ವರ್ತಮಾನದ ಕರ್ನಾಟಕ: ಒಂದು ಮೆಲುಕು

20ನೇ ಶತಮಾನದ ಮುಕ್ಕಾಲು ಭಾಗ ‘ಮಾರ್ಗ’ ಪರಂಪರೆಯ ಮೈಲು ಗಲ್ಲುಗಳನ್ನು ನೆಡುತ್ತ ಬಂದರೂ, ಕಳೆದ 50 ವರ್ಷಗಳಲ್ಲಿ ಇನ್ನೊಂದು ಚಲನೆ ಗಮನಿಸಬೇಕು. ಇದನ್ನು ನಗಣ್ಯ ವಾಗಿದ್ದ ಜಾತಿಗಳ assertion ಎಂದು ಕರೆಯುವುದು ಸುಲಭ. ಆದರೆ ಇದು ಮೂಲತಃ ಅವಗಣನೆಗೆ ಗುರಿಯಾಗಿ ಸಾಂಸ್ಕೃತಿಕ ಅರಿವಿನಂಚಿನಲ್ಲಿದ್ದ ಸಮುದಾಯಗಳ assertion. ಈ ಕಾರಣಕ್ಕೇ ಅತ್ಯಂತ ಸ್ಥಳೀಯ ಧೀರೋದಾತ್ತ ವ್ಯಕ್ತಿಗಳೂ ದೊಡ್ಡ ಐಕಾನುಗಳಾಗಿ ಹೊಮ್ಮಿದ್ದಾರೆ.
ಶ್ರೀವಿಜಯ ಹೇಳುವ ಕಾವೇರಿಯಿಂದ ಗೋದಾವರಿ ವರೆಗಿನ ನಾಡಿನಲ್ಲಿ.. ‘‘ಭಾವಿಸಿದ ಜನಪದಂ’’ ಎಂಬುದು ಈ ನಾಡಿನೊಳಗಿರುವ ಮಂದಿ ಕನ್ನಡದವರೆಂದು ಕಲ್ಪಿಸಿಕೊಂಡ ಭಾಷ್ಯ. ಒಳಗೊಳ್ಳುವಿಕೆಗಿರುವ ಸಹಜಮನ್ನಣೆ ಇದು. ಆದರೆ ಇದು ಎರಡು ನದಿ ಪಾತ್ರಗಳ ಗೆರೆಗಳನ್ನು ಉಲ್ಲೇಖಿಸುತ್ತದೆ. ಅರ್ಥಾತ್ ಒಂದು ಸ್ಥಳೀಯ ಎಲ್ಲೆಗೆರೆಗಳನ್ನು ಗುರುತಿಸುತ್ತದೆ. ಸಾಮ್ರಾಜ್ಯಗಳನ್ನು ಗುರುತಿಸುವ ಬಗೆಯೂ ಹೀಗೆಯೇ. ಇದರಾಚೆಗಿನ ಜಗತ್ತಿನಲ್ಲಿ ನಮ್ಮ ಸ್ಥಾನ ಏನು?
ರಾಜ ಆಸ್ಥಾನದ ಶ್ರೀವಿಜಯ ಹೀಗೆ ಪರಿಭಾವಿಸಿದರೆ, ನಮ್ಮ ಜನಪದ ದನಿ ನೋಡುವ ಬಗೆ ಗಮನಿಸಿ
‘‘ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದಿ’’ ಎನ್ನುತ್ತಾನೆ ಈ ಕವಿ. ಇಡೀ ಭೂಮಂಡಲದ ಮಧ್ಯದಲ್ಲಿ ನಮ್ಮ ಕರ್ಣಾಟವಿದೆ. ಜಗತ್ತಿಗೇ ಕೇಂದ್ರ ಅಂದುಕೊಳ್ಳಿ. ಈ ಅರಿವು ಬಹು ಗಮನಾರ್ಹವಾದದ್ದು. ಇದು ಅರಿವೂ ಹೌದು, ಹೆಮ್ಮೆಯ assertion ಕೂಡಾ ಹೌದು.
ಈ ಕವನ ಮುಖ್ಯವಾಗುವುದು ಇನ್ನೊಂದು ಕಾರಣಕ್ಕೆ. ಈ ಕವಿ, ಕಾಳಿಂಗನೆಂಬ ಗೊಲ್ಲನ ಕತೆ ಹೇಳುವೆ ಎಂದು ನಮ್ಮನ್ನು ಮನ ಒಲಿಸಿ ಕಾವ್ಯದೊಳಗೆ ಸೆಳೆಯುತ್ತಾನೆ. ಆದರೆ ಈ ಕಾಳಿಂಗ ಮತ್ತೆಲ್ಲೂ ದಾಖಲಾಗುವುದೇ ಇಲ್ಲ! ಅಲ್ಲಿಂದ ಈ ಕವಿ, ದೇಶಕಾಲ ಮೀರಿದ ಮಹತ್ತರ ನೈತಿಕ ಅಂಶಗಳ ಬಗ್ಗೆ ಧ್ಯಾನಿಸುತ್ತಾನೆ. ಪುಣ್ಯಕೋಟಿಯ ಕತೆ ಅದು. ಇಲ್ಲಿ ಬರುವ ಹುಲಿ ಅರ್ಬುದ (ಅರ್ಬುದ ಎಂದರೆ ಆಧುನಿಕ ಅರ್ಥದಲ್ಲಿ ಕ್ಯಾನ್ಸರ್) ತನ್ನ ಪ್ರವೃತ್ತಿಯ ಆಹಾರ ತಿನ್ನುವವನೇ ಹೊರತು ಉದ್ದೇಶಪೂರ್ವಕ ಹಿಂಸೆಗಿಳಿವ ವಿಕೃತಿ ಇರುವವನಲ್ಲ. ಹುಲಿ ಹಸುವನ್ನು ತಿನ್ನಬೇಕು. ಅದು ಪ್ರಕೃತಿಯ ನಿಯಮ. ಇದರ ಹೊರತಾಗಿ ಈ ಹುಲಿಯಲ್ಲಿ ಕೆಡುಕಿಲ್ಲ. ಆದ್ದರಿಂದಲೇ ಕವನದ ಕೊನೆಗೆ ಅರ್ಬುದ ಪುಣ್ಯಕೋಟಿಯನ್ನು ‘‘ಎನ್ನ ಒಡಹುಟ್ಟಕ್ಕ ನೀನು’’ ಎನ್ನುತ್ತಾನೆ. ಈ ಕಾವ್ಯದಲ್ಲಿ ಹುಲಿ ಸಾಯುತ್ತದೆ. ಪುಣ್ಯಕೋಟಿ ಕಣ್ಣಿರು ಸುರಿಸುತ್ತಾ ಮರಳುತ್ತದೆ. ಆದರೆ ಈ ಕತೆ ಕೇಳಿದ ಮಕ್ಕಳು ಅರ್ಬುದ ಸಾಯುವುದನ್ನು ಒಪ್ಪದೇ ದುಃಖಿಸಿದ ನೂರು ಉದಾಹರಣೆಗಳಿವೆ.
(ನಾನು ಹಿಂದೊಮ್ಮೆ Transforming the Other through Non violent Means ಎಂಬ ಥೀಮಿನಡಿ ಪುಣ್ಯಕೋಟಿ, ಜೀಮೂತ ವಾಹನ ಮತ್ತು ಅಮ್ಟಸ್ ಸಲಾಮ್ ಅವರ ಕತೆಗಳನ್ನು ಹೆಣೆದು ಒಂದು ಪಠ್ಯ ಬರೆದಿದ್ದೆ.)
ಇದು ಕನ್ನಡದ ತಾತ್ವಿಕ ಜೀವದ್ರವ್ಯ. ತನ್ನ ಎದುರಾಳಿಯನ್ನೂ ಬದಲಾಯಿಸುವ ಬಗೆ. ಅದೂ ಕೇವಲ ನೈತಿಕ ಸ್ಥೈರ್ಯದಿಂದ. (ಸತ್ಯವೇ ನಮ್ಮ ತಾಯಿ ತಂದೆ. ಸತ್ಯವೇ ನಮ್ಮ ಬಂಧು ಬಳಗ.. ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು)
ಈ ನೈತಿಕ ಆದರ್ಶ ನಮ್ಮ ಮಹಾಕಾವ್ಯಗಳಲ್ಲಿ ಇಲ್ಲ. ಅಲ್ಲಿ ಗುರಿ ತಲುಪಲು ಯಾವ ಸಾಧನವಾದರೂ ಆದೀತು.
ಈ ಕಾಣ್ಕೆ ಕನ್ನಡದ ಕಾಣ್ಕೆ. singular moral compass. ಇದನ್ನು ಒಂದು ಒರೆಗಲ್ಲಾಗಿ ಇಟ್ಟುಕೊಂಡರೆ ಅದು ನಾಗರಿಕತೆಯ ಬುನಾದಿಯಾಗುತ್ತದೆ.A compass and anchor
ಇದು ಮೊದಲನೇ ಸೂಚಿ,
ಕರ್ನಾಟಕದ ಚರಿತ್ರೆ ಗಮನಿಸಿ, ಹತ್ತಾರು ಸಾಮ್ರಾಜ್ಯಗಳು ಕಾಲದ ಅವಧಿಯಲ್ಲಿ ಅವುಗಳ ದೇಶ ವ್ಯಾಪ್ತಿಯನ್ನು ನೋಡಿ. ಬೆಳೆದು ಪ್ರವರ್ಧಮಾನಕ್ಕೆ ಬಂದು ಅವನತಿಗೊಂಡ ಪಾಠ ಅದು. ಭರತನಿಗೆ ಕಂಡ ಸತ್ಯವನ್ನು ಕಾಲ ನಮಗೂ ಸದಾ ಹೇಳುತ್ತಾ ಬಂದಿದೆ. ಚರಿತ್ರೆಯನ್ನು ಓದುವ, ನೋಡುವ ಕ್ರಮದಲ್ಲಿ ಏಕಾಏಕಿ ಹೊಳೆವ ಸಂಗತಿ. ಇದು ಆದರೆ ನಾವು ಅದರಲ್ಲಿ ಸ್ವರ್ಣಯುಗವನ್ನು ಹುಡುಕುತ್ತಾ ಶಿಖರಗಳನ್ನು ಗುರುತು ಮಾಡುತ್ತಾ ಬಂದಿದ್ದೇವೆ. ಮಯೂರ ವರ್ಮ, ನೃಪತುಂಗ, ಕೃಷ್ಣ, ಇಮ್ಮಡಿ ಪುಲಿಕೇಶಿ, ಬಿಟ್ಟಿದೇವ, ಕೃಷ್ಣದೇವರಾಯ.. ಹೀಗೆ.
ಒಂದೂವರೆ ಶತಮಾನದ ಹಿಂದೆ ವಿಜಯನಗರ ಎಂಬ ಸಾಮ್ರಾಜ್ಯ ಇತ್ತು ಎಂಬ ಸ್ಮತಿಯೂ ಇರಲಿಲ್ಲ. ಹಾಳು ಹಂಪಿ ಒಂದೇ ಇದ್ದದ್ದು! ಅಶೋಕನೆಂಬ ಮಹಾನುಭಾವ ಇದ್ದ ಎಂಬ ಅರಿವೂ ಇರಲಿಲ್ಲ!
ಅಂದರೆ ಕಳೆದ ಶತಮಾನ ಮೂಲತಃ ನೆನಪುಗಳನ್ನು ಉಜ್ಜೀವಿಸುವ ಶತಮಾನ. ನಿಜವೋ ಕಲ್ಪನೆಯೋ ಅಂತೂ ಈ ಉದಾಹರಣೆಗಳ ಸೃಷ್ಟಿ ಮೂಲಕ ನಾವು ಗತವನ್ನು ಕಿರೀಟವಾಗಿ ಮಾಡಲೆತ್ನಿಸುತ್ತಾ ಬಂದಿರುವ ಕಾಲ ಇದು. ಈ ಹಪಾಹಪಿ ಹಿಂದೆ ಒಂದು ಸ್ವಪ್ರಜ್ಞೆಯ ನಿರ್ವಾತ ಇದೆ. ಇಡೀ ಕರ್ಣಾಟಕ್ಕೊಂದು ಅಸ್ಮಿತೆಯ ಹೆದ್ದಾರಿಯ ಮೈಲುಗಲ್ಲುಗಳು ಬೇಕೆನಿಸಿದೆ.
ಹಿಂದುತ್ವದ ಹಪಾಹಪಿಗೂ ಇದಕ್ಕೂ ಮೂಲಭೂತವಾಗಿ ಯಾವ ವ್ಯತ್ಯಾಸವೂ ಇಲ್ಲ. ಇದು ರಾಜಮಹಾರಾಜರ ವಿಜೃಂಭಣೆಯನ್ನು ಅಧಿಕೃತಗೊಳಿಸಿದ ಒಂದು ವಿಧ. ಕಳೆದ ಶತಮಾನದಲ್ಲಿ ಕನ್ನಡದ ಅಸ್ಮಿತೆಯನ್ನು ಪುನರು ಜ್ಜೀವನಗೊಳಿಸುವ ಯತ್ನದ ಕಾದಂಬರಿಗಳು ಮಾಡಿದ ಬಹುತೇಕ ಕೆಲಸಕ್ಕೂ ಹಿಂದುತ್ವದ ಧ್ಯಾನಕ್ಕೂ ಮೂಲ ಭೂತವಾಗಿ ವ್ಯತ್ಯಾಸ ಇಲ್ಲ.
ಇದರಲ್ಲೇ ಇನ್ನೊಂದು ವಿಧ್ವಂಸಕ ವ್ಯಂಗ್ಯವೂ ಇದೆ. 20ನೇ ಶತಮಾನದ ಮುಕ್ಕಾಲು ಭಾಗ ‘ಮಾರ್ಗ’ ಪರಂಪರೆಯ ಮೈಲು ಗಲ್ಲುಗಳನ್ನು ನೆಡುತ್ತ ಬಂದರೂ, ಕಳೆದ 50 ವರ್ಷಗಳಲ್ಲಿ ಇನ್ನೊಂದು ಚಲನೆ ಗಮನಿಸಬೇಕು. ಇದನ್ನು ನಗಣ್ಯ ವಾಗಿದ್ದ ಜಾತಿಗಳ assertionಎಂದು ಕರೆಯುವುದು ಸುಲಭ. ಆದರೆ ಇದು ಮೂಲತಃ ಅವಗಣನೆಗೆ ಗುರಿಯಾಗಿ ಸಾಂಸ್ಕೃತಿಕ ಅರಿವಿನಂಚಿನಲ್ಲಿದ್ದ ಸಮುದಾಯಗಳ assertion. ಈ ಕಾರಣಕ್ಕೇ ಅತ್ಯಂತ ಸ್ಥಳೀಯ ಧೀರೋದಾತ್ತ ವ್ಯಕ್ತಿಗಳೂ ದೊಡ್ಡ ಐಕಾನುಗಳಾಗಿ ಹೊಮ್ಮಿದ್ದಾರೆ.
ಇದಕ್ಕೊಂದು ಚಾರಿತ್ರಿಕ ಕೊಂಡಿ ಇದೆ. ಕುಲೀನ ಚರಿತ್ರೆಯಲ್ಲಿ ಚಕ್ರವರ್ತಿಗಳು, ದೇಗಲುಗಳು, ಶಿಲಾಶಾಸನಗಳು ನಮ್ಮ ಬೌದ್ಧಿಕ, ಭಾವನಾತ್ಮಕ ನಕಾಶೆ ತುಂಬಿದ್ದರೆ, ಜನಪದರು ಒಬ್ಬನೇ ಒಬ್ಬ ಚಕ್ರವರ್ತಿಯನ್ನು ತಾರೀಫು ಮಾಡಿದ ಉದಾಹರಣೆ ಇಲ್ಲ. ಅವರು ಅಜರಾಮರಗೊಳಿಸಿದ್ದು ಕುಮಾರ ರಾಮನನ್ನು, ಕೋಟಿ ಚನ್ನಯ್ಯರನ್ನು, ಸಂಗೊಳ್ಳಿ ರಾಯಣ್ಣನನ್ನು.
ಮೈಸೂರು ಅರಮನೆಯ ಆವರಣ ಗೋಡೆಯ ಮೇಲೆ ಇತ್ತೀಚೆಗೆ ದೊಡ್ಡದಾದ ಗೋಡೆ ಬರಹ ನೋಡಿದ್ದೆ. ‘ನಾಡಪ್ರಭು ಕೆಂಪೇಗೌಡ ಜಯಂತಿ’ ಅಂತ. ಮಹಾನ್ ಮೈಸೂರು ಸಾಮ್ರಾಜ್ಯದ ಒಬ್ಬ ಪುಟ್ಟ ಪಾಳೆಯಗಾರನಾಗಿದ್ದ ಕೆಂಪೇಗೌಡ 21ನೇ ಶತಮಾನದಲ್ಲಿ ಮೇರು ವ್ಯಕ್ತಿಯಾಗಿ ಬೆಳೆದು ನಿಂತ ಪ್ರಭೆಯಲ್ಲಿ ಮೈಸೂರು ರಾಜವಂಶವೂ ಕಳೆಗುಂದಿದ್ದು ಗಮನಿಸಬೇಕು. ಚಿತ್ರದುರ್ಗದ ನಾಯಕರಿಂದ ಹಿಡಿದು ಹತ್ತಾರು ಐಕಾನುಗಳು ಈ ಸಾಂಸ್ಕೃತಿಕ ಸ್ಪೇಸನ್ನು ಪಡೆದದ್ದು ಗಮನಿಸಬೇಕು.
ಈ ‘ಮಾರ್ಗ’ ಯಜಮಾನಿಕೆಗೆ ಎದುರಾಗಿ ಸ್ಫೋಟಿಸಿರುವ ದೇಸೀ ಸವಾಲು ನಾವು ಗಮನಿಸಬೇಕಾದ ಎರಡನೇ ಅಂಶ.
ಮೂರನೆಯದು ಜನಬದುಕಿನ ಸೂಜಿಗಲ್ಲು ಕೇಂದ್ರಗಳು. ಕಾಲ ದುದ್ದಕ್ಕೂ ಇವು ಉಳಿದು ಬಂದಿದ್ದವು.. ಉದಾ: ಯಾವ ಸಾಮ್ರಾಜ್ಯದ ರಾಜಧಾನಿಯಾಗಿರದಿದ್ದರೂ ಬೆಳಗಾವಿ ಸಾವಿರ ವರ್ಷ ಹಿಂದಿನಿಂದಲೂ ವ್ಯಾಪಾರ ವಹಿವಾಟಿನ ಕೇಂದ್ರವಾಗಿಯೇ ಇತ್ತು. ಅದೇ ರೀತಿಯಲ್ಲಿ ದಾವಣಗೆರೆ.
ಜನ ಸಮುದಾಯ ವ್ಯಾಪಾರ ಕೇಂದ್ರವಾಗಿ ಆಯ್ಕೆ ಮಾಡುವ ತಾಣಗಳು ಪ್ರಭುತ್ವದ ಶಕ್ತಿ ಕೇಂದ್ರಗಳಾಗಿದ್ದದ್ದು ಅಪರೂಪ. ಜೇನು ತಾನು ಬಯಸಿದಲ್ಲಿ ಗೂಡು ಕಟ್ಟಿದ ಹಾಗೆ ಈ ಮಾರುಕಟ್ಟೆಗಳು ಬೆಳೆದಿವೆ. ಪ್ರಭುತ್ವ ಅದನ್ನು ಕಬ್ಜಾ ಮಾಡಿರಬಹುದು.
ನಾಲ್ಕನೆಯ ಅಂಶ ಒಂದು ಕಾಲದಲ್ಲಿ ದಖ್ಖಣದ ದ್ವಾರವಾಗಿದ್ದ ಸಮೃದ್ಧಿಯ ತಾಣವಾಗಿದ್ದ ಕಲ್ಯಾಣ ಕರ್ನಾಟಕ ಇಂದು ರೋಗಗ್ರಸ್ತ ವಾಗಿರುವ ಪರಿ. ಆಧುನಿಕ ಅಭಿವೃದ್ಧಿ ಮೀಮಾಂಸೆಯ ಬುನಾದಿಯಾದ ನೀರಾವರಿಯೇ ಇಲ್ಲಿ ದೊಡ್ಡ ಕಂದರವನ್ನು ಸೃಷ್ಟಿಸಿದೆಯಷ್ಟೆ. ಉಳಿದ ಒಣ ಪ್ರದೇಶ ಇಲ್ಲಿನ ಜನರನ್ನು ದಾರಿದ್ರ್ಯದ ತಳತಳಕ್ಕೆ ತಳ್ಳುತ್ತಾ ದಿಕ್ಕೆಟ್ಟ ಈ ನತದೃಷ್ಟರು ಬಲುದೊಡ್ಡ ವಲಸೆಗಾರರಾಗಿ ರೂಪಾಂತರಗೊಂಡ ದುರಂತ ನಮ್ಮ ವರ್ತಮಾನವನ್ನು ಕಾಡಬೇಕು.
ಕರ್ನಾಟಕದ ಸಹಜ ವಿಕಾಸದಲ್ಲಿ ಹೀಗೊಂದು ನೈತಿಕ ಕಾಣ್ಕೆ, ರಾಜ ವೈಭವೀಕರಣದ ವಿರುದ್ಧ ಸೃಷ್ಟಿಸಿದ ಜನ ಚರಿತ್ರೆ, ಸಹಜ ಓಘದಲ್ಲಿ ಸೃಷ್ಟಿಸಿದ ಮಾರುಕಟ್ಟೆ ಕೊಡುಕೊಳ್ಳುಗಳ ಹೆಜ್ಜೆ ಗತಿ, ಸಮೃದ್ಧಿಯ ಪ್ರದೇಶವೊಂದು ದಾರಿದ್ರ್ಯದ ರೂಪಕವಾದದ್ದನ್ನು ಮನಸ್ಸಿಗಿಳಿಸಿಕೊಂಡು ಇವು ಈ ಆಧುನಿಕ ಘಟ್ಟದಲ್ಲಿ ಏನಾಗಿದೆ ಎಂದು ನೋಡಬೇಕಿದೆ.
ಪುಣ್ಯಕೋಟಿಯ ಮೂಲಕ ಕಾಣಿಸಿದ ಕಾಣ್ಕೆ ಸಂಪೂರ್ಣ ಅಳಿಸಿ ಹೋದಂತಿದೆ. ಕಲ್ಯಾಣದ ಬಡತನಕ್ಕೆ ಬಿಡುಗಡೆ ಕಾಣಿಸುತ್ತಿಲ್ಲ.
ಕರ್ಣಾಟಕ್ಕೇ ಅಸಹಜವಾದ ಮತೀಯ ದ್ವೇಷದ ರಾಜಕಾರಣವೊಂದು ಕನ್ನಡದ ಮಜ್ಜೆಯೊಳಗೆ ನುಸುಳಿದಂತಿದೆ. ಸ್ಥಳೀಯ ಜನ ನಾಯಕರ ಸೃಷ್ಟಿಯ ಪ್ರಭಾವಳಿಯನ್ನೂ spectacle ಆಗಿ ರೂಪಾಂತರಿಸಲಾಗಿದೆ. ಪ್ರಭುತ್ವ ತನಗೆ ಬೇಕಾದಲ್ಲಿ ಉತ್ಪಾದನೆ, ಮಾರುಕಟ್ಟೆಯನ್ನು ಹೇರುವ ಯಜಮಾನಿಕೆ ತೋರುತ್ತಿದೆ.
ಶರಣರ ಬಹುದೊಡ್ಡ ಸಮತೆ, ನೈತಿಕ ಕಾಣ್ಕೆ, ಶ್ರಮ ಗೌರವದ ಅಭಿಯಾನವನ್ನು ಪುನರುಜ್ಜೀವನಗೊಳಿಸುವ ಯತ್ನಗಳೂ ಪ್ರದರ್ಶನದ ತೋರುಗಾಣಿಕೆಯಾಗಿ ಕಂಡು ಬರುತ್ತಿದೆ. ಇದರ ಮುಂದುವರಿಕೆಯಾಗಿ ಬೌದ್ಧಿಕ ಧೀರೋದಾತ್ತತೆಯನ್ನು ಕಾಣಿಸಿದ ಕುವೆಂಪು ಅವರ ಕಾಣ್ಕೆಯೂ ನಿತ್ಯ ರಾಜಕಾರಣದಲ್ಲಿ ಮಸುಕಾದಂತಿದೆ.
ಗೈ ದಿಬೋ ಎಂಬ ಎಡಪಂಥೀಯ ಚಿಂತಕ ಈ ಕುಸಿತವನ್ನು ದೃಶ್ಯ ವೈಭವ (spectacle) ಎಂದು ಕರೆಯುತ್ತಾನೆ.
ಅಂದರೆ ಅರ್ಥಪೂರ್ಣವಾದ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ದೂರ ತಳ್ಳಿ ಆ ಜಾಗವನ್ನು ಪ್ರತಿಮೆಗಳು, ಪ್ರದರ್ಶನಗಳು ಆವರಿಸಿಕೊಳ್ಳುವುದು. ಈ ಚಾರಿತ್ರಿಕ ಅಧಃಪತನವನ್ನು ಬಂಡವಾಳಶಾಹಿ ರಾಜಕಾರಣ ನಿರ್ದೇಶಿಸಿದೆ. ನಾವು ಯಾವ ವಸ್ತು ವಿಶೇಷ ಹೊಂದಿದ್ದೇವೆ ಎಂಬಲ್ಲಿಂದ ನಾವು ಹೇಗೆ ಕಾಣಿಸುತ್ತಿದ್ದೇವೆ (appearance) ಎಂಬ ಭ್ರಾಂತಿಯನ್ನು ಪ್ರದರ್ಶಿಸುವಲ್ಲಿಗೆ ತಂದು ನಿಲ್ಲಿಸಿದೆ.
ವಿಭಜಕ ಹಿಂದುತ್ವದ ನಂಜು ಈ ಮಾದರಿಗೆ ಭಡ್ತಿ ಹೊಂದಿದೆ. ಸ್ಥಳೀಯತೆಯ ಭಾವನಾತ್ಮಕ ಪ್ರಸ್ತುತಿಯೂ ಇದೇ ಮೂಲದಿಂದ ಮೆರೆಯಬೇಕಾಗುತ್ತದೆ. ಅಭಿವೃದ್ಧಿಯ ಸೂಚಿಯೇ ಕೆಲವರ ಸಂಪತ್ಸಮೃದ್ಧಿಯ ವೈಭವೀಕರಣವಾಗಿದೆ. ತಮಿಳು ದಲಿತ ಚಿಂತಕ ರವಿಕುಮಾರ್ ಅವರು ಹೇಳುವ ಹಾಗೆ, ಈ ಹಂತದಿಂದಾಚೆ ಎಲ್ಲರೂ ಪ್ರೇಕ್ಷಕರೇ, ನಮ್ಮ ಪಾತ್ರವೂ ನಾವೇ ನೋಡಿ ತೃಪ್ತಿ ಪಡುವ ಪೋಸ್ಟುಗಳ ಪ್ರದರ್ಶನಗಳಷ್ಟೆ.
(ಲೇಖಕರು ವಿಮರ್ಶಕ ಮತ್ತು ಸಾಮಾಜಿಕ ಕಾರ್ಯಕರ್ತ)






