Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಶಿಕ್ಷಕರನ್ನು ಶಿಕ್ಷಕರಾಗಿಯೇ ಉಳಿಯಲು...

ಶಿಕ್ಷಕರನ್ನು ಶಿಕ್ಷಕರಾಗಿಯೇ ಉಳಿಯಲು ಬಿಡಿ!

​ಎಂ.ಆರ್. ಮಾನ್ವಿ​ಎಂ.ಆರ್. ಮಾನ್ವಿ22 Jun 2026 10:48 AM IST
share
ಶಿಕ್ಷಕರನ್ನು ಶಿಕ್ಷಕರಾಗಿಯೇ ಉಳಿಯಲು ಬಿಡಿ!

ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಲು ಹೋದರೆ ಅದು ಗುಡ್ಡದಷ್ಟು ಎತ್ತರಕ್ಕೆ ಬೆಳೆಯಬಹುದು. ಕಳೆದ ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರವನ್ನು ಹತ್ತಿರದಿಂದ ಗಮನಿಸಿದ ಅನುಭವದಲ್ಲಿ ಕಂಡುಬಂದಿರುವ ವಾಸ್ತವತೆಗಳೆಲ್ಲವೂ ಒಂದೇ ಸಂಗತಿಯನ್ನು ಹೇಳುತ್ತವೆ-ಶಿಕ್ಷಕರನ್ನು ಶಿಕ್ಷಣ ಕಾರ್ಯದಿಂದ ದೂರ ಸರಿಸಿ, ಆಡಳಿತಾತ್ಮಕ ಮತ್ತು ಶಿಕ್ಷಣೇತರ ಕೆಲಸಗಳ ಹೊರೆ ಹೊರುವಂತೆ ಮಾಡಲಾಗಿದೆ. ಖಾಸಗಿ ಶಿಕ್ಷಕರ ಸಂಕಷ್ಟ ಒಂದು ಕಡೆಯಾದರೆ, ಸರಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರ ಗೋಳು ಮತ್ತೊಂದು ಕಡೆ. ಸರಕಾರಗಳು ಶಿಕ್ಷಕರನ್ನು ಶಿಕ್ಷಣೇತರ ಕೆಲಸಗಳಿಂದ ಮುಕ್ತಗೊಳಿಸದಿದ್ದರೆ, ಶಿಕ್ಷಣ ತನ್ನ ಮೂಲ ಅರ್ಥವನ್ನೇ ಕಳೆದುಕೊಳ್ಳುವ ಅಪಾಯವಿದೆ.

ಶಿಕ್ಷಕರ ಚಿತ್ರಣ ಬದಲಾಗಿದೆ: ಒಮ್ಮೆ ಕಣ್ಣು ಮುಚ್ಚಿ ಇಂದಿನ ಸರಕಾರಿ ಶಾಲಾ ಶಿಕ್ಷಕರ ಚಿತ್ರಣವನ್ನು ಮನಸ್ಸಿನಲ್ಲಿ ಮೂಡಿಸಿಕೊಳ್ಳಿ. ಸಾಮಾನ್ಯವಾಗಿ ಕೈಯಲ್ಲಿ ಪುಸ್ತಕ ಹಿಡಿದು ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರೊಬ್ಬರ ಚಿತ್ರಣ ಮೂಡಬಹುದು. ಆದರೆ ಇಂದಿನ ವಾಸ್ತವ ಚಿತ್ರಣ ಬೇರೆಯೇ ಆಗಿದೆ. ಬೆಳಗಿನ ಜಾವ ತನ್ನ ಬೈಕ್ ಮೇಲೆ ಮೊಟ್ಟೆ ಟ್ರೇಗಳು, ತರಕಾರಿ ಚೀಲಗಳು, ಬೇಳೆಕಾಳುಗಳ ಚೀಲಗಳು ಅಥವಾ ಕೆಲವೊಮ್ಮೆ ಗ್ಯಾಸ್ ಸಿಲಿಂಡರ್ ಹೊತ್ತುಕೊಂಡು ಶಾಲೆಯತ್ತ ತೆರಳುತ್ತಿರುವ ಶಿಕ್ಷಕನೊಬ್ಬ ನಿಮ್ಮ ಕಣ್ಣ ಮುಂದೆ ಕಾಣಬಹುದು. ಶಾಲೆಗೆ ತಲುಪಿದ ಬಳಿಕ ಬೀಗ ತೆಗೆಯುವುದು, ನೀರಿನ ವ್ಯವಸ್ಥೆ ಪರಿಶೀಲಿಸುವುದು, ಕೈಯಲ್ಲಿ ಕಸದ ಬುಟ್ಟಿ ಹಿಡಿದು ಶಾಲಾ ಆವರಣ ಸ್ವಚ್ಛಗೊಳಿಸುವುದು, ಕೆಲವೊಮ್ಮೆ ಶೌಚಾಲಯಗಳ ಸ್ವಚ್ಛತೆಯನ್ನೂ ನೋಡಿಕೊಳ್ಳುವುದು-ಇವೆಲ್ಲವೂ ಅವನ ದಿನನಿತ್ಯದ ಕರ್ತವ್ಯಗಳ ಭಾಗವಾಗಿವೆ.

ಇದು ಉತ್ಪ್ರೇಕ್ಷೆಯಂತೆ ಕಂಡರೂ ಗ್ರಾಮೀಣ ಕರ್ನಾಟಕದ ಅನೇಕ ಸರಕಾರಿ ಶಾಲೆಗಳ ವಾಸ್ತವ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಸಮಾಜದ ಭವಿಷ್ಯವನ್ನು ರೂಪಿಸಬೇಕಾದ ಶಿಕ್ಷಕ ಇಂದು ಬೋಧಕನಾಗಿರುವುದಕ್ಕಿಂತ ಹೆಚ್ಚಾಗಿ ವ್ಯವಸ್ಥೆಯ ಎಲ್ಲ ಕೊರತೆಗಳನ್ನು ತುಂಬುವ ಬಹುಮುಖ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾನೆ.

ಬೋಧನೆಯೋ, ಬಹುಮುಖ ಸೇವೆಯೋ?

ಯಾವುದೇ ಸಮಾಜದ ಪ್ರಗತಿಯು ಅದರ ಶಿಕ್ಷಣ ವ್ಯವಸ್ಥೆಯ ಮೇಲೆ ಅವಲಂಬಿತವಾಗಿರುತ್ತದೆ. ಆ ವ್ಯವಸ್ಥೆಯ ಆತ್ಮವೇ ಶಿಕ್ಷಕ. ಆದರೆ ಇಂದು ಸರಕಾರಿ ಶಾಲೆಗಳ ಶಿಕ್ಷಕರು ಎದುರಿಸುತ್ತಿರುವ ಪರಿಸ್ಥಿತಿಯನ್ನು ಗಮನಿಸಿದರೆ, ಶಿಕ್ಷಕರನ್ನು ಶಿಕ್ಷಕರಾಗಿ ಉಳಿಸದೆ ಎಲ್ಲ ಕೆಲಸಗಳನ್ನೂ ಅವರ ಹೆಗಲ ಮೇಲೆ ಹಾಕಲಾಗಿದೆ ಎಂಬ ಭಾವನೆ ಮೂಡುತ್ತದೆ.

ಒಬ್ಬ ಮುಖ್ಯ ಶಿಕ್ಷಕರ ಕರ್ತವ್ಯ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದಾಗಿರಬೇಕು. ಆದರೆ ಅವರ ದಿನ ಶಾಲೆಯ ಬಾಗಿಲು ತೆರೆಯುವುದರಿಂದ ಆರಂಭವಾಗಿ, ಸ್ವಚ್ಛತೆ, ನೀರಿನ ವ್ಯವಸ್ಥೆ, ಮಧ್ಯಾಹ್ನದ ಬಿಸಿಯೂಟ, ದಾಖಲೆ ನಿರ್ವಹಣೆ, ಲೆಕ್ಕಪತ್ರಗಳು, ಅಧಿಕಾರಿಗಳ ವರದಿಗಳು, ಸಭೆಗಳು, ಸಮೀಕ್ಷೆಗಳು ಮತ್ತು ಆನ್‌ಲೈನ್ ಮಾಹಿತಿ ಅಪ್‌ಲೋಡ್ ಮಾಡುವುದರಲ್ಲಿಯೇ ಕಳೆಯುತ್ತದೆ.

ವಿದ್ಯಾರ್ಥಿಗಳ ಹಾಜರಾತಿಯನ್ನು ಮೊದಲು ರಿಜಿಸ್ಟರ್‌ನಲ್ಲಿ ದಾಖಲಿಸಬೇಕು. ನಂತರ ಅದನ್ನೇ ಮತ್ತೆ ಆನ್‌ಲೈನ್‌ನಲ್ಲಿ ನಮೂದಿಸಬೇಕು. ಮಧ್ಯಾಹ್ನದ ಊಟದಲ್ಲಿ ಎಷ್ಟು ಮಕ್ಕಳು ಆಹಾರ ಸೇವಿಸಿದರು, ಎಷ್ಟು ಹಾಲು ಕುಡಿದರು, ಎಷ್ಟು ಮೊಟ್ಟೆ ವಿತರಿಸಲಾಯಿತು ಎಂಬುವುದರವರೆಗೆ ದಾಖಲೆ ನಿರ್ವಹಿಸಬೇಕು.

ಶಿಕ್ಷಕರೇ ಕ್ಲರ್ಕ್, ಗುಮಾಸ್ತ, ಪರಿಚಾರಕ!: ಸರಕಾರದ ಬಹುತೇಕ ಎಲ್ಲ ಇಲಾಖೆಗಳಲ್ಲಿ ಕ್ಲರ್ಕ್‌ಗಳು, ಗುಮಾಸ್ತರು, ಪರಿಚಾರಕರು, ಸ್ವಚ್ಛತಾ ಸಿಬ್ಬಂದಿ ಮತ್ತು ಇತರ ಸಹಾಯಕ ಸಿಬ್ಬಂದಿ ಇರುತ್ತಾರೆ. ಆದರೆ ಶಾಲೆಗಳಲ್ಲಿ ಈ ವ್ಯವಸ್ಥೆ ಬಹುತೇಕ ಕಾಣಿಸುವುದಿಲ್ಲ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕಾತಿಯೇ ಸಮರ್ಪಕವಾಗಿ ನಡೆಯದಿರುವಾಗ, ಆಯಾ, ಪರಿಚಾರಕ, ಕ್ಲರ್ಕ್ ಅಥವಾ ಸ್ವಚ್ಛತಾ ಸಿಬ್ಬಂದಿ ನೇಮಕಾತಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಪರಿಣಾಮವಾಗಿ ಒಬ್ಬ ಶಿಕ್ಷಕನೇ ಮುಖ್ಯ ಶಿಕ್ಷಕ, ಕ್ಲರ್ಕ್, ಲೆಕ್ಕಪತ್ರ ನಿರ್ವಾಹಕ, ಪರಿಚಾರಕ, ಜವಾನ, ಸ್ವಚ್ಛತಾ ಸಿಬ್ಬಂದಿ, ಮಧ್ಯಾಹ್ನದ ಬಿಸಿಯೂಟ ಮೇಲ್ವಿಚಾರಕ ಹಾಗೂ ಕೆಲವೊಮ್ಮೆ ಆಹಾರ ಸಾಮಗ್ರಿಗಳ ಖರೀದಿದಾರನ ಪಾತ್ರವನ್ನೂ ನಿರ್ವಹಿಸಬೇಕಾಗುತ್ತದೆ. ಇಷ್ಟೆಲ್ಲ ಜವಾಬ್ದಾರಿಗಳ ನಡುವೆ ಗುಣಮಟ್ಟದ ಬೋಧನೆಗೆ ಸಮಯ ಎಲ್ಲಿಂದ ಬರಬೇಕು ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

ದುಬಾರಿ ಬೆಲೆಗಳು ಮತ್ತು ಸರಕಾರಿ ಅನುದಾನ

ಇಂದು ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಪ್ರತೀ ಕೆ.ಜಿ.ಗೆ ರೂ.160ರ ಆಸುಪಾಸಿನಲ್ಲಿದೆ. ಬೇಳೆಕಾಳುಗಳ ಬೆಲೆ ರೂ. 150 ದಾಟಿದೆ. ಒಂದು ಮೊಟ್ಟೆಯ ಬೆಲೆ ರೂ.7 ಅಥವಾ ಅದಕ್ಕಿಂತ ಹೆಚ್ಚಾಗಿದೆ. ಆದರೆ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಬಿಡುಗಡೆಯಾಗುವ ಅನುದಾನಗಳು ಇನ್ನೂ ಹಳೆಯ ಲೆಕ್ಕಾಚಾರದಲ್ಲೇ ಉಳಿದಿವೆ.

ಉದಾಹರಣೆಗೆ, ತೊಗರಿ ಬೇಳೆಗೆ ಸರಕಾರ ನಿಗದಿಪಡಿಸಿರುವ ದರ ಪ್ರತೀ ಕೆ.ಜಿ.ಗೆ ಕೇವಲ ರೂ.105 ಮಾತ್ರ. ಆದರೆ ಮಾರುಕಟ್ಟೆಯಲ್ಲಿ ಅದಕ್ಕಿಂತ ಬಹಳ ಹೆಚ್ಚಿನ ಬೆಲೆ ನೀಡಿಯೇ ಖರೀದಿಸಬೇಕಾಗುತ್ತದೆ. ಇದೇ ಪರಿಸ್ಥಿತಿ ಅಡುಗೆ ಎಣ್ಣೆ ಸೇರಿದಂತೆ ಇತರ ಆಹಾರ ಸಾಮಗ್ರಿಗಳಿಗೂ ಅನ್ವಯಿಸುತ್ತದೆ. ಮೊಟ್ಟೆ ವಿತರಣೆಯ ಲೆಕ್ಕಾಚಾರ ಮತ್ತಷ್ಟು ಸಂಕೀರ್ಣವಾಗಿದೆ. ಒಂದು ಮೊಟ್ಟೆಗೆ ಸರಕಾರ ನೀಡುವ ಮೂಲ ಅನುದಾನ ರೂ. 5.20 ಮಾತ್ರ. ಆದರೆ ಮೊಟ್ಟೆ ಖರೀದಿಸುವ ವೆಚ್ಚ , ಬೇಯಿಸಲು ಬಳಸುವ ಅನಿಲದ ವೆಚ್ಚ, ಸಾಗಣೆ ವೆಚ್ಚ, ಮೊಟ್ಟೆ ಸಿಪ್ಪೆ ನಿರ್ವಹಣೆಯ ವೆಚ್ಚ ಸೇರಿದಂತೆ ಪ್ರತಿಯೊಂದು ಅಂಶಕ್ಕೂ ಪ್ರತ್ಯೇಕ ಲೆಕ್ಕ ಇಡಬೇಕಾಗುತ್ತದೆ.

ಸರಕಾರದ ಲೆಕ್ಕ ಒಂದು ಕಡೆ ಇದ್ದರೆ, ಅಝೀಂ ಪ್ರೇಮ್‌ಜಿ ಫೌಂಡೇಶನ್‌ಗೆ ಸಲ್ಲಿಸಬೇಕಾದ ಲೆಕ್ಕ ಇನ್ನೊಂದು ಕಡೆ ಇರುತ್ತದೆ. ಮೊಟ್ಟೆ ಖರೀದಿಗೆ ರೂ.5.20, ಸಿಪ್ಪೆ ನಿರ್ವಹಣೆಗೆ ರೂ.0.30 ಪೈಸೆ, ಸಾಗಣೆಗೆ ರೂ.0.20 ಪೈಸೆ, ಅನಿಲ ವೆಚ್ಚಕ್ಕೆ 0.50ಪೈಸೆ ಎಂಬಂತೆ ಪ್ರತಿಯೊಂದು ಅಂಶವನ್ನು ಪ್ರತ್ಯೇಕವಾಗಿ ದಾಖಲಿಸಿ, ವಾರ್ಷಿಕವಾಗಿ ಕೈಬರಹದಲ್ಲೂ ಹಾಗೂ ಆನ್‌ಲೈನ್‌ನಲ್ಲೂ ವರದಿ ಸಲ್ಲಿಸಬೇಕಾಗುತ್ತದೆ. ಈ ಎಲ್ಲ ಲೆಕ್ಕಾಚಾರಗಳನ್ನು ನಿರ್ವಹಿಸುವವರು ಕ್ಲರ್ಕ್‌ಗಳಲ್ಲ; ಮಕ್ಕಳಿಗೆ ಪಾಠ ಹೇಳಬೇಕಾದ ಶಿಕ್ಷಕರೇ ಎಂಬುದು ವ್ಯವಸ್ಥೆಯ ಅತಿದೊಡ್ಡ ವಿಪರ್ಯಾಸವಾಗಿದೆ.

ಡಿಜಿಟಲ್ ಇಂಡಿಯಾ ಮತ್ತು ತಳಮಟ್ಟದ ವಾಸ್ತವ: ಸರಕಾರ ಶಿಕ್ಷಣ ಕ್ಷೇತ್ರವನ್ನು ಡಿಜಿಟಲೀಕರಣಗೊಳಿಸುವತ್ತ ಹೆಜ್ಜೆ ಇಟ್ಟಿದೆ. ಆದರೆ ಅನೇಕ ಶಾಲೆಗಳಲ್ಲಿ ಕಂಪ್ಯೂಟರ್‌ಗಳ ಕೊರತೆ ಇದೆ. ಇಂಟರ್‌ನೆಟ್ ಸಂಪರ್ಕ ಸಮರ್ಪಕವಾಗಿಲ್ಲ. ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಸಾಮಾನ್ಯವಾಗಿದೆ. ಆದರೂ ವರದಿಗಳು, ವಿದ್ಯಾರ್ಥಿ ಮಾಹಿತಿ, ಪರೀಕ್ಷಾ ಫಲಿತಾಂಶಗಳು, ವಿವಿಧ ಯೋಜನೆಗಳ ವಿವರಗಳು ಎಲ್ಲವೂ ಆನ್‌ಲೈನ್‌ನಲ್ಲಿ ಸಲ್ಲಿಸಲೇಬೇಕು. ಪರಿಣಾಮವಾಗಿ ಶಿಕ್ಷಕರು ತಮ್ಮ ಸ್ವಂತ ಮೊಬೈಲ್ ಫೋನ್ ಮತ್ತು ವೈಯಕ್ತಿಕ ಡೇಟಾವನ್ನು ಬಳಸಿ ಶಾಲಾ ಸಮಯದ ನಂತರ ಈ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೆ ಜನಗಣತಿ, ಚುನಾವಣೆ, ಮತದಾರರ ಪಟ್ಟಿ ಪರಿಷ್ಕರಣೆ, ವಿವಿಧ ಸಮೀಕ್ಷೆಗಳು, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಅನೇಕ ಸರಕಾರಿ ಕಾರ್ಯಕ್ರಮಗಳಿಗೆ ಮೊದಲು ನೆನಪಾಗುವುದು ಶಿಕ್ಷಕರೇ. ಈ ಎಲ್ಲ ಕೆಲಸಗಳನ್ನು ನಿರ್ವಹಿಸಿದ ಬಳಿಕ ಸಮಯ ಉಳಿದರೆ ಮಾತ್ರ ಪಾಠ ಮಾಡುವ ಅವಕಾಶ ದೊರೆಯುತ್ತದೆ. ನಂತರ ವಿದ್ಯಾರ್ಥಿಗಳ ಕಲಿಕಾ ಮಟ್ಟ ಕುಸಿದಿದೆ ಎಂದು ಶಿಕ್ಷಕರನ್ನೇ ಪ್ರಶ್ನಿಸಲಾಗುತ್ತದೆ.

ರಾಜ್ಯದ ಸಾವಿರಾರು ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಹಲವು ಶಾಲೆಗಳಲ್ಲಿ ಒಬ್ಬ ಶಿಕ್ಷಕ ಅಥವಾ ಇಬ್ಬರು ಶಿಕ್ಷಕರೇ ಸಂಪೂರ್ಣ ಶಾಲೆಯನ್ನು ನಿರ್ವಹಿಸುತ್ತಿದ್ದಾರೆ. ಕೆಲವು ಕಡೆ ಬಹು ತರಗತಿಗಳನ್ನು ಒಬ್ಬರೇ ನೋಡಿಕೊಳ್ಳುವ ಸ್ಥಿತಿ ಇದೆ. ಒಂದು ಕಡೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ, ಮತ್ತೊಂದು ಕಡೆ ಶಿಕ್ಷಣದ ಗುಣಮಟ್ಟದ ಬಗ್ಗೆ ಪ್ರಶ್ನಿಸುವುದು ಸಮಸ್ಯೆಯ ಮೂಲವನ್ನು ನಿರ್ಲಕ್ಷಿಸುವಂತಾಗಿದೆ.

ಶಿಕ್ಷಣ ಎಂದರೆ ಕೇವಲ ಬಿಸಿಯೂಟವಲ್ಲ: ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಾದರಕ್ಷೆ, ಪುಸ್ತಕಗಳು ಮತ್ತು ಮಧ್ಯಾಹ್ನದ ಊಟ ನೀಡು ವುದು ಉತ್ತಮ ಯೋಜನೆಗಳೇ ಸರಿ. ಆದರೆ ಶಿಕ್ಷಣದ ಅರ್ಥ ಅಲ್ಲಿಗೆ ಮುಗಿಯುವುದಿಲ್ಲ. ಮಕ್ಕಳಲ್ಲಿ ಚಿಂತನಾ ಶಕ್ತಿ, ಮೌಲ್ಯಗಳು, ಕೌಶಲ್ಯಗಳು ಮತ್ತು ಜ್ಞಾನವನ್ನು ಬೆಳೆಸುವುದು ಶಿಕ್ಷಣದ ಮೂಲ ಉದ್ದೇಶ. ಅದಕ್ಕೆ ಶಿಕ್ಷಕರಿಗೆ ಸಮಯ, ಸಂಪನ್ಮೂಲ ಮತ್ತು ಸೂಕ್ತ ವಾತಾವರಣ ಅಗತ್ಯ.

ಸರಕಾರ ಮತ್ತು ಸಮಾಜ ಯೋಚಿಸಬೇಕಿದೆ: ಸರಕಾರಿ ಶಾಲೆಗಳನ್ನು ಮುಚ್ಚುವುದು ಅಥವಾ ಖಾಸಗಿ ವಲಯಕ್ಕೆ ಒಪ್ಪಿಸುವುದು ಪರಿಹಾರವಲ್ಲ. ಬದಲಾಗಿ ಖಾಲಿ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಶಾಲೆಗಳಿಗೆ ಪ್ರತ್ಯೇಕ ಕ್ಲರಿಕಲ್ ಸಿಬ್ಬಂದಿ, ಪರಿಚಾರಕರು ಮತ್ತು ಸ್ವಚ್ಛತಾ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಶಿಕ್ಷಣೇತರ ಕೆಲಸಗಳನ್ನು ಶಿಕ್ಷಕರಿಂದ ಹಂತಹಂತವಾಗಿ ಬೇರ್ಪಡಿಸಬೇಕು. ಎಲ್ಲ ಶಾಲೆಗಳಿಗೆ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಸೌಲಭ್ಯ ಒದಗಿಸಬೇಕು ಮತ್ತು ಬಿಸಿಯೂಟ ಯೋಜನೆಗೆ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಅನುದಾನ ಹೆಚ್ಚಿಸಬೇಕು.

ಶಿಕ್ಷಕರು ಕೇವಲ ಸರಕಾರಿ ನೌಕರರಲ್ಲ. ಅವರು ಸಮಾಜದ ಭವಿಷ್ಯ ರೂಪಿಸುವ ಶಿಲ್ಪಿಗಳು. ಆದರೆ ಇಂದು ಆ ಶಿಲ್ಪಿಗಳ ಕೈಯಲ್ಲಿ ಪುಸ್ತಕಗಳಿಗಿಂತ ಕಡತಗಳು ಹೆಚ್ಚು, ಪಾಠ ಯೋಜನೆಗಳಿಗಿಂತ ವರದಿಗಳು ಹೆಚ್ಚು, ಮಕ್ಕಳಿಗಿಂತ ವ್ಯವಸ್ಥೆಯ ಒತ್ತಡಗಳೇ ಹೆಚ್ಚು ಕಾಣಿಸುತ್ತಿವೆ. ಶಿಕ್ಷಕರಿಗೆ ಬೋಧನೆ ಮಾಡಲು ಸಮಯ ಮತ್ತು ಗೌರವಯುತ ವಾತಾವರಣ ಕಲ್ಪಿಸುವುದು ಶಿಕ್ಷಕರ ಹಿತಾಸಕ್ತಿಯ ಪ್ರಶ್ನೆ ಮಾತ್ರವಲ್ಲ; ಅದು ನಮ್ಮ ಮಕ್ಕಳ ಭವಿಷ್ಯ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಉಳಿವು ಮತ್ತು ದೇಶದ ಅಭಿವೃದ್ಧಿಯ ಪ್ರಶ್ನೆಯಾಗಿದೆ.

ಶಿಕ್ಷಕರನ್ನು ಶಿಕ್ಷಕರಾಗಿಯೇ ಉಳಿಯಲು ಬಿಡೋಣ. ಏಕೆಂದರೆ ಶಿಕ್ಷಣ ಉಳಿದರೆ ಮಾತ್ರ ಸಮಾಜ ಉಳಿಯುತ್ತದೆ.

Tags

Teachers
share
​ಎಂ.ಆರ್. ಮಾನ್ವಿ
​ಎಂ.ಆರ್. ಮಾನ್ವಿ
Next Story
X