Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಿಜೆಪಿ ಅಲೆಯಲ್ಲಿ ಈಜಿ ಗೆದ್ದ ‘ಹೆಡ್...

ಬಿಜೆಪಿ ಅಲೆಯಲ್ಲಿ ಈಜಿ ಗೆದ್ದ ‘ಹೆಡ್ ಮಾಸ್ಟರ್’!

ಹೊನಕೆರೆ ನಂಜುಂಡೇಗೌಡಹೊನಕೆರೆ ನಂಜುಂಡೇಗೌಡ28 May 2026 6:10 AM IST
share
ಬಿಜೆಪಿ ಅಲೆಯಲ್ಲಿ ಈಜಿ ಗೆದ್ದ ‘ಹೆಡ್ ಮಾಸ್ಟರ್’!

ಜಾಲಂಗಿಯಲ್ಲಿ ಬಾಬರ್ ಅಲಿ 21,515 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಎಸ್ಐಆರ್ ಪ್ರವಾಹದಲ್ಲಿ ಟಿಎಂಸಿಯ ಬಹುತೇಕರು ಕೊಚ್ಚಿ ಹೋಗಿದ್ದಾರೆ. ಬಾಬರ್ ಅಲಿ ಈಜಿ ದಡ ಸೇರಿದ್ದಾರೆ. ಎರಡೂವರೆ ದಶಕಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸ ಕೈ ಹಿಡಿದಿದೆ. ಧರ್ಮದ ಆಧಾರದಲ್ಲಿ ಪಶ್ಚಿಮ ಬಂಗಾಳ ಒಡೆದಿದ್ದರೂ, ಅಲಿ ಅವರಿಗೆ ಎಲ್ಲ ಜಾತಿ, ಮತಗಳ ಮತದಾರರು ಬೆಂಬಲಿಸಿದ್ದಾರೆ. ಇದು ಅವರ ಜಾತ್ಯತೀತ ನಡೆಗೆ ಸಿಕ್ಕ ಜಯ.

ಜೀವನದಲ್ಲಿ ಅವಕಾಶಗಳು ಮಿಂಚಿನಂತೆ ಬರುತ್ತವೆ. ತಕ್ಷಣ ಹಿಡಿಯಬೇಕು. ಇಲ್ಲದಿದ್ದರೆ ಜಾರಿಹೋಗಬಹುದು. ಕೆಲವರು ಚಂಗನೆ ಹಿಡಿದುಕೊಂಡು ಎಲ್ಲಿಗೋ ಹೋಗಿಬಿಡುತ್ತಾರೆ. ಕರ್ನಾಟಕ ಸರಕಾರದಲ್ಲಿ ಅಧಿಕಾರಿಯಾಗಿರುವ ಮಿತ್ರರೊಬ್ಬರು ಯಾವಾಗಲೂ ಈ ಮಾತು ಹೇಳುತ್ತಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆ ಜಾಲಂಗಿ ಕ್ಷೇತ್ರದ ಶಾಸಕ ಬಾಬರ್ ಅಲಿ ಅವರ ಬದುಕಿನಲ್ಲೂ ಈ ಮಾತು ನಿಜವಾಗಿದೆ. ಅಲಿ ಆಡುವ ವಯಸ್ಸಿನಲ್ಲೇ ಅಪರೂಪದ ಕನಸು ಕಂಡವರು. ಅದು ಕರಗಲು ಬಿಡದೆ, ಸಾಕಾರಗೊಳಿಸಿದವರು. ಅವರ ಜೀವನ-ಸಾಧನೆಯೊಂದು ದಂತ ಕಥೆ. ಬಾಬರ್ ಅಲಿ ನಡೆದು ಬಂದ ಹಾದಿ ರೋಚಕ. ಕುತೂಹಲ.

ಬಾಬರ್ ಅಲಿ ಹಿಡಿದಿದ್ದನ್ನು ಸಾಧಿಸುವ ಛಲಗಾರ. ಒಂಭತ್ತನೇ ವಯಸ್ಸಿನಲ್ಲೇ ಆಟೋಟ ಬಿಟ್ಟು, ಬೀದಿ ಬದಿ ಮಕ್ಕಳ ಬದುಕು ಕಟ್ಟುವ ಕಾಯಕಕ್ಕೆ ಕೈ ಹಾಕಿದವರು. ಓದು-ಬರಹ ಕಲಿಯದೆ, ಕೂಲಿನಾಲಿ ಮಾಡಿಕೊಂಡಿದ್ದ ನಿರ್ಗತಿಕರ ಮಕ್ಕಳ ಶಿಕ್ಷಣಕ್ಕೆ ಸಂಕಲ್ಪ ಮಾಡಿದವರು. ಮನೆಯ ಹಿತ್ತಲಲ್ಲೇ ಶಾಲೆ ಆರಂಭಿಸಿದವರು. ಎರಡು ದಶಕದಲ್ಲಿ ಅದೆಷ್ಟೊ ಮಕ್ಕಳ ಬದುಕನ್ನು ಸುಂದರಗೊಳಿಸಿದವರು. ಚಿಣ್ಣನಾಗಿದ್ದಾಗಲೇ ಹುಡುಗಾಟಕ್ಕೆ ‘ಗುಡ್ಬೈ’ ಹೇಳಿದವರು. ಗೋಲಿ ಆಡಲಿಲ್ಲ, ಗಿಲ್ಲಿ, ದಾಂಡು ಮುಟ್ಟಲಿಲ್ಲ. ಮರ ಕೋತಿ ಆಡಲಿಲ್ಲ. ಹೆಗಲಿಗೆ ಜೋಳಿಗೆ ನೇತುಹಾಕಿಕೊಂಡು ಮನೆಮನೆ ಅಲೆದು, ಅಕ್ಕಿ ಸಂಗ್ರಹಿಸಿ, ಮಾರಿ ಬಂದ ಹಣದಲ್ಲಿ ಪುಸ್ತಕ ಖರೀದಿಸಿ ಮಕ್ಕಳಿಗೆ ಹಂಚಿದ ಕನಸುಗಾರ. ‘ಅಕ್ಷರ ದಾಸೋಹಿ’.

ಅಲಿ, ಮುರ್ಷಿದಾಬಾದ್ ಜಿಲ್ಲೆ ಭಾಪ್ಟಾದಲ್ಲಿ 1993ರ ಮಾರ್ಚ್ 18ರಂದು ಹುಟ್ಟಿದರು. ಅದು ಅತೀ ಹಿಂದುಳಿದ ಗಡಿ ಜಿಲ್ಲೆ. ಅವರ ಗ್ರಾಮದ ಬಗ್ಗೆ ಹೇಳುವುದೇ ಬೇಡ. ಆಧುನಿಕತೆಗಿನ್ನೂ ತೆರೆದುಕೊಂಡಿಲ್ಲ. ಅರಂಭದಲ್ಲಿ ಆಟದ ಶಾಲೆಯಲ್ಲಿ ಅವರ ತಂಗಿ ಸೇರಿ ಇದ್ದದ್ದು ಎಂಟು ಮಕ್ಕಳು. ಮರದ ಕೆಳಗೆ ನಡೆಯುತ್ತಿದ್ದ ಶಾಲೆಗೀಗ ಕಾಂಕ್ರಿಟ್ ಕಟ್ಟಡದ ಯೋಗ. 1ರಿಂದ 10ನೇ ತರಗತಿವರೆಗೆ ನೂರಾರು ಮಕ್ಕಳು ಕಲಿಯುತ್ತಿದ್ದಾರೆ. ತಂದೆ ಮುಹಮ್ಮದ್ ನಾಸಿರುದ್ದೀನ್, ತಾಯಿ ಬನೌರಾ ಬೀಬಿ ಮಗನಿಗೆ ಬೆಂಬಲವಾಗಿ ನಿಂತಿದ್ದಾರೆ. ಶಾಲೆ ಅರ್ಧಕ್ಕೆ ಬಿಟ್ಟಿದ್ದ ನಾಸಿರುದ್ದೀನ್, ‘ಪರಿಪೂರ್ಣ ಶಿಕ್ಷಣವೇ ನಿಜವಾದ ಧರ್ಮ’ ಎಂದು ನಂಬಿದ್ದಾರೆ. ಆದರೂ, ‘ಮಗನ ಯೋಜನೆ ಎಲ್ಲಿ ಆತನ ಕಲಿಕೆಗೆ ಅಡ್ಡಿಯಾಗುವುದೋ’ ಎಂದು ಆತಂಕದಲ್ಲಿದ್ದರು. ಹಾಗಾಗಲಿಲ್ಲ.

ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಾಬರ್ ಅಲಿ, ಬೆಲ್ದಂಗಾದ ಸಿ.ಆರ್.ಜಿ.ಎಸ್. ಪ್ರೌಢಶಾಲೆ ಸೇರಿದರು. ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸ ಎರಡರಲ್ಲೂ ಸ್ನಾತಕೋತ್ತರ ಪದವಿ ಪಡೆದರು. ಮುಹಮ್ಮದ್ ನಾಸಿರುದ್ದೀನ್ಗೆ ಮಗನನ್ನು ಐಎಎಸ್ ಅಧಿಕಾರಿ ಮಾಡುವ ಆಸೆಯಿತ್ತು. ಬಾಬರ್ ದಾರಿ ಮತ್ತು ಗುರಿ ಬೇರೆಯಾಗಿತ್ತು. ಐಎಎಸ್ ಅಧಿಕಾರಿ ಆಗಿದ್ದರೆ ರಾಜ್ಯಕ್ಕೆ ಸೀಮಿತವಾಗುತ್ತಿದ್ದರು. ಈಗವರು ಶಿಕ್ಷಣ ತಜ್ಞ. ದೇಶದ ಗಡಿಗಳಾಚೆಗೂ ಹಲವು ದೇಶಗಳಲ್ಲಿ ಚಿರಪರಿಚಿತರು. ಇಂಗ್ಲೆಂಡ್ನ ರಾಣಿಗೂ ಅಲಿ ಹೆಸರು ಗೊತ್ತು. ಅಲಿ ಶಾಲೆಗೆ ಹೋಗುವಾಗ, ಕುರಿ ಮೇಯಿಸುವ, ಹೊಲಗದ್ದೆಗಳಲ್ಲಿ ದುಡಿಯುವ, ಚಿಂದಿ ಆರಿಸುವ ಮಕ್ಕಳನ್ನು ನೋಡಿದರು. ಹೆಣ್ಣು ಮಕ್ಕಳು ಉಳ್ಳವರ ಮನೆಗಳಲ್ಲಿ ಜೀತಕ್ಕಿರುವುದನ್ನು ಕಂಡರು. ತನ್ನ ವಾರಿಗೆಯ ಮಕ್ಕಳಿಗೆ ಅಕ್ಷರ ಕಲಿಸಲು ಏನಾದರೂ ಮಾಡಬೇಕೆಂದು ಹಂಬಲಿಸಿದರು. ಆಗಲೇ ತಲೆಯೊಳಗೆ ‘ಅಕ್ಷರ ದಾಸೋಹ’ದ ಕನಸು ಚಿಗುರಿದ್ದು.

ಶಾಲೆಯ ಕಲ್ಪನೆಯೇ ಇಲ್ಲದ ಮಕ್ಕಳಿಗೆ ಬಾಬರ್ ಅಲಿಯ ಶಾಲೆ ಆಟಪಾಠದ ಕೇಂದ್ರವಾಯಿತು. ಅವರಿಗೆ ಯಾವ ಪಠ್ಯ ಬೋಧಿಸಬೇಕೆಂದು ಅರಿವಿಲ್ಲದ ಅಲಿ ಶಾಲೆಯಲ್ಲಿ ಕಲಿತಿದ್ದನ್ನು ಯಥಾವತ್ತಾಗಿ ಕಲಿಸುತ್ತಿದ್ದರು. ಮಕ್ಕಳು ಇಲ್ಲಿ ಆಡಿ, ನಲಿಯುತ್ತಿದ್ದರು. ಜತೆಗೆ ಅಕ್ಷರ ಕಲಿಯುತ್ತಿದ್ದರು. 2003ರ ಎಪ್ರಿಲ್ನಲ್ಲಿ ಅಲಿ ಐದನೇ ತರಗತಿಯಲ್ಲಿ ಕಲಿಯುವಾಗಲೇ ಅಸಹಾಯಕ ಮಕ್ಕಳಿಗಾಗಿ ಶಾಲೆ ತೆರೆದರು. ತನ್ನ ತಾಯಿ ಮತ್ತು ಹಳ್ಳಿ ಮಹಿಳೆಯರಿಂದ ಸೀರೆಗಳನ್ನು ಸಂಗ್ರಹಿಸಿ ತಂದು ಛಾವಣಿ ಹಾಕಿದರು. ಔಪಚಾರಿಕವಾಗಿ ಶಾಲೆಯ ರೂಪ ಕೊಟ್ಟರು. ಶಾಲೆ ಉದ್ಘಾಟಿಸಿದ್ದು ಸಮೀಪದ ಪದವಿ ಕಾಲೇಜಿನ ಪ್ರಿನ್ಸಿಪಾಲ್. ಪ್ರಿನ್ಸಿಪಾಲರೇ ಅದಕ್ಕೆ ‘ಆನಂದೋ ಶಿಕ್ಷಾ ನಿಕೇತನ’ (ಹೋಮ್ ಆಫ್ ಜಾಯ್ಫುಲ್ ಲರ್ನಿಂಗ್) ಎಂದು ಹೆಸರಿಟ್ಟರು. ಅಲಿಯ ಅಕ್ಷರ ದಾಸೋಹದ ಯಾತ್ರೆ ಅಲ್ಲಿಗೇ ನಿಲ್ಲಲಿಲ್ಲ. ಒಂದು ದಿನ ಮಧ್ಯಾಹ್ನ ಬಾಬರ್ ಅಲಿ ತನ್ನ ವಿದ್ಯಾರ್ಥಿಗಳ ಜತೆ ಸ್ಥಳೀಯ ರಾಮಕೃಷ್ಣ ಮಿಷನ್ಗೆ ಹೋದರು. ಅಲ್ಲಿ ಶಾಲಾ ಹೆಡ್ ಮಾಸ್ಟರ್ ಭೇಟಿ ಮಾಡಿ, ಮಕ್ಕಳ ಸಮವಸ್ತ್ರ, ಪುಸ್ತಕಕ್ಕೆ ಮನವಿ ಮಾಡಿದರು. ಹೆಡ್ ಮಾಸ್ಟರ್ ಮನವಿಯನ್ನು ಪುರಸ್ಕರಿಸಿದರು.

ಅಷ್ಟೇ ಅಲ್ಲ, ವಿವೇಕಾನಂದರ ಪುಸ್ತಕವೊಂದನ್ನು ಅಲಿ ಅವರಿಗೆ ಕೊಟ್ಟ ಹೆಡ್ ಮಾಸ್ಟರ್, ಪ್ರತೀ ದಿನ ಕನಿಷ್ಠ ಐದು ನಿಮಿಷ ಓದುವಂತೆ ಸಲಹೆ ನೀಡಿದರು. ಆ ಪುಸ್ತಕದಲ್ಲಿ ‘ಸರ್ವೀಸ್ ಟು ಮ್ಯಾನ್ ಈಸ್ ಸರ್ವೀಸ್ ಟು ಗಾಡ್’ ಎಂಬ ವಾಕ್ಯವಿತ್ತು. ಅದರಿಂದ ಅಲಿ ಸ್ಫೂರ್ತಿ ಪಡೆದರು. ಅದು ಅವರ ಕಾಯಕವನ್ನು ಮುಂದುವರಿಸಲು ಪ್ರೇರಣೆಯಾಯಿತು. ಅಲ್ಲದೆ, ತಾನು ಓದುತ್ತಿದ್ದ ಶಾಲೆಯ ಶಿಕ್ಷಕರಿಂದ ತುಂಡು ಸೀಮೆಸುಣ್ಣ ಕೇಳಿ ತರುತ್ತಿದ್ದರು. ಒಂದು ದಿನ ಶಿಕ್ಷಕರು, ‘ಸೀಮೆಸುಣ್ಣ ಏಕೆ ಕೇಳುತ್ತಾನೆ’ ಎಂದು ಅಚ್ಚರಿಯಿಂದ ಗೆಳೆಯರನ್ನು ಪ್ರಶ್ನಿಸಿದರು. ಅವರು ಬಾಬರ್ ಅಲಿಯ ಸಾಹಸಗಾಥೆ ವಿವರಿಸಿದರು. ಶಿಷ್ಯನ ನಡೆಯಿಂದ ಖುಷಿಗೊಂಡ ಶಿಕ್ಷಕರು ಒಂದು ಡಬ್ಬ ಸೀಮೆಸುಣ್ಣ ಕೊಡಿಸಿದರು. ಶಾಲೆಗಳು ಹೇಗೆ ನಡೆಯುತ್ತವೆ. ದಾಖಲೆಗಳನ್ನು ಹೇಗೆ ನಿರ್ವಹಣೆ ಮಾಡಲಾಗುತ್ತದೆ ಎಂಬುದನ್ನು ಅಲಿ ಕಲಿತರು. ತಮ್ಮ ಶಾಲೆಗೂ ಆಡಳಿತ ಮಂಡಳಿ ಸ್ಥಾಪಿಸಲು ನಿರ್ಧರಿಸಿದರು.

ಈ ಸಂಬಂಧ ಅಲಿ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಹೋಗಿದ್ದರು. ಚೀಟಿಯಲ್ಲಿ ‘ಬಾಬರ್ ಅಲಿ, ಹೆಡ್ ಮಾಸ್ಟರ್, ಆನಂದ ಶಿಕ್ಷಾ ನಿಕೇತನ’ ಎಂದು ಬರೆದು ಕಳಿಸಿದರು. ಅಲಿ ಅವರನ್ನು ಡಿ.ಸಿ. ಒಳಬರಲು ಹೇಳಿದರು. ಆಗ ಅವರು ಏಳನೇ ತರಗತಿಯಲ್ಲಿದ್ದರು. ಹುಡುಗನೊಬ್ಬ ಬಂದಿದ್ದು ಕಂಡು ಜಿಲ್ಲಾಧಿಕಾರಿ ರೇಗಿದರು. ‘‘ನಿನ್ನನ್ನು ಯಾರು ಒಳಗೆ ಕಳಿಸಿದರು’’ ಎಂದು ಸಿಡುಕಿದರು. ‘‘ನಾನೇ ಹೆಡ್ ಮಾಸ್ಟರ್. ಬೀದಿ ಬದಿಯ ಮಕ್ಕಳಿಗಾಗಿ ಶಾಲೆ ನಡೆಸುತ್ತಿದ್ದೇನೆ’’ ಎಂದು ವಿನಮ್ರವಾಗಿ ವಿವರಿಸಿದರು ಅಲಿ. ಕೂಡಲೇ ಉಪ ವಿಭಾಗಾಧಿಕಾರಿಯನ್ನು ಕರೆದ ಡಿ.ಸಿ., ಶಾಲೆಗೆ ಭೇಟಿ ಕೊಡಲು ಸೂಚಿಸಿದರು. ಅದೇ ಉಪ ವಿಭಾಗಾಧಿಕಾರಿ ಆನಂದೋ ಶಿಕ್ಷಾ ನಿಕೇತನದ ಮೊದಲ ಅಧ್ಯಕ್ಷರಾದರು. ಈಗ ಶಾಲೆ ಎರಡು ದಶಕದ ಯಶಸ್ವಿ ಯಾತ್ರೆ ಪೂರೈಸಿದೆ. ಸಮಸ್ಯೆ, ಹೋರಾಟಗಳ ನಡುವೆಯೇ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ ಅಲಿ.

ಆನಂದೋ ಶಿಕ್ಷಾ ನಿಕೇತನದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ. 60ರಷ್ಟು ಬಾಲಕಿಯರು. ಶೇ. 40ರಷ್ಟು ಬಾಲಕರು. ಹೆಣ್ಣುಮಕ್ಕಳನ್ನು ಶಾಲೆಗೆ ಕರೆತರುವ ಕಷ್ಟ ಅಲಿ ಅವರಿಗೆ ಗೊತ್ತಿದೆ. ಅದಕ್ಕೊಂದು ಉದಾಹರಣೆ ಕೊಡುತ್ತಾರೆ. ಮೀನುಗಳ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರು ಕೂಲಿಗಾಗಿ ಕುಟುಂಬ ಸಮೇತ ವಲಸೆ ಹೋಗುತ್ತಾರೆ. ಅವರಿಗೆ ಹೋದ ಕಡೆ ಹೊಂದಾಣಿಕೆ ಆಗದೆ ವಾಪಸ್ ಬರುತ್ತಾರೆ. ಶಾಲೆ ಬಿಟ್ಟ ಮೊಮ್ಮಗಳ ಶಿಕ್ಷಣ ಮುಂದುವರಿಸಲು ಪರದಾಡುವಾಗ ಅಲಿಯ ಶಾಲೆ ಇರುವುದು ತಿಳಿಯುತ್ತದೆ. ಅಲ್ಲಿ ಮೊಮ್ಮಗಳ ಕಲಿಕೆ ನಡೆಯುತ್ತದೆ. ಅಜ್ಜಿ ಸೇವೆ ಕೊನೆವರೆಗೂ ಅಲ್ಲೇ. ಮೊಮ್ಮಗಳೂ ಶಿಕ್ಷಕ ತರಬೇತಿ ಪಡೆದು, ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಅಲಿ ಅವರ ತಂಗಿ ಒಳಗೊಂಡು ಶಾಲೆಯಲ್ಲಿ ಓದಿದ ಆರು ವಿದ್ಯಾರ್ಥಿಗಳು ಅದೇ ಶಾಲೆಯ ಬೋಧಕರು. ಇದೇ ಅಲಿಯವರ ಶಕ್ತಿ. ಅವರ ಸಾಮರ್ಥ್ಯ. ಸಾಧನೆ. ಇನ್ನೇನು ಅವರ ಶಾಲೆಗೆ 25 ವರ್ಷ. ಸರಕಾರದ ನೆರವಿಲ್ಲದೆ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಇದುವರೆಗೆ ಉಚಿತ ಶಿಕ್ಷಣ ನೀಡಿದ್ದಾರೆ.

ಅಲಿ ಅವರಿಗೆ 16 ವರ್ಷವಿದ್ದಾಗ ಬಿಬಿಸಿ, ‘ಜಗತ್ತಿನ ಕಿರಿಯ ವಯಸ್ಸಿನ ಹೆಡ್ ಮಾಸ್ಟರ್’ ಎಂದು ಘೋಷಿಸಿ, ಸಾಕ್ಷ್ಯಚಿತ್ರ ಪ್ರದರ್ಶಿಸಿದೆ. ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರ ಅವರನ್ನು ಹುಡುಕಿಕೊಂಡು ಬಂದಿವೆ. ಪತ್ರಿಕೆ, ಮ್ಯಾಗಝಿನ್ಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ಕರ್ನಾಟಕ ಪದವಿ ಪೂರ್ವ ಶಿಕ್ಷಣದ ಪಠ್ಯ ಪುಸ್ತಕದಲ್ಲೂ ಅಲಿ ಬದುಕು-ಸಾಧನೆ ಕುರಿತ ಪಠ್ಯವಿದೆ. ಕರ್ನಾಟಕ ಸೇರಿ ದೇಶದ ವಿವಿಧೆಡೆಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಹಲವು ದೇಶಗಳು ಅವರನ್ನು ಆಹ್ವಾನಿಸಿ, ಗೌರವಿಸಿವೆ. ‘ಶಿಕ್ಷಣವೆಂಬುದು ಬರೀ ಪುಸ್ತಕದ ಬದನೆಕಾಯಿಯಲ್ಲ. ಮಾನವೀಯ ಮೌಲ್ಯ ಬಿತ್ತುವ ಮಾಧ್ಯಮ’ ಎನ್ನುವುದು ಅಲಿಯವರ ನಂಬಿಕೆ. ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂಬುದು ಅವರ ಕಿವಿಮಾತು.

ಶಿಕ್ಷಣ ಕ್ಷೇತ್ರದಲ್ಲಿ ಬಾಬರ್ ಅಲಿ ಮಾಡಿರುವ ಸಾಧನೆ ಅವರನ್ನು ರಾಜಕೀಯ ರಂಗಕ್ಕೂ ಎಳೆದು ತಂದಿದೆ. ಈಚೆಗೆ ದೇಶದ ಜನರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಅಲಿ ಅವರ ಹಣೆ ಬರಹವನ್ನೇ ಬದಲಿಸಿದೆ. ‘ತೃಣಮೂಲ ಕಾಂಗ್ರೆಸ್ ಪಕ್ಷ’ ಮತ್ತು ಅದರ ನಾಯಕಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣೆಯಲ್ಲಿ ಸೋತರೂ ಅವರ ಪಕ್ಷದಿಂದ ಜಾಲಂಗಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹೆಡ್ ಮಾಸ್ಟರ್ ಬಾಬರ್ ಅಲಿ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಇದರೊಂದಿಗೆ ಅವರ ರಾಜಕೀಯ ಇನಿಂಗ್ಸ್ ಶುರುವಾಗಿದೆ. ಅಲಿ ಅವರಿಗೆ ರಾಜಕೀಯಕ್ಕೆ ಬರಲು ಇಷ್ಟ ಇರಲಿಲ್ಲ. ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಖುದ್ದು ಎಳೆದು ತಂದಿದ್ದಾರೆ.

ಬಾಬರ್ ಅಲಿ ಟಿಎಂಸಿ ಸದಸ್ಯತ್ವ ಪಡೆದಿದ್ದು 2025ರ ಡಿಸೆಂಬರ್ ತಿಂಗಳಲ್ಲಿ. ದೇಶದೆಲ್ಲೆಡೆ ಹಾಗೂ ಹೊರ ದೇಶಗಳಲ್ಲಿರುವ ಹಿತೈಷಿಗಳು ಮತ್ತು ಗೆಳೆಯರನ್ನು ಸಂಪರ್ಕಿಸಿ ಸಲಹೆ ಪಡೆದರು. ಕೆಲವರು ‘ರಾಜಕೀಯ ಬೇಡ’ವೆಂದರು. ಇನ್ನು ಹಲವರು ‘ಸ್ಪರ್ಧೆ ಮಾಡುವುದರಲ್ಲಿ ತಪ್ಪೇನಿಲ್ಲ’ ಎಂದರು. ಟಿಎಂಸಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿದೆ. ಅವರಲ್ಲಿ ಬಾಬರ್ ಅಲಿ ಒಬ್ಬರು. ಇಂಥವರು ಹಲವರಿದ್ದಾರೆ. ಸಂಸತ್ತಿನಲ್ಲೂ ಅಷ್ಟೇ ಮಹುವಾ ಮೊಯಿತ್ರಾ, ಸಯಾನ ಘೋಷ್, ಕಲ್ಯಾಣ್ ಬ್ಯಾನರ್ಜಿಯಂಥ ಸದಸ್ಯರಿದ್ದಾರೆ. ಅವರೇ ಆಡಳಿತ ಪಕ್ಷದ ಬೆವರಿಳಿಸುವುದು. ಅವರ ಸಾಲಿಗೀಗ ಅಲಿ ಸೇರಿದ್ದಾರೆ.

ಜಾಲಂಗಿಯಲ್ಲಿ ಅಲಿ 21,515 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಎಸ್ಐಆರ್ ಪ್ರವಾಹದಲ್ಲಿ ಟಿಎಂಸಿಯ ಬಹುತೇಕರು ಕೊಚ್ಚಿ ಹೋಗಿದ್ದಾರೆ. ಬಾಬರ್ ಅಲಿ ಈಜಿ ದಡ ಸೇರಿದ್ದಾರೆ. ಎರಡೂವರೆ ದಶಕಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸ ಕೈ ಹಿಡಿದಿದೆ. ಧರ್ಮದ ಆಧಾರದಲ್ಲಿ ಪಶ್ಚಿಮ ಬಂಗಾಳ ಒಡೆದಿದ್ದರೂ, ಅಲಿ ಅವರಿಗೆ ಎಲ್ಲ ಜಾತಿ, ಮತಗಳ ಮತದಾರರು ಬೆಂಬಲಿಸಿದ್ದಾರೆ. ಇದು ಅವರ ಜಾತ್ಯತೀತ ನಡೆಗೆ ಸಿಕ್ಕ ಜಯ.

‘‘ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಶಿಕ್ಷಕಿಯಾಗಿದ್ದವರು. ಆನಂತರ, ಶಾಸಕರಾಗಿ, ಸಚಿವರಾಗಿದ್ದವರು. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸಿದ್ದೇನೆ. ಆರಿಸಿ ಬಂದಿದ್ದೇನೆ’’ ಎನ್ನುತ್ತಾರೆ ಹೆಡ್ ಮಾಸ್ಟರ್. ಟಿಎಂಸಿ ನಾಯಕರ ಸೋಲು ಅಲಿ ಅವರ ಮನಸ್ಸಿಗೆ ಬೇಸರ ಉಂಟುಮಾಡಿದೆ. ಟಿಎಂಸಿ ಸರಕಾರ ಅಧಿಕಾರಕ್ಕೆ ಬಂದಿದ್ದರೆ ಅಲಿ ಶಿಕ್ಷಣ ಸಚಿವರಾಗುವ ಸಾಧ್ಯತೆಯಿತ್ತು. ಅದಾಗಿದ್ದರೆ, ಪಶ್ಚಿಮ ಬಂಗಾಳದ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ಬರುತಿತ್ತು.

Tags

HeadmasterwinsBJPwave
share
ಹೊನಕೆರೆ ನಂಜುಂಡೇಗೌಡ
ಹೊನಕೆರೆ ನಂಜುಂಡೇಗೌಡ
Next Story
X