ಬಳಸಿದಷ್ಟೂ ಉಳಿಕೆಯಾಗುವುದು ಭಾಷೆ

ಕನ್ನಡವನ್ನು ಉಳಿಸಲು, ಬೆಳೆಸಲು ಹಲವಾರು ವ್ಯಕ್ತಿಗಳು, ಸಂಘಟನೆಗಳು ಟೊಂಕ ಕಟ್ಟಿ ನಿಂತಿರುವುದು ಹೆಮ್ಮೆಯ ವಿಚಾರ. ಕನ್ನಡ ಅಭಿಮಾನಿಗಳಿಂದಲೇ ಇಂದು ಎಲ್ಲೆಡೆ ನಾಮ ಫಲಕಗಳಲ್ಲಿ ಕನ್ನಡ ರಾರಾಜಿಸುತ್ತಿರುವುದು. ಕನ್ನಡ ಭಾಷಾ ಪ್ರೇಮಿಗಳು ನವೆಂಬರ್ ತಿಂಗಳಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡಕ್ಕಾಗಿ ದುಡಿಯುತ್ತಿದ್ದಾರೆ. ಆದರೆ ನಮ್ಮ ನೆರೆಹೊರೆಯ ರಾಜ್ಯಗಳಿಂದ ಬರುವ, ಇಲ್ಲಿ ನೆಲೆಯೂರುವ ಜನರಿಂದ ಕನ್ನಡಕ್ಕೆ ಕುತ್ತು ಬರುತ್ತಿದೆ ಎಂಬುದು ಹಲವರ ಅಳಲು.
ಹೊರ ರಾಜ್ಯಗಳಿಂದ ಹೊಟ್ಟೆ ಹೊರೆದುಕೊಳ್ಳಲು ನಮ್ಮ ರಾಜ್ಯಕ್ಕೆ ಬರುವ ಅನ್ಯ ಭಾಷಿಕರು ಕನ್ನಡದಲ್ಲಿಯೇ ವ್ಯವಹರಿಸಬೇಕಾದ್ದು ನ್ಯಾಯ. ನಿತ್ಯದ ವ್ಯವಹಾರಗಳಿಗೆ ಅಗತ್ಯವಿರುವಷ್ಟಾದರೂ ಅವರು ಕನ್ನಡ ಭಾಷೆಯನ್ನು ಕಲಿತುಕೊಳ್ಳಲೇ ಬೇಕು. ಆದರೆ ಅವರ ಜೊತೆ ವ್ಯವಹರಿಸುವ ನಾವು ಕನ್ನಡದಲ್ಲಿಯೇ ವ್ಯವಹರಿಸುತ್ತಿದ್ದೇವೆಯೇ? ಕನ್ನಡ ಕಲಿಯಲು ಅನ್ಯ ಭಾಷಿಕರಿಗೆ ಅನುವು, ಅವಕಾಶಗಳನ್ನು ಮಾಡಿ ಕೊಟ್ಟಿದ್ದೇವೆಯೇ ಎನ್ನುವ ಪ್ರಶ್ನೆ ಕಾಡುತ್ತದೆ. ನಮ್ಮ ಭಾಷಾ ಪ್ರಾವೀಣ್ಯತೆಯ ತೋರ್ಪಡಿಕೆಗಾಗಿಯೋ, ಅನ್ಯ ರಾಜ್ಯದವರಿಗೆ ಕನ್ನಡ ಬಾರದೆಂಬ ಕನಿಕರದಿಂದಲೋ ನಾವು ಅವರೊಂದಿಗೆ ಹಿಂದಿಯಲ್ಲೋ, ಇಂಗ್ಲಿಷ್‌ನಲ್ಲಿಯೋ ವ್ಯವಹರಿಸಲು ಮುಂದಾಗುತ್ತೇವೆ. ಹೀಗಾಗಿ ಅನ್ಯ ಭಾಷಿಕರು ಕನ್ನಡ ಭಾಷೆಯನ್ನು ಕಲಿಯುವ ವಾತಾವರಣವೇ ಸೃಷ್ಟಿಯಾಗುವುದಿಲ್ಲ. ಸದಾ ಕನ್ನಡ ಪದಗಳು ಅವರ ಕಿವಿಗೆ ಬಿದ್ದಾಗ ನಮ್ಮ ಭಾಷೆಯ ಪರಿಚಯವಾಗುತ್ತದೆ. ನಮ್ಮ ಭಾಷೆಯ ಬಳಕೆಗೆ ಅನಿವಾರ್ಯತೆಯನ್ನು ಸೃಷ್ಟಿಸಿದಾಗಲೇ ಅಲ್ಲವೇ ಅವರು ಕನ್ನಡ ಕಲಿಯಲು ಪ್ರಯತ್ನಿಸುವುದು?
ಕನ್ನಡ ಕಲಿಯಿರಿ, ಕನ್ನಡದಲ್ಲಿಯೇ ವ್ಯವಹರಿಸಿರಿ ಎಂದು ಅನ್ಯ ಭಾಷಿಕರ ಮೇಲೆ ಕೇವಲ ಒತ್ತಡ ಹೇರಿದರೆ ಸಾಲದು. ಅವರ ಮೇಲೆ ಹಲ್ಲೆ ಮಾಡುವುದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಈ ಸನ್ನಿವೇಶಗಳನ್ನು ಹಂಚಿಕೊಳ್ಳುವುದರಿಂದ ಅವರು ಕನ್ನಡ ಕಲಿಯಲಾರರು ಹಾಗೂ ವ್ಯವಹರಿಸಲಾರರು. ಅದರ ಬದಲಾಗಿ ಕನ್ನಡ ಪರ ಹೋರಾಟಗಾರರು ನಿಜವಾಗಿಯೂ ಕನ್ನಡವನ್ನು ಉಳಿಸಿ ಬೆಳೆಸಲು ಅಗತ್ಯವಿರುವ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕಿದೆ. ಕೇವಲ ಹೋರಾಟವನ್ನು ಅಸ್ತ್ರವನ್ನಾಗಿಸಿಕೊಳ್ಳದೆ ತಮ್ಮ ಸುತ್ತ ಮುತ್ತಲಿರುವ ಅನ್ಯ ಭಾಷಿಗರ ಮನವೊಲಿಸಿ ಅವರಿಗೆ ಕನ್ನಡ ಕಲಿಸುವ ಕಾಯಕವಾಗಬೇಕು. ಎಂಥದೇ ಪರಿಸ್ಥಿತಿ ಇದ್ದರೂ ನಾವು ಕನ್ನಡದಲ್ಲಿಯೇ ವ್ಯವಹರಿಸುವ ಹಠ ತೊಟ್ಟಾಗ ಅನ್ಯ ಮಾರ್ಗವಿಲ್ಲದೆ ಅವರು ಕನ್ನಡವನ್ನು ಕಲಿಯಲು ಮುಂದಾಗುತ್ತಾರೆ. ಸಾಮ, ದಾನಗಳ ಮೂಲಕ ಮಾಡಬೇಕಾದ ಕೆಲಸವನ್ನು ದಂಡದ ಮುಖೇನ ಮಾಡುತ್ತಿದ್ದೇವೆ. ಒಮ್ಮೆಲೇ ದಂಡವನ್ನು ಕೈಗೆತ್ತಿಕೊಳ್ಳುವುದರಿಂದ ಆಗುವ ಪರಿಣಾಮ ಸೊನ್ನೆ. ಇದು ನೀರಿಳಿಯದ ಗಂಟಲೊಳಗೆ ಕಡುಬನ್ನು ಇಟ್ಟಂತೆ.
ಎಂದೂ ಕೇಳರಿಯದ ಭಾಷಾ ಪ್ರಪಂಚವೊಂದಕ್ಕೆ ಕಾಲಿಟ್ಟಾಗ ನಾವೂ ಕೂಡ ಭಾಷಾ ನಿರಕ್ಷರಿಗಳೇ ಆಗಿರುತ್ತೇವೆ. ಹಾಗಾಗಿ ಅಂಥ ಸಂದರ್ಭಗಳಲ್ಲಿ ವ್ಯವಹಾರಕ್ಕಾಗಿ ನಮ್ಮ ರಾಷ್ಟ್ರ ಭಾಷೆಯನ್ನೋ ಇಲ್ಲವೇ ಆಂಗ್ಲ ಭಾಷೆಯಲ್ಲಿ ಮಾತನಾಡಿ ನಮ್ಮ ವ್ಯವಹಾರವನ್ನು ಪೂರೈಸಿಕೊಳ್ಳುತ್ತೇವೆ. ಯಾರೇ ಆಗಲಿ ಮೊದಲು ತಾವು ಹೋಗಬೇಕಾದ ರಾಜ್ಯದ ಭಾಷೆಯನ್ನು ಕಲಿತು ಅಲ್ಲಿಗೆ ಹೋಗುವುದಿಲ್ಲ. ಅನ್ಯ ರಾಜ್ಯಗಳಲ್ಲಿ ವ್ಯವಹಾರಕ್ಕಾಗಿಯೋ, ದುಡಿಮೆಗಾಗಿಯೋ ಬಂದು ನೆಲೆ ನಿಂತಾಗ ನಿಧಾನವಾಗಿ ಅಲ್ಲಿನ ಭಾಷೆಯನ್ನು ಕಲಿಯತೊಡಗುತ್ತೇವೆ. ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ.
ಬ್ಯಾಂಕು, ಕೆಲ ಸರಕಾರಿ ಕಚೇರಿಗಳಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಿಬ್ಬಂದಿಗಳು ವರ್ಗಾವಣೆಗೊಂಡಾಗ ಇಲ್ಲಿನ ಭಾಷೆಯನ್ನು ಕಲಿತುಕೊಳ್ಳಲು ಕಾಲಾವಕಾಶ ಬೇಕಾಗುತ್ತದೆ. ಅವರಿಗೆ ಸಮಯಾವಕಾಶವನ್ನು ನೀಡದೆ ಕನ್ನಡದಲ್ಲಿಯೇ ಮಾತನಾಡಿರಿ ಎಂದು ಬೆದರಿಸುವುದು, ಹಲ್ಲೆ ಮಾಡುವುದು ಅದೆಷ್ಟು ಸರಿ? ವರ್ಷಾನುಗಟ್ಟಲೇ ಇಲ್ಲಿಯೇ ತಳವೂರಿ ಕನ್ನಡ ಕಲಿಯಲಾರೆ ಎಂಬ ಮೊಂಡುತನಕ್ಕೆ ಬಿದ್ದವರಿಗೆ ಯೋಗ್ಯ ಪಾಠ ಕಲಿಸಲೇ ಬೇಕಾದ್ದು ಸರಿ. ಆದರೆ ಬೆದರಿಕೆ, ಹಲ್ಲೆ ನಡೆಸುವುದು ಉಚಿತವಲ್ಲ. ಅದರ ಬದಲು ಕನ್ನಡ ಪರ ಹೋರಾಟಗಾರರು ಅನ್ಯ ಭಾಷಿಕರಿಗೆಂದೇ ಕನ್ನಡ ಕಲಿಸುವ ಅಲ್ಪಕಾಲದ ತರಗತಿಗಳನ್ನು ತೆರೆದು ಒಂದು ಉತ್ತಮ ಸೇವೆಯನ್ನು ಸಲ್ಲಿಸಬಹುದು. ಆಗ ಭಾಷೆಯ ಕುರಿತಾದ ಸಂಘರ್ಷಗಳಿಗೇ ಆಸ್ಪದವಿರುವುದಿಲ್ಲ. ಹಾಗೆಯೇ ಅವರ ಭಾಷಾಭಿಮಾನಕ್ಕೂ ಒಂದು ಅರ್ಥ ಬರುತ್ತದೆ.
ಪ್ರತಿಯೊಬ್ಬ ವ್ಯಕ್ತಿಯೂ ಭಾಷೆಯನ್ನು ಕಲಿಯುವುದು ತನ್ನ ಕುಟುಂಬದ ಸದಸ್ಯರಿಂದ, ನೆರೆಹೊರೆ ಹಾಗೂ ಸ್ನೇಹಿತರ ಮೂಲಕ. ಮಗು ಹುಟ್ಟಿದಾಗಿನಿಂದ ಮೂರ್ನಾಲ್ಕು ವರ್ಷಗಳವರೆಗೂ ಭಾಷೆಯನ್ನು ಕಲಿಯುತ್ತಲೇ ಇರುತ್ತದೆ. ಕೆಲ ಮಕ್ಕಳು ಬಾಲ್ಯದಿಂದಲೇ ಒಂದಕ್ಕಿಂತ ಹೆಚ್ಚಿನ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವ ಹಾಗೂ ಮಾತನಾಡುವ ಪ್ರಾವಿಣ್ಯತೆಯನ್ನು ಹೊಂದಿರುತ್ತಾರೆ. ಇತ್ತೀಚೆಗೆ ಹೆಚ್ಚುತ್ತಿರುವ ಅಂತರ್‌ರಾಜ್ಯ ಪ್ರೇಮ ವಿವಾಹಗಳು, ವೃತ್ತಿಯಲ್ಲಿನ ವರ್ಗಾವಣೆ, ಸ್ನೇಹಿತರೊಂದಿಗೆ ಬೆರೆಯುವುದರಿಂದ ಮಕ್ಕಳು ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಹೆಚ್ಚು ಹೆಚ್ಚು ಕೇಳಿಸಿಕೊಳ್ಳುವುದರಿಂದ ಹಾಗೂ ಮಾತನಾಡುವುದರಿಂದ ಭಾಷೆ ನಮಗೆ ಕರಗತವಾಗುತ್ತದೆ.
ಅರವತ್ತು-ಎಪ್ಪತ್ತರ ದಶಕದಲ್ಲಿ ಸಾವಿರಾರು ನೇಪಾಳಿಗರು ಕರ್ನಾಟಕಕ್ಕೆ ವಲಸೆ ಬಂದರು. ಪರಿಶ್ರಮಿಗಳಾದ ಅವರು ಇಲ್ಲಿ ನೆಲೆಯೂರಿ ಬೇಸಾಯ, ಹೈನುಗಾರಿಕೆ ಎಸ್ಟೇಟ್ ಕೆಲಸ, ಉಣ್ಣೆ ಉತ್ಪನ್ನಗಳನ್ನು ಮಾರಾಟ ಮಾಡುತ್ತ ಈಗ ನಮ್ಮವರೇ ಎಂಬಂತಾಗಿ ಹೋಗಿದ್ದಾರೆ. ಈ ಜನರು ಅತೀ ಬೇಗನೇ ಕನ್ನಡದಲ್ಲಿ ಮಾತನಾಡಲು, ವ್ಯವಹರಿಸಲು ತೊಡಗಿದರು. ಇದರ ಹಿಂದಿರುವ ಕಾರಣ ಅಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಅನ್ಯ ಭಾಷೆಗಳ ಹಾವಳಿ ಇರಲಿಲ್ಲ. ಎಲ್ಲರೂ ಕನ್ನಡದಲ್ಲಿಯೇ ವ್ಯವಹರಿಸುತ್ತಿದ್ದರು. ಹೀಗಾಗಿ ನೇಪಾಳಿಗರೊಂದಿಗೆ ಎಲ್ಲರೂ ಕನ್ನಡದಲ್ಲಿಯೇ ಸಂವಹನ ನಡೆಸುತ್ತಿದ್ದರು. ನೇಪಾಳಿಗರು ಅನ್ಯ ಮಾರ್ಗವಿಲ್ಲದೆ ಕನ್ನಡವನ್ನು ಕಲಿತು ಮಾತನಾಡತೊಡಗಿದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಶಿಕ್ಷಣ, ಕೈಗಾರಿಕಾ ಕ್ಷೇತ್ರಗಳಲ್ಲಾದ ತ್ವರಿತ ಕ್ರಾಂತಿಗಳಿಂದ ಜನರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುವ ಅನಿವಾರ್ಯತೆ ಇದೆ. ಕರ್ನಾಟಕವೂ ಇದಕ್ಕೆ ಹೊರತಲ್ಲ. ನಮ್ಮ ರಾಜ್ಯ ಅನ್ಯ ಭಾಷಿಕರಿಂದ ತುಂಬಿ ತುಳುಕುತ್ತಿದೆ. ಹಿಂದಿ ರಾಷ್ಟ್ರಭಾಷೆಯ ಮುಖವಾಡವಾಗಿ, ಇಂಗ್ಲಿಷ್ ಜಾಗತಿಕ ಭಾಷೆಯಾಗಿ ತಮ್ಮ ಪಾರಮ್ಯವನ್ನು ಸಾಧಿಸಿ ಸ್ಥಳೀಯ ಭಾಷೆಗಳನ್ನು ಬದಿಗೊತ್ತಿವೆ. ಕನ್ನಡಿಗರಾದ ನಾವು ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವುದರ ಮೂಲಕ ನಮ್ಮ ಭಾಷೆಯನ್ನು ಉಳಿಸಿಕೊಳ್ಳಬೇಕಿದೆ, ಬೆಳೆಸಬೇಕಿದೆ.






