16ನೇ ಜನಗಣತಿಯಹೊಸ್ತಿಲಲ್ಲಿ ಭಾರತ

ಭಾರತದ ಜನಗಣತಿಗೆ ಒಂದು ವಿಶಿಷ್ಟವಾದ ಇತಿಹಾಸವಿದೆ. ಜಗತ್ತಿನ ಬೃಹತ್ ಜನಸಂಖ್ಯೆಯುಳ್ಳ ದೇಶವಾದ ಭಾರತದ ಜನಗಣತಿ ದೇಶದ ಜನಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲದೆ ಜನರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ಸ್ಥಿತಿಗತಿಯನ್ನು ಅರಿಯುವ ದೃಷ್ಟಿಯಿಂದಲೂ ಭಾರೀ ಮಹತ್ವವನ್ನು ಪಡೆದಿದೆ. ಭಾರತದ ಸುದೀರ್ಘ ಅಭಿವೃದ್ಧಿ ದರ,ಜನಸಂಖ್ಯಾ ಬೆಳವಣಿಗೆ ದರದ ಅರಿವು ಭಾರತಕ್ಕೆ ಅತೀ ಮುಖ್ಯವಾಗಿದ್ದರೆ ಈ ಅಂಕಿ ಅಂಶಗಳ ಕುತೂಹಲ ಇತರ ದೇಶಗಳಿಗೂ ಇವೆ.
ಆರ್ಥಿಕ ಸಂಪನ್ಮೂಲಗಳ ಬಳಕೆ, ಅವುಗಳ ಫಲಿತಾಂಶ, ದೇಶದ ಪ್ರಜೆಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆ ದರ, ಸರಕಾರ ಅನುಷ್ಠಾನ ಮಾಡಿದ ವಿವಿಧ ಯೋಜನೆಗಳ ಪರಿಣಾಮ, ಸಂಪನ್ಮೂಲಗಳ ಬಳಕೆ ಮತ್ತು ಅವು ಜನರ ಬದುಕಿನ ಮೇಲೆ ಬೀರಿದ ಪರಿಣಾಮ, ದೀರ್ಘಕಾಲಿಕ ಯೋಜನೆಗಳ ಅನುಷ್ಠಾನ ಮತ್ತು ಬೆಳವಣಿಗೆ ದರ, ಜನರು ಮತ್ತು ತಾಂತ್ರಿಕ ಮತ್ತು ವೈಜ್ಞಾನಿಕ ಆವಿಷ್ಕಾರಗಳ ಅನುಷ್ಠಾನ, ಪಂಚವಾರ್ಷಿಕ ಯೋಜನೆಗಳ ಪರಿಣಾಮ, ಮುಂಗಡ ಪತ್ರ ಮತ್ತು ಅವುಗಳ ಫಲ, ರೂಪಿಸಬೇಕಾದ ಭವಿಷ್ಯದ ಯೋಜನೆಗಳು, ದೇಶದ ಆದ್ಯತೆಗಳು, ಸಾಮಾಜಿಕ ಪಲ್ಲಟ, ಸಾರಿಗೆ-ಸಂಪರ್ಕ ಬೆಳವಣಿಗೆ ದರ, ಕುಟುಂಬ ಮತ್ತು ವೈಯಕ್ತಿಕ ಅಂಕಿಅಂಶಗಳ ಸಂಗ್ರಹ ಒಟ್ಟಾರೆಯಾಗಿ ವೈಯಕ್ತಿಕ ಮತ್ತು ಸಾಮೂಹಿಕ ಅಭಿವೃದ್ಧಿ ದತ್ತಾಂಶಗಳನ್ನು ಪಡೆಯಲು ಈ ಜನಗಣತಿ ಎನ್ನುವುದು ಅತೀ ಅಗತ್ಯವಾದ ಮಾನದಂಡವಾಗಿದೆ.
ಭಾಷೆ, ಲಿಂಗ, ವಯೋಮಾನದ ಆಧಾರದಲ್ಲಿ ಜನಸಂಖ್ಯೆ ಹರಿವು ಅರಿಯಲು ಕೂಡಾ ಈ ಜನಗಣತಿ ಅತೀ ಮುಖ್ಯ. ನಗರೀಕರಣ, ಮೂಲಸೌಕರ್ಯ ಅಳವಡಿಕೆ, ಚುನಾವಣಾ ಕ್ಷೇತ್ರ ಪುನರ್‌ರಚನೆ ಕಾರ್ಯಕ್ಕೂ ಜನಗಣತಿ ಮೂಲಾಧಾರವಾಗಲಿದೆ.
ಭಾರತದಂತಹ ಬೃಹತ್ ದೇಶದಲ್ಲಿ ಜನಗಣತಿ ಕಾರ್ಯ ಆಗಾಗ ಅನುಷ್ಠಾನ ಮಾಡುವುದು ಕಷ್ಟ ಎಂದು ಅರಿತಿದ್ದ ಬ್ರಿಟಿಷರು ಅಂದೇ 10 ವರ್ಷಗಳಿಗೊಮ್ಮೆ ಜನಗಣತಿ ಪ್ರಕ್ರಿಯೆ ಜಾರಿಗೊಳಿಸಿದ್ದರು. ಇದು ಸ್ವಾತಂತ್ರ್ಯಾ ನಂತರವೂ ಅದೇ ರೀತಿ ಮುಂದುವರಿಯಿತು.
ಜನಗಣತಿ ಇತಿಹಾಸ
ಬ್ರಿಟಿಷ್ ಸರಕಾರ ಮೊದಲ ಬಾರಿಗೆ 1824ರಲ್ಲಿ ಭಾರತದ ಅಲಹಾಬಾದ್‌ನಲ್ಲಿ ಜನಗಣತಿ ಕಾರ್ಯವನ್ನು ಕೈಗೆತ್ತಿಕೊಂಡಿತು. ಅಂದಿನ ವೈಸ್‌ರಾಯ್ ಆಗಿದ್ದ ಹೆನ್ರಿ ವಾಲ್ಟರ್ 1830ರಲ್ಲಿ ಢಾಕಾದಲ್ಲಿ ಜನಗಣತಿ ಕಾರ್ಯ ನಡೆಸಿದರು. ಆದರೆ ಇದು ಸೀಮಿತ ಪ್ರದೇಶಗಳ ಅಂಕಿ ಅಂಶಗಳ ಸಂಗ್ರಹದ ಗುರಿಯನ್ನು ಹೊಂದಿತ್ತು. ಇದನ್ನು ಮತ್ತಷ್ಟು ವ್ಯವಸ್ಥಿತವಾಗಿ 1872ರಲ್ಲಿ ವೈಸ್‌ರಾಯ್ ಹೆನ್ರಿ ಮೇಯೋ ಜಾರಿಗೆ ತಂದರು. ಆದರೆ ಇದು ಏಕಕಾಲದಲ್ಲಿ ನಡೆದ ಜನಗಣತಿ ಆಗಿರಲಿಲ್ಲ.
ಭಾರತದಲ್ಲಿ ಬ್ರಿಟಿಷ್ ಅಧಿಕಾರಿ ಡಬ್ಲ್ಯುಡಬ್ಲ್ಯು ಪ್ಲೋಡರ್ 1881ರಲ್ಲಿ ಅವಿಭಜಿತ ಭಾರತದಲ್ಲಿನ ಬ್ರಿಟಿಷ್ ಇಂಡಿಯಾದ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಏಕಕಾಲದಲ್ಲಿ ಜನಗಣತಿ ಕಾರ್ಯವನ್ನು ನಡೆಸಿದರು.
ಇದು ಇಂದಿನ ದಶವಾರ್ಷಿಕ ಜನಗಣತಿ ಕಾರ್ಯಕ್ಕೆ ಅಡಿಗಲ್ಲಾಯಿತು. ಅಲ್ಲದೆ ದೇಶಾದ್ಯಂತ ಏಕಕಾಲದಲ್ಲಿ ನಡೆಯುವ ಜನಗಣತಿಗೆ ಇದು ನಾಂದಿಯನ್ನಾಡಿತು. ಆದುದರಿಂದ ಭಾರತದ ಪೂರ್ಣಪ್ರಮಾಣದ ಏಕಕಾಲದ ಜನಗಣತಿ ಕಾರ್ಯ 1881 ರಿಂದ ಮೊದಲ್ಗೊಂಡಿತು. ಆದರೂ 1872ರ ಜನಗಣತಿಯನ್ನು ಮೊದಲ ಜನಗಣತಿ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಭಾರತದ ಮುಂದಿರುವ ಜನಗಣತಿ 16ನೇ ಜನಗಣತಿಯಾಗಿದೆ.
2026-27ರ ಜನಗಣತಿಯ ವಿಶೇಷತೆ
ಇದು ದೇಶದ 16ನೇ ಮತ್ತು ಸ್ವಾತಂತ್ಯಾ ನಂತರದ 8ನೇ ಜನಗಣತಿ.
1881ರಿಂದ ನಿರಂತರ 10 ವರ್ಷಗಳಿಗೊಮ್ನೆ ನಡೆಯುತ್ತಿದ್ದ ಭಾರತದ ಜನಗಣತಿ 2021ರಲ್ಲಿ ಕೋವಿಡ್ ಕಾರಣದಿಂದ ಸಕಲ ಸಿದ್ಧತೆಯ ಹೊರತಾಗಿಯೂ ನಡೆಯಲಿಲ್ಲ. ಅಧಿಸೂಚನೆ, ಸಿಬ್ಬಂದಿ ನೇಮಕ, ಮನೆಪಟ್ಟಿಗಾಗಿ 2020ರಲ್ಲಿ ವಿವಿಧ ಹಂತಗಳಲ್ಲಿ ತರಬೇತಿ ನಡೆದರೂ ಅದೇ ವರ್ಷದ ಮಾರ್ಚ್ ತಿಂಗಳಲ್ಲಿ ಘೋಷಣೆಯಾದ ಲಾಕ್‌ಡೌನ್ ಕಾರಣದಿಂದ ಜನಗಣತಿ ಕಾರ್ಯ ಮುಂದೂಡಲ್ಪಟ್ಟಿತು. ಇದೀಗ ಮುಂದೂಡಲ್ಪಟ್ಟ ಜನಗಣತಿ 2027 ರಲ್ಲಿ ನಡೆಸಲು ಅಧಿಸೂಚನೆ ಪ್ರಕಟವಾಗಿದ್ದು ಪೂರ್ವಭಾವಿಯಾಗಿ ನಡೆಯುವ ಮನೆಪಟ್ಟಿ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸಾಮಾನ್ಯವಾಗಿ ಜನಗಣತಿ ಕಾರ್ಯ ಎರಡು ಹಂತಗಳಲ್ಲಿ ನಡೆಯುತ್ತದೆ. ಜನಗಣತಿಗೆ ಮೊದಲು ಮನೆಪಟ್ಟಿ ಕಾರ್ಯ ಒಂದು ವರ್ಷ ಮೊದಲೇ ನಡೆಯುವುದು ರೂಢಿ.
ಇದೀಗ 2027ರ ಜನಗಣತಿಯ ಮನೆಪಟ್ಟಿ ಕಾರ್ಯ ಇದೇ ವರ್ಷದ ಎಪ್ರಿಲ್ 16ರಿಂದ ಮೇ 15ರ ವರೆಗೆ ಕರ್ನಾಟಕ ರಾಜ್ಯದಲ್ಲಿ ನಡೆಯಲಿದೆ.
ಇದಕ್ಕಾಗಿ ಮೊಬೈಲ್ ಆ್ಯಪ್ ಮೂಲಕ ಗಣತಿದಾರರು ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಸಮಯದಲ್ಲಿ ಮನೆಮನೆಗೆ ಬರುವ ಗಣತಿದಾರರು ಮನೆ, ಕಟ್ಟಡಗಳಿಗೆ ಸಂಖ್ಯೆ ನೀಡಿದ ಬಳಿಕ 34 ಪ್ರಧಾನ ಪ್ರಶ್ನೆಗಳ ಆಧಾರದಲ್ಲಿ ಮಾಹಿತಿಗಳನ್ನು ಗಣತಿ ಆ್ಯಪ್ ಮೂಲಕ ದಾಖಲಿಸಲಿದ್ದಾರೆ. ಮನೆ, ಕಟ್ಟಡ, ಕುಟುಂಬ, ಮೂಲಭೂತ ಸೌಲಭ್ಯಗಳ ಕುರಿತಾದ ಈ ಪ್ರಶ್ನೆಗಳಿಗೆ ಆಫ್‌ಲೈನ್ ಸ್ಥಿತಿಯಲ್ಲೂ ಮಾಹಿತಿ ದಾಖಲಿಸಲು ಅವಕಾಶ ನೀಡಲಾಗಿದೆ. ಗಣತಿದಾರರು ಮನೆ, ಕಟ್ಟಡ, ಆಶ್ರಮ, ವಸತಿನಿಲಯ, ಬಂದಿಖಾನೆ, ಶಿಕ್ಷಣ ಸಂಸ್ಥೆಗಳು, ಕೈಗಾರಿಕೆ ಇತ್ಯಾದಿಗಳಿಗೆ ಭೇಟಿ ನೀಡಿದಾಗ ಸಂಬಂಧಿಸಿದವರು ಪೂರಕ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
ಗಣತಿದಾರರು ದಾಖಲಿಸಿದ ಮಾಹಿತಿಗಳನ್ನು ಪರಿಶೀಲಿಸಿ ಮೇಲ್ವಿಚಾರಕರು ಅನುಮೋದಿಸಲಿದ್ದಾರೆ.
ಈ ಹಂತದಲ್ಲಿ ಗಣತಿದಾರರಿಗೆ ಸೌಜನ್ಯದೊಂದಿಗೆ ಖಚಿತ ಮಾಹಿತಿ ನೀಡಿ ಜಗತ್ತಿನ ಅತೀ ದೊಡ್ಡ ಗಣತಿ ಕಾರ್ಯಕ್ಕೆ ಸಹಕರಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಸ್ವಯಂ ಗಣತಿಗೆ ಅವಕಾಶ
ಸ್ವಯಂ ಗಣತಿ ಈ ಬಾರಿಯ ಜನಗಣತಿಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. se.census. gov.in ಮೂಲಕ ದೇಶದ ಪ್ರತಿಯೊಂದು ಕುಟುಂಬದ ಮುಖ್ಯಸ್ಥನೂ ತನ್ನ ಮಾಹಿತಿಗಳನ್ನು ಸ್ವಯಂ ಆಗಿ ದಾಖಲಿಸಬಹುದು. ದಾಖಲಾತಿಯ ಬಳಿಕ ದೊರೆಯುವ SE ID - ಗಣತಿ ಗುರುತಿನ ಸಂಖ್ಯೆಯನ್ನು ಮನೆಗೆ ಬರುವ ಗಣತಿದಾರರೊಂದಿಗೆ ಹಂಚಿಕೊಳ್ಳುವುದು ಕಡ್ಡಾಯವಾಗಿದೆ. ಸ್ವಯಂ ಗಣತಿ ಕಾರ್ಯ ಈಗಾಗಲೇ ಆರಂಭವಾಗಿದ್ದು ಎಪ್ರಿಲ್ 1ರಿಂದ ಎಪ್ರಿಲ್ 15ರ ವರೆಗೆ ಅವಕಾಶ ನೀಡಲಾಗಿದೆ.
ಸ್ಯಯಂಗಣತಿಯಲ್ಲಿ ತಮ್ಮ ತಮ್ಮ ಮನೆ ಯಾ ಕಟ್ಟಡವನ್ನು ಜಿಯೋ ಮ್ಯಾಪ್ ಮೂಲಕ ಗುರುತಿಸಬೇಕಾಗಿದ್ದು ಇದು ಸಾಮಾನ್ಯ ಜನರಿಗೆ ಸ್ವಲ್ಪ ಕ್ಲಿಷ್ಟಕರವಾಗಿದ್ದು ಇದನ್ನು ಸರಳೀಕರಿಸುವುದು ಅಗತ್ಯ.
ಕುತೂಹಲ: ಈ ವರೆಗೂ ಪ್ರತೀ ಹತ್ತು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಜನಗಣತಿ ಈ ಬಾರಿ ಹಿಂದಿನ 2001, 2011, 2021ರ ಸರಣಿ ವರ್ಷಗಳನ್ನು ಮೀರಿ 2027ರಲ್ಲಿ ನಡೆಯಲಿದೆ. ಈ ಪ್ರಕಾರ ಮುಂದಿನ ಜನಗಣತಿ ನಿಜವಾಗಿಯೂ 2031ರಲ್ಲಿ ನಡೆಯಬೇಕಾಗಿತ್ತು. ಆದರೆ ಮತ್ತೆ ನಾಲ್ಕೇ ವರ್ಷಗಳಲ್ಲಿ ಇಂತಹ ಬೃಹತ್ ಕಾರ್ಯಕ್ಕೆ ಸರಕಾರ ಮುಂದಾಗುವುದೇ ಅಥವಾ ಶತಮಾನಗಳಿಂದ ನಡೆದು ಬಂದ ಸರಣಿ ವರ್ಷಗಳ ಮುಂದುವರಿಕೆ ಗತಿ ಬದಲಾಗಿ ಹೊಸ 27, 37, 47ರ ಸರಣಿ ಆರಂಭವಾಗುವುದೇ ಕಾಲವೇ ನಿರ್ಧರಿಸಬೇಕು.







