ವಿಭಜಕ ಶಕ್ತಿಗಳ ವಿರುದ್ಧ ‘ಸಂವಿಧಾನ ಅಧಿನಾಯಕ ಜಯಹೇ’

✍️ಚರಣ್ ಗೌಡ ಬಿ.ಕೆ. ವಿದ್ಯಾರ್ಥಿ, ಬೆಂಗಳೂರು
‘ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು’ ಎಂಬ ಸಾಲು ಬಾಲ್ಯದಿಂದಲೂ ನಮಗೆಲ್ಲ ಚಿರಪರಿಚಿತ. ಆದರೆ, ಪ್ರಭುತ್ವಗಳು ಕಂಬನಿ ಒರೆಸುವುದಕ್ಕಿಂತ ಕಂಬನಿ ಬರಿಸುವ ಕೆಲಸವನ್ನು ನಿತ್ಯ ಮಾಡುತ್ತಿವೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವ ವಸಾಹತುಶಾಹಿಯ ಲೂಟಿಕೋರ, ದಮನಕಾರಿ, ಹಿಂಸಾಶಕ್ತಿಯ ವಿರುದ್ಧ ಅಸಂಖ್ಯಾತ ಶ್ರೀಸಾಮಾನ್ಯರು ಹೋರಾಡಿದರೋ, ಅದೇ ಮಾದರಿಯ ಸರಕಾರಗಳನ್ನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಂಡಿದ್ದೇವೆ, ಕಾಣುತ್ತಿದ್ದೇವೆ ಎಂದು ಅನಿಸುತ್ತದೆ.
ಇತ್ತೀಚೆಗೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಕುರಿತು ದಿಲ್ಲಿಯ ಜಂತರ್-ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಅಹಿಂಸಾತ್ಮಕ ಹೋರಾಟ ನಡೆಸಿತು. ಹಾಗೆ ಜಾರ್ಖಂಡ್‌ನಲ್ಲಿ ಜೆಪಿಎಸ್‌ಸಿ ಮತ್ತು ಜೆಎಸ್ಸೆಸ್ಸಿ ಪರೀಕ್ಷಾ ಅಕ್ರಮದ ಕುರಿತು ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ಜಂತರ್-ಮಂತರ್‌ನಲ್ಲಿ ಪೊಲೀಸರು ಮತ್ತು ಪ್ಯಾರಾಮಿಲಿಟರಿಯವರು ವಿದ್ಯಾರ್ಥಿಗಳನ್ನು ಕ್ರೂರವಾಗಿ ಬಡಿದದ್ದು, ಪೆಲೆಟ್ ಗನ್ ಬಳಸಿದ್ದು ಮತ್ತು ಜಾರ್ಖಂಡ್‌ನಲ್ಲಿ ಪೊಲೀಸರ ಮೂಲಕ ವಿದ್ಯಾರ್ಥಿಗಳನ್ನು ದಮನಿಸುತ್ತಿರುವುದನ್ನು ಗಮನಿಸಿದಾಗ ವಸಾಹತುಶಾಹಿ ಶೈಲಿಯ ಆಡಳಿತ ವ್ಯವಸ್ಥೆ ಇನ್ನೂ ಉಳಿದುಬಂದಿರುವುದನ್ನು ಕಾಣಬಹುದು. ಇದು ರಾಜಕೀ
ಯ ಎಲೈಟ್ ವರ್ಗವು ಹೇಗೆ ಪ್ರಜಾಪ್ರಭುತ್ವವನ್ನು ನಿತ್ಯ ಅಣಕಿಸುತ್ತಿರುತ್ತವೆ ಮತ್ತು ಉತ್ತರದಾಯಿತ್ವಕ್ಕೆ ಕತ್ತರಿ ಹಾಕುತ್ತದೆೆ ಎಂಬುದನ್ನು ತೋರಿಸಿಕೊಡುತ್ತದೆ.
ಪ್ರತೀ ವರ್ಷ ನಾವು ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯೂ ಸ್ವಾತಂತ್ರ್ಯ ಎಂಬುದು ಅವಕಾಶವಂಚಿತರ, ದನಿ ದಮನವಾದವರ ಕಂಗಳಲ್ಲಿ ಹೇಗೆ ಕಾಣುತ್ತದೆ ಎಂಬುದನ್ನು ಧ್ಯಾನಿಸುವಂತೆ ಪ್ರೇರೇಪಿಸಬೇಕು. ಆಗ ಸ್ವಾತಂತ್ರ್ಯ ಸಂಗ್ರಾಮಿಗಳು ಕಂಡ ಕನಸುಗಳನ್ನು ದೇಶವಾಗಿ ಎಷ್ಟರ ಮಟ್ಟಿಗೆ ಸಾಧಿಸಿದ್ದೇವೆ, ಕೈಬಿಟ್ಟಿದ್ದೇವೆ ಎಂಬುದನ್ನು ಅರಿಯಲು ಸಹಾಯವಾಗುತ್ತದೆ. ಖಾಸಗೀ
ಕರಣ, ಕಟ್ಟಡೀಕರಣ ಅಥವಾ ನಗರೀಕರಣಗಳನ್ನೇ ಅಭಿವೃದ್ಧಿಯ ಮಾನದಂಡ ಮಾಡಿ, ದೇಶದ ಜನವರ್ಗಗಳ ಶಿಕ್ಷಣ, ಆರೋಗ್ಯ, ಭೂಮಿ ಹಕ್ಕು ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಅಪ್ರಸ್ತುತೀಕರಣ ಮಾಡುವುದು ಅಪಾಯಕಾರಿ. ಕೆಲವೇ ಕೆಲವರ ಏಳಿಗೆ, ಪಕ್ಷನಿಷ್ಠೆ, ವ್ಯಕ್ತಿ ಆರಾಧನೆ ಮತ್ತು ವಾಚಾಳಿ ಸಂಸ್ಕೃತಿಯೂ ಇಂದು ದೇಶಪ್ರೇಮದ ಹೆಸರಿನಲ್ಲಿ ವಿಕೃತಿ ಮೆರೆಯುತ್ತಿರುವುದು ಯುವಕನಾದ ನನ್ನಲ್ಲಿ ಅಸಹ್ಯ ಭಾವನೆ ಮೂಡಿಸುತ್ತದೆ.
ಪ್ರತಿ ಪ್ರಜೆಯೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತಗಾರರ ಬಗ್ಗೆ ಸಂದೇಹಾತ್ಮಕವಾಗಿ ಇರಬೇಕಾಗಿರುತ್ತದೆ. ಯಾಕೆಂದರೆ ನಮ್ಮದು ಸಮಸಮಾಜವಲ್ಲ, ನಮ್ಮಲ್ಲಿರುವ ಜಾತಿ ಮತ್ತು ವರ್ಗ ವ್ಯವಸ್ಥೆಗಳು ಅನ್ಯದ್ವೇಷ, ಪೂರ್ವಗ್ರಾಹ ಮತ್ತು ಹಿಂಸೆಯನ್ನೇ ನಾನಾ ರೂಪದಲ್ಲಿ ಬಿತ್ತಿ ಬೆಳೆಸುತ್ತವೆ. ಅವು ಅಧಿಕಾರದ ಮಟ್ಟಕ್ಕೇರಿ ಮಾಡುವ ಶೋಷಣೆಗಳು ಸಮಾಜದ ಪೋಷಣೆಗೆ ಅವಶ್ಯಕ ಎನ್ನುವಂತೆ ಬಿಂಬಿಸಿಕೊಳ್ಳುತ್ತವೆ. ‘ಸಂವಿಧಾನ ರಕ್ಷಕರು’ ಮತ್ತು ‘ದೇಶ ರಕ್ಷಕರು’ ಎಂದು ಸ್ವಘೋಷಿಸಿಕೊಳ್ಳುವ ರಾಜಕೀಯ ಪಕ್ಷಗಳು ಆದಿವಾಸಿಗಳ, ದಲಿತರ, ರೈತರ ರಕ್ತವನ್ನು ಹೀರುತ್ತಿರುವವರೇ ಎಂದು ಪಕ್ಷಾತೀತ ಸರಕಾರಗಳ ನೀತಿಗಳು ಮತ್ತು ನಡವಳಿಕೆಗಳಿಂದ ತಿಳಿದುಬರುತ್ತದೆ.
೯ ಲಕ್ಷ ಮರಗಳನ್ನು ಕಡಿಯುವುದರ ಮುಖೇನ ಅಂಡಮಾನ್ ನಿಕೋಬಾರ್‌ನಲ್ಲಿ ಕೇಂದ್ರ ಸರಕಾರ ಯೋಜಿಸಿರುವ ಬಂಡವಾಳಶಾಹಿಪ್ರಿಯ ಟೌನ್‌ಶಿಪ್ ಇರಬಹುದು, ಒಕ್ಕಲುತನ ಮಾಡುವವರ ಒಡಲೊಡೆೆಯುವ ಬಿಡದಿ ಎಐ ಸಿಟಿ ಪ್ರಾಜೆಕ್ಟ್ ಇರಬಹುದು, ಆಂಧ್ರಪ್ರದೇಶದ ತರಳುವಾಡಾದಲ್ಲಿ ಸುಮಾರು ೩೦೦ ಎಕರೆ ಕೃಷಿ ಭೂಮಿಯನ್ನು ಎಐ ಡೇಟಾಕೇಂದ್ರಕ್ಕೆ ಬಲವಂತವಾಗಿ ರಾಜ್ಯ ಸರಕಾರ ವಶ ಪಡಿಸಿಕೊಂಡಿ ದ್ದಿರಬಹುದು ಮತ್ತು ದೇಶದ ಅನೇಕ ಕಡೆ ಕೃಷಿ ಭೂಮಿ ಮತ್ತು ಅರಣ್ಯ ಸಂಪನ್ಮೂಲಗಳನ್ನು ‘ಶಾಸನಾತ್ಮಕವಾಗಿ’ ಕೊಳ್ಳೆಹೊಡೆಯುತ್ತಿರುವ ಸಂಗತಿಗಳು ಇದಕ್ಕೆ ಕೆಲವು ಸಾಕ್ಷಿಗಳು.
ಸಹಸ್ರಾರು ವರ್ಷಗಳಿಂದ ಜಾತಿ ಯಜಮಾನಿಕೆಯೂ ನಮ್ಮ ಸಮಾಜದಲ್ಲಿ ಯಥಾಸ್ಥಿತಿಯನ್ನು ಪೋಷಿಸಿಕೊಂಡು ಬಂದಿದೆ. ಇದರಿಂದಾಗಿಯೇ ನಮ್ಮ ದೇಶದ ಸಂವಿಧಾನ ಪ್ರತಿಪಾದಿಸುವ ಸಮಾನತೆ, ಏಕತೆ, ಭ್ರಾತೃತ್ವ ಮತ್ತು ಮೂಲಭೂತ ಹಕ್ಕುಗಳು ಸಾಮಾಜಿಕ ಪ್ರಜ್ಞೆಯಲ್ಲಿ ಬೇರೂರಲ್ಪಟ್ಟಿಲ್ಲ. ಸಂವಿಧಾನ ಜಾರಿಗೆ ಬಂದು ೭೬ ವರ್ಷ ಕಳೆದರೂ ಸಂವಿಧಾನ ಪ್ರಜ್ಞೆಯನ್ನು ದೇಶದಾದ್ಯಂತ ಪೂರ್ಣಪ್ರಮಾಣದಲ್ಲಿ ವ್ಯಾಪಕಗೊಳಿಸಲು ಬಿಡದಿರುವುದು ದುರದೃಷ್ಟಕರ. ಇದಕ್ಕೆ ಪಾಲುದಾರರಾದ ಸಂಸ್ಥೆಗಳು ಮತ್ತು ಶಕ್ತಿಗಳ ಬಗ್ಗೆ ನಿತ್ಯ ಚರ್ಚೆಗಳಾಗಬೇಕಿದೆ. ಇಂತಹ ಚರ್ಚೆಗಳನ್ನು ಯಾರದ್ದೋ ವಿರುದ್ಧ ಮತ್ಯಾರದ್ದೋ ಪರ ಎನ್ನುವಂತೆ ಗ್ರಹಿಸುವ ಪಾಪ್ಯುಲರ್ ಪೂರ್ವಾಗ್ರಹಗಳು ಕೂಡ ಚಾಲ್ತಿಯಲ್ಲಿವೆ. ಆದರೆ ಅದನ್ನು ಸಹಸ್ರಾರೂ ವರ್ಷಗಳಿಂದ ವ್ಯಕ್ತಿ ಮತ್ತು ಸಮಾಜದ ನೆಲೆಯಲ್ಲಿ ನಡೆದು ಬಂದಿರುವ ಒಳಿತು ಮತ್ತು ಕೆಡಕುಗಳ ಘರ್ಷಣೆ ಎನ್ನುವಂತೆ ಕಾಣಬೇಕಾಗಿದೆ. ಬಸವಣ್ಣ ‘ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ’ ಎಂದದ್ದು, ಸಹಾನುಭೂತಿಯ ಮೌಲ್ಯವನ್ನು ಉನ್ನತಮಟ್ಟಕ್ಕೇರಿಸುತ್ತದೆ. ಬಹುಶಃ ಇವತ್ತು ಸಮಾಜವಾಗಿ ನಾವು ಕಳೆದುಕೊಂಡಿರುವ ಮತ್ತು ಪಡೆಯಬೇಕಿರುವ ಬಹುಮುಖ್ಯ ಮೌಲ್ಯವೆಂದರೆ ಇದುವೇ. ಜನಜೀವನದ ಪ್ರಶ್ನೆಗಳನ್ನು ಅರಿಯಬೇಕಿದ್ದಲ್ಲಿ, ದೇಶ ಯಾವ ಮುಖವಾಗಿ ಚಲಿಸುತ್ತಿದೆ, ಇಲ್ಲಿ ಯಾರ ಸಮಾಧಿಯ ಮೇಲೆ ಯಾರ ಬಂಗಲೆ ಕಟ್ಟಲಾಗುತ್ತಿದೆ ಎಂದೆಲ್ಲಾ ತಿಳಿಯಬೇಕಿದ್ದಲ್ಲಿ ಮೊದಲು ನಮ್ಮಲ್ಲಿ ಸಹಾನುಭೂತಿ ಮೂಡಬೇಕಿದೆ. ಆಗ ಸಂವಿಧಾನ ಆಶಿಸುತ್ತಿರುವ, ನಮ್ಮೆಲ್ಲರ ಮೇಲೆ ಹೊರಿಸುತ್ತಿರುವ ಜವಾಬ್ದಾರಿಗಳ ನೈಜ ದೇಶಪ್ರೇಮ ಅರಿವಾಗುತ್ತದೆ. ಆಗ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ನರಳುತ್ತಿರುವ ಬಾಣಂತಿಯರು, ‘ಅಆಇಈ’ಯ ಮುಖವು ನೋಡದ ಕೂಸುಗಳು, ಒಡಿಶಾ-ಬಿಹಾರದಿಂದ ತುತ್ತು ಅನ್ನಕ್ಕಾಗಿ ಅಲೆದಲೆದು ಬರುವ ಕಾರ್ಮಿಕರು, ಜಾತಿಯಿಂದ ಶೋಷಣೆಗೊಳಗಾಗುತ್ತಿರುವವರು, ನಿರುದ್ಯೋಗಿಗಳು ಮತ್ತು ರೈತರುಗಳಲ್ಲಿ ಭಾರತಾಂಬೆಯನ್ನು ಕಾಣಬಹುದು. ಅವಳ ನೋವಿನ ಪ್ರತಿಧ್ವನಿ ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಕದಲಬಹುದು.
ಲಕ್ಷಾಂತರ ಜನರ ಪರಿಶ್ರಮದಿಂದ ವಸಾಹತುಶಾಹಿಗಳೊಂದಿಗೆ ಸೆಣಸಿ ಪಡೆದ ರಾಜಕೀಯ
ಸ್ವಾತಂತ್ರ್ಯವನ್ನಾಗಲೀ, ಸಂವಿಧಾನದ ಮೂಲಕ ನಾವೆಲ್ಲರೂ ಸಾಧಿಸಬೇಕಿರುವ ಸಾಮಾಜಿಕ ಸ್ವಾತಂತ್ರ್ಯ ಮತ್ತು ಗಣತಂತ್ರವನ್ನಾಗಲೀ ಅತಂತ್ರಗೊಳಿಸುವ ಕುತಂತ್ರ ಶಕ್ತಿಗಳನ್ನು ನಿತ್ಯ ಎದುರಿಸಬೇಕಿದೆ. ಬಹುತ್ವದ ಬೆಳೆಗಳೇ ಹುಟ್ಟುವ ಭಾರತದ ನೆಲದಲ್ಲಿ ಸಾಂಸ್ಕೃತಿಕ ಏಕರೂಪೀಕರಣಕ್ಕೆ ನಾವು ಅವಕಾಶ ಮಾಡಿಕೊಡಬಾರದು. ದೇಶದ ನೈಜ್ಯ ಸಮಸ್ಯೆಗಳನ್ನು ಮರೆಮಾಚಲು ಕೋಮುವಾದ ಮತ್ತು ಜಾತಿವಾದಗಳನ್ನು ಪೋಷಿಸುತ್ತಿರುವ ಇಂದಿನ ನೀಚ ರಾಜಕಾರಣವನ್ನು ಅರ್ಥಮಾಡಿಕೊಳ್ಳಲು ನಾವು ಸೋತರೆ ಹೇಗೆ? ಇಂತಹ ಪ್ರಭುತ್ವ ಸಲಹುವ ವಿಭಜಕ ಶಕ್ತಿಗಳಿಗೆ ನಾವು ‘ಜನಗಣಮನ ಅಧಿನಾಯಕ ಜಯಹೇ’ ಜೊತೆಗೆ ‘ಸಂವಿಧಾನ ಅಧಿನಾಯಕ ಜಯಹೇ’ ಎಂದು ಹಾಡಿ ಸದಾ ಎಚ್ಚರಿಸುತ್ತಿರಬೇಕು. ಕೊನೆಯದಾಗಿ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಕುವೆಂಪು ಹೇಳಿದಂತೆ ನಾವು ಸಮಾಜಶ್ರೀಗಾಗಿಯೂ ನಿರಂಕುಶಮತಿಗಳಾಗಬೇಕಿರುವುದು ಇಂದಿನ ತುರ್ತು.






