Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ‘ಉತ್ತರ ಕರ್ನಾಟಕ’ದ ಸಿನೆಮಾ ಮಾದರಿ...

‘ಉತ್ತರ ಕರ್ನಾಟಕ’ದ ಸಿನೆಮಾ ಮಾದರಿ ಉದ್ಘಾಟಿಸಿದ ‘ಹುಲಿಬೀರ’

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ22 Oct 2026 10:55 AM IST
share
‘ಉತ್ತರ ಕರ್ನಾಟಕ’ದ ಸಿನೆಮಾ ಮಾದರಿ ಉದ್ಘಾಟಿಸಿದ ‘ಹುಲಿಬೀರ’

ಇದೀಗ ‘ಪ್ರೇಮದ ಊರಲಿ’ ಮತ್ತು ‘ಹುಲಿಬೀರ’ ಎನ್ನುವ ಎರಡು ಸಿನೆಮಾಗಳು ಕನ್ನಡ ಸಿನೆಮಾ ಕ್ಷೇತ್ರದ ಹೊಸ ಚೈತನ್ಯಕ್ಕೆ ಕಾರಣವಾಗಿವೆ. ಇದರಲ್ಲಿ ‘ಹುಲಿಬೀರ’ ‘ಉತ್ತರ ಕರ್ನಾಟಕ’ ನೆಲದ ಸತ್ವವನ್ನು ಹೀರಿಕೊಂಡು ಬಂದಿರುವ ಮೊದಲ ನೈಜ ಜನಪ್ರಿಯ ಮಾದರಿಯ ಸಿನೆಮಾವಾಗಿದೆ. ಬಹಳ ಮುಖ್ಯವಾಗಿ ಈ ಸಿನೆಮಾ ಉತ್ತರ ಕರ್ನಾಟಕದ ಜನಬದುಕಿನ ನಿಜದ ನೆಲೆಯೊಂದನ್ನು ಸಿನೆಮಾ ಭಾಷೆಯಾಗಿ ರೂಪಾಂತರಿಸಿರುವುದು ಬಹಳ ಮುಖ್ಯವಾಗಿದೆ. ಇಡೀ ಸಿನೆಮಾ ‘ಬೆಂಗಳೂರು ಕೇಂದ್ರ’ದ ಸಿನೆಮಾಕ್ಕೆ ಪರ್ಯಾಯವಾಗಿ ‘ಉತ್ತರ ಕರ್ನಾಟಕ’ದ ಸಿನೆಮಾದ ಒಂದು ಮಾದರಿಯನ್ನು ಸಮರ್ಥವಾಗಿ ಉದ್ಘಾಟಿಸಿದೆ.

ಕನ್ನಡ ಸಿನೆಮಾ ಜಗತ್ತು ‘ಉತ್ತರ ಕರ್ನಾಟಕ’ವನ್ನು ಈ ತನಕ ಹಾಸ್ಯಕ್ಕೆ, ವ್ಯಂಗ್ಯಕ್ಕೆ ಹಿಂದುಳಿದಿರುವುದಕ್ಕೆ, ಏನೂ ಅರಿಯದ ಮುಗ್ಧತೆಗೆ, ಒರಟುತನಕ್ಕೆ, ಅಶ್ಲೀಲ ಜನಪದ ಗೀತೆಗಳ ಲಯಕ್ಕೆ ಲಗತ್ತಿಸಿ ಚಿತ್ರಿಸಿದ್ದಾರೆ. ಮತ್ತೊಂದು ನೆಲೆಯಲ್ಲಿ ಉತ್ತರ ಕರ್ನಾಟಕವನ್ನು ಮೆಚ್ಚಿಸುವ ಅತಿರಂಜಿತ ನಿರೂಪಣೆಗಳನ್ನು ಕಟ್ಟಲಾಗಿದೆ. ಹೀಗೆ ಊಟಕ್ಕೆ ಉಪ್ಪಿನ ಕಾಯಿಯ ಹಾಗೆ ಉತ್ತರ ಕರ್ನಾಟಕವನ್ನು ಬಳಸಿ ಬಿಸಾಡಿದ್ದಾರೆ. ಸಿನೆಮಾ ಮಾರುಕಟ್ಟೆಯ ಕಾರಣಕ್ಕೆ ಉತ್ತರ ಕರ್ನಾಟಕದ ಜನರನ್ನು ಸಿನೆಮಾಗೆ ಸೆಳೆಯುವ ತಂತ್ರವಾಗಿ ಈ ಭಾಗದ ಜನಪದ ಹಾಡುಗಳನ್ನೂ, ಭಾಷೆಯನ್ನೂ, ಉಡುಪನ್ನೂ ಬಳಸಿಕೊಳ್ಳಲಾಗಿದೆ.

ಆದರೆ ‘ಹುಲಿಬೀರ’ ಚಿತ್ರತಂಡ ಮೊದಲ ಬಾರಿಗೆ ಬೆಂಗಳೂರು ಕೇಂದ್ರದ ಸಿನೆಮಾ ಜಗತ್ತು ಕಟ್ಟಿದ ‘ಉತ್ತರ ಕರ್ನಾಟಕ’ದ ಮಿತ್‌ನ್ನು ಛಿದ್ರಗೊಳಿಸಿದೆ. ಈ ಭಾಗಕ್ಕೆ ಇಲ್ಲಿಯದೇ ಆದ ನೆಲದ ಕಥೆ, ಸೂಕ್ಷ್ಮ ಸಂವೇದನೆ, ಇಲ್ಲಿಯದೇ ಒಂದು ವಿಶಿಷ್ಟಲೋಕ ಇದೆ ಎನ್ನುವುದನ್ನು ತೋರಿಸಿದ್ದಾರೆ. ಮುಂದೆ ಉತ್ತರ ಕರ್ನಾಟಕದ ಹೊಸ ತಲೆಮಾರಿನ ಯುವಕ-ಯುವತಿಯರು, ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಸೇರಿಕೊಂಡು ಉತ್ತರ ಕರ್ನಾಟಕದ್ದೇ ಸಿನೆಮಾ ಮಾದರಿಯನ್ನು ಹುಟ್ಟುಹಾಕಲು ಈ ಸಿನೆಮಾ ಧೈರ್ಯ ಮತ್ತು ಭರವಸೆ ತುಂಬುವಂತಿದೆ.

ಕನ್ನಡ ಸಿನೆಮಾ ಅಂದರೆ ಬೆಂಗಳೂರು, ಬೆಂಗಳೂರೆಂದರೆ ಕನ್ನಡ ಸಿನೆಮಾ ಎನ್ನುವ ಅಘೋಷಿತ ನಡೆ ಇನ್ನಾದರೂ ಬದಲಾಗಬೇಕಿದೆ. 1934ರ ಕನ್ನಡದ ಮೊದಲ ಟಾಕಿ ಸಿನೆಮಾ ‘ಸತಿ ಸುಲೋಚನ’ವನ್ನು ಗುರುತಾಗಿಟ್ಟುಕೊಂಡರೆ ಕನ್ನಡ ಸಿನೆಮಾ ಇತಿಹಾಸ ಶತಮಾನದತ್ತ ಸಾಗುತ್ತಿದೆ. ಆದರೂ ಕನ್ನಡ ಸಿನೆಮಾದ ‘ಬೆಂಗಳೂರು ಕಣ್ಣೋಟ’ ಪೂರ್ಣ ಬದಲಾಗಿಲ್ಲ. ಬೆಂಗಳೂರು ಕೇಂದ್ರದ ಸಿನೆಮಾ ಎಂದರೆ, ಎಲ್ಲವನ್ನೂ ಬೆಂಗಳೂರು ಕಣ್ಣಿಂದ ನೋಡುವುದು. ಬೆಂಗಳೂರಿಗರು ಪರಿಭಾವಿಸಿದ ಕರ್ನಾಟಕವನ್ನು ತೋರಿಸುವುದು. ಬೆಂಗ್ಳೂರ್ ಕನ್ನಡವೇ ಕರ್ನಾಟಕದ ಕನ್ನಡ ಎಂದು ಬಿಂಬಿಸುವುದು.

ಉತ್ತರ ಕರ್ನಾಟಕದ ಕಥೆಗಳನ್ನು ಬೆಂಗಳೂರಿಗರು ಸಿನೆಮಾ ಮಾಡಿಲ್ಲ ಅಂತಲ್ಲ. ಕುಂ.ವೀರಭದ್ರಪ್ಪ ಅವರ ಕಥೆಗಳ ‘ಮನಮೆಚ್ಚಿದ ಹುಡುಗಿ’ (1987), ‘ಕೊಟ್ರೇಶಿ ಕನಸು’ (1994), ‘ದೊರೆ (1995), ‘ಕೂರ್ಮಾವತಾರ’ (2011), ಈಚಿನ ‘ಕುಬುಸ’ (2024), ಕಥೆಗಾರ ಅಮರೇಶ ನುಗಡೋಣಿ ಅವರ ಕಥೆ ಆಧಾರಿತ ‘ಕನಸೆಂಬೋ ಕುದುರೆಯೇರಿ’ (2010), ‘ನೀರು ತಂದವರು’ (2018) ಮೊದಲಾದ ಸಿನೆಮಾಗಳಲ್ಲಿ ಎರಡು ಮೂರು ದಶಕಗಳಿಂದಲೂ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಕಥೆ ಹೇಳುತ್ತಾ ಬರಲಾಗಿದೆ. ಇವುಗಳಲ್ಲಿ ‘ಕುಬುಸ’ ಸಿನೆಮಾವನ್ನು ಹೊರತುಪಡಿಸಿದರೆ ಉಳಿದವು ಬೆಂಗಳೂರು ಕಣ್ಣೋಟದಲ್ಲಿ ರೂಪು ತಳೆದವು.

ಕಳೆದ ಒಂದು ದಶಕದಲ್ಲಿ ಪ್ರಭಾವಿ ಬೆಂಗಳೂರು ಕೇಂದ್ರದ ಸಿನೆಮಾ ಚೂರು ಅಲುಗಾಡುತ್ತಿದೆ. ದಕ್ಷಿಣ ಕನ್ನಡದ ಮಂಗಳೂರು ಕೇಂದ್ರ ಮುನ್ನೆಲೆಗೆ ಬರುತ್ತಿದೆ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಅವರುಗಳ ತಂಡದ ಪ್ರಯೋಗಗಳನ್ನು ಗಮನಿಸಬಹುದು. ಈಚಿನ ಕಾಂತಾರ, ಸು ಫ್ರಂ ಸೋ ಸಿನೆಮಾಗಳು ತಮ್ಮ ಮಂಗಳೂರು ಕೇಂದ್ರದ ಗುರುತನ್ನು ಗಟ್ಟಿಯಾಗಿ ಛಾಪಿಸುತ್ತಿವೆ. ತಮ್ಮದೇ ಭಾಷೆ, ತಮ್ಮದೇ ನಟನಟಿಯರು, ತಮ್ಮದೇ ತಂತ್ರಜ್ಞರು ತಮ್ಮದೇ ರೀತಿಯ ಸಿನೆಮಾ ಎನ್ನುವುದು ಇದರ ರೀತಿ.

ಉತ್ತರ ಕರ್ನಾಟಕದಲ್ಲಿಯೂ ಅಂತಹ ಪ್ರಯೋಗಗಳು ಆರಂಭವಾಗಿವೆ. ಉತ್ತರ ಕರ್ನಾಟಕದ ಬೆಳಗಾವಿ ಕೇಂದ್ರದ ಜಮಖಂಡಿ ಭಾಗದ ಮೂವರು ಮಹಿಳೆಯರು ಅಂತಹ ಪ್ರಯೋಗ ಮಾಡಿದ್ದಾರೆ. ಸುಪ್ರಿಯಾ ನಿಪ್ಪಾಣಿ ನಿರ್ದೇಶಿಸಿರುವ, ನೀಲಗಂಗಾ ಚರಂತಿಮಠ ನಿರ್ಮಿಸಿದ, ಲೇಖಕಿ ಶಾರದಾ ಮುಳ್ಳೂರು ಪ್ರಧಾನ ಪಾತ್ರ ವಹಿಸಿದ, ರಂಗಕರ್ಮಿ ಮಹಾದೇವ ಹಡಪದ ನಟಿಸಿದ ‘ಚುರುಮುರಿಯಾ’ (2025) ಅಂತಹ ಸಿನೆಮಾ. ಕೊಪ್ಪಳ ಭಾಗದ ಕಥೆ ಹೇಳುವ ಮೂಲತಃ ಯರೆಹಂಚಿನಾಳದ ಜಯಶಂಕರ್ ಆರ್ಯರ್ ನಿರ್ದೇಶನದ ‘ಶಿವಮ್ಮ ಯರೆಹಂಚಿನಾಳ’ ಅಂತಹ ಮತ್ತೊಂದು ವಿಶಿಷ್ಟ ಪ್ರಯೋಗ. ಇತ್ತೀಚೆಗೆ ಸುಪ್ರಿಯಾ ನಿಪ್ಪಾಣಿ ಉತ್ತರ ಕರ್ನಾಟಕದ ಗ್ರಾಮೀಣ ಮಹಿಳೆಯರ ಕಷ್ಟ-ಸುಖಗಳನ್ನು ಆಧರಿಸಿ ನಿರ್ಮಿಸಿ ನಿರ್ದೇಶಿಸಿದ ‘ರೊಟ್ಟಿ’ ಎನ್ನುವ ಕಿರುಚಿತ್ರವೂ ಗಮನಸೆಳೆಯುತ್ತಿದೆ.

ಈ ನಡುವೆ ಹೈದರಾಬಾದ್ ಕರ್ನಾಟಕದ (ಕಲ್ಯಾಣ ಕರ್ನಾಟಕ) ರಾಯಚೂರು ಕೇಂದ್ರದಿಂದ ಗಮನಾರ್ಹ ಸಿನೆಮಾಗಳು ಬಂದಿವೆ. ಉತ್ಸವ ಗೊನಾವರ ನಿರ್ದೇಶನದ ‘ಫೋಟೊ’ (2024), ಆಯುಷ್ ಮಲ್ಲಿ ನಿರ್ದೇಶಿಸಿದ ‘ಪಪ್ಪಿ’ (2025) ಮತ್ತು ಭೀಮರಾವ್ ಪೈದೊಡ್ಡಿ ನಿರ್ದೇಶನದ ‘ಹೆಬ್ಬುಲಿ ಕಟ್’ (2025) ಈ ಮೂರು ಸಿನೆಮಾಗಳು ರಾಯಚೂರು ಕೇಂದ್ರದ ಸಿನೆಮಾಗಳನ್ನು ಸಮರ್ಥವಾಗಿ ಹಿಡಿದಿಟ್ಟಿವೆ. ಹೂವಿನ ಹಡಗಲಿಯ ಅಡ್ಡ ರಮೇಶ್ (ರಘುರಾಮ ಚರಣ್) ನಿರ್ದೇಶಿಸಿದ ಕುಂವಿ ಅವರ ಕಥೆ ಆಧರಿಸಿದ ‘ಕುಬುಸ’ ಸಿನೆಮಾ ಹೊಸಪೇಟೆ ಮತ್ತು ಕೊಟ್ಟೂರು ಭಾಗದ ಕಥೆಯನ್ನು ಇಲ್ಲಿನ ಕಲಾವಿದರ ಮೂಲಕವೇ ಹೇಳಲು ಪ್ರಯತ್ನಿಸಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ಲಿನ ಯುವಕ ಪುನೀತ್ ಸಾಕ್ಯ ಅವರ ನಿರ್ದೇಶನದ ‘ಆಡು ಆನೆಯ ನುಂಗಿ’ ಕಿರುಚಿತ್ರದ ಮೂಲಕ ಕಲ್ಯಾಣ ಕರ್ನಾಟಕದ ವಲಸೆಯನ್ನು ರೂಪಕಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.

ಹೀಗೆ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಸಿನೆಮಾ ಪ್ರಯೋಗಗಳಲ್ಲಿ ಜನಪ್ರಿಯ ಸಿನೆಮಾವಾಗಿಯೂ ‘ಹುಲಿಬೀರ’ ಹೊಸ ಹೆಜ್ಜೆ ಇಟ್ಟಿದೆ. ಈ ಸಿನೆಮಾ ನಿರ್ದೇಶಕ ಮದರಂಗಿ ಮಲ್ಲಿಕಾರ್ಜುನ ಈ ಹಿಂದೆಯೂ ಸಿನೆಮಾ ಪ್ರಯೋಗ ಮಾಡಿದ್ದಾರಾದರೂ ‘ಹುಲಿಬೀರ’ ಅವರ ಸಿನೆಮಾ ಜರ್ನಿಯಲ್ಲಿ ಹೊಸ ಅಧ್ಯಾಯ ಬರೆದಿದೆ.

ಈ ಸಿನೆಮಾದ ಒಂದೆಳೆಯೆಂದರೆ ಪಶುಪಾಲನೆ ಮಾಡುವ ಅರೆಅಲೆಮಾರಿಗಳಾಗಿ ಅಲೆಯುವ ಹಾಲುಮತದ ಕುರಿಗಾಹಿಗಳ ಬದುಕನ್ನು ಕೇಂದ್ರೀಕರಿಸಿಕೊಂಡಿದೆ. ‘ಹುಲಿಗುಡ್ಡ’ ಎಂಬ ಊರು ಉತ್ತರ ಕರ್ನಾಟಕದ ಪ್ರಾತಿನಿಧಿಕ ಹಳ್ಳಿಯಾಗಿದೆ. ಯಲ್ಲಮ್ಮನ ಪರಂಪರೆಯಲ್ಲಿ ಗಾಢ ನಂಬಿಕೆ ಇಟ್ಟ ಕುರಿಗಾಹಿ ಕೂಡು ಕುಟುಂಬವೊಂದರಲ್ಲಿ ಹುಟ್ಟುವ ಬೀರ, ಮನೆಯವರ ಮಮತೆಯಲ್ಲಿ ಹತ್ತನೇ ತರಗತಿಗೆ ಶಾಲೆ ಬಿಟ್ಟು ಜತೆಗಾರರೊಂದಿಗೆ ಅಂಡಲೆಯುತ್ತ ಯುವಕರ ಗುಂಪಿನ ನಾಯಕನಾಗುತ್ತಾನೆ. ಇಡೀ ಊರಿಗೆ ಬೇಕಾದ ಒಳ್ಳೆಯ ಹುಡುಗನಾಗುತ್ತಾನೆ. ಬೀರ ಶಾಲೆ ಕಲಿಯದಿದ್ದರೂ ಆಧುನಿಕ ಬದುಕು ಆತನಿಗೆ ಸರಿ ತಪ್ಪುಗಳ ನ್ಯಾಯ ನಿಷ್ಠುರ ಬದುಕಿನ ಮಾರ್ಗವನ್ನು ಕಲಿಸಿದೆ. ಹೀಗಾಗಿಯೇ ಬೀರ ಊರಿನ ಅನ್ಯಾಯ, ಅಕ್ರಮಗಳ ವಿರುದ್ಧ ಧ್ವನಿ ಎತ್ತುತ್ತಾನೆ.

ಉತ್ತರ ಕರ್ನಾಟಕದ ಹಳ್ಳಿಗಳ ದುಸ್ಥಿತಿಗೆ ಇಲ್ಲಿನ ಮೇಲ್ಜಾತಿಗಳ ಜಮೀನ್ದಾರಿಕೆ ಮತ್ತು ಅಧಿಕಾರಶಾಹಿಯ ಕೂಡಾಳಿಕೆಯ ಭ್ರಷ್ಟಾಚಾರ ಹೇಗೆ ಕಾರಣವಾಗಿದೆ ಎನ್ನುವುದನ್ನು ಸಿನೆಮಾ ಮುನ್ನೆಲೆಗೆ ತರುತ್ತದೆ. ಊರ ಚೇರ್ಮನ್ ಮತ್ತು ಗ್ರಾಮಪಂಚಾಯತ್ ಆಡಳಿತಾಧಿಕಾರಿಯ ಭ್ರಷ್ಟಾಚಾರವನ್ನು ಬಯಲಿಗೆಳೆದಾಗ ನೆರೆದ ಜನರಿಗೆ ಬೀರ ‘‘ನೀವು ಏನನ್ನೂ ಪ್ರಶ್ನಿಸದಿರುವ ಕಾರಣಕ್ಕೆ ಇವರು ಹೀಗೆ ಭ್ರಷ್ಟಾಚಾರ ಮಾಡುತ್ತಿರುವುದು. ಗ್ರಾಮ ಪಂಚಾಯತ್‌ನಲ್ಲಿ ಯಾವ ಯಾವ ಯೋಜನೆಗಳಿವೆ, ಎಷ್ಟು ದುಡ್ಡು ಬರುತ್ತೆ, ಅದನ್ನು ಹೇಗೆ ಖರ್ಚು ಮಾಡುತ್ತಾರೆ, ಎನ್ನುವುದನ್ನು ನಾವು ಕೇಳಬೇಕು..’’ಎನ್ನುತ್ತಾನೆ. ಹೀಗೆ ಗ್ರಾಮ ಪಂಚಾಯತ್ ರಾಜಕೀಯದಲ್ಲಿ ಪ್ರಜ್ಞಾವಂತ ಯುವಕರು ಪ್ರವೇಶಿಸಿ ಉತ್ತರ ಕರ್ನಾಟಕದ ಗ್ರಾಮ ಜೀವನದಲ್ಲಿ ಬದಲಾವಣೆ ತರಬೇಕು ಎನ್ನುವ ಸಂದೇಶ ಸಿನೆಮಾದ್ದು. ಗ್ರಾಮ ಪಂಚಾಯತ್‌ನಿಂದ ಜಿಲ್ಲಾ ಪಂಚಾಯತ್‌ನ ಜನಪ್ರತಿನಿಧಿಯಾಗಿ ಬೀರನ ರಾಜಕೀಯ ಪಾಲ್ಗೊಳ್ಳುವಿಕೆ ಯುವಜನರಿಗೆ ಮಾದರಿಯಾಗಿದೆ. ಹಾಗಾಗಿ ‘ಹುಲಿಬೀರ’ ಸಾಮಾಜಿಕವಾಗಿಯೂ ರಾಜಕೀಯವಾಗಿಯೂ ಪ್ರಾದೇಶಿಕ ಅಸಮಾನತೆಯ ನೆಲೆಯಲ್ಲೂ ಗಮನಿಸಬೇಕಾದ ಸಿನೆಮಾವಾಗಿದೆ.

ನಿರ್ದೇಶಕ ಮದರಂಗಿ ಮಲ್ಲಿಕಾರ್ಜುನ ಅವರು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾದ ಬಹುಪಾಲು ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಒಳಗೊಳಿಸಿದ್ದಾರೆ. ಗಂಗಾವತಿ ಪ್ರಾಣೇಶರನ್ನು ಒಳಗೊಂಡಂತೆ ಗುರುರಾಜ ಹೊಸಕೋಟೆ, ಕಥಾ ನಾಯಕ ಅಂಜನ್, ನಾಯಕಿ ವನು ಪಾಟೀಲ, ಚೈತ್ರ ತೋಟದ, ಸಂತೋಷ ಕೇರಿ, ಬಾಗಲಕೋಟೆ ಮಲ್ಯ, ನಾಗರಾಜ ನಿಲುಗಲ್, ರಾಜೇಂದ್ರ ಕಾರಂತ, ಸುನಂದಮ್ಮ ಹೊಸಪೇಟೆ, ರಾಯಪ್ಪ ಸಟಾನಿ, ರಂಗಭೂಮಿಯ ರೇವಣ್ಣ ಲಕ್ಷ್ಮೇಶ್ವರ ಹೀಗೆ ಚಿತ್ರದ ನಿರ್ಮಾಪಕರು, ಕಲಾವಿದರು, ತಂತ್ರಜ್ಞರನ್ನು ಒಳಗೊಂಡಂತೆ ಉತ್ತರ ಕರ್ನಾಟಕದವರೇ ಕಟ್ಟಿದ ಸಿನೆಮಾ ಇದಾಗಿದೆ. ಹಾಗೆ ನೋಡಿದರೆ ಉತ್ತರ ಕರ್ನಾಟಕದ ಕಲಾವಿದರ ನಡುವೆ ರಂಗಾಯಣ ರಘು ಬಹಳ ಪೇಲವವಾಗಿ ಕಾಣುತ್ತಾರೆ.

ಉತ್ತರ ಕರ್ನಾಟಕದ ಜನರ ನಡೆ-ನುಡಿ-ಬದುಕನ್ನು ಹಾಸ್ಯದ ವಸ್ತುವನ್ನಾಗಿಸಿ ಹೊಟ್ಟೆತುಂಬಿದ ಮಧ್ಯಮವರ್ಗ ಮತ್ತು ಮೇಲ್ವರ್ಗದ ಜನರೆದುರು ಬಿಕರಿಗಿಟ್ಟಿರುವ ಗಂಗಾವತಿ ಪ್ರಾಣೇಶ್ ಅವರನ್ನು ಚಿತ್ರತಂಡ ಕಿವಿಹಿಂಡಿ ಬುದ್ಧಿಹೇಳಿದೆ. ನೀವು ಹೇಳಬೇಕಾದದ್ದು ಉತ್ತರ ಕರ್ನಾಟಕದ ಹಾಸ್ಯ ವ್ಯಂಗ್ಯದ ಘಟನೆಗಳಲ್ಲ, ಈ ಭಾಗದ ಶೋಷಣೆ, ದಮನ ಮತ್ತು ಸಂಘರ್ಷದ ಕಥೆ ಎಂದು ಸಿನೆಮಾ ಕಥೆಯನ್ನು ಪ್ರಾಣೇಶರಿಂದಲೇ ಹೇಳಿಸಿದ್ದಾರೆ. ಪ್ರಾಣೇಶ್ ಅವರು ಈ ಸಿನೆಮಾದಿಂದಲಾದರೂ ಬುದ್ಧಿ ಕಲಿತು ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಹಾಸ್ಯಾಸ್ಪದವಾಗಿ ಚಿತ್ರಿಸದಿರಲಿ.

‘ಹುಲಿಬೀರ’ ಚಿತ್ರದಲ್ಲಿ ಉತ್ತರ ಕರ್ನಾಟಕದ ನೈಜ ಮಾದರಿಯೊಂದನ್ನು ಚಿತ್ರಿಸಲಾಗಿದೆ. ಈ ಭಾಗದ ಬೆಳಗಾವಿ, ಬಾಗಲಕೋಟೆ, ಧಾರವಾಡ ಭಾಗದ ಗ್ರಾಮೀಣ ನುಡಿಗಟ್ಟನ್ನು ಸಶಕ್ತವಾಗಿ ಬಳಸಲಾಗಿದೆ. ಈ ಭಾಗದ ಬಾಡಿಲಾಂಗ್ವೇಜ್ ಕೂಡ ಅಭಿನಯದಲ್ಲಿ ಬೆರೆತಿದೆ. ಚರಂಡಿ ವ್ಯವಸ್ಥೆ ಇಲ್ಲದ, ಮಣ್ಣಿನ ಧೂಳಲ್ಲಿ ಮುಳುಗಿದ, ಗುಡಿಸಲು, ಶೀಟ್ ಟೆಂಟ್‌ಗಳು, ಬಿದ್ದ ಮುರುಕಲು ಮನೆಗಳು, ಮೇಲೊದಿಕೆ ಇಲ್ಲದ ಬೆತ್ತಲೆ ಕಟ್ಟಡಗಳು, ಅಲ್ಲಲ್ಲೇ ಹರಡಿಕೊಂಡ ಬೇಸಾಯದ ವಸ್ತು ಪರಿಕರಗಳು, ಆಡು, ಕುರಿ, ದನಗಳು, ಪಂಚಾಯತ್ ಕಟ್ಟೆಗಳು, ಬಯಲ ಬೆಂಗಾಡಿನ ಹೊಲಗಳು, ಬೋಳು ಮರ ಮತ್ತು ಕುರುಚಲು ಕಾಡುಗಳು, ಬಿರುಬಿಸಿಲು, ಕುರಿಗಾಹಿಗಳ ಬದುಕು ಹೀಗೆ ಉತ್ತರ ಕರ್ನಾಟಕದ ನೈಜತೆಯನ್ನು ಸನಾತನ್ ಹಂಚಿನ್ ಛಾಯಾಗ್ರಹಣದಲ್ಲಿ ಸಮರ್ಥವಾಗಿ ಸೆರೆ ಹಿಡಿದಿದ್ದಾರೆ. ‘ಹುಟ್ಟಿಬಂದ ಹುಲಿಬೀರನಾಗಿ..’ ತರಹದ ಹಾಡಿನ ಮೂಲಕ ಇಲ್ಲಿಯದೇ ಜನಪದ ಹಾಡಿಕೆಯನ್ನು ಸಿನೆಮಾ ಸಂಗೀತಕ್ಕೆ ವೀರ್ ಸಮರ್ಥ್ ಒಗ್ಗಿಸಿದ್ದಾರೆ. ಧರ್ಮಾ ವಿಶ್ ಅವರ ಹಿನ್ನೆಲೆ ಸಂಗೀತ ಕೂಡ ಉತ್ತರ ಕರ್ನಾಟಕದ ಸ್ಥಳೀಯತೆ ಮುಕ್ಕಾಗದಂತೆ ಹಿಡಿದಿದೆ. ಆರಾ ಅವರ ಸಂಕಲನ ಗಮನಾರ್ಹವಾಗಿದೆ. ‘ಹುಲಿಬೀರ’ನ ಪಾತ್ರಕ್ಕೆ ಆಂಜನ್ ಜೀವ ತುಂಬಿದ್ದಾರೆ. ಕನ್ನಡಕ್ಕೊಬ್ಬ ಸಮರ್ಥ ನಟ ದೊರಕಿದಂತಾಗಿದೆ. ಉತ್ತರ ಕರ್ನಾಟಕದ ಶಕ್ತಿ ದೇವತೆ ಎಲ್ಲಮ್ಮನ ಜೋಗತಿ ಪರಂಪರೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಸಾಯಿ ಸ್ಟಾರ್ ಸಿನಿಮಾಸ್‌ನ ಅಶೋಕ್ ಎನ್.ಸುಜಾತಾ ಗಿರೀಶ್ ಒಳಗೊಂಡಂತೆ ದಾವಲಸಾಹೇಬ್ ಹುಣಸಿಮರದ ಅವರು ಧೈರ್ಯಮಾಡಿ ಸಿನೆಮಾ ನಿರ್ಮಿಸಿದ್ದಾರೆ.

ಈಚೆಗೆ ಪ್ರದೀಪ್ ಈಶ್ವರ್ ಮಾತನಾಡುತ್ತಾ ‘‘ಅದ್ಯಾವ್ದೋ ಉತ್ತರ ಕರ್ನಾಟಕದ ಭಾಷೆ’’ ಅಂತ ಮಾತಾಡ್ತಾರೆ. ನಿಜಕ್ಕೂ ಬೆಂಗಳೂರು ಮೈಸೂರು ಒಳಗೊಂಡಂತೆ ದಕ್ಷಿಣ ಕರ್ನಾಟಕದ ಹೊಟ್ಟೆತುಂಬಿದ ಜನಕ್ಕೆ ಉತ್ತರ ಕರ್ನಾಟಕ ಈಗಲೂ ‘‘ಅದ್ಯಾವ್ದೋ ಉತ್ತರ ಕರ್ನಾಟಕ’’ ಆಗಿಯೇ ಮುಂದುವರಿದಿದೆ.

‘ಪ್ರೇಮದ ಊರಲಿ’ ಮತ್ತು ‘ಹುಲಿಬೀರ’ ಎರಡೂ ಸಿನೆಮಾಗಳನ್ನು ಜತೆಗಿಟ್ಟು ನೋಡಿದರೆ, ಒಂದು ಜನಪ್ರಿಯ ಸಿನೆಮಾ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಿದ ನಿಟ್ಟಿನಲ್ಲಿ ‘ವ್ಯಕ್ತಿಗತ’ ನೆಲೆಯ ‘ಪ್ರೇಮದ ಊರಲಿ’ ಸಿನೆಮಾಕ್ಕಿಂತ ‘ಹುಲಿಬೀರ’ ಎಲ್ಲಾ ವಿಭಾಗದಲ್ಲೂ ಎತ್ತರದಲ್ಲಿದೆ. ಆದರೆ ಪ್ರಮೋಷನ್‌ನಿಂದ ಮೊದಲುಗೊಂಡು, ಟಾಕೀಸ್ ಕೊಡುವುದರಿಂದ ಮೊದಲುಗೊಂಡು, ಕನ್ನಡ ಸಿನೆಮಾ ಪ್ರಭಾವಿಗಳ ನಿರ್ಲಕ್ಷ್ಯಕ್ಕೆ ‘ಹುಲಿಬೀರ’ ಒಳಗಾಗಿದೆ. ಆದರೂ ‘ಹುಲಿಬೀರ’ ಚಿತ್ರತಂಡ ಸಿನೆಮಾ ಗೆಲುವು ಕೇವಲ ಬೆಂಗಳೂರು ಗೆಲುವು ಮಾತ್ರವಲ್ಲ ಎನ್ನುವುದನ್ನು ಸಾಬೀತು ಪಡಿಸಲು ಹಲ್ಲುಕಚ್ಚಿ ಉತ್ತರ ಕರ್ನಾಟಕದ ಎಲ್ಲಾ ಕಡೆಗೂ ಸುತ್ತಾಡಿ ಪ್ರಮೋಷನ್ ಮಾಡುತ್ತಾ ಈ ಭಾಗದ ಜನರನ್ನು ಸಿನೆಮಾದ ಕಡೆ ಕರೆತರುತ್ತಿದ್ದಾರೆ.

(ಅಂಕಣಕಾರರು ಪ್ರಾಧ್ಯಾಪಕರು ಮತ್ತು ಜನಪದ ಸಂಶೋಧಕರು)

share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X