Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಎಚ್.ಡಿ. ಶಿಕ್ಷಣದ ಕ್ಷಿಪ್ರ ವಿಸ್ತರಣೆ...

ಪಿಎಚ್.ಡಿ. ಶಿಕ್ಷಣದ ಕ್ಷಿಪ್ರ ವಿಸ್ತರಣೆ : ಸಂಶೋಧನಾ ಕ್ರಾಂತಿಯೋ, ಗುಣಮಟ್ಟದ ಸವಾಲೋ?

ಡಾ. ವಿ. ರಾಮಕೃಷ್ಣಪ್ಪಡಾ. ವಿ. ರಾಮಕೃಷ್ಣಪ್ಪ13 Nov 2026 12:16 PM IST
share
ಪಿಎಚ್.ಡಿ. ಶಿಕ್ಷಣದ ಕ್ಷಿಪ್ರ ವಿಸ್ತರಣೆ : ಸಂಶೋಧನಾ ಕ್ರಾಂತಿಯೋ, ಗುಣಮಟ್ಟದ ಸವಾಲೋ?

ಶಿಕ್ಷಣವು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪಿಎಚ್.ಡಿ. (Doctor of Philosophy) ಪದವಿಯು ಉನ್ನತ ಶಿಕ್ಷಣದ ಪ್ರಮುಖ ಹಂತವಾಗಿದ್ದು, ಸಂಶೋಧನಾ ಕ್ಷೇತ್ರದಲ್ಲಿ ಉನ್ನತ ಪರಿಣತಿಯನ್ನು ಗಳಿಸಲು ಅವಕಾಶ ಕಲ್ಪಿಸುತ್ತದೆ. ಈ ಪದವಿಯು ನಿರ್ದಿಷ್ಟ ಅಧ್ಯಯನ ಕ್ಷೇತ್ರದಲ್ಲಿ ಆಳವಾದ ಜ್ಞಾನ, ಸ್ವತಂತ್ರ ಸಂಶೋಧನಾ ಸಾಮರ್ಥ್ಯ, ವಿಮರ್ಶಾತ್ಮಕ ಚಿಂತನೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದರೊಂದಿಗೆ ಹೊಸ ಸಿದ್ಧಾಂತಗಳು, ಪರಿಕಲ್ಪನೆಗಳು ಮತ್ತು ಆವಿಷ್ಕಾರಗಳ ಸೃಷ್ಟಿಗೆ ಪ್ರೇರಣೆ ನೀಡುತ್ತದೆ. ಪಿಎಚ್.ಡಿ. ಪದವಿಯನ್ನು ಯಶಸ್ವಿಯಾಗಿ ಪಡೆದವರು ತಮ್ಮ ಹೆಸರಿನ ಮುಂದೆ ‘ಡಾ.’ (Dr.) ಎಂಬ ಶೈಕ್ಷಣಿಕ ಗೌರವಸೂಚಕ ಬಿರುದನ್ನು ಬಳಸಲು ಅರ್ಹರಾಗಿರುತ್ತಾರೆ.

ಭಾರತದಲ್ಲಿ ಕಳೆದ ಕೆಲವು ದಶಕಗಳಿಂದ ಪಿಎಚ್.ಡಿ. ಸಂಶೋಧನೆಯ ವ್ಯಾಪ್ತಿ ಗಣನೀಯವಾಗಿ ವಿಸ್ತರಿಸಿದೆ. ವಿಶ್ವವಿದ್ಯಾನಿಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಸಂಶೋಧನಾ ಕೇಂದ್ರಗಳ ಸಂಖ್ಯೆಯಲ್ಲಿನ ಹೆಚ್ಚಳ, ಬೋಧನಾ ವೃತ್ತಿಯತ್ತ ಒಲವು, ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಸಂಶೋಧನಾ ಫೆಲೋಶಿಪ್‌ಗಳು ಮತ್ತು ಇತರ ಆರ್ಥಿಕ ಪ್ರೋತ್ಸಾಹಗಳು, ವೃತ್ತಿ ಅವಕಾಶಗಳು ಹಾಗೂ ಜ್ಞಾನಾಧಾರಿತ ಆರ್ಥಿಕತೆಯ ಬೆಳವಣಿಗೆಯು ವಿದ್ಯಾರ್ಥಿಗಳನ್ನು ಸಂಶೋಧನಾ ಕ್ಷೇತ್ರದತ್ತ ಆಕರ್ಷಿಸುವ ಪ್ರಮುಖ ಅಂಶಗಳಾಗಿವೆ.

ಸಂಖ್ಯಾತ್ಮಕವಾಗಿ ಗಮನಿಸಿದರೆ, ಭಾರತದಲ್ಲಿ ಪಿಎಚ್. ಡಿ. ಅಧ್ಯಯನದ ದಾಖಲಾತಿಯಲ್ಲಿ ಕಳೆದ ಒಂದು ದಶಕ ದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯ (AISHE) 2023-24ರ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪಿಎಚ್.ಡಿ. ಹಂತದ ಒಟ್ಟು ದಾಖಲಾತಿಯು 2014-15ರಲ್ಲಿ 1.17 ಲಕ್ಷವಿದ್ದರೆ, 2023-24ರಲ್ಲಿ ಸುಮಾರು 3.43 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ, ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ಪಿಎಚ್.ಡಿ. ದಾಖಲಾತಿಯಲ್ಲಿ ಸುಮಾರು ಶೇ. 193ರಷ್ಟು ಹೆಚ್ಚಳವಾಗಿದೆ. ಈ ಅಂಕಿಅಂಶಗಳು ಭಾರತದಲ್ಲಿ ಉನ್ನತ ಸಂಶೋಧನಾ ಶಿಕ್ಷಣದ ವಿಸ್ತರಣೆಯ ವೇಗವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.

ಪಿಎಚ್.ಡಿ. ಶಿಕ್ಷಣದ ದಾಖಲಾತಿಯಲ್ಲಿ ಒಟ್ಟಾರೆ ಏರಿಕೆ ಕಂಡುಬಂದಿರುವುದರ ಜೊತೆಗೆ, ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿಯೂ ಗಮನಾರ್ಹ ಪ್ರಗತಿ ದಾಖಲಾಗಿದೆ. 2023-24ರ AISHE ಅಂಕಿಅಂಶಗಳ ಪ್ರಕಾರ, ಸುಮಾರು 1.71 ಲಕ್ಷ ವಿದ್ಯಾರ್ಥಿನಿಯರು ಪಿಎಚ್.ಡಿ. ಅಧ್ಯಯನಕ್ಕೆ ದಾಖಲಾತಿ ಹೊಂದಿದ್ದು, ಒಟ್ಟು ದಾಖಲಾತಿಯಲ್ಲಿ ಶೇ. 49.8ರಷ್ಟು ಪಾಲನ್ನು ಹೊಂದಿದ್ದಾರೆ. ಈ ಪ್ರಮಾಣವು ಡಾಕ್ಟರಲ್ ಶಿಕ್ಷಣದಲ್ಲಿ ಮಹಿಳೆಯರ ಪ್ರಾತಿನಿಧ್ಯವು ಪುರುಷರ ಪ್ರಾತಿನಿಧ್ಯಕ್ಕೆ ಬಹುತೇಕ ಸಮೀಪಿಸಿರುವುದನ್ನು ಸೂಚಿಸುತ್ತದೆ. ಅಲ್ಲದೆ, ಪಿಎಚ್.ಡಿ. ಶಿಕ್ಷಣದಲ್ಲಿ ವಿವಿಧ ಸಾಮಾಜಿಕ ವರ್ಗಗಳ ಪ್ರಾತಿನಿಧ್ಯವನ್ನು ಗಮನಿಸಿದಾಗ, ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿದ್ಯಾರ್ಥಿಗಳ ದಾಖಲಾತಿ 94,210ರಷ್ಟಿದ್ದು, ಒಟ್ಟು ದಾಖಲಾತಿಯಲ್ಲಿ ಶೇ. 28.1ರಷ್ಟಿದೆ. ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್‌ಟಿ) ವಿದ್ಯಾರ್ಥಿಗಳ ದಾಖಲಾತಿ ಕ್ರಮವಾಗಿ 33,637 (ಶೇ. 10.0) ಮತ್ತು 13,843 (ಶೇ. 4.1)ರಷ್ಟಿದೆ.

ವಿಷಯವಾರು ಪಿಎಚ್.ಡಿ. ದಾಖಲಾತಿಯನ್ನು ಪರಿಶೀಲಿಸಿದಾಗ, ವಿಜ್ಞಾನ ವಿಭಾಗವು 80,284 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ (ಶೇ. 23.4) ಪ್ರಥಮ ಸ್ಥಾನದಲ್ಲಿದೆ. ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದಲ್ಲಿ 70,400 (ಶೇ. 20.5), ಸಾಮಾಜಿಕ ವಿಜ್ಞಾನ ವಿಭಾಗದಲ್ಲಿ 38,100 (ಶೇ. 11.1), ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ 23,000 (ಶೇ. 6.7) ಹಾಗೂ ನಿರ್ವಹಣಾ ಅಧ್ಯಯನ ವಿಭಾಗದಲ್ಲಿ 21,300 (ಶೇ. 6.2) ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ವಿಶೇಷವಾಗಿ, ವಿಜ್ಞಾನ ಮತ್ತು ಇಂಜಿನಿಯರಿಂಗ್/ತಂತ್ರಜ್ಞಾನ ವಿಭಾಗಗಳೆರಡೂ ಸೇರಿ ಒಟ್ಟು ಪಿಎಚ್.ಡಿ. ದಾಖಲಾತಿಯ ಸುಮಾರು ಶೇ. 44ರಷ್ಟು ಪಾಲನ್ನು ಹೊಂದುವ ಮೂಲಕ ಡಾಕ್ಟರೇಟ್ ಸಂಶೋಧನೆಯಲ್ಲಿ ಈ ಕ್ಷೇತ್ರಗಳ ಸ್ಪಷ್ಟ ಪ್ರಾಬಲ್ಯ ಹಾಗೂ ವಿದ್ಯಾರ್ಥಿಗಳ ಹೆಚ್ಚಿನ ಒಲವನ್ನು ಎತ್ತಿ ತೋರಿಸುತ್ತವೆ.

ಪಿಎಚ್.ಡಿ. ಶಿಕ್ಷಣದ ದಾಖಲಾತಿಯಲ್ಲಿ ಕಂಡುಬಂದಿರುವ ಗಣನೀಯ ಏರಿಕೆಯು ದೇಶದ ಸಂಶೋಧನಾ ಸಾಮರ್ಥ್ಯದ ವಿಸ್ತರಣೆಯನ್ನು ಸೂಚಿಸಿದರೂ, ಸಂಶೋಧನೆಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ದೃಷ್ಟಿಯಿಂದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತೀಯ ವಿಜ್ಞಾನ ಸಂಸ್ಥೆ (IISc), ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IITs), ಭಾರತೀಯ ನಿರ್ವಹಣಾ ಸಂಸ್ಥೆಗಳು (IIMs), ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ (ISI) ಹಾಗೂ ಇತರ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಲ್ಲಿ ನಡೆಯುವ ಅನೇಕ ಡಾಕ್ಟರೇಟ್ ಸಂಶೋಧನೆಗಳು ಅಂತರ್‌ರಾಷ್ಟ್ರೀಯ ಶೈಕ್ಷಣಿಕ ಮಾನದಂಡಗಳಿಗೆ ಅನುಗುಣವಾಗಿವೆ. ಆದರೆ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಯ ನವೀನತೆ, ವೈಜ್ಞಾನಿಕ ಆಳ, ಸಂಶೋಧನಾ ವಿಧಾನಗಳ ದೃಢತೆ ಮತ್ತು ಜ್ಞಾನಕ್ಕೆ ನೀಡುವ ಹೊಸ ಕೊಡುಗೆಯ ವಿಷಯದಲ್ಲಿ ಸವಾಲುಗಳಿವೆ. ಸಂಶೋಧನಾ ವಿಷಯಗಳ ಪುನರಾವರ್ತನೆ, ಮೂಲ ಸಂಶೋಧನೆಯ ಕೊರತೆ, ಸಮರ್ಪಕ ಮಾರ್ಗದರ್ಶನದ ಅಭಾವ, ಕೃತಿಚೌರ್ಯ ಹಾಗೂ ಪ್ರಕಟಣೆಗಳ ಸಂಖ್ಯೆಯನ್ನು ಹೆಚ್ಚಿಸುವ ಅನಗತ್ಯ ಸ್ಪರ್ಧೆಯು ಸಂಶೋಧನೆಯ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.

ಸಂಶೋಧನೆಯ ಗುಣಮಟ್ಟವನ್ನು ನಿರ್ಧರಿಸುವಲ್ಲಿ ಪ್ರಬಂಧದ ಸ್ವಂತಿಕೆ ಮತ್ತು ವೈಜ್ಞಾನಿಕ ದೃಢತೆಯಷ್ಟೇ ಅಲ್ಲದೆ, ಸಂಶೋಧನಾ ಮಾರ್ಗದರ್ಶನದ ಗುಣಮಟ್ಟ ಹಾಗೂ ವಿದ್ಯಾರ್ಥಿಗಳಿಗೆ ದೊರೆಯುವ ಶೈಕ್ಷಣಿಕ ವಾತಾವರಣವೂ ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ, ಪಿಎಚ್.ಡಿ. ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಮಾರ್ಗದರ್ಶಕರಿಂದ ಎದುರಿಸುತ್ತಿರುವ ಶೋಷಣೆ ಮತ್ತು ಕಿರುಕುಳದ ಘಟನೆಗಳನ್ನು ಹಲವು ರಾಷ್ಟ್ರೀಯ ಮಾಧ್ಯಮಗಳು ಮತ್ತು ದಿನಪತ್ರಿಕೆಗಳು ವರದಿ ಮಾಡಿವೆ. ಈ ವರದಿಗಳಲ್ಲಿ ಲೈಂಗಿಕ ಕಿರುಕುಳ, ಮಾನಸಿಕ ಮತ್ತು ಭಾವನಾತ್ಮಕ ಹಿಂಸೆ, ಜಾತಿ ಹಾಗೂ ಲಿಂಗಾಧಾರಿತ ತಾರತಮ್ಯ, ಸಂಶೋಧನಾ ಶ್ರಮದ ದುರುಪಯೋಗ, ವಿದ್ಯಾರ್ಥಿಗಳನ್ನು ವೈಯಕ್ತಿಕ ಕೆಲಸಗಳಿಗೆ ಒತ್ತಾಯಿಸುವುದು ಹಾಗೂ ಹಣ ಮತ್ತು ಉಡುಗೊರೆಗಳನ್ನು ಕೇಳುವಂತಹ ಗಂಭೀರ ಆರೋಪಗಳು ಬೆಳಕಿಗೆ ಬಂದಿವೆ. ಅಲ್ಲದೆ, ಸಂಶೋಧನಾ ಪ್ರಬಂಧದ ಮೌಲ್ಯಮಾಪನ ಮತ್ತು ಮೌಖಿಕ ಪರೀಕ್ಷೆಯ (Viva Voce) ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಅನಗತ್ಯ ಕಿರುಕುಳ ನೀಡುತ್ತಿರುವ ಘಟನೆಗಳೂ ವರದಿಯಾಗಿವೆ.

ಸಂಶೋಧನಾ ಕ್ಷೇತ್ರದಲ್ಲಿನ ಗುಣಮಟ್ಟ ಮತ್ತು ನೈತಿಕತೆಗೆ ಸಂಬಂಧಿಸಿದ ಸಮಸ್ಯೆಗಳು ಮಾರ್ಗದರ್ಶನದ ಹಂತಕ್ಕೆ ಮಾತ್ರ ಸೀಮಿತವಾಗದೆ, ಪಿಎಚ್.ಡಿ. ಪದವಿಗಳ ಮಾನ್ಯತೆ ಹಾಗೂ ಅವುಗಳ ಆಧಾರದ ಮೇಲೆ ನಡೆಯುವ ಉದ್ಯೋಗ ನೇಮಕಾತಿಗಳ ವಿಶ್ವಾಸಾರ್ಹತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಇತ್ತೀಚೆಗೆ ಕರ್ನಾಟಕದಲ್ಲಿ 2025-26ನೇ ಸಾಲಿನಲ್ಲಿ ನಕಲಿ ಅಥವಾ ಅಮಾನ್ಯವೆಂದು ಗುರುತಿಸಲಾದ ಪಿಎಚ್.ಡಿ. ಪ್ರಮಾಣಪತ್ರಗಳನ್ನು ಸಲ್ಲಿಸಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ 249 ಮಂದಿ ಉದ್ಯೋಗ ಪಡೆದಿರುವ ಪ್ರಕರಣ ವರದಿಯಾಗಿರುವುದು ಈ ಸಮಸ್ಯೆಯ ಗಂಭೀರತೆಯನ್ನು ಮತ್ತಷ್ಟು ಎತ್ತಿ ತೋರಿಸಿದೆ. ಇಂತಹ ಅಕ್ರಮಗಳನ್ನು ತಡೆಗಟ್ಟಲು ಪಿಎಚ್.ಡಿ. ಪದವಿಗಳ ಸಿಂಧುತ್ವವನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವುದು, ಸಂಶೋಧನಾ ಪ್ರಬಂಧಗಳ ಗುಣಮಟ್ಟವನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುವುದು ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುವುದು ಅತ್ಯಗತ್ಯವಾಗಿದೆ.

ಸಂಶೋಧನಾ ಕ್ಷೇತ್ರದ ಗುಣಮಟ್ಟವನ್ನು ಹೆಚ್ಚಿಸಲು ಸಂಶೋಧನಾ ಸಂಸ್ಥೆಗಳ ಸಾಮರ್ಥ್ಯವರ್ಧನೆ ಹಾಗೂ ಸರಕಾರದ ಪರಿಣಾಮಕಾರಿ ನೀತಿ ಬೆಂಬಲ ಅತ್ಯಗತ್ಯವಾಗಿವೆ. ಈ ನಿಟ್ಟಿನಲ್ಲಿ, ಸಮರ್ಥ ಮಾರ್ಗದರ್ಶಕರು, ಸಾಕಷ್ಟು ಸಂಶೋಧನಾ ನಿಧಿ, ಸುಧಾರಿತ ಪ್ರಯೋಗಾಲಯ ಮತ್ತು ಗ್ರಂಥಾಲಯ ಸೌಲಭ್ಯಗಳು ಹಾಗೂ ಸಂಶೋಧನಾ ನೈತಿಕತೆಯ ಕಟ್ಟುನಿಟ್ಟಿನ ಪಾಲನೆ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳ ಅಭಿವೃದ್ಧಿಗೆ ಅಗತ್ಯವಿರುವ ಆರ್ಥಿಕ ಹೂಡಿಕೆಯ ಪ್ರಮಾಣವು ಭಾರತದಲ್ಲಿ ಇನ್ನೂ ಕಡಿಮೆಯಿದೆ. ನೀತಿ ಆಯೋಗದ (2026) ವರದಿಯ ಪ್ರಕಾರ, ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕ್ಷೇತ್ರದ ಮೇಲಿನ ಒಟ್ಟು ವೆಚ್ಚವು (GERD), ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ. 0.65ರಷ್ಟಿದೆ. ಚೀನಾದ ಶೇ. 2.6, ಅಮೆರಿಕದ ಶೇ. 3.4 ಮತ್ತು ದಕ್ಷಿಣ ಕೊರಿಯಾದ ಶೇ. 5.3ರ ಹೂಡಿಕೆಗೆ ಹೋಲಿಸಿದರೆ ಈ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಆದ್ದರಿಂದ, ಸರಕಾರವು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಮೇಲಿನ ಹೂಡಿಕೆಯನ್ನು ಹೆಚ್ಚಿಸುವುದರ ಜೊತೆಗೆ ಸಂಶೋಧನಾ ಮೂಲಸೌಕರ್ಯವನ್ನು ಬಲಪಡಿಸುವುದು ಅಗತ್ಯವಾಗಿದೆ.

ಸಂಶೋಧನಾ ಮೂಲಸೌಕರ್ಯದ ಬಲವರ್ಧನೆಯಷ್ಟೇ ಪಿಎಚ್.ಡಿ. ಶಿಕ್ಷಣದಲ್ಲಿ ಸಾಮಾಜಿಕ ಒಳಗೊಳ್ಳುವಿಕೆಯೂ ಮಹತ್ವದ್ದಾಗಿದೆ. ವಿಶೇಷವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಹಾಗೂ ಕುಟುಂಬದಲ್ಲಿ ಮೊದಲ ಬಾರಿಗೆ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ತಾರತಮ್ಯವಿಲ್ಲದೆ ಸಂಶೋಧನಾ ಅವಕಾಶಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸಂಶೋಧನಾ ವೇತನ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಮುಖ್ಯವಾಗಿದೆ.

ಜಾಗತಿಕ ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ನಿರ್ಧರಿಸುವಲ್ಲಿ ಪ್ರಕಟಣೆಗಳ ಸಂಖ್ಯೆಯಷ್ಟೇ ಅವುಗಳ ಗುಣಮಟ್ಟ ಹಾಗೂ ಹೊಸ ಜ್ಞಾನ ಸೃಷ್ಟಿಗೆ ನೀಡುವ ಕೊಡುಗೆಯೂ ಮಹತ್ವದ್ದಾಗಿದೆ. ಅಮೆರಿಕದ ನ್ಯಾಷನಲ್ ಸೈನ್ಸ್ ಬೋರ್ಡ್ (ಎನ್‌ಎಸ್‌ಬಿ) ಪ್ರಕಟಿಸಿರುವ 2026ರ ವರದಿಯ ಪ್ರಕಾರ, 2024ರಲ್ಲಿ ಚೀನಾ 10.79 ಲಕ್ಷ, ಅಮೆರಿಕ 4.40 ಲಕ್ಷ ಮತ್ತು ಭಾರತ 2.58 ಲಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನಾ ಲೇಖನಗಳನ್ನು ಪ್ರಕಟಿಸಿವೆ. ಜಾಗತಿಕ ಪ್ರಕಟಣೆಗಳಲ್ಲಿ ಈ ದೇಶಗಳ ಪಾಲು ಕ್ರಮವಾಗಿ ಶೇ. 31, 12 ಮತ್ತು 7ರಷ್ಟಿದೆ. ಸಂಶೋಧನೆಯ ನೈಜ ಮೌಲ್ಯವು ಅದರ ಮೌಲಿಕತೆ, ಉಲ್ಲೇಖಗಳ ಸಂಖ್ಯೆ (Citations), ವಿಶ್ವಾಸಾರ್ಹತೆ ಹಾಗೂ ವೈಜ್ಞಾನಿಕ ಪ್ರಗತಿಗೆ ನೀಡುವ ಕೊಡುಗೆಯನ್ನು ಅವಲಂಬಿಸಿರುತ್ತದೆ. ಆದ್ದರಿಂದ, ಅಂತರ್‌ರಾಷ್ಟ್ರೀಯ ಸಹಯೋಗವನ್ನು ಬಲಪಡಿಸುವುದು, ಜಂಟಿ ಸಂಶೋಧನೆಗೆ ಉತ್ತೇಜನ ನೀಡುವುದು ಮತ್ತು ಗುಣಮಟ್ಟದ ಸಂಶೋಧನಾ ಪ್ರಕಟಣೆಗಳಿಗೆ ಆದ್ಯತೆ ನೀಡುವುದು ಅಗತ್ಯವಾಗಿದೆ.

ಒಟ್ಟಾರೆಯಾಗಿ, ಭಾರತದಲ್ಲಿ ಪಿಎಚ್.ಡಿ. ಶಿಕ್ಷಣದ ವಿಸ್ತರಣೆಯು ಕೇವಲ ಸಂಖ್ಯಾತ್ಮಕ ಬೆಳವಣಿಗೆಗೆ ಸೀಮಿತವಾಗದೆ, ಗುಣಮಟ್ಟದ ಸಂಶೋಧನೆ ಮತ್ತು ಹೊಸ ಜ್ಞಾನ ಸೃಷ್ಟಿಗೆ ಆದ್ಯತೆ ನೀಡುವಂತಿರಬೇಕು. ಈ ಉದ್ದೇಶ ಸಾಧಿಸಲು ಯುಜಿಸಿ ಜಾರಿಗೆ ತಂದಿರುವ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಜೊತೆಗೆ, ಸಂಶೋಧನಾ ಸಂಸ್ಥೆಗಳ ಹೊಣೆಗಾರಿಕೆಯನ್ನು ಬಲಪಡಿಸುವುದು ಅಗತ್ಯವಾಗಿದೆ. ಅಲ್ಲದೆ, ಸಂಶೋಧನಾ ಮಾರ್ಗದರ್ಶಕರ ಜವಾಬ್ದಾರಿಯನ್ನು ಖಚಿತಪಡಿಸುವುದು ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸುವುದು ಗುಣಮಟ್ಟದ ಸಂಶೋಧನಾ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಬೇಕು. ಸಂಶೋಧನಾ ಮಾರ್ಗದರ್ಶಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಮನ್ವಯ ಹಾಗೂ ಪರಸ್ಪರ ಸಹಕಾರವು ಗುಣಮಟ್ಟದ ಸಂಶೋಧನೆಗೆ ಅತ್ಯಗತ್ಯವಾಗಿದೆ. ಕೃಷಿ, ಆರೋಗ್ಯ, ಶಿಕ್ಷಣ, ಪರಿಸರ ಮತ್ತು ಸಾಮಾಜಿಕ ನ್ಯಾಯದಂತಹ ಪ್ರಮುಖ ಕ್ಷೇತ್ರಗಳಲ್ಲಿನ ಸಮಸ್ಯೆಗಳಿಗೆ ಸಾಕ್ಷ್ಯಾಧಾರಿತ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಸಂಶೋಧನೆಯನ್ನು ರಾಷ್ಟ್ರದ ಅಭಿವೃದ್ಧಿಯೊಂದಿಗೆ ಬೆಸೆಯಬೇಕು. ಅಂತಿಮವಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಪಿಎಚ್.ಡಿ. ಪದವೀಧರರನ್ನು ರೂಪಿಸುವುದಷ್ಟೇ ಅಲ್ಲದೆ, ಹೊಸ ಜ್ಞಾನವನ್ನು ಸೃಷ್ಟಿಸುವ, ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸುವ ಹಾಗೂ ರಾಷ್ಟ್ರದ ಪ್ರಗತಿಗೆ ಅರ್ಥಪೂರ್ಣ ಕೊಡುಗೆ ನೀಡುವ ಸಾಮರ್ಥ್ಯವುಳ್ಳ ಸಂಶೋಧಕರನ್ನು ಬೆಳೆಸುವುದೇ ನಿಜವಾದ ಸಂಶೋಧನಾ ಕ್ರಾಂತಿಯ ಗುರಿಯಾಗಬೇಕು.

Tags

EducationPh.D. Education
share
ಡಾ. ವಿ. ರಾಮಕೃಷ್ಣಪ್ಪ
ಡಾ. ವಿ. ರಾಮಕೃಷ್ಣಪ್ಪ

ಸಹಪ್ರಾಧ್ಯಾಪಕರು CSSI, ಮಂಗಳೂರು ವಿಶ್ವವಿದ್ಯಾನಿಲಯ

Next Story
X