ಎ.ಕೆ. ಸುಬ್ಬಯ್ಯ ಕಂಡ ಅರಸು

ಅರಸರು ತಮ್ಮ ಕಾಲದಲ್ಲಿ ಕೆಳವರ್ಗದವರ ಏಳಿಗೆಗಾಗಿ ಹಲವಾರು ಆರ್ಥಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಿ, ಅವುಗಳ ಅನುಷ್ಠಾನದಲ್ಲೂ ಕಟ್ಟುನಿಟ್ಟಿನ ಧೋರಣೆಯನ್ನು ತಳೆದಿದ್ದರು. ಪಟ್ಟಭದ್ರ ಹಿತಾಸಕ್ತಿಗಳ ಪ್ರತಿರೋಧವನ್ನು ನಿರ್ದಾಕ್ಷಿಣ್ಯವಾಗಿ ಧಿಕ್ಕರಿಸಿ, ಶೋಷಿತ ವರ್ಗಗಳಲ್ಲಿ ತಾವು ಯಾರ ಗುಲಾಮರೂ ಅಲ್ಲ. ತಮಗೂ ರಾಜಕಾರಣದಲ್ಲಿ ಎಲ್ಲರಂತೆ ಸರಿಸಮಾನ ಹಕ್ಕಿದೆ ಎಂಬ ಚೈತನ್ಯ ನಿರ್ಮಾಣವಾಯಿತು. ಪ್ರಜ್ಞೆ ಮೂಡಿ ಬಂತು. ಇದೊಂದೇ ಅರಸರು ಕರ್ನಾಟಕದ ಸಾರ್ವಜನಿಕ ಜೀವನಕ್ಕೆ ನೀಡಿದ ಅಮೋಘವಾದ ಕಾಣಿಕೆ ಎನ್ನಬಹುದು.
ನಾಕಂಡಂತೆ ದಿ. ದೇವರಾಜ ಅರಸು ಒಬ್ಬ ಧೀಮಂತ ವ್ಯಕ್ತಿ. ಹಠವಾದಿಯೂ ಪ್ರತಿಭಾವಂತರೂ ಆಗಿದ್ದರು. 1969ರ ಅವಿಭಾಜ್ಯ ಕಾಂಗ್ರೆಸಿನಲ್ಲಿ ಅಂದಿನ ಮುಖಂಡ ನಿಜಲಿಂಗಪ್ಪ ಮತ್ತವರ ಅನುಯಾಯಿಗಳು ಕೊಡುತ್ತಿದ್ದ ಕಿರುಕುಳದಿಂದಾಗಿ ತುಂಬಾ ಯಾತನೆ ಅನುಭವಿಸುತ್ತಿದ್ದರೆಂದು ನಾನು ಕೇಳಿ ತಿಳಿದಿದ್ದೇನೆ.
ಜಾತಿಯ ಮಾತ್ಸರ್ಯದಿಂದ ಕೂಡಿದ ನಮ್ಮ ಸಮಾಜದಲ್ಲಿ ಜಾತಿಯ ಆಸರೆ ಇಲ್ಲದ ಅಲ್ಪಸಂಖ್ಯಾತ ಜಾತಿಗೆ ಸೇರಿದ ಸಾರ್ವಜನಿಕ ಮುಖಂಡರಿಗೆ ಹಾದಿ ಸುಗಮವಿಲ್ಲ. ಕರ್ನಾಟಕ ರಾಜ್ಯವನ್ನು ಆಳುವ ಅಧಿಕಾರ ಲಿಂಗಾಯತ ಜನಾಂಗಕ್ಕೆ ಬಿಟ್ಟರೆ ಬೇರಾರಿಗೂ ಇಲ್ಲವೆಂಬ ವಾತಾವರಣವಿದ್ದ ಕಾಲವದು. ಏನಾದರೂ ಅಪರೂಪಕ್ಕೆ ಲಿಂಗಾಯತರ ಕೈಯಿಂದ ಜಾರಿದರೆ ಅದು ಒಕ್ಕಲಿಗರ ವಶವಾಗಬೇಕು. ಆ ರೀತಿ ರಾಜ್ಯದ ರಾಜ್ಯಾಡಳಿತವೆಂದರೆ ಅದು ಲಿಂಗಾಯತರು ಮತ್ತು ಒಕ್ಕಲಿಗರ ನಡುವಣ ಕೋಳಿ ಕಾಳಗವೇ ಹೊರತು ಬೇರೇನೂ ಅಲ್ಲ ಎಂಬ ಸ್ಥಿತಿಯಲ್ಲಿ ಇತ್ತು.
ಇಂತಹ ಸ್ಥಿತಿಯಲ್ಲಿ ಛಲ ಬಿಡದೆ ಮುಂದುವರಿದು, ಮುಂದೆ ರಾಷ್ಟ್ರದಾದ್ಯಂತ ಬೀಸಿದ ಇಂದಿರಾ ಬಿರುಗಾಳಿಯ ಲಾಭ ಪಡೆದು, ಮುಖ್ಯಮಂತ್ರಿ ಸ್ಥಾನಕ್ಕೇರಿದವರು ದೇವರಾಜ ಅರಸು. ಇವರಲ್ಲಿದ್ದ ಎಡಬಿಡದ ಪ್ರಯತ್ನದ ಛಲ, ಮೇರು ಸದೃಶ್ಯ ಧೈರ್ಯ, ವಾಗ್ಯುದ್ಧದಲ್ಲಿ ಎದುರಾಳಿಯನ್ನು ಕ್ಷಣ ಮಾತ್ರದಲ್ಲಿ ಪರಾಜಿತಗೊಳಿಸುವ ಚಮತ್ಕಾರ, ಈ ಎಲ್ಲಾ ಗುಣಗಳು ಸಮಯ ಬಂದಾಗ ಇವರಿಗೆ ಸಹಕಾರಿಯಾಯಿತೆನ್ನಬಹುದು.
ಹೇಗೋ ಅರಸರು 1972ರ ಸುಮಾರಿನಲ್ಲಿ ಮುಖ್ಯಮಂತ್ರಿ ಆಗಿ ಸುಮಾರು ಏಳು ವರ್ಷಗಳಷ್ಟು ದೀರ್ಘಕಾಲ ವೀರಾಜಮಾನರಾಗಿ ಆಳಿದರು. ಈ ಪೂರ್ಣಾವಧಿಯಲ್ಲಿ ನಾನು ವಿಧಾನ ಪರಿಷತ್ತಿನ ವಿರೋಧ ಪಕ್ಷಗಳ ಮುಂದಿನ ಪೀಠದಲ್ಲಿ ಕುಳಿತು ಅವರ ಆಡಳಿತ ವೈಖರಿಯನ್ನು ಗಮನವಿಟ್ಟು ನೋಡುತ್ತಾ ಆಡಳಿತದಲ್ಲಿ ಕಂಡು ಬರುತ್ತಿದ್ದ ಲೋಪದೋಷಗಳನ್ನು ಹಾಗೂ ಭ್ರಷ್ಟಾಚಾರಗಳನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸುವ ಕರ್ತವ್ಯ ನಿರ್ವಹಿಸಿದೆ. ಹೀಗಾಗಿ ಅವರ ಆಡಳಿತ ಶೈಲಿ ನನ್ನ ನೆನಪಿನಲ್ಲಿ ಇನ್ನೂ ಹಸಿಯಾಗಿದೆ.
ಮುಖ್ಯವಾಗಿ ಇವರ ಆಡಳಿತವನ್ನು ಎರಡು ದೃಷ್ಟಿಯಿಂದ ನೋಡಬಹುದು. ಒಂದನೆಯದು ಇವರು ಆಡಳಿತದಲ್ಲಿ ಗಳಿಸಿದ ದಕ್ಷತೆ ಮತ್ತು ಎರಡನೆಯದು ಇವರು ಬೆಳೆಸಿದ ಭ್ರಷ್ಟಾಚಾರ.
ದಕ್ಷ ಆಡಳಿತಗಾರ
ರಾಜ್ಯದಲ್ಲಿ ಆಗಿ ಹೋದ ಮುಖ್ಯಮಂತ್ರಿಗಳಲ್ಲಿ ದಕ್ಷರೆಂದು ನಾನು ಭಾವಿಸುವ ದಿ. ಕೆಂಗಲ್ ಹನುಮಂತಯ್ಯನವರನ್ನು ಹೋಲುವ ಇನ್ನೊಬ್ಬ ಮುಖ್ಯಮಂತ್ರಿ ಎಂದರೆ ಅರಸರೇ ಆಗಿದ್ದಾರೆ. ಆದರೆ ಹನುಮಂತಯ್ಯ ಅರಸರಿಗಿಂತ ಹಲವು ರೀತಿಯಲ್ಲಿ ಅನುಕೂಲ ಪರಿಸ್ಥಿತಿಯಲ್ಲಿ ಇದ್ದವರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಅನೇಕ ಶ್ರೇಷ್ಠ ನಾಯಕರು ಇವರ ನಿಕಟವರ್ತಿಗಳಾಗಿದುದ್ದಲ್ಲದೆ, ಹನುಮಂತಯ್ಯನವರು ಹುಟ್ಟಿ ಬಂದ ಪ್ರಬಲ ಜಾತಿ ಕೂಡ ಇವರ ಬೆಂಗಾವಲಿಗೆ ಇತ್ತು. ಹಾಗಾಗಿ ಅವರಿಗೆ ಪ್ರಾಮಾಣಿಕತೆ, ದಕ್ಷತೆಗಳಿಂದ ಹೆಸರುಗಳಿಸುವುದು ಸುಲಭವಾಗಿತ್ತು.
ಆದರೆ ಅರಸುರವರ ಸ್ಥಿತಿಯೇ ಬೇರೆ. ಅವರ ಜಾತಿ ಸಂಖ್ಯೆಯ ದೃಷ್ಟಿಯಿಂದ ನಗಣ್ಯ. ನಮ್ಮ ರಾಷ್ಟ್ರದ ಸಾರ್ವಜನಿಕ ಜೀವನದಲ್ಲಿ ಜಾತಿಗಳು ವಹಿಸುವ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಅಧಿಕಾರವೆಂದರೆ ತಮ್ಮ ಆಜನ್ಮ ಸಿದ್ಧ ಹಕ್ಕೆಂದು ಭಾವಿಸುವ ಪ್ರಬಲ ಜನಾಂಗಗಳು, ಅನ್ಯ ಜಾತಿಗಳ ಪ್ರತಿಭೆಯನ್ನು ಗುರುತಿಸಿ, ಸ್ವೀಕರಿಸಿ ಬೆಂಬಲಿಸುವುದು ನಿರೀಕ್ಷಿಸಲಾಗದ ಮಾತು.
ಆದ್ದರಿಂದ ಅರಸರು ಮುಖ್ಯಮಂತ್ರಿಯಾಗಲು ಶ್ರೀಮತಿ ಇಂದಿರಾಗಾಂಧಿಯವರ ಆಶೀರ್ವಾದ ಮತ್ತು ಇಂದಿರಾ ಗಾಳಿಯೇ ಕಾರಣವೆಂದು ಧಾರಾಳವಾಗಿ ಹೇಳಬಹುದು. ಪ್ರಾರಂಭದ ದಿನಗಳಲ್ಲಿ ಅರಸರೂ ಇದನ್ನು ಸರಿಯಾಗಿಯೇ ತಿಳಿದಿದ್ದರು.
ಅವರು ದೊಡ್ಡ ಆರ್ಥಿಕ, ಸಾಮಾಜಿಕ ಚಿಂತಕರೆಂದು ಒಪ್ಪಿಕೊಳ್ಳಲು ನನಗೆ ಸಾಧ್ಯವಿಲ್ಲ. ಅರಸರು ಆಡಳಿತ ಕಲೆಯಲ್ಲಿ ಪರಿಣಿತರಾದ ಒಬ್ಬ ರಾಜಕೀಯ ಮುತ್ಸದ್ದಿಯಾಗಿದ್ದರು. ರಾಜ್ಯದ ಪ್ರಬಲ ಕೋಮುಗಳು ತಮ್ಮನ್ನೆಂದೂ ನಾಯಕರಾಗಿ ಒಪ್ಪಲು ಸಾಧ್ಯವಿಲ್ಲವೆಂಬ ಅರಿವಿದ್ದರಿಂದ, ತಮ್ಮ ಉಳಿವಿಗಾಗಿ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಮತ್ತು ಅನುಸೂಚಿತ ಜಾತಿ ಪಂಗಡಗಳನ್ನೇ ಅವಲಂಬಿಸಬೇಕಾಗಿತ್ತು.
ಅದಕ್ಕಾಗಿಯೇ ಅರಸರು ತಮ್ಮ ಕಾಲದಲ್ಲಿ ಕೆಳವರ್ಗದವರ ಏಳಿಗೆಗಾಗಿ ಹಲವಾರು ಆರ್ಥಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಿ, ಅವುಗಳ ಅನುಷ್ಠಾನದಲ್ಲೂ ಕಟ್ಟುನಿಟ್ಟಿನ ಧೋರಣೆಯನ್ನು ತಳೆದಿದ್ದರು. ಪಟ್ಟಭದ್ರ ಹಿತಾಸಕ್ತಿಗಳ ಪ್ರತಿರೋಧವನ್ನು ನಿರ್ದಾಕ್ಷಿಣ್ಯವಾಗಿ ಧಿಕ್ಕರಿಸಿ, ಶೋಷಿತ ವರ್ಗಗಳಲ್ಲಿ ತಾವು ಯಾರ ಗುಲಾಮರೂ ಅಲ್ಲ. ತಮಗೂ ರಾಜಕಾರಣದಲ್ಲಿ ಎಲ್ಲರಂತೆ ಸರಿಸಮಾನ ಹಕ್ಕಿದೆ ಎಂಬ ಚೈತನ್ಯ ನಿರ್ಮಾಣವಾಯಿತು. ಪ್ರಜ್ಞೆ ಮೂಡಿ ಬಂತು. ಇದೊಂದೇ ಅರಸರು ಕರ್ನಾಟಕದ ಸಾರ್ವಜನಿಕ ಜೀವನಕ್ಕೆ ನೀಡಿದ ಅಮೋಘವಾದ ಕಾಣಿಕೆ ಎನ್ನಬಹುದು.
ಅರಸರ ಕಾಲ ಆಡಳಿತ ವರ್ಗದಲ್ಲಿ ಇನ್ನೂ ಸಾಕಷ್ಟು ದಕ್ಷತೆ, ಯೋಗ್ಯತೆ, ಪ್ರಾಮಾಣಿಕತೆ ಉಳಿದುಕೊಂಡಿತ್ತು. ಅಧಿಕಾರಿಗಳನ್ನು ಅಂಕೆಯಲ್ಲಿಟ್ಟುಕೊಳ್ಳುವ ಚಾಣಾಕ್ಷತೆ ಅರಸರಿಗೆ ಇದ್ದುದರಿಂದ ಅವರ ಬಗ್ಗೆ ಗೌರವ ಅನ್ನವುದಕ್ಕಿಂತ ಒಂದು ರೀತಿಯ ಭಯ ಅಧಿಕಾರಿಗಳಲ್ಲಿತ್ತು.
ಆ ಕಾಲದಲ್ಲಿಯೇ ವಿಧಾನಸೌಧದ ಮೂರನೇಯ ಮಹಡಿಯಲ್ಲಿ ಹರಕಲು ಬಟ್ಟೆಯ ಕುಂಟರು, ಕುರುಡರು. ಹೆಳವರು ಅಲೆದಾಡುತ್ತಿದ್ದ ದೃಶ್ಯವನ್ನು ನಾವು ಮೊದಲ ಬಾರಿಗೆ ಕಂಡೆವು. ಇದೊಂದು ಕ್ರಾಂತಿಕಾರಕ ಬೆಳವಣಿಗೆಯಾಗಿತ್ತು.
ಅರಸರು ಉತ್ತಮ ಸಾರ್ವಜನಿಕ ಭಾಷಣಕಾರರು, ವಿಚಾರವಾದಿಯೂ ಅಲ್ಲದಿರಬಹುದು. ಆದರೆ ಪ್ರತಿಯೊಂದು ವಿಷಯದ ಬಗ್ಗೆಯೂ ಅವರಿಗಿದ್ದ ತಿಳಿವಿನ ಕಾರಣದಿಂದ ಎದುರಾಳಿಗಳ ಮೇಲೆ ಮಾತಿನ ಪ್ರಭಾವ ಮಾಡಿ ಮಲಗಿಸಿಬಿಡುವ ಉತ್ತಮ ಸಂಸತ್ ಪಟು ಅವರಾಗಿದ್ದರು.
ವಿಧಾನ ಮಂಡಲದಲ್ಲಿ ಅವರು ಚರ್ಚೆಗೆ ಉತ್ತರಿಸಲು ಎದ್ದು ನಿಂತರೆ ಸದನ ಗಂಭೀರವಾಗುತ್ತಿತ್ತು. ವಿರೋಧ ಪಕ್ಷಗಳ ವಾದವನ್ನು ಒಂದೊಂದಾಗಿ ತೆಗೆದುಕೊಂಡು ಬಿದ್ರಗೊಳಿಸುತ್ತಿದ್ದ ರೀತಿಯನ್ನು ಅವರ ಪ್ರಬಲ ವಿರೋಧಿಗಳಾದ ನನ್ನಂತಹವರು ಸಹ ಮೆಚ್ಚಲೇಬೇಕಾಗಿತ್ತು.
ಅರಸರ ಅಪಾರ ಅನುಭವ, ಆಳವಾದ ಅಭ್ಯಾಸ, ಅಚಲ ನಿಲುವುಗಳನ್ನು ತಿಳಿದುಕೊಂಡೇ ನಾನು ಅವರನ್ನು ಕೆಣಕುವ ಸಾಹಸಕ್ಕೆ ಕೈ ಹಾಕುತ್ತಿದ್ದೆ. ನನಗೂ ಅರಸರಿಗೂ ಹಲವಾರು ಬಾರಿ ಹಣಾಹಣಿ, ಜಿದ್ದಾಜಿದ್ದಿನ ವಾಗ್ವಾದಗಳು ನಡೆದು ಅವರಿಗೆ ನಾನೊಬ್ಬ ತಲೆನೋವೇ ಆಗಿರಬೇಕು.
ಅವರು ನನ್ನ ಬಗ್ಗೆ ಬಹಿರಂಗವಾಗಿ ಏನೇ ಹೇಳಿದರೂ ಅಂತರಂಗದಲ್ಲಿ ಗೌರವವನ್ನೇ ಇಟ್ಟುಕೊಂಡಿದ್ದರೆಂಬುದು ಅನೇಕರಿಗೆ ತಿಳಿದಿಲ್ಲ. ತಮ್ಮ ಅಧಿಕಾರಾವಧಿಯಲ್ಲಿ ‘ಆ ಸುಬ್ಬಯ್ಯ ಒಬ್ಬನನ್ನು ಬಿಟ್ಟರೆ ವಿರೋಧ ಪಕ್ಷದ ಯಾವನಿಗೆ ಮಾತನಾಡುವ ನೈತಿಕ ಹಕ್ಕಿದೆ?’ ಎಂದು ಹೇಳಿ, ನನ್ನನ್ನೇ ಆಶ್ಚರ್ಯ ಚಿಕಿತಗೊಳಿಸಿದರು. ಅವರ ಮನೋಭಾವ ಅಷ್ಟು ವಿಶಾಲವಾಗಿತ್ತು.
ಕೆಲವು ಅನಿಷ್ಠಗಳು
ಅವರಿಗೆ ದೊರೆತ ಪೋಷಣೆ ಆ ಕಾಲದಲ್ಲಿ ಹುಟ್ಟಿದ ಇಂದಿರಾ ಬ್ರಿಗೇಡ್, ಇಡೀ ಪೊಲೀಸ್ ಇಲಾಖೆಯನ್ನೇ ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಹವಣಿಸಿತ್ತು. ಆ ಕಾಲದಲ್ಲೇ ಚಾಕು, ಚೂರಿ ಸಂಸ್ಕೃತಿಗೆ ಅಸ್ತಿಬಾರ ಹಾಕಲಾಯಿತೆನ್ನಬಹುದು.
ಸ್ವಚ್ಚತೆ ಇಲ್ಲದ ದಕ್ಷತೆ, ಕೆಲಸಕ್ಕೆ ಬರುವುದಿಲ್ಲವೆಂದು ಅರಸರು ತಿಳಿದಂತಿರಲಿಲ್ಲ. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ, ಸ್ವಚ್ಚತೆ, ಸದಾಚಾರಗಳ ಬೆಳವಣಿಗೆಗೆ ಅವರು ಎಳ್ಳಷ್ಟೂ ಗಮನ ಹರಿಸಲಿಲ್ಲ ಎನ್ನುವುದರಲ್ಲೇ ಅವರ ವೈಫಲ್ಯದ ರಹಸ್ಯ ಅಡಗಿದೆ.
ಕಾಲ ಸರಿದಂತೆ ಅಧಿಕಾರದ ಅಮಲು ತಲೆಗೇರಿ ನನಗೆ ಎದುರು ಯಾರು ಎಂಬ ಅಹಂ ಬೆಳೆಯತೊಡಗಿತು. ಅದನ್ನು ಉತ್ತೇಜಿಸುವ ದುಷ್ಟ ಕೂಟವೂ ಇವರನ್ನು ಸುತ್ತುವರಿದಿತ್ತು. ತುರ್ತುಸ್ಥಿತಿ ಕಾಲದಲ್ಲಿ ಭಾರತ ರಾಜಕಾರಣಕ್ಕೆ ಒಂದು ಶಾಪದಂತಿದ್ದ ಸಂಜಯ್ ಗಾಂಧಿಯವರ ಪಾಪವನ್ನು ಹೊತ್ತುಕೊಳ್ಳಲು ಇವರು ನಿರಾಕರಿಸಲಿಲ್ಲ.
ಭ್ರಷ್ಟಾಚಾರ
ಅರಸು ಬೆಳೆಸಿದ ಅನಿಷ್ಠಗಳಲ್ಲಿ ಅತ್ಯಂತ ಪ್ರಮುಖವಾದದ್ದು ಭ್ರಷ್ಟಾಚಾರ. ಅವರು ಮುಖ್ಯಮಂತ್ರಿಯಾಗುವ ಮೊದಲು ತುಂಬಾ ಪ್ರಾಮಾಣಿಕರಾಗಿದ್ದರೆಂದು, ಮಂತ್ರಿಯಾಗುವ ಮೊದಲು ತುಂಬಾ ಸಾದಾ ಜೀವನ ನಡೆಸುತ್ತಿದ್ದರೆಂದು ಕೇಳಿದ್ದೇನೆ.
ಆದರೆ ಅಧಿಕಾರದ ರುಚಿ ಕಂಡ ನಂತರ ಅದನ್ನು ಉಳಿಸಿಕೊಳ್ಳುವ ಹಂಬಲದಿಂದ ಅವರು ಭ್ರಷ್ಟಾಚಾರಕ್ಕೆ ಪೋಷಣೆ ನೀಡಲಾರಂಭಿಸಿದರು. ಅರಸರು ಎಡವಿದ್ದು ಇಲ್ಲೇ. ಭ್ರಷ್ಟಾಚಾರ ಆಳವಾಗಿ ಬೇರು ಬಿಡಲು ಮುಕ್ತ ಅವಕಾಶ ಮಾಡಿಕೊಟ್ಟವರೇ ಅವರು.
ಆದರೆ ಎಲ್ಲಾ ಬಣ್ಣವನ್ನು ಮಸಿ ನುಂಗಿತು ಎಂಬಂತೆ ಅವರು ಜಾರಿಗೆ ತಂದ ಎಲ್ಲಾ ಆರ್ಥಿಕ, ಸಾಮಾಜಿಕ ಕಾರ್ಯಕ್ರಮಗಳು ಅವರ ಭ್ರಷ್ಟಾಚಾರದಿಂದಾಗಿ ನಿರೀಕ್ಷಿತ ಫಲ ನೀಡಲಿಲ್ಲ.
ಹೀಗೆ ಭ್ರಷ್ಟಾಚಾರದ ಬಲದಿಂದ ಏಳು ವರ್ಷ ಮುಂದುವರಿಯುವ ಬದಲು ಭ್ರಷ್ಟಾಚಾರವನ್ನು ವಿರೋಧಿಸಿಕೊಂಡು ಅವರು ಎರಡೇ ವರ್ಷ ಇದ್ದರೂ ಸಾಕಾಗಿತ್ತೆಂದು ನಂಬಿಕೆ.
ಆದರೆ ಅವರ ಪುತ್ರಿಯರಾದಿಯಾಗಿ ಎಲ್ಲಾ ಅನುಯಾಯಿಗಳು ‘ಅರಸರಿಗೆ ಭ್ರಷ್ಟಾಚಾರ ಅನಿವಾರ್ಯವಾಗಿತ್ತು’ ಎಂಬ ಹೇಸಿಗೆಯ ವಾದವನ್ನು ಮುಂದಿಟ್ಟರು. ಆದರೆ ವಿರೋಧ ಪಕ್ಷದವರು ಯಾರಾದರೂ ಆಡಳಿತದಲ್ಲಿ ಭ್ರಷ್ಟಾಚಾರದ ನಿರ್ದಿಷ್ಟ ಪ್ರಕರಣವನ್ನು ಬಯಲಿಗೆಳೆದರೆ ಲೋಕವನ್ನು ಮೆಚ್ಚಿಸುವುದಕ್ಕಾದರೂ ಕ್ರಮ ತೆಗೆದುಕೊಳ್ಳುವುದಾಗಿ ಘಂಟಾಘೋಷವಾಗಿ ಸಾರಿ, ಮೇಲ್ನೋಟಕ್ಕಾದರೂ ಅವರು ಕೆಲವು ಕ್ರಮ ಕೈಗೊಳ್ಳುತ್ತಿದ್ದರು. ಇಂದು ಅದೂ ಸಹ ಇಲ್ಲವಾಗಿದೆ!
ಅರಸರ ಅಧಿಕಾರ ಹೋದ ಮೇಲೆ ಅವರ ಸ್ಥಿತಿ ದಯನೀಯವಾಗಿ ಅವರಿಂದಲೇ ಹೊಸ ಬೆಳಕು ಕಂಡ ಸಮಾಜದ ಹಿಂದುಳಿದ ವರ್ಗಗಳೂ ಅವರ ಬೆಂಬಲಕ್ಕೆ ಬರಲಿಲ್ಲವೆನ್ನುವುದು ಇಂದು ಚರಿತ್ರೆಯಾಗಿ ಉಳಿದಿದೆ.
(ಲಡಾಯಿ ಪ್ರಕಾಶನದಿಂದ ಪ್ರಕಟಿತ ‘ಎ.ಕೆ. ಸುಬ್ಬಯ್ಯ-ಸೌಹಾರ್ದ ಸೆಲೆ’ ಕೃತಿಯಿಂದ ಆಯ್ದ ಭಾಗ)






