Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ನೈತಿಕತೆಯ ಪಾತಾಳ ಕುಸಿತಕ್ಕೆ ಕೊನೆಯೇ...

ನೈತಿಕತೆಯ ಪಾತಾಳ ಕುಸಿತಕ್ಕೆ ಕೊನೆಯೇ ಇಲ್ಲವೇ?

ವ್ಯಾಪಿಸುತ್ತಿರುವ ಮಹಿಳಾ ದೌರ್ಜನ್ಯಗಳು ಸಮಾಜದ ನೈತಿಕ ಅಧಃಪತನದ ಸೂಚನೆಯಲ್ಲವೇ ?

ನಾ. ದಿವಾಕರನಾ. ದಿವಾಕರ18 April 2025 9:17 AM IST
share
ನೈತಿಕತೆಯ ಪಾತಾಳ ಕುಸಿತಕ್ಕೆ ಕೊನೆಯೇ ಇಲ್ಲವೇ?

‘‘ಏನಾಗಿದೆ ನಮ್ಮ ಗಂಡಸರಿಗೆ? ಈ ಹಿಂಸೆಗೆ ಎಲ್ಲೆಯೇ ಇಲ್ವಾ. ಪ್ರಜ್ಞಾವಂತ ಗಂಡಸರು ಈ ಬಗ್ಗೆ ಏನು ಮಾಡ್ತಾ ಇದ್ದಾರೆ? ಹೆಣ್ಣು ಜೀವದ ಮೇಲೆ ನಡೆಯುತ್ತಿರುವ ನಿರಂತರ ಲೈಂಗಿಕ ಹಿಂಸೆಯನ್ನು ಕೌಟುಂಬಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ ನೋಡಿ ಪರಿಹಾರ ಹುಡುಕಬೇಕಲ್ವಾ?’’ ಒಂದು ಸಂವಹನದ ನಡುವೆ ಕೇಳಿಬಂದ ಈ ಪ್ರಶ್ನೆಗಳಿಗೆ ನನ್ನ ಗಂಡು ಹೃದಯ ತಲ್ಲಣಿಸಿ ಹೋಯಿತು. ಮಹಿಳೆಯೊಬ್ಬರ ಈ ಸಾತ್ವಿಕ ಸಿಟ್ಟು, ತಾತ್ವಿಕ ಆಕ್ರೋಶದ ಮಾತುಗಳು ಸುಮ್ಮನೆ ಒಣ ಚರ್ಚೆಗಾಗಿ ಹೊರಬಂದಿದ್ದಲ್ಲ. ಅಥವಾ ಇಡೀ ಗಂಡುಕುಲವನ್ನು ದೋಷಿಯ ಕಟಕಟೆಯಲ್ಲಿ ನಿಲ್ಲಿಸಬೇಕೆಂಬ ಹಠಮಾರಿತನದಿಂದಲೂ ಅಲ್ಲ. ಈ ಪ್ರಶ್ನೆ ಬಹುಶಃ ಭಾರತದ ಪ್ರತಿಯೊಬ್ಬ ಸಾಮಾನ್ಯ ಮಹಿಳೆಯ ಮನಸ್ಸಿನೊಳಗೂ ಇರಲಿಕ್ಕೆ ಸಾಧ್ಯ. ಆದರೆ ಉತ್ತರಕ್ಕಾಗಿ ಎಲ್ಲಿ ಹೋಗುವುದು?

ಹೆಣ್ಣು ಜೀವದ ಮೇಲೆ ದೌರ್ಜನ್ಯ ನಡೆಸುವುದು ಎಷ್ಟು ವ್ಯಾಪಕವಾಗಿದೆ ಎಂದರೆ, ಈ ಅಮಾನುಷ ಕ್ರೌರ್ಯ ಮತ್ತು ಹಿಂಸೆಯ ಮೂಲವನ್ನು ಶೋಧಿಸುವುದೇ ಒಂದು ದುಸ್ಸಾಹಸವಾಗಬಹುದೇನೋ ಅನುಮಾನ. ಅಪರಾಧಗಳು ನಿತ್ಯಸುದ್ದಿಯಾಗುವುದೇನೂ ಹೊಸತಲ್ಲ.

ಆದರೆ ಅತ್ಯಾಚಾರಗಳು ನಿತ್ಯಸುದ್ದಿಯಾದಾಗ ಸೂಕ್ಷ್ಮಮನಸ್ಸುಗಳು ತಲ್ಲಣಿಸಿಹೋಗುತ್ತವೆ. ಅದರಲ್ಲೂ ‘‘ದೊಡ್ಡ ಮೆಟ್ರೋ ನಗರಗಳಲ್ಲಿ ಇವೆಲ್ಲಾ ನಡೆಯುತ್ತಲೇ ಇರುತ್ತವೆ’’ ಎಂದು ಗೃಹ ಸಚಿವರೊಬ್ಬರು ಹೇಳಿದಾಗ, ಈ ತಲ್ಲಣ ಉಲ್ಬಣಿಸುತ್ತದೆ. ಹೌದಲ್ಲವೇ ಅವರೇನೂ ಸುಳ್ಳಾಡಿಲ್ಲ, ಇದು ನಡೆಯುತ್ತಲೇ ಇರುತ್ತದೆ, ನಡೆಯುತ್ತಲೂ ಇದೆ. ಆದರೆ ಎಲ್ಲಿ, ಹೇಗೆ ಎಂಬ ಪ್ರಶ್ನೆಗಿಂತಲೂ ಹೆಚ್ಚಾಗಿ ಏಕೆ? ಎಂಬ ಪ್ರಶ್ನೆ ಈ ಮಹನೀಯರಿಗೆ ಕಾಡಿದೆಯೇ? ಖಂಡಿತವಾಗಿ ಕಾಡಿರಲಿಕ್ಕಿಲ್ಲ, ಏಕೆಂದರೆ ಅತ್ಯಾಚಾರಕ್ಕೊಳಗಾದ ಮಹಿಳೆ ಆ ಕ್ರೌರ್ಯವನ್ನು ಸ್ವತಃ ತಾನೇ ಮೈಮೇಲೆ ಎಳೆದುಕೊಂಡಿದ್ದಾಳೆ ಎಂಬ ನ್ಯಾಯಾಧೀಶರೊಬ್ಬರ ಧ್ವನಿ ಇವರಿಗೆ ಸಮಾಧಾನಕರವಾಗಿ ಕಾಣಬಹುದು.

► ನಿತ್ಯಾಚಾರವಾದ ಅತ್ಯಾಚಾರಗಳು

ದೇಶದಲ್ಲಿ ದಿನನಿತ್ಯ ಸಾವಿರಾರು ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೀಡಾಗುತ್ತಿದ್ದಾರೆ. ಈ ದೌರ್ಜನ್ಯಗಳ ಹಿಂದೆ ಕೇವಲ ಸಾಮಾನ್ಯ ವ್ಯಕ್ತಿಗಳು ಮಾತ್ರ ಇಲ್ಲ ಅಥವಾ ಇಂದು ಗೃಹಸಚಿವರು ಹೇಳಿರುವಂತೆ, ಕರ್ನಾಟಕದಲ್ಲಿ ಹೊರರಾಜ್ಯದವರಿಂದಲೇ ಹೆಚ್ಚು ಅಪರಾಧಗಳು ನಡೆಯುತ್ತಿಲ್ಲ. ಮಂಗಳೂರಿನ ಮೌಲ್ವಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಕ್ರೈಸ್ತ ಪ್ಯಾಸ್ಟರ್ ಒಬ್ಬರನ್ನು ಬಂಧಿಸಾಲಾಗಿದೆ. ಗುಜರಾತ್‌ನಲ್ಲಿ ಜೈನಮುನಿ ಒಬ್ಬರು ೧೯ ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದಾರೆ. ಇನ್ನು ಕರ್ನಾಟಕದ ಮುರುಘಾ ಮಠದ ಪ್ರಕರಣ ನಮ್ಮ ಅಂತರ್ ಪ್ರಜ್ಞೆಯನ್ನು ಎಡಬಿಡದೆ ಕಾಡುತ್ತಲೇ ಇದೆ. ಅಂದರೆ ಆಡಳಿತಾತ್ಮಕವಾಗಿ ಅಲ್ಲದಿದ್ದರೂ, ಮಹಿಳಾ ದೌರ್ಜನ್ಯದ ಅಪರಾಧಿಕ ನೆಲೆಯಲ್ಲಿ ಭಾರತ ‘ಸೆಕ್ಯುಲರ್’ ಆಗಿಬಿಟ್ಟಿದೆಯೇ?

ಈ ಪ್ರಶ್ನೆಗೆ ಹೌದು, ಖಂಡಿತವಾಗಿ ಎಂದು ಹೇಳುವ ರೀತಿಯಲ್ಲಿ, ಭಾರತದ ಅತ್ಯಂತ ಪವಿತ್ರ ಯಾತ್ರಾಸ್ಥಳ ವಾರಣಾಸಿಯಲ್ಲಿ ಒಂದು ಘಟನೆ ನಡೆದಿದೆ. ಪ್ರಧಾನಿ ಮೋದಿ ಇತ್ತೀಚಿನ ವಾರಣಾಸಿ ಪ್ರವಾಸದಲ್ಲಿದ್ದಾಗಲೇ, ಒಂದು ಯಾತ್ರಾಸ್ಥಳದಿಂದ ಪ್ರವಾಸೋದ್ಯಮ ತಾಣವಾಗಿ ರೂಪಾಂತರಗೊಂಡಿರುವ ಕಾಶಿ ಅಥವಾ ವಾರಣಾಸಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತಿರುವಾಗಲೇ, ಈ ಪವಿತ್ರ ನೆಲದಲ್ಲಿ ನಡೆದ ಒಂದು ಅಮಾನುಷ ಘಟನೆ ಅವರನ್ನು ಪ್ರಕ್ಷುಬ್ಧಗೊಳಿಸಿದೆ. ಇಂತಹ ಘಟನೆಗಳನ್ನು ರಾಕ್ಷಸೀ, ಮೃಗೀಯ ಎಂದು ಕರೆಯುವುದು ಬೇಡ, ಏಕೆಂದರೆ ಪುರಾಣದ ರಾಕ್ಷಸರು ಕಾಲ್ಪನಿಕ. ರಾವಣ ಸೀತೆಯನ್ನು ಸ್ಪರ್ಶಿಸಲೂ ಇಲ್ಲ. ಮೃಗಗಳು ನೈಸರ್ಗಿಕ ಕ್ರಿಯೆಯಾಗಿ ಲೈಂಗಿಕ ಸುಖ ಪಡೆಯುತ್ತವೆ. ಅತ್ಯಾಚಾರದ ಪರಿವೆಯೇ ಅವುಗಳಿಗೆ ಇರುವುದಿಲ್ಲ.

ಆದರೆ ಆಧುನಿಕ ಗಂಡು ಸಂತಾನ? ಅದರಲ್ಲೂ ನವ ಭಾರತದ ಗಂಡು ಸಂಕುಲ ಈ ವಿಶೇಷಣಗಳನ್ನು ಮೀರಿದ ಹಿಂಸೆ, ಕ್ರೌರ್ಯ ಮತ್ತು ಅಮಾನುಷತೆಗೆ ಸಾಕ್ಷಿಯಾಗುತ್ತಿದೆ. ಆರಂಭದಲ್ಲಿ ಉಲ್ಲೇಖಿಸಿದ ಗೆಳತಿಯೊಬ್ಬರ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ವಾರಣಾಸಿಯಲ್ಲಿ ೧೯ ವರ್ಷದ ಮಹಿಳೆಯೊಬ್ಬರ ಮೇಲೆ ೨೩ ಪುರುಷರು, ಏಳು ದಿನಗಳ ಅವಧಿಯಲ್ಲಿ, ಹಲವು ಸ್ಥಳಗಳಿಗೆ ಆಕೆಯನ್ನು ಹೋಟೆಲ್‌ಗಳಿಗೆ, ರೆಸಾರ್ಟ್‌ಗಳಿಗೆ ಅಜ್ಞಾತ ಸ್ಥಳಗಳಿಗೆ ಹೊತ್ತೊಯ್ದು, ಆಕೆಗೆ ಮಾದಕ ವಸ್ತುವನ್ನು ತಿನ್ನಿಸಿ, ಆಕೆಯ ಮೇಲೆ ಸರಣಿ ಅತ್ಯಾಚಾರ ಎಸಗಿದ್ದಾರೆ. ಈ ಅತ್ಯಾಚಾರಿಗಳಲ್ಲಿ ಎಲ್ಲ ಮತದ, ಧರ್ಮದ ಅನುಯಾಯಿಗಳೂ ಇದ್ದಾರೆ, ಎಷ್ಟು ನಿಷ್ಪಕ್ಷಪಾತ ಸೆಕ್ಯುಲರ್ ಅಪರಾಧಿಗಳಲ್ಲವೇ? ಎದುರಿನಲ್ಲಿರುವುದು ಹೆಣ್ಣು, ಆಕೆ ಯಾವ ಜಾತಿಯಾದರೇನು, ಯಾವ ಮತವಾದರೇನು, ವಯಸ್ಸು ಎಷ್ಟಾದರೇನು, ತಮ್ಮ ಕಾಮೋದ್ರೇಕವನ್ನು ತಣಿಸಿಕೊಳ್ಳಲು ಸಿಕ್ಕಿದ ಒಂದೇ ಹೆಣ್ಣನ್ನು ೨೩ ಗಂಡಸರೂ ಅನುಭವಿಸಿ, ಆಕೆಯನ್ನು ಅನಾಥಳಂತೆ ಬಿಟ್ಟು ಹೋಗಿದ್ದಾರೆ.

ಉತ್ತರ ಭಾರತದಲ್ಲಿ ಇದು ಸಾಮಾನ್ಯ ಎಂದು ಕರ್ನಾಟಕದ ಜನರು ಸಮಾಧಾನ ಪಡಬೇಕಿಲ್ಲ. ಹುಬ್ಬಳ್ಳಿಯಲ್ಲಿ ಐದು ವರ್ಷದ ಹಸುಳೆಯೊಂದನ್ನು ಅಪಹರಿಸಿ, ಅತ್ಯಾಚಾರ ಎಸಗಿ, ಹತ್ಯೆ ಮಾಡಿದ ಪ್ರಕರಣ ವರದಿಯಾಗಿದೆ. ಆರೋಪಿಯನ್ನು ಶೀಘ್ರದಲ್ಲೇ ಗುರುತಿಸಿ, ಎನ್‌ಕೌಂಟರ್‌ನಲ್ಲಿ ಸಾಯಿಸಲಾಗಿದೆ. ಸಮಾಜದ ಒಂದು ವರ್ಗ ‘ನೋಡಿ, ಇದು ಸರಿಯಾದ ಶಿಕ್ಷೆ!’ ಎಂಬ ಉದ್ಗಾರದೊಡನೆ ಸಮಾಧಾನ ಪಟ್ಟುಕೊಂಡಿದೆ. ಈ ಆರೋಪಿ ‘ನಮ್ಮವನಲ್ಲ’ ಎಂಬ ಸಮಾಧಾನ ಗೃಹಸಚಿವರಿಗೆ, ಹೊರ ರಾಜ್ಯದವರಿಂದಲೇ ಅಪರಾಧಗಳು ಹೆಚ್ಚಾಗುತ್ತಿದೆ ಎಂದು ಷರಾ ಬರೆದುಬಿಟ್ಟಿದ್ದಾರೆ. ಆ ಮೃತ ಹೆಣ್ಣು ಕೂಸು ಸಹ ಈ ಅಮಾನುಷ ಕೃತ್ಯವನ್ನು ಸ್ವತಃ ಮೈಮೇಲೆ ಎಳೆದುಕೊಂಡಿತೇ? ಇದಕ್ಕೆ ಉತ್ತರ ಕೊಡುವವರು ಯಾರು? ಅಥವಾ ‘ನಮ್ಮವರೇ’ ನಡೆಸಿರುವ ಅತ್ಯಾಚಾರಗಳಿಗೇನು ಕೊರತೆ ಇದೆಯೇ?

► ಸಮಾನ ಘನತೆ ಮತ್ತು ಸಂವೇದನೆ

ಸಮಕಾಲೀನ ಭಾರತದ ಮೊದಲ ಸ್ತ್ರೀವಾದಿ ಚಿಂತಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನದಂದು ಈ ಪ್ರಶ್ನೆಗಳು ಕಾಡಿದಾಗ, ಸಂವಿಧಾನದಲ್ಲಿ ಉತ್ತರ ಹುಡುಕಲು ಸಾಧ್ಯವೇ? ಅಥವಾ ಇಡೀ ಗಂಡು ಸಂಕುಲವನ್ನು ಕಟಕಟೆಯಲ್ಲಿ ನಿಲ್ಲಿಸಿ ಇದಕ್ಕೆ ಉತ್ತರ ಕೊಡಿ ಎಂದು ಕೇಳಬಹುದೇ? ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳಿಗೆ ಪುರುಷರ ಕಾಮೋದ್ರೇಕವೊಂದೇ ಕಾರಣವಲ್ಲ ಅಲ್ಲವೇ? ಅದೊಂದು ನೈಸರ್ಗಿಕ ನೆಪ. ಇದನ್ನೂ ಮೀರಿದ ಕಾರಣಗಳನ್ನು ಸಮಾಜದ ಗರ್ಭದಲ್ಲೇ ಗುರುತಿಸಬೇಕಿದೆ. ಆ ಕ್ಷಣದ ಭಾವೋದ್ರೇಕಕ್ಕೊಳಗಾಗಿ ಅತ್ಯಾಚಾರ ನಡೆಸುವ ಪ್ರಕರಣಗಳಲ್ಲಿ ವ್ಯಕ್ತಿಗತ ಕಾಮೋತ್ಕರ್ಷದ ದೋಷವನ್ನು ಗುರುತಿಸಬಹುದು. ಆದರೆ ವಾರಣಾಸಿ ಪ್ರಕರಣದಲ್ಲಿ, ಧಾರ್ಮಿಕ ನೇತಾರರ ಕೃತ್ಯಗಳಲ್ಲಿ, ಹುಬ್ಬಳ್ಳಿಯ ಎಳೆ ಮಗುವಿನ ಹತ್ಯೆಯಲ್ಲಿ ನಾವು ಕಂಡಿರುವುದೇನು? ಇಲ್ಲಿ ನಮಗೆ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು, ಒಂದು ಸಾಮಾಜಿಕ ವ್ಯಾಧಿಯಾಗಿ (Social Malaise) ಕಾಣಬೇಕಲ್ಲವೇ? ಇದು ಜಾತಿ, ಮತ, ಧರ್ಮ, ಸಾಮಾಜಿಕ ಸ್ಥಾನಮಾನ, ಆರ್ಥಿಕ ಅಂತಸ್ತು ಮತ್ತು ವಿದ್ಯಾರ್ಹತೆಗಳ ಬೇಲಿಗಳನ್ನು ಮೀರಿ ಗುರುತಿಸಬಹುದಾದ ಒಂದು ವ್ಯಾಧಿ ಅಥವಾ ಪುರುಷ ವ್ಯಸನ ಎನ್ನಬಹುದೇ?

ಪ್ರಶ್ನೆಗಳೇ ಹೆಚ್ಚಾಯಿತು ಅಲ್ಲವೇ? ಹೌದು ಪ್ರಶ್ನೆಗಳು ನಮ್ಮನ್ನು ಕಾಡಿದಾಗಲೇ ನಾವು ಉತ್ತರ ಶೋಧಿಸುತ್ತೇವೆ. ಲೇಖನದ ಆರಂಭದ ಸಾಲುಗಳಲ್ಲಿ ಇನ್ನೂ ಒಂದು ಮಾತಿದೆ, ‘‘ಪ್ರಜ್ಞಾವಂತ ಗಂಡಸರು ಏನು ಮಾಡ್ತಾ ಇದ್ದಾರೆ ?’’ ಇದಕ್ಕೆ ಉತ್ತರ ಎಲ್ಲಿ ಹುಡುಕುವುದು? ಖಂಡಿತವಾಗಿಯೂ ನಮ್ಮ ನಡುವೆ ಪ್ರಜ್ಞಾವಂತಿಕೆ, ಪೌರಪ್ರಜ್ಞೆ, ಮನುಜ ಸೂಕ್ಷ್ಮತೆ, ಲಿಂಗ ಸಂವೇದನೆ ಇರುವ ಪುರುಷ ಸಮಾಜ ಒಂದಿದೆ. ಅದು ಕ್ರಿಯಾಶೀಲವಾಗಿಯೂ ಇದೆ. ಇಂತಹ ಅಮಾನುಷ ಕೃತ್ಯಗಳು ನಡೆದಾಗಲೆಲ್ಲಾ ಈ ಸಮಾಜದ ಪ್ರತಿರೋಧದ ಸಿಟ್ಟು ಹೊರಬರುತ್ತದೆ. ಆದರೆ ಇದೊಂದು ಅಲ್ಪಸಂಖ್ಯೆಯ ಗುಂಪು ಮಾತ್ರ ಎನ್ನುವುದನ್ನು ಗುರುತಿಸಬೇಕಿದೆ. ಏಕೆಂದರೆ ಭಾರತದ ವಿಶಾಲ ಸಮಾಜವನ್ನು ನಿರ್ದೇಶಿಸುವುದು ವಿಶಾಲ ಸಮಾಜದ ಮೌಲ್ಯಗಳಲ್ಲ, ನಿರ್ದಿಷ್ಟ ಸಮುದಾಯ-ಗುಂಪುಗಳು ಅಳವಡಿಸಿಕೊಂಡಿರುವ ಮೌಲ್ಯಗಳಲ್ಲಿ.

ವಿವಿಧ ಧಾರ್ಮಿಕ ನೇತಾರರು ಹೆಣ್ಣಿನ ಮೇಲೆ ದೌರ್ಜನ್ಯ ನಡೆಸಿದಾಗ, ಆಯಾ ಸಮುದಾಯಗಳಲ್ಲಿ ಗಂಡು ಪ್ರಜ್ಞೆ ಎಷ್ಟರ ಮಟ್ಟಿಗೆ ವಿಚಲಿತವಾಗಿದೆ?

ಸೌಜನ್ಯಾ ಇನ್ನೂ ನಮ್ಮ ನಡುವೆ ಉಸಿರಾಡುತ್ತಿದ್ದಾಳೆ. ಸಮುದಾಯ ಸಂಸ್ಥೆ-ಸಂಘಟನೆಗಳು (Community Institutions & Organisations) ಎಷ್ಟು ಸಂದರ್ಭಗಳಲ್ಲಿ, ಖಂಡಿಸುವುದಿರಲಿ ಕನಿಷ್ಠ ಪ್ರತಿಕ್ರಿಯೆ, ವಿಷಾದ ವ್ಯಕ್ತಪಡಿಸಿವೆ. ಅತ್ಯಾಚಾರಿಗಳನ್ನು-ಹಂತಕರನ್ನು ಸಂಸ್ಕಾರವಂತರೆಂದು ಸನ್ಮಾನ ಮಾಡಿದ ಪ್ರಸಂಗಕ್ಕೂ ನಾವು ಸಾಕ್ಷಿಯಾಗಿದ್ದೇವಲ್ಲವೇ? ಇತ್ತೀಚೆಗೆ ಬೆಂಗಳೂರಿನಲ್ಲಿ ಅನೈತಿಕ ಕೆಲಸಕ್ಕೆ ಬೆಂಬಲಿಸಿದ ಆರೋಪದಲ್ಲಿ ಮುಸ್ಲಿಮ್ ಯುವತಿಯ ಮೇಲೆ ಮುಸ್ಲಿಂ ವ್ಯಕ್ತಿಗಳೇ ಹಲ್ಲೆ ನಡೆಸಿದ್ದಾರೆ. ಉತ್ತರ ಪ್ರದೇಶದ ಮುಝಪ್ಫರ್‌ಪುರದಲ್ಲಿ, ಮುಸ್ಲಿಮ್ ಯುವಕರೇ ‘ತಮ್ಮವಳ’ ಮೇಲೆ ಹಲ್ಲೆ ನಡೆಸಿ, ಹಿಜಾಬ್ ಎಳೆದುಹಾಕಿದ್ದಾರೆ. ಹುಬ್ಬಳ್ಳಿಯ ಎಳೆ ಕಂದ ಅಥವಾ ಬೆಂಗಳೂರಿನ ಮುಸ್ಲಿಮ್ ಯುವತಿ ‘ಬಿಜೆಪಿ’ಯ ಜಿಹಾದಿ ಪರಿಕಲ್ಪನೆಗೆ ಒಳಪಡುವುದಿಲ್ಲ. ಇದು ರಾಜಕೀಯವಾಗಿ ಲಾಭದಾಯಕವೂ ಆಗುವುದಿಲ್ಲ ಬಿಡಿ.

► ಶತಮಾನಗಳ ಸಂಘರ್ಷದಲ್ಲಿ

ಆದರೆ ಇಲ್ಲೊಂದು ಯುದ್ಧವಂತೂ ನಡೆಯುತ್ತಿದೆ ಅಲ್ಲವೇ? ವಾರಣಾಸಿಯಿಂದ ಹುಬ್ಬಳ್ಳಿಯವರೆಗೆ ಕಾಣಲಾಗುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಹತ್ಯೆ ಮತ್ತು ಕ್ರೌರ್ಯ ಪುರುಷತ್ವ ಮತ್ತು ಹೆಣ್ತನದ ನಡುವೆ ನಡೆಯುತ್ತಿರುವ ಸಂಘರ್ಷ. ಇದಕ್ಕೆ ಶತಮಾನಗಳ ಚರಿತ್ರೆ ಇದೆಯಾದರೂ, ಸಂಸ್ಕಾರ, ಸಂಸ್ಕೃತಿ, ಧರ್ಮ ಇತ್ಯಾದಿ ಔದಾತ್ಯಗಳನ್ನು ಉದಾರವಾಗಿ ಬಿಂಬಿಸುವ ಅತ್ಯಾಧುನಿಕ ಯುಗದಲ್ಲೂ ಇದು ಮುಂದುವರಿದಿರುವುದು ಚರಿತ್ರೆಯ ವ್ಯಂಗ್ಯ ಎನಿಸುವುದಿಲ್ಲವೇ? ಅಥವಾ ಹುಬ್ಬಳ್ಳಿ ಪ್ರಕರಣದಲ್ಲಾದಂತೆ ಅತ್ಯಾಚಾರಿ-ಹಂತಕನನ್ನು ಎನ್‌ಕೌಂಟರ್ ಮಾಡಿಬಿಟ್ಟರೆ ಸಂಘರ್ಷ ನಿಲ್ಲುವುದೇ? ಇದನ್ನು ಸಂಭ್ರಮಿಸುವ ಸಮಾಜ ಉತ್ತರಿಸಬೇಕಿರುವುದು, ವರ್ತಮಾನದ ಸಂದರ್ಭದಲ್ಲಿ ಎಷ್ಟು ಎನ್ಕೌಂಟರ್‌ಗಳನ್ನು ಮಾಡಲು ಸಾಧ್ಯ? ಎಂತೆಂತಹ ವ್ಯಕ್ತಿಗಳನ್ನು ಎನ್‌ಕೌಂಟರ್ ಮಾಡಬೇಕಾಗುತ್ತದೆ ಅಲ್ಲವೇ?

ಹುಬ್ಬಳ್ಳಿ ಎನ್‌ಕೌಂಟರ್ ಪ್ರಕರಣದಲ್ಲಿ ಸುದ್ದಿಮನೆಗಳಲ್ಲಿ ಸೃಷ್ಟಿಯಾಗಿರುವ ‘ಲೇಡಿ ಸಿಂಗಂ’ ಪರಿಕಲ್ಪನೆ ನಮ್ಮ ನಾಗರಿಕ ಪ್ರಜ್ಞೆಯನ್ನು ಮತ್ತಷ್ಟು ನಾಶಮಾಡುತ್ತಿದೆ. ಇದು ತನ್ನ ಕರ್ತವ್ಯ ನಿರ್ವಹಿಸಿದ ಆಕೆಯ ತಪ್ಪಲ್ಲ. ನಮ್ಮ ವಿದ್ಯುನ್ಮಾನ ಮಾಧ್ಯಮಗಳು ಸೃಷ್ಟಿಸುವ ಒಂದು ಕೆಟ್ಟ ವಾತಾವರಣ. ಈಗ ಆಕೆಯ ಜಾತಿಯನ್ನೂ ಗುರುತಿಸಲಾಗಿದ್ದು, ಜಾತಿ ಸಂಘಟನೆಗಳು ಹೆಮ್ಮೆ ಪಡುತ್ತಿವೆ. ಇಲ್ಲಿ ಕರ್ತವ್ಯ ನಿರ್ವಹಣೆಯಲ್ಲಿದ್ದ ಆ ಪೊಲೀಸ್ ಅಧಿಕಾರಿಯ ತಪ್ಪಿಲ್ಲ. ನಮ್ಮ ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳು ಎಷ್ಟು ಶಿಥಿಲವಾಗಿವೆ ಎನ್ನುವುದಕ್ಕೆ ಸಾಕ್ಷಿ ಅಥವಾ ಅತ್ಯಾಚಾರ, ದೌರ್ಜನ್ಯ, ಹತ್ಯೆಗೊಳಗಾದ ಹೆಣ್ಣು ಜೀವವನ್ನೂ ಶ್ರೇಣೀಕರಣ ಮಾಡುತ್ತಿದ್ದೇವೆಯೇ? ಐದು ವರ್ಷದ ಹಸುಳೆಯೋ, ೭೦ರ ವೃದ್ಧೆಯೋ, ಅಪ್ರಾಪ್ತ ವಯಸ್ಕಳೋ ವಿವಾಹಿತ ಮಹಿಳೆಯೋ ಎಲ್ಲರನ್ನೂ ಬಂಧಿಸುವ ಸಮಾನ ಎಳೆ ಎಂದರೆ ಹೆಣ್ತನದ ಘನತೆ ಅಲ್ಲವೇ?

ಈ ಘನತೆ ಇಂದು ನಿರಂತರ ದಾಳಿಗೊಳಗಾಗಿದೆ. ಮತ್ತೊಮ್ಮೆ ಆರಂಭದ ಸಾಲುಗಳ ಪ್ರಶ್ನೆಗೇ ಮರಳುವುದಾದರೆ ‘‘ಪ್ರಜ್ಞಾವಂತ ಗಂಡಸರು ಈ ಬಗ್ಗೆ ಏನು ಮಾಡುತ್ತಿದ್ದಾರೆ?’’. ಎಡಪಕ್ಷಗಳು, ಎಡಪಂಥೀಯ ಸಂಘಟನೆಗಳು, ಪ್ರಗತಿಪರ ಮಹಿಳಾ ಸಂಘಟನೆಗಳು ಇಂತಹ ಅಮಾನುಷ ಕೃತ್ಯಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಲೇ ಇವೆ. ಆದರೆ ಹಿತವಲಯದಲ್ಲಿರುವ ಸಂವಿಧಾನದ ಫಲಾನುಭವಿ ಜನಸಂಖ್ಯೆಯೂ ನಮ್ಮ ನಡುವೆ ಇದೆ ಅಲ್ಲವೇ? ಅಲ್ಲಿ ಪುರುಷ ಪ್ರಧಾನ ಸಂಘಟನೆಗಳೂ ಇವೆ ಅಲ್ಲವೇ? ಬಿಳಿ ಕಾಲರಿನ ಕಾರ್ಮಿಕ ಸಂಘಟನೆಗಳು ಇತ್ಯಾದಿ. ಈ ಸಾಂಘಿಕ ನೆಲೆಗಳಿಂದ, ಹೆಣ್ತನದ ಮೇಲೆ ದಾಳಿ ನಡೆದಾಗ ಒಂದು ಮಾತೂ ಹೊರಡುವುದಿಲ್ಲವೇಕೆ? ಪ್ರತಿರೋಧದ ಧ್ವನಿ ಕೇಳುವುದಿಲ್ಲ ಏಕೆ? ದುಡಿಮೆ

-ವೇತನ-ಸೌಕರ್ಯ-ಸವಲತ್ತುಗಳಿಂದಾಚೆಗೂ ಒಂದು ವಾಸ್ತವ ಪ್ರಪಂಚ ಇರುವುದು ಈ ಸಂಘಟನೆಗಳಿಗೆ ಅರಿವಿಲ್ಲವೇ? ಅಲ್ಲಿ ಹೆಣ್ಣು ನಿರಂತರ ಹಲ್ಲೆಗೊಳಗಾಗುತ್ತಿರುವುದು ಕಾಣುವುದಿಲ್ಲವೇ? ಇದು ಆತ್ಮಾವಲೋಕನದ ಪ್ರಶ್ನೆ.

► ದೌರ್ಜನ್ಯಗಳ ಆಳ ಮತ್ತು ವಿಸ್ತಾರ

ಜಾತಿ, ಅಂತಸ್ತು, ಸ್ಥಾನಮಾನ, ಮತ, ಅಧ್ಯಾತ್ಮ, ಧರ್ಮ ಹೀಗೆ ಎಲ್ಲ ಗಡಿಗಳನ್ನೂ ದಾಟಿ ನವ ಭಾರತದ ಹೆಣ್ಣು ಮಕ್ಕಳು ನಿತ್ಯ ದೌರ್ಜನ್ಯ, ಚಿತ್ರಹಿಂಸೆ, ಅತ್ಯಾಚಾರಗಳನ್ನು ಎದುರಿಸುತ್ತಿದ್ದಾರೆ. ಅಪರಾಧಿ ಜಗತ್ತೂ ಈ ಗಡಿಗಳನ್ನು ಮೀರಿ ಬೆಳೆದಿದೆ. ಸಂತ್ರಸ್ತರ ಪ್ರಪಂಚದಲ್ಲಿ ಎಲ್ಲ ಸ್ತರಗಳನ್ನೂ ಗುರುತಿಸಬಹುದು. ಈ ದೃಷ್ಟಿಯಿಂದ ನೋಡಿದಾಗ ಮಹಿಳಾ ದೌರ್ಜನ್ಯ ವರ್ತಮಾನದ ಭಾರತೀಯ ಸಮಾಜವನ್ನು ಕಾಡುತ್ತಿರುವ ವ್ಯಾಧಿ ಎಂದು ಸುಲಭವಾಗಿ ಹೇಳಬಹುದು. ಈ ವ್ಯಾಧಿಗೆ ಪರಿಹಾರವೇನು? ಎಳೆ ವಯಸ್ಸಿನಿಂದಲೇ ಲಿಂಗ ಸೂಕ್ಷ್ಮತೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಾಥಮಿಕ ಹಂತದಿಂದಲೇ ಲೈಂಗಿಕ ಶಿಕ್ಷಣವನ್ನು ಅಳವಡಿಸುವುದು ಒಂದು ವೈಜ್ಞಾನಿಕ ಮಾದರಿ. ಮತ್ತೊಂದು, ಯುವ ಸಂಕುಲದ ಗಂಡುಮಕ್ಕಳೊಡನೆ ನಿರಂತರ ಸಂವಾದ ನಡೆಸುವುದು, ಮಹಿಳಾ ಸಂವೇದನೆಯ ಬಗ್ಗೆ ಚರ್ಚೆ ನಡೆಸುವುದು, ಲಿಂಗ ಸೂಕ್ಷ್ಮತೆಗೂ-ಆಧುನಿಕ ನಾಗರಿಕತೆಗೂ ಮಾನವೀಯತೆಯೂ ಇರುವ ಸಂಬಂಧಗಳನ್ನು ತಿಳಿಸಿ ಹೇಳುವುದು ಮತ್ತೊಂದು ವಿಧಾನ.

ಈ ಕೈಂಕರ್ಯವನ್ನು ಪುರುಷ ಪ್ರಧಾನ ಕಾರ್ಮಿಕ ಸಂಘಟನೆಗಳು ಮತ್ತು ಸಂಸ್ಥೆಗಳು ಏಕೆ ತಮ್ಮ ನಾಗರಿಕ ಜವಾಬ್ದಾರಿಯಾಗಿ ಪರಿಗಣಿಸಬಾರದು? ಬ್ಯಾಂಕು, ವಿಮೆ, ಐಟಿ ವಲಯ, ಔದ್ಯೋಗಿಕ ವಲಯಗಳಲ್ಲಿರುವ ಬೃಹತ್ ಸಂಖ್ಯೆಯ ಸಂಘಟನೆಗಳು ಏಕೆ ಹೀಗೆ ಯೋಚಿಸಬಾರದು? ಲಿಂಗ ಸೂಕ್ಷ್ಮತೆಯನ್ನು ಬೆಳೆಸುವುದು ಕೇವಲ ಮಹಿಳಾ ಸಂಘಟನೆಗಳ ಜವಾಬ್ದಾರಿಯೇನೂ ಅಲ್ಲವಲ್ಲಾ! ಅದು ನಾಗರಿಕ ಜಗತ್ತಿನ ಹೊಣೆ. ನಮ್ಮ ಕಣ್ಣೆದುರು ನಡೆಯುತ್ತಿರುವ ಹೆಣ್ತನದ ಮೇಲಿನ ಪ್ರತಿಯೊಂದು ದೌರ್ಜನ್ಯವೂ ಇಡೀ ಪುರುಷ ಸಮಾಜವನ್ನು ತಲೆತಗ್ಗಿಸುವಂತೆ ಮಾಡುತ್ತಿದೆ. ವಾರಣಾಸಿ, ಹುಬ್ಬಳ್ಳಿ ಇತ್ತೀಚಿನದ್ದಷ್ಟೇ. ಪ್ರಗತಿಪರ ಮನಸ್ಸುಗಳು ಪ್ರತಿಬಾರಿ ಮೋಂಬತ್ತಿ ಮೆರವಣಿಗೆಯ ಮೂಲಕ ತಮ್ಮೊಳಗಿನ ನಾಗರಿಕ ಪ್ರಜ್ಞೆಯನ್ನು ವ್ಯಕ್ತಪಡಿಸುತ್ತಿವೆ.

ಒಂದು ವಿಭಿನ್ನ ಮಾದರಿಯಾಗಿ, ಎಲ್ಲ ಸಂಘಟನೆಗಳ ಪುರುಷರೂ ಒಂದೆಡೆ ಸೇರಿ, ಹಲವು ನಿಮಿಷಗಳ ಕಾಲ ‘‘ನಾಚಿಕೆಯಿಂದ ತಲೆತಗ್ಗಿಸಿ ನಿಲ್ಲುವ’’ ವಿನೂತನ ಪ್ರತಿರೋಧದ ಬಗ್ಗೆ ಯೋಚಿಸಬಹುದೇ? ಈ ಮಹಿಳಾ ದೌರ್ಜನ್ಯಗಳು ಇಡೀ ಸಮಾಜವನ್ನು, ವಿಶೇಷವಾಗಿ ಪುರುಷ ಸಂಕುಲವನ್ನು ನಾಚಿ ತಲೆತಗ್ಗಿಸುವಂತೆ ಮಾಡುತ್ತಿವೆ ಎಂಬ ಸಂದೇಶವನ್ನಾದರೂ ರವಾನಿಸೋಣ. ಇದನ್ನು ದಾಟಿ ಮಹಿಳಾ ಸಂಘಟನೆಗಳೊಡನೆ ಕೂಡಿ ಯುವ ಸಂಕುಲದ ಗಂಡುಜೀವಗಳ ನಡುವೆ ಸಂವಾದಗಳನ್ನು ನಡೆಸುವತ್ತ ಯೋಚಿಸೋಣವೇ? ‘‘ಬೇಕೇ ಬೇಕು ನ್ಯಾಯ ಬೇಕು’’ ಎಂಬ ಘೋಷಣೆಯಿಂದಾಚೆಗೆ, ದೌರ್ಜನ್ಯಕ್ಕೊಳಗಾಗುತ್ತಿರುವ ಹೆಣ್ತನದ ಘನತೆಯನ್ನು ಶಾಶ್ವತವಾಗಿ ಕಾಪಾಡುವ ನಾಗರಿಕ ಜವಾಬ್ದಾರಿ ಸಾಮೂಹಿಕವಾದದ್ದು. ಇದನ್ನು ನಿಭಾಯಿಸುವ ದಾರಿಗಳನ್ನು ಹುಡುಕಬೇಕಿದೆ.

ಆಗ ಮಹಿಳಾ ದೌರ್ಜನ್ಯ ಎಂಬ ಸಾಮಾಜಿಕ ವ್ಯಾಧಿಗೆ, ಪುರುಷ ಸಮಾಜದ ವ್ಯಸನಕ್ಕೆ ಔಷಧಿ ಕಂಡುಹಿಡಿಯಬಹುದೇನೋ, ಯೋಚಿಸೋಣವೇ?

share
ನಾ. ದಿವಾಕರ
ನಾ. ದಿವಾಕರ
Next Story
X