Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬಯಲ ಬುತ್ತಿ
  5. ಭಾಷೆಯೆಂಬ ಅರಿವಿನ ಕಣ್ಣು

ಭಾಷೆಯೆಂಬ ಅರಿವಿನ ಕಣ್ಣು

ಡಾ. ಮೀನಾಕ್ಷಿ ಬಾಳಿಡಾ. ಮೀನಾಕ್ಷಿ ಬಾಳಿ30 Sept 2025 10:30 AM IST
share
ಭಾಷೆಯೆಂಬ ಅರಿವಿನ ಕಣ್ಣು

ಸಂಸ್ಕೃತವೇ ಶ್ರೇಷ್ಠ, ಅದನ್ನು ಬಲ್ಲವರು ದೇವಮಾನವರು ಎಂದು ನಂಬಿಸಲಾಗಿದ್ದ ಕುತಂತ್ರವನ್ನು ಸಾಮಾನ್ಯ ಕೂಲಿ ವರ್ಗದಿಂದ ಬಂದಿದ್ದ ನಗೆಮಾರಿತಂದೆ ಧಿಕ್ಕರಿಸಿದ್ದಾನೆ. ಸಂಸ್ಕೃತದಲ್ಲಿ ಮಂತ್ರ ಹೇಳಿದರೆ ಮಾತ್ರ ದೇವರು ಒಲಿಯುತ್ತಾನೆ ಎಂಬ ಭ್ರಮೆಯಿಂದ ಎಲ್ಲಕ್ಕಿಂತ ಹೆಚ್ಚಾಗಿ ಸಂಸ್ಕೃತ ಕಲಿಯುವುದು ಪೂರ್ವ ಜನ್ಮದ ಸುಕೃತ ಎಂದು ನಂಬಿದ್ದ ಮುಗ್ಧರಲ್ಲಿ ಎಚ್ಚರವನ್ನು ಮೂಡಿಸುತ್ತಾನೆ.

‘‘ಕಲ್ಲಿಯ ಹಾಕಿ ನೆಲ್ಲವ ತುಳಿದು

ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ.

ವಾಗದ್ವೈತವ ಕಲಿತು

ಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು

ಮತ್ಸದ ವಕ್ತ್ರದಲ್ಲಿ ಗ್ರಾಸವ ಹಾಕುವಂತೆ

ಅದೇತೆ ನುಡಿ ಮಾತಿನ ಮರೆ

ಆತುರವೈರಿ ಮಾರೇಶ್ವರಾ’’

ಇದು 12ನೇ ಶತಮಾನದಲ್ಲಿ ಬಾಳಿದ್ದ ನಗೆಮಾರಿತಂದೆಯ ವಚನ. ಬಸವಣ್ಣನವರ ಸಮಕಾಲೀನನಾಗಿದ್ದ ಈತನ ಕಾಲವನ್ನು ಕ್ರಿ.ಶ 1160 ಎಂದು ಅಂದಾಜಿಸಲಾಗಿದೆ. ಕುಂಬಾರ ಮನೆತನದಲ್ಲಿ ಜನಿಸಿದ್ದ ಈತ ನಗಿಸುವುದನ್ನೇ ಕಾಯಕ ಮಾಡಿಕೊಂಡಿದ್ದನಂತೆ. ಆತುರವೈರಿ ಮಾರೇಶ್ವರ ಅಂಕಿತದಲ್ಲಿ 99 ವಚನಗಳು ಸಿಕ್ಕಿವೆ. ಈತನ ಬಗೆಗೆ ಕೆಲವು ಊಹೆಗಳನ್ನು ಬಿಟ್ಟರೆ ಹೆಚ್ಚಿನ ಚಾರಿತ್ರಿಕ ಸಂಗತಿಗಳು ಉಪಲಬ್ಧವಾಗಿಲ್ಲ. 12ನೇ ಶತಮಾನದ ಈ ಶರಣ ಚಳವಳಿಯು ಸನಾತನ ವೈದಿಕ ವ್ಯವಸ್ಥೆಯ ವಿರುದ್ಧ ತಲಸ್ಪರ್ಶಿ ಆಂದೋಲನಕ್ಕೆ ಎಡೆ ಮಾಡಿಕೊಟ್ಟಿತ್ತಾದ್ದರಿಂದ ಸನಾತನಿಗಳು ಇಡೀ ಚಳವಳಿಯನ್ನೇ ಮಣ್ಣು ಮುಕ್ಕಿಸುವ ದುಷ್ಟ ಕಾರ್ಯಾಚರಣೆಗೆ ಇಳಿದು ಜನತೆಯ ದಿಕ್ಕುತಪ್ಪಿಸುತ್ತಿರುವುದು ಇನ್ನೂ ಮುಂದುವರಿದಿದೆ. ಶರಣರು ಚಾರಿತ್ರಿಕ ವ್ಯಕ್ತಿಗಳಾಗಿದ್ದರೂ ಚರಿತ್ರೆಯಲ್ಲಿ ಅವರು ದಾಖಲಾಗಿಲ್ಲ..

ಶರಣರು ವ್ಯವಸ್ಥೆಯ ಕ್ರೌರ್ಯಕ್ಕೆ ಸೊಪ್ಪು ಹಾಕದೆ ತಮ್ಮ ಕ್ರಾಂತಿಕಾರಿ ನಿಲುವುಗಳನ್ನು ನಿರ್ಭಿಡೆಯಿಂದ ವ್ಯಕ್ತಿಸಿದ್ದರು. ಮೇಲಿನ ವಚನ ಅಂಥದ್ದೊಂದು ನಿಲುವಿನ ಕನ್ನಡಿಯಾಗಿ ಗೋಚರಿಸುತ್ತದೆ. ಸಂಸ್ಕೃತ ಭಾಷೆಯ ಮೂಲಕ ಧಾರ್ಮಿಕ ಲೋಕವನ್ನು ಗುತ್ತಿಗೆ ಹಿಡಿದುಕೊಂಡಿದ್ದ ಪುರೋಹಿತ ವರ್ಗದ ಮೋಸ, ವಂಚನೆಗಳನ್ನು ನಗೆಮಾರಿತಂದೆ ಎಗ್ಗಿಲ್ಲದೆ ಖಂಡಿಸುತ್ತಾನೆ. ಹಾಗೆಯೇ ಯಾವುದೇ ಭಾಷೆಗೆ ಮೇಲರಿಮೆ, ಕೀಳರಿಮೆ ಇರುವುದಿಲ್ಲ. ಅಂತೆಯೇ ಶ್ರೇಷ್ಠ-ಕನಿಷ್ಠ ಎಂಬುದೂ ಇರುವುದಿಲ್ಲ. ಶುದ್ಧ, ಅಶುದ್ಧ, ಸರಿ-ತಪ್ಪು ಇತ್ಯಾದಿಗಳೂ ಇರುವುದಿಲ್ಲ. ಅವೆಲ್ಲವೂ ವ್ಯಾಕರಣ ಪಂಡಿತರ ವ್ಯಾಧಿಗಳೇ ಹೊರತು ಭಾಷೆಯನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಂಡು ಬದುಕುತ್ತಿರುವ ಜನರದ್ದಲ್ಲ. ಭಾಷೆಯ ಮೂಲ ಉದ್ದೇಶ ಸಂವಹನ ಮತ್ತು ವ್ಯವಹಾರ ಸುಭಗತೆ. ಒಟ್ಟಿನಲ್ಲಿ ಅದು ಲೋಕ ದಂದುಗವನ್ನು ಮನುಷ್ಯ ಸಂಬಂಧಗಳ ಪಾತಳಿಯಲ್ಲಿ ಶೋಧಿಸುವತ್ತ ಸಾರ್ಥಕ್ಯ ಪಡೆದುಕೊಳ್ಳುತ್ತದೆ.

ಜನಸಮುದಾಯಗಳು ತಮ್ಮ ದೀರ್ಘಕಾಲೀನ ನಡೆಯಲ್ಲಿ ಆವಿಷ್ಕರಿಸಿಕೊಂಡಿರುವ ಭಾಷೆಗಳು ಅಧಿಕಾರ ಕೇಂದ್ರದೊಂದಿಗೆ ಲಗತ್ತಾದೊಡನೆ ಇನ್ನಿಲ್ಲದ ಸಂಘರ್ಷಗಳು, ಸಾಮುದಾಯಿಕ ಬೇಗುದಿಗಳು ಶುರುವಾಗುತ್ತವೆ. ಆಗ ಭಾಷೆಯು ಶಕ್ತಿ ಪ್ರಯೋಗದ ಅಸ್ತ್ರವಾಗುತ್ತದೆ. ಸಾಂಸ್ಕೃತಿಕ ರಾಜಕಾರಣದ ದಾಳವಾಗಿ ಚಲನಗೊಳ್ಳತೊಡಗುತ್ತದೆ. ಹೀಗಾದೊಡನೆಯೇ ಭಾಷೆಗಳು ಹೇರಿಕೆಯ ಸಂಗತಿಗಳಾಗಿ ಅವುಗಳನ್ನು ಬಳಸುತ್ತಿರುವ ಜನತೆಯ ಬದುಕಿಗೆ ಕುತ್ತಾಗಿ ಪರಿಣಮಿಸುತ್ತವೆ. ಭಾಷೆಯ ರಾಚನಿಕ ಸ್ವರೂಪ, ಅವುಗಳ ತಾತ್ವಿಕ ಸಾಧ್ಯತೆ, ದಾರ್ಶನಿಕ ಉಪಲಬ್ಧಿ ಇತ್ಯಾದಿಗಳು ಇನ್ನೊಂದೆಡೆ ಇವೆ. ಭಾಷೆಯ ದಾರ್ಶನಿಕತೆ ಕುರಿತು ಕಾವ್ಯ ಮೀಮಾಂಸಕರು ದೀರ್ಘವಾಗಿಯೇ ಚರ್ಚಿಸಿದ್ದಾರೆ. ಅದು ಇಲ್ಲಿ ಅಪ್ರಸ್ತುತ. ನಗೆಮಾರಿತಂದೆಯು ಭಾಷೆಯ ಚಾರಿತ್ರಿಕ ನಡೆಗಳನ್ನು ಕುರಿತು ಆಲೋಚನೆ ಹರಿಸುತ್ತಾನೆ. ಭಾರತದ ಅತ್ಯಂತ ಪುರಾತನ ಭಾಷೆಗಳಲ್ಲೊಂದಾದ ಸಂಸ್ಕೃತವು ದಕ್ಷಿಣ ಭಾರತದ ದ್ರಾವಿಡ ಭಾಷೆಗಳ ಮೇಲೆ ಮಾಡಿದ ಸವಾರಿ ಮತ್ತು ಒತ್ತುವರಿಯ ಕುರಿತು ಆತ ಉಗ್ರವಾಗಿಯೇ ಖಂಡಿಸುತ್ತಾನೆ.

ಇವತ್ತಿಗೂ ಸಂಸ್ಕೃತವೇ ದೇವಭಾಷೆ ಮತ್ತು ಅದುವೇ ಶ್ರೇಷ್ಠ ಎಂಬ ವ್ಯಸನವನ್ನು ಮೂಡಿಸಲಾಗಿದೆಯಷ್ಟೇ. ದೇವಸ್ಥಾನ, ಮನೆ, ಮಠಗಳಲ್ಲಿ ಪೂಜೆಗಳು ನಡೆಯುವುದು ಸಂಸ್ಕೃತದಲ್ಲಿಯೇ. ವೇದ, ಆಗಮ, ರಾಮಾಯಣ, ಮಹಾಭಾರತಗಳು ಸಂಸ್ಕೃತದಲ್ಲಿಯೇ ಸೃಷ್ಟಿಯಾಗಿವೆ. ಆದ್ದರಿಂದ ಸಂಸ್ಕೃತವೂ ಅತ್ಯಂತ ಪವಿತ್ರ. ಸಂಸ್ಕೃತದ ಮುಖೇನ ಮಾತ್ರ ಎಲ್ಲ ಆಚಾರ, ವಿಚಾರ, ಸಂಪ್ರದಾಯ, ಪರಂಪರೆಗಳು ನಡೆದುಕೊಂಡು ಬರಬೇಕು. ಸಂಸ್ಕೃತಕ್ಕೆ ಮಾತ್ರ ದೇವವಾಣಿಯಾಗುವ ಸಾಮರ್ಥ್ಯ ಮತ್ತು ಅಧಿಕಾರ ಇದೆ ಎಂದೇ ಬಿಂಬಿಸಿಕೊಂಡು ಬರಲಾಗಿತ್ತಷ್ಟೇ. ಅದನ್ನೇ ನಗೆಮಾರಿತಂದೆ ಪ್ರಶ್ನಿಸುತ್ತಾನೆ. ಸಂಸ್ಕೃತ ಮಂತ್ರಗಳನ್ನು ಪಠಿಸುತ್ತ ಎಲ್ಲದಕ್ಕೂ ಶಬ್ದ ಪ್ರಮಾಣ ಅಂದರೆ ವೇದ ಪ್ರಮಾಣವನ್ನೇ ಮಾನ್ಯ ಮಾಡುತ್ತಿದ್ದ ವೈದಿಕರ ಬೂಟಾಟಿಕೆಯನ್ನು ಕಂಡು ಕನಲುವ ನಗೆಮಾರಿತಂದೆ, ಸಂಸ್ಕೃತದ ಈ ಚಾಳಿಯು ಬಲೆಯಲ್ಲಿ ನೆಲ್ಲು ಎಸೆದು ಗುಬ್ಬಿಯನ್ನು ಸಿಕ್ಕಿಸುವ ಕಳ್ಳನಂತೆ ಘೋರವಾದುದು ಎಂದು ವಿಡಂಬಿಸಿದ್ದಾನೆ. ಸಂಸ್ಕೃತವು ಕಳ್ಳರ ಭಾಷೆ ಎಂದು ಹೇಳುವಲ್ಲಿ ಆತನಿಗಿರುವ ಧೈರ್ಯವನ್ನು ಕಂಡು ಆಶ್ಚರ್ಯವಾಗದಿರದು. ಇಲ್ಲಿ ಭಾಷೆಯಾಗಿ ಸಂಸ್ಕೃತದ ಸಮಸ್ಯೆ ಇಲ್ಲ. ಆ ಭಾಷೆಯನ್ನು ಗುತ್ತಿಗೆ ಹಿಡಿದ ವೈದಿಕರ ದುಷ್ಟತನವೇ ಸಮಸ್ಯೆ ಎನ್ನುತ್ತಾನೆ ನಗೆಮಾರಿತಂದೆ. ಅಂದು ವೈದಿಕರಿಗಲ್ಲದೆ ಶೂದ್ರಾದಿಗಳಿಗೆ ಸಂಸ್ಕೃತ ಬಳಸುವ ಅಧಿಕಾರವಿರಲಿಲ್ಲ. ಸನಾತನಿಗಳ ವೈದಿಕ ಸಾಹಿತ್ಯವನ್ನು ಅಭ್ಯಸಿಸುವ, ಅಷ್ಟೇ ಏಕೆ ತಪ್ಪಿಯೂ ಶ್ಲೋಕಗಳನ್ನು ಕೇಳಿಸಿಕೊಳ್ಳುವ ಅಧಿಕಾರವಿರಲಿಲ್ಲ. ಇದಕ್ಕೆ ಪುರಾವೆಯಾಗಿ ಪ್ರಾಚೀನ ಕಾವ್ಯಗಳನ್ನು ಪರಾಂಬರಿಸಬೇಕು. ಭವಭೂತಿ, ಶೂದ್ರಕ, ಕಾಳಿದಾಸಾದಿ ಪ್ರಾಚೀನ ಕವಿಗಳು ಬರೆದ ಕೃತಿಗಳಲ್ಲಿ ವಿಶೇಷವಾಗಿ ನಾಟಕಗಳಲ್ಲಿ ರಾಜ, ಮಹಾರಾಜರು, ಪುರೋಹಿತ, ಪಂಡಿತರು ಸಂಸ್ಕೃತದಲ್ಲಿ ಸಂಭಾಷಿಸಿದರೆ ಚೇಟಿ, ದ್ವಾರಪಾಲಕ, ಸಾರಥಿ, ಸೇವಕ ಮುಂತಾದ ಪಾತ್ರಗಳು ಪ್ರಾಕೃತದಲ್ಲಿ ಮಾತಾಡುತ್ತವೆ. ಶೂದ್ರ ಪಾತ್ರಗಳು ಸಂಸ್ಕೃತವನ್ನು ಬಳಸಿಲ್ಲ. ಇದು ಆ ಕಾಲದ ಕಟ್ಟಳೆ ಆಗಿರಲಿಕ್ಕೂ ಸಾಕು. ಅಷ್ಟೇ ಏಕೆ ಮಧ್ಯಕಾಲೀನ ಕರ್ನಾಟಕದಲ್ಲಿ ಶಿವಶರಣರು ಕಾಣಿಸಿಕೊಳ್ಳುವವರೆಗೂ ವೈದಿಕ ಕವಿಗಳು ಕನ್ನಡದಲ್ಲಿ ಕಾವ್ಯ ರಚಿಸಿಲ್ಲ ಎಂಬುದನ್ನು ಗಮನಿಸಬೇಕು. ಇವತ್ತಿಗೂ ಧಾರ್ಮಿಕ ಲೋಕದಲ್ಲಿ ಸಂಸ್ಕೃತದ್ದೇ ಮೇಲುಗೈ ಇದೆಯಲ್ಲವೇ? ಅದರ ಬುಡ ಬೇರು ತಿಳಿಯದಿದ್ದರೂ ಪೂಜೆ ಮಾತ್ರ ಸಂಸ್ಕೃತದಲ್ಲಿಯೇ ಆಗಬೇಕು. ಅಂದಾಗಲೇ ಸಮಾಧಾನ. ಭಾರತೀಯರು ಅದೆಷ್ಟು ಸಾಂಸ್ಕೃತಿಕ ದಾಸ್ಯದಲ್ಲಿ ಬಿದ್ದು ಬಳಲುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ.

ಅದನ್ನೇ ಟೀಕಿಸುವ ನಗೆಮಾರಿತಂದೆ ಸೂಕ್ತವಾದ ಉಪಮೆಗಳೊಂದಿಗೆ ತನ್ನ ವಾದವನ್ನು ಮಂಡಿಸುತ್ತಾನೆ. ತಿಳಿಯದ ಭಾಷೆಯಲ್ಲಿ ತಿಳಿಯದ ವಿಷಯಗಳನ್ನು ಮಂಡಿಸುವುದರ ಮೂಲಕ ಜನರಲ್ಲಿ ದೈವ-ದೇವರುಗಳ ಬಗೆಗೆ ಭಯ ಮೂಡಿಸುವ ಉದ್ದೇಶವಿದ್ದಂತಿದೆ. ಇದೇ ಮಾತನ್ನು ಆತ ಇನ್ನೊಂದು ಸಾಮತಿ ಮೂಲಕ ಸ್ಪಷ್ಟ ಪಡಿಸುತ್ತಾನೆ. ಮತ್ಸ್ಯದ ವಕ್ತ್ರದಲ್ಲಿ ಗಾಳ ಅಂದರೆ ಮೀನು ಹಿಡಿಯಲು ಗಾಳ ಹಾಕುವುದು ಎಂದರ್ಥ. ಮೀನು ಗಾಳಕ್ಕೆ ಬೀಳಿಸಲು ಅದಕ್ಕೊಂದು ಸಣ್ಣ ಹುಳ ಕಟ್ಟಲಾಗುತ್ತದೆ. ಹುಳದ ಆಸೆಗೆ ಬಂದ ಮೀನು ಗಾಳಕ್ಕೆ ಸಿಕ್ಕು ಹಿಡಿದವನ ಬಾಯಿಗೆ ಗ್ರಾಸವಾಗುತ್ತದೆ. ಸಾಮಾನ್ಯ ಜನರನ್ನು ಅದರಲ್ಲಿಯೂ ದುಡಿಯುವ ಜನರನ್ನು ಮೋಸ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿರುವ ಪುರೋಹಿತ ವರ್ಗ ಪಾಪ, ಪುಣ್ಯಗಳ ಆಸೆ ತೋರಿಸಿ ಗುಬ್ಬಿ, ಮೀನುಗಳನ್ನು ಹಿಡಿದು ತಿನ್ನುವುದು ಇದೆಯಲ್ಲ ಇದರಷ್ಟು ನಾಜೂಕಿನ ಕ್ರೂರತನ ಇನ್ನೊಂದಿಲ್ಲ. ಅದ್ಭುತ ಉಪಮೆಗಳಿವು. ಸಾಮಾನ್ಯ ಜನರನ್ನು ಗುಬ್ಬಿ, ಮೀನುಗಳಿಗೆ ಹೋಲಿಸಿದ್ದು ಅತ್ಯಂತ ಸಮಯೋಚಿತ. ಬೇಟೆಗಾರ, ಗಾಳ ಹಾಕುವವರನ್ನು ಪುರೋಹಿತಶಾಹಿಗೆ ಹೋಲಿಸಿದ ಈ ಉಪಮೆಗಳು ಅರ್ಥ ಪರಂಪರೆಗಳ ಸರಮಾಲೆಯನ್ನೆ ಸೃಷ್ಟಿಸಿವೆ. ಮಾಲೋಪಮೆಗೆ ಸೂಕ್ತ ಉದಾಹರಣೆ.

ಗುಬ್ಬಿಗೆ ನೆಲ್ಲು, ಮೀನಿಗೆ ಹುಳ ಆಸೆ ಮಾತ್ರವಲ್ಲ ಅನಿವಾರ್ಯವೂ ಹೌದು. ಅವುಗಳ ಆಹಾರವದು. ಆಹಾರದ ಬಯಕೆಯೇ ತಪ್ಪೆನ್ನಲಾದೀತೆ? ನೆಲ್ಲಿಲ್ಲದೆಯೂ ನಿಸರ್ಗದಲ್ಲಿ ಸಿಗುವ ಹಣ್ಣು, ಹಂಪಲು ತಿಂದು ಬದುಕುವ ಗುಬ್ಬಿ, ಹುಳ ಸಿಗದಿದ್ದರೂ ನೀರಿನಲ್ಲಿ ದೊರೆಯುವ ಜಲಚರಗಳನ್ನು ತಿಂದು ಬದುಕುವ ಮೀನುಗಳಿಗೆ ಆಮಿಷವೊಡ್ಡಿದ ವ್ಯವಸ್ಥೆ ಇದೆಯಲ್ಲ. ಈ ವ್ಯವಸ್ಥೆಯ ಕ್ರೌರ್ಯ ಬರಿಗಣ್ಣಿಗೆ ಕಾಣಿಸದು. ಪುರೋಹಿತ ವರ್ಗವು ಆಳುವ ವರ್ಗದೊಂದಿಗೆ ಕೈ ಜೋಡಿಸಿ ಪಾಪ, ಪುಣ್ಯ, ದೇವರು-ಧರ್ಮಗಳ ಆಮಿಷಕ್ಕೆ ಒಡ್ಡಿ ಜನರನ್ನು ಆಪೋಷನ ತೆಗೆದುಕೊಳ್ಳುತ್ತದೆ. ದೇವರು ಧರ್ಮಗಳನ್ನು ಗುತ್ತಿಗೆ ಹಿಡಿಯಲೆಂದೇ ಸನಾತನಿಗಳು ಸಂಸ್ಕೃತ ಪಸರವನ್ನು ಮುಂದೊಡ್ಡಿದ್ದಾರೆ. ‘ಪಸರ’ ಎಂಬ ಪದ ಇಲ್ಲಿ ಧ್ವನಿಪೂರ್ಣವಾಗಿ ಅವತರಿಸಿದೆ. ಪಸರ ಎಂದರೆ ಪರಿಕರ, ನಾಟಕ, ಹಗರಣ, ಏನೆಲ್ಲ ಆಗಬಹುದು. ವೈದಿಕ ಪಂಡಿತರು ವಾಗದ್ವೈತವೆಂಬ ಪಸರವೊಡ್ಡಿದ್ದಾರೆ. ಮಾತಿನಲ್ಲಿ ಅದ್ವೈತ, ಆಚರಣೆಯಲ್ಲಿ ದ್ವೈತ. ಮಾತಿನಲ್ಲಿ ‘ಸರ್ವಂ ಖಲ್ವಿದಂ ಬ್ರಹ್ಮಂ’ ಅಂದರೆ ಎಲ್ಲವೂ ಬ್ರಹ್ಮಂ ಸ್ವರೂಪಿ ಎನ್ನುತ್ತಲೇ ಶೂದ್ರರಿಗೆ ದೇವರನ್ನು ಪೂಜಿಸುವ ಹಕ್ಕಿಲ್ಲ. ಅಸ್ಪಶ್ಯರನ್ನು ಮುಟ್ಟಿಸಿಕೊಳ್ಳದೆ ಅಪಮಾನಿಸುವುದು ಇವೆಲ್ಲ ಸಾಂಗೋಪಾಂಗವಾಗಿ ನಡೆಯುತ್ತವೆ. ಇಂಥ ಎರಡು ತಲೆಯ ವಿಷಕಾರಿ ಹಾವುಗಳು ಎಲ್ಲೆಲ್ಲೂ ಸಂಸ್ಕೃತವೆಂಬ ಅಸ್ತ್ರವಿಡಿದುಕೊಂಡು ಆಟಾಟೋಪ ನಡೆಸಿದ್ದನ್ನು ಕಂಡೇ ನಗೆಮಾರಿತಂದೆಯು ಅದೇ ತರ ನುಡಿ ಮಾತಿನ ಮರೆ ಮೋಸ ಎಂದಿದ್ದಾನೆ. ಸಂಸ್ಕೃತವೇ ಶ್ರೇಷ್ಠ, ಅದನ್ನು ಬಲ್ಲವರು ದೇವಮಾನವರು ಎಂದು ನಂಬಿಸಲಾಗಿದ್ದ ಕುತಂತ್ರವನ್ನು ಸಾಮಾನ್ಯ ಕೂಲಿ ವರ್ಗದಿಂದ ಬಂದಿದ್ದ ನಗೆಮಾರಿತಂದೆ ಧಿಕ್ಕರಿಸಿದ್ದಾನೆ. ಸಂಸ್ಕೃತದಲ್ಲಿ ಮಂತ್ರ ಹೇಳಿದರೆ ಮಾತ್ರ ದೇವರು ಒಲಿಯುತ್ತಾನೆ ಎಂಬ ಭ್ರಮೆಯಿಂದ ಎಲ್ಲಕ್ಕಿಂತ ಹೆಚ್ಚಾಗಿ ಸಂಸ್ಕೃತ ಕಲಿಯುವುದು ಪೂರ್ವ ಜನ್ಮದ ಸುಕೃತ ಎಂದು ನಂಬಿದ್ದ ಮುಗ್ಧರಲ್ಲಿ ಎಚ್ಚರವನ್ನು ಮೂಡಿಸುತ್ತಾನೆ.

ಇಂದು ಭಾರತದ ಅನೇಕ ಪ್ರಾಚೀನ ಭಾಷೆಗಳಂತೆ ಸಂಸ್ಕೃತವೂ ಮೃತ ಭಾಷೆಯಾಗಿದೆ. ಯಾರೂ ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಸಂಸ್ಕೃತ ಬಳಸುವುದಿಲ್ಲ. ಅದು ಯಾವತ್ತೂ ಪಂಡಿತ, ಪುರೋಹಿತರ, ಪ್ರಭುತ್ವದ ಭಾಷೆಯಾಗಿಯೇ ನಡೆದುಕೊಂಡು ಬಂದಿದೆ. ಸಂಸ್ಕೃತ ನಿಜಕ್ಕೂ ಆದರಣೀಯ ಭಾಷೆ ಎಂಬುದರಲ್ಲಿ ಎರಡು ಮಾತಿಲ್ಲ. ಜನ ಬಳಕೆಯಿಂದ ದೂರವಿಟ್ಟ ವೈದಿಕರೇ ಇಂದು ಅದನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಮುಂದಾಗಿದ್ದು ವಿಪರ್ಯಾಸ. ಅಂದು ಶೂದ್ರರನ್ನು, ಮಹಿಳೆಯರನ್ನು ವೇದಾಧ್ಯಯನಗಳಿಂದ ದೂರವಿಟ್ಟವರೇ ಇಂದು ಎಲ್ಲರಿಗಾಗಿ ವೇದಶಾಲೆಗಳು, ಗುರುಕುಲಗಳನ್ನು ತೆಗೆಯಲು ಮುಂದಾಗುತ್ತಿದ್ದಾರಲ್ಲದೆ, ಹೊಸ ಶಿಕ್ಷಣ ನೀತಿಯಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸುವ ಹುನ್ನಾರು ನಡೆಸುತ್ತಿದ್ದಾರೆ. ನಗೆಮಾರಿತಂದೆ ಒಂಬೈನೂರು ವರ್ಷಗಳ ಹಿಂದೆಯೇ ಪುರೋಹಿತರ ಗುತ್ತಿಗೆಯಲ್ಲಿದ್ದು ವೈದಿಕತನವನ್ನು ಉಸಿರಾಡುತ್ತಿರುವ ಸಂಸ್ಕೃತ ಭಾಷೆ ಬೇಕಿಲ್ಲ ಎಂದಿದ್ದಾನೆ. ಅಸಲಿಗೆ ಭಾಷೆಗಳಿಗೆ ಯಾವುದೇ ಮೈಲಿಗೆ ಇಲ್ಲವಾದರೂ ಅದನ್ನು ಕಪಿಮುಷ್ಟಿಯಲ್ಲಿ ಹಿಡಿದುಕೊಂಡಿರುವ ಜನತೆಯ ಕಿಲ್ಬಿಷಗಳು ಅದಕ್ಕೆ ಅಂಟಿಕೊಂಡು ಅರಿವಿನ ಕಣ್ಣಾಗುವ ಬದಲು ಶಕ್ತಿ ರಾಜಕಾರಣದ ಅಸ್ತ್ರವಾಗುತ್ತವೆ. ಇದೇ ಭಾಷೆಯ ಮಿತಿಯೂ ಆಗಿದೆ ಎನ್ನುತ್ತಾರೆ ಭಾಷಾತಜ್ಞರು.

(‘ಬಯಲ ಬುತ್ತಿ’ ಅಂಕಣದ ಮೂಲಕ ನಾಡಿನ ಖ್ಯಾತ ಲೇಖಕಿ ಡಾ. ಮೀನಾಕ್ಷಿ ಬಾಳಿಯವರು ‘ವಾರ್ತಾ ಭಾರತಿ’ಗೆ ಪಾಕ್ಷಿಕವಾಗಿ ಬರೆಯಲಿದ್ದಾರೆ.

-ಸಂಪಾದಕ)

share
ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ
Next Story
X