ಭಾರ್ಗವಾಸ್ತ್ರ: ಶತ್ರು ಡ್ರೋನ್‌ಗಳಿಗೆ ಭಾರತದ ಪ್ರತ್ಯುತ್ತರ

ದೂರದ ಗಡಿಗಳನ್ನು ಕಾಯುವ ಮತ್ತು ಮಹತ್ವದ ಮಿಲಿಟರಿ ನೆಲೆಗಳನ್ನು ರಕ್ಷಿಸುವ ಭಾರತೀಯ ಯೋಧರಿಗೆ ಇಂತಹ ಆಧುನಿಕ ತಂತ್ರಜ್ಞಾನಗಳು ಹೆಚ್ಚುವರಿ ಭದ್ರತೆ ಒದಗಿಸುತ್ತವೆ. ಭಾರ್ಗವಾಸ್ತ್ರವು ಭಾರತದ ಪ್ರಾಚೀನ ಯೋಧ ಪರಂಪರೆ ಮತ್ತು ಆಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನವನ್ನು ಒಗ್ಗೂಡಿಸಿದೆ. ಸ್ವದೇಶಿ ತಂತ್ರಜ್ಞಾನ, ಆವಿಷ್ಕಾರ ಮತ್ತು ಸ್ವಾವಲಂಬನೆಯ ಮೂಲಕ ತನ್ನ ಯೋಧರನ್ನು ಕಾಪಾಡುವ ಭಾರತದ ಸಂಕಲ್ಪವನ್ನು ಇದು ಪ್ರತಿಬಿಂಬಿಸುತ್ತದೆ.
ಶತ್ರುಗಳ ಹತ್ತಾರು ಡ್ರೋನ್‌ಗಳು ಜೊತೆಯಾಗಿ ಭಾರತದ ಮಿಲಿಟರಿ ನೆಲೆಯ ಮೇಲೆ ದಾಳಿ ನಡೆಸಲು ಬರುತ್ತಿರುವುದನ್ನು ಊಹಿಸಿಕೊಳ್ಳಿ. ಕೆಲವು ಡ್ರೋನ್‌ಗಳು ಸ್ಫೋಟಕಗಳನ್ನು ಹೊಂದಿದ್ದರೆ, ಇನ್ನುಳಿದವು ರಹಸ್ಯ ಮಾಹಿತಿಗಳನ್ನು ಕಲೆಹಾಕುತ್ತವೆ. ಇನ್ನು ಕೆಲವು ಡ್ರೋನ್‌ಗಳು ಮಾನವರ ಸೂಚನೆಗಳ ಅಗತ್ಯವಿಲ್ಲದೆ ಗುರಿಗಳನ್ನು ಗುರುತಿಸಿ ದಾಳಿ ನಡೆಸಬಲ್ಲವು. ಪ್ರತಿಯೊಂದು ಅಗ್ಗದ ಡ್ರೋನ್‌ಗಳನ್ನು ನಾಶಪಡಿಸಲು ದುಬಾರಿ, ಸಾಂಪ್ರದಾಯಿಕ ಕ್ಷಿಪಣಿಗಳನ್ನು ಬಳಸಿದರೆ, ಮಿಲಿಟರಿ ಸಂಪನ್ಮೂಲಗಳು ಮತ್ತು ರಕ್ಷಣಾ ಬಜೆಟ್ ಬಲುಬೇಗನೆ ಖಾಲಿಯಾಗಿಬಿಡಬಹುದು. ಆದ್ದರಿಂದ ಭಾರತ ಇಂತಹ ಹೆಚ್ಚುತ್ತಿರುವ ಯುದ್ಧರಂಗದ ಸವಾಲುಗಳಿಗೆ ದೇಶೀಯ ಉತ್ತರವೊಂದನ್ನು ಅಭಿವೃದ್ಧಿ ಪಡಿಸಿದೆ.
ಭಾರತದ ಮೊದಲ ದೇಶೀಯವಾಗಿ ವಿನ್ಯಾಸಗೊಂಡ ಮತ್ತು ಅಭಿವೃದ್ಧಿ ಪಡಿಸಿದ ಎರಡು ಪದರಗಳ, ವಾಹನ ಅಳವಡಿತ ಕೌಂಟರ್ - ಸ್ವಾರ್ಮ್ ಡ್ರೋನ್ ವ್ಯವಸ್ಥೆಯಾದ ಭಾರ್ಗವಾಸ್ತ್ರ ತನ್ನ ಅಭಿವೃದ್ಧಿ ಹಂತದ ಪರೀಕ್ಷೆಗಳನ್ನು ರಾಜಸ್ಥಾನದ ಪೋಖ್ರಾನ್ ಮರುಭೂಮಿಯ ಪರೀಕ್ಷಾ ಸ್ಥಳದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ. 2026ರ ನವೆಂಬರ್ 20ರಿಂದ 24ರ ನಡುವೆ ನಡೆದ ಈ ಪರೀಕ್ಷೆಗಳು ಭಾರತದ ವಾಯು ರಕ್ಷಣಾ ಸಾಮರ್ಥ್ಯ ವೃದ್ಧಿಯಲ್ಲಿ ಮಹತ್ವದ ಮೈಲುಗಲ್ಲು ನಿರ್ಮಿಸಿವೆ.
ಸೋಲಾರ್ ಡಿಫೆನ್ಸ್ ಆಂಡ್ ಏರೋಸ್ಪೇಸ್ ಲಿಮಿಟೆಡ್ ಎನ್ನುವ ಭಾರತೀಯ ಖಾಸಗಿ ವಲಯದ ರಕ್ಷಣಾ ಉತ್ಪಾದಕ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಭಾರ್ಗವಾಸ್ತ್ರಕ್ಕೆ ಪುರಾಣ ಪುರುಷ ಪರಶುರಾಮರ ಆಯುಧಕ್ಕೆ ಸಂಬಂಧಿಸಿದ ಹೆಸರಿಡಲಾಗಿದೆ. ಪರಶುರಾಮರು ಭೃಗು ಮಹರ್ಷಿಗಳ ಪರಂಪರೆಗೆ ಸೇರಿದವರಾದ್ದರಿಂದ ಭಾರ್ಗವ ಎನ್ನುವ ಹೆಸರನ್ನು ಹೊಂದಿದ್ದರು. ಪರಶುರಾಮ ಧೈರ್ಯ, ಅಸಾಧಾರಣ ಯೋಧ ಕೌಶಲಗಳು ಮತ್ತು ನ್ಯಾಯದ ರಕ್ಷಣೆಗಳ ಸಂಕೇತವಾಗಿದ್ದರು. ಆದ್ದರಿಂದಲೇ ಆಯುಧ ವ್ಯವಸ್ಥೆಯ ಹೆಸರು ಅದರ ಉದ್ದೇಶವನ್ನೂ ಪ್ರತಿಬಿಂಬಿಸುತ್ತದೆ.
ಈಗಾಗಲೇ ಬಳಕೆಯಲ್ಲಿರುವ ಹಲವು ಡ್ರೋನ್ ನಿರೋಧಕ ವ್ಯವಸ್ಥೆಗಳು ಇಲೆಕ್ಟ್ರಾನಿಕ್ ಜ್ಯಾಮಿಂಗ್ ತಂತ್ರಜ್ಞಾನವನ್ನು ಅವಲಂಬಿಸಿವೆ. ಇದು ಡ್ರೋನ್‌ಗಳು ಮತ್ತು ಅವುಗಳನ್ನು ನಿಯಂತ್ರಿಸುವವರ ನಡುವಿನ ಸಂಪರ್ಕವನ್ನು ಕಡಿತಗೊಳಿಸುತ್ತದೆ ಅಥವಾ ಅವುಗಳ ನ್ಯಾವಿಗೇಷನ್ ವ್ಯವಸ್ಥೆಗೆ ಅಡ್ಡಿಪಡಿಸುತ್ತದೆ. ಆದರೆ, ಆಧುನಿಕ ಸ್ವಯಂಚಾಲಿತ ಡ್ರೋನ್‌ಗಳು ಯಾವುದೇ ಬಾಹ್ಯ ಸೂಚನೆಗಳು ಬರದಿದ್ದರೂ ದಾಳಿಯನ್ನು ಮುಂದುವರಿಸಬಲ್ಲವು.
ಭಾರ್ಗವಾಸ್ತ್ರ ಈ ಸಮಸ್ಯೆಗೆ ‘ಹಾರ್ಡ್ ಕಿಲ್’ ತಂತ್ರದ ಮೂಲಕ ಪರಿಹಾರ ಒದಗಿಸುತ್ತದೆ. ಅಂದರೆ, ಶತ್ರು ಡ್ರೋನ್‌ಗಳ ಇಲೆಕ್ಟ್ರಾನಿಕ್ ವ್ಯವಸ್ಥೆಗಳಿಗೆ ಅಡ್ಡಿಪಡಿಸುವುದಷ್ಟೇ ಅಲ್ಲದೆ, ಅವುಗಳನ್ನು ಭೌತಿಕವಾಗಿ ನಾಶಪಡಿಸುತ್ತದೆ.
ಇದು ಪ್ರತ್ಯೇಕ ಡ್ರೋನ್‌ಗಳು, ಸಂಘಟಿತ ಡ್ರೋನ್ ಸಮೂಹಗಳು, ಶಸ್ತ್ರಾಸ್ತ್ರಗಳನ್ನು ಹೊತ್ತ ಡ್ರೋನ್‌ಗಳು ಮತ್ತು ಗುರಿಯ ಮೇಲೆ ದಾಳಿ ನಡೆಸುವವರೆಗೆ ಗಾಳಿಯಲ್ಲಿ ತೇಲುತ್ತಾ ಕಾಯುವ ಲಾಯಿಟರಿಂಗ್ ಮ್ಯೂನಿಷನ್ಸ್‌ಗಳನ್ನು ಎದುರಿಸಬಲ್ಲದು. ಲಾಯಿಟರಿಂಗ್ ಮ್ಯೂನಿಷನ್ಸ್ ಎಂದರೆ ಗುರಿಯನ್ನು ಹುಡುಕುತ್ತಾ ಗಾಳಿಯಲ್ಲಿ ಸುತ್ತಾಡಿ, ಸೂಕ್ತ ಗುರಿ ಸಿಕ್ಕಾಗ ದಾಳಿ ನಡೆಸುವ ಹಾರುವ ಶಸ್ತ್ರಾಸ್ತ್ರಗಳು.
ಎರಡು ಹಂತಗಳ ರಕ್ಷಣೆಯನ್ನು ಒದಗಿಸುವ ಸಲುವಾಗಿ, ಭಾರ್ಗವಾಸ್ತ್ರ ಸ್ವದೇಶಿಯವಾಗಿ ಅಭಿವೃದ್ಧಿಪಡಿಸಲಾದ ಎರಡು ವಿಭಿನ್ನ ರೀತಿಯ ಶಸ್ತ್ರಾಸ್ತ್ರಗಳನ್ನು ಸಂಯೋಜಿಸುತ್ತದೆ.
ಮೊದಲ ಹಂತದ ಪದರ ಅನ್‌ಗೈಡೆಡ್ ಮೈಕ್ರೋ ರಾಕೆಟ್‌ಗಳನ್ನು ಬಳಸುತ್ತದೆ. ಗೈಡೆಡ್ ಕ್ಷಿಪಣಿಗಳಿಗಿಂತ ಭಿನ್ನವಾಗಿ, ಉಡಾವಣೆಯಾದ ಬಳಿಕ ಈ ರಾಕೆಟ್‌ಗಳು ಸ್ವತಂತ್ರವಾಗಿ ತಮ್ಮ ದಿಕ್ಕನ್ನು ಬದಲಾಯಿಸಲು ಸಾಧ್ಯವಿಲ್ಲ. ಮುಖ್ಯವಾಗಿ ಡ್ರೋನ್ ಸಮೂಹಗಳನ್ನು ಎದುರಿಸಲು ವಿನ್ಯಾಸಗೊಳಿಸಲಾದ ಇವುಗಳ ವ್ಯಾಪ್ತಿ 2.5 ಕಿಲೋಮೀಟರ್ ಎಂದು ವರದಿಯಾಗಿದೆ. ಇವುಗಳ ಮಾರಕ ವ್ಯಾಪ್ತಿಯು ಸುಮಾರು 20 ಮೀಟರ್‌ಗಳಾಗಿದ್ದು, ಸ್ಫೋಟ ಸಂಭವಿಸಿದಾಗ ಅದರ ಸುತ್ತಮುತ್ತಲಿನ 20 ಮೀಟರ್ ವ್ಯಾಪ್ತಿಯಲ್ಲಿರುವ ಡ್ರೋನ್‌ಗಳನ್ನು ನಾಶಪಡಿಸುವ ಅಥವಾ ಹಾನಿಗೊಳಿಸುವ ಸಾಮರ್ಥ್ಯ ಹೊಂದಿವೆ.
ಎರಡನೇ ಹಂತದಲ್ಲಿ ನಿಖರವಾಗಿ ಗುರಿ ತಲುಪಬಲ್ಲ ಮೈಕ್ರೋ ಕ್ಷಿಪಣಿಗಳನ್ನು ಬಳಸಲಾಗುತ್ತದೆ. ಇವು 2.5 ಕಿಲೋಮೀಟರ್ ದೂರದವರೆಗಿನ ಗುರಿಗಳನ್ನು ಹೊಡೆದುರುಳಿಸಬಲ್ಲವು. ಪ್ರತ್ಯೇಕ ಗುರಿಗಳತ್ತ ತಮ್ಮ ದಿಕ್ಕನ್ನು ತಾವೇ ಬದಲಾಯಿಸಿಕೊಂಡು ಸಾಗುವ ಸಾಮರ್ಥ್ಯ ಈ ಕ್ಷಿಪಣಿಗಳಿಗಿದೆ. ಹೀಗಾಗಿ, ಆಗಾಗ ದಿಕ್ಕು ಬದಲಾಯಿಸುವ ಅಥವಾ ಅತ್ಯಂತ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಹೊತ್ತಿರುವ ಡ್ರೋನ್‌ಗಳನ್ನು ತಡೆಯಲು ಇವು ಸೂಕ್ತವಾಗಿವೆ.
ಲಭ್ಯ ಮಾಹಿತಿಗಳ ಪ್ರಕಾರ, ಈ ವ್ಯವಸ್ಥೆಯ 64 ಅಥವಾ ಅದಕ್ಕಿಂತ ಹೆಚ್ಚಿನ ಸಣ್ಣ ಶಸ್ತ್ರಾಸ್ತ್ರಗಳ ಉಡಾವಣಾ ಸಾಮರ್ಥ್ಯವನ್ನು ಹೊಂದಿದೆ. ಹಿಂದಿನ ಪರೀಕ್ಷೆಗಳಲ್ಲಿ ಕೇವಲ ಎರಡು ಸೆಕೆಂಡುಗಳ ಅವಧಿಯಲ್ಲಿ ಎರಡು ರಾಕೆಟ್‌ಗಳನ್ನು ಉಡಾಯಿಸಲಾಗಿತ್ತು. ಏಕಕಾಲದಲ್ಲಿ ಹಲವು ಬೆದರಿಕೆಗಳು ಎದುರಾದಾಗ ತ್ವರಿತವಾಗಿ ಪ್ರತಿಕ್ರಿಯಿಸುವ ವ್ಯವಸ್ಥೆಯ ಸಾಮರ್ಥ್ಯಕ್ಕೆ ಇದು ಸಾಕ್ಷಿಯಾಗಿದೆ.
ಆದರೆ, ಡ್ರೋನ್‌ಗಳನ್ನು ನಾಶಪಡಿಸುವ ಮೊದಲು ಅವುಗಳನ್ನು ಪತ್ತೆಹಚ್ಚುವುದು ಅಗತ್ಯ. ದೊಡ್ಡ ವಿಮಾನಗಳಿಗೆ ಹೋಲಿಸಿದರೆ ಸಣ್ಣ ಡ್ರೋನ್‌ಗಳು ರೇಡಾರ್‌ಗೆ ಅತ್ಯಂತ ಕಡಿಮೆ ಪ್ರತಿಫಲನ ನೀಡುತ್ತವೆ. ಅವುಗಳ ರೇಡಾರ್ ಸಂಕೇತವು ಸಣ್ಣ ಹಕ್ಕಿಯೊಂದರ ಸಂಕೇತದಂತೆಯೇ ಕಾಣಿಸಬಹುದು. ಇದರಿಂದ ಅವುಗಳನ್ನು ಪತ್ತೆಹಚ್ಚುವುದು ಕಷ್ಟವಾಗುತ್ತದೆ. ಇಂಜಿನಿಯರ್‌ಗಳು ಇದನ್ನು ‘ಲೋ ರೇಡಾರ್ ಕ್ರಾಸ್ ಸೆಕ್ಷನ್’ ಎಂದು ಕರೆಯುತ್ತಾರೆ.
ಭಾರ್ಗವಾಸ್ತ್ರದ ರೇಡಾರ್ ವ್ಯವಸ್ಥೆಯು ಡ್ರೋನ್‌ಗಳ ಗುಣಲಕ್ಷಣಗಳನ್ನು ಅವಲಂಬಿಸಿ ಸುಮಾರು ಆರರಿಂದ ಹತ್ತು ಕಿ.ಮೀ. ದೂರದಲ್ಲಿರುವ ಸಣ್ಣ ಡ್ರೋನ್‌ಗಳನ್ನು ಪತ್ತೆಹಚ್ಚಬಲ್ಲದು.
ವಿಶೇಷ ಕ್ಯಾಮರಾಗಳು ಮತ್ತು ಇನ್‌ಫ್ರಾರೆಡ್ ಉಪಕರಣಗಳು ಡ್ರೋನ್‌ಗಳನ್ನು ನೋಡುವುದರಿಂದ ಮತ್ತು ಅವುಗಳಿಂದ ಹೊರಹೊಮ್ಮುವ ಉಷ್ಣತೆಯಿಂದ ಅವುಗಳನ್ನು ಗುರುತಿಸಲು ನೆರವಾಗುತ್ತವೆ. ಪ್ಯಾಸಿವ್ ರೇಡಿಯೊ ಫ್ರೀಕ್ವೆನ್ಸಿ ಸೆನ್ಸರ್‌ಗಳು ಡ್ರೋನ್‌ಗಳಿಂದ ಹೊರಹೊಮ್ಮುವ ಇಲೆಕ್ಟ್ರಾನಿಕ್ ಸಂಕೇತಗಳನ್ನು ತಾವೇ ಯಾವುದೇ ಸಂಕೇತಗಳನ್ನು ಪ್ರಸಾರ ಮಾಡದೆ ಆಲಿಸುತ್ತವೆ. ಇದರಿಂದ ತಮ್ಮದೇ ರೇಡಿಯೊ ಪ್ರಸರಣದ ಮೂಲಕ ಸೆನ್ಸರ್‌ಗಳ ಇರುವಿಕೆಯನ್ನು ಶತ್ರುಗಳಿಗೆ ಬಹಿರಂಗಪಡಿಸುವ ಅಪಾಯ ಕಡಿಮೆಯಾಗುತ್ತದೆ.
ಇವೆಲ್ಲ ಉಪಕರಣಗಳು ಕಲೆಹಾಕುವ ಮಾಹಿತಿ ಇಡೀ ವ್ಯವಸ್ಥೆಯ ಮೆದುಳಿನಂತೆ ಕಾರ್ಯಾಚರಿಸುವ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್‌ಗೆ ತಲುಪುತ್ತದೆ. ಇದು ಆಕಾಶದಲ್ಲಿ ಹಾರುವ ವಸ್ತುಗಳನ್ನು ಗುರುತಿಸಿ, ಅವುಗಳ ಚಲನವಲನವನ್ನು ಪತ್ತೆಹಚ್ಚುತ್ತದೆ. ಅಪಾಯದ ಮಟ್ಟವನ್ನು ನಿರ್ಧರಿಸಿ, ಸೇನಾ ಸಿಬ್ಬಂದಿಗೆ ನಿರಂತರವಾಗಿ ಮಾಹಿತಿಯನ್ನು ಒದಗಿಸುತ್ತದೆ ಹಾಗೂ ಆಯುಧ ಉಡಾವಣಾ ವ್ಯವಸ್ಥೆಗಳಿಗೆ ಗುರಿಗಳನ್ನು ನಿಗದಿಪಡಿಸುತ್ತದೆ.
ಭಾರತೀಯ ಸಶಸ್ತ್ರ ಪಡೆಗಳ ಕಮಾಂಡ್, ಕಂಟ್ರೋಲ್, ಕಮ್ಯುನಿಕೇಷನ್ಸ್, ಕಂಪ್ಯೂಟರ್ಸ್ ಆಂಡ್ ಇಂಟೆಲಿಜೆನ್ಸ್ ಜಾಲಗಳೊಂದಿಗೆ ಸಂಪರ್ಕ ಸಾಧಿಸುವಂತೆಯೂ ಭಾರ್ಗವಾಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ಸರಳವಾಗಿ ಹೇಳುವುದಾದರೆ, ಇದರಿಂದ ವಿವಿಧ ಸೇನಾ ವ್ಯವಸ್ಥೆಗಳು ಪರಸ್ಪರ ಮಾಹಿತಿಯನ್ನು ಹಂಚಿಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
ಭಾರ್ಗವಾಸ್ತ್ರದ ಇನ್ನೊಂದು ಪ್ರಮುಖ ಅನುಕೂಲವೆಂದರೆ ಅದರ ಚಲನಶೀಲತೆ. ವಾಹನಗಳ ಮೇಲೆ ಅಳವಡಿಸಲಾಗಿರುವುದರಿಂದ ಸೇನಾ ಅಗತ್ಯಗಳಿಗೆ ಅನುಗುಣವಾಗಿ ಭಾರ್ಗವಾಸ್ತ್ರವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದು. ಸಮುದ್ರ ಮಟ್ಟದಿಂದ 5,000 ಮೀಟರ್‌ಗಳವರೆಗಿನ ಎತ್ತರದಲ್ಲಿರುವ ಮರುಭೂಮಿ, ಬಯಲು ಪ್ರದೇಶ ಮತ್ತು ಪರ್ವತ ಪ್ರದೇಶಗಳಲ್ಲಿಯೂ ಕಾರ್ಯನಿರ್ವಹಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಹೀಗಾಗಿ, ಭಾರತದ ವೈವಿಧ್ಯಮಯ ಗಡಿಗಳ ಭೂಪ್ರದೇಶದಲ್ಲಿ ಇದು ಸಂಪೂರ್ಣ ಉಪಯುಕ್ತವಾಗಬಹುದು.
ಭಾರ್ಗವಾಸ್ತ್ರದ ಆರ್ಥಿಕ ಅನುಕೂಲತೆಯೂ ಅಷ್ಟೇ ಮಹತ್ವದ್ದಾಗಿದೆ. ಕೆಲವು ಲಕ್ಷ ರೂಪಾಯಿ ಬೆಲೆಯ ಶತ್ರು ಡ್ರೋನ್ ಅನ್ನು ನಾಶಪಡಿಸಲು ಹಲವಾರು ಕೋಟಿ ರೂ. ಬೆಲೆಬಾಳುವ ಸಾಂಪ್ರದಾಯಿಕ ಇಂಟರ್‌ಸೆಪ್ಟರ್ ಕ್ಷಿಪಣಿಯನ್ನು ಬಳಸಬೇಕಾದ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಿ. ಇಂತಹ ದಾಳಿಗಳು ಪದೇಪದೇ ನಡೆದರೆ, ಅವುಗಳನ್ನು ತಡೆಯುವ ಕಾರ್ಯಾಚರಣೆಗಳು ಆರ್ಥಿಕವಾಗಿ ಅಸಾಧ್ಯವಾಗಬಹುದು. ಭಾರ್ಗವಾಸ್ತ್ರ ಇದಕ್ಕೆ ಹೆಚ್ಚು ಮಿತವ್ಯಯದ ಪರ್ಯಾಯವಾಗಬಲ್ಲದು. ಆದರೆ, ಪ್ರತೀ ಡ್ರೋನ್ ಅನ್ನು ಹೊಡೆದುರುಳಿಸಲು ಭಾರ್ಗವಾಸ್ತ್ರಕ್ಕೆ ತಗಲುವ ನಿಖರ ವೆಚ್ಚವನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿಲ್ಲ.
ಇತ್ತೀಚಿನ ಚಕಮಕಿಗಳು ಸಂಯೋಜಿತ ಡ್ರೋನ್ ದಾಳಿಗಳು ಹೇಗೆ ಸಾಂಪ್ರದಾಯಿಕ ವಾಯು ರಕ್ಷಣಾ ಜಾಲಗಳನ್ನು ಮಣಿಸಬಲ್ಲವು ಎನ್ನುವುದನ್ನು ತೋರಿಸಿವೆ. ಆದ್ದರಿಂದ ಆಧುನಿಕ ಯುದ್ಧಗಳಲ್ಲಿ ಡ್ರೋನ್ ನಿರೋಧಕ ವ್ಯವಸ್ಥೆಗಳ ಮಹತ್ವವೂ ಅಷ್ಟೇ ಹೆಚ್ಚಾಗುತ್ತಿದೆ.
ಭಾರತದ ರಕ್ಷಣಾ ವಲಯದ ಖಾಸಗಿ ಕಂಪೆನಿಗಳು ಆತ್ಮನಿರ್ಭರ ಭಾರತಕ್ಕೆ ನೀಡುವ ಕೊಡುಗೆಗಳಿಗೆ ಭಾರ್ಗವಾಸ್ತ್ರ ಉದಾಹರಣೆಯಾಗಿದೆ. ದೇಶೀಯ ಮಿಲಿಟರಿ ನಾವೀನ್ಯತೆಗಳು ಕೇವಲ ಸರಕಾರಿ ವಲಯದ ಉತ್ಪಾದಕರು ಅಥವಾ ವಿದೇಶಿ ಪೂರೈಕೆದಾರರ ಮೇಲೆ ಅವಲಂಬಿತವಾಗಬೇಕಿಲ್ಲ ಎನ್ನುವ ಸಂದೇಶವನ್ನೂ ಇದು ರವಾನಿಸಿದೆ.
ದೂರದ ಗಡಿಗಳನ್ನು ಕಾಯುವ ಮತ್ತು ಮಹತ್ವದ ಮಿಲಿಟರಿ ನೆಲೆಗಳನ್ನು ರಕ್ಷಿಸುವ ಭಾರತೀಯ ಯೋಧರಿಗೆ ಇಂತಹ ಆಧುನಿಕ ತಂತ್ರಜ್ಞಾನಗಳು ಹೆಚ್ಚುವರಿ ಭದ್ರತೆ ಒದಗಿಸುತ್ತವೆ. ಭಾರ್ಗವಾಸ್ತ್ರವು ಭಾರತದ ಪ್ರಾಚೀನ ಯೋಧ ಪರಂಪರೆ ಮತ್ತು ಆಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನವನ್ನು ಒಗ್ಗೂಡಿಸಿದೆ. ಸ್ವದೇಶಿ ತಂತ್ರಜ್ಞಾನ, ಆವಿಷ್ಕಾರ ಮತ್ತು ಸ್ವಾವಲಂಬನೆಯ ಮೂಲಕ ತನ್ನ ಯೋಧರನ್ನು ಕಾಪಾಡುವ ಭಾರತದ ಸಂಕಲ್ಪವನ್ನು ಇದು ಪ್ರತಿಬಿಂಬಿಸುತ್ತದೆ.






