ಚಂದ್ರ ಮೊದಲು: ಬಾಹ್ಯಾಕಾಶದಲ್ಲಿ ಎಲಾನ್ ಮಸ್ಕ್ ಸ್ಮಾರ್ಟ್ ಹೆಜ್ಜೆ

ಕಳೆದ ವಾರಾಂತ್ಯದಲ್ಲಿ, ಎಲಾನ್ ಮಸ್ಕ್ ತನ್ನ ಸಂಸ್ಥೆ ಸ್ಪೇಸ್‌ಎಕ್ಸ್ ಮೊದಲಿಗೆ ಚಂದ್ರನ ಮೇಲೆ ನಗರವೊಂದನ್ನು ನಿರ್ಮಿಸುವತ್ತ ಗಮನ ಹರಿಸುತ್ತಿದೆ ಎನ್ನುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಬಹುಶಃ ಇದು ಎಲಾನ್ ಮಸ್ಕ್ ಇಂದಿನ ತನಕ ಕೈಗೊಂಡಿರಬಹುದಾದ ಅತ್ಯಂತ ಬುದ್ಧಿವಂತಿಕೆಯ ನಿರ್ಧಾರವಾಗಿರಬಹುದು!
ಎಲಾನ್ ಮಸ್ಕ್ ತಾನು ಸಾಗುವುದಕ್ಕಿಂತಲೂ ಉತ್ತಮವಾದ ಹಾದಿ ಕಂಡಾಗ ತನ್ನ ಮನಸ್ಸು ಬದಲಾಯಿಸಿ, ಆ ಉತ್ತಮವಾದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವಂತಹ ವ್ಯಕ್ತಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಾರಿ, ಮಂಗಳ ಗ್ರಹ ಅನ್ವೇಷಣೆಗೂ ಮುನ್ನ ಚಂದ್ರನತ್ತ ಸಾಗುವ ಮಸ್ಕ್ ನಿರ್ಧಾರ ಅನಿರೀಕ್ಷಿತ ಅಥವಾ ಅಸಹಜವೇನಲ್ಲ. ಹಾಗೆ ನೋಡಿದರೆ, ಇದು ಒಂದು ರೀತಿಯಲ್ಲಿ ತಾರ್ಕಿಕವಾದ ನಿರ್ಧಾರವೂ ಹೌದು.
ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ, ಎಲಾನ್ ಮಸ್ಕ್ ಅವರು ಮಂಗಳ ಗ್ರಹ ಮಾನವ ಜನಾಂಗದ ಅಂತಿಮ ನೆಲೆ ಎಂದು ಹೇಳುತ್ತಲೇ ಬಂದಿದ್ದಾರೆ. ಒಂದಲ್ಲ ಒಂದು ದಿನ ಮಾನವರು ಮಂಗಳ ಗ್ರಹದಲ್ಲಿ ವಾಸಿಸುವಂತೆ ಮಾಡುವುದು ಅವರ ಉದ್ದೇಶವಾಗಿದ್ದು, ಇದಕ್ಕಾಗಿ 2002ರಲ್ಲಿ ಅವರು ಸ್ಪೇಸ್‌ಎಕ್ಸ್ ಸಂಸ್ಥೆಯನ್ನು ಆರಂಭಿಸಿದ್ದರು. ಆದರೆ, ಕಳೆದ ವರ್ಷ ಮಸ್ಕ್ ಮಂಗಳ ಗ್ರಹ ಒಂದು ‘ಗಮನ ಬೇರೆಡೆ ಸೆಳೆಯುವ ವಿಚಾರ’ ಎಂದಿದ್ದರು. ಆ ಬಳಿಕ, ಏನೋ ಬದಲಾವಣೆಗಳು ನಡೆದವು.
ಕಳೆದ ವಾರಾಂತ್ಯದಲ್ಲಿ, ಎಲಾನ್ ಮಸ್ಕ್ ತನ್ನ ಸಂಸ್ಥೆ ಸ್ಪೇಸ್‌ಎಕ್ಸ್ ಮೊದಲಿಗೆ ಚಂದ್ರನ ಮೇಲೆ ನಗರವೊಂದನ್ನು ನಿರ್ಮಿಸುವತ್ತ ಗಮನ ಹರಿಸುತ್ತಿದೆ ಎನ್ನುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಬಹುಶಃ ಇದು ಎಲಾನ್ ಮಸ್ಕ್ ಇಂದಿನ ತನಕ ಕೈಗೊಂಡಿರಬಹುದಾದ ಅತ್ಯಂತ ಬುದ್ಧಿವಂತಿಕೆಯ ನಿರ್ಧಾರವಾಗಿರಬಹುದು!
ಮಸ್ಕ್ ನಿರ್ಧಾರ ಯಾಕೆ ಮಹತ್ವದ್ದು ಎಂದು ಗಮನಿಸೋಣ. ಮಂಗಳ ಗ್ರಹ ಮತ್ತು ಚಂದ್ರ ಎರಡೂ ಪ್ರಯಾಣದ ಅವಧಿ ಮತ್ತು ಪ್ರಯಾಣದ ಸಂಖ್ಯೆಗಳಲ್ಲಿ ಅತ್ಯಂತ ಭಿನ್ನವಾಗಿವೆ. ಮಂಗಳ ಗ್ರಹಕ್ಕೆ ಪ್ರಯಾಣ ಬೆಳೆಸಬೇಕೆಂದರೆ, ಆಗ ಮಂಗಳ ಮತ್ತು ಭೂಮಿ ಒಂದೇ ನೇರದಲ್ಲಿ ಇರಬೇಕು. ಇಂತಹ ಸಾಧ್ಯತೆ ಕೇವಲ 26 ತಿಂಗಳುಗಳಿಗೆ ಒಮ್ಮೆ ಮಾತ್ರ ಘಟಿಸುತ್ತದೆ. ಇನ್ನು ಭೂಮಿಯಿಂದ ಮಂಗಳ ಗ್ರಹವನ್ನು ತಲುಪಲು ಅಂದಾಜು ಆರು ತಿಂಗಳು ಪ್ರಯಾಣ ಬೆಳೆಸಬೇಕಾಗುತ್ತದೆ. ಆದರೆ, ಚಂದ್ರ ಭೂಮಿಯಿಂದ ಕೇವಲ ಎರಡು ದಿನಗಳ ಪ್ರಯಾಣದ ದೂರದಲ್ಲಿದ್ದು, ಪ್ರತೀ ಹತ್ತು ದಿನಗಳಿಗೊಮ್ಮೆ ಚಂದ್ರನತ್ತ ಉಡಾವಣೆ ನಡೆಸಬಹುದು. ಆದ್ದರಿಂದ, ಚಂದ್ರನ ಮೇಲೆ ನಮ್ಮ ಪರೀಕ್ಷೆಗಳು, ಪ್ರಯೋಗಗಳನ್ನು ನಡೆಸುತ್ತಾ, ನಾವು ತಂತ್ರಜ್ಞಾನವನ್ನು ಬಹಳ ವೇಗವಾಗಿ ಸುಧಾರಿಸಬಹುದು. ಇದು ಒಂದು ರೀತಿ ದೊಡ್ಡ ಕ್ರೀಡಾಂಗಣದಲ್ಲಿ ಮುಖ್ಯ ಪಂದ್ಯಾವಳಿಯಲ್ಲಿ ಆಡುವ ಮುನ್ನ ಸ್ಥಳೀಯ ಮೈದಾನದಲ್ಲಿ ಅಭ್ಯಾಸ ನಡೆಸಿದಂತಿರಲಿದೆ.
ಮುಂದಿನ ಹತ್ತು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಚಂದ್ರನ ಮೇಲೆ ಸ್ವತಃ ಬೆಳೆಯಬಲ್ಲ ನಗರವನ್ನು ಕಟ್ಟಲು ಸಾಧ್ಯ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಆದರೆ, ಮಂಗಳ ಗ್ರಹಕ್ಕೆ ತೆರಳಲು ಹೆಚ್ಚಿನ ಸಮಯ ಬೇಕಾಗುವುದರಿಂದ, ಅಲ್ಲಿ ನಿರ್ಮಾಣ ಕಾರ್ಯಕ್ಕೆ ಇಪ್ಪತ್ತು ವರ್ಷಕ್ಕೂ ಹೆಚ್ಚಿನ ಅವಧಿ ಬೇಕಾಗುತ್ತದೆ. ಚಂದ್ರನ ಮೇಲೆಯೇ ಹೆಚ್ಚು ಮಹತ್ವದ್ದನ್ನು ಸಾಧಿಸಲು ಸಾಧ್ಯವಿರುವಾಗ, ಅಷ್ಟೊಂದು ಸುದೀರ್ಘ ಕಾಲ ಕಾಯುವ ಅಗತ್ಯವೇನು? ಇದೊಂದು ಸರಳ ಪರಿಹಾರವುಳ್ಳ ವಿಚಾರ.
ವಿಚಾರಗಳು ನಿಜಕ್ಕೂ ಆಸಕ್ತಿಕರವಾಗುತ್ತಾ ಹೋಗುವುದು ಇಲ್ಲಿಂದ. ಎಲಾನ್ ಮಸ್ಕ್ ಕೇವಲ ನೆಲೆಗಳು, ವಸಾಹತುಗಳನ್ನು ನಿರ್ಮಿಸಲು ಆಲೋಚಿಸುತ್ತಿಲ್ಲ. ಬದಲಿಗೆ, ಅವರು ಕಾರ್ಖಾನೆಗಳ ನಿರ್ಮಾಣವನ್ನೂ ಆಲೋಚಿಸುತ್ತಿದ್ದಾರೆ. ಸ್ಪೇಸ್‌ಎಕ್ಸ್ ಸಂಸ್ಥೆ ಚಂದ್ರನ ಮೇಲೆ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಯೋಚನೆ ಹೊಂದಿದೆ. ಈ ಕಾರ್ಖಾನೆಗಳು ಚಂದ್ರನ ಮೇಲಿರುವ ಮಣ್ಣು ಮತ್ತು ಖನಿಜಗಳಂತಹ ಸಂಪನ್ಮೂಲಗಳನ್ನು ಬಳಸಿಕೊಂಡು, ಉಪಗ್ರಹಗಳನ್ನು ನಿರ್ಮಿಸಲಿದೆ. ಬಳಿಕ, ಎಲೆಕ್ಟ್ರೋಮ್ಯಾಗ್ನೆಟಿಕ್ ಮಾಸ್ ಡ್ರೈವರ್ ಎನ್ನುವ ತಂತ್ರಜ್ಞಾನವನ್ನು ಬಳಸಿಕೊಂಡು, ಈ ಉಪಗ್ರಹಗಳನ್ನು ಬಾಹ್ಯಾಕಾಶದ ಆಳಕ್ಕೆ ಉಡಾವಣೆಗೊಳಿಸಲಿದೆ.
ಏನು ಈ ಎಲೆಕ್ಟ್ರೋಮ್ಯಾಗ್ನೆಟಿಕ್ ಮಾಸ್ ಡ್ರೈವರ್? ಇದನ್ನು ಒಂದು ಬೃಹತ್ ಇಲೆಕ್ಟ್ರಿಕ್ ರೈಲ್ ಗನ್ ಅಥವಾ ವಸ್ತುಗಳನ್ನು ಬಾಹ್ಯಾಕಾಶಕ್ಕೆ ದೂರಕ್ಕೆ ಉಡಾವಣೆಗೊಳಿಸಲು ಕಾಂತೀಯ ಶಕ್ತಿಯನ್ನು ಬಳಸುವ ಶಕ್ತಿಶಾಲಿ ಕವಣೆ ಯಂತ್ರ ಎಂದುಕೊಳ್ಳಬಹುದು. ಇದಕ್ಕಾಗಿ ದುಬಾರಿಯಾದ ರಾಕೆಟ್ ಇಂಧನದ ಅಗತ್ಯವಿಲ್ಲ. ಗುರುತ್ವಾಕರ್ಷಣೆ ಅತ್ಯಂತ ಕಡಿಮೆಯಿರುವ ಮತ್ತು ದಪ್ಪನೆಯ ವಾತಾವರಣವನ್ನು ಹೊಂದಿರದ ಚಂದ್ರನ ಮೇಲೆ ಈ ವಿಧಾನ ಅತ್ಯಂತ ಪರಿಣಾಮಕಾರಿ ಎನಿಸಲಿದೆ. ಚಂದ್ರನ ಮೇಲೆ ಏನನ್ನಾದರೂ ನಿರ್ಮಿಸಿ, ಅದನ್ನು ಗ್ಯಾಲನ್‌ಗಟ್ಟಲೆ ರಾಕೆಟ್ ಇಂಧನವನ್ನು ಉರಿಸದೆ, ಕೇವಲ ವಿದ್ಯುತ್ ಶಕ್ತಿ ಮತ್ತು ಅಯಸ್ಕಾಂತಗಳನ್ನು ಬಳಸಿಕೊಂಡು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಈ ಸಾಧ್ಯತೆ ಬಾಹ್ಯಾಕಾಶ ಅನ್ವೇಷಣೆಯನ್ನೇ ಬದಲಾಯಿಸಬಲ್ಲದು.
ಇಲ್ಲಿನ ನಿಜವಾದ ಕನಸು ‘ಕರ್ಡಾಶೆವ್ ಸ್ಕೇಲ್’ ಎನ್ನುವುದು. ಇದು ಒಂದು ನಾಗರಿಕತೆ ಎಷ್ಟರಮಟ್ಟಿಗೆ ಆಧುನಿಕವಾಗಿದೆ ಎನ್ನುವುದನ್ನು ಅದು ಎಷ್ಟರಮಟ್ಟಿಗೆ ಇಂಧನ ನಿಯಂತ್ರಣ ನಡೆಸಬಲ್ಲದು ಎನ್ನುವುದರ ಆಧಾರದಲ್ಲಿ ಅಳೆಯುತ್ತದೆ. ಇದನ್ನು ಸರಳವಾಗಿ ತಿಳಿಯೋಣ. ಒಂದನೇ ಹಂತದ ನಾಗರಿಕತೆ ಎಂದರೆ, ಸಂಪೂರ್ಣ ಗ್ರಹದಲ್ಲಿರುವ ಎಲ್ಲ ಇಂಧನವನ್ನು ಬಳಸಬಲ್ಲ ಮತ್ತು ನಿಯಂತ್ರಿಸಬಲ್ಲ ನಾಗರಿಕತೆ. ಆದರೆ, ಸದ್ಯದ ಮಟ್ಟಿಗೆ ಭೂಮಿ ಒಂದನೇ ಹಂತದ ಆಸುಪಾಸಿಗೂ ತಲುಪಿಲ್ಲ. ನಾವು ಈಗ ಭೂಮಿ ಉತ್ಪಾದಿಸುವ ಎಲ್ಲ ಇಂಧನವನ್ನು ಬಳಸಲೂ ಸಾಧ್ಯವಿಲ್ಲ. ಆದರೆ, ಎಲಾನ್ ಮಸ್ಕ್ ಯೋಜನೆ ಕಾರ್ಯರೂಪಕ್ಕೆ ಬಂದರೆ, ಆಗ ನಾವು ಕ್ರಮೇಣ ಸೂರ್ಯನಿಂದ ಬರುವ ಶಕ್ತಿಯ ದೊಡ್ಡ ಪ್ರಮಾಣದ ಪಾಲನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಅಂದರೆ, ನಾವು ಸಂಪೂರ್ಣ ಜಗತ್ತಿಗೇ ಬೆಳಕು ನೀಡುವ ಸಾಮರ್ಥ್ಯವಿರುವ ಉಪಗ್ರಹಗಳ ಕುರಿತು ಮಾತನಾಡುತ್ತಿದ್ದೇವೆ. ಇದು ಕೇವಲ ವೈಜ್ಞಾನಿಕ ಕಥೆ-ಕಾದಂಬರಿಗೆ ಸೀಮಿತವಾದ ವಿಚಾರವಾಗಿ ಉಳಿದಿಲ್ಲ.
ಒಂದಷ್ಟು ಜನರು ಎಲಾನ್ ಮಸ್ಕ್ ಈಗ ಅವಾಸ್ತವಿಕ ಮತ್ತು ಅತಿಯಾದ ಮಹತ್ವಾಕಾಂಕ್ಷೆಯ ಕನಸುಗಳನ್ನು ಕಾಣುತ್ತಿದ್ದಾರೆ ಎಂದು ಭಾವಿಸಬಹುದು. ಆದರೆ, ಮಸ್ಕ್ ಅವರ ಚಂದ್ರನತ್ತ ಮೊದಲು ಎನ್ನುವ ಕಾರ್ಯತಂತ್ರ ನಿಜಕ್ಕೂ ಹೆಚ್ಚು ಪ್ರಾಯೋಗಿಕವಾಗಿದೆ. ಮಸ್ಕ್ ಈಗ ಬಹುದೊಡ್ಡ ಗುರಿಗಳನ್ನು ಹಲವು ಸಣ್ಣದಾದ, ಸಾಧಿಸಬಹುದಾದ ಹೆಜ್ಜೆಗಳಾಗಿ ಮಾರ್ಪಡಿಸುತ್ತಿದ್ದಾರೆ. ಮೊದಲು ಚಂದ್ರನ ಮೇಲೆ ನಿರ್ಮಾಣ ಕಾರ್ಯ ನಡೆಸಿ, ತಂತ್ರಜ್ಞಾನ ಕಾರ್ಯಾಚರಿಸುತ್ತದೆ ಎನ್ನುವುದನ್ನು ಸಾಬೀತುಪಡಿಸಿ, ಬಳಿಕ ಮಂಗಳ ಗ್ರಹದತ್ತ ಸಾಗಬಹುದು. ನೈಜ ಜಗತ್ತಿನಲ್ಲಿ ನೈಜ ಯೋಜನೆಗಳು ಹೀಗೆಯೇ ಕಾರ್ಯರೂಪಕ್ಕೆ ಬರುತ್ತವೆ.
ಆದರೆ, ಇಲ್ಲಿ ಇನ್ನೂ ಹಲವಾರು ಸವಾಲುಗಳಿವೆ. ಸ್ಪೇಸ್‌ಎಕ್ಸ್ ಸಂಸ್ಥೆಯ ಸ್ಟಾರ್‌ಶಿಪ್ ಎನ್ನುವ ಬೃಹತ್ ರಾಕೆಟ್ ಈಗಾಗಲೇ ಹಲವಾರು ಪರೀಕ್ಷಾ ಹಾರಾಟಗಳನ್ನು ಪೂರ್ಣಗೊಳಿಸಿದ್ದು, ಕಕ್ಷೀಯ ವೇಗವನ್ನು (ಆರ್ಬಿಟಲ್ ವೆಲೋಸಿಟಿ) ಸಾಧಿಸಿದೆ. ಇದು ನಿಜಕ್ಕೂ ಭಾರೀ ಸಾಧನೆಯೇ ಸರಿ. ಆದರೆ, ರಾಕೆಟ್ ಇಂದಿಗೂ ಪೂರ್ಣ ಯಶಸ್ಸನ್ನು ಸಾಧಿಸಿಲ್ಲ. ಅದು ಇನ್ನೂ ಮರು ಬಳಕೆ ಮಾಡಬಹುದಾದ ಪ್ರಯಾಣವನ್ನು, ಅಂದರೆ, ರಾಕೆಟ್ ಪರಿಪೂರ್ಣ ಪರಿಸ್ಥಿತಿಯಲ್ಲಿ ಭೂಮಿಗೆ ಮರಳಿ, ತಕ್ಷಣವೇ ಮರುಬಳಕೆಗೆ ಸಿದ್ಧವಾಗುವುದನ್ನು ಸಾಬೀತುಪಡಿಸಿಲ್ಲ. ಸ್ಟಾರ್‌ಶಿಪ್‌ಗೆ ಬಾಹ್ಯಾಕಾಶದಲ್ಲಿ ಇಂಧನ ಮರುಪೂರಣ ನಡೆಸಬೇಕಿದ್ದು, ಇದಕ್ಕಾಗಿ ಹಲವಾರು ಉಡಾವಣಾ ಪ್ರಯತ್ನಗಳನ್ನು ನಡೆಸಬೇಕಾಗುತ್ತದೆ. ಇದು ಸಂಕೀರ್ಣವಾದ ಮತ್ತು ಅಪಾಯಕಾರಿಯಾದ ಕಾರ್ಯ. ನಾಸಾ ಬಳಿ ಇದೇ ರೀತಿಯ ಒಪ್ಪಂದಗಳಿಗೆ ಬ್ಲೂ ಒರಿಜಿನ್‌ನಂತಹ ಹಲವಾರು ಕಂಪೆನಿಗಳೂ ಸ್ಪರ್ಧಿಸುತ್ತಿದ್ದು, ಇಲ್ಲಿ ಸಾಕಷ್ಟು ಒತ್ತಡವೂ ಸೃಷ್ಟಿಯಾಗಿದೆ.
ನನ್ನ ಅಭಿಪ್ರಾಯ ಏನೆಂದರೆ, ಚಂದ್ರನ ಕಡೆಗೆ ಮೊದಲು ಗಮನ ಹರಿಸುವ ಎಲಾನ್ ಮಸ್ಕ್ ನಿರ್ಧಾರ ಮಂಗಳನ ಮೇಲಿನ ಆದ್ಯತೆಯನ್ನು ಕೈಬಿಡುವುದು ಎಂದರ್ಥವಲ್ಲ. ಬದಲಿಗೆ, ಯೋಜನೆಗಳ ಕುರಿತು ಸ್ಮಾರ್ಟ್ ಆಗಿ ಆಲೋಚಿಸುವುದಾಗಿದೆ. ಚಂದ್ರನ ಯೋಜನೆಯ ಜೊತೆಗೆ, ಐದರಿಂದ ಆರು ವರ್ಷಗಳಲ್ಲಿ ಮಂಗಳ ಗ್ರಹದಲ್ಲೂ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ಮಸ್ಕ್ ಹೇಳಿದ್ದಾರೆ. ಮಾನವ ಸಹಿತ ಮಂಗಳ ಯೋಜನೆ 2031ರಲ್ಲಿ ನಡೆಯುವ ನಿರೀಕ್ಷೆಗಳಿವೆ. ಮಂಗಳ ಗ್ರಹದ ಅನ್ವೇಷಣೆಯನ್ನು ಕೈಬಿಡಲಾಗಿಲ್ಲ. ಆದರೆ, ಈಗ ಮೊದಲ ಆದ್ಯತೆಯ ಸ್ಥಾನಕ್ಕೆ ಚಂದ್ರಾನ್ವೇಷಣೆ ಬಂದಿದೆ.
ನೀವು ಒಂದು ಬಲುದೂರದ ನಗರಕ್ಕೆ ತೆರಳುವ ಯೋಜನೆ ಹಾಕಿಕೊಂಡಿದ್ದರೆ, ಅದಕ್ಕೆ ಸಿದ್ಧಗೊಳ್ಳಲು ನೀವು ಮೊದಲು ಸ್ವಲ್ಪ ಸನಿಹದ ನಗರಕ್ಕೆ ವರ್ಗಾವಣೆಗೊಳ್ಳಬಹುದು. ನೀವು ಒಂದು ಬಾರಿ ಅಲ್ಲಿಗೆ ಹೊಂದಿಕೊಳ್ಳಲು ಸಾಧ್ಯವಾದರೆ, ಇನ್ನಷ್ಟು ದೂರದ ನಗರಕ್ಕೆ ತೆರಳುವುದು ನಿಮಗೆ ಸುಲಭವಾಗಲಿದೆ. ಎಲಾನ್ ಮಸ್ಕ್ ಈಗ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಇದನ್ನೇ ನಡೆಸುತ್ತಿದ್ದಾರೆ.
ಮಸ್ಕ್ ನಿರ್ಧಾರ ಅವರ ಆಲೋಚನೆಯಲ್ಲಿರುವ ಪ್ರೌಢಿಮೆಯನ್ನು ಪ್ರದರ್ಶಿಸಿದೆ. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯೂ ಸರಿಯಾದ ಮಾರ್ಗ ಕಂಡಾಗ ತನ್ನ ಮನಸ್ಸು ಬದಲಿಸಬಹುದು ಎನ್ನುವುದನ್ನು ಇದು ಸಾಬೀತುಪಡಿಸಿದೆ. ಬಾಹ್ಯಾಕಾಶದಲ್ಲಿ ಮಾನವ ಜನಾಂಗದ ಕನಸು ಕಾಣುವ ನಮಗೆಲ್ಲರಿಗೂ, ಈ ಚಂದ್ರ ಅನ್ವೇಷಣೆ ಮೊದಲು ಎನ್ನುವ ವಿಧಾನ ನಾವು ಕಾಯುತ್ತಿದ್ದ ಎಲ್ಲಕ್ಕೂ ಬಾಗಿಲು ತೆರೆಯುವ ಕೀಲಿಕೈ ಆಗಬಹುದು!






