ಆರ್ ಸಿಬಿ ಸಮೂಹ ಸನ್ನಿ ಮತ್ತು ಹೊಣೆಗೇಡಿ ಸರಕಾರ

ಈ ಭೀಕರ ದುರಂತದಿಂದ ಸರಕಾರ ಮತ್ತು ಒಟ್ಟಾರೆ ಸಮಾಜ ಕಲಿಯಬೇಕಾದ ಹತ್ತಾರು ಪಾಠಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಸರಕಾರ ಮತ್ತು ಕ್ರಿಕೆಟ್ ಅಂಧಾಭಿಮಾನಿಗಳು ಭಾವಿಸಿದಂತೆ ಈಗ ಕ್ರಿಕೆಟ್ ಶುದ್ಧ ಕ್ರೀಡಾಮನೋಭಾವ ಉತ್ತೇಜಿಸುವ ಆಟವಾಗಿ ಉಳಿದಿಲ್ಲ. ಅದೊಂದು ಪಕ್ಕಾ ವಾಣಿಜ್ಯ ಉದ್ದೇಶದ ಹಣ ಮಾಡುವ ದಂಧೆಯಾಗಿ ರೂಪಾಂತರಗೊಂಡಿದೆ. ಕ್ರಿಕೆಟ್ ಹುಚ್ಚಿನ ಉನ್ಮಾದದಲ್ಲಿ ಹನ್ನೊಂದು ಜನ ಜೀವ ಕಳೆದುಕೊಂಡಿದ್ದು ಲೆಕ್ಕಕ್ಕೆ ಸಿಕ್ಕಿದೆ. ಐಪಿಎಲ್ ಕ್ರಿಕೆಟ್ ಆಟ ಉಂಟು ಮಾಡಿರುವ ಅಡ್ಡ ಪರಿಣಾಮಗಳು ಲೆಕ್ಕಕ್ಕೆ ಸಿಗದಷ್ಟು ಇವೆ. ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡು ಜೀವ ತೆತ್ತವರ ಲೆಕ್ಕ ಇಟ್ಟವರು ಯಾರು? ಕ್ರಿಕೆಟ್ ಇಂದು ಅಕ್ಷರಶಃ ಒಂದು ಜೂಜು ಆಗಿ ಸಾಮಾಜಿಕ ಪಿಡುಗಿನಂತೆ ಕಾಡುತ್ತಿದೆ. ಲಾಟರಿ, ಮಟ್ಕಾ ಮತ್ತು ಇನ್ನಿತರ ಜೂಜುಗಳನ್ನು ನಿಷೇಧಿಸಿದಂತೆ ಕ್ರಿಕೆಟ್ ನಿಷೇಧಿಸಲಾಗದು. ಆದರೆ ಕ್ರಿಕೆಟ್ ಆಟ ಸೃಷ್ಟಿಸುತ್ತಿರುವ ಅವಾಂತರಗಳನ್ನು ನಿಯಂತ್ರಿಸದಿದ್ದರೆ ದುರಂತಗಳ ಸರಮಾಲೆ ಮುಂದುವರಿಯುತ್ತದೆ.
ಹದಿನೆಂಟು ವರುಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ವೆಂಟಿ-ಟ್ವೆಂಟಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿತು. ಆ ಗೆಲುವನ್ನು ಸಂಭ್ರಮಿಸಲು ಹೋಗಿ ಹನ್ನೊಂದು ಅಮಾಯಕ ಜೀವಗಳು ಬದುಕು ಕಳೆದುಕೊಂಡಿವೆ. ಕಾಲ್ತುಳಿತದಲ್ಲಿ ಮೃತರಾದ ಆ ಜೀವಗಳು ಮತ್ತೆ ಎದ್ದು ಬರಲಾರವು. ಆ ಕುಟುಂಬದವರ ನೋವು, ಯಾತನೆಯನ್ನು ಯಾವ ಪರಿಹಾರ ಧನವೂ ಸಮಾಧಾನಪಡಿಸಲಾರದು. ಹಾಗೆ ನೋಡಿದರೆ ಈ ಪ್ರಮಾಣದ ಭೀಕರ ದುರಂತ ಕನ್ನಡ ನಾಡಿನ ಜನತೆ ಇತ್ತೀಚಿನ ವರ್ಷಗಳಲ್ಲಿ ಕಂಡೇ ಇಲ್ಲ..
ಕಾಲ್ತುಳಿತ ಸಂಭವಿಸಿದ ಸಂದರ್ಭದಲ್ಲಿ ಬಿಜೆಪಿಯೋ ಜೆಡಿಎಸ್ಸೋ ಆಡಳಿತ ನಡೆಸುತ್ತಿದ್ದು ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಅದೇ ಪ್ರತಿಕ್ರಿಯೆ, ಅದೇ ಸ್ಪಂದನ ಸಿದ್ದರಾಮಯ್ಯ ಮತ್ತು ಅವರ ಸರಕಾರದ ಭಾಗವಾಗಿರುವ ಎಲ್ಲರಲ್ಲೂ ಮೂಡಿದರೆ ಮಾತ್ರ ಇಂಥ ಭೀಕರ ದುರಂತಗಳು ಮತ್ತೆ ಸಂಭವಿಸಲಾರವು. ಹಿರಿಯ ಸಮಾಜವಾದಿ ನಾಯಕ ಡಾ. ರಾಮಮನೋಹರ್ ಲೋಹಿಯಾ ಅವರು ಬದುಕಿದ್ದಾಗ ಕ್ರಿಕೆಟ್ ಈ ಮಟ್ಟದಲ್ಲಿ ವಾಣಿಜ್ಯಕರಣಕ್ಕೆ ಒಳಗಾಗಿರಲಿಲ್ಲ. ಆದರೂ ಅವರು ಕ್ರಿಕೆಟ್ ಆಟವನ್ನು ನಖಸಿಖಾಂತ ವಿರೋಧಿಸುತ್ತಿದ್ದರು. ಕ್ರಿಕೆಟ್ ನಮ್ಮನ್ನಾಳಿದ ಬ್ರಿಟಿಷರ ಆಟ ಎಂಬುದು ಒಂದು ಕಾರಣವಾದರೆ, ಉಳಿದ ಆಟಗಳಂತೆ ಅದು ವೈವಿಧ್ಯಮಯವಾದ ಆಟ ಅಲ್ಲ ಎನ್ನುವುದು ಅವರ ಆಕ್ಷೇಪಕ್ಕೆ ಸಮರ್ಥನೆಯಾಗಿತ್ತು. ಕ್ರಿಕೆಟ್ ಪಂದ್ಯಾವಳಿಯ ಇಂದಿನ ವಿರಾಟ್ ಸ್ವರೂಪವನ್ನು ಡಾ. ರಾಮಮನೋಹರ ಲೋಹಿಯಾ ನೋಡಿದ್ದರೆ ಖಂಡಿತ ಅವರು ಬ್ಯಾನ್ ಮಾಡಲು ಆಗ್ರಹಿಸುತ್ತಿದ್ದರು. ಈ ಸಂದರ್ಭದಲ್ಲಿ ಡಾ. ರಾಮಮನೋಹರ ಲೋಹಿಯಾ ಅವರ ಹೆಸರನ್ನು ಪ್ರಸ್ತಾಪಿಸಲು ಕಾರಣ ಸಮಾಜವಾದಿ ಪಳೆಯುಳಿಕೆಯಂತಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವುದರಿಂದ. ಅಷ್ಟಕ್ಕೂ ಡಾ. ರಾಮಮನೋಹರ ಲೋಹಿಯಾ ಅವರ ಆಳದ ಕಾಳಜಿಯನ್ನು ಅರಿಯಬಲ್ಲ ಸಂವೇದನಾಶೀಲತೆ ಸಿದ್ದರಾಮಯ್ಯ ಹೊರತುಪಡಿಸಿ ಬೇರೆ ಯಾರಲ್ಲೂ ಇಲ್ಲ. ಡಿ.ಕೆ. ಶಿವಕುಮಾರ್ ಮತ್ತು ಇನ್ನಿತರ ರಾಜಕಾರಣಿಗಳಿಗೆ ಹನ್ನೊಂದು ಜನರ ಸಾವು ಒಂದು ಸಹಜ ಅಪಘಾತವಾಗಿ ತೋರುತ್ತದೆ. ಆದರೆ ಸಂವೇದನಾಶೀಲ ಮನಸ್ಸುಳ್ಳ ರಾಜಕಾರಣಿಗಳಿಗೆ ಈ ಭೀಕರ ದುರಂತ ಸಾಮೂಹಿಕ ಹತ್ಯಾಕಾಂಡದಂತೆ ಕಾಣುತ್ತದೆ.
ಕಾಲ್ತುಳಿತದಲ್ಲಿ ಅಮಾಯಕ ಜನರು ಬಲಿಯಾಗುವುದು ಭಾರತ ದೇಶಕ್ಕೆ ಹೊಸತಾಗಿರಲಿಲ್ಲ. ದೈವ ಭಕ್ತಿಯ ಉನ್ಮಾದವನ್ನು ಆವಾಹಿಸಿಕೊಳ್ಳುವ ಭಾರತೀಯರು ದೇವರ ಸನ್ನಿಧಿಯಲ್ಲಿ ಅದೆಷ್ಟೋ ಜೀವ ಕಳೆದುಕೊಂಡಿದ್ದಾರೆ. ಶಬರಿಮಲೆ, ವೈಷ್ಣೋ ದೇವಿ ದರ್ಶನದ ಸಂದರ್ಭದಲ್ಲಿ ಸಾವು ನೋವು ಸಂಭವಿಸಿದ್ದು ಕಂಡಿದ್ದೇವೆ. ಇತ್ತೀಚೆಗೆ ಪ್ರಯಾಗರಾಜ್ನಲ್ಲಿ ನಡೆದ ಕುಂಭ ಮೇಳ ಹಲವರನ್ನು ಬಲಿ ತೆಗೆದುಕೊಂಡಿತ್ತು. ಹಿಂದಿನ ಎಲ್ಲ ದುರಂತಗಳು ಆಡಳಿತ ನಡೆಸುವವರಿಗೆ ಪಾಠವಾಗಿದ್ದರೆ ಕಾಲ್ತುಳಿತದ ಘಟನೆಗಳು ಮರುಕಳಿಸುವುದಿಲ್ಲ. ಆರ್ಸಿಬಿ ಸೃಷ್ಟಿಸಿರುವ ಉನ್ಮಾದ ಮತ್ತು ಅದರಿಂದಾಗಿ ಸಂಭವಿಸಿರುವ ಅವಘಡ, ಸಾವು ನೋವು ತಪ್ಪಿಸಲು ಸಾಧ್ಯ ಇರಲಿಲ್ಲವೇ? ಎಂದು ವಿರೋಧ ಪಕ್ಷಗಳು ಸೇರಿದಂತೆ ಹಲವರು ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ. ಒಂದು ಭೀಕರ ದುರಂತ ಸಂಭವಿಸಿದಾಗ ತಲೆಗೊಂದು ಮಾತು ಕೇಳಿ ಬರುವುದು ಸಹಜ. ವಿರೋಧ ಪಕ್ಷದವರು ಮತ್ತು ಸಿದ್ದರಾಮಯ್ಯ ಸರಕಾರದ ಟೀಕಾಕಾರರು ಮಾಮೂಲಿಗಿಂತ ಜಾಸ್ತಿ ಮುಗಿಬೀಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಜ ಪ್ರತಿಕ್ರಿಯೆಯೇ ಸರಿ.
ಆದರೆ ಜವಾಬ್ದಾರಿಯುತ ಪ್ರಗತಿಪರ ಸರಕಾರವೊಂದು ತನ್ನ ಆದ್ಯತೆಗಳನ್ನು ಖಚಿತವಾಗಿ ಸ್ಪಷ್ಟಪಡಿಸಿಕೊಳ್ಳದಿದ್ದರೆ ಕಾಲ್ತುಳಿತದಂತಹ ಭೀಕರ ದುರಂತಗಳು ಮತ್ತೆ ಸಂಭವಿಸುತ್ತವೆ. ಸರಕಾರಗಳು ಇಂತಹ ಸಂದರ್ಭದಲ್ಲಿ ಅಮಾಯಕರಂತೆ ವರ್ತಿಸುವುದು ಕೂಡಾ ಹೊಣೆಗೇಡಿತನ ಎನಿಸಿಕೊಳ್ಳುತ್ತದೆ. ಜನಸಾಮಾನ್ಯರು ತೀವ್ರವಾಗಿ ಆಕ್ಷೇಪಿಸುತ್ತಿರುವುದರಲ್ಲಿ ಒಂದು ಅರ್ಥವಿದೆ. ಆರ್ಸಿಬಿ ಕ್ರಿಕೆಟ್ ತಂಡಕ್ಕೂ ಮತ್ತು ಕರ್ನಾಟಕ ಸರಕಾರಕ್ಕೂ ಏನಾದರೂ ಸಾವಯವ ಸಂಬಂಧ ಇದೆಯೇ? ಕ್ರಿಕೆಟ್ ಆಟವನ್ನು ಆರಾಧಿಸುವ ಒಂದು ಪ್ರವೃತ್ತಿ ಎಲ್ಲೆಡೆ ಆವರಿಸಿದೆ. ಯುವ ಸಮುದಾಯದಲ್ಲಿ ಕ್ರಿಕೆಟ್ ಆಟ ಮತ್ತು ಆಟಗಾರರ ಬಗ್ಗೆ ಹುಚ್ಚು ಉನ್ಮಾದ ಸೃಷ್ಟಿಯಾಗಿದೆ. ಅದು ಕಾಲನ ಮಹಿಮೆ, ಅದನ್ನು ತಪ್ಪಿಸಲು ಸದ್ಯಕ್ಕಂತೂ ಸಾಧ್ಯವಿಲ್ಲ. ಒಂದೊಂದು ಕಾಲದಲ್ಲಿ ಯಾವುದೋ ಒಂದು ಸಂಗತಿ ಉನ್ಮಾದ ಸೃಷ್ಟಿಸುತ್ತದೆ. ಭಕ್ತಿಯ ಹಾಗೆ ಹುಚ್ಚು ಆವೇಶ ಆವರಿಸಿಕೊಳ್ಳುತ್ತದೆ. ದೇವರು, ಸಂಗೀತ, ನೃತ್ಯ, ಸಿನೆಮಾ ಮತ್ತು ನಟರು ಈಗ ಕ್ರಿಕೆಟ್ ಆ ಜಾಗವನ್ನು ಆಕ್ರಮಿಸಿಕೊಂಡಿದೆ. ಸದ್ಯದ ಟ್ರೆಂಡ್ ಹೇಗಿದೆಯೆಂದರೆ ಕ್ರಿಕೆಟ್ ಆಟದ ಬಗ್ಗೆ, ಆಟಗಾರರ ಬಗ್ಗೆ ನಿರಾಸಕ್ತಿ ತೋರುವವರನ್ನು ಅರಸಿಕರು, ದಡ್ಡರು ಎಂದು ಪರಿಭಾವಿಸುತ್ತಾರೆ. ಕ್ರಿಕೆಟ್ ಬಗ್ಗೆ ಕಿಂಚಿತ್ ಆಸಕ್ತಿ, ಗೌರವ ಇಲ್ಲದವರೂ ಹೆಚ್ಚು ಆಸಕ್ತಿ ಹೊಂದಿದವರಂತೆ ತೋರಿಸಿಕೊಳ್ಳುತ್ತಾರೆ. ರಾಜಕಾರಣಿಗಳು, ಸರಕಾರಗಳು, ಸಿನೆಮಾ ನಟರು ಅಷ್ಟೇ ಯಾಕೆ ಸಾಹಿತಿ, ಬುದ್ಧಿಜೀವಿಗಳು ಈ ಬಗೆಯ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾರೆ.
ಕಪಿಲ್ ದೇವ್, ಸುನೀಲ್ ಗವಾಸ್ಕರ್ ಕ್ರಿಕೆಟ್ ಆಡುತ್ತಿದ್ದ ಜಮಾನದಲ್ಲಿ ಆ ಆಟಕ್ಕೊಂದು ಕ್ರೀಡಾ ಮೌಲ್ಯ ಇತ್ತು. ಕ್ರೀಡಾ ಮನೋಭಾವದ ಕಾರಣಕ್ಕೆ ಉಳಿದ ಆಟಗಳಂತೆ ಕ್ರಿಕೆಟ್ ಆಟವನ್ನು ಆರಾಧಿಸುವ ಒಂದು ವರ್ಗ ಸೃಷ್ಟಿಯಾಯಿತು. ಕ್ರಿಕೆಟ್ ಆಟದಲ್ಲಿ ಹಣದ ವಹಿವಾಟು ಕಡಿಮೆ ಇತ್ತು ಮತ್ತು ತಾರಾ ಮೌಲ್ಯ ಈ ಮಟ್ಟದಲ್ಲಿ ಇರಲಿಲ್ಲ. ೧೯೮೩ರಲ್ಲಿ ಕಪಿಲ್ ದೇವ್ ನಾಯಕತ್ವ ವರ್ಲ್ಡ್ ಕಪ್ ಗೆದ್ದು ತಂದು ಕೊಡುವವರೆಗೆ ಭಾರತದಲ್ಲಿ ಕ್ರಿಕೆಟ್ ಆಟಗಾರರಿಗೆ ಹೆಚ್ಚಿನ ಮಾನ್ಯತೆ ಇರಲಿಲ್ಲ. ಆಗ ಸಿನೆಮಾ, ಸಂಗೀತ ಮತ್ತು ನೃತ್ಯದ ಮಂದಿ ಸೂಪರ್ ಸ್ಟಾರ್ ಆಗಿದ್ದರು.
೧೯೯೨ರಲ್ಲಿ ಜಾಗತೀಕರಣದ ಕರಿ ನೆರಳು ಭಾರತದ ಮೇಲೆ ಬೀಳುತ್ತಲೇ ಮಾರುಕಟ್ಟೆ ವಿಸ್ತರಣೆಗೆ ಪೂರಕವಾಗಿ ನಿಲ್ಲುವ ಎಲ್ಲವೂ ಮುನ್ನೆಲೆಗೆ ಬಂದವು. ವಾಣಿಜ್ಯ ಉದ್ದೇಶಕ್ಕೆ ಕ್ರಿಕೆಟ್ ಆಟವನ್ನು ಬಳಸಿಕೊಳ್ಳಬಹುದು ಎಂಬ ಮಾತಿಗೆ ಬಲ ನೀಡಿದ್ದು ಆಧುನಿಕ ತಂತ್ರಜ್ಞಾನ ಮತ್ತು ಆ ಮೂಲಕ ಲಭ್ಯವಾದ ಸಾಧನಗಳು. ಟಿ.ವಿ.ಯ ವಿವಿಧ ರೂಪಾಂತರಗಳು ಕ್ರಿಕೆಟ್ ಆಟವನ್ನು ಜನಸಾಮಾನ್ಯರ ಮೆದುಳಿಗೆ ಸೇರಿಸುವಂತೆ ಮಾಡಿತು. ಅದರಲ್ಲೂ ಯುವ ಸಮುದಾಯ ಹುಚ್ಚು ಆರಾಧನೆಗೆ ಬಲಿಯಾಗತೊಡಗಿತು. ಕಾರ್ಪೊರೇಟ್ ಹಿತಾಸಕ್ತಿಗಳು ಕ್ರಿಕೆಟ್ ಆಟವನ್ನು ಸಂಪೂರ್ಣವಾಗಿ ವಾಣಿಜ್ಯಮಯವಾಗಿಸಿ ಸಮೃದ್ಧ ಬೆಳೆ ತೆಗೆಯತೊಡಗಿದವು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು ಅದರ ಭಾಗವಾಗಿ ಐಪಿಎಲ್ ಟ್ವೆಂಟಿ -ಟ್ವೆಂಟಿ ಜನಪ್ರಿಯವಾಗಿದ್ದು ವ್ಯಾಪಾರಿ ಉದ್ದೇಶ ಮುನ್ನೆಲೆಗೆ ಬರಲು ಕಾರಣವಾಯಿತು. ಕ್ರಿಕೆಟ್ ಉನ್ಮಾದ ಹೆಚ್ಚಿಸುವಲ್ಲಿ ಪ್ರಾಯೋಜನೆ ನೀಡುವ ಬಹುರಾಷ್ಟ್ರೀಯ ಕಂಪೆನಿಗಳ ವ್ಯವಸ್ಥಿತ ಹುನ್ನಾರ ಮಹತ್ವದ ಪಾತ್ರ ವಹಿಸಿದೆ. ಕಾಂಗ್ರೆಸ್, ಬಿಜೆಪಿ ಸೇರಿ ತಮಗೆ ಅರಿವಿಲ್ಲದಂತೆ ಎಲ್ಲ ರಾಜಕೀಯ ಪಕ್ಷಗಳು ಈ ಅಹಿತಕರ ಬೆಳವಣಿಗೆಯನ್ನು ನೀರೆರೆದು ಪೋಷಿಸಿವೆ.
ಮುಂಬೈ ಕೇಂದ್ರ ಸ್ಥಾನವನ್ನಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಅದಕ್ಕೆ ಹೊಂದಿಕೊಂಡಂತೆ ಕ್ರಿಯಾಶೀಲವಾಗಿರುವ ವಿವಿಧ ಐಪಿಎಲ್ ತಂಡಗಳು ಕಾನೂನು ಬದ್ಧ ವಾಣಿಜ್ಯ ಉದ್ದೇಶ ಮೀರಿ ಭಾರತೀಯ ಜನಜೀವನವನ್ನು ಆಕ್ರಮಿಸಿಕೊಂಡಿವೆ. ಪಕ್ಕಾ ವಾಣಿಜ್ಯ ಉದ್ದೇಶದ ವೃತ್ತಿಪರ ಕ್ರಿಕೆಟ್ ತಂಡಗಳು ಭಾರತದ ವಿವಿಧ ಭಾಗಗಳಲ್ಲಿ ನೆಲೆ ನಿಂತಿವೆ ಹೊರತು ಆಯಾ ಪ್ರದೇಶಗಳ ಸಂಸ್ಕೃತಿಯೊಂದಿಗೆ ಯಾವ ಸಂಬಂಧವನ್ನೂ ಏರ್ಪಡಿಸಿಕೊಂಡಿಲ್ಲ. ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟನ್ಸ್, ಕೋಲ್ಕತಾ ನೈಟ್ ರೈಡರ್ಸ್, ಲಕ್ನೊ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಆಟದ ವೃತ್ತಿಪರ ತಂಡಗಳು ವ್ಯಾಪಾರವನ್ನೇ ಉಸಿರಾಡುತ್ತಿವೆ. ಕ್ರಿಕೆಟ್ ಬೆಟ್ಟಿಂಗ್, ಮನಿ ಲಾಂಡರಿಂಗ್, ಸ್ಪಾಟ್ ಫಿಕ್ಸಿಂಗ್ ಆರೋಪ ಹೊತ್ತ ಕೆಲ ವೃತ್ತಿಪರ ಕ್ರಿಕೆಟ್ ತಂಡಗಳು ಬ್ಯಾನ್ ಆಗಿವೆ. ೧೯೮೩ಕ್ಕೂ ಮುಂಚೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ವಾರಿಗೆಯವರು ನೋಡಿ ಖುಷಿ, ಸಂಭ್ರಮ ಪಡುತ್ತಿದ್ದ ಕ್ರಿಕೆಟ್ ಆಟ ಈಗಿಲ್ಲ. ಆಗ ಭಾರತದ ಹೆಮ್ಮೆಯ ತಂಡ ಎಂಬ ಭಾವ ಎಲ್ಲರಲ್ಲೂ ಮನೆ ಮಾಡಿತ್ತು. ಅದು ಭಾರತದ ಹೆಮ್ಮೆ ಮತ್ತು ಗೌರವದ ಸಂಕೇತವಾಗಿ ಆಟ ಆಡುತ್ತಿತ್ತು.
ಈಗ ಕಾಲ ಬದಲಾಗಿದೆ. ಆರ್ಸಿಬಿ ಬಗ್ಗೆ ಹುಚ್ಚು ಪ್ರೀತಿ ಆವಾಹಿಸಿಕೊಂಡಿರುವ ಕನ್ನಡಿಗರು ಮತ್ತು ಕರ್ನಾಟಕ ಸರಕಾರ ವಾಣಿಜ್ಯ ಉದ್ದೇಶದ ಕಟು-ಕಹಿ ಸತ್ಯ ಅರ್ಥ ಮಾಡಿಕೊಳ್ಳದಿದ್ದರೆ ಭೀಕರ ದುರಂತಗಳಿಗೆ ಮತ್ತೆ ಮತ್ತೆ ಮುಖಾಮುಖಿಯಾಗಬೇಕಾಗುತ್ತದೆ. ಅಷ್ಟಕ್ಕೂ ಕನ್ನಡಿಗರಿಗೂ ಆರ್ಸಿಬಿ ತಂಡಕ್ಕೂ ಭಾವನಾತ್ಮಕ ಸಂಬಂಧ ಏರ್ಪಡಲು ನೈಜ ಕಾರಣಗಳೇ ಇಲ್ಲ. ಈ ಹಿಂದೆ ರಣಜಿ ಕ್ರಿಕೆಟ್ ತಂಡ ಇತ್ತು. ಅದು ಅಪ್ಪಟ ಕನ್ನಡಿಗರ ಕ್ರಿಕೆಟ್ ತಂಡ ಆಗಿತ್ತು. ರಣಜಿ ತಂಡದಲ್ಲಿ ಆಡಿ ಸಾಧನೆ ಮಾಡಿದವರೇ ಭಾರತದ ಕ್ರಿಕೆಟ್ ತಂಡಕ್ಕೂ ಆಯ್ಕೆಯಾಗಿ ಆಟ ಆಡುತ್ತಿದ್ದರು. ಆರ್ಸಿಬಿ ಕ್ರಿಕೆಟ್ ತಂಡದಲ್ಲಿ ಕನ್ನಡಿಗ ಆಟಗಾರರು ಒಬ್ಬಿಬ್ಬರು ಇರಬಹುದು. ಕರ್ನಾಟಕ ಸರಕಾರಕ್ಕೂ ಆರ್ಸಿಬಿ ತಂಡಕ್ಕೂ ವ್ಯವಹಾರದ ಸಂಬಂಧವೂ ಇಲ್ಲ. ಕನ್ನಡದ ನೆಲದಲ್ಲಿ ನೆಲೆ ನಿಂತ ಬೇರೆ ಬೇರೆ ಕಾರ್ಪೊರೇಟ್ ಕಂಪೆನಿಗಳು ಕಾರ್ಪೊರೇಟ್ ಸೋಶಿಯಲ್ ರೆಸ್ಪೋನ್ಸಿಬಿಲಿಟಿ ನಿಧಿಯಿಂದ (ಸಿಎಸ್ಆರ್ ಫಂಡ್)ಕರ್ನಾಟಕ ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹಣವನ್ನು ನೀಡುತ್ತವೆ. ಆದರೆ ಆರ್ಸಿಬಿ ಇಲ್ಲಿವರೆಗೂ ಆ ಹೊಣೆಗಾರಿಕೆಯನ್ನು ಫೀಲ್ ಮಾಡಿಲ್ಲ. ವಾಣಿಜ್ಯ ಉದ್ದೇಶದ ಭಾರತದ ಎಲ್ಲ ವೃತ್ತಿಪರ ಕ್ರಿಕೆಟ್ ತಂಡಗಳು ನಮ್ಮ ನೆಲದ ಭಾಗವಾಗಿವೆ. ಅವುಗಳನ್ನು ಸಮಾನವಾಗಿ ಕಾಣಬೇಕು. ಆರ್ಸಿಬಿ ಕ್ರಿಕೆಟ್ ತಂಡ ಕನ್ನಡಿಗರದು ಎಂದು ಒಣ ಅಭಿಮಾನ ಪಡುವುದರಲ್ಲಿ ಯಾವ ಅರ್ಥ, ತರ್ಕ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಿಕೆಟ್ ಪ್ರಿಯರಾಗಿದ್ದರೆ ಎಲ್ಲರ ಆಟಗಳನ್ನು ನೋಡಿ ಖುಷಿ ಪಟ್ಟರೆ ಯಾರ ಅಭ್ಯಂತರ ಇರಲಿಲ್ಲ. ಆರ್ಸಿಬಿ ಕರ್ನಾಟಕ ಸರಕಾರದ್ದು ಎಂಬಷ್ಟು ಭ್ರಮಿಸಿದ್ದು, ಭಾವಿಸಿದ್ದು ಮತ್ತು ಸಂಭ್ರಮ ಪಟ್ಟಿದ್ದು ಭೀಕರ ದುರಂತಕ್ಕೆ ಹಾದಿ ಮಾಡಿ ಕೊಟ್ಟಿತು.
ಕನ್ನಡಿಗರು ಔದಾರ್ಯಕ್ಕೆ ಹೆಸರಾದವರು. ಆ ಕಾರಣಕ್ಕೆ ಹದಿನೆಂಟು ವರ್ಷಗಳ ನಂತರ ಗೆದ್ದ ಆರ್ಸಿಬಿ ತಂಡದ ಗೆಲುವು ನಮ್ಮದು ಎಂದು ಸಂಭ್ರಮಿಸಿದ್ದನ್ನು ಸಮರ್ಥಿಸಿಕೊಳ್ಳೋಣ. ಆದರೆ ಆ ಸಂಭ್ರಮಕ್ಕೆ ಒಂದು ಮಿತಿ ಮತ್ತು ವಿವೇಕ ಇರಬೇಕಲ್ಲವೇ? ಆ ಸಂಭ್ರಮವನ್ನು ಕ್ರಿಕೆಟ್ ಆರಾಧಕರು, ಆರ್ಸಿಬಿ ತಂಡ ಮತ್ತು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅದ್ದೂರಿಯಾಗಿ ಆಚರಿಸಿದರೂ ಒಂದು ಮಟ್ಟದಲ್ಲಿ ಒಪ್ಪಿಕೊಳ್ಳಬಹುದು. ಆದರೆ ಕರ್ನಾಟಕ ಸರಕಾರವೇ ಆ ಸಂಭ್ರಮಾಚರಣೆಯ ನೇತೃತ್ವ ವಹಿಸಿದ್ದು ಮತ್ತು ವಿಧಾನ ಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಅವಕಾಶ ಮಾಡಿಕೊಟ್ಟಿದ್ದು ಸಮರ್ಥನೀಯವಲ್ಲ. ಆರ್ಸಿಬಿ ಗೆಲುವಿನ ಆಟ ಆಡಿದ್ದು ಅಹ್ಮದಾಬಾದ್ನಲ್ಲಿ. ಆ ಆಟವನ್ನು ಗುಜರಾತ್ ಜನರೇ ಸಂಭ್ರಮಿಸಲಿಲ್ಲ. ಆಯಿತು, ಕರ್ನಾಟಕ ನೆಲದಲ್ಲಿ ನೆಲೆ ನಿಂತ ಒಂದು ಕ್ರಿಕೆಟ್ ತಂಡ ಹದಿನೆಂಟು ವರ್ಷಗಳ ನಂತರ ಗೆಲುವು ಸಾಧಿಸಿದ್ದು ಐತಿಹಾಸಿಕ ಘಟನೆ ಎಂದು ಭಾವಿಸಿ ಸಂಭ್ರಮ ಅನಿವಾರ್ಯ ಎಂದೇ ಒಪ್ಪಿಕೊಳ್ಳೋಣ. ಆ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಎರಡು ಮೂರು ದಿನ ಕಳೆದ ಮೇಲೆ ವ್ಯವಸ್ಥಿತವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಬಹುದಿತ್ತು. ಆ ಸಂಭ್ರಮಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಭಾಗವಹಿಸಬಹುದಿತ್ತು. ಸಮಾಧಾನ ಚಿತ್ತರಾಗಿ ವ್ಯವಸ್ಥಿತವಾಗಿ ಆರ್ಸಿಬಿ ಸಂಭ್ರಮಾಚರಣೆಯ ಕಾರ್ಯಕ್ರಮ ಆಯೋಜಿಸಿದ್ದರೆ ಕ್ರಿಕೆಟ್ ಅಭಿಮಾನಿಗಳು ಖುಷಿ ಪಡುತ್ತಿದ್ದರು. ಸರಕಾರಕ್ಕೂ ಕೆಟ್ಟ ಹೆಸರು ಬರುತ್ತಿರಲಿಲ್ಲ.
ಆರ್ಸಿಬಿ ಕ್ರಿಕೆಟ್ ಗೆಲುವಿನ ಸಂಭ್ರಮಾಚರಣೆ ಇಷ್ಟು ತರಾತುರಿಯಲ್ಲಿ ಆಯೋಜಿಸುವ ಅಗತ್ಯವಾದರೂ ಏನಿತ್ತು. ಅದೂ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಕರ್ನಾಟಕ ಸರಕಾರವೇ ಆಯೋಜಿಸುವ ಅನಿವಾರ್ಯತೆ ಇರಲಿಲ್ಲ. ಆರ್ಸಿಬಿ ಮತ್ತು ಕೆಸಿಎ ಸಂಭ್ರಮ ಆಚರಣೆಯ ಕಾರ್ಯಕ್ರಮ ಆಯೋಜಿಸಿದಾಗ ಮುಖ್ಯಮಂತ್ರಿ ಅಥವಾ ಸರಕಾರದ ಪ್ರತಿನಿಧಿಗಳು ಹೋಗಿದ್ದರೆ ಅದನ್ನು ಒಪ್ಪಿಕೊಳ್ಳಬಹುದಿತ್ತು. ಸುದೀರ್ಘ ಐವತ್ತು ವರ್ಷಗಳಿಗೂ ಮಿಗಿಲು ರಾಜಕೀಯ ಜೀವನದಲ್ಲಿ ಇರುವ ಸಿದ್ದರಾಮಯ್ಯ ಅವರಿಗೆ ದುರಂತ ತಪ್ಪಿಸಬಹುದಾದ ಮಾರ್ಗಗಳನ್ನು ಯಾರಾದರೂ ಹೇಳಿಕೊಡಬೇಕಿತ್ತೆ.?
ನೂರುಕಾಲ ಬಾಳಿ ಬದುಕಬೇಕಾಗಿದ್ದ ಹನ್ನೊಂದು ಜೀವಗಳು ಆರ್ಸಿಬಿ ಗೆಲುವಿನ ಹುಚ್ಚು ಸಂಭ್ರಮಕ್ಕೆ ಬಲಿಯಾಗಿದ್ದು ಕರ್ನಾಟಕದ ಇತಿಹಾಸದಲ್ಲಿ ಹತ್ಯಾಕಾಂಡದಷ್ಟೇ ಬಹುದೊಡ್ಡ ದುರಂತ. ತಕ್ಷಣಕ್ಕೆ ಎನ್ನುವಂತೆ ಕರ್ನಾಟಕ ಸರಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಗಾಯಗೊಂಡವರಿಗೆ ಚಿಕಿತ್ಸೆ, ಮೃತರಿಗೆ ಹತ್ತು ಲಕ್ಷ ರೂ.ಗಳ ಪರಿಹಾರ ಮತ್ತು ಕರ್ತವ್ಯ ಲೋಪ ಎಸಗಿದ ಪೊಲೀಸ್ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಸೇರಿ ಐದಾರು ಜನ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ನ್ಯಾಯಾಂಗ ತನಿಖೆಗೂ ಆದೇಶಿಸಿಸಲಾಗಿದೆ. ಈ ಭೀಕರ ದುರಂತದಿಂದ ಸರಕಾರ ಮತ್ತು ಒಟ್ಟಾರೆ ಸಮಾಜ ಕಲಿಯಬೇಕಾದ ಹತ್ತಾರು ಪಾಠಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಸರಕಾರ ಮತ್ತು ಕ್ರಿಕೆಟ್ ಅಂಧಾಭಿಮಾನಿಗಳು ಭಾವಿಸಿದಂತೆ ಈಗ ಕ್ರಿಕೆಟ್ ಶುದ್ಧ ಕ್ರೀಡಾಮನೋಭಾವ ಉತ್ತೇಜಿಸುವ ಆಟವಾಗಿ ಉಳಿದಿಲ್ಲ. ಅದೊಂದು ಪಕ್ಕಾ ವಾಣಿಜ್ಯ ಉದ್ದೇಶದ ಹಣ ಮಾಡುವ ದಂಧೆಯಾಗಿ ರೂಪಾಂತರಗೊಂಡಿದೆ. ಕ್ರಿಕೆಟ್ ಹುಚ್ಚಿನ ಉನ್ಮಾದದಲ್ಲಿ ಹನ್ನೊಂದು ಜನ ಜೀವ ಕಳೆದುಕೊಂಡಿದ್ದು ಲೆಕ್ಕಕ್ಕೆ ಸಿಕ್ಕಿದೆ. ಐಪಿಎಲ್ ಕ್ರಿಕೆಟ್ ಆಟ ಉಂಟು ಮಾಡಿರುವ ಅಡ್ಡ ಪರಿಣಾಮಗಳು ಲೆಕ್ಕಕ್ಕೆ ಸಿಗದಷ್ಟು ಇವೆ. ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡು ಜೀವ ತೆತ್ತವರ ಲೆಕ್ಕ ಇಟ್ಟವರು ಯಾರು? ಕ್ರಿಕೆಟ್ ಇಂದು ಅಕ್ಷರಶಃ ಒಂದು ಜೂಜು ಆಗಿ ಸಾಮಾಜಿಕ ಪಿಡುಗಿನಂತೆ ಕಾಡುತ್ತಿದೆ. ಲಾಟರಿ, ಮಟ್ಕಾ ಮತ್ತು ಇನ್ನಿತರ ಜೂಜುಗಳನ್ನು ನಿಷೇಧಿಸಿದಂತೆ ಕ್ರಿಕೆಟ್ ನಿಷೇಧಿಸಲಾಗದು. ಆದರೆ ಕ್ರಿಕೆಟ್ ಆಟ ಸೃಷ್ಟಿಸುತ್ತಿರುವ ಅವಾಂತರಗಳನ್ನು ನಿಯಂತ್ರಿಸದಿದ್ದರೆ ದುರಂತಗಳ ಸರಮಾಲೆ ಮುಂದುವರಿಯುತ್ತದೆ. ಯುವ ಸಮುದಾಯ ಮತ್ತು ಅವರ ಪೋಷಕರು ಕ್ರಿಕೆಟ್ ಆಟದ ಸಾಧ್ಯತೆ ಮತ್ತು ಮಿತಿಗಳನ್ನು ಸಮಚಿತ್ತದಿಂದ ಪರಾಮರ್ಶಿಸಬೇಕಿದೆ. ಸರಕಾರಗಳು ಕೂಡಾ ಕ್ರಿಕೆಟ್ ಜನಪ್ರಿಯತೆ ಗಮನದಲ್ಲಿ ಇಟ್ಟುಕೊಂಡೇ ಅದೊಂದು ಜೂಜಾಗಿ, ಸಾಮಾಜಿಕ ಪಿಡುಗಾಗಿ ಕಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಆರ್ಸಿಬಿ ಗೆಲುವನ್ನು ಕರ್ನಾಟಕ ಸರಕಾರ ಬಹಿರಂಗವಾಗಿ ಸಂಭ್ರಮಿಸುವ ಅಗತ್ಯವೇ ಇರಲಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರು ಕ್ರಿಕೆಟ್ ಪ್ರೇಮಿಗಳಾಗಿದ್ದರೂ ಅಂತರಂಗದಲ್ಲೇ ಖುಷಿ ಪಡಬಹುದಾಗಿತ್ತು. ಅವರೆಲ್ಲ ಸಮೂಹ ಸನ್ನಿಗೆ ಒಳಗಾಗಿದ್ದು ಭೀಕರ ದುರಂತಕ್ಕೆ ನೇರ ಕಾರಣವಾಗಿದೆ. ಅಧಿಕಾರಿಗಳು ಸರಕಾರದ ಆದೇಶ ಮೀರಿ ಏನನ್ನೂ ಮಾಡಲಾರರು. ಸರಕಾರ ಹೊಣೆಯರಿತು ನಿರ್ಧಾರ ಕೈಗೊಂಡಿದ್ದರೆ ಈ ಭೀಕರ ದುರಂತವನ್ನು ತಪ್ಪಿಸಬಹುದಿತ್ತು. ಕ್ರಿಕೆಟ್ ಆಟ ಜೂಜಿನ ಸ್ವರೂಪ ಪಡೆದುಕೊಂಡಿದ್ದರಿಂದ ಎಲ್ಲ ಕ್ರಿಕೆಟ್ ಪ್ರೇಮಿಗಳು ತಮ್ಮ ಭಾವನೆಗಳಿಗೆ, ಉನ್ಮಾದಕ್ಕೆ ಕಡಿವಾಣ ಹಾಕಿಕೊಳ್ಳುವ ಅಗತ್ಯವಿದೆ. ಸರಕಾರ, ಆರ್ಸಿಬಿ ತನ್ನ ತಂಡ ಎಂದು ಭಾವಿಸುವುದನ್ನು ಮೊದಲು ನಿಲ್ಲಿಸಬೇಕು. ಹನ್ನೊಂದು ಜೀವಗಳ ಬಲಿ ತೆಗೆದುಕೊಂಡ ಘಟನೆ ಡಾ. ರಾಮಮನೋಹರ್ ಲೋಹಿಯಾ ಅವರ ಚೇತನವನ್ನು ಖಂಡಿತ ಅಸ್ವಸ್ಥ ಮಾಡಿರುತ್ತಿತ್ತು. ಸಮಾಜವಾದಿಗಳು ಮಾತ್ರವಲ್ಲ ಭಾರತದ ಒಬ್ಬ ಸಾಮಾನ್ಯ ಪ್ರಜೆ ಕೂಡಾ ಕ್ರಿಕೆಟ್ ಕುರಿತು ಅವರು ಆಡಿದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವ ಉನ್ಮಾದವೂ ಒಳ್ಳೆಯದಲ್ಲ.