ಭಾರತದ ಸಂವಿಧಾನ ನಿರ್ಮಾಣದಲ್ಲಿ ಸಾರ್ವಜನಿಕರ ಪಾತ್ರ

ಸಂವಿಧಾನ ರಚನಾ ಮಂಡಳಿಗೆ ದೇಶದ ಉದ್ದಗಲಗಳಿಂದ ಸುಮಾರು 150 ಸಂಘಟನೆಗಳು, ನೂರಾರು ಸಾರ್ವಜನಿಕರು ಸಲಹೆ, ಸೂಚನೆ, ಆಶೋತ್ತರಗಳನ್ನು ರವಾನಿಸುತ್ತಾರೆ. ಸಂವಿಧಾನ ರಚನಾ ಮಂಡಳಿಯು ಈ ರೀತಿಯ ಜನ ಸ್ಪಂದನವನ್ನು ನಿರೀಕ್ಷಿಸಿರಲಿಲ್ಲ. ಸಾರ್ವಜನಿಕರ ಈ ಸಲಹಾ ಸೂಚನೆಗಳು, ನಿರ್ದೇಶನಗಳು, ಸಂವಿಧಾನ ರಚನಾ ಮಂಡಳಿಗೆ ಪೂರಕ ಮತ್ತು ಪ್ರೇರಕವಾಯಿತು.
ಇತ್ತೀಚಿನ ದಿನಗಳವರೆಗೂ, ಭಾರತದ ಸಂವಿಧಾನವು ನಗರ, ವಿದ್ಯಾವಂತ, ಉನ್ನತ ವರ್ಗದವರಿಂದ ನಿರ್ಮಿತವಾದದ್ದು ಎಂಬ ಅಭಿಪ್ರಾಯವು ಬಿಪಿನ್ ಚಂದ್ರ ಮತ್ತು ಗ್ರಾನ್ವಿಲ್ ಆಷ್ಟಿನ್ರಂತಹ ವಿದ್ವಾಂಸರಲ್ಲಿ ಮತ್ತು ಶೈಕ್ಷಣಿಕ ವಲಯದಲ್ಲಿ ಗಾಢವಾಗಿತ್ತು. ಸಂವಿಧಾನ ರಚನಾ ಮಂಡಳಿಯ ಸದಸ್ಯರು(299) ನೇರ ಚುನಾವಣೆಯಿಂದ ಚುನಾಯಿತರಾದವರಲ್ಲ - ಸೀಮಿತ ಮತದಾನದ ಆಧಾರದ ಮೇಲೆ ಪ್ರಾದೇಶಿಕ ಶಾಸನಸಭೆಯ ಸದಸ್ಯರಿಂದ ಆಯ್ಕೆಯಾದ ಹಾಗೂ ಸ್ಥಳೀಯ ಸಂಸ್ಥಾನಗಳ ‘ರಾಜರು’ಗಳು ತಮ್ಮ ಅಭಿರುಚಿಗೆ ತಕ್ಕಂತೆ ಕಳುಹಿಸಲ್ಪಟ್ಟ ಪ್ರತಿನಿಧಿಗಳಿಂದ ಕೂಡಿತ್ತು. ಬಡ-ರೈತಾಪಿ, ಆದಿವಾಸಿ, ಗ್ರಾಮೀಣ, ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಕೊರತೆ ಇತ್ತೆಂದೂ, ಇದರೊಂದಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಯಪ್ರಕಾಶ್ ನಾರಾಯಣ್ ಅವರ ಮುಖಂಡತ್ವದಲ್ಲಿದ್ದ ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷವು ಸಂವಿಧಾನ ರಚನಾ ಮಂಡಳಿಯು ಬ್ರಿಟಿಷ್ ಕ್ಯಾಬಿನೆಟ್ ಮಿಷನ್ ನಿರ್ಮಿತವಾಗಿ ಬಂಡವಾಳ ಶಾಹಿ ಸದಸ್ಯತ್ವದಿಂದ ತುಂಬಿದೆ ಎಂದು ಸಂವಿಧಾನ ರಚನಾ ಮಂಡಳಿಯನ್ನು ಬಹಿಷ್ಕಾರ ಮಾಡಿತು.
ಸಾರ್ವಜನಿಕರ ಪಾತ್ರ ಸ್ವಾತಂತ್ರ್ಯ ಆಂದೋಲನಕ್ಕೆ ಮುಗಿಯಲಿಲ್ಲ; ಸಂವಿಧಾನ ರಚನೆಯಲ್ಲಿಯೂ ಅವರ ಶ್ರದ್ಧೆ- ಎಚ್ಚರಿಕೆಯ ಪಾತ್ರವಿತ್ತು. ಭಾರತದ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ(1946-1949) ಸಾರ್ವಜನಿಕರ ಪಾತ್ರದ ಬಗ್ಗೆ ಬೆಳಕು ಚೆಲ್ಲುವ ಅಧ್ಯಯನಗಳು ಇತ್ತೀಚಿನವರೆಗೂ ಆಗದಿದ್ದಿದ್ದು ನಮ್ಮ ಸಂವಿಧಾನ ರಚನಾ ಇತಿಹಾಸದ ಒಂದು ಕೊರತೆಯಾಗಿತ್ತು. ಸಂವಿಧಾನ ರಚನಾ ಇತಿಹಾಸದ ಅಧ್ಯಯನಗಳು ಕೇವಲ ಸಂವಿಧಾನ ಸಮಿತಿಯ ಚರ್ಚೆ ಮತ್ತು ಸಂವಿಧಾನ ರಚನಾ ಮಂಡಳಿಯ ಸದಸ್ಯರ ರಾಜಕೀಯ ಸಿದ್ಧಾಂತ, ಚಿಂತನೆಗಳ ಮೇಲೆ ಆಧಾರವಾಗಿತ್ತು. ಆಗಿನ ಕಾಲಘಟ್ಟದಲ್ಲಿ ಸಾಮಾನ್ಯ ಜನರಿಗೆ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಭಾಗವಹಿಸುವಷ್ಟು ಪಕ್ವತೆ, ಆಸಕ್ತಿ ಮತ್ತು ಶಿಕ್ಷಣ ಇರಲಿಲ್ಲ ಎಂಬ ಪೂರ್ವಾಗ್ರಹ ನಂಬಿಕೆಯೇ ಇದಕ್ಕೆ ಕಾರಣ. ಇತ್ತೀಚಿನ ಸಂಶೋಧನೆಯಿಂದ ಹೊಸ ಬೆಳಕನ್ನು ಚೆಲ್ಲಿ, ವಿಶೇಷವಾಗಿ ಕಾನೂನು ಇತಿಹಾಸಕಾರರಾದ ರೋಹಿತ್ ದೇ ಮತ್ತು ಒರ್ನಿಟ್ ಶಾನಿ ಬರೆದ ‘Assembling India's constitution-A new democratic history’ (Penguin 2025) ಮತ್ತು ‘A people’s constitution’ (ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯ 2018), 1940ರ ಕಾಲ ಘಟ್ಟದ ಪರಿಸ್ಥಿತಿಯಲ್ಲಿ ಶುದ್ಧ ಪ್ರಜಾಸತ್ತಾತ್ಮಕ ಸಿದ್ಧಾಂತದ ಚೌಕಟ್ಟಿನಲ್ಲಿ ಸಂವಿಧಾನ ರಚನೆ ಮಾಡುವುದು ಕಷ್ಟ ಸಾಧ್ಯವಿದ್ದರೂ, ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಪಾತ್ರವನ್ನು ಬೆಳಕಿಗೆ ತಂದಿದ್ದಾರೆ. ವಸಹಾತೋತ್ತರ ಕಾಲಘಟ್ಟದಲ್ಲಿ ನಿರ್ಮಾಣವಾದ ಸಂವಿಧಾನದಲ್ಲಿ ಭಾರತದ ಪ್ರಜಾಸತಾತ್ಮಕ ಸಂವಿಧಾನವು ಅತ್ಯಂತ ದೀರ್ಘ ಕಾಲದಿಂದ ಸದೃಢವಾಗಿ ಸಾಂಸ್ಥೀಕರಣಗೊಂಡಿರುವುದಕ್ಕೆ ಕಾರಣ ಭಾರತದ ಪ್ರಜೆಗಳಾದ ನಾವು ಸಂವಿಧಾನ ರಚನೆಯಲ್ಲಿ ವಹಿಸಿದ ಪಾತ್ರ. 1946ರಲ್ಲಿ ಸಾಕ್ಷರತೆಯ ಪ್ರಮಾಣ ಕೇವಲ 18ರಷ್ಟು ಇದ್ದರೂ, ದೇಶದ ಶ್ರೀಸಾಮಾನ್ಯರು, ಗಾಂಧೀಜಿಯವರು ಸ್ವಾತಂತ್ರ್ಯ ಸಂಗ್ರಾಮದ ಚುಕ್ಕಾಣಿಯನ್ನು ಹಿಡಿದ ನಂತರ ಸ್ವಾತಂತ್ರ್ಯ ಚಳವಳಿಯು ಜನಾಂದೋಲನವಾಗಿ ಪರಿವರ್ತಿತ ಫಲವಾಗಿ, ಸ್ವಾತಂತ್ರ್ಯ ಚಳವಳಿಯ ನಾಯಕರ ಭಾಷಣಗಳು ಮತ್ತು ಸಂದೇಶಗಳು, ಸಾಮಾನ್ಯ ಜನರ ಹೃದಯವನ್ನು ಹೊಕ್ಕಿ ದೇಶದಲ್ಲಿ ಅಕ್ಷರ ಸಾಕ್ಷರತೆ ಇಲ್ಲದಿದ್ದರೂ, ಸದೃಢ ಪ್ರಜಾಪ್ರಭುತ್ವ- ರಾಜಕೀಯ ಸಾಕ್ಷರತೆಯು ಸದೃಢವಾಗಿ ನೆಲೆಗೊಂಡಿತು. ಈ ಪರಿಣಾಮವಾಗಿ ಬಹುಶಃ ಆಗ ಸಾಮಾನ್ಯ ಜನರಲ್ಲಿ ಇದ್ದ ಪ್ರಜಾಸತಾತ್ಮಕ ರಾಜಕೀಯ ಪ್ರಜ್ಞೆಯು ಈಗಿನ ಕಾಲಘಟ್ಟದಲ್ಲಿ ಇಲ್ಲ ಎನಿಸುತ್ತದೆ!.
ಸಂವಿಧಾನ ರಚನಾ ಮಂಡಳಿ ಸಮಾವೇಶದ ಮೊದಲ ದಿನದಿಂದ (ಡಿ. 9,1946), ಸಂವಿಧಾನ ಅನುಮೋದನೆ ಆಗುವ ದಿನದವರೆಗೂ (ನ. 26,1949) ಸುಮಾರು 3 ವರ್ಷಗಳ ಕಾಲ ದೇಶದ ಮೂಲೆಮೂಲೆಯಿಂದ ಸಮಾಜದ ಎಲ್ಲಾ ವರ್ಗದ ಜನಸಾಮಾನ್ಯರು, ಸಂಘಟನೆಗಳು, ಸಂಘ ಸಂಸ್ಥೆಗಳು ಪತ್ರ, ಪೋಸ್ಟ್ಕಾರ್ಡ್, ಟೆಲಿಗ್ರಾಂ ಮತ್ತು ನಿಯೋಗಗಳ ಮೂಲಕ ಸಂವಿಧಾನ ರಚನಾ ಪ್ರಕ್ರಿಯೆಗೆ ನೀಡಿದ ಸ್ಪಂದನ, ಪ್ರತಿಕ್ರಿಯೆ, ಅಹವಾಲು-ಸಲಹೆಗಳ ಮಹಾಪೂರಗಳನ್ನು ಗಮನಿಸಿದರೆ, ಜನಸಾಮಾನ್ಯರು ಮೂಕ ಪ್ರೇಕ್ಷಕರಾಗಿರಲಿಲ್ಲ. ನಮ್ಮ ಸಂವಿಧಾನವು ನಗರ, ಶ್ರೀಮಂತ, ಉನ್ನತ ವರ್ಗದ ನಾಯಕರಿಂದ, ತೆರೆಮರೆಯಲ್ಲಿ, ಗೌಪ್ಯವಾಗಿ ರಚನೆಯಾದ ಸಂವಿಧಾನ ಅಲ್ಲ ಎಂದು ಸಾಕ್ಷೀಕರಿಸುತ್ತದೆ. ಅಲ್ಲದೆ, ಸಂವಿಧಾನದ ನ್ಯಾಯ ಬದ್ಧತೆಯನ್ನು ಪ್ರಶ್ನಿಸುವ ಮತ್ತು ವಿರೋಧಿಸುವ ಶಕ್ತಿಗಳಿಗೆ ಕಣ್ತೆರೆಸಿ, ಈ ಸಾಕ್ಷಿಗಳು ತಕ್ಕ ಉತ್ತರ ಕೊಡಬಲ್ಲವು. ಸಂವಿಧಾನ ರಚನಾ ಮಂಡಳಿಗೆ ದೇಶದ ಉದ್ದಗಲಗಳಿಂದ ಸುಮಾರು 150 ಸಂಘಟನೆಗಳು, ನೂರಾರು ಸಾರ್ವಜನಿಕರು ಸಲಹೆ, ಸೂಚನೆ, ಆಶೋತ್ತರಗಳನ್ನು ರವಾನಿಸುತ್ತಾರೆ. ಸಂವಿಧಾನ ರಚನಾ ಮಂಡಳಿಯು ಈ ರೀತಿಯ ಜನ ಸ್ಪಂದನವನ್ನು ನಿರೀಕ್ಷಿಸಿರಲಿಲ್ಲ. ಸಾರ್ವಜನಿಕರ ಈ ಸಲಹಾ ಸೂಚನೆಗಳು ನಿರ್ದೇಶನಗಳು, ಸಂವಿಧಾನ ರಚನಾ ಮಂಡಳಿಗೆ ಪೂರಕ ಮತ್ತು ಪ್ರೇರಕವಾಯಿತು. ಮೂಲತಃ ಸಂವಿಧಾನ ರಚನಾ ಮಂಡಳಿಯ ನೀತಿಯಲ್ಲಿ ಸಾರ್ವಜನಿಕರ ಅವಗಾಹನೆ, ಸಲಹೆಯನ್ನು ಸ್ವೀಕರಿಸುವುದಕ್ಕೆ ಅವಕಾಶ ಇರುವುದಿಲ್ಲ.
ಈ ಸಾರ್ವಜನಿಕ ಸಹಭಾಗಿತ್ವ ರೂಪುರೇಷೆಯ ಮೂರು ಮಾದರಿಗಳನ್ನು ಇಲ್ಲಿ ಉದಾಹರಿಸಬಹುದು.
1. 1946 (ನವೆಂಬರ್)ರಲ್ಲಿ ಉತ್ತರ ಪ್ರದೇಶದ ಇಂದ್ರಲಾಲ್ ಎಂಬ ನಿವೃತ್ತ ಅಧಿಕಾರಿಯು ಸಂವಿಧಾನ ರಚನಾ ಮಂಡಳಿಗೆ, ಆನಂತರ ನೇರವಾಗಿ ಅಧ್ಯಕ್ಷ ರಾಜೇಂದ್ರ ಪ್ರಸಾದವರಿಗೆ ‘ಭಾರತದ ಸಂವಿಧಾನದ ಮೂಲ ತತ್ವಗಳು’ ಎಂಬ ಶೀರ್ಷಿಕೆಯಲ್ಲಿ ದೇಶದ ವಿರೋಧಾಭಾಸ ವರ್ಗಗಳ ಮಧ್ಯೆ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಸಮನ್ವತೆಯನ್ನು ಸಾಧಿಸಬೇಕೆಂಬ ಸಂದೇಶದೊಂದಿಗೆ - ಭಾಷಾ ನೀತಿ, ಪ್ರಾದೇಶಿಕ ಭಾಷೆಗಳ ಸ್ವಾತಂತ್ರ್ಯ, ಹಣಕಾಸಿನ ನೀತಿ, ನ್ಯಾಯಾಂಗ ವ್ಯವಸ್ಥೆ, ಕೇಂದ್ರ-ರಾಜ್ಯ ಸಂಬಂಧ, ಕೋಮು ಸಮಸ್ಯೆ ಮುಂತಾದ ವಿಚಾರಗಳನ್ನು ಒಳಗೊಂಡ 50 ಪುಟದ ಜ್ಞಾಪಕ ಪತ್ರವನ್ನು ಕಳುಹಿಸಿಕೊಡುತ್ತಾರೆ. ಈ ಜ್ಞಾಪಕ ಪತ್ರವನ್ನು ಎಲ್ಲಾ ಸದಸ್ಯರಿಗೂ ಹಂಚಬೇಕೆಂದು ಕೋರುತ್ತಾರೆ.
2. ವೇದ ಪ್ರಚಾರ ಮಂಡಳಿಯು ಈ ಅಂಶಗಳು ಸಂವಿಧಾನದ ಲಕ್ಷಣಗಳಾಗಬೇಕೆಂದು ಕೋರುತ್ತದೆ -(ಎ) ಸಂವಿಧಾನದಲ್ಲಿ ಧಾರ್ಮಿಕ ಮತ್ತು ಕೋಮುಶಕ್ತಿಗಳ ಹಸ್ತಕ್ಷೇಪ ಇರಬಾರದು, (ಬಿ) ಸಮಾನತೆ ಮತ್ತು ನ್ಯಾಯ ಮೂಲ ಸ್ತಂಭ ಆಗಬೇಕು, (ಸಿ) ರಾಷ್ಟ್ರದ ಅಧಿಕೃತ ಧರ್ಮ ಇರಬಾರದು, (ಡಿ) ಕೃಷಿ ಅಭಿವೃದ್ಧಿಗೆ ಪೂರಕವಾಗಿರಬೇಕು, (ಇ) ಕಡ್ಡಾಯ ಹಾಗೂ ಉಚಿತ ಪ್ರಾಥಮಿಕ ಶಿಕ್ಷಣ, (ಎಫ್) ಸಹಪಂಕ್ತಿ ಭೋಜನ ಮತ್ತು ಅಂತರ್ಜಾತಿ ವಿವಾಹವನ್ನು ಕಾನೂನು ಬದ್ಧ ಮಾಡಬೇಕು, (ಜಿ) ಅಸ್ಪಶ್ಯತೆ, ಸತಿ, ಬಾಲ್ಯ ವಿವಾಹ ನಿಷೇಧ ಮಾಡಿ ಸಾರ್ವಜನಿಕ ಸ್ಥಳಗಳಿಗೆ ಮತ್ತು ದೇವಾಲಯಗಳಿಗೆ ಎಲ್ಲರ ಪ್ರವೇಶಕ್ಕೂ ಅವಕಾಶ ಇರಬೇಕು.
(3) ಅಖಿಲ ಭಾರತ ಮಹಿಳಾ ಪರಿಷತ್ ಮಹಿಳೆಯರಿಗೆ ರಾಜಕೀಯ ಮತ್ತು ನಾಗರಿಕ ಸಮಾನತೆ, ಆರೋಗ್ಯ, ಶೈಕ್ಷಣಿಕ ಮತ್ತು ಸ್ವಚ್ಛತಾ ಸೇವೆಗಳಿಗೆ ಹಕ್ಕುಗಳು, ಗೃಹಿಣಿಯರ ಸೇವೆಗಳನ್ನು ಪರಿಗಣಿಸುವುದು, ಆಸ್ತಿ ಹಕ್ಕು, ವೃತ್ತಿಯಲ್ಲಿ ಸುರಕ್ಷತಾ ವಾತಾವರಣ, ಕೆಲಸದ ಹಕ್ಕು, ವೇತನದಲ್ಲಿ ಸಮಾನತೆ ಮುಂತಾದ ಬೇಡಿಕೆಯುಳ್ಳ ಮಹಿಳೆಯರ ಹಕ್ಕು ಪ್ರಣಾಳಿಕೆಯನ್ನು ಸಂವಿಧಾನ ರಚನಾ ಮಂಡಳಿಗೆ ಕಳಿಸಿಕೊಡುತ್ತದೆ.
(4) ‘ಅಖಿಲ ಹಿಂದ್ ಬಾಲಕ ಸಂಘ’ವು ಮಕ್ಕಳ ಹಕ್ಕುಗಳನ್ನು ಒಳಗೊಂಡ ಸನ್ನದನ್ನು ಸಂವಿಧಾನ ರಚನಾ ಮಂಡಳಿಗೆ ಕಳುಹಿಸಿಕೊಡುತ್ತದೆ-ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಕಡ್ಡಾಯ ಉಚಿತ ಶಿಕ್ಷಣ, ಮಕ್ಕಳ ಬೆಳವಣಿಗೆಗೆ ಬೇಕಾಗುವ ಸ್ವಚ್ಛ, ಸಮೃದ್ಧ, ಭಯ ರಹಿತ ವಾತಾವರಣ, ಮಕ್ಕಳ ಸಂಪೂರ್ಣ ಆರೋಗ್ಯ, ವೈದ್ಯಕೀಯ ನೆರವು, ಮಕ್ಕಳ ಅಭಿವೃದ್ಧಿ ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸುವ ಪರಿಪೂರ್ಣ ಶಿಕ್ಷಣವನ್ನು ನೀಡುವುದು, ಮಕ್ಕಳ ಕ್ರೀಡೆ ಮತ್ತು ಮನೋರಂಜನೆಗೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯವನ್ನು ಕಲ್ಪಿಸುವುದು, ಮಕ್ಕಳನ್ನು ಎಲ್ಲಾ ರೀತಿಯ ಶೋಷಣೆಯಿಂದ ರಕ್ಷಣೆ, ಅಂಗವಿಕಲ ಮತ್ತು ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕೆ ಪ್ರಮುಖ ಆದ್ಯತೆ, ಆರೋಗ್ಯ ವರ್ಧನೆಗೆ ಪೌಷ್ಟಿಕ ಆಹಾರಗಳನ್ನು ಒದಗಿಸುವುದು, ಗ್ರಾಮೀಣ ಮಕ್ಕಳಿಗೆ ನಗರ ಪ್ರದೇಶದಲ್ಲಿ ದೊರಕುವ ಎಲ್ಲಾ ಶೈಕ್ಷಣಿಕ ಸೌಲಭ್ಯಗಳನ್ನು ದೊರಕಿಸುವುದು, ಪ್ರಾಥಮಿಕ-ಪ್ರೌಢ ಸದೃಢ ಶಿಕ್ಷಣದ ವೆಚ್ಚವನ್ನು ಸರಕಾರವೇ ಭರಿಸಬೇಕು. ಇವೆಲ್ಲ ಸಂವಿಧಾನದ ಮೂಲಭೂತ ಅಂಶಗಳಾಗಬೇಕು.
ಈ ಸಂಘ ಸಂಸ್ಥೆಗಳಲ್ಲದೆ, ವರ್ಲ್ಡ್ ಯೂಥ್ ಲೀಗ್, ಬಾಂಬೆ ಚೇಂಬರ್ಸ್ ಆಫ್ ಕಾಮರ್ಸ್, ಕೋಮು ಸೌಹಾರ್ದ ವೇದಿಕೆಗಳು, ನೇಕಾರರ ಸಂಘಗಳು, ಮಹಿಳಾ ಸಮಾಜಗಳು, ಆದಿವಾಸಿ ಸಂಘ-ಸಂಸ್ಥೆಗಳು, ಅಂಜುಮನ್ ಐ ಅಹಮದಿಯ, ಕ್ರೈಸ್ತ ಧರ್ಮ ಸಂಘ-ಸಂಸ್ಥೆಗಳು, ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್, ಮುಂತಾದ ಹಲವಾರು (150) ಸಂಘ ಸಂಸ್ಥೆಗಳು ಸಂವಿಧಾನ ರಚನಾ ಸಭೆಗೆ ಅಹವಾಲನ್ನು ಕಳುಹಿಸುತ್ತಾರೆ. ಜೈನ, ಕ್ರಿಶ್ಚಿಯನ್, ಬೌದ್ಧ, ರಜಪೂತ್, ಅಖಿಲ ಭಾರತ ಮೂಮಿನ್ ಒಕ್ಕೂಟ (ಮುಸ್ಲಿಮ್ ನೇಕಾರರು) ಸಂಘಟನೆಗಳು ಸಲಹಾ ಸಮಿತಿಯಲ್ಲಿ ಸದಸ್ಯತ್ವ ಕೋರುತ್ತಾರೆ.
ಈ ಎಲ್ಲಾ ಸಾರ್ವಜನಿಕ ಅಹವಾಲುಗಳ ಆಶೋತ್ತರಗಳಲ್ಲಿ ನಮ್ಮ ಸಂವಿಧಾನದಲ್ಲಿ ಎಲ್ಲಾ ಮೂಲತತ್ವ ಅಂಶಗಳು ಅಡಕವಾಗಿದ್ದು ಬಹಳ ವಿಶೇಷ. ಅಸ್ಪಶ್ಯತಾ ನಿವಾರಣೆ, ಅಲ್ಪಸಂಖ್ಯಾತರ ಹಕ್ಕುಗಳು, ಆದಿವಾಸಿಗಳ ಹಕ್ಕುಗಳು, ಒಕ್ಕೂಟ ಸ್ವರೂಪ, ಜಾತ್ಯತೀತತೆ, ಸಾರ್ವತ್ರಿಕ ಮತದಾನ ಹಕ್ಕು, ಕೇಂದ್ರ-ರಾಜ್ಯ ಸಂಬಂಧ, ಗೇಣಿದಾರರ ಹಕ್ಕುಗಳು, ಮಕ್ಕಳ, ಮಹಿಳೆಯರ, ಅಂಗವಿಕಲರ ಹಕ್ಕುಗಳು, ಹೀಗೆ. ಸಂವಿಧಾನ ರಚನಾ ಸಭೆಯು ಕೂಡ ಈ ಎಲ್ಲಾ ಅಹವಾಲುಗಳನ್ನು ಕಾಳಜಿಯಿಂದ ಸ್ವೀಕಾರ ಮಾಡಿ ಅಧ್ಯಯನ ಮಾಡಿದ್ದು ಪ್ರಜಾಪ್ರಭುತ್ವಕ್ಕೆ ಅವರು ತೆತ್ತ ಗೌರವ. ಈ ಸಾರ್ವಜನಿಕರ ಅಹವಾಲುಗಳು ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಪೂರಕ ಮತ್ತು ಪ್ರೇರಕ ಅಂಶವಾಯಿತು.
ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ದಿನಪತ್ರಿಕೆಗಳು ಪ್ರಮುಖ ಪಾತ್ರವನ್ನು ವಹಿಸಿದವು. ಸಾರ್ವಜನಿಕ ಚರ್ಚೆಯ ಸಾರವನ್ನು ಸಂವಿಧಾನ ರಚನಾ ಮಂಡಳಿಗೆ ವರದಿಗಳ ಮೂಲಕ ಗಮನಕ್ಕೆ ತಂದು ಸಾರ್ವಜನಿಕರು ಮತ್ತು ಮಂಡಳಿಯ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಿತು. ಸಂವಿಧಾನ ರಚನಾ ಮಂಡಳಿಯಲ್ಲಿ ನಡೆಯುತ್ತಿದ್ದ ಎಲ್ಲಾ ಚರ್ಚೆಗಳನ್ನು ವಿಸ್ತಾರವಾಗಿ ವರದಿ ಮಾಡಿ ಸಾರ್ವಜನಿಕರ ಗಮನಕ್ಕೆ ತಲುಪಿಸುತ್ತಿದ್ದವು. ಸಾರ್ವಜನಿಕರು, ಚಿಂತಕರು ಈ ಪತ್ರಿಕೆಗಳ ಮೂಲಕ ಭವಿಷ್ಯದ ಸಂವಿಧಾನದ ಬಗ್ಗೆ ಅವರಿಗಿದ್ದ ಕುತೂಹಲ ಮತ್ತು ಕನಸುಗಳನ್ನು ಮಂಡಳಿಯ ಗಮನಕ್ಕೆ ತರುತ್ತಿದ್ದರು.
ಈ ಪ್ರಕ್ರಿಯೆಯಲ್ಲಿ ಇನ್ನೊಂದು ಪ್ರಮುಖ ಪಾತ್ರ ವಹಿಸಿದ್ದ ಶಕ್ತಿ ಎಂದರೆ, ಆಲ್ ಇಂಡಿಯಾ ರೇಡಿಯೊ- ಸಂವಿಧಾನ ರಚನಾ ಮಂಡಳಿಯ 11 ಅಧಿವೇಶನ 165 ಸಭೆಯ ಎಲ್ಲಾ ಚರ್ಚೆ-ಭಾಷಣಗಳನ್ನು ನೇರ ಪ್ರಸಾರ ಮಾಡಿ, 34 ವಿಶೇಷ ಸರಣಿ ಚರ್ಚೆಗಳ ಮೂಲಕ ಸಾರ್ವಜನಿಕರ ಗಮನಕ್ಕೆ ತಂದು, ಟೀಕೆ ಟಿಪ್ಪಣಿಗೆ ಎಡೆ ಮಾಡಿಕೊಟ್ಟಿತು. ಸಂವಿಧಾನ ರಚನಾ ಕಾಲಾವಧಿಯಲ್ಲಿ ರೇಡಿಯೋ ಕೇಳುವ ಮತ್ತು ದಿನಪತ್ರಿಕೆಗಳನ್ನು ಓದುವವರ ಸಂಖ್ಯೆ ವಿಪರೀತ ಹೆಚ್ಚುತ್ತದೆ. ಇದು ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಆಸಕ್ತಿಯ ಸೂಚಕ ಎನ್ನುತ್ತಾರೆ ವಿದ್ವಾಂಸರು.
ಸಾರ್ವಜನಿಕರ ಸಹ ಸಹಭಾಗಿತ್ವಕ್ಕೆ ಪೂರಕವಾದ ಇನ್ನೊಂದು ಪ್ರಕ್ರಿಯೆ ಎಂದರೆ, ಸಂವಿಧಾನ ರಚನಾ ಸಮಯದಲ್ಲೇ ಸಮಾನಂತರವಾಗಿ ಭಾರತದ ಮೊದಲನೇ ಸಾರ್ವತ್ರಿಕ ಚುನಾವಣೆಗೆ ಮತದಾರರ ಪಟ್ಟಿ ತಯಾರಾಗಿದ್ದು. ಇದು ಸಹಭಾಗಿತ್ವ ಪ್ರಜಾಪ್ರಭುತ್ವವನ್ನು ವೃದ್ಧಿಸಿತು.
ಕರಡು ಪ್ರತಿ (ಫೆ. 26,1948)ಗೆ ಸಾರ್ವಜನಿಕರ ಪ್ರತಿಕ್ರಿಯೆ: ಒಂದು ಲಕ್ಷಕ್ಕೂ ಹೆಚ್ಚಿನ ಕರಡು ಪ್ರತಿಗಳನ್ನು ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಮುದ್ರಿಸಿ ಸಾರ್ವಜನಿಕರ ಪ್ರತಿಕ್ರಿಯೆಗೆ ಬಿಡಲಾಯಿತು. ಈ ಪ್ರತಿಗಳನ್ನು ಸಾರ್ವಜನಿಕ ಸ್ಥಳಗಳಾದ ಬಸ್ನಿಲ್ದಾಣ, ರೈಲ್ವೆ ಸ್ಟೇಷನ್ಗಳಲ್ಲಿ, ಪುಸ್ತಕದ ಅಂಗಡಿಗಳಲ್ಲಿ ಒಂದು ರೂಪಾಯಿ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಯಿತು. ಜನಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವಂತಹ 30 ಪುಟ ಸರಳೀಕೃತ ಕರಡು ಪ್ರತಿಯನ್ನು ಬಿಡುಗಡೆ ಮಾಡಲಾಯಿತು. ಈ ಟೀಕೆ-ಟಿಪ್ಪಣಿಗಳ ಪ್ರತಿಗಳನ್ನು ಅಂದಿನ ವಿದ್ಯಾವಂತರು ಮುಗಿಬಿದ್ದು ಓದಿ ಸಾಮಾನ್ಯ ಜನರೊಂದಿಗೆ ಭವಿಷ್ಯದ ಸಂವಿಧಾನದ ಬಗ್ಗೆ ಚರ್ಚಿಸುತ್ತಾರೆ. ಕೆಲವರು ಪ್ರಾದೇಶಿಕ ಭಾಷೆಗೆ ಪ್ರತಿಯನ್ನು ತರ್ಜುಮೆ ಮಾಡುತ್ತಾರೆ. ಧಾರವಾಡದ ಹಿಂದ ಮಠ ಪ್ರಕಾಶಕರು ಕರಡು ಪ್ರತಿಯನ್ನು ಕನ್ನಡಕ್ಕೆ ಅನುವಾದ ಮಾಡುತ್ತಾರೆ. ಮದರಾಸಿನ ಥಿಯೋ ಸಾಫಿಕಲ್ ಸೊಸೈಟಿಯ ಕುನ್ನಾ ರಾಜ್ ಅವರು ಕರಡು ಪ್ರತಿಯನ್ನು ಸಂಸ್ಕೃತಕ್ಕೆ ಅನುವಾದ ಮಾಡುತ್ತಾರೆ.
ಕೆಲವು ವಕೀಲರು, ನಿವೃತ್ತ ನ್ಯಾಯವಾದಿಗಳು ಮತ್ತು ಅಂಕಣಕಾರರು, ಕರಡು ಪ್ರತಿಯ ಮೇಲೆ ವಿಮರ್ಶಾತ್ಮಕ ಪುಸ್ತಕಗಳನ್ನು ಬರೆಯುತ್ತಾರೆ. ಎಲ್ಲಾ ದಿನಪತ್ರಿಕೆಗಳು ಸಂವಿಧಾನದ ಕರಡು ಪ್ರತಿಯನ್ನು ವಿಶೇಷ ರೂಪದಲ್ಲಿ ಪ್ರಕಟಿಸಿ ವ್ಯಾಖ್ಯಾನಿಸಿ, ಜನಸಾಮಾನ್ಯರ ಹೃದಯಕ್ಕೆ ಮುಟ್ಟಿಸುತ್ತಾರೆ. ಕರಡು ಪ್ರತಿಯನ್ನು ವಿಮರ್ಶಿಸಿ ಮಂಡಳಿಗೆ ಪ್ರತಿಕ್ರಿಯೆಯನ್ನು ರವಾನಿಸಿದ ಸಂಘ ಸಂಸ್ಥೆಗಳೆಂದರೆ ವಕೀಲರ ಸಂಘಗಳು, ಸರ್ವೆಂಟ್ ಆಫ್ ಇಂಡಿಯನ್ ಸೊಸೈಟಿ, ಡಿವಿಜಿಯವರ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅಖಿಲ ಭಾರತ ಮಹಿಳಾ ಸಂಘಟನೆ, ಸಿವಿಲ್ ಲಿಬರ್ಟಿ ಕಾನ್ಫರೆನ್ಸ್, ವೈಷ್ಣವ ಸಭಾ ಮತ್ತಿತರರು. ಜಯಪ್ರಕಾಶ್ ನಾರಾಯಣ್ ನೇತೃತ್ವದ ಕಾಂಗ್ರೆಸ್ ಸಮಾಜವಾದಿ ಪಕ್ಷವು, ಕರಡು ಸಂವಿಧಾನವನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಪರ್ಯಾಯ ಕರಡು ಸಂವಿಧಾನವನ್ನು ರಚನೆ ಮಾಡಿ, ಸಂವಿಧಾನ ರಚನಾ ಮಂಡಳಿಗೆ ಕಳುಹಿಸುತ್ತದೆ. ಮಂಡಳಿಯು ಈ ಟೀಕೆ-ಟಿಪ್ಪಣಿಗಳನ್ನೆಲ್ಲಾ ಸ್ವಾಗತಿಸಿ, ಅಧ್ಯಯನ ಮಾಡಿ, ಕ್ರೋಡೀಕರಿಸಿ ಅಂಶಗಳನ್ನು ಅಂತಿಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳುತ್ತದೆ.
ಪ್ರತ್ಯೇಕ ದೇಶದ ಕನಸನ್ನು ಕಂಡಿದ್ದ 75 ಸ್ಥಳೀಯ ಸಂಸ್ಥಾನಗಳು ತಮ್ಮದೇ ಸಂವಿಧಾನವನ್ನು ರಚಿಸಿಕೊಳ್ಳುತ್ತವೆ. ಅದರ ಸ್ವರೂಪಗಳು ಕೂಡ ಸಂವಿಧಾನ ರಚನಾ ಮಂಡಳಿಯ ಮೇಲೆ ಪರಿಣಾಮ ಬೀರಿರಬಹುದು. ಆದರೆ ಸ್ಥಳೀಯ ಸಂಸ್ಥಾನದ ಜನರು ತಮ್ಮ ಆಶೋತ್ತರಗಳ ಅವಗಾಹನೆಯನ್ನು ಸಂವಿಧಾನ ರಚನಾ ಮಂಡಳಿಗೆ ಸಲ್ಲಿಸುವುದರ ಮೂಲಕ ದೇಶದ ಏಕತೆಗೆ ಸ್ಫೂರ್ತಿದಾಯಕ ಆಗುತ್ತಾರೆ.
ಅನಿವಾಸಿ ಭಾರತೀಯರು ಕೂಡ ಭಾವಿ ಸಂವಿಧಾನದ ಬಗ್ಗೆ ಟೀಕೆ ಟಿಪ್ಪಣಿಗಳ ಮೂಲಕ ಅಭಿಪ್ರಾಯಗಳನ್ನು ಪತ್ರಗಳ ಮೂಲಕ ಸಂವಿಧಾನ ರಚನಾ ಮಂಡಳಿಗೆ ರವಾನಿಸುತ್ತಾರೆ.
ಹೀಗೆ ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಸಂವಿಧಾನ ನಿರ್ಮಾಣದಲ್ಲಿ ಭಾರತದ ಪ್ರಜೆಗಳು ನಿರ್ವಹಿಸಿದ ಪಾತ್ರವನ್ನು ಸ್ಮರಿಸಿ, ಸಂವಿಧಾನದ ಮಾಲಕತ್ವವನ್ನು ಸ್ಥಾಪಿಸಿದ ಯಶೋಗಾಥೆಯನ್ನು ಸ್ಮರಿಸಿ, ಭಾರತದ ಪ್ರಜಾಸತ್ತಾತ್ಮಕ, ಜಾತ್ಯತೀತ ಮತ್ತು ಸಮಾಜವಾದಿ ಗಣತಂತ್ರವನ್ನು ಇನ್ನೂ ಗಟ್ಟಿಗೊಳಿಸೋಣ.






