ಶಾಲಾ ದತ್ತು ಯೋಜನೆ: ಶಿಕ್ಷಣ ಹಕ್ಕುಕಾಯ್ದೆಯ ಉಲ್ಲಂಘನೆ ಸಂವಿಧಾನಕ್ಕೆ ಅಪಚಾರ

ಸರಕಾರಿ ಶಾಲೆಯೆಂದರೆ ಕೇವಲ ಸಾಕ್ಷರತೆಯ ಕೇಂದ್ರವಲ್ಲ. ಶಿಕ್ಷಣದ ಮೂಲಕ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವ ಸಾಂವಿಧಾನಿಕ ತೊಟ್ಟಿಲು. ಸಮಾಜದ ಪ್ರತಿಯೊಂದು ಮಗುವಿಗೂ ಸಮಾನ ಅವಕಾಶ ಕಲ್ಪಿಸುವ, ವಿಭಿನ್ನ ಸಾಮಾಜಿಕ ಹಿನ್ನೆಲೆಯ ಮಕ್ಕಳನ್ನು ಒಟ್ಟಿಗೆ ಬೆಳೆಸುವ ಮತ್ತು ಸಂವಿಧಾನದ ಆಶಯಗಳನ್ನು ಬದುಕಿನ ಅನುಭವವಾಗಿಸುವ ಅನುಭವಮಂಟಪ. ಎಲ್ಲರಿಗೂ ಸಮಾನ ಅವಕಾಶ ಹಾಗೂ ಎಲ್ಲರನ್ನೊಳಗೊಳ್ಳುವ ಸಾಮುದಾಯಿಕ ಸರಕಾರಿ ಶಾಲೆಯನ್ನು ಬಲಪಡಿಸುವ ಸರಕಾರದ ಯಾವುದೇ ನೀತಿಯ ತಳಹದಿ ನಾಡಿನ ಬಸವಾದಿ ಶರಣರು ಪ್ರತಿಪಾದಿಸಿದ ಸಮಾನತೆ-ಸಾಮಾಜಿಕ ನ್ಯಾಯದ ಮೂಲ ತತ್ವವನ್ನೊಳಗೊಂಡಿರಬೇಕು.
ರಾಹುಲ್ ಗಾಂಧಿ ನೇತೃತ್ವದ 2024ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಶಿಕ್ಷಣವನ್ನು ‘ಸಾರ್ವಜನಿಕ ಒಳಿತು’ ಎಂದು ಸ್ಪಷ್ಟವಾಗಿ ಘೋಷಿಸಿತು. ಪ್ರತಿಯೊಬ್ಬ ವಿದ್ಯಾರ್ಥಿಗೂ ಸರಕಾರ ಒದಗಿಸುವ ಉಚಿತ ಮತ್ತು ಗುಣಮಟ್ಟದ ಶಿಕ್ಷಣದ ಹಕ್ಕಿದೆ; ಶಿಕ್ಷಣ ಸಂಸ್ಥೆಗಳು ಪ್ರಧಾನವಾಗಿ ಸಾರ್ವಜನಿಕ ಸಂಪನ್ಮೂಲಗಳಿಂದ ನಡೆಯಬೇಕು; ಖಾಸಗಿ ಸಂಸ್ಥೆಗಳ ಪಾತ್ರ ಪೂರಕವಾಗಿರಬೇಕು ಎಂಬುದು ಅವರ ನಿಲುವಾಗಿತ್ತು. ಈ ಘೋಷಣೆಯ ನಿಜವಾದ ಪರೀಕ್ಷೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿಯೇ ನಡೆಯಬೇಕು. ಸರಕಾರ ತನ್ನ ಶಾಲೆಗಳನ್ನು ನಡೆಸುವ ಸಾಮರ್ಥ್ಯವನ್ನು ಹೆಚ್ಚಿಸದೆ, ಅವುಗಳ ಸುಧಾರಣೆಗೆ ಖಾಸಗಿ ಸಂಸ್ಥೆಗಳ ಮಾರ್ಗದರ್ಶನವನ್ನೇ ಮುಖ್ಯ ಪರಿಹಾರವೆಂದು ಮುಂದಿಡುವುದಾದರೆ, ಪ್ರಣಾಳಿಕೆಯ ಆಶಯ ಮತ್ತು ಆಡಳಿತದ ಆದ್ಯತೆಗಳ ನಡುವಿನ ಅಂತರವನ್ನು ಪ್ರಶ್ನಿಸಬೇಕಾಗುತ್ತದೆ. ಇದು ಕರ್ನಾಟಕದಲ್ಲಿನ ಡಿ.ಕೆ. ಶಿವಕುಮಾರ್ರವರ ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ನೇರವಾಗಿ ಅನ್ವಯಿಸುತ್ತದೆ.
ಶಿಕ್ಷಣ ಹಕ್ಕು ಕಾಯ್ದೆ-2009 ಎಪ್ರಿಲ್ 1, 2010ರಿಂದ ದೇಶಾದ್ಯಂತ ಜಾರಿಗೆ ಬಂತು. ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿಯ ಮೂಲಕ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮಹತ್ವದ ಸಾಧನೆಯಾದ ಈ ಕಾಯ್ದೆಯು ಮಕ್ಕಳ ಶಿಕ್ಷಣವನ್ನು ಸರಕಾರದ ಕಾನೂನುಬದ್ಧ ಹೊಣೆಗಾರಿಕೆಯನ್ನಾಗಿಸಿತು. ಶಾಲೆಯ ಲಭ್ಯತೆ, ಶಿಕ್ಷಕರು, ಮೂಲಸೌಲಭ್ಯಗಳು ಮತ್ತು ಗುಣಮಟ್ಟದ ಕಲಿಕೆಯನ್ನು ಸರಕಾರದ ಮೂಲಭೂತ ಕರ್ತವ್ಯವನ್ನಾಗಿಸಿತು. ಮಗುವಿನ ಈ ಮೂಲಭೂತ ಹಕ್ಕನ್ನು ಕೊಡಮಾಡಬೇಕಾದ ಜವಾಬ್ದಾರಿ ಸರಕಾರದ್ದು. ಈ ಹಕ್ಕನ್ನು, ಸಂವಿಧಾನಬಾಹಿರವಾಗಿ ಲಾಭದಾಯಕ ಉದ್ದಿಮೆಯನ್ನಾಗಿಸಿಕೊಂಡಿರುವ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಅಥವಾ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅನುದಾನದ ಮರ್ಜಿಗೆ ಒಳಪಡಿಸಲಾಗದು.
ಸರಕಾರಿ ಶಾಲೆಗಳ ಸುಧಾರಣೆಯ ಮೊತ್ತ ಮೊದಲ ಆದ್ಯತೆ ಅಗತ್ಯ ಸಂಖ್ಯೆಯ ಅರ್ಹ ಶಿಕ್ಷಕರ ನೇಮಕವಾಗಬೇಕು. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯು ಸರಕಾರಿ ಮತ್ತು ಅನುದಾನಿತ ಶಾಲಾ-ಕಾಲೇಜುಗಳ ಎಲ್ಲ ಶಿಕ್ಷಕ ಹಾಗೂ ಸಿಬ್ಬಂದಿ ಹುದ್ದೆಗಳನ್ನು ಒಂದು ವರ್ಷದೊಳಗೆ ಭರ್ತಿ ಮಾಡುವ ಭರವಸೆ ನೀಡಿತ್ತು (ಕಾಂಗ್ರೆಸ್ ಪ್ರಣಾಳಿಕೆ 2023, ಪುಟ 32). ದತ್ತು ಪಡೆಯುವ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸರಕಾರಿ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸಬೇಕೆನ್ನುವ ಸರಕಾರ, ತನ್ನ ಭರವಸೆಯ ಅನುಷ್ಠಾನದ ಭಾಗವಾಗಿ ಎಷ್ಟು ಹುದ್ದೆಗಳನ್ನು ಭರ್ತಿಮಾಡಿದೆ ಎಂಬ ಶಾಲಾವಾರು ಲೆಕ್ಕವನ್ನು ರಾಜ್ಯದ ಜನತೆಯ ಮುಂದಿಡಬೇಕು.
ಶಿಕ್ಷಕರ ದೊಡ್ಡ ಕೊರತೆಯಿರುವ ಶಾಲೆಗೆ ಸುಣ್ಣ-ಬಣ್ಣ, ಕಂಪ್ಯೂಟರ್ ಅಥವಾ ಸ್ಮಾರ್ಟ್ಬೋರ್ಡ್ ನೀಡಿದ ಮಾತ್ರಕ್ಕೆ ಕಲಿಕೆಯ ಸಮಸ್ಯೆ ಪರಿಹಾರವಾಗುವುದಿಲ್ಲ. ಒಬ್ಬನೇ ಶಿಕ್ಷಕ ಬಹುವರ್ಗ ಬೋಧನೆ ಹಾಗೂ ಹಲವು ವಿಷಯಗಳನ್ನು ನಿರ್ವಹಿಸಬೇಕಾದಾಗ ಅರ್ಥಪೂರ್ಣ ಕಲಿಕೆ ಸಾಧ್ಯವಿಲ್ಲವೆಂಬುದು ಸಂಶೋಧನೆಗಳು ನಿರೂಪಿಸಿರುವ ಸತ್ಯ. ಮಕ್ಕಳಿಗೆ ಅಗತ್ಯ ವೈಯಕ್ತಿಕ ಗಮನ ದೊರೆಯುವುದು ಕಷ್ಟಸಾಧ್ಯ. ಸ್ವಾಭಾವಿಕವಾಗಿ ಸರಕಾರಿ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಕುಸಿದಾಗ ಪಾಲಕರು ಅನಿವಾರ್ಯವಾಗಿ ಬೇರೆ ಶಾಲೆಗಳನ್ನು ಹುಡುಕುತ್ತಾರೆ, ದಾಖಲಾತಿ ಕುಸಿಯುತ್ತದೆ. ದಾಖಲಾತಿ ಕಡಿಮೆಯಾದಾಗ ಶಾಲೆಯ ಅಗತ್ಯವನ್ನೇ ಪ್ರಶ್ನಿಸುವ ಮೂಲಕ ಸರಕಾರ ವಿಲೀನಗೊಳಿಸುವ, ಮುಚ್ಚುವ ಕೆಲಸಕ್ಕೆ ಮುಂದಾಗುತ್ತದೆ. ಸರಕಾರದ ನೀತಿ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಉಂಟಾದ ಹಾಗೂ ಸರಕಾರ ಸರಿಪಡಿಸಬಹುದಾದ ಕೊರತೆಗಳು ಸಾರ್ವಜನಿಕ ಶಾಲೆಯ ಮೂಲ ಅಸ್ತಿತ್ವಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಿವೆ. ಸರಕಾರ ಪ್ರಸ್ತಾವಿಸುತ್ತಿರುವ ದತ್ತು ಯೋಜನೆ ಈ ಮೂಲ ಸಮಸ್ಯೆಗಳಿಗೆ ಪರ್ಯಾಯವಾಗಲಾರದು.
ಶಾಲೆಗಳ ಮುಚ್ಚುವುದು ಅಥವಾ ವಿಲೀನ ಮಾಡುವುದನ್ನು ಕೇವಲ ದಾಖಲಾತಿ ಮತ್ತು ಆರ್ಥಿಕ ವೆಚ್ಚದ ಲೆಕ್ಕದಲ್ಲಿ ನಿರ್ಧರಿಸುವುದು ಶಿಕ್ಷಣ ಸಾರ್ವಜನಿಕ ಮತ್ತು ಸಾಮಾಜಿಕ ಒಳಿತಿನ ಆಶಯಕ್ಕೆ ವಿರುದ್ಧವಾಗಿದೆ. ಇದೇ ವಾದವನ್ನು ನಾವು ಪೊಲೀಸ್ ಠಾಣೆ ಅಥವಾ ದೇಶದ ಸೈನ್ಯದ ಸಂದರ್ಭದಲ್ಲಿ ನೋಡಿದಾಗ, ಪೊಲೀಸ್ ಠಾಣೆಗೆ ಜನರು ದೂರು ನೀಡಲು ಬರಲಿಲ್ಲವೆಂದಾಗಲಿ ಅಥವಾ ಹಲವು ವರ್ಷಗಳಿಂದ ಯುದ್ಧಗಳೇ ಆಗಲಿಲ್ಲವೆಂದಾಗಲಿ ನಾವು ಅವುಗಳನ್ನು ಮುಚ್ಚುವುದಿಲ್ಲ. ಶಾಲೆಯನ್ನು ಮುಚ್ಚಬೇಕೆನ್ನುವ ಸರಕಾರ, ಈ ವಿಷಯವನ್ನು ಚಿಕ್ಕಮಕ್ಕಳಿಗೆ ಶಾಲೆಯ ದೂರ, ರಸ್ತೆಯ ಸುರಕ್ಷತೆ, ಪ್ರಯಾಣದ ಸಮಯ, ಕುಟುಂಬದ ಆರ್ಥಿಕ ಪರಿಸ್ಥಿತಿ, ಶಿಕ್ಷಣದ ಲಭ್ಯತೆ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು, ಅಂಗವಿಕಲ ಮಕ್ಕಳು, ಬಡ ಕುಟುಂಬಗಳ ಮಕ್ಕಳ ಹಿನ್ನೆಲೆ ಮತ್ತು ಮುಖ್ಯವಾಗಿ ಶಿಕ್ಷಣ ಹಕ್ಕು ಕಾಯ್ದೆಯ ದೃಷ್ಟಿಯಿಂದ ನೋಡಬೇಕಾಗುತ್ತದೆ. ಇವು ಸಾಮಾಜಿಕ ಒಳಿತಿನ ನಿರ್ಣಾಯಕ ಅಂಶಗಳು. ದಾಖಲಾತಿ ಕಡಿಮೆಯಾದ ಶಾಲೆಯನ್ನು ಮುಚ್ಚುವ ಮೊದಲು ಅದರ ಕಾರಣಗಳನ್ನು ಪರಿಶೀಲಿಸಿ, ಶಿಕ್ಷಕರು ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಿ ಪುನಶ್ಚೇತನಗೊಳಿಸುವ ಸಾಧ್ಯತೆಯನ್ನು ಪರೀಕ್ಷಿಸಬೇಕು.
ಶಿಕ್ಷಣ ಹಕ್ಕು ಕಾಯ್ದೆಯ ಪ್ರಕರಣ 6, 8 ಮತ್ತು 9ರ ನೆರೆಹೊರೆಯ ಶಾಲೆಯ ಹೊಣೆಗಾರಿಕೆಯನ್ನು ಸರಕಾರಗಳು ಗೌರವಿಸಬೇಕು. ಉತ್ತಮ ಸೌಲಭ್ಯಗಳಿರುವ ದೊಡ್ಡ ಶಾಲೆಯನ್ನು ನಿರ್ಮಿಸುವುದು ಸ್ವಾಗತಾರ್ಹವಾಗಬಹುದು. ಆದರೆ, ಅದಕ್ಕಾಗಿ ಸುತ್ತಮುತ್ತಲಿನ ಮಕ್ಕಳಿಗೆ ಈಗಿರುವ ಸುಲಭ ಪ್ರವೇಶವನ್ನು ಕಸಿಯುವುದು ಸುಧಾರಣೆಯಾಗುವುದಿಲ್ಲ. ಶಿಕ್ಷಣ ಹಕ್ಕಿನ ಉಲ್ಲಂಘನೆಯಾಗುತ್ತದೆ. ಸರಕಾರ ಕಳೆದ ವರ್ಷಗಳಲ್ಲಿ ಮುಚ್ಚಿದ, ವಿಲೀನಗೊಳಿಸಿದ ಮತ್ತು ಪುನರಾರಂಭಿಸಿದ ಶಾಲೆಗಳ ವಿವರಗಳನ್ನು ಹಾಗೂ ಮಕ್ಕಳ ಮೇಲೆ ಉಂಟಾದ ಪರಿಣಾಮಗಳನ್ನು ಅಧ್ಯಯನಕ್ಕೆ ಒಳಪಡಿಸಬೇಕು.
ಶಿಕ್ಷಣ ಹಕ್ಕು ಕಾಯ್ದೆಯ ಪ್ರಕರಣ 29(2)(ಎಫ್) ಪ್ರಕಾರ, ಸಾಧ್ಯವಾದಷ್ಟೂ ಮಗುವಿನ ಮಾತೃಭಾಷೆಯೇ ಬೋಧನಾ ಮಾಧ್ಯಮವಾಗಿರಬೇಕು. ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣಕ್ಕೆ ಅನ್ವಯಿಸುವ ಈ ಆಶಯವನ್ನು ಶಾಲಾ ಶಿಕ್ಷಣದ ಭಾಷಾ ನೀತಿಯಲ್ಲಿ ಗಂಭೀರವಾಗಿ ಪರಿಗಣಿಸಬೇಕು. ಕರ್ನಾಟಕದಲ್ಲಿ ದ್ವಿಭಾಷಾ ಶಿಕ್ಷಣದ ಹೆಸರಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಆಯ್ಕೆಗಳನ್ನು ವಿಸ್ತರಿಸಲಾಗುತ್ತಿದೆ. ಆದರೆ ಎರಡು ಪ್ರತ್ಯೇಕ ಮಾಧ್ಯಮಗಳನ್ನು ನೀಡುವುದಕ್ಕೂ, ಎರಡೂ ಭಾಷೆಗಳನ್ನು ಅರ್ಥಪೂರ್ಣವಾಗಿ ಬಳಸುವ ಶೈಕ್ಷಣಿಕ ವಿಧಾನಕ್ಕೂ ವ್ಯತ್ಯಾಸವಿದೆ.
ಮಕ್ಕಳು ಉತ್ತಮ ಇಂಗ್ಲಿಷ್ ಕಲಿಯಬೇಕೆಂಬ ಪಾಲಕರ ಆಶಯ ನ್ಯಾಯಸಮ್ಮತವಾದದ್ದು. ಅದನ್ನು ಈಡೇರಿಸಲು ಅರ್ಹ ಭಾಷಾ ಶಿಕ್ಷಕರು, ಸೂಕ್ತ ಸಾಮಗ್ರಿ ಮತ್ತು ನಿರಂತರ ಅಭ್ಯಾಸದ ಅವಕಾಶ ಬೇಕು. ಕನ್ನಡ ಅಥವಾ ಇತರ ಮಾತೃಭಾಷೆಗಳ ಮೂಲಕ ವಿಷಯಗಳನ್ನು ಅರ್ಥಮಾಡಿ ಕೊಳ್ಳುವ ಅವಕಾಶವನ್ನು ದುರ್ಬಲಗೊಳಿಸುವುದು ಪರಿಹಾರ ವಾಗುವುದಿಲ್ಲ. ಒಂದೇ ಶಾಲೆಯಲ್ಲಿ ಭಾಷಾ ಮಾಧ್ಯಮದ ಆಧಾರದಲ್ಲಿ ಮಕ್ಕಳ ನಡುವೆ ಮೇಲು-ಕೀಳಿನ ಭಾವನೆ ಬೆಳೆಯದಂತೆ, ಶಿಕ್ಷಕರು ಮತ್ತು ಸೌಲಭ್ಯಗಳ ಹಂಚಿಕೆಯಲ್ಲಿ ಅಸಮಾನತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು.
ಏಶ್ಯನ್ ಅಭಿವೃದ್ಧಿ ಬ್ಯಾಂಕ್ ಕರ್ನಾಟಕದ ಸಾರ್ವಜನಿಕ ಶಾಲೆಗಳ ಕಾರ್ಯಕ್ರಮಕ್ಕೆ 182.89 ಮಿಲಿಯನ್ ಅಮೆರಿಕನ್ ಡಾಲರ್ ಸಾಲವನ್ನು ಅನುಮೋದಿಸಿದ್ದು, 500 ಸಮಗ್ರ ಸಾರ್ವಜನಿಕ ಶಾಲಾ ಸಮೂಹಗಳಿಗೆ ನೆರವು ನೀಡುವುದಾಗಿ ತಿಳಿಸಿದೆ. ಈ ಕಾರ್ಯಕ್ರಮವು ಫಲಿತಾಂಶಾಧಾರಿತ ಸಾಲದ ವಿಧಾನವನ್ನು ಅನುಸರಿಸುವುದಲ್ಲದೆ ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಹೊಂದಿಕೆಯಾಗಿದೆಯೆಂದು ಬ್ಯಾಂಕ್ ಹೇಳಿದೆ. ಸರಕಾರ ತಾನು ಸಾರ್ವಜನಿಕವಾಗಿ ತಿರಸ್ಕರಿಸಿದ ನೀತಿಯನ್ನ ಪುನಃ ಸಾಲ ಪಡೆದು ಶಾಲಾ ಸೌಲಭ್ಯಗಳನ್ನು ಸುಧಾರಿಸುತ್ತೇನೆನ್ನುವುದು ವಿಪರ್ಯಾಸವಲ್ಲವೇ? ಜೊತೆಗೆ, ಮಕ್ಕಳು ಸಮಗ್ರವಾಗಿ ಕಲಿಯಬೇಕಾದ ಕಲಿಕಾ ಪ್ರಕ್ರಿಯೆಯನ್ನು ಸಾಲದ ಷರತ್ತುಗಳು, ಹಣಬಿಡುಗಡೆಯ ಮಾನದಂಡಗಳು ಮತ್ತು ಹಣ ಪಡೆಯುವ ಯಾಂತ್ರಿಕ ಕ್ರಿಯೆಗಳನ್ನಾಗಿಸುವುದು ಎಷ್ಟು ಸರಿ?
ಒಂದು ಶಾಲೆಗೆ ಹೆಚ್ಚಿನ ಸಂಪನ್ಮೂಲಗಳನ್ನು ನೀಡುವ ನೆಪದಲ್ಲಿ ಮಕ್ಕಳಿಗೆ ನೆರೆಹೊರೆಯಲ್ಲಿ ಆಸರೆಯಾಗಿದ್ದ ಶಾಲೆಗಳ ಮೂಲ ಅಗತ್ಯಗಳು ನಿರ್ಲಕ್ಷಿಸಿ ಮಕ್ಕಳು ನಲಿಯುತ್ತಾ ನಡೆದು ಹೋಗಬಹುದಿದ್ದ ಶಾಲೆಗಳಿಗೆ ಬೀಗ ಹಾಕುತ್ತೇವೆಂಬುದು ಒಂದು ಜನಪರ- ಮಕ್ಕಳಪರ ಎನ್ನುವ ಸರಕಾರ ಮಾಡಬಹುದಾದ ಕೆಲಸವೇ? ಸಾಲದ ಗುರಿ ಹಾಗೂ ಷರತ್ತುಗಳನ್ನು ಪೂರೈಸುವ ಒತ್ತಡವು ಮಕ್ಕಳ ಸಮಗ್ರ ಬೆಳವಣಿಗೆ, ಸ್ಥಳೀಯ ಅಗತ್ಯಗಳು ಮತ್ತು ನೆರೆಹೊರೆಯ ಪ್ರವೇಶಕ್ಕಿಂತ ಮೇಲುಗೈ ಪಡೆಯಬಾರದಲ್ಲವೇ? ಸಾಲದ ಹಣಕ್ಕೆ ಶರಣಾಗುವ ಸರಕಾರದ ನೀತಿ, ಮಕ್ಕಳು ಸ್ವಾತಂತ್ರ್ಯ ಮತ್ತು ಘನತೆಯ ವಾತಾವರಣದಲ್ಲಿ ಆರೋಗ್ಯಕರವಾಗಿ ಬೆಳೆಯಲು ಅಗತ್ಯ ಅವಕಾಶ-ಸೌಲಭ್ಯಗಳನ್ನು ಒದಗಿಸಿಸಬೇಕೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಲ್ಲವೇ? ಮಕ್ಕಳ ಬಾಲ್ಯವನ್ನು ಕಸಿಯುವ ಕೆಪಿಎಸ್ ಶಾಲೆಯ ಅವಶ್ಯಕತೆಯಿದೆಯೇ?
ರಾಜ್ಯ ಶಿಕ್ಷಣ ನೀತಿ ಆಯೋಗವು ಶಾಲಾ ಶಿಕ್ಷಣ ನೀತಿ ಕುರಿತಂತೆ ಆಗಸ್ಟ್ 2025ರಲ್ಲಿ ಅಂತಿಮ ವರದಿ ಸಲ್ಲಿಸಿದ್ದರೂ, ಅದರ ಶಿಫಾರಸುಗಳು ಇಲ್ಲಿಯವರೆಗೆ ಜಾರಿಯಾಗದಿರುವುದು ಮತ್ತೊಂದು ಗಂಭೀರ ಪ್ರಶ್ನೆ. ಸಾರ್ವಜನಿಕ ಶಾಲೆಗಳ ಬಲವರ್ಧನೆ, ಮಾತೃಭಾಷಾ ಶಿಕ್ಷಣ, ಶಿಕ್ಷಕರ ವ್ಯವಸ್ಥೆ ಮತ್ತು ಖಾಸಗೀಕರಣದ ನಿಯಂತ್ರಣಕ್ಕೆ ಸಂಬಂಧಿಸಿದ ಶಿಫಾರಸುಗಳ ಬಗ್ಗೆ ಸರಕಾರ ಕಾಲಮಿತಿಯ ನಿರ್ಧಾರ ಪ್ರಕಟಿಸಬೇಕು. ನೀತಿ ನಿರೂಪಣೆಗೆ ಒಂದು ಆಯೋಗ ರಚಿಸಿ, ಅದರ ವರದಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವುದು ಎಷ್ಟು ಸರಿ?
ಒಂದೆಡೆ ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ಬೇಕೆಂದು ಪ್ರತಿಪಾದಿಸುವ ಸರಕಾರ ಮತ್ತೊಂದೆಡೆ ಎನ್ಇಪಿಯ (2020) ಭಾಗವಾಗಿರುವ ಪಿಎಂಶ್ರೀ, ಎನ್ಸಿಇಆರ್ಟಿ ಪಠ್ಯಕ್ರಮ, ಅಪಾರ್ ಐಡಿ- ಒಂದು ರಾಷ್ಟ್ರ ಒಬ್ಬ ವಿದ್ಯಾರ್ಥಿ ಗುರುತಿನ ಚೀಟಿ ಮತ್ತು ಎನ್ಇಪಿಗೆ ಹೊಂದಿಕೊಂಡಿರುವ ಎಡಿಬಿ ಸಾಲ ಯೋಜನೆ ಕಾರ್ಯಕ್ರಮಗಳನ್ನು ಮುಂದುವರಿಸುವುದಕ್ಕೆ ರಾಜ್ಯದ ಜನರಿಗೆ ಸ್ಪಷ್ಟ ವಿವರಣೆ ನೀಡಬೇಕಿದೆ. ಎನ್ಸಿಇಆರ್ಟಿ ಪಠ್ಯಪುಸ್ತಕಗಳನ್ನು ಬಳಸುವ ವಿಚಾರದಲ್ಲಿಯೂ ಅವುಗಳ ವಿಷಯ, ಸಂವಿಧಾನಾತ್ಮಕ ಮೌಲ್ಯಗಳು ಮತ್ತು ಕರ್ನಾಟಕದ ಭಾಷಾ-ಸಾಮಾಜಿಕ ಸಂದರ್ಭಕ್ಕೆ ಹೊಂದಾಣಿಕೆಯನ್ನು ಸಾರ್ವಜನಿಕ ಶೈಕ್ಷಣಿಕ ಪರಿಶೀಲನೆಗೆ ಒಳಪಡಿಸಬೇಕು. ರಾಜ್ಯದ ಶಿಕ್ಷಣದ ದಿಕ್ಕನ್ನು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಗಳಿಗೆ ಅನುಗುಣವಾದ ವೈಜ್ಞಾನಿಕ ಮತ್ತು ಕಾಲಮಿತಿ ಯೋಜನೆಗಳು ನಿರ್ಧರಿಸುವ ಬದಲು, ಅರಾಜಕತೆಗೆ ದೂಡುವುದು ಜನತೆಗೆ ಎಸಗುವ ದ್ರೋಹವಲ್ಲದೆ ಮತ್ತೇನು?
ಈ ಎಲ್ಲ ಸಮಸ್ಯೆಗಳ ನಡುವೆಯೇ ಖಾಸಗಿ ಶಾಲೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳ ನೆರವಿನಿಂದ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ದತ್ತು ಅಥವಾ ಮಾರ್ಗದರ್ಶನದ ಯೋಜನೆ ಮುಂದಿಡಲಾಗಿದೆ. ಎನ್ಇಪಿ-2020ರ ಪ್ಯಾರಾ 7.10 ಕೂಡ ಇದನ್ನು ಪ್ರಸ್ತಾಪಿಸುತ್ತದೆ. ಸ್ಪಷ್ಟ ನಿಯಮಗಳ ಮೂಲಕ ಸಾರ್ವಜನಿಕ ಮತ್ತು ಎಸ್ಡಿಎಂಸಿ ಮೇಲ್ವಿಚಾರಣೆಯಲ್ಲಿ ದಾನಿಗಳ ನೆರವಿನಿಂದ ಗ್ರಂಥಾಲಯಗಳು, ಪ್ರಯೋಗಾಲಯಗಳು, ಕ್ರೀಡಾ ಸಾಮಗ್ರಿಗಳು ಮತ್ತು ಅಗತ್ಯ ಸೌಲಭ್ಯಗಳನ್ನು ಸುಧಾರಿಸುವ ವಿಷಯದಲ್ಲಿ ತಕರಾರಿಲ್ಲ. ಶಿಕ್ಷಕರ ನಡುವೆ ಅನುಭವ ವಿನಿಮಯ, ಮಕ್ಕಳಿಗಾಗಿ ಕಲೆ-ವಿಜ್ಞಾನ ಚಟುವಟಿಕೆಗಳು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯೂ ಉಪಯುಕ್ತವಾಗಬಹುದು. ಇಂತಹ ನೆರವು ಶಾಲೆಯ ಅಗತ್ಯಗಳನ್ನು ಆಧರಿಸಿ, ಎಸ್ಡಿಎಂಸಿ ಮತ್ತು ಶಿಕ್ಷಣ ಇಲಾಖೆಯ ನಿಯಂತ್ರಣದಲ್ಲಿ, ಸರಕಾರದ ಅನುದಾನಕ್ಕೆ ಹೆಚ್ಚುವರಿಯಾಗಿ ದೊರೆತಾಗ ಪ್ರಯೋಜನವಾಗುತ್ತದೆ.
ಆದರೆ, ಪಠ್ಯಕ್ರಮ, ಶಿಕ್ಷಕರ ನೇಮಕಾತಿ-ನಿಯಂತ್ರಣ, ಮಾರ್ಗದರ್ಶನ, ಶಾಲೆಯ ಆದ್ಯತೆಗಳು, ಮಕ್ಕಳ ಮಾಹಿತಿ ಅಥವಾ ಸರಕಾರಿ ಆಸ್ತಿಗಳ ಬಳಕೆಯ ಮೇಲೆ ಖಾಸಗಿ ದಾನಿ ಸಂಸ್ಥೆಗೆ ಪ್ರಭಾವ ನಿಯಂತ್ರಣ ದೊರೆತರೆ ಸಾರ್ವಜನಿಕ ಉತ್ತರದಾಯಿತ್ವ ದುರ್ಬಲಗೊಳ್ಳಬಹುದು. ಎಸ್ಡಿಎಂಸಿಯ ನಿರ್ಧಾರಾಧಿಕಾರ ಕುಗ್ಗಿ, ಪಾಲಕರು ತಮ್ಮ ಶಾಲೆಯ ವಿಚಾರದಲ್ಲಿ ಅಂಚಿಗೆ ಸರಿಯಬಹುದು. ಖಾಸಗಿ ಶಾಲೆಯನ್ನು ಸಹಜವಾಗಿ ‘ಮಾರ್ಗದರ್ಶಕ’, ಸರಕಾರಿ ಶಾಲೆಯನ್ನು ಸದಾ ‘ಕಲಿಯಬೇಕಾದ ಸಂಸ್ಥೆ’ ಎಂದು ಚಿತ್ರಿಸುವುದೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸಾಮರ್ಥ್ಯದ ಬಗ್ಗೆ ತಪ್ಪು ಸಂದೇಶ ನೀಡುತ್ತದೆ. ಇಂದಿಗೂ ಸಂವಿಧಾನದ ಆಶಯದ ದೃಷ್ಟಿಯಿಂದ ಸರಕಾರಿ ಶಾಲೆಗಳು ಅತ್ಯುತ್ತಮ ಶಾಲೆಗಳಾಗಿವೆ.
ಸಾಮಾನ್ಯವಾಗಿ ದಾನಿಗಳು ಸುಲಭವಾಗಿ ತಲುಪಬಹುದಾದ ಅಥವಾ ಹೆಚ್ಚಿನ ಪ್ರಚಾರ ದೊರೆಯುವ ಶಾಲೆಗಳನ್ನು ಆಯ್ಕೆಮಾಡುತ್ತಾರೆ. ಇದರಿಂದ ದೂರದ ಮತ್ತು ಹೆಚ್ಚು ಅಗತ್ಯವಿರುವ ಶಾಲೆಗಳು ಹಾಗೆಯೇ ಹಿಂದುಳಿಯುತ್ತವೆ. ದತ್ತು ನೆರವಿನ ಅವಧಿ ಮುಗಿದ ನಂತರ ನಿರ್ವಹಣಾ ವೆಚ್ಚವನ್ನು ಯಾರು ಭರಿಸಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಇನ್ನೂ ಗಂಭೀರವಾಗಿ, ಹೊರಗಿನ ನೆರವು ಬರುತ್ತಿದೆ ಎಂಬ ಕಾರಣಕ್ಕೆ ಸರಕಾರ ತನ್ನ ಅನುದಾನ ಅಥವಾ ಸಿಬ್ಬಂದಿ ನೇಮಕವನ್ನು ಮುಂದೂಡುವ ಅಪಾಯವಿದೆ.
ಆದ್ದರಿಂದ, ಶಿಕ್ಷಕರ ನೇಮಕ, ನೆರೆಹೊರೆಯ ಶಾಲೆಗಳ ರಕ್ಷಣೆ, ಮಾತೃಭಾಷಾ ಕಲಿಕೆ ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಸಮಗ್ರ ಅನುಷ್ಠಾನವನ್ನು ಮುಂದೂಡಿ ದತ್ತು ಯೋಜನೆಯನ್ನು ಮುಖ್ಯ ಪರಿಹಾರವನ್ನಾಗಿ ಮಾಡುವುದು ಅಪಾಯಕಾರಿ. ಸಾರ್ವಜನಿಕ ಅಧಿಕಾರವನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸುವ ಅಥವಾ ಸರಕಾರದ ಬಾಧ್ಯತೆಯನ್ನು ಕಡಿಮೆ ಮಾಡುವ ಯಾವುದೇ ವ್ಯವಸ್ಥೆಯನ್ನು ಹಿಂಪಡೆಯುವುದು ವಿವೇಕಯುತ ನಿರ್ಧಾರವಾಗುತ್ತದೆ.






