Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅಸ್ಪಶ್ಯಲೋಕದ ಅನಾವರಣ: ‘ದಕ್ಲಕಥಾ...

ಅಸ್ಪಶ್ಯಲೋಕದ ಅನಾವರಣ: ‘ದಕ್ಲಕಥಾ ದೇವಿಕಾವ್ಯ’

ಗಣೇಶ ಅಮೀನಗಡಗಣೇಶ ಅಮೀನಗಡ29 Sept 2023 4:45 PM IST
share
ಅಸ್ಪಶ್ಯಲೋಕದ ಅನಾವರಣ: ‘ದಕ್ಲಕಥಾ ದೇವಿಕಾವ್ಯ’
ನಾಟಕ: ದಕ್ಲಕಥಾ ದೇವಿಕಾವ್ಯ ಮೂಲ: ಕೆ.ಬಿ.ಸಿದ್ದಯ್ಯ ಅವರ ಆಯ್ದ ಬರಹಗಳು ರಚನೆ, ನಿರ್ದೇಶನ: ಲಕ್ಷ್ಮಣ್ ಕೆ.ಪಿ. ಸಹ ನಿರ್ದೇಶನ: ಸ್ಕಂದ ಘಾಟೆ, ಶ್ರೀಹರ್ಷ ಜಿ.ಎನ್. ಡ್ರಮಟರ್ಜಿ: ಮೋಹಿತ್ ವಿಕೆಸಿ ಬೆಳಕಿನ ವಿನ್ಯಾಸ: ಮಂಜು ನಾರಾಯಣ್ ವಸ್ತ್ರವಿನ್ಯಾಸ: ಶ್ವೇತಾರಾಣಿ ಎಚ್.ಕೆ. ಹಿನ್ನೆಲೆ ಸಂಗೀತ: ಪೂರ್ವಿ ಕಲ್ಯಾಣಿ, ಸ್ಕಂದ ಘಾಟೆ ತಂಡ: ಜಂಗಮ ಕಲೆಕ್ಟಿವ್

‘‘ಅಕ್ಷರ ನನ್ನ ಮುಟ್ಟಿತೋ, ನಾನು ಅಕ್ಷರ ಮುಟ್ಟಿದೆನೋ ಅಥವಾ ಅಕ್ಷರ ಮುಟ್ಟಿದ ಬಳಿಕ ನಾನು ಕೆಟ್ಟೆನೋ, ನನ್ನ ಮುಟ್ಟಿದ ಬಳಿಕ ಅಕ್ಷರ ಕೆಟ್ಟಿತೋ! ಓ ಅಕ್ಷರವೇ ಕಡೆಗೂ ನಿನ್ನ ಮುಟ್ಟಿದೆನು’’

ಇದು ಕೆ.ಬಿ.ಸಿದ್ದಯ್ಯ ಅವರ ಬರಹಗಳನ್ನಾಧರಿಸಿದ ‘ದಕ್ಲಕಥಾ ದೇವಿಕಾವ್ಯ’ ನಾಟಕದಲ್ಲಿ ನೇರವಾಗಿ ಬರದೆ ಅದರ ಆಶಯ ತಿಳಿಸುವ ಮಾತು. ಇದರೊಂದಿಗೆ ದಕ್ಲದೇವಿ ಹೇಳುವ ‘ಮುಟ್ಟಿ ನೋಡು, ಮುಟ್ಟುಗೆಟ್ಟು ನೋಡು, ಹುಟ್ಟಿ ನೋಡು, ನನ್ನಂತೆ ಹೆಣ್ಣಾಗಿ ಹುಟ್ಟಿನೋಡು’ ಎನ್ನುವ ಮಾತು ಪೇಕ್ಷಕರನ್ನು ತಟ್ಟುತ್ತದೆ. ಹೀಗೆ ಇಡೀ ನಾಟಕವನ್ನು ಮುನ್ನಡೆಸುವುದು ದಕ್ಲದೇವಿ. ಈಮೂಲಕ ಹೆಣ್ತನದ ಧಾರಣೆಯ ಅನಾವರಣವಾಗಿದೆ.

ಈ ನಾಟಕ ಶುರುವಾಗುವುದೇ ತಮಟೆ ವಾದನದಿಂದ. ಐದು ನಿಮಿಷಗಳವರೆಗೆ ಭರತ್ ಡಿಂಗ್ರಿ ತಮಟೆ ನುಡಿಸುವಾಗ ಪ್ರೇಕ್ಷಕರು ಸದ್ದುಗದ್ದಲ ಮಾಡದೆ ಸುಮ್ಮನಾಗುತ್ತಾರೆ. ನಂತರ ಭರತ್ ತಮಟೆ ನುಡಿಸುತ್ತಲೇ ನೆಲದಿಂದ ನೋಟುಗಳನ್ನು ಕಣ್ಣಲ್ಲಿ ಎತ್ತಿಕೊಳ್ಳುವ ದೃಶ್ಯ ಗಮನಸೆಳೆಯುತ್ತದೆ. ಹೀಗೆ ತಮಟೆ ನುಡಿಸುವ ಭರತ್ ಡಿಂಗ್ರಿ ಅವರ ತಂದೆ ಡಿಂಗ್ರಿ ನರಸಪ್ಪ ಅವರು ಹೋರಾಟದ ಹಾಡುಗಳಲ್ಲಿ ತಮಟೆ ನುಡಿಸುತ್ತ ಹಾಡುವವರು.

ಬಳಿಕ ಭರತ್ ಹೇಳುವ ಮಾತಿದು ‘‘ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಹೊತ್ತು ಕೊಡುತ್ತಿದ್ದ ಉಪ್ಪಿಟ್ಟು ಹಾಗೂ ಹಾಲು ಅಕ್ಷರಮಾಲೆಯ ಆಕಾರದಲ್ಲಿ ಕಂಡು ಶಾಲೆಗೆ ಸೆಳೆದವು. ಉಪ್ಪಿಟ್ಟು ದಕ್ಕಿತ್ತು, ಅಕ್ಷರ ದಕ್ಕಲಿಲ್ಲ ಕಾರಣ ಆ ಸ್ಕೂಲು, ಆ ಮೇಷ್ಟ್ರು ನನ್ನ ತಲೆಗೆ ವಿದ್ಯೆ ಹತ್ತುವುದಿಲ್ಲವೆಂದು ದೂರ, ದೂರ ತಳ್ಳುತ್ತಿದ್ದರು. ಸ್ಕೂಲಿಗೆ ತಪ್ಪಿಸಿಕೊಂಡ ಮೇಲೆ ನಮ್ಮ ಊರಿನ ‘ಉತ್ತಮರ ಹಟ್ಟಿಯ’ ಎಮ್ಮೆ ಬಾಲ ಹಿಡಿದು ತುಂಬಿದ ಕೆರೆಯಲ್ಲಿ ಈಜು ಕಲಿಯಲು ಹೋಗುತ್ತಿದ್ದೆ...’’ ಹೇಳಿದಾಗ ಪ್ರೇಕ್ಷಕರನ್ನು ಕಲಕುತ್ತದೆ. ಹೀಗೆ ತಮಟೆ ನುಡಿಸುವ ಭರತ್ ಅವರೊಂದಿಗೆ ಅರೆ ವಾದ್ಯ ನುಡಿಸುವವರು ಬಿ.ಕೆ. ನರಸಿಂಹರಾಜು. ತುಮಕೂರು ಜಿಲ್ಲೆಯ ಸಿರಾ ಭಾಗದಲ್ಲಿ ಬಳಸುವ ವಾದ್ಯವನ್ನೇ ಈ ನಾಟಕದಲ್ಲಿ ಬಳಸಲಾಗಿದೆ. ಮುಖ್ಯವಾಗಿ ಅರೆ ವಾದ್ಯ ನುಡಿಸುವ ಬಿ.ಕೆ.ನರಸಿಂಹರಾಜು ಅವರು ಸ್ವತಃ ಕಲಾವಿದರು. ವಂಶ ಪರಂಪರೆಯಾಗಿ ನುಡಿಸುವವರು. ಹೀಗೆ ತಮಟೆ ಹಾಗೂ ಅರೆ ವಾದ್ಯಗಳನ್ನು ನುಡಿಸುವ ಕಲಾವಿದರ ಕುಟುಂಬದ ಕುಡಿಗಳೇ ಪಾತ್ರಧಾರಿಗಳಾಗಿದ್ದಾರೆ. ಈಮೂಲಕ ವಾದ್ಯ, ಹಾಡು ಹಾಗೂ ಅಭಿನಯ ಮೂಲಕ ನಾಟಕ ಗೆಲ್ಲುತ್ತದೆ. ಅಭಿನಯವಲ್ಲ, ಪಾತ್ರಗಳೇ ಆಗಿದ್ದಾರೆ. ಬಿಂದು ರಕ್ಷಿದಿ, ರಮಿಕಾ ಚೈತ್ರ, ಸಂತೋಷ್ ದಿಂಡಗುರು ಇವರೊಂದಿಗೆ ಬಿ.ಕೆ.ನರಸಿಂಹರಾಜು ಹಾಗೂ ಭರತ್ ಡಿಂಗ್ರಿ ನಾಟಕವನ್ನು ಗೆಲ್ಲಿಸುತ್ತಾರೆ. ಇಂತಹ ನಾಟಕವನ್ನು ಕಟ್ಟಿಕೊಟ್ಟ ನಿರ್ದೇಶಕ ಕೆ.ಪಿ.ಲಕ್ಷ್ಮಣ್ ಅವರನ್ನು ಅಭಿನಂದಿಸುವೆ.

ದಕ್ಕದ ಅಕ್ಷರ ಕುರಿತು ಹೇಳುತ್ತಲೇ ಅಸ್ಪಶ್ಯ ಜಗತ್ತನ್ನು ಈ ನಾಟಕ ಅನಾವರಣಗೊಳಿಸುತ್ತದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕ ಸದಸ್ಯರಾಗಿದ್ದ ಕೆ.ಬಿ.ಸಿದ್ದಯ್ಯ ಅವರ ಖಂಡಕಾವ್ಯ ಹಾಗೂ ಕಥನಗಳನ್ನು ಒಟ್ಟಿಗೇ ಕಟ್ಟಿಕೊಟ್ಟ ನಾಟಕವಿದು. ಇದರಲ್ಲಿ ಹೊಸತನವಿದೆ. ಮುಖ್ಯವಾಗಿ ಕೆ.ಬಿ.ಸಿದ್ದಯ್ಯ ಅವರ ಕಾವ್ಯ ಹಾಗೂ ಕಥನಗಳಲ್ಲಿದ್ದ ಅನಂಗ ಪ್ರಜ್ಞೆ ಅಂದರೆ ಎಲ್ಲಿಂದಲಾದರೂ ಆರಂಭಿಸಬಹುದು, ಹೇಗಾದರೂ ಅಂತ್ಯಗೊಳಿಸಬಹುದು. ಈ ನಾಟಕವನ್ನು ಸಿದ್ದಯ್ಯ ಅವರ ಅನಂಗಪ್ರಜ್ಞೆಯ ಮೂಲಕ ಕಟ್ಟಿಕೊಡಲಾಗಿದೆ. ಹೀಗಾಗಿ ಈ ನಾಟಕ ಹೇಗೋ ಆರಂಭವಾಗುತ್ತದೆ, ಹೇಗೋ ಅಂತ್ಯಗೊಂಡು ಕಾಡುತ್ತದೆ ಮತ್ತು ಕಲಕುತ್ತದೆ.

ಸಿದ್ದಯ್ಯ ಅವರ ಕಾವ್ಯದಲ್ಲಿ ಬರುವ ದಕ್ಲದೇವಿ, ಅನಾಥವಾಗಿ ಬಿದ್ದಿರುವ ಮೂರು ಮಕ್ಕಳನ್ನು ಕಾಪಾಡುತ್ತಾಳೆ. ಆ ಮಕ್ಕಳು ಮುಟ್ಟಬಾರದ ಮಕ್ಕಳು. ಆಕೆಗೆ ಹುಟ್ಟಿದವುಗಳೂ ಅಲ್ಲ. ಹೀಗಿರುವುದರಿಂದ ದಕ್ಲದೇವಿ ಅನುಭವಿಸಬಾರದ ಕಷ್ಟವನ್ನು ಅನುಭವಿಸುತ್ತಾಳೆ. ಈ ಮಕ್ಕಳನ್ನು ಉಸಿರಾಡುತ್ತಿರುವ ಕೆಂಡಗಳ ಹಾಗೆ ಸಿದ್ದಯ್ಯ ಅವರು ಕಾವ್ಯದಲ್ಲಿ ಕಂಡಿರಿಸಿದ್ದನ್ನು ರಂಗಪ್ರತಿಮೆಯಾಗಿ ಕೆ.ಪಿ.ಲಕ್ಷ್ಮಣ್ ತೋರಿಸಿದ್ದಾರೆ. ಹಾಗೆಯೇ ಸಿದ್ದಯ್ಯ ಅವರ ಖಂಡಕಾವ್ಯವು ನಾಟಕರೂಪದಲ್ಲಿರಲಿಲ್ಲ. ಇದನ್ನು ನಾಟಕವಾಗಿ ರೂಪಾಂತರಿಸಿದ್ದಲ್ಲದೆ, ಸಿದ್ದಯ್ಯ ಅವರು ಬದುಕಿನುದ್ದಕ್ಕೂ ಮಾತನಾಡಿದ್ದನ್ನು ನಾಟಕಕ್ಕೆ ಅಳವಡಿಸಲಾಗಿದೆ.

ದಕ್ಲರು ಯಾರೆಂದರೆ ಮಾದಿಗರ ಸಾಕುಮಗನೆಂದು ಹೇಳುವರು. ಇಂಥ ತಳಸಮುದಾಯವಾದ ದಕ್ಲರ ಕುರಿತು ಸಿದ್ಧ ಮಾದರಿಯ ಚೌಕಟ್ಟನ್ನು ಮುರಿದು ಕಟ್ಟಿದ ನಾಟಕವಿದು. ಇದರಿಂದ ನಾಟಕವೆಂದರೆ ಒಂದು ಆರಂಭ, ಒಂದು ಅಂತ್ಯ ಹಾಗೆಯೇ ಒಂದಿಷ್ಟು ತಮಾಷೆ, ದುಃಖ, ವಿಡಂಬನೆ... ಹೀಗೆ ಪ್ರೇಕ್ಷಕರಿಗೆ ಸಿದ್ಧಮಾದರಿಯ, ಅಗತ್ಯವಾದುದನ್ನು ಕೊಡುವ ನಾಟಕವಿದಾಗದೆ ತಳಸಮುದಾಯಗಳು ಅನುಭವಿಸುವ ಸಂಕಟ, ತಳಮಳ, ಸಂಘರ್ಷ, ಹಸಿವು, ಬಡತನ ಬವಣೆಗಳನ್ನು ಕಟ್ಟಿಕೊಡುತ್ತದೆ.

ನಾಟಕದ ಕೊನೆಗೆ ಭರತ್ ಡಿಂಗ್ರಿ ‘‘ನನಗೆ ಅಸ್ಪಶ್ಯತೆಯ ಅನುಭವ ಸ್ವಮರುಕ ಅಥವಾ ಸ್ವರತಿಯಂತಹ ಮನೋರೋಗವಲ್ಲ, ಕೀಳರಿಮೆಯಲ್ಲ. ಆರಾಧನೆ ಅಥವಾ ಅಹಂ ಅಲ್ಲ. ಅಸ್ಪಶ್ಯತೆಯ ಅನುಭವ ಒಂದು ಅರಿವು. ನಿಜಮನುಷ್ಯನನ್ನು ಕಾಣುವ ಬೆಳಕು. ಹಸಿದವನಿಗೆ ಅನ್ನವೇ ಗುರು. ಹುಟ್ಟಿದ ಬಳಿಕ ಮುಟ್ಟಬಾರದವನಾದವನಿಗೆ ಮೊದಲು ಮುಟ್ಟಿದ ಜೀವವೇ ಗುರು. ಈ ಅರಿವು ಎಂತಹ ಗುರುವೆಂದರೆ ಆರಡಿ ಮನುಷ್ಯನನ್ನು ಮೂರಡಿಗೆ ಕುಗ್ಗಿಸಿ, ಇಡೀ ಮನುಷ್ಯನನ್ನು ನನ್ನ ಎದುರಿಗೆ ಬೆತ್ತಲಾಗಿಸಿ ಮನುಷ್ಯನೆಂದರೆ ಇವನೇನಾ ನೋಡು, ನಿನ್ನೊಳಗೆ ನೀನು ಕೇಳಿಕೊ ಎಂದು ಕೆಣಕುತ್ತದೆ. ನಿನ್ನೊಳಗಿನ ನಿಜಮನುಷ್ಯನನ್ನು ಹುಡುಕು, ಈ ಹುಡುಕಾಟ ಒಂದು ಮಹಾಪ್ರಯಾಣ. ನೀನು ಒಬ್ಬ ಪ್ರಯಾಣಿಕ ಎಂಬುದು ಗುರುಬೋಧನೆ’’ ಎಂದಾಗ ಪ್ರೇಕ್ಷಕರು ದಂಗಾಗುತ್ತಾರೆ. ಆಮೇಲೆ ದಕ್ಲನ ಪಾತ್ರಧಾರಿ ಸಂತೋಷ್ ದಿಂಡಗೂರು ಅವರು ಬಂದು ನಾಟಕ ಸಂತೋಷದಿಂದ ಅಂತ್ಯಗೊಳ್ಳಲಿ ಎಂದು ಹೇಳುತ್ತಾರೆ.

ಸಾಮಾನ್ಯವಾಗಿ ಮಧ್ಯಮ, ಕೆಳಮಧ್ಯಮ ವರ್ಗದ ಕುಟುಂಬಗಳ ಕನಸು, ಕನವರಿಕೆ, ಬದುಕಿನ ಬವಣೆಗಳ ನಾಟಕ ಕಂಡ ಪ್ರೇಕ್ಷಕರಿಗೆ ಅಪರಿಚಿತವಾದ ಅಸ್ಪಶ್ಯತೆಯ ಲೋಕವನ್ನು ಈ ನಾಟಕ ಕಂಡಿರಿಸುತ್ತದೆ. ಕಡೆಗಣಿಸಲ್ಪಟ್ಟವರ ಕುರಿತಾದ ಈ ನಾಟಕ ಶುರುವಾದ ಮೇಲೆ ಪಾತ್ರಗಳ ನಿರ್ಗಮನವಿಲ್ಲ. ಹಾಗೆಯೇ ಮೇಕಪ್ ಕೂಡಾ ಇಲ್ಲ. ಇದು ಕೂಡಾ ಗಮನಾರ್ಹ.

ನಾಟಕದ ಕುರಿತು ನಿರ್ದೇಶಕ ಲಕ್ಷ್ಮಣ್ ಅವರ ಮಾತುಗಳು ಹೀಗಿವೆ: ‘‘ಒಂದು ಸಮುದಾಯದ ಸಂಭ್ರಮ, ಸಂಕಟ, ನೋವು, ಹತಾಶೆ, ಬಯಕೆ, ಏಕಾಕಿತನವನ್ನು ಅದರ ಹಲವು ಪುರಾತನ ನೆನಪುಗಳನ್ನು, ಒಂದು ಸೃಜನಶೀಲ ವ್ಯಕ್ತಿತ್ವ ಧರಿಸಿಕೊಳ್ಳಲು ಸಾಧ್ಯವೇ? ಹಾಗೆ ಅವುಗಳನ್ನು ಹಲವು ಸ್ತರಗಳಲ್ಲಿ ಧರಿಸಿಕೊಳ್ಳಲು ಸಾಧ್ಯವಾಗುವುದಾದರೆ ರೂಪುಗೊಳ್ಳಬಹುದಾದ ಸೃಜನಶೀಲ ಅಭಿವ್ಯಕ್ತಿ ಎಂತಹುದು ಎಂಬ ಹುಡುಕಾಟದಲ್ಲಿದ್ದಾಗ ತಾಕಿದ್ದು ಸಿದ್ದಯ್ಯ ಅವರ ಕಾವ್ಯ. ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಪರಂಪರೆಗಳು ‘ಪಳೆಯುಳಿಕೆ’ ಎಂದು ನಿರಾಕರಿಸಿದ್ದ ಈ ಕಾವ್ಯದಲ್ಲಿ ಏಕಕಾಲಕ್ಕೆ ಪುರಾತನವೂ ಆಧುನಿಕವೂ ಆದ ನೋಟವೊಂದು ಕಂಡಿತು. ಮತ್ತದು ಈ ತನಕ ಪರಿಚಿತವಿದ್ದ ಭಾಷೆಯನ್ನು, ರಂಗಭಾಷೆಯನ್ನು ತೀಟೆ ಮಾಡುವಂತೆ ತಿವಿದು ಅಣಕಿಸುವಂತೆ ನೋಡಿತು. ತನ್ನೊಡನೆ ಒಡನಾಡುವ ಸವಾಲನ್ನೂ ಎಸೆಯಿತು. ಇದು ‘ದಕ್ಲಕಥಾ ಕಾವ್ಯ’ದ ಆರಂಭ. ಸೆಣಸುವಂತೆ ಕೆಣಕಿ ಸೆಟೆದುಕೊಂಡು ನಿಂತಿದ್ದ ಈ ಕಾವ್ಯದ ಜೊತೆಗೆ ಆಡಿದಷ್ಟೂ ಅದು ತನ್ನೊಳಗಿನ ನಾದ, ಲಯ, ಚಲನೆ, ಬಣ್ಣ, ಘಮಲು ಹಾಗೂ ಅಪರಿಮಿತ ದುಃಖವನ್ನು, ಬೆರಗನ್ನು, ಹಸಿವನ್ನು ಬಿಚ್ಚಿಡುತ್ತಾ ಹೋಯಿತು. ಹೀಗೆ ಅಸ್ಪಶ್ಯ ಜಗತ್ತಿನ ತಳಾತಿತಳ ಸಮುದಾಯದ ಸಾಂಸ್ಕೃತಿಕ ಬನಿಯೊಂದು ತನ್ನ ಮೈಯನ್ನು ನಮ್ಮೆದುರಿಗೆ ಬೆತ್ತಲಾಗಿಸಿತು. ಇನ್ನು ಕಾವ್ಯವನ್ನು ರಂಗದ ಮೇಲೆ ಮೈ ಕಡೆಯುವಲ್ಲಿ ಒದಗಿ ಬಂದ ಈ ನೆಲದ ಮೂಲನಿವಾಸಿಗಳಷ್ಟೆ ಮೂಲದ ವಾದ್ಯಗಳಾದ ಅರೆ ಮತ್ತು ತಮಟೆಗಳು ತಮ್ಮ ಪ್ರಾಚೀನ ರಿಂಗಣದ ಮೂಲಕ ರಂಗವನ್ನು, ಅಲ್ಲಿ ಆಡಲು ನಿಂತ ನಟ/ನಟಿಯರನ್ನು ಆವರಿಸಿಕೊಂಡು ಮಿಡಿಸಿದ ಬಗೆಯೊಂದು ಮಹಾಸೋಜಿಗ. ಈ ಪ್ರಕ್ರಿಯೆ ನಮ್ಮನ್ನು ನಮ್ಮ ಸಾಂಸ್ಕೃತಿಕ ನೆನಪುಗಳಿಗೆ ಕೊಂಡೊಯ್ದಿದ್ದಲ್ಲದೆ ಅಲ್ಲಿ ಅಡಕವಾಗಿರುವ ಅಪರಿಮಿತ ಜೀವಪ್ರೇಮ ಮತ್ತು ಅರಿವಿಗೆ ಸಾಕ್ಷಿಯಾಗುವಂತೆ ಮಾಡಿತು. ಇದರ ಕೆಲವಾದರೂ ಅನುಭವಗಳು ನಾಟಕ ನೋಡುವ ಪ್ರೇಕ್ಷಕರಿಗೆ ದಾಟುತ್ತವೆ, ಮತ್ತವರು ಈ ಅಸ್ಪ್ಪಶ್ಯಲೋಕದೊಳಗೆ ಅನುರಣಿಸುವಂತೆ ಮಾಡುತ್ತವೆ ಎಂಬುದು ನನ್ನ ಜೀವದ ನಂಬುಗೆ...’’

ಇಂತಹ ನಾಟಕ ಈಗಾಗಲೇ ೩೦ಕ್ಕೂ ಅಧಿಕ ಪ್ರದರ್ಶನ ಕಂಡಿದ್ದು, ಅಕ್ಟೋಬರ್ ೧೦ರಂದು ಸಂಜೆ ೭ ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿದೆ. ಇದಲ್ಲದೆ ದಿಲ್ಲಿ, ಹೈದರಾಬಾದ್, ಪುಣೆ, ಮುಂಬೈ, ನೀನಾಸಂ ಸಂಸ್ಕೃತಿ ಶಿಬಿರದಲ್ಲಿ, ಪಣಜಿಯಲ್ಲಿ ನಡೆಯುವ ಗೋವಾದ ಶರಂಡಿಪಿಟಿ ಎಂಬ ನಾಟಕೋತ್ಸವದಲ್ಲೂ ಪ್ರದರ್ಶನಗೊಳ್ಳಲಿದೆ.

ಹೀಗೆ ದಲಿತರ ಬದುಕನ್ನು ಚಿತ್ರಿಸಿದ ನಾಟಕಗಳು ಅನೇಕ ಬಂದಿವೆ. ದೇವನೂರ ಮಹಾದೇವ ಅವರ ಒಡಲಾಳ, ಕುಸುಮಬಾಲೆ ಸೇರಿದಂತೆ ಅವರ ಕಥೆಗಳು ರಂಗಕ್ಕೇರಿವೆ. ಹೀಗೆಯೇ ಶರಣಕುಮಾರ್ ಲಿಂಬಾಳೆ ಅವರ ಅಕ್ರಮ ಸಂತಾನ ಆತ್ಮಕಥೆಯನ್ನು ಸಿ.ಬಸವಲಿಂಗಯ್ಯ ಅವರು ಧಾರವಾಡದಲ್ಲಿ ಆಪ್ತರಂಗಭೂಮಿಗೆ ಅಳವಡಿಸಿದ್ದರು. ಈ ನಾಟಕದ ಕೊನೆಗೆ ಕಲಾವಿದರು ‘‘ನನ್ನವ್ವ ದಲಿತಳು, ನನ್ನಪ್ಪ ಲಿಂಗಾಯತ. ನಾನ್ಯಾರು?’’ ಎಂದು ಪ್ರೇಕ್ಷಕರ ಕಿವಿಯಲ್ಲಿ ಕೇಳುತ್ತಿದ್ದುದು ಈಗಲೂ ನೆನಪಿದೆ. ಧಾರವಾಡದ ಆಟಮಾಟದ ಮಹಾದೇವ ಹಡಪದ ಅವರು ಶಿವರುದ್ರ ಕಲ್ಲೋಳಕರ ಅವರ ‘ಹೊಲಗೇರಿ ರಾಜಕುಮಾರ’ ಕಾದಂಬರಿ ಆಧರಿಸಿದ ಇದೇ ಹೆಸರಿನ ನಾಟಕ, ನೀನಾಸಂನ ಎಂ.ಗಣೇಶ್ ಅವರ ಜನಮನದಾಟ ತಂಡವು ಸಿದ್ದಲಿಂಗಯ್ಯ ಅವರ ‘ಊರುಕೇರಿ’ ನಾಟಕ ಕೂಡಾ ದಾಖಲಿಸುವಂಥವು.

ಇದರೊಂದಿಗೆ ಈಚೆಗೆ ಪಿ.ಲಂಕೇಶ್ ಅವರ ‘ಮುಟ್ಟಿಸಿಕೊಂಡವನು’ ನಾಟಕವನ್ನು ಮೈಸೂರಿನ ರಂಗಾಯಣ ಕಲಾವಿದರು ಪ್ರಸ್ತುತಪಡಿಸುತ್ತಿದ್ದು ಗಮನ ಸೆಳೆದಿದೆ. ದಾವಣಗೆರೆಯಲ್ಲಿ ಕಣ್ಣಿನ ವೈದ್ಯರಾಗಿದ್ದ ಡಾ.ತಿಪ್ಪೇಸ್ವಾಮಿ ಅವರ ವೃತ್ತಿಬದುಕಿನಲ್ಲಿ ನಡೆದ ಘಟನೆಯನ್ನು ಕೇಳಿದ ಪಿ.ಲಂಕೇಶ್ ಅವರಿಗೆ ಗಾಢವಾಗಿ ತಟ್ಟಿದ್ದರ ಪರಿಣಾಮ ‘ಮುಟ್ಟಿಸಿಕೊಂಡವನು’ ಕಥೆ ಬರೆಯಲು ಸಾಧ್ಯವಾಯಿತು.

ಹೀಗೆ ತಳಸಮುದಾಯಗಳ ಕುರಿತು ನಾಟಕಗಳಾಗುತ್ತಿರುವುದು ಕನ್ನಡ ರಂಗಭೂಮಿಗೆ ಹೊಸ ಆಯಾಮ ದಕ್ಕಿದಂತಾಗಿದೆ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X