ಮೌಲ್ಯಯುತ ಸಂಪನ್ಮೂಲಗಳ ಸದ್ಬಳಕೆಯಾಗಲಿ

ಪ್ರಮುಖ ನೈಸರ್ಗಿಕ ಸಂಪನ್ಮೂಲಗಳಾದ ಮಳೆನೀರು ಮತ್ತು ಸೌರಶಕ್ತಿಯು ನಿಸರ್ಗದಲ್ಲಿ ಉಚಿತವಾಗಿ ದೊರೆಯುವ ಆರೋಗ್ಯಕರ, ಪರಿಸರಸ್ನೇಹಿ ಹಾಗೂ ಆರ್ಥಿಕ ಸಂಪನ್ಮೂಲಗಳಾಗಿವೆ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡಿರುವ ವಿಶ್ವದ ಹಲವಾರು ದೇಶಗಳು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ. ಭಾರತದಲ್ಲಿಯೂ ಈ ಸಂಪನ್ಮೂಲಗಳು ಹೇರಳವಾಗಿವೆಯಾದರೂ ಇವುಗಳ ಸದ್ಬಳಕೆಯು ಅತ್ಯಂತ ಕನಿಷ್ಠವಾಗಿದೆ ಮತ್ತು ಅವ್ಯವಸ್ಥೆಯಿಂದ ಕೂಡಿದೆ. ಅಭಿವೃದ್ಧಿ ಹೊಂದಿರುವ ದೇಶಗಳಾದ ಅಮೇರಿಕ, ಫ್ರಾನ್ಸ್, ಆಸ್ಟ್ರೇಲಿಯ, ಇಸ್ರೇಲ್, ಸಿಂಗಾಪೂರ, ಇಟಲಿ, ಚೀನಾ, ಸ್ಪೇನ್, ಜರ್ಮನಿ ಮತ್ತು ಜಪಾನ್ ದೇಶಗಳಲ್ಲಿ ಮಳೆನೀರು ಮತ್ತು ಸೌರಶಕ್ತಿ ಸಂಪನ್ಮೂಲಗಳು ಭಾರತಕ್ಕಿಂತ ಕಡಿಮೆ ಪ್ರಮಾಣದಲ್ಲಿದ್ದರೂ ಅವುಗಳ ಸುವ್ಯವಸ್ಥಿತ ಬಳಕೆಯು ಗರಿಷ್ಠ ಪ್ರಮಾಣದಲ್ಲಿರುವುದು ಗಮನಾರ್ಹ.
ಮಳೆನೀರು ವಿಶ್ವದಲ್ಲಿರುವ ಅತ್ಯಂತ ಪವಿತ್ರ ಮತ್ತು ಪರಿಶುದ್ಧವಾದ ನೀರು ಎನಿಸಿದೆ. ಇದರಲ್ಲಿ ಕೃಷಿ ಮತ್ತು ಜೀವಸಂಕುಲಕ್ಕೆ ಅವಶ್ಯವಿರುವ ಖನಿಜಾಂಶಗಳು ಹೇರಳವಾಗಿವೆ. ಮಳೆನೀರನ್ನು ಬಳಸಿದಷ್ಟು ಕೃಷಿ ಪ್ರಧಾನವಾದ ಭಾರತದಲ್ಲಿ ಅವೈಜ್ಞಾನಿಕ ಕೃಷಿಯಿಂದ ಹದಗೆಡುತ್ತಿರುವ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದಾಗಿದೆ. ಆದರೆ ಬರಗಾಲದಂತಹ ಸನ್ನಿವೇಶಗಳು ಎದುರಾದಾಗ ಮಾತ್ರ ಮಳೆನೀರು ಕೊಯ್ಲು ಬಹುಚರ್ಚಿತವಾಗುವುದು ಖೇದಕರವಾಗಿದೆ. ಮುಂದುವರಿದ ದೇಶಗಳು ಭಾರತದಂತೆ ಬಾಯಾರಿಕೆಯಾದಾಗ ಬಾವಿ ತೋಡುವುದಿಲ್ಲ, ಬರಗಾಲದಲ್ಲಿಯೂ ನಾಡು ಸುಭಿಕ್ಷವಾಗಿರುವಂತೆ ಗಮನವಿಟ್ಟು ಮಳೆನೀರು ಕುರಿತಾದ ಶಾಶ್ವತ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿರುವುದು ಪ್ರಶಂಸನೀಯ.
ಸದ್ಯ ದೇಶಾದ್ಯಂತ ಬರಗಾಲ ಆವರಿಸಿದೆ. ಪ್ರಸಕ್ತ ಭಾರತದಲ್ಲಿ ಶೇ. 15 ಮತ್ತು ಕರ್ನಾಟಕದಲ್ಲಿ ಶೇ. 42 ಮಳೆಯು ಕೊರತೆಯಾಗಿರುವುದರಿಂದ ಬಹುತೇಕ ಅಣೆಕಟ್ಟುಗಳು ಭರ್ತಿಯಾಗಿಲ್ಲ. ಕೇಂದ್ರ ಜಲ ಆಯೋಗದ ಇತ್ತೀಚಿನ ವರದಿ ಪ್ರಕಾರ, ಭಾರತದಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯವು 183.56 ಬಿಲಿಯನ್ ಕ್ಯೂಬಿಕ್ ಮೀಟರ್ ಇದೆಯಾದರೂ ಪ್ರಸಕ್ತ ತಲೆದೋರಿರುವ ಬರಗಾಲದಿಂದಾಗಿ ಕೇವಲ 59.443 (ಶೇ. 32.38) ಬಿಲಿಯನ್ ಕ್ಯೂಬಿಕ್ ಮೀಟರ್ ಅಂದರೆ 5,94,430 ಕೋಟಿ ಲೀಟರ್ ನೀರು ಸಂಗ್ರಹವಿದೆ. ಭಾರತೀಯ ಮಾನದಂಡಗಳ ಪ್ರಕಾರ ಒಬ್ಬ ವ್ಯಕ್ತಿಗೆ ಪ್ರತೀ ದಿವಸ 138 ಲೀಟರ್ ನೀರು ಅವಶ್ಯವಿದೆ. ದೇಶದಲ್ಲಿರುವ 147 ಕೋಟಿ ಜನತೆಗೆ ಪ್ರತಿದಿನ 20,286 ಕೋಟಿ ಲೀಟರ್ ನೀರು ಅವಶ್ಯವಿದೆ. ಅಂದರೆ ಒಂದು ವರ್ಷಕ್ಕೆ 74,04,390 ಕೋಟಿ ಲೀಟರ್ ನೀರು ಗೃಹಬಳಕೆಗಾಗಿ ಬೇಕು. ಕೃಷಿ ಹಾಗೂ ಕೈಗಾರಿಕೆಗಳು ಒತ್ತಟ್ಟಿಗಿರಲಿ ವಿಶ್ವದ ಶೇ. 18 ಜನಸಂಖ್ಯೆಯನ್ನು ಹೊಂದಿದ ಭಾರತೀಯರಿಗೆ ವರ್ಷಪೂರ್ತಿ ಈ ನೀರು ಸಾಕಾಗುವುದಿಲ್ಲ. ಮಳೆಗಾಲದ ಅವಧಿ ಇನ್ನೂ ಇದೆಯಾದರೂ ಎಲ್‌ನಿನೊ ಪ್ರಭಾವದಿಂದ ಮಳೆಯ ಆಶಾಭಾವನೆ ಕಡಿಮೆಯಿದೆ.
ಭಾರತದಲ್ಲಿ ಪ್ರತಿವರ್ಷ 400 ಬಿಲಿಯನ್ ಕ್ಯೂಬಿಕ್ ಮೀಟರ್ ಅಥವಾ 40,000 ಲಕ್ಷ ಕೋಟಿ ಲೀಟರ್ ಮಳೆ ಬೀಳುತ್ತದೆ. ಇದರಲ್ಲಿ ಅರ್ಧಕ್ಕಿಂತ ಕಡಿಮೆ ಅಂದರೆ 183.56 ಬಿಲಿಯನ್ ಕ್ಯೂಬಿಕ್ ಮೀಟರ್ ಮಳೆನೀರನ್ನು ವಿವಿಧ ಅಣೆಕಟ್ಟೆಗಳಲ್ಲಿ ಮತ್ತು ಜಲಾನಯನ ಪ್ರದೇಶಗಳಲ್ಲಿ ಸಂಗ್ರಹಿಸಲಾಗುತ್ತದೆ. ದೇಶದಲ್ಲಿ ಒಟ್ಟು ಲಭ್ಯವಿರುವ ನೀರಿನ ಪ್ರಮಾಣವು ಅಂದಾಜು 4,000 ಬಿಲಿಯನ್ ಕ್ಯೂಬಿಕ್ ಮೀಟರ್ ಇದೆಯಾದರೂ ಎಲ್ಲವೂ ಬಳಕೆಗೆ ಯೋಗ್ಯವಾಗಿಲ್ಲ. ಇದರಲ್ಲಿ ಕೇವಲ ಶೇ. 5 ಮಾತ್ರ ಬಳಕೆಗೆ ಯೋಗ್ಯವಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳು ಪುನರ್ಬಳಕೆ ಸೇರಿದಂತೆ ವಾರ್ಷಿಕ ಮಳೆಯ ನೀರನ್ನು ಅಣೆಕಟ್ಟು ಮತ್ತು ಶುಷ್ಕ ನದಿ ಜಲಾನಯನ ಪ್ರದೇಶಗಳಲ್ಲಿ ವಿವಿಧ ಕಾರ್ಯತಂತ್ರಗಳಿಂದ ಸಂಗ್ರಹಿಸುತ್ತಿರುವುದು ಅಚ್ಚರಿಯೆನಿಸಿದೆ.
ಇತಿಹಾಸದಲ್ಲಿ ಆಗಿಹೋದ ಬರಗಾಲಗಳನ್ನು ಗಮನಿಸಿದಾಗ ಶತಮಾನದಲ್ಲಿ ಮೂರ್ನಾಲ್ಕು ಬಾರಿ ಬರಗಾಲಗಳು ತಲೆದೋರುತ್ತಿದ್ದವು. ಆದರೆ ಇಂದು ಬರಗಾಲ ಮತ್ತು ಮಳೆಕೊರತೆಯು ಪ್ರತೀ ಮೂರ್ನಾಲ್ಕು ವರ್ಷಗಳಿಗೊಮ್ಮೆ ತಲೆದೋರುವುದು ಸರ್ವೇಸಾಮಾನ್ಯವಾಗಿದೆ. ಆದರೆ ಭಾರತದಲ್ಲಿ ಮಳೆನೀರು ಸಂಗ್ರಹ ಕುರಿತು ಕಟ್ಟುನಿಟ್ಟಾದ ಯೋಜನೆಗಳು ಜಾರಿಯಾಗದಿರುವುದು ದುರಂತವೆಂದು ಬಣ್ಣಿಸಬಹುದು. ಆಸ್ಟ್ರೇಲಿಯದಲ್ಲಿ ಕಳೆದ 2003ರಿಂದ 2012ರವರೆಗೆ ತಲೆದೋರಿದ ಭೀಕರ ಬರಗಾಲದ ಪರಿಣಾಮ ಅಲ್ಲಿನ ಸರಕಾರವು ‘ಅಂಡರ್ ವಾಟರ್ ಫಾರ್ ದಿ ಫ್ಯೂಚರ್’ ಎಂಬ ಯೋಜನೆಯಿಂದ ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿತು. ಇದರ ಪರಿಣಾಮ ಆಸ್ಟ್ರೇಲಿಯದಲ್ಲಿ ಮಳೆಯ ಕೊರತೆಯಾದಾಗಲೂ ಕೃಷಿ, ಕೈಗಾರಿಕೆ ಮತ್ತು ಗೃಹಬಳಕೆಗೆ ನೀರಿನ ಕೊರತೆಯಾಗಿಲ್ಲ ಎಂಬುದು ಗಮನಾರ್ಹವಾಗಿದೆ.
ಇನ್ನೊಂದು ಪ್ರಮುಖ ಸಂಪನ್ಮೂಲವಾಗಿರುವ ಸೌರಶಕ್ತಿಯು ಸಹ ದೇಶದ ಪರಿಸರ ಸಂರಕ್ಷಣೆಗೆ ಪೂರಕವಾದ ಇಂಧನವಾಗಿದೆ. ಪ್ರಸಕ್ತ ತಲೆದೋರಿರುವ ಅಂತರ್‌ರಾಷ್ಟ್ರೀಯ ಮಟ್ಟದ ಯುದ್ಧೋನ್ಮಾದಗಳಿಂದ ಭಾರತದಂತಹ ಅಭಿವೃದ್ಧಿಶೀಲ ದೇಶಗಳು ಪರಿಸರಸ್ನೇಹಿ ಇಂಧನಗಳನ್ನು ಉತ್ಪಾದಿಸಿ ಸ್ವಾವಲಂಬಿಯಾಗಬೇಕಿದೆ. ಈ ನಿಟ್ಟಿನಲ್ಲಿ ಉಚಿತವಾಗಿ ದೊರೆಯುವ ಸೌರಶಕ್ತಿಯನ್ನು ಪ್ರಥಮ ಪ್ರಾಶಸ್ತ್ಯದಲ್ಲಿ ಬಳಸಿಕೊಳ್ಳಬೇಕಾಗಿದೆ. ಈಗಾಗಲೇ ವಿಶ್ವದಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಸೌರಶಕ್ತಿ ಉತ್ಪಾದಿಸುವ ಚೀನಾ, ಅಮೆರಿಕ, ಜಪಾನ್, ಜರ್ಮನಿಯ ನಂತರದ ಸ್ಥಾನದಲ್ಲಿ ಭಾರತ ದೇಶವಿರುವುದಲ್ಲದೆ ವರ್ಷದಿಂದ ವರ್ಷಕ್ಕೆ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಸಮಾಧಾನಕರ ವಿಷಯವಾಗಿದೆ. ಭಾರತದಲ್ಲಿ ಸಾಕಷ್ಟು ಬಯಲು ಪ್ರದೇಶವಿರುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೌರಶಕ್ತಿಯನ್ನು ಉತ್ಪಾದಿಸಲು ವಿಪುಲ ಅವಕಾಶಗಳಿವೆ.
ಕಡಿಮೆ ಖರ್ಚಿನ ಹಾಗೂ ಪರಿಸರ ಮಾಲಿನ್ಯವಿರದ ಸೌರಶಕ್ತಿಯತ್ತ ಭಾರತ ಮತ್ತಷ್ಟು ಗಮನಹರಿಸಬೇಕಿದೆೆ. ಒಟ್ಟಾರೆಯಾಗಿ ಮಳೆನೀರು ಸಂಗ್ರಹ ಮತ್ತು ಸೌರಶಕ್ತಿಯ ಉತ್ಪಾದನೆಯು ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಸಂಪನ್ಮೂಲಗಳಾಗಿವೆ.






