ಜಾಗತಿಕ ಕಸದ ತೊಟ್ಟಿಯಾಗುತ್ತಿರುವ ಭಾರತ!

ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಉದಾರೀಕರಣ ಮತ್ತು ಮುಕ್ತ ಮಾರುಕಟ್ಟೆಯ ಕರಾಳ ಮುಖವು ಭಾರತದ ಕರಾವಳಿಯನ್ನು ತಲುಪಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಯ ಮುಖವಾಡದ ಹಿಂದೆ, ಪಾಶ್ಚಾತ್ಯ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ದೇಶದಲ್ಲಿ ಉತ್ಪತ್ತಿಯಾಗುವ ಅತ್ಯಂತ ಅಪಾಯಕಾರಿ, ಹಾನಿಕಾರಕ ಹಾಗೂ ಮರುಬಳಕೆಗೆ ಯೋಗ್ಯವಲ್ಲದ ತ್ಯಾಜ್ಯವನ್ನು ಭಾರತದ ಕಡೆಗೆ ಸಾಗಿಸುತ್ತಿವೆ. ಒಂದು ಕಾಲದಲ್ಲಿ ಜಾಗತಿಕ ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯದ ಹೆಬ್ಬಾಗಿಲುಗಳಾಗಿದ್ದ ನಮ್ಮ ದೇಶದ ಪ್ರಮುಖ ಬಂದರುಗಳು, ಇಂದು ಯಾರಿಗೂ ಬೇಡವಾದ ಕೊಳಕು ವಸ್ತುಗಳನ್ನು ವಿಂಗಡಿಸುವ, ಸುರಿಯುವ ಮತ್ತು ಕೊಳೆಯಿಸುವ ‘ಜಾಗತಿಕ ಕಸದ ತೊಟ್ಟಿ’ಯಾಗಿ ರೂಪಾಂತರಗೊಳ್ಳುತ್ತಿರುವುದು ರಾಷ್ಟ್ರೀಯ ಕಳಕಳಿಯ ವಿಷಯವಾಗಿದೆ.
ಭಾರತವು ಜಾಗತಿಕ ಮಾರುಕಟ್ಟೆಯಿಂದ ಕೋಟ್ಯಂತರ ಟನ್ ಲೋಹ, ಪ್ಲಾಸ್ಟಿಕ್ ಹಾಗೂ ಇಲೆಕ್ಟ್ರಾನಿಕ್ ಗುಜರಿ ವಸ್ತುಗಳನ್ನು ನಿರಂತರವಾಗಿ ಆಮದು ಮಾಡಿಕೊಳ್ಳುತ್ತಿದೆ. ಜಾಗತಿಕ ಆರ್ಥಿಕ ಸಂಕೀರ್ಣತೆಯ ವರದಿಗಳ (OEC) ಪ್ರಕಾರ, ಭಾರತವು ಇ-ತ್ಯಾಜ್ಯ ಮತ್ತು ಇಲೆಕ್ಟ್ರಾನಿಕ್ ಸಕ್ಯೆಾಪ್ ಆಮದು ಮಾಡಿಕೊಳ್ಳುವಿಕೆಯಲ್ಲಿ ಜಗತ್ತಿನಲ್ಲಿ 3ನೇ ಅತಿ ದೊಡ್ಡ ದೇಶವಾಗಿದೆ. ಭಾರತದ ಜಾಗತಿಕ ಆಮದು ಪಾಲು ಶೇಕಡಾ 12.4 ರಷ್ಟಿದೆ.
ಭಾರತವು ಕೇವಲ ಇ-ತ್ಯಾಜ್ಯ ಮತ್ತು ಮರುಬಳಕೆ ಸಕ್ಯೆಾಪ್ ವಿಭಾಗದಲ್ಲಿ ವಾರ್ಷಿಕವಾಗಿ ಅಂದಾಜು ರೂ. 4,000 ಕೋಟಿಗಳಿಗೂ (476 ಮಿಲಿಯನ್ ಡಾಲರ್) ಹೆಚ್ಚು ಮೌಲ್ಯದ ತ್ಯಾಜ್ಯವನ್ನು ಆಮದು ಮಾಡಿಕೊಳ್ಳುತ್ತದೆ. ಅಮೆರಿಕ (113 ಮಿಲಿಯನ್ ಡಾಲರ್), ಯಮನ್ (60 ಮಿಲಿಯನ್ ಡಾಲರ್), ಯುಎಇ (46.7 ಮಿಲಿಯನ್ ಡಾಲರ್), ಜರ್ಮನಿ ಮತ್ತು ಕೆನಡಾ ದೇಶಗಳು ಭಾರತಕ್ಕೆ ಇ-ತ್ಯಾಜ್ಯ ಮತ್ತು ಹಳೆಯ ಬ್ಯಾಟರಿ ಸಕ್ಯೆಾಪ್‌ಗಳನ್ನು ಪೂರೈಸುವಲ್ಲಿ ಮುಂದಿವೆ. ಜಾಗತಿಕ ಲೋಹದ ಸಕ್ಯೆಾಪ್ ಆಮದಿನಲ್ಲಿ (Metallic Scrap - Ferrous & Non-Ferrous) ಭಾರತವು ವಿಶ್ವದಲ್ಲೇ 2ನೇ ಅತಿ ದೊಡ್ಡ ಆಮದುದಾರ ರಾಷ್ಟ್ರವಾಗಿದೆ (ಪ್ರಥಮ ಸ್ಥಾನದಲ್ಲಿ ತುರ್ಕಿಯ ಇದೆ). ವಿಶ್ವದ ಒಟ್ಟು ಇ-ತ್ಯಾಜ್ಯದ ಬಹುಪಾಲು ಪಾಲನ್ನು ಕಾನೂನುಬಾಹಿರ ಮಾರ್ಗಗಳ (Grey Market) ಮೂಲಕ ಭಾರತದ ಬಂದರುಗಳಿಗೆ ತರಲಾಗುತ್ತಿದೆ.
ಗುಜರಾತ್‌ನ ಮುಂದ್ರಾ, ಹಝಿರಾ, ಮಹಾರಾಷ್ಟ್ರದ ನಾವಾ ಶೇವಾ (ಜೆಎನ್‌ಪಿಟಿ), ತಮಿಳುನಾಡಿನ ಚೆನ್ನೈ ಹಾಗೂ ಒಡಿಶಾದ ಪಾರಾದೀಪ್‌ನಂತಹ ದೇಶದ ಹೆಮ್ಮೆಯ ಪ್ರಮುಖ ಬಂದರುಗಳು ಇಂದು ಕೇವಲ ಸರಕು ಸಾಗಣೆಯ ಕೇಂದ್ರಗಳಾಗಿ ಉಳಿದಿಲ್ಲ. ಬದಲಿಗೆ, ಹೊರದೇಶಗಳ ಬೃಹತ್ ಕಂಟೈನರ್‌ಗಳಲ್ಲಿ ಬಂದು ಬೀಳುವ ಪ್ಲಾಸ್ಟಿಕ್‌ಗಳು, ವೈದ್ಯಕೀಯ ತ್ಯಾಜ್ಯಗಳು, ಹಳೆಯ ಹಡಗುಗಳ ತುಂಡುಗಳು ಮತ್ತು ರಾಸಾಯನಿಕ ಮಲಿನಗಳ ರಾಶಿಗಳನ್ನು ಮ್ಯಾನುಯಲ್ ಆಗಿ ವಿಂಗಡಿಸುವ ಬೃಹತ್ ಅಂಗಳಗಳಾಗಿ ಮಾರ್ಪಟ್ಟಿವೆ.
ದೇಶದೊಳಗೆ ಈಗಾಗಲೇ ಪ್ರತೀ ವರ್ಷ ಸ್ಥಳೀಯವಾಗಿಯೇ ಅಂದಾಜು 2 ಮಿಲಿಯನ್ ಟನ್‌ಗಳಿಗೂ ಅಧಿಕ ಇ-ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದರ ಜೊತೆಗೆ ಹೊರದೇಶಗಳಿಂದ ಬಂದು ಸೇರುವ ಲಕ್ಷಾಂತರ ಟನ್ ವಿಷಕಾರಿ ಕಸವು ಭಾರತದ ಪರಿಸರ ಹೊರೆಯನ್ನು ದುಪ್ಪಟ್ಟುಗೊಳಿಸುತ್ತಿದೆ. ಸ್ಥಳೀಯ ಉಕ್ಕು ಮತ್ತು ಲೋಹದ ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳ ಅಗತ್ಯವಿದೆ ಎಂಬ ಸಬೂಬಿನೊಂದಿಗೆ ಆಮದಾಗುವ ಈ ತ್ಯಾಜ್ಯದಲ್ಲಿ, ಮರುಬಳಕೆ ಮಾಡಲಾಗದ ಮತ್ತು ಮಣ್ಣಿನಲ್ಲಿ ಎಂದಿಗೂ ಕೊಳೆಯದ ಅಪಾಯಕಾರಿ ಪದಾರ್ಥಗಳೇ ಹೆಚ್ಚಾಗಿರುತ್ತಿವೆ.
ವಿದೇಶಿ ತ್ಯಾಜ್ಯದ ಆಮದು ನಮ್ಮ ದೇಶದ ಪರಿಸರ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ. ಪಾಶ್ಚಾತ್ಯ ದೇಶಗಳ ಹಳೆಯ ಕಂಪ್ಯೂಟರ್‌ಗಳು, ಮೊಬೈಲ್‌ಗಳು ಮತ್ತು ಬ್ಯಾಟರಿಗಳಲ್ಲಿರುವ ಸೀಸ, ಪಾದರಸ, ಕ್ಯಾಡ್ಮಿಯಮ್ ಮತ್ತು ಬ್ರೋಮಿನೇಟೆಡ್‌ನಂತಹ ಅತ್ಯಂತ ವಿಷಕಾರಿ ಲೋಹಗಳು ಭಾರತದ ಮಣ್ಣು ಮತ್ತು ವಾತಾವರಣವನ್ನು ಸೇರುತ್ತಿವೆ. ಇವು ಮನುಷ್ಯರಲ್ಲಿ ನರವ್ಯೆಹದ ದೌರ್ಬಲ್ಯ, ಚರ್ಮದ ಕ್ಯಾನ್ಸರ್, ಶ್ವಾಸಕೋಶದ ಕಾಯಿಲೆಗಳು ಮತ್ತು ಜನ್ಮಜಾತ ಅಂಗವಿಕಲತೆಗೆ ಕಾರಣವಾಗುತ್ತಿವೆ.
ಕೇವಲ ಆರ್ಥಿಕ ಲಾಭದ ದೃಷ್ಟಿಯಿಂದ ಉದ್ಯಮಿಗಳು ಮತ್ತು ಕಾರ್ಪೊರೇಟ್ ವಲಯವು ನಡೆಸುವ ಈ ಲಾಬಿಯಿಂದಾಗಿ, ಭಾರತವು ಜಾಗತಿಕ ರಾಷ್ಟ್ರಗಳ ಮುಂದೆ ಸ್ವಯಂಪ್ರೇರಿತವಾಗಿ ತನ್ನ ಪರಿಸರವನ್ನು ಅಡವಿಡುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಮ್ಮದೇ ದೇಶದ ನೆಲವನ್ನು ಕಸದ ಗುಂಡಿಯನ್ನಾಗಿ ಮಾಡಿಕೊಳ್ಳುತ್ತಿರುವುದು ಅತ್ಯಂತ ಶೋಚನೀಯ ಸಂಗತಿಯಾಗಿದೆ.
ಬಂದರುಗಳ ಬಳಿ ಮತ್ತು ಮುಕ್ತ ಪ್ರದೇಶಗಳಲ್ಲಿ ರಾಶಿ ಹಾಕಲಾಗುವ ಇಂತಹ ತ್ಯಾಜ್ಯವನ್ನು ವಿಂಗಡಿಸುವ ಕೆಲಸವನ್ನು ಸಂಪೂರ್ಣವಾಗಿ ಅಸಂಘಟಿತ ವಲಯದ ಬಡ ಕಾರ್ಮಿಕರು ನಿರ್ವಹಿಸುತ್ತಾರೆ. ಯಾವುದೇ ಮುಖಕವಚ ಅಥವಾ ಕೈಗವಸುಗಳಿಲ್ಲದೆ, ಬರಿಗೈಯಲ್ಲಿ ಪ್ಲಾಸ್ಟಿಕ್ ಸುಟ್ಟು ತಾಮ್ರ ತೆಗೆಯುವುದು ಮತ್ತು ಮೈಕ್ರೋಚಿಪ್‌ಗಳನ್ನು ಬೇರ್ಪಡಿಸುವ ಕೆಲಸದಲ್ಲಿ ತೊಡಗುವ ಈ ಕಾರ್ಮಿಕರು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಬಂದರುಗಳ ತೀರ ಪ್ರದೇಶಗಳಲ್ಲಿ ಸೋರಿಕೆಯಾಗುವ ಹಾನಿಕಾರಕ ಇಲೆಕ್ಟ್ರಾನಿಕ್ ವಿಷ ಮತ್ತು ಸೀಸದ ಅಂಶಗಳು ಸಮುದ್ರದ ನೀರನ್ನು ಸಂಪೂರ್ಣ ವಿಷಪೂರಿತಗೊಳಿಸುತ್ತಿವೆ. ಇದರಿಂದ ಕರಾವಳಿ ಮೀನುಗಾರರ ಬದುಕು ಮೂರಾಬಟ್ಟೆಯಾಗಿದೆ.
ಗುಜರಾತ್‌ನ ಅಲಾಂಗ್ ಹಡಗು ಒಡೆಯುವ ಯಾರ್ಡ್ ಹಾಗೂ ಪ್ರಮುಖ ಬಂದರುಗಳ ಸುತ್ತಮುತ್ತ ನಿರುಪಯುಕ್ತ ಪ್ಲಾಸ್ಟಿಕ್ ಮತ್ತು ಹಡಗಿನ ಬಿಡಿಭಾಗಗಳ ಆಮದು ನಡೆಯುತ್ತದೆ. ಹಳೆಯ ಹಡಗುಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳಲ್ಲಿರುವ ಆಯಿಲ್, ಆಸ್ಬೆಸ್ಟಾಸ್, ಸೀಸ ಹಾಗೂ ಪಾಲಿಕ್ಲೋರಿನೇಟೆಡ್ ಬೈಫಿನೈಲ್‌ಗಳಂತಹ ಹಾನಿಕಾರಕ ರಾಸಾಯನಿಕಗಳು ನೇರವಾಗಿ ಸಮುದ್ರದ ನೀರನ್ನು ಸೇರುತ್ತವೆ. ಇದರಿಂದ ಕಡಲ ಜೀವವೈವಿಧ್ಯ ನಾಶವಾಗಿ, ಮೀನುಗಳ ಸಂತತಿ ಕ್ಷೀಣಿಸಿ ಕರಾವಳಿ ಭಾಗದ ಮೀನುಗಾರರ ಜೀವನೋಪಯೋಗಿ ವೃತ್ತಿಗೆ ಭಾರೀ ಪೆಟ್ಟು ಬಿದ್ದಿದೆ.
ಈ ಬಿಕ್ಕಟ್ಟಿನಿಂದ ಹೊರಬರಲು ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಕೇವಲ ಕಾಗದದ ಮೇಲಿನ ನಿಯಮಗಳಿಗೆ ಸೀಮಿತವಾಗದೆ, ಕಠಿಣ ಹೆಜ್ಜೆಗಳನ್ನು ಇಡಬೇಕು. ‘hazardous and other wastes management rules’ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ವಿಲೇವಾರಿ ಮಾಡಲು ಬಾರದ ಎಲ್ಲಾ ರೀತಿಯ ಇ-ತ್ಯಾಜ್ಯ ಹಾಗೂ ಮರುಬಳಕೆ ಯೋಗ್ಯವಲ್ಲದ ಸಕ್ಯೆಾಪ್ ಆಮದನ್ನು ಸಂಪೂರ್ಣವಾಗಿ ತಡೆಯಬೇಕು. ಬಂದರುಗಳಿಗೆ ಬರುವ ಪ್ರತಿಯೊಂದು ಕಂಟೈನರ್‌ನ ನಿಖರವಾದ ತಪಾಸಣೆ ನಡೆಸಿ, ಘೋಷಿತ ಸರಕಿಗಿಂತ ಭಿನ್ನವಾದ ಅಪಾಯಕಾರಿ ಕಸ ಪತ್ತೆಯಾದಲ್ಲಿ ಆಯಾ ರಫ್ತು ದೇಶಕ್ಕೆ ಹಡಗನ್ನು ಹಿಂದಿರುಗಿಸುವ ಕಾನೂನು ಜಾರಿಗೊಳಿಸಬೇಕು. ಹೊರದೇಶದ ಕಸವನ್ನು ನಂಬಿಕೊಳ್ಳುವ ಬದಲು, ನಮ್ಮ ದೇಶದೊಳಗೇ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ಸ್ಥಳೀಯ ಉದ್ಯಮಗಳಿಗೆ ಪ್ರೋತ್ಸಾಹಧನ ನೀಡುವುದು ಸೂಕ್ತ.
ಭಾರತವು ಜಾಗತಿಕ ವೇದಿಕೆಯಲ್ಲಿ ಆರ್ಥಿಕ ಹಾಗೂ ತಾಂತ್ರಿಕ ಮಹಾಶಕ್ತಿಯಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ, ನಮ್ಮದೇ ಕರಾವಳಿಯ ಬಂದರುಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವಿಷಕಾರಿ ತ್ಯಾಜ್ಯದ ತೊಟ್ಟಿಯಾಗುತ್ತಿರುವುದು ಅತ್ಯಂತ ನೋವಿನ ಹಾಗೂ ಗಂಭೀರ ಸಂಗತಿಯಾಗಿದೆ. ಕೆಲವೇ ಕೆಲವು ಕೈಗಾರಿಕೋದ್ಯಮಿಗಳ ಅಲ್ಪಾವಧಿಯ ಲಾಭಕ್ಕಾಗಿ ನಮ್ಮ ದೇಶದ ಮಣ್ಣು, ಜಲ ಹಾಗೂ ಮುಂದಿನ ಪೀಳಿಗೆಯ ಆರೋಗ್ಯವನ್ನು ಬಲಿ ನೀಡುವುದು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ. ಭಾರತವು ಜಾಗತಿಕ ಜ್ಞಾನ ಮತ್ತು ತಂತ್ರಜ್ಞಾನದ ಕೇಂದ್ರವಾಗಬೇಕೇ ಹೊರತು, ಮುಂದುವರಿದ ರಾಷ್ಟ್ರಗಳ ತ್ಯಾಜ್ಯವನ್ನು ಸುರಿಯುವ ‘ಡಂಪಿಂಗ್ ಯಾರ್ಡ್’ ಆಗಬಾರದು. ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಪರಿಸರ ಸಮತೋಲನ ಸಂಪೂರ್ಣ ಹದಗೆಡಲಿದೆ. ಈ ಸತ್ಯವನ್ನು ದೇಶದ ಚುಕ್ಕಾಣಿ ಹಿಡಿದವರು ಜನರ ಕಣ್ಣಿಂದ, ಮಾಧ್ಯಮದ ಕಣ್ಣಿನಿಂದ ಮುಚ್ಚಿಡುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಜನರನ್ನು ಹೆಚ್ಚು ಕಾಲ ಯಾರೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಸರಕಾರ ಅರಿಯಬೇಕಿದೆ. ಇನ್ನಾದರೂ ಭಾರತವನ್ನು ವಿಶ್ವದ ಕಸದ ಬುಟ್ಟಿ ಎಂಬ ಹಣೆ ಪಟ್ಟಿಯಿಂದ ಮುಕ್ತಗೊಳಿಸುವತ್ತ ಕಾರ್ಯಪ್ರವೃತ್ತರಾಗಬೇಕಿದೆ.






