ಖರ್ಗೆಯವರಿಗೆ ಅಪಮಾನ ಪ್ರಜಾಪ್ರಭುತ್ವದ ಬುನಾದಿಯನ್ನೇ ದುರ್ಬಲಗೊಳಿಸುವ ಕೃತ್ಯ

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಕೆಲವು ಸಂಘಟನೆಗಳು ಹೋಮ ಹವನ ಮಾಡಿ ಶುದ್ಧೀಕರಿಸಿದ ಘಟನೆ ಕೇವಲ ಒಂದು ಸ್ಥಳೀಯ ವಿವಾದವಾಗಿ ಉಳಿದಿಲ್ಲ. ಇದು ಭಾರತದ ಸಾರ್ವಜನಿಕ ಜೀವನದಲ್ಲಿ ಜಾತಿ, ಧರ್ಮ, ರಾಜಕೀಯ ಮತ್ತು ಸಂವಿಧಾನಾತ್ಮಕ ಮೌಲ್ಯಗಳು ಹೇಗೆ ಮುಖಾಮುಖಿಯಾಗುತ್ತಿವೆ ಎಂಬುದಕ್ಕೆ ಕನ್ನಡಿಯಾಗಿದೆ.
ಧಾರ್ಮಿಕ ನೆಲೆಯ ಶುದ್ಧೀಕರಣ ಎಂಬ ಕಲ್ಪನೆಯೇ ಇಲ್ಲಿ ಪ್ರಶ್ನೆಯಾಗುತ್ತದೆ. ದೇವಸ್ಥಾನ, ಮನೆ, ಯಜ್ಞ ಸ್ಥಳದ ಪವಿತ್ರತೆಗಾಗಿ ಆಚರಣೆಗಳಿರುವುದು ನಿಜ. ಆದರೆ ಸಾರ್ವಜನಿಕ ಮೈದಾನದಲ್ಲಿ ಒಬ್ಬ ಸಂಸದೀಯ ನಾಯಕ ಮಾತನಾಡಿದ ಕಾರಣಕ್ಕೆ ಅದೇ ಜಾಗವನ್ನು ಮಂತ್ರ ಮತ್ತು ಹೋಮದಿಂದ ಶುದ್ಧ ಮಾಡುವುದು ಎಂದರೆ ಅದರ ಹಿಂದೆ ಒಂದು ನಿರ್ದಿಷ್ಟ ಸಂದೇಶವಿದೆ. ಆ ಸಂದೇಶವೆಂದರೆ ಕೆಲವರ ಅಸ್ತಿತ್ವವೇ ಅಪವಿತ್ರ ಎಂಬುದು.
ಖರ್ಗೆ ಅವರು ದಲಿತ ಸಮುದಾಯದಿಂದ ಬಂದ ದೇಶದ ಹಿರಿಯ ನಾಯಕ. ಅವರ ಉಪಸ್ಥಿತಿಯಿಂದ ಸ್ಥಳ ಅಶುದ್ಧವಾಯಿತು ಎಂಬ ಭಾವನೆ ಮೂಡಿಸುವುದು ನೇರವಾಗಿ ಜಾತಿ ಶ್ರೇಷ್ಠತೆಯನ್ನು ಪುನರುಜ್ಜೀವಿಸುವ ಪ್ರಯತ್ನ. ಸಂವಿಧಾನ ಜಾರಿಗೆ 75 ಬಂದು ವರ್ಷಗಳಾದರೂ ಸಾರ್ವಜನಿಕ ಜಾಗದಲ್ಲಿ ಇಂತಹ ಸಂಕೇತಾತ್ಮಕ ಕೃತ್ಯ ನಡೆಯುವುದು ಧರ್ಮವನ್ನು ಅಸಮಾನತೆಯನ್ನು ಸಮರ್ಥಿಸುವ ಆಯುಧವನ್ನಾಗಿ ಮಾಡಿದಂತಾಗುತ್ತದೆ. ಇದನ್ನು ಯಾವುದೇ ಆಚರಣೆ ಎಂದು ಮುಚ್ಚಿಡಲು ಆಗುವುದಿಲ್ಲ. ಇದು ನಂಬಿಕೆಯ ಹೆಸರಿನಲ್ಲಿ ಮನುಷ್ಯನ ಘನತೆಗೆ ಮಾಡಿದ ಹೊಡೆತ. ಈ ಘಟನೆಯ ಸಮಯ ಮತ್ತು ಪ್ರತಿಕ್ರಿಯೆ ಎರಡೂ ಮಹತ್ವ ಪಡೆದಿವೆ. ಖರ್ಗೆ ಅವರು ಸಂಸತ್ತಿನಲ್ಲಿ ಇದನ್ನು ಪ್ರಸ್ತಾಪಿಸಿದ ಕೂಡಲೇ ವಿಷಯ ರಾಷ್ಟ್ರೀಯ ಚರ್ಚೆಗೆ ಬಂತು.
ಇಂತಹ ಬಾಲಿಶ ಕೃತ್ಯಗಳು ನಾಗರಿಕ ಜವಾಬ್ದಾರಿಯ ಪ್ರಶ್ನೆಯನ್ನು ಮುಂದಿಡುತ್ತದೆ. ಇದು ಒಬ್ಬ ವ್ಯಕ್ತಿಗೆ ಮಾತ್ರ ಮಾಡಿದ ಅಪಮಾನವಲ್ಲ, ವಿರೋಧ ಪಕ್ಷದ ನಾಯಕ ಎಂಬ ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಧ್ವನಿಯನ್ನು ಹತ್ತಿಕ್ಕುವ ಪ್ರತೀ ಪ್ರಯತ್ನವೂ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧ. ಇದು ಚುನಾವಣಾ ರಾಜಕಾರಣ, ಜಾತಿ ಮತದಾರರ ಒಗ್ಗಟ್ಟು ಮತ್ತು ದಲಿತ ನಾಯಕರ ಸುರಕ್ಷತೆಯ ಪ್ರಶ್ನೆಯನ್ನೂ ಮುಟ್ಟುತ್ತದೆ.
ಜವಾಬ್ದಾರಿಯುತ ನಾಗರಿಕರ ದೃಷ್ಟಿಯಲ್ಲಿ ಇದು ನಮ್ಮ ಸಾಮಾಜಿಕ ಮನಸ್ಥಿತಿಯ ಪರೀಕ್ಷೆ. ಕರ್ನಾಟಕದಲ್ಲಿಯೇ ಬಾಬು ಜಗಜೀವನ್ ರಾಮ್ ಅವರ ಪ್ರತಿಮೆ ಅನಾವರಣದ ನಂತರ ಶುದ್ಧೀಕರಣ ನಡೆದ ಉದಾಹರಣೆ, ಎ. ನಾರಾಯಣಸ್ವಾಮಿ ಅವರಿಗೆ ಗ್ರಾಮ ಪ್ರವೇಶ ನಿರಾಕರಿಸಿದ ಪ್ರಸಂಗ ಈಗಲೂ ನೆನಪಿನಲ್ಲಿದೆ. ಅಂದರೆ ಇದು ಹೊಸದಲ್ಲ. ಪ್ರತೀ ಬಾರಿ ದಲಿತ ನಾಯಕರು ಸಾರ್ವಜನಿಕ ವೇದಿಕೆಗೆ ಬಂದಾಗ ಅವರನ್ನು ಹಳೆಯ ಚೌಕಟ್ಟಿನಲ್ಲಿ ನಿಲ್ಲಿಸುವ ಪ್ರಯತ್ನ ನಡೆಯುತ್ತದೆ.
ಒಂದು ಕಡೆ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ಅನುಸರಿಸುತ್ತೇವೆ, ಮತ್ತೊಂದೆಡೆ ದಲಿತ ನಾಯಕ ನಿಂತ ಜಾಗವನ್ನು ಶುದ್ಧ ಮಾಡುತ್ತೇವೆ. ಇದು ಸಾಂಸ್ಕೃತಿಕ ದ್ವಂದ್ವ. ಈ ದ್ವಂದ್ವ ಮುರಿಯದ ಹೊರತು ಸಮಾಜ ಮುಂದೆ ಹೋಗಲು ಸಾಧ್ಯವಿಲ್ಲ.ಸಮಾಜದ ಮೇಲೆ ಇದರ ಪರಿಣಾಮ ಬಹಳ ಆಳವಾಗಿ ಬೀಳುತ್ತದೆ. ಇದನ್ನು ವಿರೋಧಿಸುವವರ ಆಕ್ರೋಶ ಕೇವಲ ಖರ್ಗೆ ಅವರ ಪರವಾಗಿ ಮಾತ್ರವಲ್ಲ. ತಮ್ಮ ಮಕ್ಕಳ ಶಾಲೆ, ಊರಿನ ದೇವಸ್ಥಾನ, ಕೆಲಸದ ಜಾಗಗಳಲ್ಲಿ ಇಂದಿಗೂ ಎದುರಾಗುವ ಸೂಕ್ಷ್ಮ ತಾರತಮ್ಯದ ಸಂಕೇತವಾಗಿ ಅವರು ಇದನ್ನು ನೋಡುತ್ತಿದ್ದಾರೆ. ಸಾರ್ವಜನಿಕ ಸ್ಥಳ ಶುದ್ಧೀಕರಣ ಎಂಬುದು ವೈಯಕ್ತಿಕ ಅಪಮಾನಕ್ಕಿಂತ ಹೆಚ್ಚಾಗಿ ಇಡೀ ಸಮುದಾಯಕ್ಕೆ ‘ನೀವು ಇನ್ನೂ ಹೊರಗಿನವರು’ ಎಂಬ ಸಂದೇಶ ಕೊಡುತ್ತದೆ. ಕಾನೂನು ಕ್ರಮವಾಗದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಎಚ್ಚರಿಸಿರುವುದು ಈ ನೋವಿನ ಆಳವನ್ನು ತೋರಿಸುತ್ತದೆ.
ಸ್ವತಂತ್ರ ಭಾರತದಲ್ಲಿ ಸಂವಿಧಾನಕ್ಕೂ ಬೆಲೆ ಕೊಡದೆ ಮುಸಲ್ಮಾನರನ್ನು ಮಾನಸಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಮೂಲೆ ಗುಂಪು ಮಾಡುವ ಪ್ರಯತ್ನಗಳು ನಡೆಯುತ್ತಿರುವುದೂ, ಶತಮಾನಗಳಿಂದ ದಲಿತರನ್ನು ಗುರಿಯಾಗಿಸಿಕೊಂಡು ಅಪಮಾನಿಸುವ ಅದೇ ಮನೋಭಾವ ಇಂದಿಗೂ ಮುಂದುವರಿದಿರುವುದೂ ಅತ್ಯಂತ ಖಂಡನೀಯ. ಸಂವಿಧಾನ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕು, ಘನತೆ ಮತ್ತು ಅವಕಾಶ ನೀಡುತ್ತದೆ ಎಂದು ಹೇಳಿದರೂ, ಆಚರಣೆಯಲ್ಲಿ ಕೆಲವರು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ವಿಭಜನೆ ಸೃಷ್ಟಿಸುತ್ತಿದ್ದಾರೆ. ಒಂದೆಡೆ ಅಲ್ಪಸಂಖ್ಯಾತರನ್ನು ಅನುಮಾನದಿಂದ ನೋಡುವುದು, ಇನ್ನೊಂದೆಡೆ ದಲಿತ ನಾಯಕರ ಉಪಸ್ಥಿತಿಯನ್ನೇ ಅಶುದ್ಧ ಎಂದು ಬಿಂಬಿಸುವುದು, ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಇವೆರಡೂ ಪ್ರಜಾಪ್ರಭುತ್ವದ ಬುನಾದಿಯನ್ನೇ ದುರ್ಬಲಗೊಳಿಸುತ್ತವೆ.
ಆದ್ದರಿಂದ ಈ ಘಟನೆಯನ್ನು ಕೇವಲ ಒಂದು ಸಮುದಾಯದ ಸಮಸ್ಯೆಯಾಗಿ ಸೀಮಿತಗೊಳಿಸಬಾರದು. ಇದು ಭಾರತೀಯರೆಲ್ಲರ ಆತ್ಮಸಾಕ್ಷಿಯ ಪ್ರಶ್ನೆ. ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವೆ ಅಂತರ ಕಲ್ಪಿಸುವುದು, ರಾಜಕೀಯ ಭಿನ್ನಾಭಿಪ್ರಾಯವನ್ನು ಜಾತಿಯ ಆಯುಧದಿಂದ ಎದುರಿಸುವುದು, ಸಂಸ್ಕೃತಿಯ ಹೆಸರಿನಲ್ಲಿ ಹಳೆಯ ತಾರತಮ್ಯವನ್ನು ಮರುಸ್ಥಾಪಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಸರಕಾರ, ಪೊಲೀಸ್ ಮತ್ತು ಸಂಬಂಧಿಸಿದ ಸಂಸ್ಥೆಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮೌನ ಮತ್ತು ವಿಳಂಬ ಇಂತಹ ಕೃತ್ಯಗಳಿಗೆ ಪರೋಕ್ಷ ಪ್ರೋತ್ಸಾಹ ನೀಡಿದಂತೆ.
ಎಲ್ಲರೂ ಈ ವಿರೋಧವನ್ನು ಸಂವಿಧಾನದ ರಕ್ಷಣೆಯ ವಿರೋಧವಾಗಿ ಮುಂದುವರಿಸಬೇಕು. ವಿರೋಧದ ಜೊತೆಗೆ ಶಿಕ್ಷಣ, ಸಂವಾದ ಮತ್ತು ಕಾನೂನಾತ್ಮಕ ಹೋರಾಟವೂ ಅಷ್ಟೇ ಮುಖ್ಯ. ಶಾಲೆ, ಕಾಲೇಜು, ಸಾರ್ವಜನಿಕ ವೇದಿಕೆಗಳಲ್ಲಿ ಸಂವಿಧಾನದ ಮೌಲ್ಯಗಳ ಬಗ್ಗೆ ನಿರಂತರ ಚರ್ಚೆ ನಡೆಯಬೇಕು. ದಲಿತರಾಗಲಿ, ಮುಸಲ್ಮಾನರಾಗಲಿ, ಯಾವುದೇ ಸಮುದಾಯದವರಾಗಲಿ ಅವರು ಈ ದೇಶದ ಸಮಾನ ಪಾಲುದಾರರು ಎಂಬ ಸತ್ಯವನ್ನು ನಾವು ಪ್ರತಿದಿನ ನೆನಪಿಸಿಕೊಳ್ಳಬೇಕು.
ನಾವು 21ನೇ ಶತಮಾನದ ಭಾರತವನ್ನು ಕಟ್ಟುತ್ತಿದ್ದೇವೆ ಎಂದು ಹೇಳಿಕೊಳ್ಳುವಾಗ ಸಾರ್ವಜನಿಕ ಮೈದಾನವೊಂದು ಯಾರ ಭಾಷಣದಿಂದ ಶುದ್ಧವಾಯಿತು ಅಥವಾ ಅಶುದ್ಧವಾಯಿತು ಎಂಬ ಚರ್ಚೆ ನಮ್ಮನ್ನು ಹಿಂದಕ್ಕೆ ಎಳೆಯುತ್ತದೆ. ಸಮಾನತೆ, ಸಹೋದರತೆ ಮತ್ತು ಘನತೆ ಎಂಬ ಸಂವಿಧಾನದ ಆಶಯಗಳನ್ನು ನಾವು ನಿಜವಾಗಿಯೂ ನಂಬಿದರೆ, ಇಂತಹ ಘಟನೆಗಳ ವಿರುದ್ಧ ಒಂದೇ ದನಿಯಲ್ಲಿ ನಿಲ್ಲಬೇಕಾಗುತ್ತದೆ. ಆಗ ಮಾತ್ರ ನಮ್ಮ ಮನಸ್ಸುಗಳ ‘ಶುದ್ಧೀಕರಣ’ವಾಗುತ್ತವೆ ಮತ್ತು ಆಗ ಮಾತ್ರ ನಾವು ನಿಜವಾದ ಅರ್ಥದಲ್ಲಿ ಸ್ವತಂತ್ರ ಭಾರತವನ್ನು ಕಟ್ಟಿದಂತಾಗುತ್ತದೆ. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ನಾವು ಬಿಡುವ ಉದಾಹರಣೆ ವಿಭಜನೆಯದ್ದಾಗಿರುತ್ತದೆಯೇ ಹೊರತು ಏಕತೆಯದ್ದಾಗಿರುವುದಿಲ್ಲ.






