ಅನುಮೋದನೆ ಸಿಗದೆ ಬಾನಲ್ಲೇ ಉಳಿದ ಅಂತರ್ಜಾಲ

ಕೇಂದ್ರ ಸರಕಾರ ಮಾತಿನಲ್ಲಿ ಕ್ಷಿಪ್ರ ಸುಧಾರಣೆಗಳನ್ನು ತರುವ, ಉದ್ಯಮಗಳಿಗೆ ಉತ್ತಮ ಸನ್ನಿವೇಶ ಸೃಷ್ಟಿಸುವ ಮತ್ತು ವಿದೇಶೀ ಹೂಡಿಕೆಗಳನ್ನು ಸ್ವಾಗತಿಸುವ ಭರವಸೆಯನ್ನೇನೋ ನೀಡುತ್ತಿದೆ. ಆದರೆ, ಕೇವಲ ಉಪಗ್ರಹ ಪರವಾನಿಗೆ ನೀಡಿ, ಕಂಪೆನಿಗಳು ವರ್ಷಗಳ ಕಾಲ ಕಾಯುವಂತೆ ಮಾಡಿ, ಯಾವುದೇ ಸ್ಪಷ್ಟ ಕಾಲಸೂಚಿ ನೀಡದಿರುವುದು ಮಾತ್ರ ಗೊಂದಲಕಾರಿ ಸಂದೇಶ ನೀಡಿದೆ.
ಭಾರತೀಯ ಹಳ್ಳಿಗಳಿಗೆ ಅಂತರ್ಜಾಲ ಒದಗಿಸುವ ಸಲುವಾಗಿ ನಿರ್ಮಾಣಗೊಂಡ ಉಪಗ್ರಹಗಳು ಇಂದು ಮೋಡಗಳ ಮೇಲಿನ ಆಗಸದಲ್ಲೆಲ್ಲೋ ಹಾಗೇ ಮೌನವಾಗಿಯೇ ಹಳೆಯದಾಗುತ್ತಿವೆ. ಹೇಗೆ ಪ್ರತಿಯೊಂದು ವರ್ಷ ಕಳೆದಂತೆ ಮೊಬೈಲ್ ಫೋನ್‌ನ ಬ್ಯಾಟರಿ ತನ್ನ ಶಕ್ತಿ ಕಳೆದುಕೊಳ್ಳುತ್ತಾ ಸಾಗುತ್ತದೋ ಹಾಗೇ ಪ್ರತಿಯೊಂದು ಬಾಹ್ಯಾಕಾಶ ನೌಕೆಯೂ ಒಂದು ನಿರ್ದಿಷ್ಟ ಕಾರ್ಯಾಚರಣಾ ಆಯುಷ್ಯವನ್ನು ಹೊಂದಿದೆ. ಇವುಗಳಲ್ಲಿ ಭೂಮಿಯ ಪರಿಭ್ರಮಣೆ ನಡೆಸುತ್ತಿರುವ ಒಂದಷ್ಟು ಉಪಗ್ರಹಗಳು ಈಗಾಗಲೇ ಎಷ್ಟು ಸಮಯವನ್ನು ಅಲ್ಲಿ ಕಳೆದಿವೆ ಎಂದರೆ, ಭಾರತದ ಯಾವುದಾದರೂ ಮನೆಗೆ ಅಂತರ್ಜಾಲ ಸೇವೆ ಒದಗಿಸುವ ಮುನ್ನವೇ ಅವು ತಮ್ಮ ಕಾರ್ಯಾಚರಣಾ ಆಯುಷ್ಯದ ಅಂತ್ಯವನ್ನು ತಲುಪಲಿವೆ. ಹಾಗೆಂದು ಇದಕ್ಕೆ ಉಪಗ್ರಹ ವ್ಯವಸ್ಥೆಯ ತಾಂತ್ರಿಕ ವೈಫಲ್ಯ ಕಾರಣವಲ್ಲ. ಸರಕಾರದ ಕಾರಿಡಾರ್‌ಗಳಲ್ಲಿ ಫೈಲ್‌ಗಳು ಇನ್ನೂ ಸಾಗದಿರುವುದೇ ಈ ವಿಳಂಬಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಭಾರತದಲ್ಲಿ ಉಪಗ್ರಹ ಅಂತರ್ಜಾಲಕ್ಕೆ ಸಂಬಂಧಿಸಿದಂತೆ ನಡೆದ ದೊಡ್ಡ ವಾಗ್ವಾದದ ಹಿಂದೆಯೂ ಬಹುಮಟ್ಟಿಗೆ ಇದೇ ಸತ್ಯವಿತ್ತು. ಈ ಓಟದ ಆರಂಭಿಕ ಗೆರೆಯ ಹಿಂದೆ ಮೂರು ಪ್ರಮುಖ ಓಟಗಾರರು ಸಿದ್ಧರಾಗಿ ನಿಂತಿದ್ದಾರೆ. ಅವರ ಪೈಕಿ ಮೊದಲನೆಯದು ಭಾರ್ತಿ ಎಂಟರ್‌ಪ್ರೈಸಸ್ ಬೆಂಬಲವಿರುವ ಯೂಟೆಲ್‌ಸ್ಯಾಟ್ ವನ್ ವೆಬ್ ಆಗಿದ್ದು, ಇದು ಜಿಎಂಪಿಸಿಎಸ್ ಅಥವಾ ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯುನಿಕೇಷನ್ ಬೈ ಸ್ಯಾಟಲೈಟ್ ಪರವಾನಿಗೆಯನ್ನು 2021ರಲ್ಲೇ ಪಡೆದುಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಜಿಯೋ ಸ್ಯಾಟಲೈಟ್ ಕಮ್ಯುನಿಕೇಷನ್ 2022ರಲ್ಲಿ ಈ ಪರವಾನಿಗೆ ಪಡೆಯಿತು. ಇನ್ನು ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆಯ ಸ್ಟಾರ್‌ಲಿಂಕ್ 2025ರಲ್ಲಿ ಪರವಾನಿಗೆ ಪಡೆಯಿತು. ಸರಳವಾಗಿ ಹೇಳುವುದಾದರೆ, ಜಿಎಂಪಿಸಿಎಸ್ ಪರವಾನಿಗೆ ಎಂದರೆ ಫೋನ್ ಮತ್ತು ಅಂತರ್ಜಾಲ ಸಂಪರ್ಕವನ್ನು ಕೇಬಲ್‌ಗಳು ಅಥವಾ ಮೊಬೈಲ್ ಟವರ್‌ಗಳ ಬದಲಾಗಿ ಉಪಗ್ರಹಗಳ ಮೂಲಕ ಒದಗಿಸುವುದಕ್ಕೆ ಸರಕಾರ ನೀಡುವ ಪರವಾನಿಗೆಯಾಗಿದೆ. ಈಗ ಮೂರು ಸಂಸ್ಥೆಗಳೂ ಪರವಾನಿಗೆ ಹೊಂದಿವೆ. ಆದರೆ, ಯಾವ ಕಂಪೆನಿಯೂ ತನಗೆ ಪಾವತಿಸುವ ಗ್ರಾಹಕನಿಗೆ ಈ ಸೇವೆ ಒದಗಿಸಲು ಸಾಧ್ಯವಿಲ್ಲ.
ಅದೇಕೆ ಹಾಗೆ? ಏಕೆಂದರೆ, ಈ ಪರವಾನಿಗೆ ಎನ್ನುವುದು ದೀರ್ಘವಾದ ಹಾದಿಯಲ್ಲಿ ಕೇವಲ ಒಂದು ಬಾಗಿಲಷ್ಟೇ. ಭಾರತದ ದೂರಸಂಪರ್ಕ ಇಲಾಖೆ ಜಿಎಂಪಿಸಿಎಸ್ ಪರವಾನಿಗೆಯನ್ನು ಮಾತ್ರ ನೀಡುತ್ತದೆ. ಆದರೆ, ಉಪಗ್ರಹ ನಿರ್ವಾಹಕ ಸಂಸ್ಥೆಗೆ ಬಾಹ್ಯಾಕಾಶ ಇಲಾಖೆ, ಗೃಹ ಸಚಿವಾಲಯ ಮತ್ತು ದೇಶದ ಭದ್ರತಾ ಸಂಸ್ಥೆಗಳಿಂದ ಪ್ರತ್ಯೇಕ ಅನುಮೋದನೆಗಳನ್ನು ಪಡೆಯಬೇಕು. ಇದು ಒಂದು ರೀತಿ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕುವಂತಿರುತ್ತದೆ. ಆದರೆ, ನೀವು ಪ್ರಯಾಣ ಬೆಳೆಸುವ ಮುನ್ನ ಬೇರೆ ಬೇರೆ ಕಚೇರಿಗಳು ತಮ್ಮ ಸ್ಟ್ಯಾಂಪ್ ಲಗತ್ತಿಸಬೇಕು. ಆದರೆ, ಅವು ಯಾವುವೂ ತಮ್ಮ ಸ್ಟ್ಯಾಂಪ್ ಯಾವಾಗ ಬರುತ್ತದೆ ಎನ್ನುವುದನ್ನು ತಿಳಿಸುವುದಿಲ್ಲ. ಆದರೆ, ಸ್ಟಾರ್‌ಲಿಂಕ್ ಎಲ್ಲಕ್ಕಿಂತಲೂ ಹೆಚ್ಚಿನ ಪರೀಕ್ಷೆಗಳನ್ನು ಎದುರಿಸುತ್ತಿದೆ. ರಶ್ಯ ಮತ್ತು ಉಕ್ರೇನ್ ನಡುವಿನ ಯುದ್ಧದ ಸಂದರ್ಭದಲ್ಲಿ ಸ್ಟಾರ್‌ಲಿಂಕ್ ಉಪಗ್ರಹಗಳು ಬಳಕೆಯಾಗಿದ್ದು ಇದಕ್ಕೆ ಕಾರಣವಾಗಿದ್ದು, ಒಂದು ವೇಳೆ ಯುದ್ಧ ನಮಗೆ ಹತ್ತಿರಾದರೆ ಇಂತಹ ವ್ಯವಸ್ಥೆ ಹೇಗೆ ವರ್ತಿಸಬಹುದು ಎನ್ನುವ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ.
ಆದರೆ, ಇಂತಹ ಭದ್ರತಾ ಪರಿಶೀಲನೆಗಳನ್ನು ಕಡಿಮೆಗೊಳಿಸಬೇಕು ಎಂದು ಯಾರೂ ಗಂಭೀರವಾಗಿ ಆಗ್ರಹಿಸುತ್ತಿಲ್ಲ. ಉಪಗ್ರಹ ಲಿಂಕ್‌ಗಳು ರಾಷ್ಟ್ರೀಯ ಭದ್ರತೆಗೂ ಸಂಬಂಧಪಟ್ಟಿದ್ದು, ಅಜಾಗರೂಕತೆಯಿಂದ ಅನುಮತಿಸಿದರೆ ಭಾರತಕ್ಕೆ ತೊಂದರೆಯಾಗಬಹುದು ಎನ್ನುವ ಆತಂಕಗಳಿವೆ. ಆದರೆ, ಇಲ್ಲಿನ ನೈಜ ಸಮಸ್ಯೆ ಇರುವುದು ಸ್ಪಷ್ಟತೆಯ ಕುರಿತು. ಕಂಪೆನಿಗಳು ಈ ಪ್ರಕ್ರಿಯೆ ಹೇಗೆ ಕಾರ್ಯಾಚರಿಸುತ್ತದೆ ಮತ್ತು ಇದಕ್ಕೆ ಎಷ್ಟು ಸಮಯ ಹಿಡಿಯುತ್ತದೆ ಎನ್ನುವುದನ್ನು ಮಾತ್ರ ಸ್ಪಷ್ಟಪಡಿಸಲು ಕೇಳುತ್ತಿವೆ. ಕೇಂದ್ರ ಸರಕಾರ ಮಾತಿನಲ್ಲಿ ಕ್ಷಿಪ್ರ ಸುಧಾರಣೆಗಳನ್ನು ತರುವ, ಉದ್ಯಮಗಳಿಗೆ ಉತ್ತಮ ಸನ್ನಿವೇಶ ಸೃಷ್ಟಿಸುವ ಮತ್ತು ವಿದೇಶೀ ಹೂಡಿಕೆಗಳನ್ನು ಸ್ವಾಗತಿಸುವ ಭರವಸೆಯನ್ನೇನೋ ನೀಡುತ್ತಿದೆ. ಆದರೆ, ಕೇವಲ ಉಪಗ್ರಹ ಪರವಾನಿಗೆ ನೀಡಿ, ಕಂಪೆನಿಗಳು ವರ್ಷಗಳ ಕಾಲ ಕಾಯುವಂತೆ ಮಾಡಿ, ಯಾವುದೇ ಸ್ಪಷ್ಟ ಕಾಲಸೂಚಿ ನೀಡದಿರುವುದು ಮಾತ್ರ ಗೊಂದಲಕಾರಿ ಸಂದೇಶ ನೀಡಿದೆ.
ಇನ್ನು ಹಣಕಾಸಿನ ವಿಚಾರಗಳೂ ಅಲ್ಲಲ್ಲೇ ಬಾಕಿಯಾಗಿವೆ. ಒಂದು ತಿಂಗಳ ಹಿಂದೆ, ದೂರಸಂಪರ್ಕ ಇಲಾಖೆಯೊಳಗಿನ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ವಿಭಾಗವಾದ ಡಿಜಿಟಲ್ ಕಮ್ಯುನಿಕೇಶನ್ಸ್ ಕಮಿಷನ್ ಉಪಗ್ರಹ ಸ್ಪೆಕ್ಟ್ರಮ್ ಕುರಿತ ಸುದೀರ್ಘವಾದ ಮತ್ತು ಕಹಿಯಾದ ವಾದವನ್ನು ಅಂತ್ಯಗೊಳಿಸಿತು. ಸ್ಪೆಕ್ಟ್ರಮ್ ಎನ್ನುವುದನ್ನು ಸರಳ ಭಾಷೆಯಲ್ಲಿ ವಿವರಿಸುವುದಾದರೆ, ಅದು ಸಂಕೇತಗಳನ್ನು ಗಾಳಿಯಲ್ಲಿ ಸಾಗಿಸುವ ರೇಡಿಯೋ ಫ್ರೀಕ್ವೆನ್ಸಿಗಳಾಗಿವೆ. ಸ್ಪೆಕ್ಟ್ರಮ್ ಇಲ್ಲದಿದ್ದರೆ ಉಪಗ್ರಹಗಳು ಉಪಯೋಗವಿಲ್ಲದ ದುಬಾರಿ ವಸ್ತುಗಳಷ್ಟೇ ಆಗುತ್ತವೆ. ಟೆಲಿಕಾಂ ನಿಯಂತ್ರಕ ಸಂಸ್ಥೆಯಾದ ಟ್ರಾಯ್ ಶಿಫಾರಸುಗಳಿಗೆ ಅನುಗುಣವಾಗಿ ಒಂದು ಕಂಪೆನಿಯ ಆದಾಯದ ಶೇ 5 ದರವನ್ನು ನಿಗದಿಪಡಿಸಿದ್ದು, ಇದನ್ನು ಸರಕಾರಿ ನಿಯಮಗಳಲ್ಲಿನ ಹೊಂದಾಣಿಕೆಯ ನಂತರ ನಿಗದಿಪಡಿಸಲಾಗಿದೆ. ದುರ್ಗಮ ಮತ್ತು ಗ್ರಾಮೀಣ ಪ್ರದೇಶಗಳನ್ನು ತಲುಪುವ ಸೇವೆಗಳಿಗೆ ಕೇವಲ ಶೇ.4 ದರ ವಿಧಿಸಲಾಗಿದೆ. ಆದರೆ, ಅದು ಇನ್ನೂ ಅಂತಿಮಗೊಂಡಿಲ್ಲ. ಇದಕ್ಕೆ ಇನ್ನೂ ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಗಬೇಕಿದೆ. ಅಲ್ಲಿಯ ತನಕ ಈ ದರ ನಿಗದಿ ಕೇವಲ ಪ್ರಸ್ತಾವವಷ್ಟೇ ಆಗಿರಲಿದೆ.
ಈ ವಿಳಂಬದ ಕಾರಣಕ್ಕೇ ಸಾರ್ವಜನಿಕವಾಗಿಯೇ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಎಲಾನ್ ಮಸ್ಕ್ ತನ್ನ ಭಾರತೀಯ ಪ್ರತಿಸ್ಪರ್ಧಿಗಳು ‘ಓಲಿಗಾರ್ಕ್’ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಓಲಿಗಾರ್ಕ್ ಎಂದರೆ ಮಾರುಕಟ್ಟೆಯಿಂದ ಸ್ಪರ್ಧಿಗಳನ್ನು ಹೊರಗಿಡುವ ಕೆಲವೇ ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳ ಸಣ್ಣ ಗುಂಪನ್ನು ಸೂಚಿಸುತ್ತದೆ. ಮಸ್ಕ್ ಆಡಿದ ಮಾತುಗಳು ಸ್ಟಾರ್‌ಲಿಂಕ್ ಭದ್ರತಾ ಅನುಮೋದನೆಯ ವಿಳಂಬದ ಹಿಂದೆ ರಿಲಯನ್ಸ್ ಇಂಡಸ್ಟ್ರೀಸ್ ಸಂಭಾವ್ಯ ಪಾತ್ರ ಇರುವುದಾಗಿ ಆರೋಪಿಸಿದಂತಿವೆ. ಆದರೆ, ರಿಲಯನ್ಸ್ ಈ ಆರೋಪಗಳನ್ನು ನೇರವಾಗಿಯೇ ತಳ್ಳಿಹಾಕಿದ್ದು, ತಾನು ನ್ಯಾಯಯುತ ಸ್ಪರ್ಧೆಯನ್ನು ಸದಾ ಸ್ವಾಗತಿಸುವುದಾಗಿ ಹೇಳಿದೆ. ಇದರೊಡನೆ, ಜಿಯೋ ಸ್ಯಾಟಲೈಟ್ ವ್ಯವಸ್ಥೆಯೂ ಇದೇ ಭದ್ರತಾ ಅನುಮೋದನೆಗಾಗಿ ಕಾಯುತ್ತಿದೆ ಎನ್ನುವುದನ್ನೂ ಸಂಸ್ಥೆ ನೆನಪಿಸಿದೆ. ಭಾರ್ತಿ ಎಂಟರ್‌ಪ್ರೈಸಸ್ ಮುಖ್ಯಸ್ಥ ಸುನಿಲ್ ಭಾರ್ತಿ ಮಿತ್ತಲ್ ಅವರಂತೂ ತನ್ನ ಸಂಸ್ಥೆ ಉಪಗ್ರಹ ಬ್ರಾಡ್‌ಬ್ಯಾಂಡ್ ಆರಂಭಿಸಲು ಬೇರೆಲ್ಲ ಕಂಪೆನಿಗಳಿಗಿಂತಲೂ ಸುದೀರ್ಘ ಕಾಲ ಕಾದಿದೆ ಎಂದಿದ್ದಾರೆ. ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೇಂದ್ರ ಸರಕಾರದ ಪರವಾಗಿ ಉತ್ತರಿಸಿದ್ದು, ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆಯಿಲ್ಲದೆ ಒಂದೇ ಕಂಪೆನಿ ಪಾರಮ್ಯ ಮೆರೆಯಲು ಭಾರತ ಅನುಮತಿಸುವುದಿಲ್ಲ ಎಂದಿದ್ದಾರೆ.
ಈ ಸುದ್ದಿಗಳನ್ನೆಲ್ಲ ಬದಿಗಿರಿಸಿ ನೋಡಿದರೆ, ಸಮಸ್ಯೆಗೆ ಮೂಲ ಕಾರಣ ಸಮನ್ವಯದ ಕೊರತೆ ಎನ್ನುವುದು ಕಾಣುತ್ತದೆ. ಸರಕಾರದ ಎಲ್ಲ ಇಲಾಖೆಗಳು ಪ್ರತ್ಯೇಕ ಅಸ್ತಿತ್ವಗಳಂತೆ ವರ್ತಿಸುತ್ತ, ಪ್ರತ್ಯೇಕ ನಿರ್ಧಾರಗಳನ್ನು ಕೈಗೊಳ್ಳುವ ಬದಲು, ಜೊತೆಯಾಗಿ ಒಂದೇ ದಿಕ್ಕಿನಲ್ಲಿ ಸಾಗಬೇಕು. ಉಪಗ್ರಹ ಅಂತರ್ಜಾಲ ಯೋಜನೆಗಳಿಂದ ಲಭಿಸುವ ಪ್ರಯೋಜನ ಬಲು ದೊಡ್ಡದಾಗಿದ್ದು, ಮೊಬೈಲ್ ಟವರ್‌ಗಳು ಮತ್ತು ಕೇಬಲ್ ತಲುಪಲು ಸಾಧ್ಯವಾಗದ ಗುಡ್ಡಗಾಡಿನ ಗ್ರಾಮೀಣ ಪ್ರದೇಶಗಳು, ಗಡಿ ಪ್ರದೇಶಗಳು ಮತ್ತು ಕೃಷಿ ಪ್ರದೇಶಗಳಿಗೆ ನಂಬಿಕಾರ್ಹ ಅಂತರ್ಜಾಲ ಸೇವೆ ಲಭಿಸಲಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಮತ್ತು ಕೃಷಿಕರಿಗೆ ನಂಬಿಕಾರ್ಹ ಹವಾಮಾನ ಮುನ್ಸೂಚನೆ ಲಭ್ಯವಾಗಲಿದೆ. ಆ ಕುಟುಂಬಗಳೂ ಅಂತರ್ಜಾಲ ಸೇವೆಗಾಗಿ ತಾಳ್ಮೆಯಿಂದಲೇ ಕಾದಿವೆ. ಹಾಗೆಂದು ಅವರ ಮೇಲಿರುವ ಉಪಗ್ರಹಗಳು ಶಾಶ್ವತವಾಗಿ ಕಾಯುತ್ತಲೇ ಇರಲು ಸಾಧ್ಯವಿಲ್ಲವಲ್ಲ?






