ಮುಗಿದು ಬಿಟ್ಟಿತೇ ಮುದ್ರಣ ಮಾಧ್ಯಮದ ಯುಗ?

2024 ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಭಾರತದಲ್ಲಿ ಶಿಕ್ಷಣ ಕ್ಷೇತ್ರದ ಜಾಹೀರಾತಿಗಾಗಿ ವ್ಯಯಿಸಲಾದ ಒಟ್ಟು ಮೊತ್ತದ ಶೇ. 83 ಪಾಲು, ಮುದ್ರಣ ಮಾಧ್ಯಮದ ಜೇಬಿಗೆ ಹೋಗಿದೆ. ಅಧಿಕೃತ ಮಾಹಿತಿ ಪ್ರಕಾರ ಭಾರತದಲ್ಲಿಂದು 908 ಖಾಸಗಿ ಉಪಗ್ರಹ ಟಿವಿ ಚಾನೆಲ್‌ಗಳು 388 ಖಾಸಗಿ ಎಫ್‌ಎಂ ರೇಡಿಯೊ ಚಾನೆಲ್‌ಗಳು, 531 ಕಮ್ಯುನಿಟಿ ರೇಡಿಯೊ ಸ್ಟೇಷನ್‌ಗಳು, ದೂರದರ್ಶನದವರ 381 ಉಚಿತ ಚಾನೆಲ್‌ಗಳು, ಆಲ್ ಇಂಡಿಯಾ ರೇಡಿಯೊದವರ 591 ಸ್ಟೇಷನ್‌ಗಳು ಇವೆ. ಇಷ್ಟಿದ್ದೂ ಶಿಕ್ಷಣ ಕ್ಷೇತ್ರದ ಶೇ. 83 ಜಾಹೀರಾತು ಮುದ್ರಣ ಮಾಧ್ಯಮದ ತೆಕ್ಕೆಗೆ ಬರುತ್ತದೆಯೆಂದರೆ, ಇತರೆಲ್ಲ ಮಾಧ್ಯಮಗಳಿಗೆ ಹೋಲಿಸಿದರೆ ಮುದ್ರಣ ಮಾಧ್ಯಮದ ವ್ಯಾಪ್ತಿ, ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆ ಎಷ್ಟೆಂದು ಊಹಿಸಬಹುದು.
ಈಗಾಗಲೇ ಮುದ್ರಣ ಮಾಧ್ಯಮದ ವಯಸ್ಸು ಆರುನೂರು ವರ್ಷ ಮೀರಿದೆ. ಆದರೆ ಅದು ಸಮಾಜಕ್ಕೆ ಅಂತಿಮ ವಿದಾಯ ಹೇಳುವ ಲಕ್ಷಣವೇನೂ ಕಾಣಿಸುತ್ತಿಲ್ಲ. ಹೊಸ ತಂತ್ರಜ್ಞಾನ ಬಂದೊಡನೆ ಹಳೆಯ ತಂತ್ರಜ್ಞಾನವು ಜಾಗ ಖಾಲಿಮಾಡಬೇಕಾಗುತ್ತದೆ ಎಂಬ ಹಳೆಯ ನಿಯಮವನ್ನು ಮೀರಿ ಮುದ್ರಣ ಮಾಧ್ಯಮವು ಉಳಿದಿದೆ ಮತ್ತು ಬೆಳೆಯುತ್ತಲೇ ಇದೆ. ಏಕೆಂದರೆ ಅದು ಹೊಸ ತಂತ್ರಜ್ಞಾನವನ್ನು ಶತ್ರುವಾಗಿ ಕಂಡು ಅದರಿಂದ ದೂರ ಓಡುವ ಬದಲು ಅದನ್ನೇ ತನ್ನ ಬಲವೃದ್ಧಿಗಾಗಿ ಬಳಸಿಕೊಂಡಿದೆ.
ಆಧುನಿಕ ತಂತ್ರಜ್ಞಾನದಿಂದಾಗಿ ಮುದ್ರಣ ಮಾಧ್ಯಮವು ಅಪ್ರಸ್ತುತವಾಗುವುದಾಗಿದ್ದರೆ ತಂತ್ರಜ್ಞಾನದಲ್ಲಿ ಭಾರತಕ್ಕಿಂತ ತುಂಬಾ ಮುಂದಿರುವ ಅಮೆರಿಕ, ಯುರೋಪ್, ಜಪಾನ್ ಮುಂತಾದ ದೇಶಗಳಲ್ಲಿ ಆಗಬೇಕಿತ್ತು. ಅಲ್ಲೆಲ್ಲಾ ಮುದ್ರಣ ಮಾಧ್ಯಮಗಳು ಸಾಕಷ್ಟು ಹಿನ್ನಡೆ ಅನುಭವಿಸಿರುವುದು ನಿಜವಾದರೂ ಅವು ಮಾಧ್ಯಮರಂಗದಲ್ಲಿ ತಮ್ಮ ಘನ ಉಪಸ್ಥಿತಿಯನ್ನು ಉಳಿಸಿಕೊಂಡಿವೆ. ಇಂದು ಜಪಾನ್‌ನ ಯೋಮಿಯೂರಿ ಶಿಂಬುನ್ ದೈನಿಕದ ಮುದ್ರಿತ ಪ್ರತಿಗಳ ನಿತ್ಯ ಪ್ರಸಾರ ಸಂಖ್ಯೆ 66 ಲಕ್ಷ. ಅಸಾಹಿ ಶಿಂಬುನ್ (ಜಪಾನ್) - 40 ಲಕ್ಷ. ಚೀನಾ ದ ಕನ್ಕಾವ್ ಝಿಯೋಸ್ಕಿ (Cankao Xiaoxi) 31 ಲಕ್ಷ. ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ - 23 ಲಕ್ಷ. ಜರ್ಮನಿಯ ಬಿಲ್ಡ್ ದೈನಿಕ - 22 ಲಕ್ಷ.
ಚೀನಾದಲ್ಲಿ ಕೈಗಾರಿಕಾ ಯುಗಕ್ಕಿಂತ ಮುನ್ನವೇ ಪತ್ರಿಕಾಯುಗ ಆರಂಭವಾಗಿತ್ತು. ಎರಡನೇ ಸಹಸ್ರಮಾನದ ಆರಂಭದಲ್ಲೇ ಅಲ್ಲಿ ಆವೆ ಮಣ್ಣಿನ ಮತ್ತು ಮರದ ಬ್ಲಾಕ್ ಗಳನ್ನು ಬಳಸಿ ಹಾಳೆಗಳಲ್ಲಿ ಮಾಹಿತಿಗಳನ್ನು ಮುದ್ರಿಸಿ ವಿತರಿಸುವ ವ್ಯವಸ್ಥೆ ಇತ್ತು. 15ನೇ ಶತಮಾನದಲ್ಲಿ ಜರ್ಮನಿಯಲ್ಲಿ ಮುದ್ರಣ ಯಂತ್ರದ ಆವಿಷ್ಕಾರದೊಂದಿಗೆ ಕಡಿಮೆ ಸಮಯ ಮತ್ತು ಶ್ರಮ ವ್ಯಯಿಸಿ, ಹೆಚ್ಚು ಪ್ರತಿಗಳನ್ನು ಮುದ್ರಿಸಿ ವಿತರಿಸುವ ಸವಲತ್ತು ಆರಂಭವಾಯಿತು. ಆಬಳಿಕ ಒಂದೆಡೆ ಮುದ್ರಣ ಯಂತ್ರಗಳು ಪ್ರಗತಿ ಸಾಧಿಸುತ್ತ ಹೋದವು ಮತ್ತು ಪತ್ರಿಕೆಗಳ ವಿನ್ಯಾಸ, ಅವುಗಳಲ್ಲಿನ ವಿಷಯಗಳ ವ್ಯಾಪ್ತಿ ಇತ್ಯಾದಿಗಳು ವಿಸ್ತರಿಸುತ್ತಾ ಹೋದವು. ವಾರ್ತೆಯ ಜೊತೆ ಬದುಕಿಗೆ ಸಂಬಂಧಿಸಿದ ಬಹುತೇಕ ಎಲ್ಲ ಬಗೆಯ ಮಾಹಿತಿಗಳು, ಸಾಹಿತ್ಯ, ಕ್ರೀಡೆ, ಮನರಂಜನೆ, ಸಂವಾದ ಇತ್ಯಾದಿಗಳೆಲ್ಲಾ ಪತ್ರಿಕೆಗಳ ಮೂಲಕವೇ ಜನರಿಗೆ ತಲುಪತೊಡಗಿದವು. ಇನ್ನೊಂದು ಕಡೆ ಸಮಾಜದಲ್ಲಿ ಸಾಕ್ಷರತೆ, ವೈಚಾರಿಕ ಜಾಗೃತಿ ಮತ್ತು ವಿವಿಧ ಬಗೆಯ ಚಳವಳಿ, ಆಂದೋಲನಗಳು ಬೆಳೆದಂತೆಲ್ಲಾ ಪತ್ರಿಕೆಗಳಿಗೆ ಬೇಡಿಕೆಯೂ ಹೆಚ್ಚುತ್ತಾ ಹೋಯಿತು.
1829ರಲ್ಲಿ ಟೈಪ್ ರೈಟರ್, 1876ರಲ್ಲಿ ಟೆಲಿಫೋನ್, 1877ರಲ್ಲಿ ಫೋನೋಗ್ರಾಫ್ (ಧ್ವನಿ ಮುದ್ರಣ) ಮತ್ತು 1894ರಲ್ಲಿ ರೇಡಿಯೊ ಆವಿಷ್ಕಾರವಾದಾಗ, ಅನೇಕರು ಅವುಗಳನ್ನೆಲ್ಲಾ ಪತ್ರಿಕಾ ಮಾಧ್ಯಮಕ್ಕೆ ಪರ್ಯಾಯವಾಗಿ ಕಂಡರು. 1918ರಲ್ಲಿ ಮೊದಲ ಕಲರ್ ಸಿನೆಮಾ ಬಂತು. 1920ರಲ್ಲಿ ಟಿವಿ ಬಂತು. ಹೆಚ್ಚಾಗಿ ಮಿಲಿಟರಿಯ ಬಳಕೆಗೆ ಸೀಮಿತವಾಗಿದ್ದ ರೇಡಿಯೊವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಪ್ರಯೋಗ ಯಶಸ್ವಿಯಾಯಿತು. 1923ರಲ್ಲಿ ‘ಟೈಮ್ ಮ್ಯಾಗಝಿನ್’ ರಂಗಕ್ಕೆ ಬಂತು. ಇದರೊಂದಿಗೆ ತಜ್ಞರ ಮೂಲಕ ಸುದ್ದಿಗಳನ್ನು ಆಳವಾಗಿ ಮತ್ತು ವಿಸ್ತಾರವಾಗಿ ವಿಮರ್ಶಿಸುವ ಹಾಗೂ ತನಿಖಾವರದಿಗಳ ಹೊಸ ಯುಗ ಆರಂಭವಾಯಿತು. 1927ರಲ್ಲಿ ಟಿವಿ ಜನರ ಮುಂದೆ ಬಂತು. ನಲ್ವತ್ತರ ದಶಕದಲ್ಲಿ ಆರಂಭವಾದ ಇಲೆಕ್ಟ್ರಾನಿಕ್ ಯುಗ ಎಂಭತ್ತರ ದಶಕದವರೆಗೂ ಮೆರೆಯಿತು. 1950ರಲ್ಲಿ ಕಪ್ಪು ಬಿಳುಪು ಟಿವಿ ತುಂಬಾ ಜನಪ್ರಿಯವಾಯಿತು. 1960ರಲ್ಲಿ ಎಎಂ ರೇಡಿಯೊಗಿಂತ ಸ್ಪಷ್ಟವಾಗಿ ಎಫ್‌ಎಂ ರೇಡಿಯೊ ಜನರನ್ನು ಆಕರ್ಷಿಸಿತು. 1963ರಲ್ಲಿ ಕ್ಯಾಸೆಟ್‌ಗಳು ಬಂದವು. 1972ರಲ್ಲಿ ಇಮೇಲ್ ಮತ್ತು ಮುಂದಿನ ವರ್ಷ ಮೊಬೈಲ್ ಫೋನ್ ಚಾಲನೆಗೆ ಬಂದವು. 1975ರಲ್ಲಿ ವಿಸಿಆರ್ ಬಂದರೆ, 1980ರಲ್ಲಿ ಕಲರ್ ಟಿವಿ ಮನೆಮನೆಯನ್ನು ಪ್ರವೇಶಿಸಿತು. ಪೇಜರ್ ಸಾಮಾನ್ಯವಾಗಿಬಿಟ್ಟಿತು. ಅದೇವರ್ಷ ಮೊದಲ ಆನ್‌ಲೈನ್ ದಿನಪತ್ರಿಕೆಯೂ ಬಿಡುಗಡೆಯಾಯಿತು. ಮುಂದಿನ ದಿನಗಳಲ್ಲಿ ಕಂಪ್ಯೂಟರ್ ವಿಜ್ಞಾನ ಬೃಹತ್ತಾಗಿ, ತ್ವರಿತವಾಗಿ ಬೆಳೆಯಿತು. 21ನೇ ಶತಮಾನ ಬಂದಂತೆ ಸೆಟಲೈಟ್ ರೇಡಿಯೊ, ಫೇಸ್‌ಬುಕ್, ಯೂಟ್ಯೂಬ್, ಟಿಕ್ ಟಾಕ್, ಇನ್‌ಸ್ಟಾಗ್ರಾಮ್, ಟ್ವಿಟರ್ ಇತ್ಯಾದಿಗಳ ಪ್ರಾಬಲ್ಯ ಮೆರೆಯತೊಡಗಿತು. ಈನಡುವೆ ಮುದ್ರಣ ಮಾಧ್ಯಮವು ಕಂಪ್ಯೂಟರ್ ಯುಗದ ಎಲ್ಲ ಅಸ್ತ್ರಗಳನ್ನು ಮತ್ತು ಇಂಟರ್ನೆಟ್‌ನ ಎಲ್ಲ ವೇದಿಕೆಗಳನ್ನು ಬಹಳ ಜಾಣವಾಗಿ, ತನ್ನ ಸಬಲೀಕರಣಕ್ಕಾಗಿ ಬಳಸಿಕೊಂಡಿತು. ಅದೆಷ್ಟೋ ಮುದ್ರಣ ಮಾಧ್ಯಮ ಸಂಸ್ಥೆಗಳು, ಮುದ್ರಣದ ಜೊತೆಜೊತೆಗೇ ಡಿಜಿಟಲ್ ವೇದಿಕೆಗಳನ್ನೂ ಪ್ರವೇಶಿಸಿ ಅಲ್ಲೂ ಗಣನೀಯ ಸಾಧನೆ ಮಾಡಿವೆ. ಎಷ್ಟೋ ಪತ್ರಿಕೆಗಳು ತಮ್ಮ ಆನ್‌ಲೈನ್ ಆವೃತ್ತಿಗಳು ಹಾಗೂ ಇ-ಪೇಪರ್‌ಗಳ ಮೂಲಕ ನಿತ್ಯ ಲಕ್ಷಾಂತರ ಓದುಗರನ್ನು ತಲುಪುತ್ತಿವೆ ಮತ್ತು ಈ ಮೂಲಕ ಸಾರಿಗೆ ವೆಚ್ಚದಲ್ಲಿ ಉಳಿತಾಯ ಮಾಡುತ್ತಿವೆ. ಉದಾ: 1851ರಲ್ಲಿ ಸ್ಥಾಪಿತವಾದ ‘ದ ನ್ಯೂಯಾರ್ಕ್ ಟೈಮ್ಸ್’ ದೈನಿಕವು ಇಂದು ನಿತ್ಯ 6.2 ಲಕ್ಷ ಪ್ರತಿಗಳನ್ನು ಮುದ್ರಿಸುತ್ತದೆ. ಆದರೆ ಅದರ ಡಿಜಿಟಲ್ ಆವೃತ್ತಿಗೆ 1.05 ಕೋಟಿ ಚಂದಾದಾರರಿದ್ದಾರೆ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಅದು ನಿತ್ಯ ಜಗತ್ತಿನೆಲ್ಲೆಡೆಯ 1.52 ಕೋಟಿ ಓದುಗರನ್ನು ತಲುಪುತ್ತಿದೆ.
ಜಾಗತಿಕ ಮಟ್ಟದಲ್ಲಿ ಆಧುನಿಕ ಮಾಧ್ಯಮಗಳಿಂದಾಗಿ, ಸಾಂಪ್ರದಾಯಿಕ ಮುದ್ರಣ ಮಾಧ್ಯಮಕ್ಕೆ ಹಿನ್ನಡೆ ಆಗಿದ್ದರೂ, ಸದ್ಯ ಮುದ್ರಣ ಮಾಧ್ಯಮದ ಅಸ್ತಿತ್ವಕ್ಕೆ ತುರ್ತು ಅಪಾಯವೇನೂ ಇಲ್ಲ. ಹಾಗೆಯೇ, ಮುದ್ರಣ ಮಾಧ್ಯಮದ ಜನಪ್ರಿಯತೆಯಲ್ಲಿ ಕುಸಿತದ ಪ್ರಮಾಣ ತೀರಾ ಕಳವಳಕಾರಿ ಮಟ್ಟದಲ್ಲೂ ಇಲ್ಲ. ಭಾರತದಲ್ಲಂತೂ ಮುದ್ರಣ ಮಾಧ್ಯಮ ಬೆಳೆಯುತ್ತಲೇ ಇದೆ. ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನೋಂದಾಯಿತ ವಾರ್ತಾಪತ್ರಿಕೆಗಳಿವೆ. 24 ಕೋಟಿಯಷ್ಟು ದಿನಪತ್ರಿಕೆಗಳು ನಿತ್ಯ ಮುದ್ರಿತವಾಗುತ್ತವೆ. ನಮ್ಮಲ್ಲಿ ಒಂದೊಂದು ಪತ್ರಿಕೆಯನ್ನು ಸರಾಸರಿ 3 ಮಂದಿಯಾದರೂ ಓದಿಯೇ ಓದುತ್ತಾರೆ. ಲೈಬ್ರೆರಿಗಳಲ್ಲಿ, ಕಚೇರಿಗಳಲ್ಲಿ ಮತ್ತು ವಿಶೇಷವಾಗಿ ಕ್ಷೌರದಂಗಡಿಗಳಲ್ಲಿ ಒಂದೊಂದು ಪತ್ರಿಕೆಯನ್ನು ಕನಿಷ್ಠವೆಂದರೂ ಇಪ್ಪತ್ತು ಮೂವತ್ತು ಮಂದಿ ಓದುತ್ತಾರೆ. ಹೀಗೆ ನಿರಾಯಾಸವಾಗಿ ನಿತ್ಯ 75 ಕೋಟಿ ಮಂದಿಯ ಕೈಸೇರುವ ಸಾಧನವನ್ನು ಇಲ್ಲವಾಗಿಸ ಬಯಸುವವರು ಯಶಸ್ವಿಯಾಗಲು ಇನ್ನು ಕೆಲವು ದಶಕಗಳಾದರೂ ಬೇಕಾದೀತಲ್ಲವೇ? ಅಂಥವರನ್ನು ನಿರಾಶೆಗೊಳಿಸಲಿಕ್ಕೋ ಎಂಬಂತೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಟಣೆಯ ಪ್ರಕಾರ, 2022ಕ್ಕೆ ಹೋಲಿಸಿದರೆ 2023ರಲ್ಲಿ ಭಾರತದ ದಿನಪತ್ರಿಕೆಗಳ ಪ್ರಸಾರದಲ್ಲಿ ಶೇ.2.91 ಹೆಚ್ಚಳವಾಗಿದೆ!
ಯಾವ ಉದ್ಯಮ ಎಷ್ಟು ಗಟ್ಟಿ ಇದೆ ಎಂಬುದನ್ನು ನಿರ್ಧರಿಸುವ ವಿಷಯದಲ್ಲಿ ಉದ್ಯಮಿಗಳಿಗಿಂತ ಸಮರ್ಥರು ಯಾರು? ಭಾರತದಲ್ಲಿ ಜಾಹೀರಾತು ನೀಡುವ, ಜಾಹೀರಾತಿಗಾಗಿ ಪ್ರತಿವರ್ಷ ನೂರಾರು ಕೋಟಿ ರೂ. ಖರ್ಚು ಮಾಡುವ ಉದ್ಯಮಿಗಳು ತಾವು ಎಲ್ಲಿ ಜಾಹೀರಾತು ಕೊಡಬೇಕೆಂಬುದನ್ನು ತೀರ್ಮಾನಿಸುವಾಗ ಸಾಕಷ್ಟು ವಿವೇಚನೆ, ತನಿಖೆ, ಸಂಶೋಧನೆ ಇತ್ಯಾದಿಗಳನ್ನೆಲ್ಲಾ ಮಾಡಿರುತ್ತಾರೆ. 2024 ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಭಾರತದಲ್ಲಿ ಶಿಕ್ಷಣ ಕ್ಷೇತ್ರದ ಜಾಹೀರಾತಿಗಾಗಿ ವ್ಯಯಿಸಲಾದ ಒಟ್ಟು ಮೊತ್ತದ ಶೇ. 83 ಪಾಲು, ಮುದ್ರಣ ಮಾಧ್ಯಮದ ಜೇಬಿಗೆ ಹೋಗಿದೆ. ಅಧಿಕೃತ ಮಾಹಿತಿ ಪ್ರಕಾರ ಭಾರತದಲ್ಲಿಂದು 908 ಖಾಸಗಿ ಉಪಗ್ರಹ ಟಿವಿ ಚಾನೆಲ್‌ಗಳು 388 ಖಾಸಗಿ ಎಫ್‌ಎಂ ರೇಡಿಯೊ ಚಾನೆಲ್‌ಗಳು, 531 ಕಮ್ಯುನಿಟಿ ರೇಡಿಯೊ ಸ್ಟೇಷನ್‌ಗಳು, ದೂರದರ್ಶನದವರ 381 ಉಚಿತ ಚಾನೆಲ್‌ಗಳು, ಆಲ್ ಇಂಡಿಯಾ ರೇಡಿಯೊದವರ 591 ಸ್ಟೇಷನ್‌ಗಳು ಇವೆ. ಇಷ್ಟಿದ್ದೂ ಶಿಕ್ಷಣ ಕ್ಷೇತ್ರದ ಶೇ. 83 ಜಾಹೀರಾತು ಮುದ್ರಣ ಮಾಧ್ಯಮದ ತೆಕ್ಕೆಗೆ ಬರುತ್ತದೆಯೆಂದರೆ, ಇತರೆಲ್ಲ ಮಾಧ್ಯಮಗಳಿಗೆ ಹೋಲಿಸಿದರೆ ಮುದ್ರಣ ಮಾಧ್ಯಮದ ವ್ಯಾಪ್ತಿ, ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆ ಎಷ್ಟೆಂದು ಊಹಿಸಬಹುದು.
ಎಕ್ಸಲೆಂಟ್ ಪಬ್ಲಿಸಿಟಿ ಮತ್ತು TAM ಮೀಡಿಯಾ ರಿಸರ್ಚ್ ಸಂಸ್ಥೆಗಳ ಜಂಟಿ ಅಧ್ಯಯನದ ಪ್ರಕಾರ, 2023ಕ್ಕೆ ಹೋಲಿಸಿದರೆ ಪ್ರವಾಸೋದ್ಯಮ ಕ್ಷೇತ್ರದವರು 2024 ರಲ್ಲಿ ಮುದ್ರಣ ಮಾಧ್ಯಮದವರಿಗೆ ಶೇ. 37 ಹೆಚ್ಚುವರಿ ಜಾಹೀರಾತು ನೀಡಿದ್ದಾರೆ. ಅದೇವೇಳೆ, ಈ ಕ್ಷೇತ್ರದವರು ಟಿವಿ ಚಾನೆಲ್‌ಗಳಿಗೆ ನೀಡುವ ಜಾಹೀರಾತು ಮೊತ್ತದಲ್ಲಿ ಶೇ. 38 ಕಡಿತವಾಗಿದೆ. ಈ ಕ್ಷೇತ್ರದವರು 2024ರಲ್ಲಿ ಡಿಜಿಟಲ್ ಮಾಧ್ಯಮಗಳಿಗೆ ನೀಡುವ ಜಾಹೀರಾತಿನಲ್ಲೂ ಶೇ. 10 ಕಡಿತ ಮಾಡಿದ್ದಾರೆ.
ಈ ಮಧ್ಯೆ, ಮುದ್ರಣ ಮಾಧ್ಯಮದ ಯುಗ ಮುಗಿಯಿತೆಂದು ಹಲವು ದಶಕಗಳ ಹಿಂದೆಯೇ ಶ್ರದ್ಧಾಂಜಲಿ ಅರ್ಪಿಸತೊಡಗಿದ್ದವರು ಈಗಲೂ ಅದೇ ಸೇವೆ ಸಲ್ಲಿಸುತ್ತಿದ್ದಾರೆ.
***
ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ರವೀಂದ್ರ ವರ್ಮಾನನ್ನು ಫೈನಾನ್ಸ್ ಸಂಸ್ಥೆಯೊಂದರ ಜನ ತಮ್ಮ ಕಚೇರಿಗೆ ಕರೆಸಿಕೊಂಡು, ಆತನ ಪತ್ನಿಯನ್ನು ಹಲವು ಗಂಟೆಗಳ ಕಾಲ ತಮ್ಮ ವಶದಲ್ಲಿ ಇಟ್ಟುಕೊಂಡರು. ಕಾರಣ? ವರ್ಮಾ ಆ ಸಂಸ್ಥೆಯವರಿಂದ 40 ಸಾವಿರ ರೂಪಾಯಿ ಸಾಲ ಪಡೆದಿದ್ದ. ಪ್ರತೀ ತಿಂಗಳು ರೂ. 2,120 ಮಾಸಿಕ ಕಂತು ಕಟ್ಟುವುದಾಗಿ ಒಪ್ಪಿದ್ದ. 11 ಕಂತುಗಳನ್ನು ಕಟ್ಟಿದ್ದ ಕೂಡಾ. ಆದರೂ ಇನ್ನಷ್ಟು ಮೊತ್ತ ಪಾವತಿಸಬೇಕೆಂದು ಫೈನಾನ್ಸ್‌ನವರು ಒತ್ತಾಯಿಸುತಿದ್ದರು. ವರ್ಮಾ ಬಳಿ ಅಷ್ಟು ಹಣ ಇರಲಿಲ್ಲ. ಆದ್ದರಿಂದ ಸಾಲಕೊಟ್ಟವರು ಅವನ ಪತ್ನಿಯನ್ನೇ ಒತ್ತೆ ಇಟ್ಟುಕೊಂಡರು. ಸಾಲ ಪಡೆದವನು, ಸಕಾಲಕ್ಕೆ ಬಡ್ಡಿಸಹಿತ ಮರುಪಾವತಿ ಮಾಡದೆ ಇದ್ದರೆ ಇಂತಹ ಪರಿಣಾಮಗಳನ್ನು ಎದುರಿಸಲೇ ಬೇಕಾಗುತ್ತದೆ. ಎಷ್ಟೋ ಮಂದಿ ಸಾಲ ಪಾವತಿಸಲು ವಿಫಲರಾದ ಕಾರಣಕ್ಕೆ ಕೈಕಾಲು ಕಳೆದುಕೊಂಡದ್ದಿದೆ. ಕೆಲವರು, ತಮ್ಮ ಮಡದಿ ಮಕ್ಕಳ ಜೀವವನ್ನು ಮತ್ತು ಸ್ವತಃ ತಮ್ಮ ಜೀವವನ್ನೇ ಕಳೆದುಕೊಂಡದ್ದಿದೆ. ಒಂದೋ ಅವರಿಗೆ ಸಾಲಕೊಟ್ಟವರು ಅವರನ್ನು ಕೊಲ್ಲುತ್ತಾರೆ, ಅದಲ್ಲವಾದರೆ, ಸಾಲಕೊಟ್ಟವರ ವಿಪರೀತ ಕಿರುಕುಳ, ಹಿಂಸೆ ತಾಳಲಾಗದೆ ಸಾಲಗಾರರೇ ಆತ್ಮಹತ್ಯೆಗೆ ಶರಣಾಗುತ್ತಾರೆ. ರೈತರ ವಲಯದಲ್ಲಿ ಇದು ತೀರಾ ಸಾಮಾನ್ಯ.
NHRC ವರದಿ ಪ್ರಕಾರ ನಮ್ಮ ದೇಶದಲ್ಲಿ 1995 ಮತ್ತು 2014ರ ನಡುವೆ 2,96,438 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗೆಯೇ, 2014 ಮತ್ತು 2022ರ ನಡುವೆ 1,00,474 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ತಿಳಿಸಲಾದ ಪ್ರಕಾರ, ರಾಜ್ಯದ ಮರಾಠಾವಾಡ ಮತ್ತು ವಿದರ್ಭ ಪ್ರಾಂತಗಳಲ್ಲಿ ಇದೇ ವರ್ಷ ಮಾರ್ಚ್ ತಿಂಗಳಲ್ಲಿ 250 ಮಂದಿ ಮತ್ತು ಎಪ್ರಿಲ್ ತಿಂಗಳಲ್ಲಿ 229 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ‘ಸಾಲ ಕೊಟ್ಟವರ ಹಿಂಸೆಯಿಂದ ಜಿಗುಪ್ಸೆಗೊಂಡು’ ಆತ್ಮಹತ್ಯೆಗೆ ಶರಣಾದವರು ಮತ್ತು ಅವರೆಲ್ಲಾ ತೀರಾ ಸಣ್ಣಪುಟ್ಟ ಸಾಲ ಮಾಡಿ ಇಂತಹ ಭೀಕರ ಗತಿ ಕಂಡವರು.
***
ಈ ವರ್ಷ ಫೆಬ್ರವರಿ 1ರಂದು ಸಂಸತ್ತಿನಲ್ಲಿ ಕೇಂದ್ರ ವಿತ್ತ ಸಚಿವರು ಕೇಂದ್ರ ಸರಕಾರದ 2025-26 ಸಾಲಿನ ವಾರ್ಷಿಕ ಬಜೆಟ್ ಅನ್ನು ಮಂಡಿಸಿದರು. ‘ಸಬ್ಕಾ ವಿಕಾಸ್’ ಎಂಬುದು ಬಜೆಟ್‌ನ ಪ್ರಧಾನ ಘೋಷಣೆಯಾಗಿತ್ತು. ಬಜೆಟ್ ಪೀಠಿಕೆಯಲ್ಲಿ ವಿತ್ತ ಸಚಿವರು ಖ್ಯಾತ ತೆಲುಗು ಕವಿ ಶ್ರೀ ಗುರಜಾಡ ವೆಂಕಟ ಅಪ್ಪಾರಾವ್ ಅವರ ಖ್ಯಾತ ನುಡಿಯೊಂದನ್ನು ಉದ್ಧರಿಸಿದರು: ‘‘ದೇಶವೆಂದರೆ ಕೇವಲ ಅದರ ಮಣ್ಣಲ್ಲ. ಜನರೇ ನಿಜವಾದ ದೇಶ’’.
ಬಜೆಟ್‌ನಲ್ಲಿ ವರ್ಷದ ಅಂದಾಜು ಆಯವ್ಯಯದ ಕುರಿತು ಮೊದಲ ಸಾಲಲ್ಲಿ ಈ ಮಾಹಿತಿ ಇತ್ತು: ‘‘ಸಾಲವನ್ನು ಹೊರತುಪಡಿಸಿ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚವನ್ನು, ಕ್ರಮವಾಗಿ ರೂ. 34.96 ಲಕ್ಷ ಕೋಟಿ ಮತ್ತು ರೂ. 50.65 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ’’.
ಪ್ರತಿತಿಂಗಳು ಕೇವಲ ಕೆಲವು ಸಾವಿರ ರೂಪಾಯಿ ಸಂಪಾದಿಸುವ ಝಾನ್ಸಿಯ ರವೀಂದ್ರ ವರ್ಮಾ ಥರದ ಮಂದಿ, ಇಲ್ಲಿ ಪ್ರಸ್ತಾವಿಸಲಾಗಿರುವ 35 ಲಕ್ಷ ಕೋಟಿ, 50 ಲಕ್ಷ ಕೋಟಿ ಎಂಬಿತ್ಯಾದಿ ಮೊತ್ತಗಳನ್ನು ನೋಡಿ ಬೆರಗಾಗಬಹುದು. ಅಷ್ಟು ಲಕ್ಷ ಕೋಟಿ ಎಂದರೆ ಎಷ್ಟಾಗುತ್ತದೆ ಎಂದು ಊಹಿಸಿಯೇ ಸುಸ್ತಾಗಿರಬಹುದು. ಆದರೆ 140 ಕೋಟಿ ಜನರಿರುವ ಬೃಹತ್ ದೇಶದ ಬಜೆಟ್ ಇಷ್ಟು ದೊಡ್ಡ ಗಾತ್ರದಲ್ಲಿರುವುದು ಸ್ವಾಭಾವಿಕ. ಪ್ರಸ್ತುತ 35 ಲಕ್ಷ ಕೋಟಿ ರೂಪಾಯಿ ಆದಾಯವನ್ನು 140 ಕೋಟಿ ಪ್ರಜೆಗಳಿಗೆ ನೇರವಾಗಿ ವಿತರಿಸಿದರೆ ಪ್ರತಿಯೊಬ್ಬರ ಪಾಲಿಗೆ ಸುಮಾರು 25 ಸಾವಿರ ರೂಪಾಯಿ ಬರುತ್ತದೆಂದು ಯಾರಾದರೂ ರವೀಂದ್ರ ವರ್ಮಾನಿಗೆ ಸಮಜಾಯಿಸಿದರೆ ಆತ, ತನ್ನ 40 ಸಾವಿರ ರೂಪಾಯಿ ಸಾಲದ ಬಹುಭಾಗವನ್ನು ಮರುಪಾವತಿ ಮಾಡಿ, ತನ್ನ ಪತ್ನಿಯನ್ನು ತನ್ನ ಮನೆಯಲ್ಲೇ ಉಳಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಆಲೋಚಿಸಬಹುದು. ಆದರೆ ದುರದೃಷ್ಟವಶಾತ್, ಆ 25 ಸಾವಿರ ರೂಪಾಯಿ ಎಂದೆಂದೂ ವರ್ಮಾನ ಖಾತೆಗೆ ಬಂದು ಸೇರುವುದೇ ಇಲ್ಲ. ಆದರೆ ಸಂತಸದ ಸಂಗತಿಯೇನೆಂದರೆ ಎಲ್ಲ ಭಾರತೀಯರೂ ರವೀಂದ್ರ ವರ್ಮಾನಷ್ಟು ಅಥವಾ ಪ್ರತಿವರ್ಷ ನೇಣಿಗೆ ಶರಣಾಗುವ ಆ ಸಾವಿರಾರು ಬಡ, ಸಾಲಗಾರ ರೈತರಷ್ಟು ಭಾಗ್ಯಹೀನರೇನಲ್ಲ.
***
ಈ ವರ್ಷ ಫೆಬ್ರವರಿ ತಿಂಗಳಲ್ಲಿ ಬಜೆಟ್ ಮಂಡಿಸಿದ, ಈರುಳ್ಳಿ ವಿರೋಧಿ ಅಮ್ಮನವರೇ ಮಾರ್ಚ್ ತಿಂಗಳಲ್ಲಿ ಸಂಸತ್ತಿನಲ್ಲಿ ತಿಳಿಸಿದ ಪ್ರಕಾರ ದೇಶದಲ್ಲಿ ಕಳೆದ ಹತ್ತು ಆರ್ಥಿಕ ವರ್ಷಗಳಲ್ಲಿ, ಸಾರ್ವಜನಿಕ ಕ್ಷೇತ್ರದ ವಿವಿಧ ಬ್ಯಾಂಕುಗಳು 16.5 ಲಕ್ಷ ಕೋಟಿ ರೂಪಾಯಿ ಸುಸ್ತಿ ಸಾಲದಾರರ ಸಾಲಗಳನ್ನು ಮನ್ನಾಗೊಳಿಸಿವೆ. ಅಂದರೆ ಪ್ರತಿವರ್ಷ ಸರಾಸರಿ 1.65 ಲಕ್ಷ ಕೋಟಿ ರೂಪಾಯಿಗಳು.
2023 ಅಕ್ಟೋಬರ್ 18ರಂದು ಫ್ರೀ ಪ್ರೆಸ್ ಜರ್ನಲ್ ನಲ್ಲಿ ಪ್ರಕಟವಾದ ಒಂದು ವರದಿ ಭಾರೀ ಚರ್ಚೆಗೆ ಪಾತ್ರವಾಗಿತ್ತು. ಅದರಲ್ಲಿ ಅವರು ಸಂಜಯ್ ಇಲಾವಾ ಎಂಬ ಆರ್‌ಟಿಐ ಕಾರ್ಯಕರ್ತರೊಬ್ಬರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಆರ್‌ಟಿಐ ಮೂಲಕ ಪಡೆದ ಮಾಹಿತಿಯನ್ನುದ್ಧರಿಸಿ, ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು 10.41 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲ ಮನ್ನಾ ಮಾಡಿದ್ದು, ಅನುಸೂಚಿತ ವಾಣಿಜ್ಯ ಬ್ಯಾಂಕ್‌ಗಳು 14.53 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲ ಮನ್ನಾ ಮಾಡಿವೆ - ಹೀಗೆ ಮನ್ನಾ ಮಾಡಲಾದ ಒಟ್ಟು ಸಾಲದ ಮೊತ್ತ ರೂ. 24.95 ಲಕ್ಷ ಕೋಟಿಯಷ್ಟಾಗುತ್ತದೆ ಎಂದು ತಿಳಿಸಲಾಗಿತ್ತು. ಈ ಮಾಹಿತಿಯ ಮೂಲಗಳ ಬಗ್ಗೆ ಪ್ರಶ್ನೆಗಳಿರುವುದರಿಂದ, ಮನ್ನಾ ಮಾಡಲಾಗಿರುವ ಮೊತ್ತ 16.5 ಲಕ್ಷ ಕೋಟಿ ರೂಪಾಯಿ ಎಂದೇ ಇಟ್ಟುಕೊಂಡರೂ ಅದೇನೂ ಜುಜುಬಿ ಮೊತ್ತವೇನೋ ಅಲ್ಲ ತಾನೇ? ಈ ಮಹಾ ಔದಾರ್ಯದ ಫಲಾನುಭವಿಗಳು ಯಾರು? ಹೆಚ್ಚೆಂದರೆ 100 ಮಂದಿ ಕಾರ್ಪೊರೇಟ್ ಧಣಿಗಳು. ಅವರಲ್ಲೂ ಹೆಚ್ಚಿನವರು ಗುಜರಾತ್‌ನವರು ಮತ್ತು ಮೋದಿ-ಶಾ ಅವರ ಆಪ್ತರು. ಆದ್ದರಿಂದಲೇ ಸರಕಾರ ಈ ಖದೀಮರ ಗುರುತು ಮುಚ್ಚಿಡುವ ಮೂಲಕ ಅವರ ಪ್ರತಿಷ್ಠೆಯನ್ನು ರಕ್ಷಿಸುವ ಕೆಲಸವನ್ನೂ ಮಾಡಿದೆ. ಸಾಮಾನ್ಯವಾಗಿ ಬ್ಯಾಂಕುಗಳು, ಕೇವಲ ಕೆಲವು ಸಾವಿರ ರೂಪಾಯಿಗಳ ಸಾಲ ಬಾಕಿ ಇಟ್ಟವರ ಸಂಪೂರ್ಣ ವಿವರಗಳನ್ನೂ ದೇಶದ ಜನತೆಗೆಲ್ಲಾ ಲಭ್ಯವಾಗಿಸಿ ಬಿಡುತ್ತದೆ. ಆದರೆ ಸಾವಿರಾರು ಕೋಟಿ ವಂಚಿಸಿದ ಮರ್ಯಾದಸ್ಥ ಖದೀಮರ ಯಾವುದೇ ವಿವರವನ್ನು ಸರಕಾರ ಒದಗಿಸುವುದಿಲ್ಲ. 1934ರ ಆರ್‌ಬಿಐ ಕಾಯ್ದೆಯ ಸೆಕ್ಷನ್ 45ಇ ಅನ್ವಯ, ನಾವು ಅಂತಹ ಮಾಹಿತಿ ಒದಗಿಸುವಂತಿಲ್ಲ ಎಂದು ಸರಕಾರ ಜಾರಿಕೊಳ್ಳುತ್ತದೆ.
ಕಳೆದ ಡಿಸೆಂಬರ್ ನಲ್ಲಿ ಕೇಂದ್ರ ಸಚಿವ ರಾಮನಾಥ್ ಠಾಕೂರ್ ಅವರು ಸಂಸತ್ತಿನಲ್ಲಿ ತಿಳಿಸಿದ ಪ್ರಕಾರ 18.74 ಕೋಟಿ ರೈತರು ವ್ಯಾವಸಾಯಿಕ ಸಾಲಗಳ ಹೊರೆಯಡಿಯಲ್ಲಿ ನರಳುತ್ತಿದ್ದಾರೆ. ಅವರು ಸಾಲ ಮನ್ನಾ ಮಾಡಬೇಕೆಂಬ ಬೇಡಿಕೆ ಮುಂದಿಟ್ಟರೆ ಲಾಠಿ ಮತ್ತು ಗುಂಡುಗಳ ಮೂಲಕ ಅವರನ್ನು ಉಪಚರಿಸಲಾಗುತ್ತದೆ.
ಹೀಗೆ ನಮ್ಮನ್ನು ಆಳುವವರು ತೆಲುಗು ಕವಿ ಶ್ರೀ ಗುರಜಾಡ ಅಪ್ಪಾ ರಾವ್ ಅವರ, ‘‘ದೇಶವೆಂದರೆ ಕೇವಲ ಅದರ ಮಣ್ಣಲ್ಲ. ಜನರೇ ನಿಜವಾದ ದೇಶ’’ ಎಂಬ ಜಾಣ ನುಡಿಯಿಂದ ಸ್ಫೂರ್ತಿ ಪಡೆದು, ದೇಶದ ಮಣ್ಣಿಗೂ ಜನರಿಗೂ ನ್ಯಾಯವಾಗುವಂತೆ ಜನರನ್ನು ಮಣ್ಣುಮುಕ್ಕಿಸುವ ಧೋರಣೆ ತಾಳುತ್ತಿದ್ದಾರೆ.







