ಎಐ ಉದ್ಯೋಗ ಕಡಿತ: ಶಾಂತವಾಗಿದೆಯೇ ಭಾರತ?

ಮುಂದಿನ 20 ವರ್ಷಗಳ ಅವಧಿಯಲ್ಲಿ, ನಿಮ್ಮ ದೇಶದಲ್ಲಿನ ಉದ್ಯೋಗಗಳ ಪ್ರಮಾಣವನ್ನು ಎಐ ಕಡಿತಗೊಳಿಸಲಿದೆಯೇ ಎನ್ನುವ ಪ್ರಶ್ನೆಗೆ ಕೇವಲ ಶೇ. 29 ಭಾರತೀಯರು ಮಾತ್ರವೇ ಹೌದು ಎನ್ನುವ ಉತ್ತರ ನೀಡಿದ್ದಾರೆ. ಕೇವಲ ಶೇ. 21 ಜನರು ಮಾತ್ರ ಎಐ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಎಐ ಚಾಲಿತ ಉದ್ಯೋಗ ನಷ್ಟದ ಕುರಿತು ಭಾರತದಲ್ಲಿ ಎಷ್ಟು ಕನಿಷ್ಠ ಪ್ರಮಾಣದ ಆತಂಕವಿದೆ ಎನ್ನುವುದು ಈ ಅಧ್ಯಯನದಲ್ಲಿ ಎದ್ದು ಕಾಣುವ ಅಂಶವಾಗಿತ್ತು.
ಯಾವುದೋ ಒಂದು ಬಿರುಗಾಳಿ ದೇಶಕ್ಕೆ ಅಪ್ಪಳಿಸಲಿದೆ ಎಂದು ಕೆಲವು ಜನರಷ್ಟೇ ನಂಬಿರುವಾಗ, ಆ ದೇಶ ಅಂತಹ ಬಿರುಗಾಳಿಗೆ ಸಿದ್ಧತೆ ನಡೆಸುವ ಸಾಧ್ಯತೆಗಳು ಅತ್ಯಂತ ಕಡಿಮೆ. ಆ ಒಂದು ಸರಳ ಸತ್ಯವೇ ಈಗ ಕೃತಕ ಬುದ್ಧಿಮತ್ತೆಯ (ಎಐ) ಕುರಿತಂತೆ ನಡೆಸಿರುವ ಒಂದು ಜಾಗತಿಕ ಸಮೀಕ್ಷೆಯ ಕೇಂದ್ರ ಸ್ಥಾನದಲ್ಲಿದೆ. ಈ ಸಮೀಕ್ಷೆ ಭಾರತವನ್ನು ಒಂದು ನಂಬಿಕೆಯ ಮತ್ತು ಅಷ್ಟೇ ಚಿಂತನೀಯ ಸ್ಥಾನದಲ್ಲಿ ಇರಿಸಿದೆ.
ಪ್ಯೂ ರಿಸರ್ಚ್ ಸೆಂಟರ್ ಎನ್ನುವ ಸಂಸ್ಥೆ ನಡೆಸಿರುವ ಅಧ್ಯಯನ, ಫೆಬ್ರವರಿ ತಿಂಗಳಿಂದ ಮೇ ನಡುವೆ 37 ದೇಶಗಳ ಜನರನ್ನು ಪ್ರಶ್ನಿಸಿದ್ದು, ತನ್ನ ಅಧ್ಯಯನದ ಫಲಿತಾಂಶಗಳನ್ನು ಸೆಪ್ಟಂಬರ್ 17ರಂದು ಬಿಡುಗಡೆಗೊಳಿಸಿತು. ಮುಂದಿನ 20 ವರ್ಷಗಳ ಅವಧಿಯಲ್ಲಿ, ನಿಮ್ಮ ದೇಶದಲ್ಲಿನ ಉದ್ಯೋಗಗಳ ಪ್ರಮಾಣವನ್ನು ಎಐ ಕಡಿತಗೊಳಿಸಲಿದೆಯೇ ಎನ್ನುವ ಪ್ರಶ್ನೆಗೆ ಕೇವಲ ಶೇ. 29 ಭಾರತೀಯರು ಮಾತ್ರವೇ ಹೌದು ಎನ್ನುವ ಉತ್ತರ ನೀಡಿದ್ದಾರೆ. ಕೇವಲ ಶೇ. 21 ಜನರು ಮಾತ್ರ ಎಐ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಎಐ ಚಾಲಿತ ಉದ್ಯೋಗ ನಷ್ಟದ ಕುರಿತು ಭಾರತದಲ್ಲಿ ಎಷ್ಟು ಕನಿಷ್ಠ ಪ್ರಮಾಣದ ಆತಂಕವಿದೆ ಎನ್ನುವುದು ಈ ಅಧ್ಯಯನದಲ್ಲಿ ಎದ್ದು ಕಾಣುವ ಅಂಶವಾಗಿತ್ತು.
ಜಗತ್ತಿನ ಇತರ ರಾಷ್ಟ್ರಗಳ ಫಲಿತಾಂಶದೊಡನೆ ಹೋಲಿಸಿ ನೋಡಿದಾಗ, ಈ ವ್ಯತ್ಯಾಸ ದೊಡ್ಡದಾಗಿ ಕಾಣಿಸುತ್ತದೆ. ಆಸ್ಟ್ರೇಲಿಯ ಮತ್ತು ದಕ್ಷಿಣ ಕೊರಿಯಾಗಳಲ್ಲಿ ಶೇ. 76 ಜನರು ಎಐನಿಂದ ಉದ್ಯೋಗ ಕಡಿತವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕದಲ್ಲಿ ಈ ಪ್ರಮಾಣ ಶೇ. 71 ಇದೆ. ಇನ್ನು ಕೆನಡಾ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್ ಮತ್ತು ಜರ್ಮನಿಗಳಲ್ಲಿ ಶೇ. 51ರಿಂದ ಶೇ. 61 ಜನರು ಎಐನಿಂದ ಉದ್ಯೋಗ ನಷ್ಟವಾಗಲಿದೆ ಎಂದು ಭಾವಿಸಿದ್ದಾರೆ. ಭಾರತದಲ್ಲಿ ದಾಖಲಾಗಿರುವ ಶೇ. 29 ಅಭಿಪ್ರಾಯ ಎಐನಿಂದ ಉದ್ಯೋಗ ನಷ್ಟದ ಕುರಿತ ಎರಡನೇ ಅತ್ಯಂತ ಕನಿಷ್ಠ ಸಂಖ್ಯೆಯ ಊಹೆಯಾಗಿದ್ದು, ನೈಜೀರಿಯಾದ ನಂತರದ ಸ್ಥಾನದಲ್ಲಿದೆ. ನೈಜೀರಿಯಾದಲ್ಲಿ ಮಾತ್ರ ಜನರು ಎಐ ಉದ್ಯೋಗ ಕಳೆಯುವ ಬದಲು, ಉದ್ಯೋಗ ಸೃಷ್ಟಿಸಲಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಯಾನ್ ವರದಿಯ ಪ್ರಕಾರ, ಭಾರತ ಮತ್ತು ಶ್ರೀಮಂತ ದೇಶಗಳ ಅಭಿಪ್ರಾಯದ ನಡುವಿನ ವ್ಯತ್ಯಾಸವೇ ಈ ಅಂಕಿ ಸಂಖ್ಯೆಗಳ ಹಿಂದಿರುವ ನೈಜ ಕಥೆಯಾಗಿದೆ.
ಈ ನಿರಾತಂಕ ಏಕೆ ಎಲ್ಲರಿಗೂ ಗಾಬರಿ ಮೂಡಿಸಬೇಕು? ಎಐ ಎನ್ನುವುದನ್ನು ಒಂದು ಚೂರೂ ಸುಸ್ತಿಲ್ಲದೆ, ನಿದ್ದೆಯೇ ಮಾಡದೆ ಕಾರ್ಯಾಚರಿಸುವ ಕಚೇರಿ ಸಹಾಯಕ ಎಂದುಕೊಳ್ಳಿ. ಇದು ಸ್ಕ್ರೀನ್ ಆಧಾರಿತ, ಪುನರಾವರ್ತಿತ ಕಾರ್ಯಗಳಾದ ಮೊದಲ ಡ್ರಾಫ್ಟ್ ಬರೆಯುವುದು, ಕಂಪ್ಯೂಟರ್ ಕೋಡ್ ಬರೆಯುವುದು, ಮಾಹಿತಿ ವಿಶ್ಲೇಷಣೆ, ಗ್ರಾಹಕರ ಸವಾಲುಗಳನ್ನು ಉತ್ತರಿಸುವುದು, ಮತ್ತು ದೈನಂದಿನ ಆಡಳಿತದ ಕೆಲಸಗಳನ್ನು ನಿರ್ವಹಿಸುವುದು ಮುಂತಾದ ಕೆಲಸಗಳಲ್ಲಿ ಅತ್ಯಂತ ಸಮರ್ಥವಾಗಿದೆ. ಈ ಕೆಲಸಗಳೇ ಭಾರತದ ಐಟಿ ಸೇವೆಗಳು ಮತ್ತು ಉದ್ಯಮ ವ್ಯವಹಾರ ಔಟ್‌ಸೋರ್ಸಿಂಗ್ ವಲಯದಲ್ಲಿ ನಡೆಯುವ ದೈನಂದಿನ ಕಾರ್ಯಗಳಾಗಿವೆ. ಈ ವಲಯ ಲಕ್ಷಾಂತರ ಭಾರತೀಯರಿಗೆ ಜೀವನೋಪಾಯ ಕಲ್ಪಿಸಿದ್ದು, ಅವರಿಗೆ ಹೆಚ್ಚು ಕುಶಲ, ಮೌಲ್ಯಯುತ ಕೆಲಸದತ್ತ ಹೆಜ್ಜೆ ಹಾಕಲು ನೆರವಾಗಿದೆ.
ಸರಳವಾಗಿ ವಿವರಿಸುವುದಾದರೆ, ಭಾರತ ಎಐನಿಂದ ಅತ್ಯಧಿಕ ಅಪಾಯಕ್ಕೆ ತೆರೆದುಕೊಂಡಿದ್ದರೂ, ಭಾರತೀಯರು ಕನಿಷ್ಠ ಪ್ರಮಾಣದ ಆತಂಕ ಹೊಂದಿದ್ದಾರೆ. ಅಮೆರಿಕ, ಆಸ್ಟ್ರೇಲಿಯ ಮತ್ತು ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳು ಹೆಚ್ಚು ಶ್ರೀಮಂತವಾಗಿದ್ದು, ಅವು ಎಐ ಕುರಿತು ಹೆಚ್ಚಿನ ಜ್ಞಾನ ಹೊಂದಿವೆ. ಆದ್ದರಿಂದ, ಎಐ ಹೇಗೆ ತಮ್ಮ ಉದ್ಯೋಗಗಳ ಮೇಲೆ ಪರಿಣಾಮ ಬೀರಬಲ್ಲದು ಎನ್ನುವುದನ್ನು ಅವರು ಹೆಚ್ಚು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದಾರೆ. ಈ ರೀತಿಯಾಗಿ ನೋಡಿದರೆ, ಭಾರತೀಯರು ನೀಡಿರುವ ಶೇ. 29 ಉದ್ಯೋಗ ಕಡಿತದ ಸಂಖ್ಯೆ ಒಂದು ದಿನ ಬಹಳ ಬೇಗನೆ ಮಾಡಿದ ಅಂದಾಜಿನಂತೆ ತೋರಬಹುದು.
ಇಷ್ಟಾದರೂ ಪ್ರಸ್ತುತ ಸಮೀಕ್ಷೆ ಒಂದೇ ಸಂಖ್ಯೆಯಲ್ಲಿ ಹೆಚ್ಚಿನ ಮಾಹಿತಿಗಳನ್ನು ಗಮನಿಸುವುದರ ಕುರಿತು ಎಚ್ಚರಿಕೆ ನೀಡಿದೆ. ಇನ್ನೂ ಶೇ. 12 ಜನರು ಎಐ ಸಣ್ಣಪುಟ್ಟ ವ್ಯತ್ಯಾಸ ಉಂಟುಮಾಡಬಹುದು ಎಂದಿದ್ದರೆ, ಶೇ. 35 ಜನರು ಎಐ ತಮ್ಮ ಉದ್ಯೋಗದ ಮೇಲೆ ಎಂತಹ ಪರಿಣಾಮ ಬೀರಬಹುದು ಎನ್ನುವುದೇ ತಿಳಿದಿಲ್ಲ ಎಂದಿದ್ದಾರೆ. ಇದು ಸಮೀಕ್ಷೆಗೆ ಒಳಪಟ್ಟ ಎಲ್ಲ ದೇಶಗಳ ಪೈಕಿ ಅತ್ಯಧಿಕ ಅನಿಶ್ಚಿತತೆಯ ಪ್ರಮಾಣವಾಗಿದೆ. ಎಐ ಕುರಿತಂತೆ ಭಾರತದಲ್ಲಿ ಜಾಗೃತಿಯ ಪ್ರಮಾಣ ಅತ್ಯಂತ ಕಡಿಮೆಯಿದೆ ಎಂದು ಪ್ಯೂ ಸಂಸ್ಥೆ ಅಭಿಪ್ರಾಯ ಪಟ್ಟಿದೆ. ಈ ಕುರಿತಂತೆ ಭಾರತದ ಮೌನ ಆತ್ಮವಿಶ್ವಾಸ ಖಂಡಿತ ಅಲ್ಲ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು ಎನ್ನುವುದು ಬಹಳಷ್ಟು ಜನರಿಗೆ ಇನ್ನೂ ಅನಿಸಿಲ್ಲ ಎನ್ನುವುದು ವಾಸ್ತವ.
ಈ ವ್ಯತ್ಯಾಸ ನಿಜಕ್ಕೂ ಬಹಳ ಮುಖ್ಯ. ಒಂದು ದೃಷ್ಟಿಕೋನ ಹೆಚ್ಚು ಸ್ಥಿರವಾಗಿಲ್ಲದಿದ್ದರೆ, ಜನರಿಗೆ ಹೆಚ್ಚಿನ ಅರಿವು ಮೂಡಿದಂತೆ ಅದು ಬದಲಾಗಬಲ್ಲದು. ಭಾರತೀಯರು ಬಹಳ ಆರಾಮಾಗಿದ್ದಾರೆ ಎನ್ನುವ ಹೇಳಿಕೆಗಳು ಬಹುಶಃ ಭಾರತೀಯರ ಭಾವನೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ತಪ್ಪು ಮಾಡಿರಲೂಬಹುದು. ಇನ್ನು ಪ್ರಶ್ನೆಯಲ್ಲಿ ಬಳಸಲಾದ ಪದಗಳೂ ಬಹಳ ಮುಖ್ಯವಾಗುತ್ತವೆ. 2025ರಲ್ಲಿ, ಜಾಗತಿಕ ಸಂಶೋಧನಾ ಸಂಸ್ಥೆಯಾದ ಇಪ್ಸೊಸ್ ನಡೆಸಿದ ಸಮೀಕ್ಷೆಯಲ್ಲಿ ಬಹುತೇಕ ಭಾರತೀಯರು ಎಐ ಭಾರೀ ಉದ್ಯೋಗ ಕಡಿತ ಮಾಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪ್ರಶ್ನೆ ಕೇಳುವ ರೀತಿ ಬದಲಾದಂತೆ, ಅದಕ್ಕೆ ಬರುವ ಉತ್ತರವೂ ಬದಲಾಗುತ್ತದೆ. ಇದು ಭಾರತೀಯರ ಅಭಿಪ್ರಾಯ ಈಗಿನ್ನೂ ರೂಪುಗೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಭಾರತೀಯರು ಎಐ ವಿಚಾರದಲ್ಲಿ ಗಂಭೀರತೆ ಹೊಂದಿಲ್ಲ ಎನ್ನುವುದು ನಿಜವಲ್ಲ. ಎಐ ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಬಹುದು ಎನ್ನುವ ಆತಂಕವನ್ನು ಬಹಳಷ್ಟು ಜನರು ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಉದ್ಯೋಗ ಕಡಿತವಾಗುವುದನ್ನು ಅವರು ಒಪ್ಪದಿದ್ದರೂ, ಒಂದು ತೀಕ್ಷ್ಣ ಪ್ರಶ್ನೆಯನ್ನು ಭಾರತೀಯರು ಕೇಳುತ್ತಿದ್ದಾರೆ. ಅದೇನೆಂದರೆ, ಎಐನಿಂದ ನಿಜಕ್ಕೂ ಲಾಭವಾಗುವುದು ಯಾರಿಗೆ? ಈ ಆತಂಕವೇ ಕೇವಲ ಉದ್ಯೋಗದ ಅಂಕಿಅಂಶಗಳ ಬದಲಿಗೆ ದೊಡ್ಡ ಚಿತ್ರಣವನ್ನು ಕಟ್ಟಿಕೊಡುತ್ತದೆ ಎಂದು ವಿಯಾನ್ ಹೇಳಿದೆ.
ಭಾರತೀಯರ ಆಶಾವಾದ ಏಕೆ ಸರಿಯಾಗಿರಬಹುದು ಎನ್ನುವುದಕ್ಕೆ ಇವು ಪ್ರಮುಖ ಅಂಶಗಳಾಗಿವೆ. ಬಹುತೇಕ ಭಾರತೀಯರು ಐಟಿ ಕಚೇರಿಗಳಲ್ಲಿ ಕುಳಿತಿರುವುದಿಲ್ಲ. ಭಾರತೀಯ ಉದ್ಯೋಗಿಗಳ ಪೈಕಿ ಒಂದು ಬಹುದೊಡ್ಡ ಪಾಲು ತನ್ನ ಜೀವನಕ್ಕಾಗಿ ಕೃಷಿ ಮತ್ತು ಅಸಾಂಪ್ರದಾಯಿಕ ಆರ್ಥಿಕತೆಯನ್ನು ಅವಲಂಬಿಸಿದೆ. ಕಾಲ್ ಸೆಂಟರ್ ಮತ್ತು ಕೋಡಿಂಗ್ ತಂಡಗಳನ್ನು ಎಐ ಪ್ರವೇಶಿಸಿದಷ್ಟು ಕ್ಷಿಪ್ರವಾಗಿ ಮತ್ತು ಸುಲಭವಾಗಿ ಈ ವಲಯಗಳನ್ನು ಅದು ಪ್ರವೇಶಿಸಲು ಸಾಧ್ಯವಿಲ್ಲ. ಭಾರತ ಯುವ ರಾಷ್ಟ್ರವಾಗಿದ್ದು, ನಮ್ಮ ಆರ್ಥಿಕತೆಯೂ ವೃದ್ಧಿಸುತ್ತಿದೆ. ಬೆಳೆಯುತ್ತಿರುವ ಆರ್ಥಿಕತೆ ಎಂದರೆ, ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹ ಹೊಂದಿರುವ ನದಿಯಂತಿರುತ್ತದೆ. ಎಐ ಕೆಲವು ಕಾಲುವೆಗಳನ್ನು ಬರಿದು ಮಾಡಿದರೂ, ಹೊಸದು ತೆರೆದುಕೊಳ್ಳುತ್ತವೆ. ಆದ್ದರಿಂದ, ಒಟ್ಟಾರೆ ಉದ್ಯೋಗಗಳು ಇನ್ನೂ ಹೆಚ್ಚುವ ಸಾಧ್ಯತೆಗಳಿವೆ. ಇನ್ನಷ್ಟು ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ನಿರೀಕ್ಷಿಸುವ ಉದ್ಯೋಗಿಯ ನಿರೀಕ್ಷೆ ತಪ್ಪು ಎನ್ನಲೂ ಸಾಧ್ಯವಿಲ್ಲ.
ಇನ್ನು ಶ್ರೀಮಂತ ದೇಶಗಳಲ್ಲಿನ ಆತಂಕಕ್ಕೆ ನಿಧಾನಗತಿಯ ಆರ್ಥಿಕ ಪ್ರಗತಿ ಮತ್ತು ದುರ್ಬಲ ಉದ್ಯೋಗ ಸೃಷ್ಟಿಗಳು ಕಾರಣವಾಗಿರಬಹುದೇ ಹೊರತು, ಕೇವಲ ಎಐ ಒಂದೇ ಅಲ್ಲ. ಪಾಶ್ಚಾತ್ಯ ಆತಂಕವನ್ನು ಹೊತ್ತು ತಂದು, ಭಾರತದಲ್ಲೂ ಹೀಗೇ ಆಗಬಹುದು ಎನ್ನುವುದು ತಪ್ಪಾದೀತು.
ಮುಂದೆ ಏನಾಗಲಿದೆ ಎನ್ನುವುದು ಮೂರು ಪ್ರಶ್ನೆಗಳನ್ನು ಮೂಡಿಸುತ್ತದೆ. ಎಐ ಕುರಿತು ಹೆಚ್ಚುತ್ತಿರುವ ಜಾಗೃತಿ ಭಾರತೀಯರ ಶೇ. 29 ಅಭಿಪ್ರಾಯವನ್ನು ಜಾಗತಿಕ ಮಟ್ಟದತ್ತ ಹೆಚ್ಚಿಸಬಹುದೇ? ಎಐಗೆ ತೆರೆದುಕೊಂಡಿರುವ ಐಟಿ ಸೇವೆಗಳು ಉದ್ಯೋಗ ಕಳೆದುಕೊಳ್ಳಲು ಆರಂಭಿಸಿ, ಇದರಿಂದ ಸಾರ್ವಜನಿಕ ಅಭಿಪ್ರಾಯ ಬದಲಾದೀತೇ? ನೀತಿ ನಿರೂಪಕರು ಇಂದಿನ ಶಾಂತಚಿತ್ತತೆಯನ್ನು ಧೈರ್ಯವಾಗಿ ಪರಿಗಣಿಸುತ್ತಾರೋ ಅಥವಾ ಒಂದು ಎಚ್ಚರಿಕೆಯ ರೂಪದಲ್ಲೋ? ಒಂದು ಕೀಬೋರ್ಡ್ ಮತ್ತು ಹೆಡ್‌ಸೆಟ್ ಮೇಲೆ ಜೀವನ ಆಧಾರಿತವಾಗಿರುವ ಭಾರತೀಯ ಕುಟುಂಬಗಳಿಗೆ ಈ ಪ್ರಶ್ನೆಯ ಉತ್ತರ ಬಹಳ ಮುಖ್ಯವಾಗುತ್ತದೆ. ಆದ್ದರಿಂದಲೇ, ಮುಂಬರುವ ಆಘಾತವೊಂದನ್ನು ನಿರೀಕ್ಷಿಸದ ದೇಶವೊಂದು ಅದಕ್ಕೆ ಸಿದ್ಧವಾಗುವ ಸಾಧ್ಯತೆಗಳು ಬಹಳ ಕಡಿಮೆ!






