ಒಳ ಮೀಸಲಾತಿ ಅನುಷ್ಠಾನ ಒಳ ಸಾಮಾಜಿಕ ನಂಜಿಗೆ ಬಲಿಯಾಗಬೇಕೆ?

‘ಮೀಸಲಾತಿ’ ಕಲ್ಪನೆಯೇ ಸಾಮಾನ್ಯವಾಗಿ ಕಿಚ್ಚಿನ ಸಾಧನವಾಗಿರುವಾಗ, ಅದರ ಮೂಸೆಯಿದೆ ಮೇಲೇಳುವ ಒಳ ಮೀಸಲಾತಿ ಅಥವಾ ಅಂತರ ಹಂಚಿಕೆ ನಿಯಮಗಳು ನಿರಂತರವಾದ ಟೀಕೆಗಳಿಗೆ ಒಳಗಾಗದೆ ಇರಲಾರವು. ನ್ಯಾ. ನಾಗಮೋಹನ ದಾಸ್ ಆಯೋಗ ಮಾಡಿರುವುದೆಲ್ಲ ತಪ್ಪಾಗಿದ್ದರೆ ಅದರ ಹೊಣೆಯನ್ನು ಸಮಗ್ರ ಪರಿಶಿಷ್ಟ ಜಾತಿಯ ಜನರೇ ಹೊರಬೇಕಾಗುತ್ತದೆ. ಏಕೆಂದರೆ, ಈ ಜನರು ತಮ್ಮ ಬಗೆಗಿನ ಮಾಹಿತಿಗಳನ್ನು ಮುಚ್ಚಿಟ್ಟ ಕಾರಣಕ್ಕೆ ದೋಷ ಬಂದಿದೆ ಅಂಬೋಣ. ಆದರೆ, ಈ ವರದಿಯು ವಾಸ್ತವಿಕ ನೆಲೆಗಟ್ಟಿನಡಿ ಸಾಬೀತಾಗಿರುವ ಕೆಲವು ಅಂಶಗಳನ್ನಾದರೂ ನಂಬಿ ಒಪ್ಪಿದಾಗ ಒಳ ಮೀಸಲಾತಿ ಪ್ರಸ್ತುತತೆ ಸಾಮಾಜಿಕ ನ್ಯಾಯದ ಸಮಾನ ಹಂಚಿಕೆಯ ಮಾಪನಗಳು ಅರ್ಥವಾಗುತ್ತದೆ. ಉಪಜಾತಿಗಳ ಅಂತರ ಪ್ರಹಾರ ಮತ್ತು ಅಸೂಯೆಗಳಿಂದ (Intra Sectarian Strike) ನೋಡಿದಾಗ ‘ದಾಸ್ ವರದಿ’ ಸುಡಲು ಯೋಗ್ಯವಲ್ಲದಾಗುತ್ತದೆ. ಅನುಷ್ಠಾನ ಹಾದಿಯಲ್ಲಿ ಇನ್ನಿಲ್ಲದ ಅಡೆತಡೆಗಳು ಈಗಲೂ ಮುಗಿಲೇಳುತ್ತಲಿವೆ. ಅದರಲ್ಲೂ ರೊಸ್ಟರ್ ಬಿಂದುಗಳನ್ನು ನಿಗದಿಪಡಿಸಿರುವುದೇ ಅವೈಜ್ಞಾನಿಕವೆಂದು ದೂರಲಾಗುತ್ತಿದೆ.
ಒಳ ಮೀಸಲಾತಿ ಅನುಷ್ಠಾನ ವಿರೋಧಿಸುವ ಬಲಗೈ ಸಮಾಜದ ಕೆಲವರ ವಾದವನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದಾಗ, ಕೇವಲ ಸಾಂದರ್ಭಿಕ ಕೋಪ-ತಾಪಗಳೇ ಮೇಳೈಸುತ್ತಿವೆ. ಆದರೆ ನೊಂದವರ ಮತ್ತು ಅವಕಾಶ ವಂಚಿತರಿಗೆ ಸರಿಸುಮಾರು 50 ವರ್ಷಗಳ ನೇಮಕಾತಿ ಮತ್ತು ಇತರ ಪ್ರಾತಿನಿಧ್ಯಗಳಲ್ಲಿ ಸೃಜಿಸಿರುವ ಕೊರತೆಯನ್ನು ಮುಂದುಮಾಡಿ ವಿಶ್ಲೇಷಣೆ ಮಾಡಿದಾಗ ಒಳ ಮೀಸಲಾತಿ ಅನುಷ್ಠಾನ ಆಹಾರವಾಗುವುದಿಲ್ಲ. ನೈಜವಾಗಿ ಹೇಳುವುದಾದರೆ, ಕೆಲವು ವ್ಯಕ್ತಿಗಳ ಗುಂಪುಗಳು ನಮಗೆ ಅನ್ಯಾಯವಾಗಿದೆ ಎಂದು ಹೇಳುತ್ತಿರುವವರೆಲ್ಲರೂ ಅಂದು ದತ್ತಾಂಶಗಳ ನೀಡಿಕೆಯಲ್ಲಿ ನಿರಾಸಕ್ತಿ ತೋರಿಸಿದವರಾಗಿದ್ದಾರೆ. ಬಹುಶಃ ದಾಸ್ ಆಯೋಗ ಬಯಸಿದಂತೆ ಅಂಕಿ-ಅಂಶಗಳು ಸರಕಾರ-ಜನರಿಂದ ಕ್ರೋಡೀಕರಣವಾಗಿದ್ದರೆ, ಅನೇಕರ ಬಾಯಿಗಳಿಗೆ ಕಡುಬು ಬೀಳುತ್ತಿತ್ತು. ಉದ್ಯೋಗ ಪ್ರಾತಿನಿಧ್ಯ ಹೊರತುಪಡಿಸಿ ಸರಕಾರದ ಆರ್ಥಿಕ ಕಾರ್ಯಕ್ರಮಗಳ ಸೀಳುನೋಟ ವಕ್ರವಾಗಿಯೇ ಮೂಡಿದೆ. ಒಟ್ಟಾರೆ, ‘ಖಾಲಿ ಕೈಗಿಂತ ಹಿತ್ತಾಳೆ ಕಡಗ ಲೇಸು’ ಎಂಬಂತೆ ದಾಸ್ ಆಯೋಗ ಇರುವುದರಲ್ಲೇ ಉತ್ತಮ ದತ್ತಾಂಶ ಮೂಡಿಸಿ ಮಂಡಿಸಿದೆ.
ಈಗ ತಕರಾರು ಎದ್ದಿರುವುದು ಮೀಸಲಾತಿ ಬಿಂದುಗಳಿಗೆ ಸಂಬಂಧಿಸಿದ್ದು, ತಿಂದುಂಡ ಸ್ಥೂಲ ದೇಹಕ್ಕೆ ಅಪೌಷ್ಟಿಕತೆ ಎಂದಿಗೂ ಕಾಡದು. ಈ ಅಪೌಷ್ಟಿಕತೆಯನ್ನು ಪ್ರಾತಿನಿಧ್ಯ ವಂಚಿತರಿಗೆ ಹೋಲಿಸಿದಾಗ ಅಜಗಜಾಂತರ ವೈರುಧ್ಯಗಳು ಸೀಳೊಡೆದು ಕಾಣುತ್ತಿರುವುದನ್ನು ಒಳ ಮೀಸಲಾತಿಗಾಗಿ ಕ್ರೋಡೀಕರಿಸಿರುವ ದತ್ತಾಂಶಗಳು ಸಾರಿ ಹೇಳುತ್ತಿವೆ. ಏನೆಂದರೆ, ಮಾದಿಗ ಮತ್ತು ಅವರ ಸಂಬಂಧಿತ ಜಾತಿಗಳಿಗೆ ಇಷ್ಟೊಂದು ಹುದ್ದೆಗಳು ಸಿಗುತ್ತಿರುವುದು ಅಸಾಂವಿಧಾನಿಕವಾಗಿದೆ ಎಂಬ ತಕರಾರುಗಳಿವೆ. 75 ವರ್ಷಗಳ ನೇಮಕಾತಿಗಳಲ್ಲಿ ಸೌಲಭ್ಯ ಪಡೆದವರೇ ಮತ್ತಷ್ಟು ಅನುಭವಿಸಿದರೆ ಅದರ ಮೇಲೆ ಎಂದಿಗೂ ಚರ್ಚೆಗಳೇ ಆಗುವುದಿಲ್ಲ. ಒಳ ಮೀಸಲಾತಿ ಹುಟ್ಟಿದಾಗ ಭಾಜಪ ರಾಜಕೀಯ ಭೂಪಟದಲ್ಲಿರಲಿಲ್ಲ. ಆದರಿಂದು, ಅದರ ಕಾವಿನಲ್ಲಿ ಮತದ ಬೇಟೆಗಾಗಿ ರಾಜ್ಯಪಾಲರ ಬಳಿಯಿರುವ ಮಸೂದೆಗೆ ಸಹಿ ಹಾಕಿಸದೆ ಅನುಕೂಲಸಿಂಧು ರಾಜಕಾರಣ ಮಾಡುತ್ತಿದೆ. ಕೇವಲ ವೇದಿಕೆಗಳಲ್ಲಿ, ಹಾದಿ-ಬೀದಿಗಳಲ್ಲಿ ಪುಂಖಾನುಪುಂಖವಾಗಿ ಲಂಭಿಸಿ ಅಂಬೇಡ್ಕರ್ ನಾಮಸ್ಮರಣೆ ಮಾಡುತ್ತಾ ‘‘ನಾವೆಲ್ಲರೂ ಶೋಷಿತ ಸಮುದಾಯಗಳ ಸಹೋದರರು ಎನ್ನುವವರು’’ ಮಾತ್ರ ‘‘ಮಾದಿಗ ಮತ್ತು ಅದರ ಉಪ ಜಾತಿಗಳು ಪ್ರವರ್ಗ-ಎ ಮೀಸಲಾತಿಗೆ ಭಾಜನವಾದದ್ದು ಅಸಾಂವಿಧಾನಿಕ ಅನ್ನುತ್ತಿದ್ದಾರೆ’’. ಪ್ರತಿಸ್ಪರ್ಧೆ ಒಡ್ಡುವ ಯಾವುದೇ ಸದೃಢ ಸಮುದಾಯ ಮೀಸಲಾತಿ ಬೇಡುವುದನ್ನು ಸಂವಿಧಾನ ಮಾನ್ಯ ಮಾಡುವುದಿಲ್ಲ. ಇದನ್ನು ಮೀರಿ ಇಡಬ್ಲ್ಯುಎಸ್ ಮೀಸಲಾತಿ ಜಾರಿಯಾಯಿತು.
ಈ ಹಿಂದೆ, ಅನೇಕ ಸದಸ್ಯ ಸಮಿತಿ ನೇಮಕಾತಿಗಳಲ್ಲಿ ಒಂದು ಬಗೆಯ ಕೈ ಚಳಕ ನಡೆಯುತ್ತಿತ್ತು. ಹೇಗೆಂದರೆ: ‘‘ಮಾದಿಗರು ಅಧಿಕ ಸಂಖ್ಯೆಯಲ್ಲಿರುವ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಕೋಲಾರ, ಬೆಂಗಳೂರು ಮತ್ತು ತುಮಕೂರು ಇತ್ಯಾದಿ ಜಿಲ್ಲೆಗಳಿಂದ ಬಲಗೈ ಆದಿ ದ್ರಾವಿಡರನ್ನು ಆಯ್ಕೆ ಮಾಡಿ; ಹಳೆ ಮೈಸೂರು ಭಾಗದಿಂದ ಆದಿ ಕರ್ನಾಟಿಕರನ್ನು ಆಯ್ಕೆ ಮಾಡುತ್ತಿದ್ದರು. ಮಾದಿಗರು ತಕರಾರು ಎತ್ತಿದರೆ ‘‘ನೋಡಿ ಮೈಸೂರು ಭಾಗದಲ್ಲಿ ನಿಮ್ಮ ಆದಿಕರ್ನಾಟಕರನ್ನು ಆಯ್ಕೆ ಮಾಡಲಾಗಿದೆ’’ ಎಂದು ಸಬೂಬು ಹೇಳುತ್ತಿದ್ದರು. ನೈಜವಾಗಿ ಇವೆರಡೂ ಭಾಗಗಳಿಂದ ಒಂದೇ ಸಮುದಾಯ ಆಯ್ಕೆ ಆಗಿರುವುದೇ ಅತಿಹೆಚ್ಚು. ಇದೇ ನಮೂನೆಯಲ್ಲಿ ಕೆಪಿಎಸ್‌ಸಿ, ವಿಶ್ವವಿದ್ಯಾನಿಲಯಗಳು, ಮಂಡಳಿ, ನಿಗಮ ಮತ್ತು ಸ್ಥಳೀಯ ಸಂಸ್ಥೆಗಳ ನೇಮಕಾತಿಯಲ್ಲಿ ಮಾದಿಗ ಮತ್ತು ಅಲೆಮಾರಿಗಳಿಗೆ ಆಗಿರುವ ಅನ್ಯಾಯ ಬೆಟ್ಟದಷ್ಟಿದೆ.
1995-96ರಲ್ಲಿ ರಾಜ್ಯ ಸರಕಾರ ಪರಿಶಿಷ್ಟರ ಸಮಗ್ರ ಸಮೀಕ್ಷೆಯನ್ನು ಸೋಲಿಸಿದವರೆ ನ್ಯಾ. ಸದಾಶಿವ ಆಯೋಗದ ವಿರುದ್ಧ ನಿಂತರು. ಹಾಗೆಯೇ, ನ್ಯಾ. ದಾಸ್ ಆಯೋಗದ ಆಶಯಗಳನ್ನು ಮಣ್ಣು ಮಾಡಲಿಕ್ಕೆ ಸವೆಸಿದ ಹೆಜ್ಜೆಗಳಿಗೆ ಅದರ ಫಲಿತಾಂಶ ಒಂದಷ್ಟು ನಿರಾಶೆಯನ್ನು ನೀಡಿದಂತೂ ಸೂರ್ಯ ಸತ್ಯದಂತಿದೆ. ಇಂತಹ ಕಾಣದ ಶಕ್ತಿಗಳು ಮಾದಿಗರು ಬಹುಸಂಖ್ಯಾತರಲ್ಲ ಎಂದು ಮಾಡಿದ ಆರೋಪಗಳೆಲ್ಲವೂ ಫಲಗೂಡಲಿಲ್ಲ. ಬಹುಶಃ ಪರಿಪಕ್ವ ಜನಸಂಖ್ಯಾ ದತ್ತಾಂಶಗಳು ಇನ್ನಷ್ಟು ಪ್ರಖರವಾಗಿ ಬಂದಿದ್ದರೆ ಅದರ ಅನುಷ್ಠಾನ ಸತ್ಯಾಸತ್ಯತೆ ಬೇರೊಂದಾಗಿರುತ್ತಿತ್ತು. ಆಯೋಗ ನಿಗದಿಮಾಡಿದ್ದ ಶಿಫಾರಸುಗಳು ಅಖೈರು ಆಗದಿದ್ದಾಗ, ಸಹಜವಾಗಿ ಸರಕಾರದ ಮಾರ್ಪಾಡಿನಿಂದ ಮಾದಿಗ ಮತ್ತು ಅದರ ಉಪ ಸಮುದಾಯಗಳು ಪ್ರವರ್ಗ-ಎ ಸ್ಥಾನಕ್ಕೇ ಬಂದವು. ಆದುದರಿಂದ, ಮೀಸಲಾತಿಯ ಬಿಂದುಗಳು ಎ ಪ್ರವರ್ಗಕ್ಕೆ ಮೊದಲ ಆದ್ಯತೆಯಿಂದ ಬರುತ್ತಿವೆ. ಈ ಸ್ಥಾನದಲ್ಲಿ ಸೂಕ್ಷ್ಮ 59 ಜಾತಿಗಳಿದ್ದರೆ ಈ ಪಾಲು ಅವರದಾಗುತ್ತಿತ್ತು. ಹೇಗಾದರೂ ಸರಿ ಒಳ ಮೀಸಲಾತಿ ಜಾರಿಯಾಗಬೇಕೆಂಬ ಸಂಕಲ್ಪದಿಂದ ಮಾದಿಗ ಸಮುದಾಯ ಒತ್ತಾಸೆಯಾಗಿ ಹೋರಾಟದ ಹಾದಿಗೆ ಪೂರ್ಣವಿರಾಮ ಹಾಕುವ ಕಾರಣದಿಂದ ಸಮತೋಲನ 6:6 ಸೂತ್ರದಡಿ ಜಾರಿಯಾಯಿತು. ಈ ತೀರ್ಮಾನಗಳನ್ನು ಮಾದಿಗರಿಗಾಗಿ ಸರಕಾರ ಕದ್ದುಮುಚ್ಚಿ ಮಾಡಿಲ್ಲ. ಚುನಾಯಿತ ಪ್ರತಿನಿಧಿಗಳ ಸಹಮತ ಮತ್ತು ಸಂಪುಟ ಸಭೆಯ ತೀರ್ಮಾನದಡಿ ನಡೆದಿದೆ. ನೈಜಾರ್ಥದಲ್ಲಿ ಅನ್ಯಾಯಕ್ಕೆ ಒಳಗಾದವರು 59 ಸೂಕ್ಷ್ಮ ಜಾತಿಗಳೇ ಹೊರತು ಗಜಗಾತ್ರದ ಜನಸಂಖ್ಯೆಯ ಹೊಲೆಯ-ಮಾದಿಗರಲ್ಲ ಅಥವಾ ಸ್ಪಶ್ಯ ಸಮುದಾಯಗಳೂ ಅಲ್ಲ. 59 ಸೂಕ್ಷ್ಮ ಜಾತಿಗಳ ಬಗ್ಗೆ ವ್ಯಕ್ತವಾದ ಕನಿಕರ ಕೇವಲ ನೀರ ಮೇಲಣ ಗುಳ್ಳೆಯಂತೆ ಮೂಡಿವೆ; ಮುಂದೆ ಒಂದು ಭರವಸೆಯ ಊರುಗೋಲಾಗಲಿಲ್ಲ.
ಮೀಸಲಾತಿ ಬಿಂದುಗಳ ಬಗ್ಗೆ ಅತಿ ಹೆಚ್ಚಾಗಿ ತಕರಾರು ಮಾಡಿ ಸರಿಪಡಿಸಲು ಮುಂದಾದವರೇ ಬಲಗೈ ಸಮಾಜದವರು. ಅದರಲ್ಲೂ ಲೋಪವಾಗಿದೆ ಅಂದರೆ ಸಾಂವಿಧಾನಿಕ ಯಕ್ಷಪ್ರಶ್ನೆಯಾಗಿದೆ. ಯಾವುದೇ ಹೊಸ ಆದೇಶವಾದಾಗ ಹಳೆಯ ಬಿಂದುಗಳು ಸ್ಥಗಿತವಾಗಿ, ಹೊಸ ಮೀಸಲಾತಿ ಬಿಂದುಗಳು ಸೃಜಿಸುವುದು ಸಾಮಾನ್ಯ ಸಂಗತಿ. ಒಳ ಮೀಸಲಾತಿ ಬಿಂದುಗಳು ಸಹಜವಾಗಿ ಸಮನಾಂತರವಾಗಿ ಹರಡಿಕೊಳ್ಳುತ್ತಿರುವುದನ್ನು ಕಂಡು ಕರುಬುವವರಿಗೆ ಸದ್ಯಕ್ಕಂತೂ ಯಾವುದೇ ಸಾಮಾಜಿಕ ಚಿಕಿತ್ಸೆಯಿಲ್ಲ. ನ್ಯಾ. ದಾಸ್ ಆಯೋಗ ಜಾತಿಯೊಳಗಿನ ಜಾತಿ ಗುರುತಿಸಲಿಕ್ಕೆ ಮುಂದಾಗದೆ, ಸಾಧ್ಯವಾದಷ್ಟು ಮಟ್ಟಿಗೆ ಜಾತಿಗಳೊಳಗೆ ಅವಕಾಶ ವಂಚಿತ ವರ್ಗಗಳ ಸಮೂಹವನ್ನು ರಚಿಸಿತ್ತು. ದಾಸ್ ಆಯೋಗ ಸಹ ವೆಂಕಟಸ್ವಾಮಿ ಆಯೋಗದಂತೆ ಸಾಮಾಜಿಕ ಒಳ ದಳ್ಳುರಿಗೆ ಬಲಿಯಾಯಿತು.
ಮೈಸೂರು ವಿ.ವಿ. ವಿದ್ಯಾರ್ಥಿಗಳು ಎತ್ತಿರುವ ಪ್ರಶ್ನೆಗಳಿಗೆ ಮಾದಿಗ ಸಮುದಾಯದಿಂದ ಯಾವ ಕಾರಣಕ್ಕೂ ಉತ್ತರವಿಲ್ಲ. ಅವರ ಸಂಶಯಗಳಿಗೆ ಉತ್ತರವಾದಿ ಆಗಬೇಕಾದವರು ಸರಕಾರ ನಡೆಸುವವರು. ಮೀಸಲಾತಿ ಲಂಬಾಂತರ ಅಸಮಾನತೆಯನ್ನು ಹೋಗಲಾಡಿಸಲು ಮುಂದಾದರೆ: ಒಳ ಮೀಸಲಾತಿ ಅಸಮಾನತೆಯ ಒಳಗಿರುವ ಅಸಮಾನತೆಗಳನ್ನು ಹೋಗಲಾಡಿಸಲು ಶ್ರಮಿಸುತ್ತದೆ. ಒಳ ಮೀಸಲಾತಿ ಪರಿಕಲ್ಪನೆ ಬಹು ವಿಸ್ತರವಾಗಿದೆ. ಉದಾಹರಣೆಗೆ, ಪ್ರಾದೇಶಿಕ ಅಸಮಾನತೆಯ ನಿವಾರಣೆಯ 371 (ಜೆ), ಮಹಿಳಾ ಮೀಸಲಾತಿ, ಕ್ರೀಡಾ ಮೀಸಲಾತಿ, ವಿಶೇಷ ಚೇತನರ ಮೀಸಲಾತಿ, ಯೋಜನಾ ನಿರಾಶ್ರಿತರ, ಗ್ರಾಮೀಣ ಮತ್ತು ಕನ್ನಡ ಮಾಧ್ಯಮ, ರೈತ ಮಕ್ಕಳ ಮೀಸಲಾತಿ ಇತ್ಯಾದಿ ಪ್ರಕಾರಗಳಿವೆ. ಪರಿಶಿಷ್ಟ ಜಾತಿ/ಪಂಗಡಗಳ ನೌಕರರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ಸಾಮಾಜಿಕ ಜಾಲತಾಣದಲ್ಲಿ ‘‘ಒಳ ಮೀಸಲಾತಿ ಜಾರಿ ಕಡ್ಡಾಯವೇನಲ್ಲ ಅದು ರಾಜ್ಯ ಸರಕಾರದ ಐಚ್ಛಿಕವಾದದ್ದು’’ ಎಂದಿದ್ದಾರೆ. ಸುಪ್ರೀಂ ಕೋರ್ಟಿನ ತೀರ್ಪು ‘ರಾಜ್ಯ’ (Sಖಿಂಖಿಇ) ಅನ್ನುವ ಪದವನ್ನು ವಿಶಾಲವಾಗಿ ಅರ್ಥೈಸಿದೆ. ಸಂವಿಧಾನ ರಚನೆಕಾರರ ಪ್ರಕಾರ ಸಂಯುಕ್ತ ಗಣರಾಜ್ಯವಾದ ಭಾರತವೂ ಒಂದು ರಾಜ್ಯವೇ ಆಗಿದೆ. ಈ ದೃಷ್ಟಿಯಲ್ಲಿ ಒಳ ಮೀಸಲಾತಿ ರಾಜ್ಯ ಸರಕಾರಕ್ಕೆ ಮಾತ್ರ ಸಲ್ಲುತ್ತದೆನ್ನುವ ವಾದ ಸರಿಯಲ್ಲ.
ನ್ಯಾ. ನಾಗಮೋಹನ ದಾಸ್ ಆಯೋಗ ಯಾವುದೇ ವ್ಯಕ್ತಿ ಮತ್ತು ಸಂಘಟನೆಗಳ ಅಧೀನದಲ್ಲಿ ಕಾರ್ಯನಿರ್ವಹಿಸಲಿಲ್ಲ. ಈ ಆಯೋಗದಲ್ಲಿದ್ದ ಬಹುತೇಕ ಪದನಿಮಿತ್ತ ಅಧಿಕಾರಿಗಳೆಲ್ಲರೂ ಹೊಲೆಯ ಸಮುದಾಯದವರು. ಮಾದಿಗ ಸಮುದಾಯದ ಒಂದು ನರಪಿಳ್ಳೆಯೂ ಈ ಆಯೋಗದಲ್ಲಿ ಕೆಲಸಮಾಡಿಲ್ಲ. ಆದರೂ, ಆಯೋಗ ಮಾದಿಗರಿಗೋಸ್ಕರವೇ ದುಡಿದಿದೆ ಅನ್ನುವುದು ಹಾಸ್ಯಾಸ್ಪದವಾಗಿದೆ. ಈ ವಾದ ‘‘ಕೂಡಿ ಉಂಡರೂ ಅವರೆ ಕಾಳು ತಿನ್ನಬೇಡವೆನ್ನುವ’’ ನಿಲುವಿನಂತಿದೆ. ಈ ಹಿಂದೆ, ನ್ಯಾ. ಸದಾಶಿವ ಆಯೋಗದ ಸುತ್ತಲೂ ಇಂತಹ ಇಲ್ಲಸಲ್ಲದ ಆರೋಪಗಳಿದ್ದವು. ಯಾವುದೇ ಕಾರಣಕ್ಕೂ ಮಾದಿಗ ಮತ್ತು ಉಪ ಜಾತಿಗಳಿಗೆ ಪೂರಕವಾಗಿ ಆಯೋಗ ದುಡಿದಿಲ್ಲ. ಒಂದು ವೇಳೆ ನ್ಯಾ. ದಾಸ್ ಆಯೋಗ ಮಾದಿಗರ ಆಯೋಗವಾಗಿದ್ದರೆ ಹಾದಿಬೀದಿಯಲ್ಲಿ ಈ ಸಮುದಾಯದವರು ಗಣತಿ ಪ್ರಚಾರೋಂದಲನ ಮಾಡುವ ಅವಶ್ಯಕತೆ ಇರಲಿಲ್ಲ. ಸೃಜಿಸಿರುವ ದತ್ತಾಂಶಗಳನ್ನು ಹಂಸಕ್ಷೀರ ನ್ಯಾಯದಂತೆ ನೋಡಿ ಅಭಿವ್ಯಕ್ತಿಸುವವರ ದನಿಗಳು ಸತ್ತುಹೋಗಿವೆ.
ದಾಸ್ ಆಯೋಗ ಸಮುದಾಯ-ಜಾತಿಗಳ ವರ್ಗೀಕರಣವನ್ನು ವಿವಿಧ ಜನಸಂಖ್ಯಾ ಸೂಚ್ಯಂಕಗಳಡಿ (Demographic Indexes) ಅವುಗಳ ಅಂತರ ಹಿಂದುಳಿದಿರುವಿಕೆಯ ಆಧಾರವನ್ನಾಗಿಸಿ ಸೇರಿಸಿತ್ತು. ಹಾಗಾಗಿ ತೀರ ಹಿಂದುಳಿದ ಮತ್ತು ಪ್ರಾತಿನಿಧ್ಯಗಳಲ್ಲಿ ನಕಾರಾತ್ಮಕ ಸ್ಥಾನಗಳನ್ನು ಹೊಂದಿದ್ದ 59 ಸೂಕ್ಷ್ಮ ಸಮುದಾಯಗಳನ್ನು ಮೊದಲ ಗುಂಪನ್ನಾಗಿಸಿತ್ತು. ಸಬಲರ ನಡುವೆ ಅಬಲರ ಸೆಣಸಾಟ ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಇಂತಹ ಸೂತ್ರಗಳಡಿ ವರದಿ ಅಖೈರಾಗಿತ್ತು. ಉದಾಹರಣೆಗೆ; ಹೊಸ ಜನರಿಕ್ ಜಾತಿಗಳಾದ ಆದಿ ಆಂಧ್ರ, ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಎಂದು ಗುರುತಿಸಿದ್ದವರೆಲ್ಲರೂ ಸುಸ್ಥಿತಿಯ ಜೀವನ ನಡೆಸುವುದನ್ನು ಸಹ ಒಪ್ಪದ ಮನಃಸ್ಥಿತಿಯೇ ಹೆಚ್ಚಿರುವಾಗ; ಒಟ್ಟಾರೆ ದಾಸ್ ಆಯೋಗ ವರದಿ ಸಂಪೂರ್ಣ ದೋಷಪೂರಿತ ಅನ್ನುವವರಿಗೆ ಯಾರಿಂದಲೂ ತಿಳಿಹೇಳಲು ಸಾಧ್ಯವಿಲ್ಲ.
ಶಕ್ತಿ ಸೌಧಗಳ ಸುತ್ತಮುತ್ತ ಬಲಗೈ ಸಮುದಾಯ ಅಧಿಕಾರಿಗಳು-ನೌಕರರೇ ತುಂಬಿರುವಾಗ ಮಾದಿಗರು ತಮ್ಮ ಆಧಿಪತ್ಯ ಸ್ಥಾಪಿಸಲು ಹೇಗೆ ಸಾಧ್ಯವಾಗಿದೆ? ನ್ಯಾ. ದಾಸ್ ಮತ್ತು ಸದಾಶಿವ ಆಯೋಗಗಳ ದತ್ತಾಂಶಗಳನ್ನು ಅವಲೋಕಿಸಿದಾಗ ಜನಸಂಖ್ಯೆ ಮಾತ್ರ ಕೂದಲೆಳೆಯಷ್ಟು ಅಂತರವಿದೆ; ಆದರೆ ಕಲ್ಯಾಣ ಕಾರ್ಯಕ್ರಮಗಳನ್ನು ಸರಿಸುಮಾರು 10-15 ವರ್ಷಗಳ ಅಂಕಿ-ಅಂಶಗಳಡಿ ತುಲನೆಮಾಡದೆ, ಕೇವಲ 3-4 ವರ್ಷದ ಅವಧಿಯ ಅಂಕಿ-ಅಂಶಗಳಿಂದ ಒಂದು ಸಮುದಾಯದ ಹಿಂದುಳಿದಿರುವಿಕೆಯನ್ನು ಅಳೆಯಲಾಗದು. ಹಾಗಾದರೆ, ಸಮಾಜ ಕಲ್ಯಾಣ ಇಲಾಖೆ ಈ ಕನಿಷ್ಠ ಜ್ಞಾನವನ್ನು ಅದುಮಿಟ್ಟು ವಕ್ರನೋಟದ ದತ್ತಾಂಶ ನೀಡಿದ್ದನ್ನು ಬಲಗೈ ಸಮಾಜ ಏಕೆ ಖಂಡಿಸುತ್ತಿಲ್ಲ. ಬಲಗೈ ಸಮಾಜ ಹೇಳುವಂತೆ, ಅವರೇ ಜನಸಂಖ್ಯೆಯಲ್ಲಿ ಬಲಾಢ್ಯರೆಂದು ಅಂಬೋಣ. ಇವರ ಮಗ್ಗುಲಲ್ಲಿ ನಿಲ್ಲುವ ಮತೊಂದು ಸಮುದಾಯ ಅನುಭವಿಸಿರುವ ಕೊರತೆ ಕಣ್ಣಿಗೆ ರಾಚಿದರೂ ಬಲಗೈ ಸಮಾಜವನ್ನೇ ಆದ್ಯತೆಯಲ್ಲಿ ಪ್ರಥಮರೆನ್ನಲು ಸಂವಿಧಾನ ಆಶಯಗಳು ಸಮ್ಮತಿಸುವುದಿಲ್ಲ.
ಒಟ್ಟಾರೆ, ಬಲಗೈ ಸಮುದಾಯದವರ ಒಳ ಬೇಗುದಿಯನ್ನು ತಣಿಸಬೇಕಾದರೆ ಅವರು ಹೇಳಿದಂತೆ ಸಿದ್ಧ ಸೂತ್ರಗಳಡಿ ಒಳ ಮೀಸಲಾತಿ ಜಾರಿಯಾಗಬೇಕಿದೆ. ಇದು ಸಾಧ್ಯವೆ? ಅಥವಾ ಸಮಂಜಸವೇ? ರೋಗಿಗಳ ಅನಾರೋಗ್ಯ ತೀವ್ರತೆ ಮೇರೆಗೆ ಪ್ರಥಮ ಚಿಕಿತ್ಸೆ ನೀಡುವ ಕ್ರಮದಲ್ಲಿ ಒಳ ಮೀಸಲಾತಿಯ ಎಲ್ಲಾ ಫಲಾನುಭವಿ ಸಮುದಾಯಗಳು ಅವಲೋಕಿಸಿದಾಗ ಮಾತ್ರ ಮುಖಮುನಿಸಿನ ಈಗಿನ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ. ಹಳದಿ ಕಣ್ಣುಗಳಿಂದ ನೋಡಿದರೆ ಅದರ ವಿಕೋಪಗಳು ಮುಂದಿನವರಿಗೂ ಕಗ್ಗಂಟಾಗಿ ಬಿಡುತ್ತದೆ. ಮಾದಿಗ ಸಮುದಾಯ ದೀರ್ಘಕಾಲದಿಂದಲೂ ಇನ್ನೊಂದು ಸಮುದಾಯದ ಹಕ್ಕುಬಾಧ್ಯತೆಗಳನ್ನು ಕಸಿಯಲು ಹೋರಾಟಮಾಡಲಿಲ್ಲ.






