ಶೋಷಿತರಿಗಾಗಿ ಬದುಕು ಮೀಸಲಿಟ್ಟ ಕುದ್ಮುಲ್ ರಂಗರಾವ್

ಕರ್ನಾಟಕ ಕರಾವಳಿ ಭಾಗದ ಮಂಗಳೂರು ಮತ್ತು ಉಡುಪಿ ಪ್ರದೇಶಗಳಲ್ಲಿ ಕ್ರಿ.ಶ. 1800ರ ಸುಮಾರಿನಲ್ಲಿ ಸವರ್ಣೀಯರ ಆಚಾರ ವಿಚಾರ, ಮಡಿವಂತಿಕೆ,ಬ್ರಾಹ್ಮಣ ಸಂಸ್ಕಾರಗಳು ಮನೆ ಮಾಡಿತ್ತು. ಸಮಾಜದಲ್ಲಿ ಹಲವಾರು ಅನಿಷ್ಟ ಆಚರಣೆಗಳಾದ ಜಾತಿ ಪದ್ಧತಿ, ಅಸ್ಪಶ್ಯತೆ ಆಚರಣೆ, ಜಮೀನ್ದಾರಿ ಪದ್ಧತಿ, ಜೀತ ಪದ್ಧತಿ ದಲಿತರ (ಅಸ್ಪಶ್ಯರ) ಮೇಲೆ ಹೇರಲ್ಪಡುತ್ತಿದ್ದವು. ಮತ್ತೊಂದು ಕಡೆ ದಲಿತರು ಮೂಕ ಪ್ರೇಕ್ಷಕರಾಗಿ ಸವರ್ಣೀಯರ ಆಚರಣೆಗಳನ್ನು ಪಾಲಿಸುತ್ತಿದ್ದರು. ಅವರಲ್ಲಿ ಇದ್ದ ಅನಕ್ಷರತೆ, ಬಡತನ, ಮುಂತಾದವುಗಳಿಂದ ಜೀವನ ತುಂಬ ದುಸ್ತರವಾಗಿತ್ತು. ಅಂತಹ ಸಮಯದಲ್ಲಿ ದಲಿತರ ಆಶಾಕಿರಣವಾಗಿ, ಸಮಾಜ ಸುಧಾರಕರಾಗಿ ಹುಟ್ಟಿದ್ದು ಕುದ್ಮುಲ್ ರಂಗರಾವ್ ಎಂಬ ದೈತ್ಯ ಸಮಾಜ ಸುಧಾರಕ. ಇವರು ಅಂದಿನ ಮಂಗಳೂರಿನ ಕುದ್ಮುಲ್‌ಎಂಬ ಸಣ್ಣ ಹಳ್ಳಿಯಲ್ಲಿ 29-06-1859ರಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿ ದೇವಪ್ಪಯ್ಯ ಮತ್ತು ಗೌರಿ ಇವರ ಮಗನಾಗಿ ಹುಟ್ಟಿದರು. ಮೂಲತಃ ಬ್ರಾಹ್ಮಣ ಸಮಾಜದಲ್ಲಿ ಜನಿಸಿದ ರಂಗರಾವ್ ಅವರು ಹಿಂದೂ ಸಮಾಜದ ಪದ್ಧತಿಯನ್ನು ನೋಡಿ ಬೆಳೆದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ಬರುತ್ತಾರೆ. ನಂತರ ಶಿಕ್ಷಕರಾಗಿ ಎಂಟು ರೂಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರುತ್ತಾರೆ. ತರುವಾಯ ಪತ್ರವ್ಯವಹಾರ ಕೋರ್ಸ್ ಮುಗಿಸಿಕೊಂಡು ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ಇವರು ತಮ್ಮ ವಕೀಲಿ ಸೇವೆಯನ್ನು ಬಡವರಿಗೆ, ದೀನ ದಲಿತರಿಗೆ ಉಚಿತವಾಗಿ ನೀಡುತ್ತಿದ್ದರು. ಭೂಮಿ ಮತ್ತು ಇತರ ವ್ಯಾಜ್ಯಗಳನ್ನು ಉಚಿತವಾಗಿ ಮಾಡಿಕೊಡುತ್ತಾರೆ. ಇದರಿಂದಾಗಿ ಸಮಾಜದಲ್ಲಿ ಅವರನ್ನು ‘ಬಡವರ ವಕೀಲ’ ಎಂದು ಕರೆಯಲಾಗುತ್ತಿತ್ತು. ಅಂತಹ ಸಮಯದಲ್ಲಿ ಮಂಗಳೂರು ಪ್ರಾಂತದಲ್ಲಿ ದಲಿತರು ನಿಕೃಷ್ಟ ಜೀವನ, ಅಸ್ಪಶ್ಯತೆ ಆಚರಣೆ, ಸಾಮಾಜಿಕ ಬಹಿಷ್ಕಾರ ಮುಂತಾದವುಗಳಿಂದ ಬಡತನದಲ್ಲಿ ಜೀವನ ಸಾಗಿಸುತ್ತಿರುವುದನ್ನು ಕುದ್ಮುಲ್ ಅವರು ನೋಡಿ ಮಮ್ಮಲ ಮರುಗಿದರು. ನಂತರ ಮೊಟ್ಟಮೊದಲ ಬಾರಿಗೆ 1897ರಲ್ಲಿ ಮಂಗಳೂರಿನ ಚಿಲಿಂಬಿ ಎಂಬಲ್ಲಿ ಹುಲ್ಲು ಛಾವಣಿಯ ಮನೆಯನ್ನು ಬಾಡಿಗೆಗೆ ಪಡೆದು ದಲಿತರ ಮಕ್ಕಳಿಗೆ ಶಾಲೆಯನ್ನು ಪ್ರಾರಂಭಿಸಿದರು. ಸಾಮಾಜಿಕ ಸಂಪರ್ಕ ಕಾಣದ ದಲಿತ ಕುಟುಂಬಗಳನ್ನು ಕಾಲನಿಗಳಲ್ಲಿ ಭೇಟಿ ಮಾಡಿ ಅವರ ಮನೆಯಲ್ಲಿ ಊಟ ಮಾಡಿ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರೇರೇಪಿಸಿದರು. ಮೊದಲು ನಾಲ್ಕು ಮಕ್ಕಳನ್ನು ನೋಂದಾಯಿಸಿ ಶಾಲೆ ಪ್ರಾರಂಭಿಸಿ ಒಬ್ಬ ಶಿಕ್ಷಕರನ್ನು ನೇಮಿಸಿದರು. ಇದನ್ನು ಕಂಡ ಸವರ್ಣೀಯರು ಕುದ್ಮುಲ್‌ರ ಜೊತೆಗೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳಿಗೆ ಹಲವಾರು ತೊಂದರೆಗಳನ್ನು ಕೊಟ್ಟರು. ಶಾಲೆಗೆ ಬರುವ ಮಕ್ಕಳು ದಾರಿಯನ್ನು ಹಾಳು ಮಾಡಿದರು. ಶಾಲೆಯ ಬಾಗಿಲಿಗೆ ಕಸ ಕಡ್ಡಿ, ಮಲಮೂತ್ರವನ್ನು ಸುರಿದರು. ಶಿಕ್ಷಕರಿಗೆ ಶಾಲೆ ಬಿಡುವಂತೆ ಮಾಡಿದರು. ಪೋಷಕರಿಗೆ ಬೆದರಿಕೆಗಳನ್ನು ಹಾಕಿದರು. ಸ್ವತ ಕುದ್ಮುಲ್‌ರನ್ನು ಸಮಾಜದಿಂದ ಬಹಿಷ್ಕರಿಸಿದರು. ಕುದ್ಮುಲ್ ರಂಗರಾವ್ ಅವರು ಇದ್ಯಾವುದಕ್ಕೂ ಹೆದರದೆ ತಾಳ್ಮೆಯಿಂದ ಸಹಿಸಿಕೊಳ್ಳುತ್ತಿದ್ದರು. ಯಾವತ್ತೂ ಸವರ್ಣಿಯರ ಬಗ್ಗೆ ಯಾವುದೇ ಕೋಪ ಮಾಡದೆ ಅವರ ಬಗ್ಗೆ ಪ್ರೀತಿಯನ್ನು ತೋರುತ್ತಿದ್ದರು. ತೊಂದರೆಗಳು ಹೆಚ್ಚಾದಾಗ ಶಾಲೆಯನ್ನು ಮುಚ್ಚುವುದು ಅನಿವಾರ್ಯವಾಯಿತು. ನಂತರ ಕೆಥೊಲಿಕ್ ಕ್ರಿಶ್ಚಿಯನ್ನರ ಮನೆ ಬಾಡಿಗೆ ಪಡೆದು ಶಾಲೆ ಪುನಾರಂಭಿಸಿದರು. 1897ರ ಹೊತ್ತಿಗೆ ಮಂಗಳೂರಿನ ಕಂಕನಾಡಿಯಿಂದ ಪ್ರಾರಂಭಿಸಿ ಬೋಳಾರ್, ಉಡುಪಿ ಪ್ರದೇಶಗಳು ಸೇರಿದಂತೆ 20 ಪಂಚಮ ಶಾಲೆಗಳನ್ನು ಶುರುಮಾಡಿದರು. ಕುದ್ಮುಲ್‌ರ ಜೀವನದ ಬಹುದೊಡ್ಡ ಆಸೆ ತನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಹುಡುಗ ಸರಕಾರಿ ಕೆಲಸಕ್ಕೆ ಸೇರಿ ಊರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು, ಆಗ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನ್ನನ ಜನ್ಮ ಸಾರ್ಥಕ ಎಂದು ಉದ್ಗರಿಸಿದ್ದರು.
1897ರಲ್ಲಿ Depressed classes mission (DCM) ಅನ್ನು ಪ್ರಾರಂಭಿಸಿ ತಮ್ಮ ಎಲ್ಲಾ ಸಮಾಜ ಸುಧಾರಣಾ ಕಾರ್ಯಗಳನ್ನು ಒಂದೇ ಸೂರಿನಡಿಯಲ್ಲಿ ತಂದ ಕುದ್ಮುಲ್‌ರು ಕೈಗಾರಿಕಾ ಶಿಕ್ಷಣದ ಜೊತೆಗೆ ತರಬೇತಿ ಶಿಕ್ಷಣವನ್ನು ಪ್ರಾರಂಭಿಸಿದರು. ಮಂಗಳೂರಿನ ಶೇಡಿ ಗುಡ್ಡೆಯ ಕೋರ್ಟ್ ಗುಡ್ಡದ ಇಳಿಜಾರು ಪ್ರದೇಶದಲ್ಲಿ ಮೊಟ್ಟ ಮೊದಲು ವೃತ್ತಿ ಶಿಕ್ಷಣವನ್ನು ನೀಡಲು ಕೈಗಾರಿಕಾ ತರಬೇತಿ ಶಿಕ್ಷಣ ಶಾಲೆಗಳನ್ನು ಪ್ರಾರಂಭಿಸಿದರು. ಸಂಜೆ ವೇಳೆಗೆ ಮಕ್ಕಳಿಗೆ ಪ್ರಾರ್ಥನೆ, ಭಜನೆ ಮತ್ತು ಉತ್ತಮ ಸಂಸ್ಕಾರವನ್ನು ಕಲಿಸುತ್ತಿದ್ದರು. ಇದಕ್ಕಾಗಿ ಭಜನಾ ಮಂದಿರಗಳನ್ನು ಶುರುಮಾಡಿದರು. ಬಡತನದಲ್ಲಿ ಜೀವನ ನಡೆಸಲು ಕಷ್ಟವಾದಾಗ ದಲಿತರಿಗೆ ತಮ್ಮ ಮಕ್ಕಳನ್ನು ದುಡಿಸಬೇಕಾಯಿತು. ಇದರಿಂದ ಶಾಲೆಯ ಹಾಜರಾತಿಯು ಕುಸಿಯುತ್ತಿರುವುದನ್ನು ಕಂಡು ಕುದ್ಮುಲ್‌ರು ಹಾಜರಾತಿಯನ್ನು ಹೆಚ್ಚಿಸಲು ಪ್ರೋತ್ಸಾಹ ಧನವಾಗಿ ಉತ್ತಮ ಮಕ್ಕಳ ಪೋಷಕರಿಗೆ ಎರಡು ರೂಪಾಯಿ ಸಹಾಯಮಾಡುತ್ತಿದ್ದರು. ಅಲ್ಲದೆ ಮಧ್ಯಾಹ್ನದ ಊಟವನ್ನು ಕೊಡುತ್ತಿದ್ದರು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿ ನಿಲಯ ಪ್ರಾರಂಭಿಸಿದರು. ಪೋಷಕರಿಗೆ ಸ್ವಾಲಂಬನೆಯ ಜೀವನ ನಡೆಸಲು ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದರು. ಉದಾಹರಣೆಗೆ ಬುಟ್ಟಿ ಹೆಣೆಯುವುದು, ನೂಲು ತೆಗೆಯುವುದು, ಮರಗೆಲಸ, ಕಸೂತಿ, ಚಾಪೆ ಮಾಡುವುದು, ರೇಷ್ಮೆ ಸಾಕಣೆ ಮಾಡಲು ಪ್ರೋತ್ಸಾಹಿಸಿದರು. ಇದರಿಂದ ಶಾಲೆಯ ಹಾಜರಾತಿ ಹೆಚ್ಚಾಗುತ್ತಿತ್ತು. ಈ ಮೂಲಕ ದಲಿತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಕಾರಣರಾದರು.
ಪಂಚಮ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳನ್ನು ಶಾಲೆಯ ಶಿಕ್ಷಕರಾಗಿ ನೇಮಿಸುತ್ತಿದ್ದರು. ಇದರಿಂದ ಉದ್ಯೋಗ ಅವಕಾಶವನ್ನು ಮಾಡಿಕೊಡುತ್ತಿದ್ದರು. ಅವರಲ್ಲಿ ಪ್ರಮುಖರೆಂದರೆ ಮುಂಡಪ್ಪ ಮಾಸ್ತರ್, ಬೆಂದೂರು ಬಾಬು ಮಾಸ್ತರ್, ಬ್ಯಾರಿಪಳ್ಳ ಅಂಗಾರ ಮಾಸ್ತರ್, ಪುಟ್ಟ ಮಾಸ್ತರ್, ಬಸವ ಮಾಸ್ತರ್ ಕಾಪಿಕಾಡ್ ಪೆದು ಮಾಸ್ತರ್, ಗುರುವ ಮಾಸ್ತರ್, ಜೆ.ಬಾಬು ಮಾಸ್ತರ್, ಉಳ್ಳಾಲ ಕೊರಗ ಮಾಸ್ತರ್, ಯು.ಕೋಟಿ ಮಾಸ್ತರ್, ಉಡುಪಿ ಗೋವಿಂದ ಮಾಸ್ತರ್ ಮುಂತಾದವರು. ಹೈಸ್ಕೂಲ್ ಸೇರಿದ ಪ್ರಮುಖರಲ್ಲಿ ಬಿ. ಚಂದ್ರಶೇಖರ್, ಉಡುಪಿ ರಾಮಕೃಷ್ಣ ಮತ್ತು ಉದ್ಯಾವರದ ರಾಮಚಂದ್ರ ಪ್ರಮುಖರಾಗಿದ್ದಾರೆ. ಶಾಲೆಗೆ ಶಿಕ್ಷಕರಾಗಿ ಸೇರಿದ ಗೋವಿಂದ ಮಾಸ್ತರ್ ಸುದೀರ್ಘ 18 ವರ್ಗಗಳ ಕಾಲ ಪಂಚಮ ಶಾಲೆಯಲ್ಲಿಯೇ ಮುಖ್ಯ ಶಿಕ್ಷಕರಾಗಿ ಸೇವೆಸಲ್ಲಿಸಿದ್ದರು. ಗೋವಿಂದರು ಅಸ್ಪಶ್ಯತೆ ನಿವಾರಣಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಜೊತೆಗೆ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂಬುದು ವಿಶೇಷ. ಇದರಿಂದ ಕುದ್ಮುಲ್‌ರ ಬಗ್ಗೆ ಅರ್ಥವಾಗುವುದೆಂದರೆ ದಲಿತರ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ಧರಾಗಿದ್ದರು ಎಂಬುದು. ಗರ್ಭಿಣಿಯರಿಗೆ ಅನುಕೂಲ ಮಾಡಿಕೊಡಲು ಗೋಮತಿ ಅಮ್ಮ ಎಂಬ ಪ್ರಸೂತಿ ಫಂಡ್ ಸ್ಥಾಪಿಸಿದರು. ಬಾಣಂತಿಯರಿಗೆ 6 ತಿಂಗಳ ಕಾಲ 10 ಕೆಜಿ ಅಕ್ಕಿ ಮತ್ತು ಎರಡು ಸೀರೆಗಳನ್ನು ಕೊಡುತ್ತಿದ್ದರು. ಡಾ. ಅಡಪ ಮತ್ತು ಡಾ. ಶೆಟ್ಟಿ ಇವರ ಜೊತೆ ಮಾತಾಡಿ ಬಾಣಂತಿಯರಿಗೆ ಆರು ತಿಂಗಳ ಕಾಲ ಉಚಿತ ವೈದ್ಯಕೀಯ ಸೇವೆಯನ್ನು ಪಡೆಯಲು ಅನುವು ಮಾಡಿ ಕೊಟ್ಟಿದ್ದರು. ಕುದ್ಮುಲ್‌ರು ತಮ್ಮ ವಕೀಲ ವೃತ್ತಿಯಿಂದ ಬಂದಂತಹ ಹಣದಿಂದ ಒಬ್ಬ ಕ್ರಿಶ್ಚಿಯನ್ ಮಹಿಳೆಯಿಂದ 13.5 ಎಕರೆ ಭೂಮಿ ಖರೀದಿಸಿ ಸುಮಾರು 27 ಕುಟುಂಬಗಳಿಗೆ ಅಂದಿನ ಕಾಲದಲ್ಲಿ ತಲಾ 1/2 ಎಕರೆಯಂತೆ ಭೂಮಿ ಹಂಚಿದರು. ಇದರಲ್ಲಿ ಸರಕಾರದ ಮಟ್ಟದಲ್ಲಿ ಹೋರಾಟ ಮಾಡಿ ಬಗರ್ ಹುಕುಂ ಸಾಗುವಳಿ ದರ್ಕಾಸು ಭೂಮಿ, ಗೋಮಾಳ ಭೂಮಿ ಮತ್ತು ವಸತಿ ನಿವೇಶನಗಳನ್ನು ನಿರ್ಮಿಸಿ ಕೊಡಲು ಸಹಾಯ ಮಾಡಿದರು. ದಲಿತರಿಗೆ ಆರ್ಥಿಕವಾಗಿ ಸಹಾಯವಾಗಲೆಂದು 40 ಆದಿ ದ್ರಾವಿಡ ಸಹಕಾರ ಸಂಘಗಳನ್ನು ಸ್ಥಾಪಿಸಿದರು. ನಗರವಾಸದ ಅನುಭವವೇ ಇಲ್ಲದ ದಲಿತ ಗೋವಿಂದ ಮಾಸ್ತರ್ ಮಂಗಳೂರು ಪುರಸಭೆಯ ಸದಸ್ಯರಾಗಿಸಲು ಕಾರಣರಾದರು. ಅಂಗಾರ ಎಂಬ ಮತ್ತೋರ್ವ ದಲಿತನನ್ನು ಮಂಗಳೂರು ಜಿಲ್ಲಾ ಆಡಳಿತ ಮಂಡಳಿಯ ಸದಸ್ಯರನ್ನಾಗಿಸಿದರು. ತಾವು ವಕೀಲಿ ಕೆಲಸ ಮಾಡುತ್ತಿದ್ದ ಕೋರ್ಟ್ ನಲ್ಲಿ ಮುಖ್ಯ ನ್ಯಾಯಾಧೀಶರಿಗೆ ವಿನಂತಿಸಿಕೊಂಡು ದಲಿತ ವ್ಯಕ್ತಿಗೆ ಉದ್ಯೋಗ ಕೊಡಿಸಿದ್ದರು. ನ್ಯಾಯಾಧೀಶರು ತಾನು ಹುದ್ದೆಯಲ್ಲಿ ಇರುವ ತನಕ ಅವಕಾಶ ಮಾಡುತ್ತೇನೆ, ನಂತರ ಬೇರೆಯವರು ಬಂದಾಗ ಕೆಲಸದಿಂದ ಹೊರ ಹೋಗಬೇಕು ಎಂದರು. ಕಾರಣ ಈ ವ್ಯಕ್ತಿಯು ದಲಿತ ಎಂಬ ಕಾರಣಕ್ಕೆ. ಇದನ್ನು ಕೇಳಿದ ಕುದ್ಮುಲ್‌ರು ನೊಂದುಕೊಂಡರು. ಸರಕಾರಿ ಉದ್ಯೋಗದಲ್ಲಿ ಈ ರೀತಿ ಆದರೆ ತಾನು ವಕೀಲ ವೃತ್ತಿ ಮಾಡುವುದು ಸರಿಯಲ್ಲ ಎಂದು ತಿಳಿದು ತಮ್ಮ ವಕೀಲ ವೃತ್ತಿಯನ್ನು ಬಿಟ್ಟರು.
ಅಂತರ್ ಜಾತಿ ವಿವಾಹ ಮತ್ತು ವಿಧವಾ ವಿವಾಹವನ್ನು ಮಾಡಿಸುತ್ತಿದ್ದರು. ವಿಧವೆಯರಿಗಾಗಿ ಆಶ್ರಮಗಳನ್ನು ನಡೆಸುತ್ತಿದ್ದರು. ಸಮ ಸಮಾಜದ ನಿರ್ಮಾಣಕ್ಕೆ ಬುನಾದಿಯಾಗಿ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ತಮ್ಮ ಸ್ವಂತ ವಿಧವೆ ಮಗಳನ್ನು ಬೇರೆ ಸಮುದಾಯಕ್ಕೆ ಸೇರಿದ ಚೆನ್ನೈ ಮೂಲದವರಾದ ಡಾ. ಸುಬ್ಬರಾವ್ ಅವರಿಗೆ ಪುನರ್ವಿವಾಹ ಮಾಡಿಸಿದರು. ಒಟ್ಟಾರೆಯಾಗಿ ಹೇಳುವುದಾದರೆ ತಮ್ಮ ಇಡೀ ಜೀವನವನ್ನು ದಲಿತರ ಉದ್ಯೋಗಕ್ಕೆ ಮೀಸಲಾಗಿಟ್ಟಿದ್ದರು.
ಕುದ್ಮುಲ್‌ರಿಗೆ ವಯೋಸಹಜದಿಂದ ಆರೋಗ್ಯ ಕುಗ್ಗಿಹೋಗಿತ್ತು. ಆಗ ತಮ್ಮ ಬಳಿ ಇದ್ದ ಎಲ್ಲ ಚರ-ಸ್ಥಿರ ಆಸ್ತಿಯನ್ನು, ಶಿಕ್ಷಣ ಸಂಸ್ಥೆಗಳನ್ನು ಸೇರಿದಂತೆ ಎಲ್ಲವನ್ನು 1924ರಲ್ಲಿ ಗೋಪಾಲ ಕೃಷ್ಣ ಘೋಕುಲೆ ಅವರು ಮುನ್ನಡೆಸುತ್ತಿದ್ದ ಸರ್ವೇನ್ಟ್ಸ್ ಆಫ್ ಇಂಡಿಯಾ ಸೊಸೈಟಿಗೆ ವರ್ಗಾಯಿಸಿದರು. ತರುವಾಯ ಬ್ರಹ್ಮ ಸಮಾಜ ಮತ್ತು ಆರ್ಯ ಸಮಾಜದ ಅನುಯಾಯಿಯಾಗಿದ್ದ ಕುದ್ಮುಲ್‌ರು 1924ರಲ್ಲಿ ಆರ್ಯ ಸಮಾಜದ ದಯಾನಂದ ಸರಸ್ವತಿ ಅವರ ಶಿಷ್ಯ ರಾಗಿದ್ದ ಸುವಿಚಾಲನಂದರಿಂದ ಕೇರಳದಲ್ಲಿ ಸನ್ಯಾಸ ದೀಕ್ಷೆ ಪಡೆದು ಈಶ್ವರಾನಂದ ಎಂದು ನಾಮಕರಣಗೊಂಡರು.
ಕುದ್ಮುಲ್ ರಂಗರಾವ್ ಅವರು ವಯೋ ಸಹಜ ಕಾರಣಗಳಿಂದ 30 ಜನವರಿ 1928ರಂದು ಮರಣಿಸುತ್ತಾರೆ. ತಮ್ಮ ಉಯಿಲಿನಲ್ಲಿ ‘‘ನನ್ನ ನಿಧನದ ನಂತರ ನನ್ನ ದಲಿತ ಜನಾಂಗದ ಜಾಡುಮಾಲಿ ಸಮುದಾಯದವರು ನನ್ನ ಅಂತ್ಯಸಂಸ್ಕಾರವನ್ನು ನೆರವೇರಿಸಬೇಕು’’ ಎಂದು ಬರೆದುಕೊಂಡಿದ್ದರು. ಉಯಿಲನ್ನು ತೆರೆದ ಅಳಿಯ ಸುಬ್ಬರಾಯರು ಕುದ್ಮುಲ್‌ರ ಕೊನೆ ಆಸೆಯಂತೆ ಜಾಡುಮಾಲಿ ಸಮುದಾಯಕ್ಕೆ ಅಂತ್ಯಸಂಸ್ಕಾರವನ್ನು ನೆರೆವೇರಿಸಲು ಅನುವುಮಾಡಿಕೊಟ್ಟರು. ಇವರ ಪಾರ್ಥಿವ ಶರೀರವನ್ನು ಮಂಗಳೂರಿನ ಬಾಬುಗುಡ್ಡೆಯ ಬ್ರಹ್ಮ ಸಮಾಜದ ರುದ್ರ ಭೂಮಿಯಲ್ಲಿ ನೆರವೇರಿಸಲಾಯಿತು.






