ಇಸ್ರೋದ ಶ್ರೇಷ್ಠ ಪ್ರತಿಭೆಗಳೇಕೆ ಹೊರ ನಡೆಯುತ್ತಿದ್ದಾರೆ?

ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ ಅವರು ಇದಕ್ಕೆ ಅಷ್ಟೊಂದು ಆತಂಕಗೊಳ್ಳಬೇಕಿಲ್ಲ ಎಂದಿದ್ದಾರೆ. ಪ್ರತಿಯೊಂದು ಸಂಸ್ಥೆಯಲ್ಲೂ ಉದ್ಯೋಗಿಗಳು ರಾಜೀನಾಮೆ ನೀಡುವುದು ಸಹಜವಾಗಿದ್ದು, ಇತರರು ಅವರ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎಂದಿದ್ದಾರೆ. ಅವರ ಮಾತುಗಳು ನಿಜವೂ ಆಗಿರಬಹುದು. ಆದರೆ, ಹೊರ ನಡೆಯದಂತೆ ಬಾಗಿಲು ಮುಚ್ಚುವುದಕ್ಕೂ, ಜನರು ಒಳಗೇ ಉಳಿಯುವಂತೆ ಮನ ಒಲಿಸುವುದಕ್ಕೂ ವ್ಯತ್ಯಾಸ ಇದೆಯಲ್ಲವೇ?
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈಗ ಮತ್ತೆ ಸುದ್ದಿಯಲ್ಲಿದೆ. ಆದರೆ, ಈ ಬಾರಿ ಯಾವುದೋ ರಾಕೆಟ್ ಉಡಾವಣೆಯ ಕಾರಣದಿಂದ ಇಸ್ರೋ ಸುದ್ದಿಯಾಗಿಲ್ಲ. ಬದಲಿಗೆ, ಇಸ್ರೋದ ಪ್ರತಿಭೆಗಳೇ ಹೊರನಡೆಯುತ್ತಿರುವ ಕಾರಣದಿಂದ ಸಂಸ್ಥೆ ಸುದ್ದಿಯಾಗಿದೆ. ವರದಿಗಳ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಅಂದಾಜು 100ರಿಂದ 120 ವಿಜ್ಞಾನಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ಇವರಲ್ಲಿ ಬಹುತೇಕ 80 ಜನರು ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರದ ವಿಜ್ಞಾನಿಗಳಾದರೆ, ಅಂದಾಜು 20 ಜನ ತಿರುವನಂತಪುರದ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳಾಗಿದ್ದಾರೆ. ಇವರ ಪೈಕಿ ಎಲ್‌ವಿಎಂ3 ಯೋಜನಾ ನಿರ್ದೇಶಕ ವಿಕ್ಟರ್ ಜೋಸೆಫ್, ಸ್ಪೇಡೆಕ್ಸ್ ಯೋಜನಾ ನಿರ್ದೇಶಕರು, ಚಂದ್ರಯಾನ 3 ಯೋಜನೆಯ ಐತಿಹಾಸಿಕ ಲ್ಯಾಂಡಿಂಗ್‌ಗೆ ಮುನ್ನ ಒಂದು ಲಕ್ಷಕ್ಕೂ ಹೆಚ್ಚು ಸಿಮ್ಯುಲೇಶನ್ ನಡೆಸಿದ ತಂಡದ ಮುಖ್ಯಸ್ಥ ಆದಿತ್ಯ ರಲ್ಲಪಳ್ಳಿಯವರಂತಹ ಹಿರಿಯ ವಿಜ್ಞಾನಿಗಳೂ ಸೇರಿದ್ದಾರೆ. ಇವರೆಲ್ಲ ಯಾರೋ ಸಾಮಾನ್ಯ ಉದ್ಯೋಗಿಗಳಲ್ಲ. ಇವರು ಚಂದ್ರನ ಅಂಗಳದಲ್ಲೂ ಭಾರತಕ್ಕೆ ಹೆಮ್ಮೆ ತಂದ ವಿಜ್ಞಾನಿಗಳು.
ಈ ಬೆಳವಣಿಗೆಯಿಂದ ಎಚ್ಚರಗೊಂಡ ಬಾಹ್ಯಾಕಾಶ ವಿಭಾಗ ಜುಲೈ 14ರಂದು ಒಂದು ಸೂಚನೆಯನ್ನು ಹೊರಡಿಸಿತು. ಇದರಲ್ಲಿ, ಎಲ್ಲ ಇಸ್ರೋ ಕೇಂದ್ರಗಳಿಗೂ ಗಗನಯಾನ ಮತ್ತು ಇತರ ಕಾರ್ಯತಂತ್ರದ ಮಹತ್ವ ಹೊಂದಿರುವ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್ ‘ಎ’ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ರಾಜೀನಾಮೆ ಅಥವಾ ಸ್ವಯಂ ನಿವೃತ್ತಿಯನ್ನು ಅಂಗೀಕರಿಸದಂತೆ ತಿಳಿಸಿದೆ. ಈಗ ಇಂತಹ ಎಲ್ಲ ಮನವಿಗಳೂ ಅಂತಿಮ ಅನುಮೋದನೆಗಾಗಿ ಬಾಹ್ಯಾಕಾಶ ಇಲಾಖೆಗೇ ರವಾನೆಯಾಗುತ್ತಿವೆ. ನವೆಂಬರ್ 2020ರಲ್ಲಿ, ಇಂತಹ ರಾಜೀನಾಮೆಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಇಸ್ರೋ ವಿಭಾಗಗಳ ಮುಖ್ಯಸ್ಥರಿಗೆ ನೀಡಲಾಗಿತ್ತು. ಆದರೆ, ಈಗ ಅದನ್ನು ಹಿಂಪಡೆಯಲಾಗಿದೆ. ಇದರಿಂದ ವಿಜ್ಞಾನಿಗಳು ಇಸ್ರೋದಿಂದ ಹೊರ ಹೋಗುವ ಬಾಗಿಲನ್ನು ತಳ್ಳುವುದು ಈಗ ಕಷ್ಟಕರವಾಗಲಿದೆ.
ಆದರೆ, ವಿಜ್ಞಾನಿಗಳು ಈಗೇಕೆ ಇಸ್ರೋದಿಂದ ಹೊರನಡೆಯುತ್ತಿದ್ದಾರೆ? ಇದಕ್ಕೆ ಬಹುದೊಡ್ಡ ಕಾರಣವೆಂದರೆ, ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಅಗಾಧ ಹಸಿವೆಯನ್ನು ಹೊಂದಿದೆ. ಸರಕಾರ ಬಾಹ್ಯಾಕಾಶ ವಲಯವನ್ನು 2020ರಲ್ಲಿ ಖಾಸಗಿ ಕಂಪೆನಿಗಳಿಗೆ ಮುಕ್ತಗೊಳಿಸಿ, 2023ರಲ್ಲಿ ಭಾರತೀಯ ಬಾಹ್ಯಾಕಾಶ ನೀತಿಯನ್ನು ಜಾರಿಗೆ ತಂದಿತು. ಆ ಬಳಿಕ, ಭಾರತದಲ್ಲಿ ಈಗ 400ಕ್ಕೂ ಹೆಚ್ಚು ಬಾಹ್ಯಾಕಾಶ ಸ್ಟಾರ್ಟಪ್‌ಗಳಿವೆ. ಹತ್ತು ವರ್ಷಗಳ ಹಿಂದೆ, ಭಾರತದಲ್ಲಿನ ರಾಕೆಟ್ ಇಂಜಿನಿಯರ್‌ಗೆ ಒಂದೇ ಕಡೆ ಉದ್ಯೋಗ ಸಾಧ್ಯವಿತ್ತು. ಆದರೆ ಇಂದು, ಆತನ ಮುಂದೆ ನೂರಾರು ಆಯ್ಕೆಗಳಿವೆ. ಪ್ರತಿಭೆಗಳ ಪೂರೈಕೆ ಸೀಮಿತವಾಗಿದ್ದು, ಬೇಡಿಕೆ ಇದ್ದಕ್ಕಿದ್ದಂತೆ ಅಪಾರ ಪ್ರಮಾಣದಲ್ಲಿ ಹೆಚ್ಚಾದಾಗ ಜನರು ಹೀಗೆ ಹೊರನಡೆಯುತ್ತಾರೆ. ಇದು ನಿಷ್ಠೆಯ ಕೊರತೆಯಲ್ಲ, ಬದಲಿಗೆ ಸರಳ ಅರ್ಥಶಾಸ್ತ್ರವಷ್ಟೇ.
ಹಣ ಸಹಜವಾಗಿಯೇ ಅದರ ಪಾತ್ರವನ್ನು ನಿರ್ವಹಿಸುತ್ತದೆ. ಖಾಸಗಿ ಕಂಪೆನಿಗಳು ಉದ್ಯೋಗಿಗಳಿಗೆ ಉತ್ತಮ ಸಂಬಳ, ಕೆಲಸದ ಬೋನಸ್ ಮತ್ತು ಇಎಸ್‌ಪಿಒ (ಉದ್ಯೋಗಿಗಳಿಗೆ ಷೇರು ನೀಡುವ ಯೋಜನೆ) ಇತ್ಯಾದಿಗಳನ್ನು ಒದಗಿಸುತ್ತಿದ್ದು, ಸರಕಾರಿ ಸಂಬಳ ಇದಕ್ಕೆ ಸಮನಾಗಲು ಸಾಧ್ಯವಿಲ್ಲ. ಇಎಸ್‌ಒಪಿ ಎಂದರೆ, ಕಂಪೆನಿ ಉದ್ಯೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಕಂಪೆನಿಯ ಷೇರುಗಳನ್ನು ಖರೀದಿಸಲು ಅವಕಾಶ ಮಾಡಿಕೊಡುವುದಾಗಿದೆ. ಒಂದು ವೇಳೆ ಕಂಪೆನಿ ಬೆಳೆದು, ಅದರ ಮೌಲ್ಯ ವೃದ್ಧಿಸಿದರೆ, ಈ ಹೆಚ್ಚಳವೇ ಉದ್ಯೋಗಿಯ ಲಾಭವಾಗುತ್ತದೆ. ಆದ್ದರಿಂದ, ಓರ್ವ ಉದ್ಯೋಗಿ ಕೇವಲ ಸಂಬಳ ಮಾತ್ರ ಪಡೆದುಕೊಳ್ಳುವುದಲ್ಲ. ಬದಲಿಗೆ, ಆತ ತಾನು ನಿರ್ಮಿಸುತ್ತಿರುವ ಕಂಪೆನಿಯ ಸಹ ಮಾಲಕನೂ ಆಗಿರುತ್ತಾನೆ. ಒಂದು ಸರಕಾರಿ ಉದ್ಯೋಗ ಭದ್ರತೆ ಮತ್ತು ಹೆಮ್ಮೆಯನ್ನು ಕೊಡಬಹುದು. ಆದರೆ, ಅದು ಮಾಲಕತ್ವದ ಭಾವನೆ ನೀಡಲು ಸಾಧ್ಯವಿಲ್ಲ. ಸಂಬಳ ಪಡೆದು ಕೆಲಸ ಮಾಡುವ, ಮನೆಯಲ್ಲಿ ಮಕ್ಕಳ ಶಾಲಾ ಫೀಸು, ಮನೆಯ ಸಾಲ, ವಯಸ್ಸಾಗುತ್ತಿರುವ ಪೋಷಕರ ಜವಾಬ್ದಾರಿ ಹೊಂದಿರುವವರಿಗೆ ಈ ವ್ಯತ್ಯಾಸ ಸಣ್ಣ ವಿಚಾರವಲ್ಲ.
ಇದರೊಡನೆ, ನಾಯಕತ್ವದ ಎಳೆತವೂ ಇದೆ. ಹಿರಿಯ ವಿಜ್ಞಾನಿಗಳನ್ನು ಕೇವಲ ಹುದ್ದೆ ಭರ್ತಿಗೊಳಿಸುವ ಸಲುವಾಗಿಯಷ್ಟೇ ಕರೆಸಿಕೊಳ್ಳಲಾಗುತ್ತಿಲ್ಲ. ಅವರು ಹೊಂದುವ ಸ್ಥಾನದಲ್ಲಿ ಅವರು ಸಂಪೂರ್ಣ ವ್ಯವಸ್ಥೆಯ ನೇತೃತ್ವ ವಹಿಸಿ, ಶೂನ್ಯದಿಂದ ಉತ್ಪನ್ನಗಳನ್ನು ನಿರ್ಮಿಸುತ್ತಾರೆ, ನಿರ್ಧಾರಗಳನ್ನು ತಾವೇ ಕೈಗೊಳ್ಳುತ್ತಾರೆ. ಆದರೆ, ಒಂದು ದೊಡ್ಡ ಸರಕಾರಿ ಸಂಸ್ಥೆಯಲ್ಲಿ ಒಂದು ಪರಿಕಲ್ಪನೆ ಸಾಕಾರಗೊಳ್ಳುವ ಮುನ್ನ ಹಲವಾರು ಮೇಜುಗಳನ್ನು ದಾಟಿ ಬರಬೇಕಾಗುತ್ತದೆ. ಆದರೆ, ಸ್ಟಾರ್ಟಪ್ ಒಂದರಲ್ಲಿ, ಅದೇ ಆಲೋಚನೆ ಮುಂದಿನ ತಿಂಗಳೇ ಪರೀಕ್ಷಾ ಹಂತಕ್ಕೆ ಬರುತ್ತದೆ. ವಿಜ್ಞಾನಿಗಳನ್ನು ಈ ವೇಗವೂ ಆಕರ್ಷಿಸುತ್ತಿದೆ.
ಇವೆಲ್ಲದರ ಕೆಳಗೆ ಅತ್ಯಂತ ಅನನುಕೂಲಕರವಾದ ವಿಚಾರವೂ ಇದೆ. ಅದುವೇ ನೈತಿಕತೆ. ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದರಿಂದ ಸರಕಾರಿ ಸಂಸ್ಥೆಯಲ್ಲಿ ಕಾರ್ಯಾಚರಿಸುವ ಉದ್ಯೋಗಿಗಳಿಗೆ ದೀರ್ಘಾವಧಿಯಲ್ಲಿ ತಮ್ಮ ಸ್ಥಾನದ ಕುರಿತು ಅನುಮಾನಗಳು ಉಂಟಾಗುತ್ತವೆ. ಇದರೊಡನೆ, ಮೇ 2025 ಮತ್ತು ಜನವರಿ 2026ರ ನಡುವೆ ಎರಡು ಪಿಎಸ್‌ಎಲ್‌ವಿ ವೈಫಲ್ಯಗಳು ಮತ್ತು ಇಸ್ರೋದಲ್ಲಿ 14,108 ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳ ಪೈಕಿ ಕೇವಲ 12,472 ಹುದ್ದೆಗಳು ಮಾತ್ರವೇ ಭರ್ತಿಯಾಗಿರುವುದೂ ಹೆಚ್ಚಿನ ಒತ್ತಡ ಸೃಷ್ಟಿಸಿವೆ. ಉದ್ಯೋಗಿಗಳು ಕಡಿಮೆಯಾದಷ್ಟು ಒತ್ತಡವೂ ಹೆಚ್ಚಾಗಿ, ಪ್ರಗತಿ ಕುಂಠಿತವಾಗುತ್ತದೆ. ಈ ಸಂಯೋಜನೆ ಅತ್ಯಂತ ಆಸಕ್ತ ಉದ್ಯೋಗಿಗಳನ್ನೂ ಸುಸ್ತಾಗಿಸುತ್ತದೆ. ರಾಜೀನಾಮೆ ನಿಯಮಗಳನ್ನು ಕಠಿಣಗೊಳಿಸುವುದರಿಂದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಮಾಜಿ ಅಧಿಕಾರಿಗಳು ಬಹಿರಂಗವಾಗಿಯೇ ಹೇಳಿದ್ದು, ಇದು ಕೇವಲ ರೋಗ ಲಕ್ಷಣಕ್ಕೆ ಚಿಕಿತ್ಸೆಯೇ ಹೊರತು, ರೋಗಕ್ಕಲ್ಲ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.
ಇಂತಹ ಪ್ರತಿಭಾ ಸೋರಿಕೆಯನ್ನು ತಡೆಗಟ್ಟುವುದಾದರೂ ಹೇಗೆ? ಮೊದಲನೆಯದಾಗಿ, ವೇತನ ಮತ್ತು ಬಹುಮಾನಗಳನ್ನು ಪ್ರಾಮಾಣಿಕವಾಗಿ ಮರುಪರಿಶೀಲನೆ ನಡೆಸಬೇಕು. ಸರಕಾರ ಇಎಸ್‌ಒಪಿಗಳನ್ನು ನೀಡಲು ಸಾಧ್ಯವಿಲ್ಲ. ಆದರೆ, ಅದು ಯೋಜನಾ ಸಂಬಂಧಿತ ಬೋನಸ್, ಪೇಟೆಂಟ್ ಹಂಚಿಕೆ, ತಂತ್ರಜ್ಞಾನ ವರ್ಗಾವಣೆಯಲ್ಲಿ ರಾಯಧನ, ಉತ್ತಮವಾಗಿ ಕಾರ್ಯಾಚರಿಸುವವರಿಗೆ ವೇಗವಾಗಿ ಭಡ್ತಿ ಇತ್ಯಾದಿಗಳನ್ನು ನೀಡಬಹುದು. ಎರಡನೆಯದಾಗಿ, ಔದ್ಯೋಗಿಕ ಪಥಗಳನ್ನು ಸ್ಪಷ್ಟಪಡಿಸಬೇಕು. ಒಂದು ವೇಳೆ ತಂತ್ರಜ್ಞಾನ ಖಾಸಗಿ ಕೈಗಳಿಗೆ ಹೋಗುತ್ತದೆ ಎಂದಾದರೆ, ಅದನ್ನು ನಿರ್ಮಿಸಿರುವ ಕೈಗಳಿಗೆ ಮುಂದಿನ ದಶಕ ಹೇಗಿರಲಿದೆ ಎನ್ನುವುದನ್ನೂ ಸ್ಪಷ್ಟವಾಗಿ ವಿವರಿಸಬೇಕು. ಹೆಚ್ಚಿನ ಸಂಬಳದ ಆಸೆಗಿಂತಲೂ, ಅನಿಶ್ಚಿತತೆಯೇ ಉದ್ಯೋಗಿಗಳನ್ನು ಹೆಚ್ಚು ವೇಗವಾಗಿ ಹೊರ ಕಳುಹಿಸುತ್ತದೆ.
ಮೂರನೆಯದಾಗಿ, ನಿರ್ಧಾರ ಕೈಗೊಳ್ಳುವಿಕೆಯನ್ನು ಸರಿಪಡಿಸಬೇಕು. ಬಜೆಟ್ ಮತ್ತು ವೇಳಾಪಟ್ಟಿಯ ಕುರಿತಂತೆ ಯೋಜನಾ ನಿರ್ದೇಶಕರುಗಳಿಗೇ ಅಧಿಕಾರ ನೀಡುವುದರಿಂದ, ಸಾಕಷ್ಟು ಹತಾಶೆ, ಅಸಮಾಧಾನಗಳು ಕಡಿಮೆಯಾಗಬಹುದು. ನಾಲ್ಕನೆಯದಾಗಿ, ಚಲನೆಗೆ ಅಡ್ಡಿಪಡಿಸುವ ಬದಲು, ಹೆಚ್ಚಿನ ಅವಕಾಶ ನೀಡಬೇಕು. ಅಮೆರಿಕದಂತಹ ದೇಶಗಳು ತಮ್ಮ ಪ್ರತಿಭೆಗಳನ್ನು ವಿವಿಧ ಸಂಸ್ಥೆ ಮತ್ತು ಇಲಾಖೆಗಳ ನಡುವೆ ಕಾರ್ಯಾಚರಿಸಿ, ಹಿಂದಕ್ಕೆ ಮರಳಲು ಅವಕಾಶ ನೀಡುತ್ತವೆ. ಅಧ್ಯಯನದ ರಜೆ ಅಥವಾ ನಿಯೋಜನಾ ಯೋಜನೆಗಳು ವಿಜ್ಞಾನಿಗಳಿಗೆ ಮೂಲ ಸಂಸ್ಥೆಯಿಂದ ಸಂಬಂಧ ಕಸಿದುಕೊಳ್ಳದೆಯೇ ಖಾಸಗಿ ಅನುಭವ ಪಡೆದುಕೊಳ್ಳಲು ಅವಕಾಶ ಒದಗಿಸುತ್ತವೆ. ಐದನೆಯದಾಗಿ, ನೇಮಕಾತಿ ಪ್ರಕ್ರಿಯೆ ನಿವೃತ್ತಿ ಮತ್ತು ರಾಜೀನಾಮೆಯನ್ನು ಸರಿಗಟ್ಟಬೇಕು. 1,050 ಹುದ್ದೆಗಳ ನೇಮಕಾತಿ ಈಗಾಗಲೇ ನಡೆಯುತ್ತಿದೆ ಎನ್ನಲಾಗಿದೆ. ಆದರೆ, ಹೊಸ ಪದವೀಧರರನ್ನು ಮಾನವ ಸಹಿತ ಬಾಹ್ಯಾಕಾಶ ನೌಕಾ ಯೋಜನೆಯಲ್ಲಿ ಕಾರ್ಯಾಚರಿಸುವಂತೆ ತರಬೇತಿ ನೀಡಲು ಹಲವಾರು ವರ್ಷಗಳು ಬೇಕಾಗುತ್ತವೆ. ಆದ್ದರಿಂದ, ತರಬೇತಿ, ಜ್ಞಾನದ ದಾಖಲೀಕರಣ ಇಂದಿನಿಂದಲೇ ಆರಂಭಗೊಳ್ಳಬೇಕೇ ಹೊರತು, ತಜ್ಞರು ಹೊರನಡೆದ ನಂತರವಲ್ಲ.
ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ ಅವರು ಇದಕ್ಕೆ ಅಷ್ಟೊಂದು ಆತಂಕಗೊಳ್ಳಬೇಕಿಲ್ಲ ಎಂದಿದ್ದಾರೆ. ಪ್ರತಿಯೊಂದು ಸಂಸ್ಥೆಯಲ್ಲೂ ಉದ್ಯೋಗಿಗಳು ರಾಜೀನಾಮೆ ನೀಡುವುದು ಸಹಜವಾಗಿದ್ದು, ಇತರರು ಅವರ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎಂದಿದ್ದಾರೆ. ಅವರ ಮಾತುಗಳು ನಿಜವೂ ಆಗಿರಬಹುದು. ಆದರೆ, ಹೊರ ನಡೆಯದಂತೆ ಬಾಗಿಲು ಮುಚ್ಚುವುದಕ್ಕೂ, ಜನರು ಒಳಗೇ ಉಳಿಯುವಂತೆ ಮನ ಒಲಿಸುವುದಕ್ಕೂ ವ್ಯತ್ಯಾಸ ಇದೆಯಲ್ಲವೇ? ಭಾರತ ಬಾಹ್ಯಾಕಾಶಕ್ಕೆ ಗಗನಯಾನಿಯನ್ನು ಕಳುಹಿಸುವ, 2035ರ ವೇಳೆಗೆ ಬಾಹ್ಯಾಕಾಶ ನಿಲ್ದಾಣ ಹೊಂದುವ ಮತ್ತು 2040ರಲ್ಲಿ ಚಂದ್ರನ ಅಂಗಳದಲ್ಲಿ ಕಾಲಿಡುವ ಕನಸು ಕಾಣುತ್ತಿದೆ. ಈ ಕನಸುಗಳನ್ನು ಕೇವಲ ಕಾನೂನುಗಳು, ನಿಯಮಗಳಿಂದಲೇ ಸಾಕಾರಗೊಳಿಸಲು ಸಾಧ್ಯವಿಲ್ಲ. ಅವುಗಳನ್ನು ನನಸಾಗಿಸಬೇಕಾದರೆ, ನಾವು ಇಲ್ಲೇ ಉಳಿಯಬೇಕು ಎನ್ನುವಷ್ಟು ಗೌರವ, ಮೌಲ್ಯವನ್ನು ವಿಜ್ಞಾನಿಗಳು ಹೊಂದಿದಾಗಷ್ಟೇ ಸಾಧ್ಯ.






