ಯುದ್ಧರಂಗದ ನೂತನ ದೈತ್ಯ ಭಾರತದ ಕೆ9 ವಜ್ರ

ಕೆ9 ವಜ್ರ ಅಂದಾಜು 50 ಟನ್ ತೂಕ ಹೊಂದಿದ್ದು, 155 ಮಿಲಿಮೀಟರ್ ಶೆಲ್ಗಳನ್ನು ಉಡಾಯಿಸುತ್ತದೆ. ಇದು ಬಹುತೇಕ 40 ಕಿಲೋಮೀಟರ್ ತನಕ ದೂರದಲ್ಲಿರುವ ಗುರಿಗಳನ್ನು ನಿಖರವಾಗಿ ಹೊಡೆಯಬಲ್ಲದು. ಇದು ಸ್ವಯಂಚಾಲಿತ ಲೋಡಿಂಗ್ ವ್ಯವಸ್ಥೆ ಹೊಂದಿದ್ದು, ಪ್ರತಿಯೊಂದು ಶೆಲ್ಲನ್ನೂ ಯೋಧರು ಕೈಯಿಂದ ತುಂಬುವ ಅಗತ್ಯವಿಲ್ಲ. ಈ ಕಾರಣದಿಂದ, ಇದು ಕೇವಲ 15 ಸೆಕೆಂಡುಗಳ ಅವಧಿಯಲ್ಲಿ ಮೂರು ಶೆಲ್ಗಳನ್ನು ಉಡಾಯಿಸಬಲ್ಲದು.
ಭಾರತೀಯ ಸೇನೆ ಮತ್ತೊಮ್ಮೆ ತನಗಾಗಿ ಖರೀದಿಗೆ ತೆರಳುತ್ತಿದ್ದು, ಈ ಬಾರಿ ತನ್ನ ಕಣ್ಣುಗಳನ್ನು ಒಂದಷ್ಟು ದೊಡ್ಡದರತ್ತ ನೆಟ್ಟಿದೆ. ವರದಿಗಳ ಪ್ರಕಾರ, ಭಾರತೀಯ ಸೇನೆ 300ಕ್ಕೂ ಹೆಚ್ಚು ಕೆ9 ವಜ್ರ ಗನ್ಗಳನ್ನು ಖರೀದಿಸಲು ಬಯಸುತ್ತಿದ್ದು, ಇದಕ್ಕಾಗಿ 23,000 ಕೋಟಿ ರೂಪಾಯಿಗಳು, ಅಂದರೆ ಅಂದಾಜು 2.8 ಬಿಲಿಯನ್ ಡಾಲರ್ಗಳ ಭಾರೀ ಒಪ್ಪಂದ ನಡೆಸಲು ಮುಂದಾಗಿದೆ. ಒಂದು ಬಾರಿ ಖರೀದಿ ಆದೇಶ ನಡೆದರೆ, ಭಾರತೀಯ ಸೇನೆಯ ಬಳಿ ಇರುವ ಕೆ9 ವಜ್ರದ ಸಂಖ್ಯೆ 500ನ್ನು ದಾಟಲಿದೆ. ಇದು ನಿಜಕ್ಕೂ ಭಾರೀ ಪ್ರಮಾಣದ ಸಾಮರ್ಥ್ಯ ಪ್ರದರ್ಶನವಾಗಲಿದೆ.
ಇದರ ಕುರಿತು ಇನ್ನಷ್ಟು ಗಮನಿಸುವ ಮುನ್ನ, ನಿಜಕ್ಕೂ ಈ ಯಂತ್ರ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ. ಕೆ9 ವಜ್ರ ಎನ್ನುವುದು ಒಂದು ಸ್ವಯಂಚಾಲಿತ (ಸೆಲ್ಫ್ ಪ್ರೊಪೆಲ್ಡ್) ಹೊವಿಟ್ಜರ್ ಆಗಿದೆ. ಸರಳವಾಗಿ ಹೇಳುವುದಾದರೆ, ಹೊವಿಟ್ಜರ್ ಎನ್ನುವುದು ಒಂದು ದೊಡ್ಡದಾದ ಆರ್ಟಿಲರಿ ಗನ್ ಆಗಿದ್ದು, ಅತ್ಯಂತ ದೂರದ ತನಕ ಶೆಲ್ಗಳನ್ನು ಸಿಡಿಸಬಲ್ಲದು. ‘ಸೆಲ್ಫ್ ಪ್ರೊಪೆಲ್ಡ್’ ಎಂದರೆ, ಈ ಗನ್ನನ್ನು ಯಾವುದೇ ಟ್ರಕ್ ಮೇಲಿರಿಸಿ ಸಾಗಿಸುವುದಿಲ್ಲ, ಅಥವಾ ಬೇರೆ ಯಾವುದೇ ವಾಹನ ಇದನ್ನು ಎಳೆದೊಯ್ಯುವುದಿಲ್ಲ. ಇದು ತನ್ನದೇ ಆದ ಚಲನಶೀಲ ದೇಹವನ್ನು ಹೊಂದಿದ್ದು, ಬಹುತೇಕ ಒಂದು ಯುದ್ಧ ಟ್ಯಾಂಕ್ ರೀತಿ ತೋರುತ್ತಾ, ಯುದ್ಧರಂಗದಲ್ಲಿ ತಾನೇ ಚಲಿಸಬಲ್ಲದು. ಅಂದರೆ, ಇದು ಮೇಲ್ನೋಟಕ್ಕೆ ಟ್ಯಾಂಕ್ ರೀತಿಯಲ್ಲಿ ಕಂಡರೂ ಇದು ಟ್ಯಾಂಕ್ ಅಲ್ಲ. ಟ್ಯಾಂಕ್ಗಳನ್ನು ಮುಖ್ಯವಾಗಿ ಶತ್ರು ಟ್ಯಾಂಕ್ಗಳ ವಿರುದ್ಧ ಸನಿಹದಿಂದ ಸೆಣಸಲು ನಿರ್ಮಿಸಲಾಗಿರುತ್ತದೆ. ಆದರೆ ಕೆ9ರಂತಹ ಹೊವಿಟ್ಜರ್ಗಳನ್ನು ಶತ್ರುಗಳ ಮೇಲೆ ಬಲುದೂರದಿಂದಲೇ ಬೆಂಕಿಯ ಸುರಿಮಳೆಗೈಯಲು ನಿರ್ಮಿಸಲಾಗಿದೆ.
ಈ ಗನ್ನನ್ನು ಇಷ್ಟೊಂದು ಅನಾಹುತಕಾರಿಯಾಗಿ ಸುವುದು ಏನು? ಕೆ9 ವಜ್ರ ಅಂದಾಜು 50 ಟನ್ ತೂಕ ಹೊಂದಿದ್ದು, 155 ಮಿಲಿಮೀಟರ್ ಶೆಲ್ಗಳನ್ನು ಉಡಾಯಿಸುತ್ತದೆ. ಇದು ಬಹುತೇಕ 40 ಕಿಲೋಮೀಟರ್ ತನಕ ದೂರದಲ್ಲಿರುವ ಗುರಿಗಳನ್ನು ನಿಖರವಾಗಿ ಹೊಡೆಯಬಲ್ಲದು. ಇದು ಸ್ವಯಂಚಾಲಿತ ಲೋಡಿಂಗ್ ವ್ಯವಸ್ಥೆ ಹೊಂದಿದ್ದು, ಪ್ರತಿಯೊಂದು ಶೆಲ್ಲನ್ನೂ ಯೋಧರು ಕೈಯಿಂದ ತುಂಬುವ ಅಗತ್ಯವಿಲ್ಲ. ಈ ಕಾರಣದಿಂದ, ಇದು ಕೇವಲ 15 ಸೆಕೆಂಡುಗಳ ಅವಧಿಯಲ್ಲಿ ಮೂರು ಶೆಲ್ಗಳನ್ನು ಉಡಾಯಿಸಬಲ್ಲದು. ಇದು ನಿಜಕ್ಕೂ ಶತ್ರುಗಳ ಮೇಲೆ ಬೆಂಕಿಯ ಸುರಿಮಳೆಯಂತಿರಲಿದೆ.
ಪ್ರಾಮಾಣಿಕವಾಗಿ ಹೇಳುವುದಾದರೆ, ಕೆ9ರ ಶಕ್ತಿ ಅದರ ದಾಳಿ ಸಾಮರ್ಥ್ಯವಲ್ಲ. ಬದಲಿಗೆ, ಅದರ ಅಸಾಧಾರಣ ವೇಗ. ಆಧುನಿಕ ಯುದ್ಧದಲ್ಲಿ, ಒಂದು ದೊಡ್ಡ ಗನ್ ಶೆಲ್ ಉಡಾಯಿಸಿದ ಮರುಕ್ಷಣವೇ ಶತ್ರುವಿನ ರೇಡಾರ್ ಕೆಲವೇ ಸೆಕೆಂಡುಗಳಲ್ಲಿ ಅದು ಎಲ್ಲಿಂದ ಬಂತು ಎನ್ನುವುದನ್ನು ನಿಖರವಾಗಿ ಗುರುತಿಸುತ್ತದೆ. ಕಣ್ಣು ಮುಚ್ಚಿ ತೆರೆಯುವುದರೊಳಗೆ ಇಂತಹ ಭಾರೀ ಗನ್ ಶತ್ರುವಿನ ದಾಳಿಗೆ ತುತ್ತಾಗಿ ನಾಶವಾಗಬಲ್ಲದು. ಆದರೆ, ಕೆ9 ಅಂತಹ ಅಪಾಯ ಹೊಂದಿಲ್ಲ. ಅದು ತನ್ನ ದಾಳಿ ಪೂರೈಸಿ, ಶತ್ರು ತನ್ನನ್ನು ಗುರುತಿಸುವ ಮುನ್ನವೇ ಅಲ್ಲಿಂದ ಹೊಸ ಜಾಗಕ್ಕೆ ತೆರಳುತ್ತದೆ. ಆಗ ಶತ್ರುವಿನ ಪ್ರತಿದಾಳಿ ಖಾಲಿ ಜಾಗದ ಮೇಲಾಗಿ, ವ್ಯರ್ಥವಾಗುತ್ತದೆ. ಈ ರೋಚಕ ವಿಧಾನವನ್ನು ‘ಶೂಟ್ ಆಂಡ್ ಸ್ಕೂಟ್’ ಎಂದು ಕರೆಯಲಾಗುತ್ತದೆ. ಈ ಗನ್ ಒಂದು ಬಾರಿ ದಾಳಿ ನಡೆಸಿ, ಅಲ್ಲಿಂದ ಬೇರೆಡೆ ಚಲಿಸುವ ವಿಧಾನವನ್ನು ಹೀಗೆ ಕರೆಯಲಾಗಿದ್ದು, ಕೆ9 ವಜ್ರ ಇದರಲ್ಲಿ ಪ್ರಾವೀಣ್ಯತೆ ಹೊಂದಿದೆ. ಆದ್ದರಿಂದಲೇ ಭಾರತೀಯ ಸೇನೆ ಇನ್ನೂ ಹೆಚ್ಚು ಗನ್ ಖರೀದಿಗೆ ಮುಂದಾಗಿದೆ.
ಈ ಕಥೆಯ ಹಿಂದೆ ಇನ್ನೊಂದು ಆಸಕ್ತಿಕರ ಅಂಶವಿದೆ. ಕೆ9 ಭಾರತದಲ್ಲಿ ಜನಿಸಿದ ಆಯುಧವಲ್ಲ. ಇದರ ಮೂಲ ದಕ್ಷಿಣ ಕೊರಿಯಾದಲ್ಲಿದ್ದು, ಸ್ಯಾಮ್ಸಂಗ್ ಮತ್ತು ಹಾನ್ವ್ಹಾ ಏರೋಸ್ಪೇಸ್ ಸಂಸ್ಥೆಗಳು ಇದನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿವೆ. 2017ರಲ್ಲಿ, ಭಾರತ ದಕ್ಷಿಣ ಕೊರಿಯಾದೊಡನೆ ಒಂದು ಸ್ಮಾರ್ಟ್ ಒಪ್ಪಂದ ಮಾಡಿಕೊಂಡಿದ್ದು, ಈ ಗನ್ಗಳನ್ನು ಆಮದು ಮಾಡಿಕೊಳ್ಳುವ ಬದಲು ಭಾದತದಲ್ಲೇ ನಿರ್ಮಿಸಲು ತೀರ್ಮಾನಿಸಿತು. ಭಾರತದ ಪ್ರಸಿದ್ಧ ಖಾಸಗಿ ಕಂಪೆನಿ ಲಾರ್ಸನ್ & ಟೂಬ್ರೊ (ಎಲ್&ಟಿ) ಇದರ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿತು.
ಎಲ್&ಟಿ ಕೇವಲ ಕೊರಿಯನ್ ಗನ್ನಿನ ನಕಲು ನಿರ್ಮಿಸಲಿಲ್ಲ. ಬದಲಿಗೆ, ಅದನ್ನು ಬಹಳಷ್ಟು ‘ಭಾರತೀಯ’ಗೊಳಿಸಲಾಯಿತು. ಅಂದರೆ, ಅದರ ದೊಡ್ಡ ಭಾಗಗಳನ್ನು ಮರು ವಿನ್ಯಾಸಗೊಳಿಸಿ, ಭಾರತದ ಅವಶ್ಯಕತೆಗಳಿಗೆ ತಕ್ಕಂತೆ ಮರು ನಿರ್ಮಿಸಲಾಯಿತು. ಎಲ್&ಟಿ ಗನ್ನಿನ ಕಂಟ್ರೋಲ್ ಸಿಸ್ಟಮ್, ಇಲೆಕ್ಟ್ರಾನಿಕ್ಸ್ ಮತ್ತು ಗನ್ನಿನ ಮುಖ್ಯ ದೇಹವನ್ನು ಮರು ನಿರ್ಮಾಣಗೊಳಿಸಿತು. ಇಂದು ಕೆ9 ವಜ್ರ ಶೇ. 50ಕ್ಕೂ ಹೆಚ್ಚಿನ ಭಾರತೀಯ ನಿರ್ಮಾಣದ ಭಾಗಗಳನ್ನೇ ಹೊಂದಿದ್ದು, ಗುಜರಾತಿನ ಎಲ್&ಟಿ ಹಜ್ರಿಯಾ ಘಟಕದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದು ‘ಮೇಕ್ ಇನ್ ಇಂಡಿಯಾ’ ಕನಸು ನನಸಾಗುತ್ತಿರುವುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.
ಇಲ್ಲಿಯ ತನಕ ಈ ಆಯುಧ ಸಾಗಿಬಂದ ಹಾದಿ ನಿಜಕ್ಕೂ ಗಮನಾರ್ಹವಾಗಿದೆ. ಭಾರತೀಯ ಸೇನೆ ಮೊದಲು 2017ರಲ್ಲಿ 100 ಗನ್ಗಳ ಖರೀದಿಗೆ ಆದೇಶ ಸಲ್ಲಿಸಿತು. ಎಲ್&ಟಿ ಪ್ರತಿಯೊಂದು ಗನ್ನನ್ನೂ 2021ರ ಗಡುವಿನ ಮುನ್ನವೇ ಪೂರೈಸಿತು. ಇದರಿಂದ ಸಂತುಷ್ಟವಾದ ಭಾರತೀಯ ಸೇನೆ 2023ರಲ್ಲಿ ಇನ್ನೂ 100 ಹೆಚ್ಚುವರಿ ಗನ್ಗಳ ಖರೀದಿಗೆ ಆದೇಶ ಸಲ್ಲಿಸಿತು. ಈಗ, 300ಕ್ಕೂ ಹೆಚ್ಚು ಗನ್ಗಳ ಖರೀದಿಗೆ ಸೇನೆ ಮುಂದಾಗಿರುವುದು ಗನ್ ಎಷ್ಟರಮಟ್ಟಿಗೆ ವಿಶ್ವಾಸ ಗಳಿಸಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಈ ಗನ್ಗಳು ಮೊದಲಿಗೆ ಸೇನೆಯ ಕೈ ಸೇರಿದಾಗ, ಅವುಗಳನ್ನು ಪಂಜಾಬ್ ಮತ್ತು ರಾಜಸ್ಥಾನಗಳ ವಿಶಾಲ ಬಯಲು ಪ್ರದೇಶಗಳಲ್ಲಿ ಅಳವಡಿಸಲಾಯಿತು. ಅವುಗಳ ಬ್ಯಾರಲ್ಗಳು ಪಾಕಿಸ್ತಾನದತ್ತ ಮುಖ ಮಾಡಿದ್ದವು. ಆದರೆ ಎಲ್&ಟಿ ಗನ್ಗಳನ್ನು ಪ್ರತೀ ವರ್ಷವೂ ಅಭಿವೃದ್ಧಿಪಡಿಸಲಾರಂಭಿಸಿತು. ಕಾಲಕ್ರಮೇಣ ಕೆ9 ಅನ್ನು ಲಡಾಖ್ನ ಕಠಿಣವಾದ, ಕೊರೆಯುವ, ಕಡಿಮೆ ಆಮ್ಲಜನಕವಿರುವ ಪರ್ವತ ಪ್ರದೇಶಗಳಲ್ಲಿ ಪರೀಕ್ಷಿಸಲಾಯಿತು. ಅಲ್ಲಿ ಬಹಳಷ್ಟು ಯಂತ್ರಗಳು ಚಾಲ್ತಿಗೊಳ್ಳಲೂ ಕಷ್ಟಪಡುವ ಪರಿಸ್ಥಿತಿ ಇತ್ತು. ಆದರೆ ಕೆ9 ಪರೀಕ್ಷೆಗಳು ಅತ್ಯಂತ ಯಶಸ್ವಿಯಾದವು. ಕೆ9 ಕೊರೆಯುವ ತಣ್ಣಗಿನ ವಾತಾವರಣದಲ್ಲಿ ಉಳಿದದ್ದು ಮಾತ್ರವಲ್ಲದೆ, ಅಲ್ಲೂ ತನ್ನ ಪಾರಮ್ಯ ಮೆರೆಯಿತು. ಇದರಿಂದಾಗಿ ಭಾರತೀಯ ಸೇನೆ ಗನ್ಗಳನ್ನು ಚೀನಾವನ್ನು ಎದುರಿಸುತ್ತಿರುವ ಪ್ರದೇಶಗಳಲ್ಲೂ ಅಳವಡಿಸಲು ಯೋಜನೆ ರೂಪಿಸುತ್ತಿದೆ.
ಹಲವಾರು ದಶಕಗಳ ಕಾಲ, ಭಾರತದ ಆರ್ಟಿಲರಿ ಸಾಮರ್ಥ್ಯ ಆಮದು ಮಾಡಿಕೊಂಡ ಬೋಫೋರ್ಸ್ ಗನ್ಗಳ ಮೇಲೆ ಬಹುತೇಕ ಅವಲಂಬಿತವಾಗಿತ್ತು. ಆದರೆ, ಆ ದಿನಗಳು ಕ್ರಮೇಣ ದೂರಾಗುತ್ತಿವೆ. ಇಂದು ಭಾರತ ತನ್ನದೇ ದೇಶೀಯ ನಿರ್ಮಾಣದ ದಾಳಿ ಸಾಮರ್ಥ್ಯ ವೃದ್ಧಿಸುತ್ತಿದ್ದು, ಹೊಚ್ಚ ಹೊಸ ಅಧ್ಯಾಯವನ್ನು ಬರೆಯುತ್ತಿದೆ. ಪಾಕಿಸ್ತಾನಕ್ಕೆ ಎದುರಾದ ಬಿಸಿಯಾದ ಬಯಲುಗಳಿಂದ, ಚೀನಾವನ್ನು ಎದುರಿಸುತ್ತಿರುವ ತಣ್ಣನೆಯ ಪರ್ವತ ಶಿಖರಗಳ ತನಕ, ಕೆ9 ವಜ್ರ ಈಗ ಎರಡೂ ಬದಿಗಳಲ್ಲೂ ಭಾರತಕ್ಕೆ ರಕ್ಷಣೆ ಒದಗಿಸುತ್ತಿದೆ. ಇದೊಂದು ಹೆಮ್ಮೆಯ ‘ಶೂಟ್ ಆಂಡ್ ಸ್ಕೂಟ್’ ದೈತ್ಯ ಆಯುಧವಾಗಿದ್ದು, ಭಾರತೀಯ ಮಣ್ಣಿನಲ್ಲೇ ನಿರ್ಮಾಣಗೊಂಡು, ದೇಶದ ಗಡಿಗಳನ್ನು ಮುಂದಿನ ಹಲವಾರು ವರ್ಷಗಳ ಕಾಲ ರಕ್ಷಿಸಲಿದೆ.






