ನ್ಯಾಯಮೂರ್ತಿಗಳು ಮತ್ತು ನೈತಿಕ ಜವಾಬ್ದಾರಿಗಳು

ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಬರೆದ ನಮ್ಮ ಸಂವಿಧಾನವೇ ಜೀವಪರವಾಗಿದೆ. ಯಾರಿಗೂ ಸೇರದ ರಸ್ತೆ ಬದಿಯ ಮರವೊಂದನ್ನು ಕಡಿದರೆ ಅವನಿಗೆ ಶಿಕ್ಷೆಯಾಗುತ್ತದೆ, ಯಾರ ಜಪ್ತಿಗೂ ಸಿಗದ ಜಿಂಕೆಯೊಂದನ್ನು ಕೊಂದರೆ ಆತ ಎಂತಹ ಸೆಲೆಬ್ರಿಟಿ ಆಗಿದ್ದರೂ ಆತ ಜೈಲಿಗೆ ಹೋಗುತ್ತಾನೆ. ಇಂತಹ ಕರುಣೆ, ಪ್ರೀತಿ, ಮಾನವೀಯತೆಯನ್ನು ನಮ್ಮ ಸಂವಿಧಾನವೇ ಪ್ರತಿಪಾದಿಸುತ್ತದೆ ಎಂದರೆ ನಮ್ಮ ಸಂವಿಧಾನದ ಆಧಾರದ ಮೇಲೆಯೇ ನಡೆಯುವ ನ್ಯಾಯಾಲಯಗಳಿಗೆ ಯಾಕೆ ಪ್ರೀತಿ, ಕರುಣೆ, ಮಾನವೀಯತೆಗಳ ಕಾಳಜಿಗಳು ಇರಬಾರದು?
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಬೆಂಚ್ ಮುಂದೆ ದಿಲ್ಲಿಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ನೇತೃತ್ವದಲ್ಲಿ ನಡೆಸಿದ ಅಹಿಂಸಾತ್ಮಕ ಪ್ರತಿಭಟನೆಯಲ್ಲಿ ಪೊಲೀಸರು ಅನವಶ್ಯಕವಾಗಿ ಅತಿಯಾದ ಬಲಪ್ರಯೋಗ ಮಾಡಿ ವಿದ್ಯಾರ್ಥಿಗಳನ್ನು, ಯುವಜನರನ್ನು, ಮಹಿಳೆಯರನ್ನು ಹೀನಾಯವಾಗಿ ಲಾಠಿಚಾರ್ಜ್ ಮಾಡಿದ ಪ್ರಕರಣವನ್ನು ವಿಚಾರಣೆ ಮಾಡುವ ಹಂತದಲ್ಲಿ ವಕೀಲರಾದ ನರೇಂದ್ರನಾಥ್ ಮಿಶ್ರ ಅವರು ನ್ಯಾಯಾಲಯದ ಮುಂದೆ ಒಂದು ‘ಪೆನ್ ಡ್ರೈವ್’ ಹಿಡಿದು ತೀವ್ರ ಸ್ವರೂಪದ ಪೋಲಿಸ್ ದೌರ್ಜನ್ಯದ ದೃಶ್ಯಗಳನ್ನು ತೋರಿಸಲು ಮುಂದಾದಾಗ ಮುಖ್ಯನ್ಯಾಯಮೂರ್ತಿಗಳು ‘‘Don't waste our time and don't waste yours. We are not interested in videos. We don't have time to watch’’ ಅಂದಿದ್ದಾರೆ. ಅಂದರೆ, ‘‘ನಮ್ಮ ಸಮಯ ಹಾಳು ಮಾಡಬೇಡಿ, ನಿಮ್ಮ ಸಮಯವನ್ನೂ ಹಾಳು ಮಾಡಿಕೊಳ್ಳಬೇಡಿ. ನಮಗೆ ವೀಡಿಯೊಗಳಲ್ಲಿ ಆಸಕ್ತಿ ಇಲ್ಲ, ನಮಗೆ ಅವನ್ನು ನೋಡಲು ಸಮಯವೂ ಇಲ್ಲ’’ ಎಂದು ಹೇಳಿರುವುದು ಇದೀಗ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನ್ಯಾಯಮೂರ್ತಿಗಳ ಈ ನಡವಳಿಕೆ ಸರಿಯೇ? ಎಂಬುದು ಇಲ್ಲಿರುವ ಪ್ರಶ್ನೆ, ಕಾನೂನಿನ ದೃಷ್ಟಿಯಲ್ಲಿ ಇದು ತಪ್ಪಲ್ಲ. ಆದರೆ ಹೇಳಿದ ಶೈಲಿ ಕಠಿಣವಾಗಿತ್ತು ಎಂಬುದು ಕೆಲ ಹಿರಿಯ ನ್ಯಾಯವಾದಿಗಳ ಅನಿಸಿಕೆ. ನ್ಯಾಯಮೂರ್ತಿಗಳು ಯಾವುದೇ ಪ್ರಕರಣವನ್ನು ಕೇಳಿಸಿಕೊಳ್ಳಲು ಸಕಾರಣಗಳನ್ನು ನೀಡಿ ನಿರಾಕರಿಸಬಹುದು. ಆದರೆ ಆಸಕ್ತಿ ಇಲ್ಲ, ಬಿಡುವಿಲ್ಲ ಎಂದು ಕಠಿಣವಾಗಿ ಹೇಳುವುದು ಸರಿಯಲ್ಲ ಎಂಬುದು ಮತ್ತೆ ಕೆಲವರ ವಾದ. ಪ್ರತಿದಿನ ಸುಪ್ರೀಂ ಕೋರ್ಟ್‌ಗೆ ಸಾವಿರಾರು ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳು ಬರುತ್ತವೆ, ಎಲ್ಲವನ್ನೂ ತಕ್ಷಣ ಕೇಳಿಸಿಕೊಳ್ಳುವುದು ನ್ಯಾಯಾಲಯಕ್ಕೆ ಸಾಧ್ಯವಾಗಲಾರದು ಎಂಬುದೂ ವಾಸ್ತವ. ಹಾಗಿದ್ದಾಗ ಸಾಮಾನ್ಯವಾಗಿ ‘‘ಇದನ್ನು ರಿಜಿಸ್ಟ್ರಾರ್ ಬಳಿ ಕೊಡಿ.. ಮುಂದಿನ ದಿನಾಂಕ ನೋಡೋಣ’’ ಎಂದು ಹೇಳಬಹುದಿತ್ತು. ಅಂತೆಯೇ ‘‘ನನಗೆ ಆಸಕ್ತಿ ಇಲ್ಲ ಅಂತ ಹೇಳಿದ್ದು ಆ ನಿರ್ದಿಷ್ಟ ಕೇಸ್‌ಗೆ ಮಾತ್ರವೇ ಹೊರತು ಎಲ್ಲಾ ಕೇಸ್‌ಗಳಿಗೂ ಅಲ್ಲ’’ ಎನ್ನಬಹುದು. ಬಿಡುವಿಲ್ಲ ಎಂದಿರುವುದು ಬಾಕಿ ಪ್ರಕರಣಗಳ ಒತ್ತಡದಿಂದ ಇರಬಹುದು.
ಆದರೆ ನ್ಯಾಯಮೂರ್ತಿಗಳು ನೇರವಾಗಿ ‘‘ನಮಗೆ ಬಿಡುವಿಲ್ಲ, ಆಸಕ್ತಿಯಿಲ್ಲ’’ ಎಂಬಂತೆ ಹೇಳುವುದು ಬಹಳ ಅಪರೂಪ.
ಅದೇ ದಿನ ಅದೇ ಮುಖ್ಯನ್ಯಾಯಮೂರ್ತಿಗಳು ‘‘ಜನರಿಗೆ ತುರ್ತು ನ್ಯಾಯ ಬೇಕಿದೆ’’ ಮತ್ತು ‘‘ನ್ಯಾಯಾಧೀಶರಿಗೆ ತ್ವರಿತ ಮತ್ತು ನ್ಯಾಯಯುತ ನ್ಯಾಯದಾನದ ಬದ್ಧತೆ ಬೇಕು’’ ಎಂತಲೂ ಆದರ್ಶದ ಮಾತುಗಳನ್ನೂ ಆಡಿದ್ದಾರೆ. ಹಾಗೆ ನೋಡಿದಾಗ ಮೇಲಿನ ಎರಡೂ ವೈರುಧ್ಯದ ಹೇಳಿಕೆಗಳನ್ನು ಗಮನಿಸಿದರೆ, ಒಂದು ಕಡೆ ಅವರ ಕಾಳಜಿರಹಿತ ನಿರ್ಲಕ್ಷ್ಯದ ಹೇಳಿಕೆ ಮತ್ತೊಂದು ಕಡೆ ಕಾಳಜಿಯುಕ್ತವಾಗಿ ವ್ಯಕ್ತಪಡಿಸಿರುವ ಹೇಳಿಕೆ ಪರಸ್ಪರ ಢಿಕ್ಕಿ ಹೊಡೆಸಿಕೊಳ್ಳುವಂತಿವೆ!
ಇಲ್ಲಿ ಗಮನಿಸಬೇಕಾದುದು ವಿಷಯದ ಗಂಭೀರತೆ! ತಮ್ಮ ಭವಿಷ್ಯದ ಅಡಿಪಾಯವೇ ಆಗಿರುವ ನೀಟ್ ಹಾಗೂ ಎನ್‌ಟಿಎ ಪರೀಕ್ಷೆಗಳಲ್ಲಿ ಪಾರದರ್ಶಕತೆ ತರಬೇಕೆಂದು ಮತ್ತು ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ಆಶಯಗಳೊಂದಿಗೆ ವಿದ್ಯಾರ್ಥಿಗಳು ಹಾಗೂ ಯುವಜನರು ಅತ್ಯಂತ ಶಾಂತಿಯುತವಾಗಿ ಧ್ವನಿ ಎತ್ತಿದ್ದರು. ಆದರೆ, ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಆಗ್ರಹಿಸುತ್ತಿದ್ದ ಯುವಜನರ ಮೇಲೆ ನಡೆದ ದೌರ್ಜನ್ಯ, ಲಾಠಿಚಾರ್ಜ್, ಅಶ್ರುವಾಯು ಹಾಗೂ ವಾಟರ್ ಕೆನನ್ ಪ್ರಯೋಗದಂತಹ ಘಟನೆಗಳು ಇಡೀ ದೇಶದ ನಾಗರಿಕರನ್ನು ಅತ್ಯಂತ ತೀವ್ರವಾಗಿ ವಿಚಲಿತಗೊಳಿಸುವಂತಿದ್ದವು. ಎಳೆಯ ವಯಸ್ಸಿನ ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ದೃಶ್ಯಗಳು ಪ್ರತಿಯೊಬ್ಬ ಪೋಷಕರ ಹಾಗೂ ನಾಗರಿಕರ ಹೃದಯವನ್ನು ಹಿಂಡುವಂತಿರುವುದನ್ನು ಇಡೀ ದೇಶವೇ ವೀಕ್ಷಿಸಿದೆ. ಈ ಹಿನ್ನೆಲೆಯಲ್ಲಿ ಈ ದೇಶಕ್ಕೆ ನ್ಯಾಯಾಂಗವೇ ಅಂತಿಮ ಆಸರೆ ಎಂಬ ದೊಡ್ಡ ಭರವಸೆ ಎಲ್ಲರಲ್ಲೂ ಇತ್ತು.
ಆದರೆ, ಇಂತಹ ಸೂಕ್ಷ್ಮ ಹಾಗೂ ಯುವಜನರ ಜೀವ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ವಿಚಾರದಲ್ಲಿ ಸಾಕ್ಷ್ಯಗಳನ್ನು ವೀಕ್ಷಿಸಲು ಅಥವಾ ತುರ್ತು ವಿಚಾರಣೆ ನಡೆಸಲು ಸಮಯವಿಲ್ಲ ಎಂಬ ಕಾರಣ ನೀಡಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠ ತಡೆಹಿಡಿದಿರುವುದು ನಿಜಕ್ಕೂ ತುಂಬಾ ದುರದೃಷ್ಟಕರ.
ಪ್ರಜಾಪ್ರಭುತ್ವದ ಅತಿ ದೊಡ್ಡ ಶಕ್ತಿ ಹಾಗೂ ನಾಗರಿಕರ ಹಕ್ಕುಗಳ ಮೂಲ ಕಾವಲುಗಾರ ಅಂದರೆ ಅದು ನಮ್ಮ ನ್ಯಾಯಾಂಗ ವ್ಯವಸ್ಥೆ. ನ್ಯಾಯಾಲಯಗಳ ಮೇಲಿರುವ ಅಪಾರ ಗೌರವ ಮತ್ತು ಘನತೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಹೇಳುವುದಾದರೆ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ಯುವಜನರ ಧ್ವನಿಗೆ ಆದ್ಯತೆಯ ಮೇಲೆ ಸ್ಪಂದಿಸಬೇಕಾದ ಅವಶ್ಯಕತೆ ನ್ಯಾಯಾಲಯಕ್ಕೆ ಇತ್ತು. ಆದರೆ ಇಂದಿನ ದುರದೃಷ್ಟಕರ ಘಟನೆ ದೇಶದ ನಾಗರಿಕರಲ್ಲಿ ನ್ಯಾಯಾಂಗದ ಮೇಲಿನ ನಿರೀಕ್ಷೆಗಳನ್ನೇ ಕಳೆದುಕೊಳ್ಳುವಂತಿದೆ!
ದೇಶದ ರಾಜಧಾನಿ ದಿಲ್ಲಿಯ ಬೀದಿಗಳಲ್ಲಿ ನಡೆದ ಹೃದಯ ವಿದ್ರಾವಕ ಘಟನೆಗಳು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಮನಸ್ಸನ್ನು ತೀವ್ರವಾಗಿ ಕಲಕಿವೆ ಎಂಬುದಂತೂ ನಿಜ. ಹಾಗಾದರೆ ಈ ದೃಶ್ಯಗಳು ನ್ಯಾಯಮೂರ್ತಿಗಳ ಗಮನಕ್ಕೇ ಬಂದಿರಲಿಲ್ಲವೆ?
ಇಲ್ಲಿ ಚರ್ಚಿಸಬೇಕಾದುದು ನ್ಯಾಯಮೂರ್ತಿಗಳು ಅತ್ಯಂತ ನಿಷ್ಠುರರಾಗಿ ವಾಸ್ತವದ ಸತ್ಯಗಳಿಗೆ ಬೆನ್ನು ತಿರುಗಿಸಬೇಕೆ? ಅಥವಾ ನಿಷ್ಠುರ ನ್ಯಾಯ ನೀಡುವುದರೊಂದಿಗೆ ಮಾನವೀಯತೆಗೂ ಹೃದಯದ ಸ್ಪಂದನ ಬೇಕೆ? ಎಂಬುದು. ಭಾರತದ ನ್ಯಾಯಾಂಗದ ಇತಿಹಾಸದಲ್ಲಿ ಕಾನೂನಿನ ಜೊತೆಜೊತೆಗೆ ಮಾನವೀಯತೆಗೂ ಮಹತ್ವ ಕೊಟ್ಟ ನ್ಯಾಯಮೂರ್ತಿಗಳು ಬಹಳಷ್ಟು ಮಂದಿ ಇದ್ದಾರೆ. ಇವರು ತೀರ್ಪಿನಲ್ಲೂ ಕಾನೂನು ಮತ್ತು ಕರುಣೆಯನ್ನೂ ಏಕಕಾಲದಲ್ಲಿ ತೋರಿಸಿದವರಿದ್ದಾರೆ. ಅಂತಹವರಲ್ಲಿ ಜಸ್ಟಿಸ್ ವಿ.ಆರ್. ಕೃಷ್ಣ ಅಯ್ಯರ್ ಬಡವರ ವಕೀಲರಾಗಿ, ಬಡವರಿಗೆ ಉಚಿತ ಕಾನೂನು ನೆರವಿನ ಪರಿಕಲ್ಪನೆ ತಂದವರು. ಜೈಲಿನಲ್ಲಿರುವವರನ್ನು ‘ಮನುಷ್ಯ’ರಂತೆ ನೋಡಿದ ಮೊತ್ತಮೊದಲ ನ್ಯಾಯಮೂರ್ತಿ. (ಸುನಿಲ್ ಬಾತ್ರಾ vs ದಿಲ್ಲಿ ಆಡಳಿತ ಪ್ರಕರಣ)
ಇವರು ಬಳಸುವ ನ್ಯಾಯಾಂಗದ ಭಾಷೆ ಸಾಮಾನ್ಯ ಜನರಿಗೂ ಅರ್ಥವಾಗುತ್ತಿತ್ತು. ‘‘ಕಾನೂನು ಕಲ್ಲಿನ ಪ್ರತಿಮೆ ಅಲ್ಲ, ಬಡವರ ಕಣ್ಣೀರು ಒರೆಸುವ ಕರವಸ್ತ್ರ ಎಂಬುದು’’ ಜಸ್ಟಿಸ್ ಕೃಷ್ಣ ಅಯ್ಯರ್ ರವರ ಪ್ರಖ್ಯಾತ ಹೇಳಿಕೆ ಆಗಿತ್ತು.
ಜಸ್ಟಿಸ್ ಪಿ.ಎನ್. ಭಗವತಿಯವರು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿದ್ದು ಸಾರ್ವಜನಿಕ ಹಿತಾಸಕ್ತಿ ಮೊಕ್ಕದ್ದಮೆಯ(PIL) ಜನಕ ಎನ್ನಬಹುದು.
ಬಡವರು ನ್ಯಾಯಾಲಯಕ್ಕೆ ನೇರವಾಗಿ ಒಂದು ಪೋಸ್ಟ್ ಕಾರ್ಡ್ ಬರೆದರೂ ಸುಪ್ರೀಂ ಕೋರ್ಟ್ ವಿಚಾರಣೆ ಮಾಡುವ ವ್ಯವಸ್ಥೆಯನ್ನು ಆರಂಭಿಸಿದವರು. ಬಂಧಿತ ಕಾರ್ಮಿಕರ ವಿಮೋಚಕ ಅಂತಲೇ ಇವರು ಹೆಸರುವಾಸಿಯಾದವರು. ಮಹಿಳಾ ಹಕ್ಕುಗಳು, ವರದಕ್ಷಿಣೆ ಕಿರುಕುಳ, ಗೃಹ ಹಿಂಸೆ ವಿರುದ್ಧ ಕಠಿಣ ತೀರ್ಪುಗಳನ್ನು ನೀಡಿದವರಿವರು.
ಜಸ್ಟಿಸ್ ಎಚ್.ಆರ್. ಖನ್ನಾರವರು ತುರ್ತು ಪರಿಸ್ಥಿತಿಯಲ್ಲಿ ಜೀವಿಸುವ ಹಕ್ಕನ್ನು ಸಮರ್ಥಿಸಿದ ಏಕೈಕ ನ್ಯಾಯಮೂರ್ತಿ. ಉಳಿದ ನಾಲ್ಕು ಮಂದಿ ನ್ಯಾಯಮೂರ್ತಿಗಳು ಸರಕಾರದ ಪರ ತೀರ್ಪು ಕೊಟ್ಟರೆ ಜಸ್ಟಿಸ್ ಖನ್ನಾ ಅವರು ಸರಕಾರದ ವಿರುದ್ಧವೇ ನಿಂತು ಜನರ ಜೀವದ ಹಕ್ಕು ಕಾಪಾಡಿದರು. ಇದಕ್ಕಾಗಿ ಮುಖ್ಯನ್ಯಾಯಮೂರ್ತಿಯ ಸ್ಥಾನವನ್ನೇ ತ್ಯಾಗ ಮಾಡಿದರು. ಇವರೆಲ್ಲ ನ್ಯಾಯ ಎಂದರೆ ಕೇವಲ ಶಿಕ್ಷೆ ಅಲ್ಲ, ಅದು ಗಾಯಕ್ಕೆ ಹಚ್ಚಿದ ಮುಲಾಮಿನಂತೆ ಇರಬೇಕು ಎಂದು ನಂಬಿ ಪ್ರತಿಪಾದಿಸಿದವರು. ಇಂತಹ ಮಾನವೀಯ ನ್ಯಾಯಮೂರ್ತಿಗಳ ನೂರಾರು ಉದಾಹರಣೆಗಳಿವೆ.
ಹಾಗೆ ನೋಡಿದರೆ ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಬರೆದ ನಮ್ಮ ಸಂವಿಧಾನವೇ ಜೀವಪರವಾಗಿದೆ. ಯಾರಿಗೂ ಸೇರದ ರಸ್ತೆ ಬದಿಯ ಮರವೊಂದನ್ನು ಕಡಿದರೆ ಅವನಿಗೆ ಶಿಕ್ಷೆಯಾಗುತ್ತದೆ, ಯಾರ ಜಪ್ತಿಗೂ ಸಿಗದ ಜಿಂಕೆಯೊಂದನ್ನು ಕೊಂದರೆ ಆತ ಎಂತಹ ಸೆಲೆಬ್ರಿಟಿ ಆಗಿದ್ದರೂ ಆತ ಜೈಲಿಗೆ ಹೋಗುತ್ತಾನೆ. ಇಂತಹ ಕರುಣೆ, ಪ್ರೀತಿ, ಮಾನವೀಯತೆಯನ್ನು ನಮ್ಮ ಸಂವಿಧಾನವೇ ಪ್ರತಿಪಾದಿಸುತ್ತದೆ ಎಂದರೆ ನಮ್ಮ ಸಂವಿಧಾನದ ಆಧಾರದ ಮೇಲೆಯೇ ನಡೆಯುವ ನ್ಯಾಯಾಲಯಗಳಿಗೆ ಯಾಕೆ ಪ್ರೀತಿ, ಕರುಣೆ, ಮಾನವೀಯತೆಗಳ ಕಾಳಜಿಗಳು ಇರಬಾರದು?






