Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅಂಬೇಡ್ಕರ್ ಸತ್ಯ...ಸಂಘಪರಿವಾರದ ಸುಳ್ಳು

ಅಂಬೇಡ್ಕರ್ ಸತ್ಯ...ಸಂಘಪರಿವಾರದ ಸುಳ್ಳು

ಇಂದು ಡಾ. ಅಂಬೇಡ್ಕರ್ ಜನ್ಮ ದಿನ

ಸಾಕ್ಯ ಸಮಗಾರಸಾಕ್ಯ ಸಮಗಾರ14 April 2025 8:36 AM IST
share
ಅಂಬೇಡ್ಕರ್ ಸತ್ಯ...ಸಂಘಪರಿವಾರದ ಸುಳ್ಳು
ಹಿಂದೂ ಮಹಾಸಭಾ ಅಥವಾ ಆರೆಸ್ಸೆಸ್‌ನಂತಹ ಪ್ರತಿಗಾಮಿ ಗುಂಪುಗಳೊಂದಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತಿಲ್ಲ ಮತ್ತು ಆರೆಸ್ಸೆಸ್ ಒಂದು ಅಪಾಯಕಾರಿ ಸಂಘಟನೆ. -ಡಾ. ಬಿ. ಆರ್. ಅಂಬೇಡ್ಕರ್

ಹಲವು ಸುಳ್ಳುಗಳನ್ನು ದಲಿತರ ಏಕತೆ ಒಡೆಯಲು, ದಲಿತರನ್ನು ಹಿಂದುತ್ವದ ಕಾಲ್ದಳಗಳನ್ನಾಗಿ ಮಾಡಿಕೊಳ್ಳಲು, ಮುಸ್ಲಿಮರ ವಿರುದ್ಧ ದಲಿತರನ್ನು ಎತ್ತಿಕಟ್ಟಲು ಕಳೆದ ಎರಡು ದಶಕದಿಂದಲೂ ಹರಿಯಬಿಡಲಾಗಿದೆ. ತಲೆಯಲ್ಲಿ ಮಿದುಳಿಲ್ಲದವರು ಮಾತ್ರ ಇಂತಹ ಸುಳ್ಳುಗಳನ್ನು ನಂಬುತ್ತಾರೆ. ನಿಜವಾದ ಅಂಬೇಡ್ಕರ್ ಅನುಯಾಯಿಗಳು ಅಂಬೇಡ್ಕರ್‌ರವರ ವಿರುದ್ಧ ಪುಸ್ತಕ ಬರೆಸಿದವರು, ಅಂಬೇಡ್ಕರ್‌ರವರ ಪ್ರತಿಕೃತಿಯನ್ನು ಮೊದಲು ದಹಿಸಿದವರು ಇದೇ ಸಂಘ ಪರಿವಾರದವರು ಎಂಬುದನ್ನು ಅರಿಯುತ್ತಾರೆ. ಅಂಬೇಡ್ಕರ್ ಜಯಂತಿಯಂದು ಸಂಘಪರಿವಾರದ ಈ ಹುನ್ನಾರವನ್ನು ನಾವೆಲ್ಲರೂ ಗಟ್ಟಿಯಾಗಿ ಪ್ರಶ್ನಿಸಬೇಕಿದೆ. ಅವರ ದ್ವೇಷ ರಾಜಕಾರಣವನ್ನು ಪ್ರಜ್ಞಾವಂತರು ಸಮರ್ಥವಾಗಿ ಎದುರಿಸುತ್ತಾರೆ ಎಂಬುದನ್ನು ತೋರಿಸಿಕೊಡಬೇಕಿದೆ.


ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತೀಯ ಸಮಾಜದ ನೆಲದಲ್ಲಿ ಶೋಷಿತರ ಪಾಲಿಗೆ ದಕ್ಕಿಸಿಕೊಟ್ಟ ಸ್ವಾಭಿಮಾನ ಮತ್ತು ಸಮಾನತಾ ಚಳವಳಿ 1980ರ ವೇಳೆಗೆ ದೇಶದ ಮೂಲೆ ಮೂಲೆಗಳಿಗೂ ಹರಡಲು ಅಣಿಯಾಗಿತ್ತು. ಆ ಭಾಗವಾಗಿಯೇ ದೇಶಾದ್ಯಂತ ದಲಿತ ಚಳವಳಿ ಹುಟ್ಟು ಪಡೆದು ಸಮಕಾಲೀನ ಚಳವಳಿಗಳಿಗಿಂತಲೂ ಭಿನ್ನವಾಗಿ ಪಾದಾರ್ಪಣೆ ಮಾಡಿತು. 90ರ ದಶಕದಲ್ಲಿ ಮಹಾರಾಷ್ಟ್ರ ಸರಕಾರವು ಬಾಬಾಸಾಹೇಬ್ ಅಂಬೇಡ್ಕರ್ ಕುಟುಂಬದೊಂದಿಗೆ ಸಮಾಲೋಚನೆ ನಡೆಸಿ ಹೊರತಂದ ‘ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಬರೆಹಗಳು ಮತ್ತು ಭಾಷಣಗಳು’ ಸಂಪುಟ ಸರಣಿ ಮೊದಲನೇ ತಲೆಮಾರಿನ ದಲಿತ ಯುವಕ/ಯುವತಿಯರ ಕೈಗಳಿಗೆ ತಲುಪಿತು. ಅಲ್ಲಿಂದ ಪ್ರತಿಮೆಗಳಲ್ಲಿ ಜೀವಂತವಾಗಿದ್ದ ಅಂಬೇಡ್ಕರರು ಪ್ರಜ್ಞೆಯ ಮೂಲಕವೂ ಪ್ರಸಾರಗೊಂಡರು. ಇದರ ಭಾಗವಾಗಿ ‘ಹರಿಜನ ಪ್ರಜ್ಞೆ’ಯು ‘ದಲಿತ ಪ್ರಜ್ಞೆ’ಯಾಗಿ ತೀವ್ರ ಬದಲಾವಣೆ ಕಂಡಿತು. ಸಹಜವಾಗಿಯೇ ರಾಜಕೀಯ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ಇದರ ಭಾಗವಾಗಿಯೇ ಮಾನ್ಯವಾರ್ ಕಾನ್ಶಿರಾಮ್‌ರವರ ಬಹುಜನ ರಾಜಕಾರಣ ಆರಂಭವಾಯಿತು. ದಲಿತರ ವೋಟ್ ಬ್ಯಾಂಕ್‌ಗೆ ಚುನಾವಣಾ ರಾಜಕೀಯದ ಮೆರುಗು ನೀಡಿತು. ಆದ್ದರಿಂದ ಕಾಂಗ್ರೆಸ್, ಬಿಜೆಪಿ, ಜನತಾ ಪಕ್ಷವೂ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳಿಗೆ ಅಂಬೇಡ್ಕರರನ್ನು ಮುಟ್ಟದೆ ಬೇರೆ ದಾರಿ ಇರಲಿಲ್ಲ. ಹಾಗೆ ನೋಡಿದರೆ ಬಹಳ ತಡವಾಗಿ ಅಂಬೇಡ್ಕರರನ್ನು ಮುಟ್ಟಿದ್ದು ಕಮ್ಯುನಿಸ್ಟ್ ಪಕ್ಷದವರೇ. ಅದೇನೇ ಇರಲಿ, ಅಂಬೇಡ್ಕರ್ ವಿದ್ವತ್ತು ಹಾಗೂ ವೋಟ್ ಬ್ಯಾಂಕ್ ರಾಜಕೀಯದ ಕಾರಣದಿಂದ ವಿವಿಧ ರಾಜಕೀಯ ಪಕ್ಷಗಳು ದಲಿತರನ್ನು ಸೆಳೆಯಲು ಸಾಲುಗಟ್ಟಿ ನಿಂತವು. ಅಂಬೇಡ್ಕರರು ದಲಿತೇತರರಿಗೆ ನೀಡಿದ ಕಾಣಿಕೆಗಳನ್ನು ‘ಸಂವಿಧಾನ ಶಿಲ್ಪಿ’ ಎಂಬ ಬಿರುದಿನೊಳಗೆ ಸಂಗ್ರಹಿಸಿ ದಲಿತರ ಮನವನ್ನು ಗೆಲ್ಲುವ ಪ್ರಯತ್ನಗಳು ಆರಂಭವಾದವು. ಆದರೆ ‘ಸಂವಿಧಾನ ಶಿಲ್ಪಿ’ ಎಂಬ ಹೆಸರು ಬಲಪಂಥೀಯ ರಾಜಕಾರಣಕ್ಕೆ ಅಷ್ಟು ವೋಟುಗಳನ್ನು ತಂದುಕೊಡಲಿಲ್ಲ. ಜಾತಿವಿನಾಶ, ಸಮಾನತೆ, ಬೌದ್ಧ ದಮ್ಮ, ಪ್ರಭುತ್ವ ಸಮಾಜವಾದವನ್ನು ಬೆನ್ನೆಲುಬಾಗಿರಿಸಿಕೊಂಡಿದ್ದ ‘ಅಂಬೇಡ್ಕರ್ ಸಿದ್ಧಾಂತ’ವು ಆರೆಸ್ಸೆಸ್-ಬಿಜೆಪಿಯ ಜಾತಿವಾದಿ, ಅಸಮಾನ, ಹಿಂದುತ್ವ, ಬಂಡವಾಳಶಾಹಿ ಸಮಾಜವನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದ ಸಾವರ್ಕರ್ ಸಿದ್ಧಾಂತದ ಜೊತೆ ಕೈಜೋಡಿಸುವ ಸಾಧ್ಯತೆಯೇ ಇರಲಿಲ್ಲ. ಹೀಗೆ ‘ಅಂಬೇಡ್ಕರ್ ಸಿದ್ಧಾಂತ’ದ ಪ್ರಬುದ್ಧ ಭಾರತ ಮತ್ತು ‘ಸಾವರ್ಕರ್ ಸಿದ್ಧಾಂತ’ದ ಹಿಂದೂ ರಾಷ್ಟ್ರ ಇವೆರಡೂ ಮುಖಾಮುಖಿಯಾಗುವ ಸಾಧ್ಯತೆಗಳು ನಿಚ್ಚಳವಾಗಿದ್ದ ಸಂದರ್ಭದಲ್ಲಿಯೇ ಆರೆಸ್ಸೆಸ್-ಬಿಜೆಪಿಯು ಅಂಬೇಡ್ಕರ್ ಸಿದ್ಧಾಂತದ ಅಪವ್ಯಾಖ್ಯಾನ ಮಾಡಿ ಸುಳ್ಳು ಹರಡಲು ಆರಂಭಿಸಿತು. ಈ ಸುಳ್ಳು ಪ್ರಚಾರಕ್ಕೆ ವಾಟ್ಸ್‌ಆ್ಯಪ್ ಫೇಕ್ ಯೂನಿವರ್ಸಿಟಿಯನ್ನು ಬಳಸಿಕೊಂಡಿತು. ಈ ಸುಳ್ಳುಗಳನ್ನು ಉನ್ನತ ಪದವಿಯಲ್ಲಿರುವವರೇ ಪ್ರಚಾರ ಮಾಡಲು ನಿಂತರು. ಈ ಸುಳ್ಳುಗಳಿಂದಲೇ ಬಾಬಾಸಾಹೇಬ್ ಅಂಬೇಡ್ಕರ್‌ರವರ ಸಿದ್ಧಾಂತವನ್ನು ಬಹಿರಂಗವಾಗಿ ತಿರುಚಲಾಗುತ್ತಿದೆ.

ಅಖಿಲ ಭಾರತದ ಮಟ್ಟದಲ್ಲಿ ಇಂತಹ ಆರೆಸ್ಸೆಸ್ ಸುಳ್ಳುಗಳನ್ನು ಆನಂದ್ ತೇಲ್ತುಂಬ್ಡೆ, ದಿನಕರ್ ಕಾಂಬಳೆ, ಉದಿತ್ ರಾಜ್, ಶಿವಸುಂದರ್ ಮುಂತಾದ ಚಿಂತಕರು ಬಯಲುಗೊಳಿಸಿದ್ದಾರೆ. ಈ ಲೇಖನದಲ್ಲಿ ‘ಅಂಬೇಡ್ಕರ್ ಅವರ ಸಿದ್ಧಾಂತ ಹಾಗೂ ಜೀವನ ಚರಿತ್ರೆ’ಗೆ ಅಪಚಾರವಾಗುವಂತಹ ಆರು ‘ಆರೆಸ್ಸೆಸ್ ಸುಳ್ಳು’ಗಳನ್ನು ಬಯಲುಗೊಳಿಸುವ ಪ್ರಯತ್ನ ಮಾಡಲಾಗಿದೆ.

1. ಆರೆಸ್ಸೆಸ್ ಸುಳ್ಳು: ಅಂಬೇಡ್ಕರ್ ಅವರಿಗೆ ಸಂಘ (ಆರೆಸ್ಸೆಸ್)ದಲ್ಲಿ ನಂಬಿಕೆ ಇತ್ತು.

ಸತ್ಯ: ಈ ಸುಳ್ಳನ್ನು ಹರಿಯಬಿಟ್ಟಿದ್ದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್. ಸತ್ಯವೇನೆಂದರೆ ಅಂಬೇಡ್ಕರ್ ಅವರು ಆರೆಸ್ಸೆಸ್ ಸಿದ್ಧಾಂತವನ್ನು ವಿರೋಧಿಸುತ್ತಿದ್ದರು. ಅಷ್ಟೇ ಅಲ್ಲ, ಅದರ ಸಿದ್ಧಾಂತವನ್ನು ರೂಪಿಸಿದ ಹಿಂದೂ ಮಹಾ ಸಭಾದ ವಿಚಾರಗಳನ್ನೂ ಸಹ ವಿರೋಧಿಸುತ್ತಿದ್ದರು. ಜೊತೆಗೆ ಇವೆರಡೂ ಸಂಘಟನೆಗಳು ಸಮುದಾಯಕ್ಕೆ ಹಾಗೂ ದೇಶಕ್ಕೆ ಅಪಾಯಕಾರಿ ಎಂದು ತಿಳಿದಿದ್ದರು. ಅಂಬೇಡ್ಕರ್ ಅವರ ಮಾತಿನಲ್ಲಿಯೇ ಹೇಳುವುದಾದರೆ, ಹಿಂದೂ ಮಹಾಸಭಾ ಅಥವಾ ಆರೆಸ್ಸೆಸ್‌ನಂತಹ ಪ್ರತಿಗಾಮಿ ಗುಂಪುಗಳೊಂದಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತಿಲ್ಲ. (ಸಂಪುಟ 17, ಪುಟ 359) ಆರೆಸ್ಸೆಸ್ ಒಂದು ಅಪಾಯಕಾರಿ ಸಂಘಟನೆ ಎಂದು ಎಚ್ಚರಿಸಿದ್ದರು. (ಇಂಗ್ಲಿಷ್ ಸಂಪುಟ 15, ಪುಟ 560). ಅಂಬೇಡ್ಕರ್ ಅವರಿಗೆ ನಂಬಿಕೆ ಇದ್ದದ್ದು ಸರ್ವರನ್ನು ಸಮಾನವಾಗಿ ಪರಿಗಣಿಸುವ ಬೌದ್ಧ ಸಂಘದಲ್ಲಿಯೇ ಹೊರತು ಬ್ರಾಹ್ಮಣ ಗಂಡಸರನ್ನು (ಅದರಲ್ಲಿಯೂ ಚಿತ್ಪಾವನ ಬ್ರಾಹ್ಮಣ) ಮಾತ್ರ ಶ್ರೇಷ್ಠವೆಂದು ಪರಿಗಣಿಸುವ ಆರೆಸ್ಸೆಸ್ ಸಂಘದಲ್ಲಿ ಅಲ್ಲ.

2. ಆರೆಸ್ಸೆಸ್ ಸುಳ್ಳು: ಭಗವಾಧ್ವಜವು ರಾಷ್ಟ್ರದ್ವಜ ಆಗಬೇಕೆಂದು ಅಂಬೇಡ್ಕರ್ ಬಯಸಿದ್ದರು.

ಸತ್ಯ: ಅಂಬೇಡ್ಕರರು ಧ್ವಜ ಸಮಿತಿಯ ಸದಸ್ಯರಾಗಿದ್ದರು. ಅವರಿಗೆ ಹಿಂದೂ ಮಹಾಸಭಾದವರು ಭಗವಾದ್ವಜವನ್ನು ರಾಷ್ಟ್ರಧ್ವಜವನ್ನಾಗಿಸಲು ಪ್ರಯತ್ನಿಸಬೇಕೆಂದು ಮನವಿ ಪತ್ರ ಕೊಟ್ಟದ್ದು ನಿಜ. ಆದರೆ ಅಂಬೇಡ್ಕರ್ ನಗುತ್ತಾ ‘‘ರಾಜ್ಯಾಂಗ ಸಭೆಯ ಮೇಲೆ ಮಹಾರ್ ಪುತ್ರನು ಭಗವಾ ಬಾವುಟದ ಸುರುಳಿ ಬಿಚ್ಚುವನೆಂದು ನಿಮಗೆ ನಿರೀಕ್ಷೆ ಇದೆಯೇ?’’ ಎಂದು ಪ್ರಶ್ನಿಸಿ ಕುಹಕವಾಡಿದ್ದರು. ಮುಂದೆ ಸಂವಿಧಾನ ಸಭೆಯಲ್ಲಿ ‘‘ಭಾರತದಲ್ಲಿ ಬೌದ್ಧ ಧರ್ಮ ಬಹುತೇಕ ಆರಿಹೋಗಿದ್ದರೂ ಅದು ಬ್ರಾಹ್ಮಣ ಸಂಸ್ಕೃತಿಗಿಂತ ಶ್ರೇಷ್ಠವಾದ, ಶ್ರೀಮಂತವಾದ ಸಂಸ್ಕೃತಿಯ ಹುಟ್ಟಿಗೆ ಕಾರಣವಾಗಿದೆ. ಅದಕ್ಕೆ ಉದಾಹರಣೆ,

ನಮ್ಮ ರಾಷ್ಟ್ರೀಯ ಲಾಂಛನ ಮತ್ತು ರಾಷ್ಟ್ರೀಯ ಧ್ವಜದ ಆಯ್ಕೆಯಲ್ಲಿ ನಮ್ಮ ಸಂವಿಧಾನ ಸಭೆಗೆ ಬ್ರಾಹ್ಮಣ ಸಂಸ್ಕೃತಿಯಿಂದ ಸೂಕ್ತವಾದ ಸಂಕೇತ ಯಾವುದೂ ಸಿಗಲಿಲ್ಲ. ಕೊನೆಗೆ ಬೌದ್ಧ ಸಂಸ್ಕೃತಿಯೇ ನಮ್ಮನ್ನು ರಕ್ಷಿಸಿತು. ಆದ್ದರಿಂದ ಅಂತಿಮವಾಗಿ ನಾವು ದಮ್ಮ ಚಕ್ರವನ್ನೇ ರಾಷ್ಟ್ರೀಯ ಲಾಂಛನವಾಗಿಸಿಕೊಂಡೆವು’’ ಎನ್ನುತ್ತಾರೆ. (ಧನಂಜಯ್ ಕೀರ್ ಪುಸ್ತಕ)

3. ಆರೆಸ್ಸೆಸ್ ಸುಳ್ಳು: ಅಂಬೇಡ್ಕರ್ ಅವರು ಭಾರತದ ವಿಭಜನೆ ಆಗಿದ್ದಾಗ ಮುಸ್ಲಿಮರೆಲ್ಲ ಪಾಕಿಸ್ತಾನಕ್ಕೆ ಹೋಗಬೇಕೆಂದು ಹೇಳಿದ್ದರು.

ಸತ್ಯ: ಈ ಸುಳ್ಳನ್ನು ಲೆಕ್ಕವಿಲ್ಲದಷ್ಟು ಬಾರಿ ಸಂಘಪರಿವಾರದ ಕಾರ್ಯಕರ್ತರು ಹೇಳಿದ್ದಾರೆ. ಈ ಸುಳ್ಳಿನ ಹಿಂದಿನ ಅಸಲಿ ಸಂಚು ಏನೆಂದರೆ, ಮುಸ್ಲಿಮರ ವಿರುದ್ಧ ದಲಿತರನ್ನು ಎತ್ತಿ ಕಟ್ಟಿ ಬಿಜೆಪಿ-ಆರೆಸ್ಸೆಸ್ ಅಧಿಕಾರವನ್ನು ಅನುಭವಿಸಬೇಕೆಂಬುದಾಗಿದೆ. ಈಗ ಈ ಮೇಲಿನ ಸುಳ್ಳಿನ ಹಿಂದಿನ ಸತ್ಯ ತಿಳಿಯೋಣ.

ಬಾಬಾಸಾಹೇಬ್ ಅಂಬೇಡ್ಕರ್ ಅವರೇ ‘ಭಾರತದ ವಿಭಜನೆ ಅಥವಾ ಪಾಕಿಸ್ತಾನ’ ಕೃತಿಯಲ್ಲಿ (ಸಂಪುಟ-6. ಪುಟ ಸಂಖ್ಯೆ: 748) ಪಾಕಿಸ್ತಾನವಾದರೆ ಜನತೆಯ ವರ್ಗಾವಣೆ ಹೇಗಿರಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಹೇಳುವಂತೆ ‘ಈ ಪ್ರಶ್ನೆಗೆ ಸಂಬಂಧಿಸಿದಂತೆ ಎರಡೂ ಸಾಧ್ಯ: ಎರಡೂ ಅನುಷ್ಠಾನಗೊಂಡ ದೃಷ್ಟಾಂತಗಳಿವೆ. ಗ್ರೀಸ್ ಮತ್ತು ಬಲ್ಗೇರಿಯಾ ದೇಶಗಳ ಮಧ್ಯೆ ಜನತೆಯ ವರ್ಗಾವಣೆ ಸ್ವಪ್ರೇರಣೆಯ ಆಧಾರದ ಮೇಲೆ ನಡೆಯಿತು. ಗ್ರೀಸ್ ಮತ್ತು ಟರ್ಕಿಗಳ ನಡುವೆ ಕಡ್ಡಾಯದ ಆಧಾರದ ಮೇಲೆ ನಡೆಯಿತು. ಕಡ್ಡಾಯ ವರ್ಗಾವಣೆ ಮೇಲುನೋಟಕ್ಕೆ ತಪ್ಪು ಎಂದು ಯಾರಿಗಾದರೂ ಅನ್ನಿಸುತ್ತದೆ. ಒಬ್ಬನಿಗೆ ಇಷ್ಟವಿಲ್ಲದಿದ್ದಾಗ ಅವನ ಅನುವಂಶೀಯ ನೆಲೆಯನ್ನು ಬದಲಾಯಿಸು ಎಂದು ಬಲಾತ್ಕರಿಸುವುದು ಸರಿಯಾದದ್ದಲ್ಲ. ಅಲ್ಲಿನ ಅವನ ವಾಸದ ಮುಂದುವರಿಕೆಯಿಂದಾಗಿ ದೇಶದ ಶಾಂತಿಸುಸ್ಥಿತಿಗಳು ವಿಪತ್ತಿಗೊಳಗಾಗುವ ಸಂಭವ ಇದ್ದ ಹೊರತು ಅಥವಾ ಅವನ ಹಿತದ ದೃಷ್ಟಿಯಿಂದಲೇ ವರ್ಗಾವಣೆ ಅಗತ್ಯ ಎನ್ನಿಸಿದ ಹೊರತು, ವರ್ಗಾವಣೆ ಮಾಡುವವರು ಅದನ್ನು ಅಡಚಣೆ ಮತ್ತು ನಷ್ಟಗಳು ಉಂಟಾಗದ ಹಾಗೆ ಮಾಡಬೇಕಾಗಿದೆ. ಆದ್ದರಿಂದ ವರ್ಗಾವಣೆಯನ್ನು ಬಲಾತ್ಕರಿಸಬಾರದು ಎಂಬುದು ನನ್ನ ಅಭಿಪ್ರಾಯ. ವರ್ಗಾವಣೆಗೆ ಇಚ್ಛೆ ವ್ಯಕ್ತಪಡಿಸಿದವರಿಗೂ ಅದು ಮುಕ್ತವಾಗಿರಬೇಕು’.

ಈ ಹೇಳಿಕೆಯಲ್ಲಿ ಅಂಬೇಡ್ಕರರು ಸ್ಪಷ್ಟವಾಗಿ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗುವುದು ಬಿಡುವುದು ಅವರ ಇಚ್ಛೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಹೋಗುವಂತೆ ಬಲಾತ್ಕರಿಸಬಾರದು ಎಂದೂ ಹೇಳಿದ್ದಾರೆ.

4. ಆರೆಸ್ಸೆಸ್ ಸುಳ್ಳು: ಅಂಬೇಡ್ಕರ್ ಮುಸ್ಲಿಮ್ ಮತ್ತು ಇಸ್ಲಾಮ್ ವಿರೋಧಿಯಾಗಿದ್ದರು.

ಸತ್ಯ: ಸತ್ಯವೆಂದರೆ ಬಾಬಾಸಾಹೇಬ್ ಅಂಬೇಡ್ಕರರು ಹಿಂದೂ ಧರ್ಮವನ್ನು ವಿಮರ್ಶೆ ಮಾಡಿದ್ದಷ್ಟು ಇಸ್ಲಾಮ್ ಅಥವಾ ಕ್ರೈಸ್ತ ಧರ್ಮಗಳನ್ನು ವಿಮರ್ಶೆ ಮಾಡಿಲ್ಲ. ಹಾಗೆಂದು ಇಸ್ಲಾಮ್ ಮತ್ತು ಕ್ರೈಸ್ತ ಧರ್ಮದ ಅನುಯಾಯಿಗಳಲ್ಲಿರುವ ಮೂಢನಂಬಿಕೆಗಳು ಹಾಗೂ ಅಂಧಶ್ರದ್ಧೆಯನ್ನು ವಿಮರ್ಶಿಸದೆ ಇರಲಿಲ್ಲ.

ಅಂಬೇಡ್ಕರ್ ಅವರಿಗೆ ಇಸ್ಲಾಮ್ ಧರ್ಮದ ಸಮಾನತಾ ತತ್ವದ ಬಗ್ಗೆ ತಿಳಿದಿತ್ತು. ಆ ಕಾರಣಕ್ಕಾಗಿಯೇ ಅವರ ಬಹಿಷ್ಕೃತ ಹಿತಕಾರಿಣಿ ಸಭಾದ ಮುಖವಾಣಿಯಾಗಿದ್ದ ಮರಾಠಿ ಪತ್ರಿಕೆ ‘ಬಹಿಷ್ಕೃತ ಭಾರತ’ದಲ್ಲಿ ಇಸ್ಲಾಮ್ ಧರ್ಮ ಕುರಿತ ಸರಣಿ ಲೇಖನವನ್ನು ಸಮಾಜ ಸುಧಾರಕ ಲೋಕಹಿತವಾದಿ ಅವರಿಂದ ಹಲವು ತಿಂಗಳು ಬರೆಸಿದ್ದರು. 1935ರ ಆಸುಪಾಸಿನಲ್ಲಿ ಮತಾಂತರಕ್ಕೆ ಮುಂದಾದ ಅನುಯಾಯಿಗಳಿಗೆ ಇಸ್ಲಾಮ್ ಧರ್ಮವನ್ನು ಸ್ವೀಕರಿಸುವಂತೆ ಸಲಹೆ ನೀಡಿದ್ದರು. ಸಂವಿಧಾನ ಸಭೆಗೆ ಸದಸ್ಯರನ್ನಾಗಿ ಅಂಬೇಡ್ಕರರನ್ನು ನೇಮಕ ಮಾಡುವಾಗ ಬಂಗಾಳ ಪ್ರಾಂತದಿಂದ ಜೋಗೇಂದ್ರನಾಥ ಮಂಡಲ್ ಅವರು ಅಂಬೇಡ್ಕರರ ಹೆಸರನ್ನು ಸೂಚಿಸಿದಾಗ ಅದಕ್ಕೆ ಅಲ್ಲಿನ ಮುಸ್ಲಿಮ್ ಲೀಗ್ ಬೆಂಬಲ ನೀಡಿತ್ತು. ಹೀಗೆ ವಿಧಿ 370ಕ್ಕೆ ವಿರೋಧಿಸದ, ಜಮ್ಮು-ಕಾಶ್ಮೀರ ವಿಚಾರದಲ್ಲಿ ಜನಮತಗಣನೆಗೆ ಸಲಹೆ ನೀಡಿದ್ದ, ಅದಕ್ಕಿಂತಲೂ ಹೆಚ್ಚಾಗಿ ಶೋಷಿತರ ಪರ ಸದಾ ಧ್ವನಿಯಾಗಿದ್ದ ಅಂಬೇಡ್ಕರ್ ಅವರು ಮುಸ್ಲಿಮರ ವಿರುದ್ಧವಿರಲು ಸಾಧ್ಯವೇ ಇರಲಿಲ್ಲ. ಮುಸ್ಲಿಮರು ಸಹ ಹಿಂದೂ ಧರ್ಮದ ಸಹವಾಸದಲ್ಲಿ ಜಾತಿಪದ್ಧತಿ ಆಚರಣೆಯನ್ನು ರೂಢಿಸಿಕೊಂಡಿದ್ದು ಜಾತಿವಿನಾಶ ಚಳವಳಿಯಲ್ಲಿ ಅವರಿಗೂ ಪಾತ್ರವಿದೆ ಎಂದು ಹೇಳಿದ್ದರು.

5. ಆರೆಸ್ಸೆಸ್ ಸುಳ್ಳು: ಅಂಬೇಡ್ಕರ್ ಆರೆಸ್ಸೆಸ್ ಶಿಬಿರಕ್ಕೆ ಭೇಟಿ ನೀಡಿದ್ದರು ಹಾಗೂ ಭಾಷಣ ಮಾಡಿ ಹೊಗಳಿದ್ದರು.

ಸತ್ಯ: 2022ರವರೆಗೆ ಈ ಸುಳ್ಳು ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಚುನಾವಣೆ ಕಾಲದಲ್ಲಿ ಹೆಚ್ಚು ಸದ್ದು ಮಾಡುತ್ತಿತ್ತು. ಈ ಆರೆಸ್ಸೆಸ್ ಸುಳ್ಳಿನ ಪ್ರಕಾರ ದಿನಾಂಕ 12-05-1939ರಂದು ಪುಣೆ ನಗರದ ಭಾವೆ ಶಾಲಾ ಆವರಣದಲ್ಲಿ ನಡೆದ ಆರೆಸ್ಸೆಸ್ ಶಿಬಿರಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಭೇಟಿ ನೀಡಿದ್ದರಂತೆ! ಜೊತೆಗೆ ಭಾಷಣವನ್ನೂ ಮಾಡಿದ್ದರಂತೆ! ಆ ಭಾಷಣದಲ್ಲಿ ಅಂಬೇಡ್ಕರ್ ಅವರು ಆರೆಸ್ಸೆಸ್ ಅನ್ನು ಹೊಗಳಿದ್ದರಂತೆ! ಹೀಗೆ ಇವರ ಪುಂಖಾನುಪುಂಖ ಸುಳ್ಳುಗಳು ಮುಂದುವರಿಯುತ್ತವೆ. ಆದರೆ ಮಹಾರಾಷ್ಟ್ರದ ದಲಿತ ಚಿಂತಕರು ಈ ಸುಳ್ಳನ್ನು ಸಾಕ್ಷಿ ಸಮೇತ ಬಯಲು ಮಾಡಿದ್ದಾರೆ.

ಅಂಬೇಡ್ಕರರು ಪುಣೆಯ ಆರೆಸ್ಸೆಸ್ ಕ್ಯಾಂಪಿಗೆ ಭೇಟಿ ನೀಡಿದ್ದರು ಎಂಬ ಸುಳ್ಳಿನ ಹಿಂದಿನ ಸತ್ಯದ ಬಗ್ಗೆ ತಿಳಿಯೋಣ. ಈ ಸುಳ್ಳನ್ನು ಮೊದಲು ಹರಿಯಬಿಟ್ಟಿದ್ದು ಆಯುಷ್ ನದೀಂಪಳ್ಳಿ ಮತ್ತು ರಾಹುಲ್ ಎ. ಶಾಸ್ತ್ರಿ ಎಂಬ ಆರೆಸ್ಸೆಸ್ ಬ್ರಾಹ್ಮಣ ಸ್ನೇಹಿತರು ಬರೆದಿರುವ The Founder of RSS: Dr. Hedgewar Seer Patriot and Nation Builder ಎಂಬ ಪುಸ್ತಕದಲ್ಲಿ. ಇದರಲ್ಲಿ ಅಂಬೇಡ್ಕರ್ ಅವರು ಆರೆಸ್ಸೆಸ್ ಸಭೆಗೆ ಭೆೇಟಿ ನೀಡಿದ್ದರ ಬಗ್ಗೆ ಯಾವುದೇ ಮಾಹಿತಿ ಮೂಲವನ್ನು ತಿಳಿಸಿಲ್ಲ. ಪತ್ರಿಕಾ ವರದಿಯನ್ನೂ, ಸಾಕ್ಷಿಯನ್ನೂ ನೀಡಿಲ್ಲ. ಕಪೋಲಕಲ್ಪಿತ ಕತೆಯನ್ನು ಹೆಣೆದಿದ್ದಾರೆ.

‘ಆರೆಸ್ಸೆಸ್’ ಎಂಬ ಮತ್ತೊಂದು ಪುಸ್ತಕದ ಕರ್ತೃ ಎಂ.ಜಿ. ಚಿತ್ಕಾರ ಬರೆದಿರುವ ‘Dr. Ambedkar and Social Justice’ ನಲ್ಲಿ ಈ ಮೇಲಿನ ಸುಳ್ಳಿನ ಜೊತೆಗೆ ಅಂಬೇಡ್ಕರರು 1936ರ ಮಕರ ಸಂಕ್ರಾಂತಿಯಂದು ಆರೆಸ್ಸೆಸ್ ಶಾಖೆಗೆ ಭೇಟಿ ನೀಡಿದ್ದರೆಂದು ಬರೆಯಲಾಗಿದೆ. ಆದರೆ ಯಥಾಪ್ರಕಾರ ಯಾವುದೇ ಮಾಹಿತಿ ಮೂಲವನ್ನೂ ಹಾಗೂ ಪತ್ರಿಕಾ ವರದಿಯನ್ನೂ ಉಲ್ಲೇಖಿಸಿಲ್ಲ.

ಇನ್ನು ಅಂಬೇಡ್ಕರರು ಸ್ಥಾಪಿಸಿದ್ದ ರಾಜಕೀಯ ಪಕ್ಷ ಶೆಡ್ಯೂಲ್ಡ್ ಕಾಸ್ಟ್ ಫೆಡರೇಶನ್‌ನಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಬಾಳಾಸಾಹೇಬ್ ಸಾಳುಂಕೆ ಅವರ ದಿನಚರಿಯಿಂದ ಈ ಮೇಲಿನ ಮಾಹಿತಿಯನ್ನು ತೆಗೆದುಕೊಳ್ಳಲಾಗಿದೆ ಎಂದೂ ಹೇಳುತ್ತಾರೆ. ಅದರ ಕತೆಯೂ ಸುಳ್ಳಿನ ಕತೆಯೇ. ಬಾಳಾಸಾಹೇಬ್ ಸಾಳುಂಕೆ ಅವರ ದಿನಚರಿಯಲ್ಲಿದ್ದದ್ದನ್ನು ಅವರ ಮಗ ಕಶ್ಯಪ್ ಸಾಳುಂಕೆ ಹಾಗೂ ಮತ್ತೋರ್ವ ಆರೆಸ್ಸೆಸ್ ಸದಸ್ಯ ಭಾನುದಾಸ್ ಗಾಯಕ್ವಾಡ್ ‘ಆಮ್ಚೆ ಸಾಹೇಬ್’ (ನಮ್ಮ ಸಾಹೇಬ್) ಎಂಬ ಹೆಸರಿನಲ್ಲಿ ಪುಸ್ತಕ ಸಂಪಾದಿಸಿದ್ದಾರೆ. ಈ ಪುಸ್ತಕಕ್ಕೆ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಕೇಶ್ ಸಿನ್ಹಾ ಮುನ್ನುಡಿಯನ್ನು ಬರೆದಿದ್ದಾರೆ. ಈ ರಾಕೇಶ್ ಸಿನ್ಹಾ ಹೆಡ್ಗೆವಾರ್‌ರ

ಜೀವನಚರಿತ್ರೆಯನ್ನು ಬರೆದಿದ್ದಾರೆ. ಮಹಾರಾಷ್ಟ್ರದ ಅಂಬೇಡ್ಕರ್‌ವಾದಿಗಳು ಸಾಳುಂಕೆಯವರ ದಿನಚರಿಯ ಫೋಟೊ ಕಾಪಿ ಕೇಳಿದ್ದರೂ ಸಹ ನೀಡಿಲ್ಲ. ಹಾಗಾಗಿ ಇದು ಶುದ್ಧ ಸುಳ್ಳೆಂದು ಅವರು ಸಾರಿದ್ದಾರೆ.

ಇವಿಷ್ಟು ಸಂಘಪರಿವಾರ ಬಾಬಾಸಾಹೇಬ್ ಅಂಬೇಡ್ಕರ್‌ರವರ ಕುರಿತು ಅಪಪ್ರಚಾರದ ಸುಳ್ಳುಗಳನ್ನು ಹರಡಿರುವ ಬೆರಳೆಣಿಕೆಯಷ್ಟು ಉದಾಹರಣೆ. ಇಂತಹ ಹಲವು ಸುಳ್ಳುಗಳನ್ನು ದಲಿತರ ಏಕತೆ ಒಡೆಯಲು, ದಲಿತರನ್ನು ಹಿಂದುತ್ವದ ಕಾಲ್ದಳಗಳನ್ನಾಗಿ ಮಾಡಿಕೊಳ್ಳಲು, ಮುಸ್ಲಿಮರ ವಿರುದ್ಧ ದಲಿತರನ್ನು ಎತ್ತಿಕಟ್ಟಲು ಕಳೆದ ಎರಡು ದಶಕದಿಂದಲೂ ಹರಿಯಬಿಡಲಾಗಿದೆ. ತಲೆಯಲ್ಲಿ ಮಿದುಳಿಲ್ಲದವರು ಮಾತ್ರ ಇಂತಹ ಸುಳ್ಳುಗಳನ್ನು ನಂಬುತ್ತಾರೆ. ನಿಜವಾದ ಅಂಬೇಡ್ಕರ್ ಅನುಯಾಯಿಗಳು ಅಂಬೇಡ್ಕರ್‌ರವರ ವಿರುದ್ಧ ಪುಸ್ತಕ ಬರೆಸಿದವರು, ಅಂಬೇಡ್ಕರ್‌ರವರ ಪ್ರತಿಕೃತಿಯನ್ನು ಮೊದಲು ದಹಿಸಿದವರು ಇದೇ ಸಂಘ ಪರಿವಾರದವರು ಎಂಬುದನ್ನು ಅರಿಯುತ್ತಾರೆ. ಅಂಬೇಡ್ಕರ್ ಜಯಂತಿಯಂದು ಸಂಘಪರಿವಾರದ ಈ ಹುನ್ನಾರವನ್ನು ನಾವೆಲ್ಲರೂ ಗಟ್ಟಿಯಾಗಿ ಪ್ರಶ್ನಿಸಬೇಕಿದೆ. ಅವರ ದ್ವೇಷ ರಾಜಕಾರಣವನ್ನು ಪ್ರಜ್ಞಾವಂತರು ಸಮರ್ಥವಾಗಿ ಎದುರಿಸುತ್ತಾರೆ ಎಂಬುದನ್ನು ತೋರಿಸಿಕೊಡಬೇಕಿದೆ.

share
ಸಾಕ್ಯ ಸಮಗಾರ
ಸಾಕ್ಯ ಸಮಗಾರ
Next Story
X