ಆತಂಕ, ನೋವು, ತಲ್ಲಣಗಳ ನಡುವೆ ಅಮ್ಮಂದಿರ ದಿನ
ಇಂದು ವಿಶ್ವ ಅಮ್ಮಂದಿರ ದಿನ

‘ಅಮ್ಮ’ ಎಂಬ ಶಕ್ತಿಯನ್ನು ವೈಭವೀಕರಿಸುವುದು ಅಥವಾ ದೈವಿಕ ಹಂತಕ್ಕೇರಿಸಿ ಪೂಜನೀಯವಾಗಿ ಗೌರವಿಸುವುದು ವ್ಯಕ್ತಿನಿಷ್ಠ ಲಕ್ಷಣ. ಆದರೆ ನಮ್ಮ ಸುತ್ತಲಿನ ಸಮಾಜದಲ್ಲಿ ಅಪೌಷ್ಟಿಕತೆ, ಹಸಿವು, ಬಡತನ, ಜಾತಿ ತಾರತಮ್ಯ, ಅಸ್ಪಶ್ಯತೆ, ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಸಾಂಸ್ಕೃತಿಕ ನೆಲೆಯಲ್ಲಿ ಮತಾಂಧರ ದಾಳಿಗಳಿಂದ ನೋವು ಅನುಭವಿಸುವ ಅನೇಕಾನೇಕ ಅಮ್ಮಂದಿರು ನಮ್ಮ ಅಂತರಾತ್ಮವನ್ನು ಕದಡದೆ ಹೋದರೆ, ನಾವು ಮನುಜ ಸೂಕ್ಷ್ಮಸಂವೇದನೆಯನ್ನು ಕಳೆದುಕೊಂಡಿದ್ದೇವೆ ಎಂದೇ ಅರ್ಥ.
ಜಗತ್ತು ಮತ್ತೊಂದು ಅಂತರ್‌ರಾಷ್ಟ್ರೀಯ ಅಮ್ಮಂದಿರ ದಿನ ಆಚರಿಸುತ್ತಿದೆ. ಪ್ರತಿವರ್ಷ ಮೇ 11ರಂದು ಅಥವಾ ಎರಡನೇ ರವಿವಾರ ಈ ದಿನವನ್ನು ಆಚರಿಸುವ ವಾಡಿಕೆ ಇದೆ. ನೆರೆರಾಷ್ಟ್ರ ಪಾಕಿಸ್ತಾನದ ದುಸ್ಸಾಹಸ ಮತ್ತು ಮನುಕುಲ ವಿರೋಧಿ ಭಯೋತ್ಪಾದನೆಯ ಪರಿಣಾಮ, ಭಾರತ ಮತ್ತು ಪಾಕಿಸ್ತಾನದಲ್ಲಿ ಸಾವಿರಾರು ಅಮ್ಮಂದಿರು ಅನಾಥರಾಗುವ ಸಾಧ್ಯತೆಗಳ ನಡುವೆ, ನವ ಭಾರತದ ಸಮಾಜವು ಹೆಣ್ಣು ಮತ್ತು ಅವಳ ತಾಯ್ತನದ ಘನತೆಯನ್ನು ರಕ್ಷಿಸಲು ವಿಫಲವಾಗುತ್ತಿರುವ ಸನ್ನಿವೇಶದಲ್ಲಿ 2025ರ ಅಮ್ಮಂದಿರ ದಿನ ಆಚರಿಸಬೇಕಿದೆ. ಮಕ್ಕಳನ್ನು ಹೆತ್ತವಳು ಮಾತ್ರ ಅಮ್ಮ ಎಂಬ ಪಾರಂಪರಿಕ ತಿಳುವಳಿಕೆಯನ್ನು ಭಂಜಿಸಿ, ಆಧುನಿಕ ಡಿಜಿಟಲ್ ನಾಗರಿಕತೆಯಲ್ಲಿ, ಪ್ರತಿಯೊಂದು ಹೆಣ್ಣು ಜೀವದಲ್ಲೂ ಒಬ್ಬ ತಾಯಿ, ಒಂದು ಮಾತೃ ಹೃದಯ ಇರುವುದನ್ನು ಗುರುತಿಸಿ, ಈ ದಿನದಂದು ಭಾರತ ತನ್ನ ಪಿತೃಪ್ರಧಾನತೆಯನ್ನು ಬದಿಗಿಟ್ಟು, ಸ್ತ್ರೀ ಸಂಕುಲದ ಬಗ್ಗೆ ಗಮನಹರಿಸಬೇಕಿದೆ.
ಎಲ್ಲರ ಬದುಕಿನಲ್ಲಿ ವೈಯಕ್ತಿಕವಾಗಿ ಕಾಣಬಹುದಾದ ಸಮಾನ ಎಳೆ ಎಂದರೆ, ತಾಯಿ ಎನ್ನುವ ಜೀವ ಭೌತಿಕವಾಗಿ ಇಲ್ಲವಾದರೂ, ಅವಳೊಳಗಿನ ‘ಅಮ್ಮ’ ಎಂಬ ಭಾವನಾತ್ಮಕ ತಂತು ಸದಾ ಜೀವಂತವಾಗಿರುತ್ತದೆ. ‘ಅಮ್ಮಂದಿರ ದಿನ’ ಆಚರಿಸುವ ಸಂದರ್ಭದಲ್ಲಿ ಜೊತೆಯಿರುವ, ಇಲ್ಲವಾಗಿರುವ ಅಮ್ಮಂದಿರಷ್ಟೇ ಅಲ್ಲದೆ, ಸುತ್ತಲ ಸಮಾಜದಲ್ಲಿ ಮಾನವಕುಲದ ಮರುಉತ್ಪತ್ತಿಗೆ ಕಾರಣವಾಗುವ ಎಲ್ಲ ಹೆಣ್ಣು ಜೀವಗಳೂ ಸಹ ನಮ್ಮ ಸಾಮಾಜಿಕ ಸೂಕ್ಷ್ಮ ಸಂವೇದನೆಗಳನ್ನು ಕಾಡುತ್ತವೆ, ಕಾಡಬೇಕಿದೆ. ಈ ದೃಷ್ಟಿಯಿಂದ ನೋಡಿದಾಗ, ಪಹಲ್ಗಾಮ್‌ನಲ್ಲಿ ನಡೆದ ಅಮಾನುಷ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಬಾಳಸಂಗಾತಿಗಳನ್ನು ಕಳೆದುಕೊಂಡ ಹೆಣ್ಣುಮಕ್ಕಳು, ಸದ್ಭಾವನೆ-ಸೌಹಾರ್ದದ ಒಂದೆರಡು ಮಾತುಗಳನ್ನಾಡಿದ ಕಾರಣಕ್ಕಾಗಿ, ಸಾಮಾಜಿಕ ತಾಣಗಳಲ್ಲಿ ಎದುರಿಸಬೇಕಾದ ನಿಂದನೆ ಮತ್ತು ಆರೋಪಗಳನ್ನು ಗಮನಿಸಿದಾಗ, ನವ ಭಾರತದ ಒಂದು ಯುವ-ಸಮಾಜ, ‘ಅಮ್ಮಂದಿರ ದಿನ’ ಆಚರಿಸುವ ನೈತಿಕತೆಯನ್ನು ಕಳೆದುಕೊಳ್ಳುತ್ತದೆ.
ದೌರ್ಜನ್ಯಗಳ ನಡುವೆ ‘ಅಮ್ಮ’
ಲ್ಯಾನ್ಸೆಟ್ ಎಂಬ ಜಾಗತಿಕ ಸಂಸ್ಥೆ ಇತ್ತೀಚೆಗೆ ಪ್ರಕಟಿಸಿದ ವರದಿಯ ಅನುಸಾರ ಭಾರತದಲ್ಲಿ 18 ವರ್ಷಕ್ಕೂ ಕೆಳಗಿನ ಶೇ. 30ರಷ್ಟು ಹೆಣ್ಣುಮಕ್ಕಳು (ಶೇ.13ರಷ್ಟು ಗಂಡುಮಕ್ಕಳೂ ಸಹ) ಲೈಂಗಿಕ ಹಿಂಸೆ-ದೌರ್ಜನ್ಯಕ್ಕೆ ತುತ್ತಾಗಿರುತ್ತಾರೆ. ಜಾಗತಿಕ ಮಟ್ಟದಲ್ಲಿ ಐವರಲ್ಲಿ ಒಬ್ಬ ಹೆಣ್ಣು ಮಗಳು 18 ವರ್ಷ ತಲುಪುವ ಮುನ್ನವೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುತ್ತಾಳೆ.Georgetown Institute for Women Peace and Security ಎಂಬ ಜಾಗತಿಕ ಸಂಸ್ಥೆಯ ಇತ್ತೀಚಿನ ವರದಿಯ ಅನುಸಾರ, ಮಹಿಳೆಯ ಒಳಗೊಳ್ಳುವಿಕೆ, ರಕ್ಷಣೆ ಮತ್ತು ನ್ಯಾಯ ಲಭ್ಯತೆಯ ಸೂಚ್ಯಂಕದಲ್ಲಿ 177 ರಾಷ್ಟ್ರಗಳ ಪೈಕಿ ಭಾರತ 128ನೇ ಸ್ಥಾನದಲ್ಲಿದೆ. ಭಾರತದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ)- 2023ರ ವರದಿಯ ಅನುಸಾರ, 2018ರಿಂದ 2022ರ ನಡುವೆ ದಾಖಲಾದ ಮಹಿಳಾ ದೌರ್ಜನ್ಯಗಳ ಪ್ರಮಾಣ ಶೇ. 12.9ರಷ್ಟು ಹೆಚ್ಚಾಗಿದ್ದು, ಶೇ. 66.4ರಷ್ಟು ಮಹಿಳೆಯರು ವಿವಿಧ ರೀತಿಯ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಎನ್‌ಸಿಆರ್‌ಬಿ ದತ್ತಾಂಶಗಳೇ ಹೇಳುವಂತೆ ಭಾರತದಲ್ಲಿ ಪ್ರತಿವರ್ಷ 30 ಸಾವಿರಕ್ಕೂ ಹೆಚ್ಚು ಮಹಿಳಾ ದೌರ್ಜನ್ಯಗಳು ದಾಖಲಾಗುತ್ತಿವೆ. ಮತ್ತೊಂದೆಡೆ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಶೇ. 27-28ರಷ್ಟಿದೆ.
ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಪ್ರಮಾಣವನ್ನು ರಾಷ್ಟ್ರೀಯ ಮಹಿಳಾ ಆಯೋಗದ ದತ್ತಾಂಶಗಳ ನೆಲೆಯಲ್ಲಿ ನೋಡಿದಾಗ, ತಲೆತಗ್ಗಿಸುವಂತಾಗುತ್ತದೆ. 2025ರ ಮೊದಲ ನಾಲ್ಕು ತಿಂಗಳಲ್ಲಿ ಆಯೋಗದಲ್ಲಿ 7,698 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1,594 ಕೌಟುಂಬಿಕ ದೌರ್ಜನ್ಯಗಳು. ವರ್ತಮಾನ ಭಾರತದ ಮಾದರಿ ರಾಜ್ಯ ಎಂದು ಬಿಂಬಿಸಲ್ಪಡುತ್ತಿರುವ ಉತ್ತರಪ್ರದೇಶ ಶೇ. 50ರಷ್ಟು , 3,921 ಪ್ರಕರಣಗಳನ್ನು ದಾಖಲಿಸಿದೆ. 2024ರಲ್ಲಿ ಆಯೋಗ 25,743 ಪ್ರಕರಣಗಳನ್ನು ದಾಖಲಿಸಿತ್ತು. ದುಡಿಯುವ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಿನ ಪ್ರಮಾಣದಲ್ಲಿವೆ. 2023-24ರಲ್ಲಿ ಕರ್ನಾಟಕವು ಅತಿ ಕಡಿಮೆ, 522 ಪ್ರಕರಣಗಳನ್ನು ದಾಖಲಿಸಿ, ಹತ್ತನೇ ಸ್ಥಾನದಲ್ಲಿದೆ. ಇದು ಸಮಾಧಾನಕರ ಎನ್ನುವುದು ಆತ್ಮತೃಪ್ತಿಯ ಮಾತಾಗುತ್ತದೆ. ವರದಕ್ಷಿಣೆ ನಿರ್ಬಂಧ ಕಾಯ್ದೆಯ ಹೊರತಾಗಿಯೂ ಕಳೆದ ಮೂರು ವರ್ಷಗಳಲ್ಲಿ 19,573 ಪ್ರಕರಣಗಳನ್ನು ಆಯೋಗ ದಾಖಲಿಸಿರುವುದು, ಭಾರತದ ಕುಟುಂಬ ವ್ಯವಸ್ಥೆಯ ನೈಜ ಚಿತ್ರಣ ನೀಡುತ್ತದೆ.
ವಾಸ್ತವ ಜಗತ್ತಿನಲ್ಲಿ ‘ಅಮ್ಮಂದಿರು’
ಮಹಿಳಾ ದೌರ್ಜನ್ಯಗಳು ಜೈವಿಕವಾಗಿ ಅಮ್ಮ ಎನಿಸಿಕೊಳ್ಳದ ಅವಿವಾಹಿತ ಮತ್ತು ಅಪ್ರಾಪ್ತ ವಯಸ್ಕರ ಮೇಲೆ ನಡೆಯುವಷ್ಟೇ ಪ್ರಮಾಣದಲ್ಲಿ, ತಾಯಂದಿರ ಮೇಲೂ ನಡೆಯುತ್ತಿರುವುದು ನಮ್ಮ ಸಮಾಜ ನಡೆಯುತ್ತಿರುವ ದಾರಿಯನ್ನು ಸೂಚಿಸುತ್ತದೆ. ಇತ್ತೀಚೆಗೆ ಕರ್ನಾಟಕದ ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಗರ್ಭಿಣಿಯರ ಅಕಾಲಿಕ ಮರಣ ಸರಕಾರವನ್ನು ನಿದ್ರಾವಸ್ಥೆಯಿಂದ ಎಚ್ಚರಿಸಿದ್ದರೂ, ಅಮ್ಮ ಎನಿಸಿಕೊಳ್ಳುವ ಭಾಗ್ಯ ಅಥವಾ ಅವಕಾಶವನ್ನೇ ಹೆಣ್ಣು ಮಕ್ಕಳಿಂದ ಕಸಿದುಕೊಳ್ಳುವ ಹೆಣ್ಣು ಭ್ರೂಣ ಹತ್ಯೆಯ ಪ್ರಕರಣಗಳು ಸಮಾಜವೇ ತಲೆತಗ್ಗಿಸುವಂತೆ ಮಾಡಿವೆ. ಹೆಣ್ಣು ಭ್ರೂಣ ಹತ್ಯೆಯ ಮೂಲಕ ಭವಿಷ್ಯದ ಅಮ್ಮಂದಿರನ್ನು ಜೀವತಳೆಯುವ ಮುನ್ನವೇ ಅಂತ್ಯಗೊಳಿಸುವುದು ಒಂದು ಆಯಾಮವಾದರೆ ಮತ್ತೊಂದು ಮಜಲಿನಲ್ಲಿ ತನ್ನ ಸ್ವ-ಇಚ್ಛೆಗೆ ಮಾನ್ಯತೆಯನ್ನೇ ಪಡೆಯದೆ, ಪುರುಷಾಧಿಪತ್ಯದ ಒತ್ತಡಗಳಿಗೆ ಮಣಿದು, ತಾಯಿಯಾಗುವ ಭಾಗ್ಯವನ್ನು ಕಳೆದುಕೊಳ್ಳುವ ಹೆಣ್ಣು ಮಕ್ಕಳನ್ನು ಸಾವಿರ ಸಂಖ್ಯೆಯಲ್ಲಿ ಕಾಣಬಹುದು.
ಈ ನಡುವೆಯೇ ಭಾರತದ ರಿಜಿಸ್ಟ್ರಾರ್ ಜನರಲ್‌ಮತ್ತು ಜನಗಣತಿ ಆಯೋಗದ (ಆರ್‌ಜಿಐ) ಇತ್ತೀಚಿನ ವರದಿ ಪ್ರಕಟವಾಗಿದ್ದು, ದೇಶದಲ್ಲಿ ತಾಯಂದಿರ ಮರಣ ದರ (Maternal Mortality Rate-MMR) ಕೊಂಚ ಮಟ್ಟಿಗೆ ಕುಸಿತ ಕಂಡಿರುವುದು ಸಮಾಧಾನಕರ ಸಂಗತಿ. 2018-20ರ ಅವಧಿಯಲ್ಲಿ ಒಂದು ಲಕ್ಷ ಮಕ್ಕಳ ಜನನದಲ್ಲಿ 97ರಷ್ಟು ಮಹಿಳೆಯರು ಜೀವ ಕಳೆದುಕೊಳ್ಳುತ್ತಿದ್ದರು. 2019-21ರಲ್ಲಿ ಈ ದರ 93ಕ್ಕೆ ಕುಸಿದಿದೆ. 2017-19ರ ಅವಧಿಯಲ್ಲಿ ಇದು 103ರಷ್ಟಿತ್ತು. ಈ ಸಕಾರಾತ್ಮಕ ಬೆಳವಣಿಗೆಯ ನಡುವೆಯೂ ರಾಜ್ಯವಾರು ದತ್ತಾಂಶಗಳನ್ನು ಗಮನಿಸಿದಾಗ, ಹಲವು ರಾಜ್ಯಗಳಲ್ಲಿ MMR ದರಗಳು ಹೆಚ್ಚಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಮಧ್ಯಪ್ರದೇಶ ಈ ನಿಟ್ಟಿನಲ್ಲಿ ಪ್ರಥಮ ಸ್ಥಾನದಲ್ಲಿದ್ದು MMR ದರ 175/ಪ್ರತಿ ಲಕ್ಷಕ್ಕೆ ದಾಖಲೆಯಾಗಿದೆ.
ದಕ್ಷಿಣದ ರಾಜ್ಯ ಕೇರಳ ಅತಿ ಕಡಿಮೆ, 20/ಪ್ರತಿ ಲಕ್ಷಕ್ಕೆ ದರವನ್ನು ದಾಖಲಿಸಿದ್ದು, ಮಹಾರಾಷ್ಟ್ರದಲ್ಲಿ 38ರಷ್ಟು ದಾಖಲೆಯಾಗಿದೆ. ಕರ್ನಾಟಕದಲ್ಲಿ 2018-20ರಲ್ಲಿ 69ರಷ್ಟಿದ್ದ ತಾಯಂದಿರ ಮರಣ ದರ 2019-21ರ ವೇಳೆಗೆ 63ಕ್ಕೆ ತಲುಪಿರುವುದು ಸಮಾಧಾನಕರ ಅಂಶ. ಆದರೂ ಕಳೆದ ವರ್ಷ ಎಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಬಳ್ಳಾರಿಯಲ್ಲೇ 464ರ ತಾಯಂದಿರ ಮರಣ ಸಂಭವಿಸಿರುವುದು ಗಂಭೀರ ವಿಚಾರ. ಇಂತಹ ಶೇ. 70ರಷ್ಟು ಸಾವುಗಳನ್ನು ತಡೆಗಟ್ಟಬಹುದಿತ್ತು ಎಂದು ತಜ್ಞರ ತಂಡವು ಅಭಿಪ್ರಾಯಪಟ್ಟಿದೆ. ಈ ಮರಣಗಳ ಪೈಕಿ ಶೇ. 65ರಷ್ಟು ಅಂದರೆ 305 ತಾಯಂದಿರ ಸಾವು ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಸಂಭವಿಸಿರುವುದು ಇನ್ನೂ ಕಳವಳ ಉಂಟುಮಾಡುವ ವಿಚಾರ. ಈ ಘಟನೆಯ ನಂತರ ರಾಜ್ಯ ಸರಕಾರ ಕೇಂದ್ರ ಸರಕಾರದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಅಡಿ ಕ್ರಮಗಳನ್ನು ಕೈಗೊಂಡಿದ್ದರೂ, ಮಂಡ್ಯ ಜಿಲ್ಲೆಯಲ್ಲಿ ಕಳೆದ ವರ್ಷ ವರದಿಯಾದ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳಲ್ಲಿ ಈವರೆಗೂ ಯಾರಿಗೂ ಶಿಕ್ಷೆಯಾಗದಿರುವುದು, ಯಾರೂ ಉತ್ತರದಾಯಿಯಾಗದಿರುವುದು, ಉತ್ತಮ ಬೆಳವಣಿಗೆಯಲ್ಲ.
ಹೆಣ್ತನದ ಘನತೆಯ ನಡುವೆ ‘ಅಮ್ಮ’
ಈ ಅಧಿಕೃತ ದತ್ತಾಂಶಗಳಿಂದಾಚೆ ನೋಡಿದಾಗ ಅಮ್ಮಂದಿರ ದಿನ ಎನ್ನುವುದು ಭಾರತದ ಹೆಣ್ಣು ಮಕ್ಕಳಿಗಿಂತಲೂ ಹೆಚ್ಚಾಗಿ, ದೇಶದ ಸಾಂಸ್ಕೃತಿಕ-ರಾಜಕೀಯ-ಧಾರ್ಮಿಕ-ಸಾಮಾಜಿಕ ಪರಿಸರವನ್ನು ನಿಯಂತ್ರಿಸಿ ನಿರ್ದೇಶಿಸುತ್ತಿರುವ ಪುರುಷಾಧಿಪತ್ಯದ ನೆಲೆಗಳಲ್ಲಿ ಆತ್ಮಾವಲೋಕನದ ಪ್ರಶ್ನೆಯಾಗಿ ಮೂಡಬೇಕಿದೆ. ದೇಶವನ್ನು ಆವರಿಸುತ್ತಿರುವ ಯುದ್ಧದ ಕಾರ್ಮೋಡ ಇಂದಲ್ಲ ನಾಳೆ ಕರಗಿಹೋದರೂ ಸಹ, ತಮ್ಮ ವೃತ್ತಿಧರ್ಮ-ಜವಾಬ್ದಾರಿಯನ್ನು ಮರೆತು ಜನಸಾಮಾನ್ಯರ ನಡುವೆ ಯುದ್ಧೋನ್ಮಾದ, ಭೀತಿಯನ್ನು ಸೃಷ್ಟಿಸುತ್ತಿರುವ ವಿದ್ಯುನ್ಮಾನ ದೃಶ್ಯ ಮಾಧ್ಯಮಗಳು ಸಮಾಜದಲ್ಲಿ ಉತ್ಪಾದಿಸುತ್ತಿರುವ ಆತಂಕಗಳು ಎಲ್ಲ ಅಮ್ಮಂದಿರನ್ನೂ ಕಾಡುವುದು ಖಚಿತ. ಏಕೆಂದರೆ ಯುದ್ಧದಲ್ಲಿ ಅಥವಾ ಆಂತರಿಕ ಯುದ್ಧೋನ್ಮಾದದಿಂದ ನಡೆಯಬಹುದಾದ ಮತೀಯ ದಾಳಿಗಳಲ್ಲಿ ತಮ್ಮ ಮಕ್ಕಳನ್ನು, ಬಾಳ ಸಂಗಾತಿಗಳನ್ನು, ಆತ್ಮೀಯರನ್ನು ಕಳೆದುಕೊಳ್ಳಬಹುದಾದ ಸಾವಿರಾರು ಅಮ್ಮಂದಿರು ವಿಶಾಲ ಸಮಾಜದ ಗಮನಕ್ಕೇ ಬರುವುದಿಲ್ಲ.
ಸಾಮಾನ್ಯವಾಗಿ ಯಾವುದೇ ಕೋಮು ಗಲಭೆಯಾಗಲೀ, ಮತೀಯ ಹತ್ಯಾಕಾಂಡ-ನರಮೇಧವಾಗಲೀ ಅಲ್ಲಿ ಮಡಿದವರನ್ನು, ಬದುಕುಳಿದ ಸಂತ್ರಸ್ತರನ್ನು ಲೆಕ್ಕ ಹಾಕುತ್ತಾ ಮುನ್ನಡೆಯುವ ಸಮಾಜಕ್ಕೆ, ಈ ಸಂಘರ್ಷದಲ್ಲಿ ಅಸಹಾಯಕ ಮೌನ ಪ್ರೇಕ್ಷಕರಾಗಿ ಕೊನೆಯಲ್ಲಿ ಎಲ್ಲವನ್ನೂ/ಎಲ್ಲರನ್ನೂ ಕಳೆದುಕೊಳ್ಳುವ ಹೆಣ್ಣುಮಕ್ಕಳು ಮತ್ತು ಅವರೊಳಗಿನ ಅಮ್ಮಂದಿರು ಕಾಣುವುದು ಅಪರೂಪ. ತನ್ನ ಕಣ್ಣೆದುರಿನಲ್ಲೇ ಮೊದಲ ಮಗುವನ್ನು ಗೋಡೆಗೆ ಅಪ್ಪಳಿಸಿ ಕೊಂದ ಪಾತಕ ಕೃತ್ಯವನ್ನು ನೋಡಿದ ಬಿಲ್ಕಿಸ್ ಬಾನು ನಮ್ಮ ನಡುವೆ ಇನ್ನೂ ಇದ್ದಾರೆ. ಇಂತಹ ತಾಯಿ ಹೃದಯಗಳು ನಮಗೆ ಎದುರಾಗುತ್ತಲೇ ಇರುತ್ತವೆ. ಪ್ರತ್ಯಕ್ಷವಾಗಿ ಕಣ್ಣೀರಿನಲ್ಲೇ ಮುಳುಗಿ ಬಾಳುತ್ತಿರುವ ಸೌಜನ್ಯಾಳ ತಾಯಿ ನಮ್ಮ ನಡುವೆ ಇದ್ದಾರೆ. ಆಕೆಯ ಚಾಚಿದ ಮಡಿಲಲ್ಲಿ ನ್ಯಾಯ ಎಂಬ ಅಮೂರ್ತ ವಸ್ತುವನ್ನು ಹಾಕುವಷ್ಟು ಸಂವೇದನೆಯೂ ನಮ್ಮ ಸಮಾಜದಲ್ಲಿ ಇಲ್ಲವಾಗಿದೆ.
ಕೌಟುಂಬಿಕ ಹಾಗೂ ವೈಯಕ್ತಿಕ ನೆಲೆಯಲ್ಲಿ, ವ್ಯಕ್ತಿಗತವಾಗಿ ಪ್ರತಿ ವ್ಯಕ್ತಿಯೂ ಕಾಣುವ ತಾಯ್ಮಮತೆ, ತಾಯಿಯ ಅಂತಃಕರಣ ಮತ್ತು ಪ್ರೀತಿ ವಾತ್ಸಲ್ಯಗಳನ್ನು ಸುಖವಾಗಿ ಆನಂದಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಅಂತರ್‌ರಾಷ್ಟ್ರೀಯ ಅಮ್ಮಂದಿರ ದಿನವನ್ನು ಆಚರಿಸುವ ಸಂದರ್ಭದಲ್ಲಿ ನಮ್ಮ ದೃಷ್ಟಿಗೆ ಸೌಜನ್ಯಾ ತಾಯಿಯಂತಹ, ಬಿಲ್ಕಿಸ್‌ಬಾನು ಅವರಂತಹ ಅಮ್ಮಂದಿರು ಬೀಳದೆ ಹೋದರೆ, ನಾವು ಮನುಜ ಸೂಕ್ಷ್ಮತೆಯನ್ನೇ ಕಳೆದುಕೊಂಡಿದ್ದೇವೆ ಎಂದೇ ಅರ್ಥ. ‘ಅಮ್ಮ’ ಎಂಬ ಶಕ್ತಿಯನ್ನು ವೈಭವೀಕರಿಸುವುದು ಅಥವಾ ದೈವಿಕ ಹಂತಕ್ಕೇರಿಸಿ ಪೂಜನೀಯವಾಗಿ ಗೌರವಿಸುವುದು ವ್ಯಕ್ತಿನಿಷ್ಠ ಲಕ್ಷಣ. ಆದರೆ ನಮ್ಮ ಸುತ್ತಲಿನ ಸಮಾಜದಲ್ಲಿ ಅಪೌಷ್ಟಿಕತೆ, ಹಸಿವು, ಬಡತನ, ಜಾತಿ ತಾರತಮ್ಯ, ಅಸ್ಪಶ್ಯತೆ, ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಸಾಂಸ್ಕೃತಿಕ ನೆಲೆಯಲ್ಲಿ ಮತಾಂಧರ ದಾಳಿಗಳಿಂದ ನೋವು ಅನುಭವಿಸುವ ಅನೇಕಾನೇಕ ಅಮ್ಮಂದಿರು ನಮ್ಮ ಅಂತರಾತ್ಮವನ್ನು ಕದಡದೆ ಹೋದರೆ, ನಾವು ಮನುಜ ಸೂಕ್ಷ್ಮಸಂವೇದನೆಯನ್ನು ಕಳೆದುಕೊಂಡಿದ್ದೇವೆ ಎಂದೇ ಅರ್ಥ.
ಸುಡು ವಾಸ್ತವಗಳ ನಡುವೆ ‘ಅಮ್ಮ’
ಅಮ್ಮಂದಿರ ದಿನದಂದು ಈ ವಾಸ್ತವ ಸ್ಥಿತಿಗತಿಗಳನ್ನು ಪರಾಮರ್ಶಿಸಿದಾಗ, ನಮ್ಮ ಸಮಾಜವನ್ನು ನಿರ್ದೇಶಿಸಿ-ನಿಯಂತ್ರಿಸಿ-ನಿರ್ವಹಿಸುತ್ತಿರುವ ಪಿತೃಪ್ರಧಾನ ಮೌಲ್ಯಗಳು ದೇಶದ ರಾಜಕೀಯ-ಆಡಳಿತ-ಸಾಂಸ್ಕೃತಿಕ-ಸಾಮಾಜಿಕ ಹಾಗೂ ಬೌದ್ಧಿಕ ವಲಯಗಳಲ್ಲೂ ಸಹ ತನ್ನ ಬೇರುಗಳನ್ನು ಗಟ್ಟಿಯಾಗಿ ಉಳಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಈ ಸಂದಿಗ್ಧ ಸಿಕ್ಕುಗಳ ನಡುವೆ ನಾವು ‘ಅಂತರ್‌ರಾಷ್ಟ್ರೀಯ ಅಮ್ಮಂದಿರ ದಿನ’ ಆಚರಿಸುತ್ತಿದ್ದೇವೆ. ಮಹಿಳಾ ಸಮೂಹದ ಮಟ್ಟಿಗೆ ನ್ಯಾಯ ಮತ್ತು ಸಮಾನ ಅವಕಾಶ ಎನ್ನುವುದು ಅಮೂರ್ತ ಸ್ವರೂಪ ಪಡೆಯುತ್ತಿರುವಂತೆಯೇ, ಪ್ರಗತಿಪರ ವೇದಿಕೆಗಳೂ ಸಹ, ಹಿಂಬದಿಯಲ್ಲಿ ಅಂಬೇಡ್ಕರ್, ಮಾರ್ಕ್ಸ್, ಫುಲೆ ಅವರನ್ನು ಬಿಂಬಿಸುತ್ತಲೇ, ಪುರುಷಮಯವಾಗಿರುವ ಒಂದು ವಿದ್ಯಮಾನಕ್ಕೂ ನಾವು ಸಾಕ್ಷಿಯಾಗುತ್ತಿದ್ದೇವೆ. ಇದು ಪ್ರಾತಿನಿಧ್ಯ ಅಥವಾ ಅವಕಾಶದ ಪ್ರಶ್ನೆ ಎನ್ನುವುದಕ್ಕಿಂತಲೂ, ಪ್ರತಿಯೊಬ್ಬ ಮಹಿಳೆಯೊಳಗಿನ ‘ಅಮ್ಮ’ ಮತ್ತು ಎಲ್ಲ ‘ಅಮ್ಮಂದಿರೊಳಗೆ’ ಇರುವ ಹೆಣ್ತನದ ಘನತೆಯನ್ನು ಸಮಾನವಾಗಿ ನೋಡುವ ಪ್ರಶ್ನೆಯಾಗಿ ನಮ್ಮನ್ನು ಕಾಡಬೇಕಿದೆ.
ಭಾರತೀಯ ಸಮಾಜ ತನ್ನೆಲ್ಲಾ ಆಧುನಿಕತೆಯ ನಡುವೆಯೂ, ಮಹಿಳಾ ಸಂವೇದನೆ ಮತ್ತು ಲಿಂಗ ಸೂಕ್ಷ್ಮತೆಯನ್ನು ರೂಢಿಸಿಕೊಳ್ಳದೆ ಇರುವುದು ಶೋಚನೀಯವಷ್ಟೇ ಅಲ್ಲ, ವ್ಯಾಪಕ ಚರ್ಚೆಗೊಳಗಾಗಬೇಕಾದ ವಿಚಾರವಾಗಿದೆ. ಹೆತ್ತ ತಾಯಿಯನ್ನು ಗೌರವಿಸುವ ಅಥವಾ ಪೂಜಿಸುವ ಮನಸ್ಸುಗಳಿಗೆ, ನೆರೆಮನೆಯ ಅಥವಾ ಆಚೆಬದಿ ರಸ್ತೆಯ ಅಥವಾ ಪಕ್ಕದೂರಿನ/ದೂರದೂರಿನ ‘ಅಮ್ಮಂದಿರು’ ಮತಾಂಧರ, ಜಾತಿಗ್ರಸ್ತರ ಮತ್ತು ಪುರುಷಾಧಿಪತ್ಯದ ದೌರ್ಜನ್ಯಗಳ ಕಾರಣ ತಮ್ಮ ಮಡಿಲ ಕುಡಿಗಳನ್ನು ಕಳೆದುಕೊಳ್ಳುತ್ತಿರುವುದು, ಸ್ವತಃ ಈ ದೌರ್ಜನ್ಯಗಳಿಗೆ ತುತ್ತಾಗುತ್ತಿರುವುದು ನಮ್ಮ ಅಂತರ್‌ಪ್ರಜ್ಞೆಯನ್ನು ಬಡಿದೆಬ್ಬಿಸಬೇಕಲ್ಲವೇ?
ಸಮಾಜದಲ್ಲಿ ಹರಡಿರುವ ಪಿತೃಪ್ರಧಾನ ಮೌಲ್ಯಗಳ ಕಡಲನ್ನು ಭೇದಿಸುವುದು ವರ್ತಮಾನದ ತುರ್ತು. ಅಮ್ಮಂದಿರ ದಿನದ ಸಾರ್ಥಕತೆ ಇಲ್ಲಿ ಅಡಗಿದೆ.