‘‘ಸರಕಾರ ಬೆಂಬಲ ಕೊಟ್ಟಿದೆ, ತುಳುವರು ಭಾಷೆ ಬೆಳೆಸಬೇಕು’’ -ಡಾ. ಪುರುಷೋತ್ತಮ ಬಿಳಿಮಲೆ

ಕರ್ನಾಟಕ ಸರಕಾರವು 2026 ಸೆಪ್ಟಂಬರ್ 18ರಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ತುಳು ಭಾಷೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ರಾಜ್ಯದ ಎರಡನೇ ಅಧಿಕೃತ ಆಡಳಿತ ಭಾಷೆಯನ್ನಾಗಿ ಘೋಷಿಸಿದೆ. ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಈಗ ಆಡಳಿತ ಭಾಷೆಯಾಗಿ ತುಳುವನ್ನು ಕರ್ನಾಟಕ ಸರಕಾರ ಅಂಗೀಕರಿಸಿದ್ದರಿಂದ ಇದರ ಆಧಾರದ ಮೇಲೆ 8ನೇ ಶೆಡ್ಯೂಲ್‌ಗೆ ತುಳು ಸೇರಬೇಕು ಎನ್ನುವ ವಾದವನ್ನು ನಮ್ಮ 28 ಜನ ಸಂಸದರು ಲೋಕಸಭೆಯಲ್ಲಿ ಮಾತನಾಡಬೇಕು. ರಾಜ್ಯ ಸರಕಾರ ಇದೀಗ ಅಧಿಕೃತ ಭಾಷೆಯನ್ನಾಗಿ ಮಾಡಿದೆ. ಹೀಗಾಗಿ ಕ್ಯಾಬಿನೆಟ್ ಒಪ್ಪಿಗೆಯ ಮೂಲಕ ತುಳುವರು ಕೇಂದ್ರ ಸರಕಾರಕ್ಕೆ ಮನವಿ ಮಾಡಬಹುದು. ಆದರೆ ಇದೀಗ 135 ಭಾಷೆಗಳು 8ನೇ ಶೆಡ್ಯೂಲಿಗೆ ಸೇರಲು ಕಾಯುತ್ತಿವೆ. ಹೀಗಾಗಿ ಕೇಂದ್ರ ಸರಕಾರ ಈ ಅಪಾಯ ಯಾಕೆ ಎಂದು ಸುಮ್ಮನಿದೆ. ಎರಡನೆಯದು ಕೇಂದ್ರ ಸರಕಾರ ಈಗ ಮಾಡುವುದನ್ನು ನೋಡಿದರೆ ಅವರ ಎಲ್ಲಾ ಪ್ರಯತ್ನಗಳು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡುವ ಕಡೆ ಇದೆಯೇ ಹೊರತು ಸಣ್ಣ ಭಾಷೆಗಳ ಸಬಲೀಕರಣದ ಬಗ್ಗೆ ಆಸಕ್ತಿ ಇಲ್ಲ.
► ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡದ ಹಿತರಕ್ಷಣೆಯ ಜೊತೆಜೊತೆಗೆ ರಾಜ್ಯದ ಅಧಿಕೃತ ಭಾಷೆಯಾದ ತುಳುವಿನ ಈ ಮಾನ್ಯತೆಯ ಪ್ರಕ್ರಿಯೆಯನ್ನು ನೀವು ಹೇಗೆ ನೋಡುತ್ತೀರಿ?
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ನೇರವಾಗಿ ತುಳುವಿಗೆ ಸಂಬಂಧಪಟ್ಟು ನಾನು ಕಳೆದ ಎರಡು ವರ್ಷಗಳಿಂದ ಏನೂ ಕೆಲಸ ಮಾಡಿಲ್ಲ. ಆದರೆ ಕರ್ನಾಟಕದಲ್ಲಿರುವ ಕನ್ನಡೇತರ ಭಾಷೆಗಳು ಸಬಲೀಕರಣದ ಬಗ್ಗೆ ಯೋಜನೆಗಳನ್ನು ತಯಾರಿಸಿದ್ದೇನೆ ಮತ್ತು ಸರಕಾರಕ್ಕೆ ಕೊಟ್ಟಿದ್ದೇನೆ. ಅದರಲ್ಲಿ 27 ಭಾಷೆಗಳಿವೆ. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಬರುವ ಮೊದಲು ದಿಲ್ಲಿಯಲ್ಲಿರುವಾಗ ತುಂಬಾ ಕೆಲಸ ಮಾಡಿದ್ದೆವು.
► ಸಂಪುಟದ ಆದೇಶದಲ್ಲಿ ತುಳುವನ್ನು ‘ಕರ್ನಾಟಕ ರಾಜ್ಯದ ಹೆಚ್ಚುವರಿ ಆಡಳಿತ ಭಾಷೆ’ ಎನ್ನಲಾಗಿದ್ದರೂ, ಅನುಷ್ಠಾನವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇದು ಕೇವಲ ಜಿಲ್ಲಾ ಮಾನ್ಯತೆಯೇ ಅಥವಾ ಪೂರ್ಣ ಪ್ರಮಾಣದ ರಾಜ್ಯ ಮಾನ್ಯತೆಯೇ?
ಆರಂಭದಲ್ಲಿ ಸರಿಯಾಗಿಯೇ ತೀರ್ಮಾನಿಸಲಾಗಿದೆ. ಬೀದರ್‌ನಲ್ಲಿ ಮತ್ತು ರಾಯಚೂರಿನಲ್ಲಿ ನಾಲ್ವರು ತುಳುವರು ಇದ್ದಾರೆ ಎಂದು ಪ್ರಾಕ್ಟಿಕಲ್ ಆಗಿ ಆಡಳಿತ ಭಾಷೆಯನ್ನಾಗಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಒಬ್ಬ ಅನುವಾದಕ ಬೇಕು. ಅನುಕೂಲತೆಗಳು ಇರಬೇಕು. ಭಾರತ ಇದೀಗ ಬೆಳೆಯುತ್ತಿರುವ ದೇಶ, ಅಭಿವೃದ್ಧಿ ಶೀಲ ದೇಶ. ಹೀಗಾಗಿ ಆರಂಭದಲ್ಲಿ ಉಡುಪಿ-ಮಂಗಳೂರಿನಲ್ಲಿ ತುಳು ಆಡಳಿತ ಭಾಷೆಯನ್ನಾಗಿ ಮಾಡಿದ್ದು ಸರಿ. ಕೇರಳದವರು ಸಾಧ್ಯವಾದರೆ ಕೇರಳ ಸರಕಾರವನ್ನು ವಿನಂತಿಸಿಕೊಂಡು ಕಾಸರಗೋಡು ಜಿಲ್ಲೆಯಲ್ಲಿ ತುಳುವನ್ನು ಅಧಿಕೃತ ಭಾಷೆಯನ್ನಾಗಿ ಮಾಡಬಹುದು. ಆದರೆ ತುಳುವನ್ನು ಇಡೀ ಕರ್ನಾಟಕಕ್ಕೇ ರಾಜ್ಯ ಭಾಷೆ ಮಾಡಿ ಎಂದು ಕೇಳುವುದು ವಾಸ್ತವದಲ್ಲಿ ಸರಿಯಲ್ಲ.
► ತುಳು ಅಕಾಡೆಮಿಯಿಂದ ಆಗಿರುವ ಪ್ರಯತ್ನಗಳೇನು?
ಮುಖ್ಯವಾಗಿ 1993ರಲ್ಲಿ ಡಾ. ವಿವೇಕ್ ರೈ ಅವರು ತುಳು ಅಕಾಡಮಿಯ ಅಧ್ಯಕ್ಷರಾಗಿದ್ದರು. ಅವರು ತುಳುವನ್ನು 8ನೇ ಶೆಡ್ಯೂಲ್‌ಗೆ ಸೇರಿಸಬೇಕು ಎಂದು ಬಹಳ ಅತ್ಯುತ್ತಮವಾದ ಮನವಿ ಪತ್ರವನ್ನು ಸಿದ್ಧಪಡಿಸಿದ್ದರು. ತುಳುವಿನ ಪ್ರಾಚೀನತೆ, ಶ್ರೀಮಂತಿಕೆ ಮತ್ತು ತುಳುವಿನಲ್ಲಿ ಕೆಲಸ ಮಾಡಿದ ಮಹನೀಯರು, ತುಳುವಿಗೆ ಗೌರವ ತಂದು ಕೊಟ್ಟ ಜಗತ್ತಿನ ವಿವಿಧೆಡೆ ಇರುವ ತುಳುವರ ವಿವರವನ್ನು ಪಟ್ಟಿಮಾಡಿ 650 ಪುಟದ ಮನವಿ ಪತ್ರವನ್ನು ಸಿದ್ಧಪಡಿಸಿದ್ದರು. ಆಗಿನ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮೂಲಕ ದಿಲ್ಲಿಗೆ ಕಳುಹಿಸಿಕೊಟ್ಟಿದ್ದರು. ಆಗ ನಾನು ದಿಲ್ಲಿಯಲ್ಲಿದ್ದು, ತುಳು ಅಕಾಡಮಿಯಿಂದ ನನಗೆ ಆ ಮನವಿ ಪತ್ರ ಬಂದ ಕಾರಣ ನಾವು ಅದನ್ನು ಹಿಡಿದುಕೊಂಡು ಏಳೆಂಟು ವರ್ಷ ಕಾದೆವು. 2002ರಲ್ಲಿ ದೊಡ್ಡ ತುಳು ಸಮಾವೇಶ ಮಾಡಿದ್ದೆವು. ಆ ಸಮಾವೇಶದ ಮುಂಚೂಣಿಯಲ್ಲಿ ವೀರಪ್ಪ ಮೊಯ್ಲಿ ಇದ್ದರು, ಜಾರ್ಜ್ ಫೆರ್ನಾಂಡಿಸ್ ಮತ್ತು ಆಸ್ಕರ್ ಫೆರ್ನಾಂಡಿಸ್ ಮೊದಲಾದವರು ಇದ್ದರು. ಕರಾವಳಿ ಕರ್ನಾಟಕದ ತುಳು ಮಾತನಾಡುವ ಮೂವರು, ತುಳು ಸಿನೆಮಾ ಕಲಾವಿದರು ಮೊದಲಾದವರನ್ನು ಕರೆಸಿ ಮನವಿಯನ್ನು ಪರಿಷ್ಕರಿಸಿ ಸಭೆಯಲ್ಲಿ ಓದಿ ಒಪ್ಪಿ ನಿರ್ಣಯ ಅಂಗೀಕರಿಸಲಾಯಿತು. ಜಾರ್ಜ್ ಫೆರ್ನಾಂಡಿಸ್ ಅವರು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮನೆಗೆ ಹೋಗಿ ತುಳುವನ್ನು 8ನೇ ಶೆಡ್ಯೂಲ್‌ಗೆ ಸೇರಿಸುವಂತೆ ಮನವಿ ಮಾಡಿದ್ದರು. ಆದರೂ ಏನೂ ಆಗಲಿಲ್ಲ.
► 8ನೇ ಶೆಡ್ಯೂಲ್‌ಗೆ ಸೇರಿಸುವ ಪ್ರಯತ್ನದಲ್ಲಿದ್ದ ಅಡ್ಡಿ ಆತಂಕಗಳೇನು?
ವಾಜಪೇಯಿ ಅವರಿಗೆ ಮನವಿ ಮಾಡಿದ ಐದಾರು ತಿಂಗಳಲ್ಲಿ ಲೋಕಸಭೆಯಲ್ಲಿ ಹೊಸದಾಗಿ 8ನೇ ಶೆಡ್ಯೂಲ್‌ಗೆ ಸೇರಿಸುವ ಭಾಷೆಗಳ ಬಗ್ಗೆ ಚರ್ಚೆಗಳಾದವು. ಆ ಚರ್ಚೆ ನಡೆಯುವಾಗ ತುಳುವಿನ ಪರವಾಗಿ ಇಡೀ ಕರ್ನಾಟಕದಿಂದ ಮಾತನಾಡಲು ಮಂಗಳೂರಿನ ಧನಂಜಯ ಕುಮಾರ್ ಒಬ್ಬರೇ ಇದ್ದರು. ಅವರ ಜೊತೆಗೆ ಕರ್ನಾಟಕದ ಇತರ ಸಂಸದರು ಸೇರಿಕೊಳ್ಳಲಿಲ್ಲ. ಸೇರಿಕೊಂಡಿದ್ದರೆ ಆಗಲೇ ತುಳು 8ನೇ ಶೆಡ್ಯೂಲ್‌ಗೆ ಸೇರಿಬಿಡಬಹುದಾಗಿತ್ತು. ಆದರೆ ಕರಾವಳಿಯೇತರ ಸಂಸದರಿಗೆ ಆ ಕಾಲದಲ್ಲಿ ತುಳುವಿನ ಬಗ್ಗೆ ಹೆಚ್ಚು ಆಸಕ್ತಿ ಇರಲಿಲ್ಲ. ಹೀಗಾಗಿ ತುಳು ಒಂದು ಬಿಟ್ಟು ಪಟ್ಟಿಯಲ್ಲಿದ್ದ ಉಳಿದ 4 ಭಾಷೆಗಳು 8ನೇ ಶೆಡ್ಯೂಲ್‌ಗೆ ಸೇರಿದವು. ಇದಾಗಿ ಮೂರು ವರ್ಷವಾದ ಮೇಲೆ ಸರಕಾರವನ್ನು ಕೇಳಿದರೆ ನಾವು 8ನೇ ಶೆಡ್ಯೂಲ್‌ಗೆ ಸೇರಿಸಲು ಭಾಷೆಗಳನ್ನು ಪಟ್ಟಿ ಮಾಡಿದ್ದೇವೆ ಎಂದು ಹೇಳಿದರು. ಅದರಲ್ಲಿ ಕರ್ನಾಟಕದಿಂದ ಕೊಡವ ಮತ್ತು ಲಂಬಾಣಿ ಭಾಷೆಗಳು ಇದ್ದವು. ಭೋಜಪುರಿ, ರಾಜಸ್ಥಾನಿ ಮೊದಲಾಗಿ 35 ಭಾಷೆಗಳಿದ್ದವು. ನಾವು ಇದನ್ನು ಸೀತಾಕಾಂತ್ ಮಹಾಪಾತ್ರ ಅವರ ಸಮಿತಿಗೆ ಶಿಫಾರಸು ಮಾಡಿದ್ದೇವೆ ಎಂದು ತಿಳಿಸಿದರು. ಸೀತಾಕಾಂತ್ ಮಹಾಪಾತ್ರ ಜ್ಞಾನಪೀಠ ಪಡೆದ ಒಡಿಶಾದ ಲೇಖಕ. ಅವರು ಎರಡು ವರ್ಷದ ನಂತರ ಯಾವ ತೀರ್ಮಾನ ತೆಗೆದುಕೊಳ್ಳದೆ, ‘‘ಒಂದು ಭಾಷೆ 8ನೇ ಶೆಡ್ಯೂಲ್‌ಗೆ ಸೇರಿಸಲು ಕ್ರಮ ನಿಯಮಗಳು ಏನು ಎಂಬುದನ್ನು ಸರಕಾರವೇ ರೂಪಿಸಬೇಕು. ಸರಕಾರ ಅದನ್ನು ರೂಪಿಸಿದ ಮೇಲೆ ಈ 35 ಭಾಷೆಗಳ ಬಗ್ಗೆ ಕ್ರಮ ಕೈಗೊಳ್ಳಬಹುದು’’ ಎಂದು 2007ರಲ್ಲಿ ಅವರು ಬರೆದರು. ಆದರೆ ಕೇಂದ್ರ ಸರಕಾರ ಇನ್ನೂ ಒಂದು ಭಾಷೆಯನ್ನು 8ನೇ ಶೆಡ್ಯೂಲ್‌ಗೆ ಸೇರಿಸಲು ನಿಜವಾದ ಕ್ರಮ ನಿಯಮಗಳು ಯಾವುವು ಎಂದು ಮಾಡಿಲ್ಲ.
► ಹಿಂದಿನ ಸರಕಾರದ ಅವಧಿಯಲ್ಲಿ ತುಳುವನ್ನು ಅಧಿಕೃತ ಭಾಷೆಯನ್ನಾಗಿ ಮಾಡಲು ಇದ್ದ ಮುಖ್ಯ ತಾಂತ್ರಿಕ ಮತ್ತು ಕಾನೂನು ಅಡೆತಡೆಗಳು ಯಾವುವು?
ಒಂದು ಭಾಷೆ 8ನೇ ಶೆಡ್ಯೂಲ್‌ಗೆ ಸೇರಿದರೆ ಸ್ವಯಂಚಾಲಿತವಾಗಿ ರಾಜ್ಯ ಭಾಷೆ ಆಗುತ್ತದೆಯೇ ಅಥವಾ ಒಂದು ರಾಜ್ಯ ಒಂದು ಭಾಷೆಯನ್ನು ಗುರುತಿಸಿದಲ್ಲಿ ಅದು ಸ್ವಯಂಚಾಲಿತವಾಗಿ 8ನೇ ಶೆಡ್ಯೂಲ್‌ಗೆ ಸೇರುವುದೇ? ಎನ್ನುವ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರವಿಲ್ಲ. ಉದಾ: ಡೋಗ್ರಿ ಭಾಷೆ 2008ರಲ್ಲಿ 8ನೇ ಶೆಡ್ಯೂಲ್‌ಗೆ ಸೇರಿದೆ. ಆದರೆ ಅದು ಕಾಶ್ಮೀರದ ಅಧಿಕೃತ ಭಾಷೆಯಲ್ಲ. ಮೈಥಿಲಿ ಬಿಹಾರದ ಅಧಿಕೃತ ಭಾಷೆಯಲ್ಲದೆ ಇದ್ದರೂ 8ನೇ ಶೆಡ್ಯೂಲ್‌ಗೆ ಸೇರಿದೆ. ಸಂವಿಧಾನದಲ್ಲಿ ಇರುವ ಹಾಗೆ ಒಂದು ಭಾಷೆ ರಾಜ್ಯದ ಅಧಿಕೃತ ಭಾಷೆಯಾದರೆ ಸ್ವಯಂಚಾಲಿತವಾಗಿ 8ನೇ ಶೆಡ್ಯೂಲ್‌ಗೆ ಸೇರುತ್ತದೆ. ಉತ್ತಮ ಉದಾಹರಣೆ ಕೊಂಕಣಿ. ಕೊಂಕಣಿ ಬಹಳ ತಡವಾಗಿ 8ನೇ ಶೆಡ್ಯೂಲಿಗೆ ಸೇರಿದೆ. ಅದಕ್ಕೆ ತನ್ನದೇ ಆದ ರಾಜ್ಯವಿರಲಿಲ್ಲ. ಯಾವಾಗ ಗೋವಾ ಅದನ್ನು ಅಧಿಕೃತ ಭಾಷೆ ಎಂದು ಘೋಷಿಸಿತೋ ಅದು 8ನೇ ಶೆಡ್ಯೂಲಿಗೆ ಸೇರಿದೆ.
► 8ನೇ ಶೆಡ್ಯೂಲ್‌ಗೆ ಸೇರುವುದಿಲ್ಲ ಎಂದು ಮನವರಿಕೆಯಾದ ನಂತರ ತುಳು ಸಂಘ-ಸಂಸ್ಥೆಗಳು ಏನು ತೀರ್ಮಾನ ಕೈಗೊಂಡಿದ್ದವು?
ಪ್ರಾಧಿಕಾರಕ್ಕೆ ಸೇರುವ ಮೊದಲು ನಾನು ದಿಲ್ಲಿಯಲ್ಲಿದ್ದಾಗ ತುಳು 8ನೇ ಶೆಡ್ಯೂಲ್‌ಗೆ ಸೇರುವುದಿಲ್ಲ ಎಂದು ಗೊತ್ತಾಯಿತು. ಪ್ರಧಾನಿಯವರು ಚುನಾವಣೆ ಸಂದರ್ಭ ಮಂಗಳೂರಿಗೆ ಬರುವ ಮೊದಲು ಅವರ ಕಚೇರಿಗೆ ಹೋಗಿ ವಿವೇಕ್ ರೈ ಅವರು ಸಿದ್ಧಪಡಿಸಿದ ಮನವಿಯನ್ನು ಸಲ್ಲಿಸಿದ್ದೆವು ಮತ್ತು ತುಳುವಿನ 8ನೇ ಶೆಡ್ಯೂಲ್ ಬಗ್ಗೆ ಮಾತನಾಡಿ ಎಂದು ಹೇಳಿದ್ದೆವು. ತುಳುವನ್ನು 8ನೇ ಶೆಡ್ಯೂಲ್‌ಗೆ ಸೇರಿಸುವ ಬಗ್ಗೆಯಲ್ಲ, ಸೇರಿಸಲು ಇರುವ ಸಮಸ್ಯೆಗಳ ಬಗ್ಗೆ ಹೇಳಿದರೂ ಜನರಿಗೆ ಸಂತೋಷವಾಗುತ್ತದೆ ಎಂದು ತಿಳಿಸಿದ್ದೆವು. ಜನರು ನಿರೀಕ್ಷೆ ಮಾಡುತ್ತಿದ್ದಾರೆ ಎಂದೂ ಹೇಳಿದ್ದೆವು. ಆದರೆ ಎರಡು ಬಾರಿ ಮನವಿ ನೀಡಿದರೂ 8ನೇ ಶೆಡ್ಯೂಲ್ ಬಗ್ಗೆ ಮಂಗಳೂರಿನಲ್ಲಿ ಅವರು ಮಾತನಾಡಲಿಲ್ಲ. ದಿಲ್ಲಿಯಲ್ಲಿ ನಮ್ಮ ಅನೇಕ ಗೆಳೆಯರು ಬಹಳ ಕೆಲಸ ಮಾಡಿದ್ದೇವೆ. ಈ ನಡುವೆ 2011ಕ್ಕಾಗುವಾಗ ಭಾಷೆಗಳ ಬಗ್ಗೆ ಜಾಗೃತಿ ಬೆಳೆದು 8ನೇ ಶೆಡ್ಯೂಲ್‌ಗೆ ಸೇರಲು 99 ಭಾಷೆಗಳು ಪಟ್ಟಿಗೆ ಬಂದವು. 5 ಭಾಷೆ ಇರುವಾಗಲೇ ತುಳು ಸೇರಿರಲಿಲ್ಲ. ಆದರೆ ಇದೀಗ ಸುಮಾರು 90 ಲಕ್ಷ ಮಂದಿ ಮಾತನಾಡುವ ರಾಜಸ್ಥಾನಿ ಭಾಷೆ ಮೊದಲಾದವು ಪಟ್ಟಿಯಲ್ಲಿವೆ.
2013ರ ಸಂದರ್ಭದಲ್ಲಿ ತುಳುವನ್ನು 8ನೇ ಶೆಡ್ಯೂಲ್‌ಗೆ ಸೇರಿಸಲು ಸಾಧ್ಯವಾಗದೆ ಇರುವುದು ಮನವರಿಕೆಯಾಯಿತು. ಆದ್ದರಿಂದ ಸಂವಿಧಾನದ ಪರಿಚ್ಛೇದದ 344-1ರ ಪ್ರಕಾರ ರಾಜ್ಯಗಳು ಆ ರಾಜ್ಯಗಳ ಅಧಿಕೃತ ಭಾಷೆಗಳ ಅಡಿಯಲ್ಲಿರುವ ಇತರ ಸಣ್ಣ ಭಾಷೆಗಳನ್ನು 2ನೇ ಅಧಿಕೃತ ಭಾಷೆಯಾಗಿ ಘೋಷಿಸಬಹುದು ಎಂದು ತಿಳಿದುಬಂತು. ಉದಾಹರಣೆಗೆ ದಿಲ್ಲಿಯಲ್ಲಿ ಹಿಂದಿ ಅಧಿಕೃತ ಭಾಷೆಯಾಗಿದ್ದರೂ ಉರ್ದು, ಪಂಜಾಬಿ ಮತ್ತು ಇಂಗ್ಲಿಷ್ ಕೂಡ ಅಧಿಕೃತ ಭಾಷೆಗಳಾದವು. ಹಾಗೆಯೇ ಆಂಧ್ರ/ತೆಲಂಗಾಣದಲ್ಲಿ ಉರ್ದು ಎರಡನೇ ಅಧಿಕೃತ ಭಾಷೆಯಾಯಿತು. ಬಾಂಗ್ಲಾದಲ್ಲಿ ಸಂಥಾಲಿ, ಅಸ್ಸಾಮೀಸ್, ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ಅಧಿಕೃತ ಭಾಷೆಗಳಾದವು.
► ತುಳು ಒಕ್ಕೂಟಗಳು ಮತ್ತು ಹೋರಾಟಗಾರರಿಗೆ ರಾಜ್ಯಸರಕಾರದಿಂದ ಇರುವ ನಿರೀಕ್ಷೆ ನಿಜವಾಗಿದೆಯೇ?
ಪಣಿಯಾಡಿಯವರ ಕಾಲದಿಂದಲೂ ತುಳುವನ್ನು ಅಧಿಕೃತ ಭಾಷೆ ಮಾಡಬೇಕು ಎನ್ನುವ ಕೂಗು ಇತ್ತು. ಆದರೆ ವಿವೇಕ್ ರೈ ಅಧ್ಯಕ್ಷರಾಗಿದ್ದ ಕಾಲದಲ್ಲಿ ಕೆಲಸ ಆಗಿದೆ. ಅವರ ನೇತೃತ್ವದಲ್ಲಿ ಪ್ರಯತ್ನ ನಡೆದರೂ ಆಗಲಿಲ್ಲ. ಹೀಗಾಗಿ ನಾನು ಪ್ರಾಧಿಕಾರದ ಅಧ್ಯಕ್ಷನಾದ ಮೇಲೆ ಈ ನಿಟ್ಟಿನಲ್ಲಿ ಪ್ರಯತ್ನಿಸಿದೆ. ವೈಯಕ್ತಿಕ ನೆಲೆಯಲ್ಲಿ ಹೇಳುವುದಾದರೆ ತುಳುವೂ ಸೇರಿದ ಹಾಗೆ ಎಲ್ಲಾ ಭಾಷೆಗಳನ್ನು ಪಠ್ಯ ಪುಸ್ತಕದಲ್ಲಿ ಮೂರನೇ ಭಾಷೆಯಾಗಿ ಕಲಿಯಬೇಕು. ಹಿಂದಿ ಮಾತ್ರ ಏಕೆ? ಕೊಡಗು ಅಥವಾ ತುಳು ಕಲಿಯಲಿ. ಇಂತಹ ಅವಕಾಶಗಳು ಇರಬೇಕು ಎಂದು ಹೇಳುತ್ತಾ ಬಂದಿರುವೆ.
► ನೆರೆರಾಜ್ಯಗಳಲ್ಲಿ (ಉದಾಹರಣೆಗೆ ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ) ಹಲವು ಭಾಷೆಗಳನ್ನು ದ್ವಿತೀಯ ಅಧಿಕೃತ ಭಾಷೆಯನ್ನಾಗಿ ಮಾಡಿರುವುದಕ್ಕಿಂತ ಭಿನ್ನವಾಗಿ, ಕರ್ನಾಟಕದಲ್ಲಿ ತುಳುವನ್ನು ‘2ನೇ ಅಧಿಕೃತ ರಾಜ್ಯ ಭಾಷೆ’ ಮಾಡಲು ಇರುವ ಮುಖ್ಯ ಕಾಯ್ದೆ ಅಥವಾ ಆಡಳಿತಾತ್ಮಕ ಸವಾಲುಗಳೇನು?
ಬಿಜೆಪಿ ಸರಕಾರ ಇರುವಾಗ ಮೊದಲು ಮೋಹನ್ ಆಳ್ವ ಸಮಿತಿ ಬಂತು. ಅವರು ಉತ್ತಮ ವರದಿ ಕೊಟ್ಟಿದ್ದಾರೆ. ಚೆನ್ನಾಗಿದೆ. ರಾಜ್ಯ ಸರಕಾರ ತುಳುವನ್ನು ಎರಡನೇ ಅಧಿಕೃತ ಭಾಷೆ ಮಾಡಬೇಕು ಎಂದು ಅವರು ಹೇಳಿದ್ದರು. ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಬಹುದು, ಏಕೆಂದರೆ ಅದು ಆಂಧ್ರದಲ್ಲಿದೆ ಮತ್ತು ಇತರೆಡೆ ಇದೆ ಎಂದು ವಿವರ ಕೊಟ್ಟಿದ್ದಾರೆ. ಆದರೆ ಅಧಿಕೃತ ಭಾಷೆಯಾಗಿ ಆದಾಗ ಏನು ಮಾಡಬಹುದು ಎನ್ನುವ ಕ್ರಿಯಾಸೂಚಿ ನೀಡಿಲ್ಲ. ಇದರಿಂದ ತುಳುವಿಗೆ ಪ್ರಯೋಜನ ಆಗುತ್ತದೆ ಎಂಬ ವಿವರವಿದೆ. ಆದರೆ ಕ್ರಿಯಾ ಸೂಚಿ ಇರಲಿಲ್ಲ.
ಈಗ ಆಡಳಿತ ಭಾಷೆಯಾಗಿ ತುಳುವನ್ನು ಕರ್ನಾಟಕ ಸರಕಾರ ಅಂಗೀಕರಿಸಿದ್ದರಿಂದ ಇದರ ಆಧಾರದ ಮೇಲೆ 8ನೇ ಶೆಡ್ಯೂಲ್‌ಗೆ ತುಳು ಸೇರಬೇಕು ಎನ್ನುವ ವಾದವನ್ನು ನಮ್ಮ 28 ಜನ ಸಂಸದರು ಲೋಕಸಭೆಯಲ್ಲಿ ಮಾತನಾಡಬೇಕು. ರಾಜ್ಯ ಸರಕಾರ ಇದೀಗ ಅಧಿಕೃತ ಭಾಷೆಯನ್ನಾಗಿ ಮಾಡಿದೆ. ಹೀಗಾಗಿ ಕ್ಯಾಬಿನೆಟ್ ಒಪ್ಪಿಗೆಯ ಮೂಲಕ ತುಳುವರು ಕೇಂದ್ರ ಸರಕಾರಕ್ಕೆ ಮನವಿ ಮಾಡಬಹುದು. ಆದರೆ ಇದೀಗ 135 ಭಾಷೆಗಳು 8ನೇ ಶೆಡ್ಯೂಲ್‌ಗೆ ಸೇರಲು ಕಾಯುತ್ತಿವೆ. ಹೀಗಾಗಿ ಕೇಂದ್ರ ಸರಕಾರ ಈ ಅಪಾಯ ಯಾಕೆ ಎಂದು ಸುಮ್ಮನಿದೆ. ಎರಡನೆಯದು ಕೇಂದ್ರ ಸರಕಾರ ಈಗ ಮಾಡುವುದನ್ನು ನೋಡಿದರೆ ಅವರ ಎಲ್ಲಾ ಪ್ರಯತ್ನಗಳು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡುವ ಕಡೆ ಇದೆಯೇ ಹೊರತು ಸಣ್ಣ ಭಾಷೆಗಳ ಸಬಲೀಕರಣದ ಬಗ್ಗೆ ಆಸಕ್ತಿ ಇಲ್ಲ.
► ಆದೇಶದಲ್ಲಿ ವಾರ್ಷಿಕವಾಗಿ ನಿಗದಿಪಡಿಸಲಾಗಿರುವ ರೂ. 82 ಲಕ್ಷ ಅನುದಾನವು ಅನುವಾದ, ತರಬೇತಿ ಮತ್ತು ಆಡಳಿತಾತ್ಮಕ ಜಾರಿಗೆ ಸಾಕಾಗುತ್ತದೆಯೇ? ಇದನ್ನು ಹೇಗೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ?
ವಾರ್ಷಿಕ ಅನುದಾನ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ವಾರ್ಷಿಕ ಅನುದಾನವಾದರೆ ಸಾಕು. ಅದು ಕಡಿಮೆಯೇ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾಷೆಗೆ ಸಂಬಂಧಿಸಿ ಆರಂಭದ ಕೆಲಸಕ್ಕೆ 85 ಲಕ್ಷ ರೂ. ಸಾಕು. ಆರಂಭದಲ್ಲಿ ನಮಗೆ ದೊಡ್ಡ ಯೋಜನೆಗಳು ರೂಪಿಸಲು ಬರುವುದಿಲ್ಲ. ಆದರೆ, ತುಳು ಭವನದಂತಹ ಯೋಜನೆ ಇದ್ದರೆ 20 ಕೋಟಿ ಬೇಕು.
► ಜಿಲ್ಲಾಡಳಿತವನ್ನು ಅನುಷ್ಠಾನ ಕೇಂದ್ರವನ್ನಾಗಿ ಮಾಡುವುದಾಗಿ ಹೇಳಲಾಗಿದೆ. ಆದರೆ ಸರಕಾರಿ ಆದೇಶಗಳು ಮತ್ತು ಅರ್ಜಿಗಳಲ್ಲಿ ತುಳುವನ್ನು ತರಲು ಇರುವ ನೈಜ ಸವಾಲುಗಳೇನು?
ಆಡಳಿತದಲ್ಲಿ ತುಳು ಬರಬೇಕೆಂದರೆ ತುಳು ಭಾಷೆಯನ್ನು ಆಡಳಿತದ ಭಾಷೆಯಾಗುವ ಮಟ್ಟಕ್ಕೆ ನೀವು ಬೆಳೆಸಬೇಕಾಗುತ್ತದೆ. ಬೆಳೆಸುವುದು ಹೇಗೆ? ತಕ್ಷಣವೇ ತುಳು ಆಡಳಿತ ಪದಕೋಶ ತರಬೇಕು. ಅದಕ್ಕೆ 80 ಲಕ್ಷ ರೂ. ಸಾಕು. ಸಭೆ ಮಾಡುವುದು ಮತ್ತು ವಿದ್ವಾಂಸರಿಗೆ ಸಂಭಾವನೆ ಕೊಟ್ಟು ಕೆಲಸ ಮಾಡಿಸಬೇಕಾಗುತ್ತದೆ. ತುಳುವಿನಲ್ಲಿ ಸಂಭಾವನೆ ಕೂಡ ತೆಗೆದುಕೊಳ್ಳದೆ ಕೆಲಸ ಮಾಡುವವರು ಇದ್ದಾರೆ. ಆದರೆ ಒಂದು ಆಡಳಿತ ಪದಕೋಶ ಮಾಡಲು 25 ಲಕ್ಷ ರೂ. ಸಾಕು. ಆದರೆ ನಮ್ಮ ಬಳಿ 80 ಲಕ್ಷವಿದೆ. ಪದಗಳನ್ನು ಆನ್‌ಲೈನ್ ಮೂಲಕ ತಾಲೂಕು, ಪಂಚಾಯತ್ ಮತ್ತು ಜಿಲ್ಲಾ ಕಚೇರಿಗಳಲ್ಲಿ ಸಿಗುವ ರೀತಿ ಮಾಡಬೇಕಾಗುತ್ತದೆ. ಹೀಗಾಗಿ ಪಂಚಾಯತ್‌ನಲ್ಲಿ ಆಡಳಿತದಲ್ಲಿ ತುಳು ಬಳಸುವಾಗ ಅವರಿಗೆ ಪದ ಸಿಗಬೇಕು.
ಆಡಳಿತ ಎನ್ನುವುದು ಆಧುನಿಕ ಪರಿಕಲ್ಪನೆ. ಚೆನ್ನಾಗಿ ಪಾಡ್ದನ ಬರುತ್ತದೆ ಎನ್ನುವುದು ನಿಜ. ಆದರೆ ಅದನ್ನು ಆಡಳಿತ ಭಾಷೆಯಲ್ಲಿ ತರಲು ಸಾಧ್ಯವಿಲ್ಲ. ಉದಾಹರಣೆಗೆ ಯಾವ ತುಳುವನ್ನು ಆಡಳಿತಕ್ಕೆ ತರುವುದು? ತುಳುವನ್ನು ವಿಭಿನ್ನ ಪ್ರಾಂತದಲ್ಲಿ ವಿಭಿನ್ನವಾಗಿ ಬಳಸುತ್ತಾರೆ. ಹಾಗಿದ್ದರೆ ಯಾವ ಪದವೆನ್ನುವುದನ್ನು ಸ್ಟಾಂಡರ್ಡೈಸ್ ಮಾಡಬೇಕಾಗುತ್ತದೆ. ಪದವನ್ನು ಹುಡುಕಬೇಕು. ತುಳುವಿಗೆ ಇರುವ ಪ್ರಾದೇಶಿಕ ಭಿನ್ನತೆ ಗಮನಕ್ಕೆ ತಂದು ಅಧಿಕೃತ ಪದವನ್ನು ಸಿದ್ಧಪಡಿಸಬೇಕಿದೆ.
► ದೈನಂದಿನ ಕಚೇರಿ ವ್ಯವಹಾರಗಳಲ್ಲಿ ತುಳುವನ್ನು ಪ್ರಾಯೋಗಿಕವಾಗಿ ತರಲು ಇರುವ ನೈಜ ಸವಾಲುಗಳೇನು?
ಒಂದು ಸಾಮಾನ್ಯ ಮಾತಿನ ಭಾಷೆಯಾಗಿರುವ ತುಳುವನ್ನು ಆಡಳಿತದ ಭಾಷೆಯಾಗಿ ಪರಿವರ್ತಿಸುವ ಕೆಲಸ ಸುಮ್ಮನೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಉತ್ತಮ ವಿದ್ವಾಂಸರು ಬೇಕು. ಅದು ದೊಡ್ಡ ಕೆಲಸ. ಹಾಗಾದರೆ ಆಡಳಿತ ಯಶಸ್ಸು ಆಗುತ್ತದೆ. ಅನೇಕ ತುಳು ಪದಗಳು ಪರ್ಷಿಯದಿಂದ ಬಂದಿವೆ, ಅರೇಬಿಕ್, ಕನ್ನಡದಿಂದ ಬಂದಿವೆ. ಅವುಗಳನ್ನು ತುಳುವಿಗೆ ಹೇಗೆ ಪರಿವರ್ತಿಸುವುದು? ಈಗ ಜನರ ಬಾಯಿ ಮಾತಿನಲ್ಲಿರುವ ಜಿಲ್ಲಾಧಿಕಾರಿ ಎನ್ನುವುದು ಕನ್ನಡ ಪದ ಮತ್ತು ಡಿಸಿ ಎನ್ನುವುದು ಇಂಗ್ಲಿಷ್ ಪದ. ತುಳುವಿನಲ್ಲಿ ಏನು ಹೇಳುವುದು? ತಾಲೂಕು ಆಫೀಸ್ ಎನ್ನುತ್ತೇವೆ. ಇದರಲ್ಲಿ ತಾಲೂಕು ಎಂದರೆ ಪರ್ಷಿಯನ್ ಮತ್ತು ಆಫೀಸ್ ಇಂಗ್ಲಿಷ್. ಅಂತಹ ಪದಗಳನ್ನು ಒಪ್ಪಿಕೊಳ್ಳಬೇಕೆ?
ಕೇಂದ್ರ ಸರಕಾರ ಎನ್‌ಇಪಿ ತರುವಾಗ ದೇಶಿ ಪದವನ್ನು ಬಳಸುವಾಗ ಮೊದಲು ಸಂಸ್ಕೃತ ಪದಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ. ಹೀಗಾಗಿ ಇಂಜಿನಿಯರ್‌ಗೆ ಅಭಿಯಂತರ ಎನ್ನುವ ಹೆಸರು ಬಂತು. ನಮ್ಮ ಅನೇಕ ಆಡಳಿತದಲ್ಲಿರುವ ಸಂಸ್ಕೃತ ಪದಗಳು ಎಲ್ಲಾ ಭಾಷೆಗಳಿಗೂ ಸಲ್ಲುತ್ತದೆ ಎನ್ನುವುದು ಅವರ ಯೋಜನೆ. ಹಾಗಿದ್ದರೆ ತುಳುವನ್ನು ಆಡಳಿತ ಭಾಷೆ ಮಾಡುವಾಗ ಸಂಸ್ಕೃತ ಪದ ಬಳಸುತ್ತೀರಾ? ಇಂಗ್ಲಿಷ್ ಪದ ಬಳಸುತ್ತೀರಾ? ಅಥವಾ ಮಂಗಳೂರು ತುಳು ತೆಗೆದುಕೊಳ್ಳುತ್ತೀರಾ? ಯಕ್ಷಗಾನದಲ್ಲಿರುವುದು ಮಂಗಳೂರು ತುಳು. ರಾಜ ತುಳುವಿನಲ್ಲಿ ಮಾತನಾಡುವುದು ಮಂಗಳೂರು ತುಳು. ಆದರೆ ರಾಜನ ಆಸ್ಥಾನಕ್ಕೆ ಬರುವ ದೂತ ಮಾತನಾಡುವುದು ದಲಿತರ ತುಳು. ಅಂದರೆ, ತುಳುವಿನಲ್ಲೇ ಪವರ್ ಇರುವ ಭಾಷೆ ಮತ್ತು ಇಲ್ಲದ ಭಾಷೆ ಇದೆ.
► ಈ ಆದೇಶದ ನಂತರ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಕ್ರಿಯೆಯಲ್ಲಿ ಹಾಗೂ ರಾಜ್ಯಮಟ್ಟದ ಪೂರ್ಣ ಮಾನ್ಯತೆ ಪಡೆಯುವಲ್ಲಿ ಮುಂದಿನ ಹೋರಾಟದ ನಡೆ ಹೇಗಿರಬೇಕು?
ಮನ್ನಣೆ ಕೊಡಿ ಎನ್ನುವ ಹೋರಾಟ ಬೇರೆ. ಹೋರಾಟ ಎಂದರೆ ಸಣ್ಣ ಭಾಷೆಗಳನ್ನು ಆಡಳಿತಕ್ಕೆ ಏರಿಸುವ ಮತ್ತು ಶಿಕ್ಷಣದ ಮಟ್ಟಕ್ಕೆ ಏರಿಸುವ ಪ್ರಯತ್ನ. ಯುಪಿಎಸ್‌ಸಿ ಅಥವಾ ಕೆಪಿಎಸ್‌ಸಿಯಲ್ಲಿ ತುಳುವನ್ನು ತರಬೇಕು ಎಂದರೆ ಪ್ರಶ್ನೆ ಪತ್ರಿಕೆ ತಯಾರಿಸುವವರು, ಮೌಲ್ಯಮಾಪನ ಮಾಡುವವರು ಬೇಕು. 22 ಭಾಷೆಗಳಿಗೆ ಸಮಾನವಾಗಿ ತುಳುವನ್ನೂ ಕೂಡ ಬೆಳೆಸಬೇಕು. ಒಂದು ಹಂತದ ಮನ್ನಣೆ ಬಂದಾಗಿದೆ. ಇದೀಗ ತುಳುವನ್ನು ಬೆಳೆಸಬೇಕು. 8ನೇ ಶೆಡ್ಯೂಲ್ ತಡವಾಗಬಹುದು. ಅದಕ್ಕಾಗಿ ತುಳು ಅಕಾಡಮಿ ಇದೆ. ಬೇರೆ ಬೇರೆ ಸಂಘ-ಸಂಸ್ಥೆಗಳಿವೆ. ರಾಜ್ಯ ಸರಕಾರ ಮನ್ನಣೆ ಕೊಡುವ ಮೊದಲೂ ತುಳು ಬೆಳೆದಿದೆ. ಎಲ್ಲವೂ ಸರಕಾರ ಮಾಡಬೇಕು ಎಂದು ನಿರೀಕ್ಷಿಸಬಾರದು.
ಕನ್ನಡ 1956ರಲ್ಲಿ ಆಡಳಿತ ಭಾಷೆ ಆಗಿದೆ. 76 ವರ್ಷ ಆಯಿತು. ಕರ್ನಾಟಕದಲ್ಲಿ ಇಂದಿಗೂ ಸಂಪೂರ್ಣವಾಗಿ ಆಡಳಿತ ಭಾಷೆಯನ್ನಾಗಿ ತರಲು ಸಾಧ್ಯವಾಗಿಲ್ಲ. ಹೀಗಿರುವಾಗ ನಿನ್ನೆ ಮೊನ್ನೆ ಮನ್ನಣೆ ಪಡೆದ ತುಳುವನ್ನು ಆಡಳಿತ ಭಾಷೆ ಮಾಡುವ ನಿರೀಕ್ಷೆ ಇಡಬಾರದು.
► ತುಳುವಿಗೆ ಆಡಳಿತಾತ್ಮಕ ಅಥವಾ ಸಾಂಸ್ಕೃತಿಕ ಮಾನ್ಯತೆ ನೀಡುವುದರಿಂದ ಕನ್ನಡ ಭಾಷೆಯ ಹಿತಾಸಕ್ತಿಗೆ, ಸ್ಥಾನಮಾನಕ್ಕೆ ಅಥವಾ ಪ್ರಾಬಲ್ಯಕ್ಕೆ ಏನಾದರೂ ಧಕ್ಕೆ ಅಥವಾ ತೊಂದರೆ ಉಂಟಾಗುತ್ತದೆಯೇ?
ಕನ್ನಡವೇ ನಮ್ಮ ಉಸಿರು. ಆದರೆ ಬೇರೆ ಭಾಷೆಗಳ ಬಗ್ಗೆ ನಮಗೆ ಗೌರವ ಇರಬೇಕಲ್ಲವೆ? ಕರ್ನಾಟಕದಲ್ಲಿ ಕನ್ನಡ ಹೊರತುಪಡಿಸಿ ಸುಮಾರು 290 ಭಾಷೆಗಳು ಇವೆ. ಅದರಲ್ಲಿ 27 ಭಾಷೆಗಳಲ್ಲಿ 10 ಸಾವಿರಕ್ಕಿಂತ ಹೆಚ್ಚು ಮಂದಿ ಮಾತನಾಡುತ್ತಾರೆ. ಅದರಲ್ಲಿ ಅತ್ಯಂತ ಹೆಚ್ಚು ಜನರು ಮಾತನಾಡುವ ಭಾಷೆ ತುಳು. ಜನಗಣತಿಯಲ್ಲಿ ತುಳುವರ ಸಂಖ್ಯೆ 14 ಲಕ್ಷ ಇದೆ ಎನ್ನುವ ವಿವರವಿದೆ. 8ನೇ ಶೆಡ್ಯೂಲ್‌ಗೆ ಸೇರುವಾಗ ಜಗತ್ತಿನಾದ್ಯಂತ 60 ಲಕ್ಷ ಜನರು ಮಾತನಾಡುತ್ತಾರೆ ಎಂದು ನಾವು ಹೇಳಿದ್ದೆವು. ಆಗ ಮಾನವ ಸಂಪನ್ಮೂಲ ಇಲಾಖೆ ಇದೇ ಪ್ರಶ್ನೆ ಮುಂದಿಟ್ಟಿದ್ದರು. ಆಗ ನಾವು ‘‘ತುಳು ಎಂಬುದು ಎಲ್ಲಾ ಜಾತಿಯವರನ್ನು ಒಗ್ಗೂಡಿಸುವ ಭಾಷೆ. ಮನೆಯಲ್ಲಿ ಬ್ಯಾರಿ ಮಾತನಾಡಿದರೂ ಸಾರ್ವಜನಿಕ ವೇದಿಕೆಯಲ್ಲಿ ತುಳು ಮಾತನಾಡುತ್ತಾರೆ. ಅರೆಬಾಷೆ ಮಾತನಾಡುವವರು ಸಾರ್ವಜನಿಕವಾಗಿ ತುಳು ಮಾತನಾಡುತ್ತಾರೆ. ಮುಂಬೈಯಲ್ಲಿರುವವರು ಮನೆಯಲ್ಲಿ ತುಳು ಮಾತನಾಡಿದರೆ ಸಾರ್ವಜನಿಕವಾಗಿ ಮರಾಠಿ ಮಾತನಾಡುತ್ತಾರೆ. ಹೀಗಾಗಿ 60 ಲಕ್ಷ ಎಂದು ಹೇಳಿದ್ದಾಗಿ ತಿಳಿಸಿದ್ದೇವೆ’’ ಎಂದು ನಾವು ವಿವರಿಸಿದಾಗ, ಅವರು ‘‘14 ಲಕ್ಷ ಎಂದೇ ಪರಿಗಣಿಸಲಾಗುವುದು’’ ಎಂದು ತಿಳಿಸಿದ್ದರು. ಸಣ್ಣ ಭಾಷೆಗಳನ್ನು ಸಬಲೀಕರಣಗೊಳಿಸುವುದು ಸುಲಭದ ವಿಷಯವಲ್ಲ.
ಜನರು ರಾಜ್ಯಭಾಷೆಯನ್ನೇ ತೊರೆದು ಇಂಗ್ಲಿಷ್ ಓದುತ್ತಿದ್ದಾರೆ. ಇಂಗ್ಲಿಷ್‌ನಲ್ಲೇ ಮಾತನಾಡುತ್ತಾರೆ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ಕನ್ನಡದಂತಹ ದೊಡ್ಡ ಭಾಷೆಯ ಕತೆ ಹೀಗಾದಾಗ ತುಳು ಮತ್ತು ಕೊಡವದಂತಹ ಸಣ್ಣ ಭಾಷೆಯ ಗತಿಯೇನು? ಹೀಗಾಗಿ ಸರಕಾರದ ಬೆಂಬಲ ಬೇಕು. ಬೆಂಬಲ ಕೊಟ್ಟಿದೆ, ಘೋಷಿಸಿದೆ. ತುಳುವರು ಕೆಲಸ ಮಾಡಬೇಕು.






