇಲೆ ನಿಯಂತ್ರಣ ಕಳೆದುಕೊಳ್ಳಬಹುದು.
ಎಐ ಮತದಾರರ ಮನ ಒಲಿಸುವಲ್ಲಿ ಪ್ರಮುಖ ಉಪಕರಣಗಳಾಗುತ್ತಿವೆ. ದೊಡ್ಡ ಎಐ ಭಾಷಾ ಮಾಡೆಲ್ಗಳು ಈಗ ವಿವಿಧ ಭಾಷೆಗಳಲ್ಲಿ ಸ್ವತಃ ಮಾನವರೇ ಬರೆಯುವಷ್ಟು ಪರಿಣಾಮಕಾರಿಯಾದ ಚುನಾವಣಾ ಪ್ರಚಾರ ಸಂದೇಶಗಳನ್ನು ಬರೆಯಬಲ್ಲವು. ಅಮೆರಿಕದಲ್ಲಿ, ಸೊಗಸಾದ, ಸ್ಥಳೀಯ ಶೈಲಿಯಲ್ಲಿ ರಚಿತವಾದ ಸ್ಪ್ಯಾನಿಷ್ ಸಂದೇಶಗಳು ಇಂಗ್ಲಿಷ್ ಸಂದೇಶಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಹಿಸ್ಪಿಯಾನಿಕ್ ಮತದಾರರನ್ನು ತಲುಪಿವೆ. ಎಐ ಅವಶ್ಯಕತೆಗೆ ತಕ್ಕಂತಹ ವೀಡಿಯೊಗಳು, ಧ್ವನಿ ಮತ್ತು ಚಿತ್ರಗಳನ್ನು ನಿರ್ಮಿಸಿ, ಅವುಗಳನ್ನು ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸ್ಆ್ಯಪ್ನಂತಹ ಆ್ಯಪ್ಗಳಲ್ಲಿ ಕಳುಹಿಸಲು ನೆರವಾಗುತ್ತದೆ. ಏಕಕಾಲದಲ್ಲಿ ಅತಿದೊಡ್ಡ ಸಂಖ್ಯೆಯ ಜನರಿಗೆ ನಿರಂತರವಾಗಿ ಸಂದೇಶಗಳನ್ನು ಕಳುಹಿಸುವುದು, ದೀರ್ಘಕಾಲಿಕ ವಿಶ್ವಾಸ ಮೂಡಿಸಲು ನೆರವಾಗುವುದು ಇದರ ಬಹುದೊಡ್ಡ ಸಾಮರ್ಥ್ಯ.
ಇನ್ನೊಂದು ಗಂಭೀರ ವಿಚಾರವೆಂದರೆ, ಸಾಮಾಜಿಕ ಜಾಲತಾಣ ಬಾಟ್ಗಳು. ಈ ಸ್ವಯಂಚಾಲಿತ ನಕಲಿ ಖಾತೆಗಳ ಜಾಲಗಳು ಭಾರೀ ಸಂಖ್ಯೆಯಲ್ಲಿ ಪೋಸ್ಟ್, ಲೈಕ್, ಶೇರ್ ಮತ್ತು ಕಮೆಂಟ್ಗಳನ್ನು ಮಾಡಬಲ್ಲವು. ವಾಸ್ತವ ಅಭಿಪ್ರಾಯ ಏನೇ ಇದ್ದರೂ, ಇಂತಹ ಬಹಳಷ್ಟು ನಕಲಿ ಖಾತೆಗಳನ್ನು ಬಳಸುವ ಸಣ್ಣ ಗುಂಪು ಒಂದು ಅಭಿಪ್ರಾಯವನ್ನು ಅತ್ಯಂತ ಜನಪ್ರಿಯವಾಗುವಂತೆ, ಅತ್ಯಂತ ದ್ವೇಷ ಎದುರಿಸುವಂತೆ ಮಾಡಬಲ್ಲವು. ಆಧುನಿಕ ಎಐ ಭಾವನೆಗಳು, ಮಾತಿನ ಶೈಲಿಯನ್ನು ಅನುಕರಿಸಿ, ಇಂತಹ ಬಾಟ್ಗಳು ನೈಜ ಮಾನವರಂತೆ ವರ್ತಿಸುವಂತೆ ಮಾಡುತ್ತದೆ. ಆದ್ದರಿಂದ ಇಂತಹ ಬಾಟ್ಗಳನ್ನು ಗುರುತಿಸುವುದು ಅತ್ಯಂತ ಕಷ್ಟಕರವಾಗುತ್ತದೆ. ಎಐ ನೈಜ ಎನಿಸುವ ಚಿತ್ರಗಳು, ಹೆಸರುಗಳು ಮತ್ತು ಮಾಹಿತಿಗಳನ್ನು ಬಳಸಿಕೊಂಡು, ನಕಲಿ ಖಾತೆಗಳನ್ನು ಸೃಷ್ಟಿಸಬಲ್ಲವು. 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ, ಇಂತಹ ಬಹಳಷ್ಟು ಬಾಟ್ಗಳು ರಾಜಕೀಯ ಚರ್ಚೆಗಳ ಮೇಲೆ ಪ್ರಭಾವ ಬೀರಿ, ರಹಸ್ಯವಾಗಿಯೇ ಸಾರ್ವಜನಿಕ ಅಭಿಪ್ರಾಯ ಮೂಡಿಸಲು ಪ್ರಯತ್ನ ನಡೆಸಿದ್ದವು.
ಇಂತಹ ಅಪಾಯಗಳ ಕಾರಣದಿಂದ, ನಿಯಮಗಳು ಮತ್ತು ನಿರ್ವಹಣೆ ಅತ್ಯಂತ ಮುಖ್ಯವಾಗಿವೆ. ಸರಕಾರಗಳು, ತಂತ್ರಜ್ಞಾನ ತಜ್ಞರು ಮತ್ತು ಸಾಮಾಜಿಕ ಗುಂಪುಗಳು ಜೊತೆಯಾಗಿ ಕಾರ್ಯಾಚರಿಸಿ, ಎಐ ನ್ಯಾಯಯುತ ಮತ್ತು ಪ್ರಾಮಾಣಿಕವಾಗಿ ಬಳಕೆಯಾಗುವಂತೆ ಮಾಡಬೇಕು. ಎಐ ಅಪಾಯಗಳು ಇಂದು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಹಬ್ಬುವುದರಿಂದ, ಅಂತರ್ರಾಷ್ಟ್ರೀಯ ಸಹಕಾರವೂ ಅವಶ್ಯಕ. ಎಥಿಕಲ್ ಎಐ ಎನ್ನುವುದು ಆರಂಭದಿಂದಲೂ ನ್ಯಾಯಪರತೆ, ಹೊಣೆಗಾರಿಕೆ ಮತ್ತು ಪಾರದರ್ಶಕತೆಯತ್ತ ಗಮನ ಹರಿಸಬೇಕು. ಐರೋಪ್ಯ ಒಕ್ಕೂಟದಲ್ಲಿರುವ ಜಿಡಿಪಿಆರ್ (ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಶನ್) ರೀತಿಯ ಕಾನೂನುಗಳು ವೈಯಕ್ತಿಕ ಮಾಹಿತಿಗಳನ್ನು ರಕ್ಷಿಸುತ್ತವೆ. ಇದೇ ವೇಳೆ, ಇಯು ಎಥಿಕ್ಸ್ ಗೈಡ್ಲೈನ್ಸ್ ಫಾರ್ ಟ್ರಸ್ಟ್ವರ್ದಿ ಎಐ, ಜವಾಬ್ದಾರಿಯುತ ಬಳಕೆಗೆ ಮಾರ್ಗದರ್ಶನ ನೀಡುತ್ತವೆ.
ಇಂದಿಗೂ ನೈಜ ಮಾಹಿತಿ ಮತ್ತು ಎಐ ಮಾಹಿತಿಯ ನಡುವಿನ ವ್ಯತ್ಯಾಸ ಕಂಡುಹಿಡಿಯುವುದು ಬಹಳ ಕಷ್ಟಕರವಾಗಿದೆ. ಇದನ್ನು ಪರಿಹರಿಸಲು, ಡಿಜಿಟಲ್ ವಾಟರ್ಮಾರ್ಕ್, ವಿಧಿವಿಜ್ಞಾನ ವಿಶ್ಲೇಷಣೆ ಮತ್ತು ಎಐ ಬಳಕೆ ಪತ್ತೆಯಂತಹ ವ್ಯವಸ್ಥೆಗಳು ಬಳಕೆಯಾಗುತ್ತಿವೆ. ಜಾಗೃತಿ ಮತ್ತು ಶಿಕ್ಷಣ ಅತ್ಯಂತ ಮಹತ್ವದ್ದಾಗಿದ್ದು, ಇದರಿಂದ ಜನರು ಡೀಪ್ಫೇಕ್ ಪತ್ತೆಹಚ್ಚಲು, ನಕಲಿ ಖಾತೆಗಳನ್ನು ಗುರುತಿಸಲು ಮತ್ತು ಸುದ್ದಿಗಳು ನಂಬಿಕಾರ್ಹವೇ ಎಂದು ಗುರುತಿಸಲು ಸಾಧ್ಯವಾಗುತ್ತದೆ.
ಅಂತಿಮವಾಗಿ, ಎಐ ಮಹತ್ತರ ಅವಕಾಶಗಳು ಮತ್ತು ಗಂಭೀರ ಅಪಾಯಗಳು ಎರಡನ್ನೂ ತಂದೊಡ್ಡು ತ್ತವೆ. ಎಐ ಸಂವಹನವನ್ನೇನೋ ಉತ್ತಮಗೊಳಿಸುತ್ತದೆ. ಆದರೆ, ಇದು ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡಿ, ತಪ್ಪು ಮಾಹಿತಿಗಳನ್ನು ಹರಡಿ, ನಂಬಿಕೆ, ವಿಶ್ವಾಸಗಳನ್ನು ದುರ್ಬಲಗೊಳಿಸುವ ಸಾಧ್ಯತೆಗಳೂ ಇವೆ. ಎಐಯ ಪ್ರಯೋಜನಗಳನ್ನು ಬಳಸಿಕೊಂಡು, ಚುನಾವಣೆಗಳು ನ್ಯಾಯಯುತ ಮತ್ತು ಪ್ರಾಮಾಣಿಕವಾಗಿ ನಡೆಯುವಂತೆ ಮಾಡುವುದು ಈಗ ಭಾರತದ ಮುಂದಿರುವ ಸವಾಲಾಗಿದೆ.






