ಮೀಸಲಾತಿಗೊಳಪಟ್ಟ ಜಾತಿ ಪಟ್ಟಿಗಳನ್ನು ಕನ್ನಡ ಭಾಷೆಯಲ್ಲಿಯೇ ಪ್ರಕಟಿಸಬೇಕು

ಸಾಂದರ್ಭಿಕ ಚಿತ್ರ
ಇತ್ತೀಚೆಗೆ ಬಿಡುವಿನ ವೇಳೆ ಕರ್ನಾಟಕದ ಮೊದಲನೇ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸರಕಾರಕ್ಕೆ ಸಲ್ಲಿಸಿರುವ ವಿಶೇಷ ವರದಿಯ ಕಡೆಗೆ ಕ್ಷಣದೃಷ್ಟಿ ಹರಿಸುತ್ತಿದ್ದೆ. ತಕ್ಷಣ ಸಲಹೆಯೊಂದು ನನ್ನ ಕಣ್ಸೆಳೆಯಿತು. ಅದೆಂದರೆ- ಹಿಂದುಳಿದ ವರ್ಗಗಳ ಪಟ್ಟಿಯನ್ನು ಕನ್ನಡದಲ್ಲಿ ಪ್ರಕಟಿಸಬೇಕು ಎಂಬುದರ ಬಗೆಗೆ ಸಲಹೆ. ಅದನ್ನು ಮನನ ಮಾಡಿದ ನಂತರ, ಈ ಸಲಹೆಯನ್ನೇಕೆ ಲೇಖನ ರೂಪದಲ್ಲಿ ಸಾರ್ವತ್ರೀಕರಣಗೊಳಿಸಬಾರದು ಎಂದು ಮನದಲ್ಲಿ ಹೊಳೆದ ನಿಮಿತ್ತ- ಈ ಲೇಖನ.
ಮಾನವ ಶಾಸ್ತ್ರಜ್ಞ ಕೆ.ಎಸ್. ಸಿಂಗ್ ತಮ್ಮ ‘ಪೀಪಲ್ ಆಫ್ ಇಂಡಿಯಾ’ ಎಂಬ ಜನಾಂಗೀಯ ಗ್ರಂಥದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಜಾತಿಗಳ ಹೆಸರನ್ನು ದಾಖಲಿಸಿದರೆ ಆಗುವ ಕೇಡಿನ ಬಗ್ಗೆ ಹೀಗೆ ಹೇಳಿದ್ದಾರೆ: ‘‘ಒಂದು ವರದಿಯ ಪ್ರಕಾರ 1881ರ ಜನಗಣತಿಯಲ್ಲಿ ಭಾರತದ 2,638 ಜಾತಿಗಳನ್ನು 14,000 ರೀತಿಯಲ್ಲಿ ಇಂಗ್ಲಿಷ್ ಭಾಷೆಯ ಕಾಗುಣಿತದಲ್ಲಿ(spelling) ಬರೆಯಲಾಗಿತ್ತೆಂದರೆ ಇದರಿಂದ ಆಗುತ್ತಿರುವ ಅನಾಹುತದ ಅರಿವಾಗುತ್ತದೆ
ಇದೇ ವಿಷಯದ ಮೇಲೆ ಪ್ರೊ.ರವಿವರ್ಮ ಕುಮಾರ್ ಆಯೋಗ ಸಂವೀಕ್ಷಿಸಿ ಸರಕಾರಕ್ಕೆ ಸಲಹೆ ನೀಡಿದೆ-
ಇಂಗ್ಲಿಷ್ ಭಾಷೆಯಲ್ಲಿ ಭಾರತೀಯ ಜಾತಿಗಳನ್ನು ವ್ಯಾಕರಣಬದ್ಧವಾಗಿ ಒಂದು ಹೆಸರಿಟ್ಟು ಗುರುತಿಸಬಹುದೇ ಹೊರತು, ಅತಿ ಹೆಚ್ಚಿನ ಸಂಖ್ಯೆಯ ಜಾತಿಗಳನ್ನು ಅರ್ಥಪೂರ್ಣವಾಗಿ ಸ್ಥಳೀಯವಾಗಿ ಉಚ್ಚರಿಸುವಂತೆ, ಬರೆಯುವಂತೆ ಹಾಗೂ ಗುರುತಿಸುವಂತೆ ಉಚ್ಚರಿಸುವುದು, ಬರೆಯುವುದು ಹಾಗೂ ಗುರುತಿಸುವುದು ಅತಿ ಕಷ್ಟವಾಗಿ ಪರಿಣಮಿಸಿದೆ ಎನ್ನುವುದು ಎಲ್ಲರಿಗೂ ತಿಳಿದಿರುವಂಥದ್ದೆ. ಉದಾಹರಣೆಗೆ, ಈ ಕೆಳಗಿನ ಜಾತಿಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆಯುವಾಗ ಭಾಷೆಯ ವಿಶಿಷ್ಟತೆಯಿಂದಾಗಿ ಉಚ್ಚರಿಸುವಾಗ ಸರಿಯಾದ ಅಭಿವ್ಯಕ್ತಿ ಕಾಣಬರುವುದಿಲ್ಲ. ಮುಂದುವರಿಯುತ್ತಾ ಉಚ್ಚರಿಸುವಾಗ ಒಂದು ಜಾತಿಯನ್ನು ವಿವಿಧ ಸ್ವರಗಳನ್ನು ಬಳಸಿ ಅಕ್ಷರಗಳನ್ನು ವಿವಿಧ ರೀತಿಯಲ್ಲಿ ಉಲ್ಲೇಖಿಸಬಹುದಾಗಿದೆ.
ಉದಾ:
a) Naik, Nayak, Naika, Nayaka, Nayka, etc,
b) Bovi, Bhovi, Bhoyi, Bhoi, Bovee, Bowi, Boyi etc.,
c) Woddar, Waddar, Voddar , Vaddar, etc.,
d) Chetty, Chetti, Setty, Shetty, Shetti, etc.,
e) Gowda, Gouda, Gavada, Gawada, etc.,
f) Vakkaliga, Vokaliga, Vokkaliga, Wakkaliga, Okkaliga, etc.
1885ರಲ್ಲೇ ಜಾತಿ-ಬುಡಕಟ್ಟುಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಯಾದಿ ತಯಾರಿಸುವುದರ ಬಗ್ಗೆ ಒಂದು ಅಭಿಪ್ರಾಯ ಹೀಗಿತ್ತು: ಒಂದೇ ಪ್ರಮುಖ ಜಾತಿ ಮತ್ತು ಅದೇ ಹೆಸರಿನ ವಿಭಿನ್ನ ಕಾಗುಣಿತಗಳನ್ನು ಹೊಂದಿರುವ ಮಾನ್ಯ ಮಾಡಿದ ಸಮಾನಾರ್ಥಕ ಶಬ್ದಗಳನ್ನು ಮತ್ತು ಉಪ ವಿಭಾಗಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿರದಿದ್ದರೆ ಮೊದಲು ಎರಡು ಪಟ್ಟಿಗಳು ಈಗಿನದಕ್ಕಿಂತ ಅತ್ಯಂತ ಉದ್ದವಾಗಿರುತ್ತಿದ್ದವು. ಏಕರೂಪ ಭಾಷಾ ಲಿಪ್ಯಂತರ ವ್ಯವಸ್ಥೆಯು ಬಹುಶಃ ವಿವಿಧ ಪ್ರಾಂತಗಳಲ್ಲಿ ಚಾಲ್ತಿಯಲ್ಲಿರುವ ವಿವಿಧ ಭಾಷೆಗಳು ಮತ್ತು ಉಪಭಾಷೆಗಳಿಂದಾಗಿ ಅಂತಹ ಅಪೇಕ್ಷಿತ ಗುರಿಯತ್ತ ಸಾಗುವ ಕೆಲವು ಪ್ರಯತ್ನಗಳು ಖಂಡಿತವಾಗಿ ಆಗಿದ್ದರೂ ಬಹುತೇಕ ಅಸಾಧ್ಯವಾಗಿದೆ. ಮಾರ್ವಾರೀ ಮತ್ತು ಮಾರ್ವಾಡೀ, ಬೈಷ್ಣಬ ಮತ್ತು ವೈಷ್ಣವ ಮುಂತಾದ ವ್ಯತ್ಯಾಸಗಳನ್ನು ಗುರುತಿಸಲಾಗಿದೆ. ಒಕ್ಕಲಿಗ ಮತ್ತು ವಕ್ಕಲಿಗ, ಒಡ್ಡರ್ ಮತ್ತು ವಡ್ಡರ್ ಇವುಗಳನ್ನೂ ಸಹ ಕೂಡಲೇ ಮಾನ್ಯ ಮಾಡಲಾಗಿದೆ. ಆದರೆ ಏಕರೂಪ ಭಾಷಾ ಲಿಪ್ಯಂತರ ವ್ಯವಸ್ಥೆ ಇಲ್ಲದಿರುವುದರಿಂದ ಇನ್ನೂ ಕೆಲವು ಜಾತಿಯ ಹೆಸರುಗಳು ಗುರುತಿಸುವಿಕೆಯಿಂದ ತಪ್ಪಿಸಿಕೊಂಡಿವೆ. ಬಂಗಾಳ, ತಮಿಳುನಾಡಿನಿಂದ ಬಂದ ಅಪರಿಚಿತರೆಂದು ನಿರ್ದಿಷ್ಟವಾಗಿ ವಿವರಿಸಲಾಗಿರುವ, ಆದರೆ ಅವುಗಳ ಹೆಸರುಗಳು ಆ ಪ್ರಾಂತಗಳ ಪಟ್ಟಿಗಳಿಗೆ ತೀರಾ ಅಪರಿಚಿತವಾಗಿರುವ ಕೆಲವು ಜಾತಿಗಳ ಹೆಸರುಗಳು ಕೇಂದ್ರ/ಪ್ರಾಂತಗಳ ವರದಿಗಳಲ್ಲಿ ಸೇರಿಸಿರುವುದಕ್ಕೆ ಕಾರಣ ಪ್ರಾಯಶಃ ಇದೇ ಆಗಿದೆ.
ಭಾರತದ ಜಾತಿಯೊಂದರ ಹೆಸರು ಮೂಲಭೂತವಾಗಿ ದಕ್ಷಿಣ ಭಾರತದ ಯಾವುದೇ ಭಾಷೆಯಾಗಿರಲಿ ಹೀಗೆ ವಿವಿಧ ಭಾರತೀಯ ಭಾಷೆಗಳಲ್ಲಿ ಹಾಸುಹೊಕ್ಕಾಗಿರುವುದು ಇಂಥ ಸ್ಥಿತಿಗೆ ಮುಖ್ಯ ಕಾರಣ. ಯಾವುದೇ ಒಂದು ಜನಾಂಗಕ್ಕೂ ಮತ್ತು ಆ ಜನಾಂಗದ ಆಡುಭಾಷೆಗೂ ಸದಾ ಹತ್ತಿರದ ಸಂಬಂಧವಿರುತ್ತದೆ. ಆ ಜನಾಂಗದ ಮಾತೃಭಾಷೆ ಅವರೆಲ್ಲರನ್ನೂ ಒಗ್ಗೂಡಿಸುತ್ತದೆ. ಹೀಗಾಗಿ ಸ್ವರಗಳ ವ್ಯತ್ಯಾಸದಿಂದ ಅರ್ಥಗಳೇ ಬೇರೆಯಾಗಿರುವ ಸಂಭವಗಳೇ ಹೆಚ್ಚು.
ಪ್ರೊ.ರವಿವರ್ಮ ಕುಮಾರ್ ಆಯೋಗ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಜಾರಿಯಲ್ಲಿದ್ದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಆಗಿರುವ ಅವಾಂತರಗಳ ಬಗ್ಗೆ ಹಲವಾರು ದೂರುಗಳು ಆಯೋಗಕ್ಕೆ ಬಂದಿವೆ ಮತ್ತು ಬರುತ್ತಿರುವುದಕ್ಕೆ ಇಂಥ ಪರಿಸ್ಥಿತಿ ಮುಖ್ಯ ಕಾರಣ ಎಂದರೆ ತಪ್ಪಲ್ಲ ಎಂದು ಆಯೋಗ ಹೇಳಿಕೊಂಡಿದೆ. ಹಿಂದುಳಿದ ವರ್ಗಗಳ ಪಟ್ಟಿಯನ್ನು ಇಂಗ್ಲಿಷಿನಲ್ಲಿ ಪ್ರಕಟಿಸಿರುವುದಕ್ಕೆ ಮೂಲ ಕಾರಣ ಎಂದು ಅಭಿಪ್ರಾಯ ಪಟ್ಟಿದೆ. ಈ ನಿಮಿತ್ತ ಹಿಂದುಳಿದ ಜಾತಿ ಮತ್ತು ಸಮುದಾಯಗಳಿಗೆ ಸೇರಿದ ಕೆಲವು ಮಂದಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಹಾಗೂ ಸರಕಾರಿ ಸೇವೆಗಳಲ್ಲಿ ಕೆಲಸ ಪಡೆಯುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜಾತಿ ಪ್ರಮಾಣ ಪತ್ರ ಪಡೆಯುವ ಮತ್ತು ನೀಡುವ ಗೊಂದಲಗಳೇ ಇಷ್ಟಕ್ಕೆಲ್ಲ ಕಾರಣ. ಹಿಂದುಳಿದ ಜಾತಿಗಳಿಗೆ ಸೇರಿದ ಕೆಲವು ಅಭ್ಯರ್ಥಿಗಳು ಸೌಲಭ್ಯ ಪಡೆದಿದ್ದರೂ ಸಹ ತದನಂತರ ಇಲಾಖೆ ಶಿಸ್ತಿನ ಕ್ರಮ ಮುಂತಾದ ಅನಪೇಕ್ಷಿತ ಕ್ರಮಗಳಿಗೆ ಒಳಗಾಗಿ ಪಡೆದಿರುವ ಸೌಲಭ್ಯದಿಂದಲೂ ವಂಚಿತರಾಗಿ ಅನಗತ್ಯ ಕಷ್ಟನಷ್ಟಗಳಿಗೆ ಒಳಗಾಗಿರುವ ಹಲವಾರು ಪ್ರಕರಣಗಳು ಆಯೋಗದ ಗಮನಕ್ಕೆ ಬಂದಿವೆ. ಒಂದೇ ಜಾತಿಯನ್ನು ಆಂಗ್ಲ ಭಾಷೆಯಲ್ಲಿ ಬೇರೆ ಬೇರೆ sಠಿeಟಟiಟಿgಗಳಿಂದ ಬರೆಯುವುದರಿಂದ ಮತ್ತು ಉಚ್ಚರಿಸುವುದರಿಂದ ಇಂಥ ಪ್ರಕರಣಗಳು ಜನ್ಮ ತಾಳುತ್ತವೆ. ಅಂಥವುಗಳನ್ನು ಈ ಕೆಳಗೆ ಉದಾಹರಿಸಲಾಗಿದೆ. ಅದು ಇಂಗ್ಲಿಷ್ ಭಾಷೆಯಲ್ಲಿಯೆ ಇದೆ.
Mannur/Munnur/ Munnar, Kamatti/Kamati, Bovi/Bhoyi, Gunagi/Ganagi, Tiyya/Thiyyal/Tiyal/ Thiyyal, Swakula/Sakula/Sale/Sali, Kottaari/ Kotari, Upa Nadava/Uppu Nadava, Patta Sale/ Pattu Sale, Gowda/ Gouda, Gurava/ Gorav, Gadiga/ Ghadiga, Kuruvan/Kuravan, Katik/Khatik, Konkan/Kokna, Khadri/ Quadri, Kannada/Kanada, Nair/Nayar, Mutrasi/ Mutracha.
ಇನ್ನೂ ಮುಂತಾದ ಪ್ರಕರಣಗಳು ಆಯೋಗದ ಮುಂದೆ ವಿಚಾರಣೆಗೆ ಬಂದಿವೆ, ಎಂದು ಆಯೋಗ ಹೇಳಿದೆ.
ಭಾಷೆಯೊಂದು, ಯಾವುದೇ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಒಂದು ಪ್ರಮುಖ ಸಾಧನ ಎಂಬುದರಲ್ಲಿ ಎರಡು ಮಾತಿಲ್ಲ. ವಿಷಯ ಯಾವುದೇ ಇರಲಿ ಮಾತೃಭಾಷಾ ಮಾಧ್ಯಮದ ಮೂಲಕ ಅರ್ಥಮಾಡಿಕೊಳ್ಳುವಷ್ಟು ಪರಿಪೂರ್ಣತೆ ಇತರ ಭಾಷಾ ಮಾಧ್ಯಮದ ಮೂಲಕ ಅರ್ಥಮಾಡಿಕೊಳ್ಳುವುದು ಕಷ್ಟ.
ಜನ ಇಷ್ಟಪಡುವ ಪ್ರಾದೇಶಿಕ ಭಾಷೆ ಎಂಬ ಸುವರ್ಣ ಮಾಧ್ಯಮ ಬಳಕೆಯೊಂದೇ ಆಡಳಿತದಲ್ಲಿ ದಕ್ಷತೆ ಮತ್ತು ಆಡಳಿತವನ್ನು ಸುಗಮಗೊಳಿಸುತ್ತದೆ. ನಾಗರಿಕ ಪ್ರಭುತ್ವದ ಸರಕಾರದಲ್ಲಿ ಭಾಷೆಯದು ಪ್ರಮುಖ ಪಾತ್ರವಿದೆ. ಪ್ರತಿಯೊಬ್ಬರೂ ಸಮಾನ ಹಕ್ಕುಗಳನ್ನು ಪಡೆಯಬೇಕೆಂದರೆ ಜನರಾಡುವ ಭಾಷೆಯಲ್ಲಿಯೇ ಆಡಳಿತ ನಡೆಸುವುದು ಸೂಕ್ತ. ದಿನನಿತ್ಯದ ಸಾಧನವೆಂದರೆ ಮೂಲತಃ ಪ್ರತಿಯೊಬ್ಬ ಮನುಷ್ಯನಾಡುವ ಭಾಷೆ. ಅಷ್ಟೇ ಅಲ್ಲ ಮನೋ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಕೂಡ ಭಾಷೆಯ ಮೂಲಕವೇ. ಯಾವುದೇ ಭಾಷೆಯ ಇತಿಹಾಸವು ಆ ಭಾಷೆಯನ್ನಾಡುವ ಜನಸಮುದಾಯದ ಸಾಂಸ್ಕೃತಿಕ ಜೀವನದ ಇತಿಹಾಸವಾಗಿರುತ್ತದೆ. ಒಂದು ಜನಾಂಗದ ಅಥವಾ ಜಾತಿಯ ಹೆಸರು ಅದರ ಮಾತೃಭಾಷೆಯಲ್ಲಿ ಉದ್ಭವಿಸಲು ನೂರಾರು ವರ್ಷಗಳ ಇತಿಹಾಸವೇ ಇರುತ್ತದೆ. ಅದನ್ನೇ ಆಂಗ್ಲ ಭಾಷೆಯಲ್ಲಿ ಬರೆದಾಗ ಈ ಸಾಂಸ್ಕೃತಿಕ ಇತಿಹಾಸ ಪ್ರತಿಬಿಂಬಿಸುವುದಿಲ್ಲ, ಅದರಿಂದ ಗಂಭೀರವಾದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಸಮಸ್ಯೆಗಳು ಏನು ಎಂಬುದನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ.
ಆಯೋಗ ಹೇಳಿಕೊಂಡಂತೆ ಅದು ಕರ್ನಾಟಕದ ಜಿಲ್ಲಾ ಕೇಂದ್ರ ಮತ್ತು ಬೆಂಗಳೂರು ನಗರಗಳಲ್ಲಿ ಬಹಿರಂಗ ವಿಚಾರಣೆ ನಡೆಸಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳಲ್ಲಿ ಪಡೆದ ದಾಖಲೆಗಳ ಹಾಗೂ ಮಾಹಿತಿಗಳ ಆಧಾರದ ಮೇಲೆ ಈ ಮೇಲಿನ ಎಲ್ಲ ಸಮಸ್ಯೆಗಳನ್ನು ಸರಕಾರವು ರಾಜ್ಯದ ಆಡಳಿತ ಭಾಷೆಯು ಆಗಿರುವ ಕನ್ನಡದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪ್ರಕಟಿಸುವುದರಿಂದ ನಿವಾರಿಸಬಹುದೆನ್ನುವ ತೀರ್ಮಾನಕ್ಕೆ ಆಯೋಗ ಬಂದಿರುವುದು. ಇಷ್ಟೇ ಅಲ್ಲದೆ ಆಡಳಿತದ ದೃಷ್ಟಿಯಿಂದಲೂ ಕರ್ನಾಟಕದ ಮಾತೃಭಾಷೆಯಾದ ಕನ್ನಡ ಭಾಷೆಯನ್ನು ಬಳಕೆಯಲ್ಲಿ ಹೆಚ್ಚು ತರುವುದು ಹಿಂದುಳಿದ ವರ್ಗಗಳ ಜನರು ಮತ್ತು ಹಿಂದುಳಿದವರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಜವಾಬ್ದಾರಿ ಹೊತ್ತಿರುವವರು ಸುಲಭವಾಗಿ ಓದಲು ಹಾಗೂ ಅರ್ಥಮಾಡಿಕೊಳ್ಳಲು ಅನುಕೂಲಕರವಾಗಿರುತ್ತದೆ. ಇಂತಹ ಕ್ರಮಗಳು ಹೆಚ್ಚು ಆರೋಗ್ಯಕರವಾಗಿರುವುದರಿಂದ, ಭಾಷೆಯು ಆಡಳಿತದ ಹಾಗೂ ಅಭಿವ್ಯಕ್ತಿ ದೃಷ್ಟಿಗಳಿಂದ ಕನ್ನಡ ಭಾಷೆಯಲ್ಲಿಯೇ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪ್ರಕಟಿಸುವುದು ಪ್ರಸ್ತುತವಷ್ಟೇ ಅಲ್ಲ ಅವಶ್ಯಕತೆ ಮತ್ತು ಅನಿವಾರ್ಯತೆಯೂ ಇದೆ.
ಹಿಂದುಳಿದ ವರ್ಗಗಳ ಪಟ್ಟಿಯನ್ನು ಕನ್ನಡದಲ್ಲಿ ಹೊರಡಿಸಬೇಕು ಎಂಬುದು ಆಯೋಗದ ದೃಢ ನಿರ್ಧಾರವೂ ಆಗಿದೆ. ಆದರೆ ಕೇಂದ್ರ ಸರಕಾರ ಮತ್ತು ಇತರ ರಾಜ್ಯಗಳೊಡನೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಹಂಚಿಕೊಳ್ಳಬೇಕಾದ ಅನಿವಾರ್ಯತೆ ಇದ್ದಂತಹ ಸಂದರ್ಭದಲ್ಲಿ, ಜಾತಿಗಳ ಉಚ್ಚಾರಣೆ ಮತ್ತು ಉಚ್ಚಾರಣೆಗೆ ಅನುಗುಣವಾಗಿ ಬರೆಯುವವರ ಸಹಾಯವನ್ನು ಖಂಡಿತ ತೆಗೆದುಕೊಳ್ಳಲೇಬೇಕು. ಅಂಥವುಗಳನ್ನು ಮಾತ್ರ ಸಂವಾದಿಯಾಗಿ ಕನ್ನಡದಲ್ಲಿ ಬರೆದ ಜಾತಿಗಳ ಪಕ್ಕದಲ್ಲಿ ಕಾಗುಣಿತಕ್ಕನುಗುಣವಾಗಿ ಇಂಗ್ಲಿಷ್ನಲ್ಲಿ ದಾಖಲಿಸಬಹುದು. ಹೀಗಾದಾಗ ಮಾತ್ರ ಸಾಧ್ಯವಾದಷ್ಟು ಮಟ್ಟಿಗೆ ತಪ್ಪುಗಳು ಇಲ್ಲದಂತಾಗುತ್ತವೆ.
ಇತ್ತೀಚಿನ ದಿನಗಳಲ್ಲಿ ಜಾತೀಯ ಪದವೊಂದು ಗೊಂದಲಕ್ಕೆ ಗುರಿಯಾಗಿ, ನ್ಯಾಯಾಲಯದಲ್ಲೂ ಮತ್ತು ಹಿಂದುಳಿದ ವರ್ಗಗಳ ಆಯೋಗದಲ್ಲೂ ಯಾವುದೇ ತೀರ್ಮಾನಕ್ಕೂ ಬರಲಾಗದೆ ಯಥಾಸ್ಥಿತಿ ಗೊಂದಲ ಮುಂದುವರಿದಿರುವುದನ್ನು ಆ ಜಾತಿಗೆ ಸಂಬಂಧಿಸಿದವರೇ ನನ್ನೊಡನೆ ಮಾತನಾಡಿರುತ್ತಾರೆ.
ಆ ಜಾತಿ ಪದಕ್ಕೆ ಸಂಬಂಧಿಸಿದ ವಿವರಣೆ:
ಕರ್ನಾಟಕದಲ್ಲಿ ಇಂದು ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಪಟ್ಟಿ ಪ್ರವರ್ಗ-1ರಲ್ಲಿ, (6)ಬೆಸ್ತ ಮುಖ್ಯ ಜಾತಿಯ ಉಪಜಾತಿಯಾಗಿ (ad) ‘ಮೊಗೇರ್’ ಎಂಬುದೊಂದಿದೆ. ಅದನ್ನು ಇಂಗ್ಲಿಷ್ನಲ್ಲಿ ಹೀಗೆ ಬರೆಯಲಾಗಿದೆ-‘Moger’ ಎಂದು. ಇಂಗ್ಲಿಷ್ ಪದದ ಉಚ್ಚಾರಣೆ ಹೀಗಿದೆ- ‘ಮೊಗರ್’. ಇಂಗ್ಲಿಷ್ ಮತ್ತು ಕನ್ನಡ ಎರಡೂ ಪದಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವ್ಯತ್ಯಾಸ ಕಂಡು ಬರುತ್ತದೆ. ಇಷ್ಟೇ ಆಗಿದ್ದರೆ ಸುಮ್ಮನಿರಬಹುದಿತ್ತು. ಆದರೆ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿಯೂ ಅದೇ ಜಾತಿಯನ್ನೂ ಪಟ್ಟಿ ಮಾಡಲಾಗಿದೆ. ಅದು ಇಂಗ್ಲಿಷ್ ನಲ್ಲಿ ಹೀಗಿದೆ-(ಕ್ರ.78) ‘Moger’ (ಕನ್ನಡದ ಪಟ್ಟಿ ಇಲ್ಲ) ಅಂಥಾ ಇದೆ.
ಈ ಜಾತಿ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿಯೂ ಇದೆ; ಮತ್ತು ಪರಿಶಿಷ್ಟ ಜಾತಿ ಪಟ್ಟಿಯಲ್ಲೂ ಇದೆ. ಈ ಜಾತಿ ಹಿಂದುಳಿದ ವರ್ಗಕ್ಕೆ ಸೇರುತ್ತದೆಯೋ ಅಥವಾ ಪರಿಶಿಷ್ಟ ಜಾತಿಗೆ ಸೇರುತ್ತದೆಯೋ ಎಂಬುದು ಜಿಜ್ಞಾಸೆಗೊಳಪಟ್ಟಿದೆ. ಇಂತಹವು ಹಲವಾರಿವೆ.
ಇಂತಹ ನಯವಾದ ವಿಷಯದಲ್ಲಿ ಸರಕಾರವು ಅತ್ಯಂತ ಪರಿಜ್ಞಾನದಿಂದ ವರ್ತಿಸಬೇಕಾಗುತ್ತದೆ. ಒಂದು ವೇಳೆ ಸರಕಾರ ಹೊಣೆಗೇಡಿತನದಿಂದ ನಡೆದುಕೊಂಡಲ್ಲಿ ಆಗುವ ಅನಾಹುತದಿಂದ ಅಂತಹ ಜಾತಿಗೆ ಸೇರಿದವರಿಗೆ ಸರಿಪಡಿಸಲಾಗದ ರಾದ್ಧಾಂತ ಉಂಟಾಗುವುದು.