ಹೆಚ್ಚುತ್ತಿರುವ ಒಂಟಿತನ: ವೃದ್ಧಾಪ್ಯದ ಮೌನ ವೇದನೆ

ಡಾ. ಸಿದ್ಧಲಿಂಗಸ್ವಾಮಿ ಕೆ. ಪಿ.
ಸಂಶೋಧಕರು, ಸಿಎಸ್‌ಎಸ್‌ಐ ಮಂಗಳೂರು ವಿಶ್ವವಿದ್ಯಾನಿಲಯ
ಮನೆಯೊಳಗೆ ಜನರಿದ್ದರೂ ಮನಸ್ಸು ಬಿಚ್ಚಿ ಮಾತನಾಡಲು ಯಾರೂ ಇಲ್ಲದಿರುವುದು, ಸುತ್ತಲೂ ಸಂಬಂಧಗಳಿದ್ದರೂ ಸಂಕಟ ಹಂಚಿಕೊಳ್ಳಲು ಮನಸ್ಸುಗಳಿಲ್ಲದಿರುವುದು, ಇದು ಇಂದಿನ ಅನೇಕ ವೃದ್ಧರ ಮೌನ ವೇದನೆ. ಮನುಷ್ಯನ ಬದುಕಿನ ಸಂಧ್ಯಾಕಾಲದಲ್ಲಿ ಅತ್ಯಂತ ಅಗತ್ಯವಾಗಿರುವುದು ಕೇವಲ ಆಹಾರ, ಔಷಧ, ಹಣ ಅಥವಾ ವಾಸಸ್ಥಳವಲ್ಲ; ಪ್ರೀತಿಯಿಂದ ಮಾತನಾಡುವ ನಾಲ್ಕು ಮಾತುಗಳು, ಕಾಳಜಿಯಿಂದ ವಿಚಾರಿಸುವ ಮನಸ್ಸು ಮತ್ತು ತನ್ನ ಅನುಭವಗಳಿಗೆ ಕಿವಿಗೊಡುವ ಹೃದಯ. ಕುಟುಂಬದ ಭವಿಷ್ಯಕ್ಕಾಗಿ ದುಡಿದು, ಮಕ್ಕಳ ಕನಸುಗಳಿಗಾಗಿ ತಮ್ಮ ಆಸೆಗಳನ್ನು ಬದಿಗಿಟ್ಟ ಹಿರಿಯರು ವೃದ್ಧಾಪ್ಯದಲ್ಲಿ ಬಯಸುವುದು ಐಷಾರಾಮಿ ಬದುಕನ್ನಲ್ಲ, ಆತ್ಮೀಯತೆಯನ್ನಷ್ಟೇ. ಆದರೆ ಈ ಅಗತ್ಯವೂ ಪೂರೈಸದಿದ್ದಾಗ ವೃದ್ಧಾಪ್ಯವು ದೈಹಿಕ ದೌರ್ಬಲ್ಯಕ್ಕಿಂತಲೂ ಭಾವನಾತ್ಮಕ ನೋವಿನ ಕಾಲವಾಗುತ್ತದೆ. ಆಯುಸ್ಸು ಹೆಚ್ಚಾಗುವುದು ಮಾನವ ಪ್ರಗತಿಯ ಸಂಕೇತ. ಆದರೆ ಹೆಚ್ಚಿದ ವರ್ಷಗಳು ಗೌರವ, ಸುರಕ್ಷತೆ ಮತ್ತು ಮಾನಸಿಕ ನೆಮ್ಮದಿಯಿಂದ ಕೂಡಿವೆಯೇ ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯ. ವೃದ್ಧರ ಆರೈಕೆ ಮತ್ತು ಒಂಟಿತನವು ಕೇವಲ ಕೌಟುಂಬಿಕ ಸಮಸ್ಯೆಗಳಲ್ಲ; ಅವು ಸಮಾಜದ ಮೌಲ್ಯಗಳು ಮತ್ತು ಸಾಮೂಹಿಕ ಹೊಣೆಗಾರಿಕೆಯನ್ನು ಪ್ರತಿಬಿಂಬಿಸುತ್ತವೆ.
ಒಂದು ಕಾಲದಲ್ಲಿ ಅವಿಭಕ್ತ ಕುಟುಂಬಗಳು ಹಲವು ತಲೆಮಾರುಗಳನ್ನು ಒಂದೇ ಸೂರಿನಡಿ ಬೆಸೆಯುತ್ತಿದ್ದವು. ಇಂದು ನಗರೀಕರಣ, ಉದ್ಯೋಗದ ಅನಿವಾರ್ಯತೆ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದ ವಿಭಕ್ತ ಕುಟುಂಬಗಳು ಹೆಚ್ಚಾಗಿವೆ. ಮಕ್ಕಳು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ ಅಥವಾ ವಿದೇಶಗಳಿಗೆ ತೆರಳುವುದು ಸಹಜ. ಅವರ ಮೇಲಿನ ಆರ್ಥಿಕ ಒತ್ತಡ ಮತ್ತು ವೃತ್ತಿಜೀವನದ ಸವಾಲುಗಳನ್ನು ಅರ್ಥಮಾಡಿಕೊಳ್ಳಬೇಕು. ಆದರೆ ದೂರವು ಭಾವನಾತ್ಮಕ ಅಂತರವಾಗಿ ಬದಲಾಗುವಾಗ ಹಿರಿಯರ ಒಂಟಿತನ ಹೆಚ್ಚುತ್ತದೆ. ಒಂದೇ ಮನೆಯಲ್ಲಿದ್ದರೂ ಪ್ರತಿಯೊಬ್ಬರೂ ಮೊಬೈಲ್ ಮತ್ತು ತಮ್ಮದೇ ಜಗತ್ತಿನಲ್ಲಿ ಮುಳುಗಿರುವಾಗ ಆತ್ಮೀಯ ಸಂಭಾಷಣೆಗೆ ಅವಕಾಶ ಕಡಿಮೆಯಾಗುತ್ತದೆ. ಸಮಯದ ಅಭಾವವಿದ್ದರೂ ಕಾಳಜಿ ತೋರಿಸಲು ಮತ್ತು ಸಂಬಂಧಗಳನ್ನು ಜೀವಂತವಾಗಿಡಲು ಸಾಧ್ಯವಿದೆ. ವೃದ್ಧಾಪ್ಯದಲ್ಲಿ ಆರ್ಥಿಕ ಸ್ವಾವಲಂಬನೆಯೂ ಮಹತ್ವದ್ದಾಗಿದೆ. ನಿಯಮಿತ ಆದಾಯ ಅಥವಾ ಪಿಂಚಣಿಯಿಲ್ಲದವರು ಔಷಧಿ, ವೈದ್ಯಕೀಯ ಚಿಕಿತ್ಸೆ ಮತ್ತು ದೈನಂದಿನ ವೆಚ್ಚಗಳಿಗಾಗಿ ಇತರರನ್ನು ಅವಲಂಬಿಸಬೇಕಾಗಬಹುದು. ಆದರೆ ಹಣಕಾಸಿನ ನೆರವೊಂದೇ ಒಂಟಿತನವನ್ನು ನಿವಾರಿಸಲಾರದು. ತಮ್ಮ ಅಭಿಪ್ರಾಯಗಳಿಗೆ ಕುಟುಂಬದಲ್ಲಿ ಬೆಲೆ ಇಲ್ಲದಾಗ, ಅನುಭವಗಳನ್ನು ಯಾರೂ ಆಲಿಸದಾಗ ಹಿರಿಯರಲ್ಲಿ ತಾವು ಅನಗತ್ಯರೆಂಬ ಭಾವನೆ ಮೂಡಬಹುದು. ಅವರನ್ನು ಗೌರವಿಸುವುದೆಂದರೆ ಖರ್ಚು ಭರಿಸುವುದಷ್ಟೇ ಅಲ್ಲ; ಸ್ವಾಭಿಮಾನವನ್ನು ಕಾಪಾಡುವುದು, ನಿರ್ಧಾರಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದು ಮತ್ತು ಅವರ ಭಾವನೆಗಳಿಗೆ ಮನ್ನಣೆ ನೀಡುವುದೂ ಆಗಿದೆ.
ಸಂಗಾತಿಯ ಅಗಲಿಕೆ, ಸ್ನೇಹಿತರನ್ನು ಕಳೆದುಕೊಳ್ಳುವುದು, ದೀರ್ಘಕಾಲೀನ ಕಾಯಿಲೆಗಳು ಮತ್ತು ನಿವೃತ್ತಿಯ ನಂತರದ ಖಾಲಿತನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೆಲವರು ನೋವನ್ನು ಹಂಚಿಕೊಳ್ಳದೆ ಮೌನವಾಗಿ ಸಂಕಟಪಡುತ್ತಾರೆ. ಆದ್ದರಿಂದ ಕುಟುಂಬದವರು ಅವರೊಂದಿಗೆ ಮಾತನಾಡಲು ಸಮಯ ಮೀಸಲಿಡಬೇಕು. ನಿರಂತರ ನಿರುತ್ಸಾಹ ಅಥವಾ ಸಾಮಾಜಿಕ ಸಂಪರ್ಕದಿಂದ ದೂರವಾಗುವ ಲಕ್ಷಣಗಳು ಕಂಡುಬಂದರೆ ಅಗತ್ಯ ವೈದ್ಯಕೀಯ ನೆರವು ಪಡೆಯಲು ಸಹಕರಿಸಬೇಕು. ವೃದ್ಧಾಶ್ರಮಗಳನ್ನೂ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು. ಕೆಲವರಿಗೆ ಕುಟುಂಬದ ಬೆಂಬಲದ ಕೊರತೆ ಅಥವಾ ನಿರಂತರ ಆರೈಕೆಯ ಅಗತ್ಯದಿಂದ ಅವು ಅನಿವಾರ್ಯವಾಗಬಹುದು; ಇನ್ನು ಕೆಲವರು ತಮ್ಮ ಇಚ್ಛೆಯಿಂದ ಅವುಗಳನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ವೃದ್ಧಾಶ್ರಮದಲ್ಲಿರುವುದನ್ನೇ ನಿರ್ಲಕ್ಷ್ಯದ ಸಂಕೇತವೆಂದು ಪರಿಗಣಿಸುವುದು ಸರಿಯಲ್ಲ. ಆದರೆ ಅಸಹಾಯಕತೆಯಿಂದ ಅಲ್ಲಿ ನೆಲೆಸುವವರ ನೋವನ್ನೂ ಮರೆಯಬಾರದು. ವೃದ್ಧಾಶ್ರಮಗಳು ಸುರಕ್ಷತೆ, ಗುಣಮಟ್ಟದ ಆರೋಗ್ಯ ಸೇವೆ ಮತ್ತು ಗೌರವಯುತ ಬದುಕಿನ ಜೊತೆಗೆ ಸಾಮಾಜಿಕ ಸಂಪರ್ಕಕ್ಕೂ ಅವಕಾಶ ಕಲ್ಪಿಸಬೇಕು. ಕುಟುಂಬದವರು ಅಲ್ಲಿರುವ ಹಿರಿಯರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ.
ತಲೆಮಾರುಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದೂ ಅಗತ್ಯ. ಯುವಜನತೆ ಹಿರಿಯರ ಅನುಭವಗಳಿಂದ ಕಲಿಯಬೇಕು; ಹಿರಿಯರೂ ಹೊಸ ತಲೆಮಾರಿನ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಮೊಮ್ಮಕ್ಕಳು ಅಜ್ಜ-ಅಜ್ಜಿಯರೊಂದಿಗೆ ಸಮಯ ಕಳೆಯುವುದು, ಅವರ ನೆನಪುಗಳನ್ನು ಆಲಿಸುವುದು ಮತ್ತು ತಂತ್ರಜ್ಞಾನ ಬಳಕೆಯಲ್ಲಿ ನೆರವಾಗುವುದು ಬಾಂಧವ್ಯವನ್ನು ಗಟ್ಟಿಗೊಳಿಸಬಹುದು. ಈ ಜವಾಬ್ದಾರಿ ಕುಟುಂಬಕ್ಕೆ ಮಾತ್ರ ಸೀಮಿತವಾಗಬಾರದು. ಯುವಜನ ಸಂಘಗಳು, ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಮತ್ತು ಸ್ವಯಂಸೇವಾ ಸಂಸ್ಥೆಗಳು ವೃದ್ಧಾಶ್ರಮಗಳಿಗೆ ಭೇಟಿ ನೀಡುವುದು, ಆರೋಗ್ಯ ಜಾಗೃತಿ ಮೂಡಿಸುವುದು ಹಾಗೂ ಹಿರಿಯರಿಗಾಗಿ ಸಂವಾದ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಬಹುದು. ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳು ಸುಲಭವಾಗಿ ತಲುಪಬಹುದಾದ ಆರೋಗ್ಯ ಸೇವೆಗಳು, ಸಾಮಾಜಿಕ ಭದ್ರತಾ ಸೌಲಭ್ಯಗಳು ಮತ್ತು ದಿನದ ಆರೈಕೆ ಕೇಂದ್ರಗಳನ್ನು ಬಲಪಡಿಸಬೇಕು. ವೃದ್ಧರ ಮೇಲಿನ ನಿರ್ಲಕ್ಷ್ಯ, ಆರ್ಥಿಕ ಶೋಷಣೆ ಮತ್ತು ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಿ, ಅವರ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ರಕ್ಷಿಸಬೇಕು.
ವೃದ್ಧಾಪ್ಯವು ಯಾರಿಗೂ ತಪ್ಪಿಸಲಾಗದ ಜೀವನದ ಹಂತ. ಇಂದು ಯುವಕರಾಗಿರುವವರು ನಾಳೆ ವೃದ್ಧರಾಗುತ್ತಾರೆ. ಆದ್ದರಿಂದ ಹಿರಿಯರ ಸಮಸ್ಯೆಗಳನ್ನು ಅವರದೇ ಸಮಸ್ಯೆಗಳೆಂದು ಭಾವಿಸಬಾರದು. ದಿನಕ್ಕೊಂದು ಆತ್ಮೀಯ ಮಾತು, ನಿಯಮಿತ ವಿಚಾರಣೆ, ಸಾಧ್ಯವಾದಾಗ ಭೇಟಿ ಮತ್ತು ಅವರ ಅನುಭವಗಳಿಗೆ ನೀಡುವ ಗೌರವವೇ ಬದಲಾವಣೆಯ ಆರಂಭವಾಗಬಹುದು. ಕುಟುಂಬದ ಕಾಳಜಿ, ಯುವಜನರ ಸಹಭಾಗಿತ್ವ, ಸಂಘಸಂಸ್ಥೆಗಳ ಸೇವೆ ಮತ್ತು ಸರಕಾರದ ಪರಿಣಾಮಕಾರಿ ಕ್ರಮಗಳು ಒಂದಾದಾಗ ವೃದ್ಧಾಪ್ಯವು ಅಸಹಾಯಕತೆಯ ಸಂಕೇತವಾಗದೆ, ಆತ್ಮಗೌರವ ಮತ್ತು ನೆಮ್ಮದಿಯ ಹಂತವಾಗಬಹುದು.ವೃದ್ಧರ ಬದುಕಿನ ಸಂಧ್ಯಾಕಾಲ ಕತ್ತಲೆಯಾಗದಂತೆ ನೋಡಿಕೊಳ್ಳುವುದು ಕೇವಲ ಕುಟುಂಬದ ಕರ್ತವ್ಯವಲ್ಲ; ಅದು ಇಡೀ ಸಮಾಜದ ಮಾನವೀಯ ಹೊಣೆಗಾರಿಕೆ. ವೃದ್ಧರನ್ನು ಪ್ರೀತಿಯಿಂದ ಆಲಿಸುವ, ಗೌರವದಿಂದ ನಡೆಸಿಕೊಳ್ಳುವ ಸಮಾಜವೇ ನಿಜವಾದ ಅರ್ಥದಲ್ಲಿ ಪ್ರಬುದ್ಧ ಸಮಾಜ.






